ಕಾಂತಾಸಮ್ಮಿತ: ಸುಂದರಿ ಡಿ


ಅದೊಂದು ಸಂಜೆ ಸ್ನೇಹಿತೆಯ ಮನೆಗೆ ಹೋಗಲೇಬೇಕಾಯಿತು, ಕಾರಣ ಬಹಳ ಕಾಲ ಸಬೂಬು ಹೇಳಿ ಸಾಕಾಗಿ ಆ ದಿನ ಅವಳ ಮನೆಯ ಬಳಿಯೇ ಹೋಗುವಾಗ ಅವಳ ಕಣ್ಣಲ್ಲಿ ಬಂಧಿಯಾದ ಮೇಲೆ ತಪ್ಪಿಸಿಕೊಳ್ಳುವುದಾದರೂ ಹೇಗೆ? ಕುಳಿತು ಆತಿಥ್ಯ ಸ್ವೀಕರಿಸಿಯೂ ಆಯಿತು. ಯಾರದೋ ಮನೆಗೆ ಹೋಗೋಣವೆಂದು ಕರೆದಳು. ಹೋಗಲು ಮನಸಿಲ್ಲ, ಕಾರಣ ಆಗಲೇ ಸಂಜೆಯಾಗಿತ್ತು, ಜೊತೆಗೆ ಯಾರದೋ ಮನೆಗೆ ನಾನೇಕೆ ಹೋಗುವುದು? ಹಾಗಾಗಿ ಬೇಡವೆಂದು ನಿರಾಕರಿಸಿದೆ. ಆದರೆ ಆಕೆ ಟಪ್ಪರ್‍ವೇರ್ ಡಬ್ಬಿ ಖರೀದಿಸುತ್ತಿದ್ದಳು ಅದನ್ನು ನೋಡಿ ನಾನು ಅಸ್ತು ಎನ್ನಬೇಕಿತ್ತು, ಕಾರಣ ನಾನು ಆಕೆಯ ಅನಗತ್ಯ ಖರ್ಚುಗಳ ಬಗ್ಗೆ ತೆಗೆಯುತ್ತಿದ್ದ ತಕರಾರಿನ ಸಲುವಾಗಿ.

ನೀವಂದುಕೊಳ್ಳುತ್ತಿರಬಹುದು ನನ್ನನ್ನು ಕೇಳದೇ ಆಕೆ ಯಾವ ಕೆಲಸವನೂ ಮಾಡಳೆಂದು, ಖಂಡಿತಾ ಇಲ್ಲ. ಅವಳು ಬೇಕಾದ್ದನ್ನು ಬೇಕೆಂದ ಘಳಿಗೆಯೇ ಖರೀದಿಸುವ ಜಾಯಮಾನದವಳು. ಆದರೂ ನನ್ನ ಮಾತುಗಳಿಂದ ತಪ್ಪಿಸಿಕೊಳ್ಳಲೋ ಎಂಬಂತೆ ಆ ದಿನ ಕರೆದಳು. ಅವಳಿಗೂ ಗೊತ್ತು ಸರಿ ತಗೊ.. ಅನ್ನುವವಳೇ ಇವಳು ಅಂತ. ಆದ್ರೆ ನನಗೆ ಸಲಹೆ ಕೇಳಿದಾಗ ಹೇಳಬಲ್ಲೆನೇ ಹೊರತು ಆ ಸಲಹೆಯನ್ನೇ ಹೇರಲಾರೆ. ಅವಳಾಗಲೇ ಆರ್ಡರ್ ಮಾಡಿ ವಸ್ತುಗಳು ಬಂದೂ ಆಗಿತು,್ತ ಅಕಸ್ಮಾತ್ತಾಗಿ ನಾನು ಸಿಕ್ಕ ಕಾರಣ ಅವಳಿಗೆ ನನ್ನ ಮಾತನ್ನು ಅವಳು ಕೇಳುತ್ತಾಳೆಂದು ತೋರಿಸಿಕೊಳ್ಳಲು ಇದೊಂದು ಸದವಕಾಶವೇ ಆಗಿದ್ದ ಕಾರಣ ಅದನ್ನಾಕೆ ಯಶಸ್ವಿಯಾಗಿ ಬಳಸಿಕೊಂಡಳು ಅಷ್ಟೇ. ಕಡೆಗೆ ಬಲವಂತಕ್ಕೆ ಕಟ್ಟುಬಿದ್ದು ಅವುಗಳನ್ನು ನೋಡಲು, ಅಸ್ತು ಎನ್ನಲು ಹೋದೆನು.

ಸ್ನೇಹಿತೆಯ ಮನೆಯಿಂದ ಮೂರ್ನಾಲ್ಕು ನಿಮಿಷದ ನಡಿಗೆಯಷ್ಟೇ ಆ ಆಂಟಿಯ ಮನೆ. ಗೇಟ್ ತೆಗೆದು ಹೋಗುತ್ತಿದ್ದಂತೆ ಸೇಫ್ಟಿ ಗ್ರಿಲ್ ಬಲವಾಗಿಯೇ ಇತ್ತು ಅದನ್ನೂ ದಾಟಿ ಬಲಕ್ಕೆ ತಿರುಗಿದರೆ ಮನೆಯ ಮುಖ್ಯದ್ವಾರ. ಮುಖ್ಯದ್ವಾರದ ಬಳಿಯೇ ಇದ್ದ ಆಂಟಿ ಗೆಳತಿಯೊಟ್ಟಿಗೇ ನನ್ನನ್ನೂ ಬರಮಾಡಿಕೊಂಡರು. ಮಾತಿನಿಂದಲ್ಲ ಬದಲಿಗೆ ನಟನೆಯಿಂದ! ಕಾರಣ, ಅವರು ಫೋನಿನಲ್ಲಿ ಆ ವೇಳೆಗಾಗಲೇ ಯಾರೊಂದಿಗೋ ಮಾತಿಗಿಳಿದಿದ್ದರು.

ಒಳ ಹೋಗಿ ಆರಾಮದಾಯಕವಾಗಿ ಕೂರುವ ವಿಶಾಲ ಸೋಫಾ ಆದರೂ ಜೀವವನ್ನು ಹಿಡಿಯಾಗಿಟ್ಟುಕೊಂಡೇ ಕುಳಿತೆ. ಕಾರಣ ಹೊಸಬರ ಮನೆ, ಅದು ಹೇಗೆ ಆರಾಮದಾಯಕವಾಗಿ ಕೂರುವುದು? ಜೊತೆಗೆ ಪಕ್ಕದ ದಿವಾನಿನಲ್ಲಿ ಅಜ್ಜಿಯೊಬ್ಬರು ಕುಳಿತಿದ್ದರು. ಗೆಳತಿ ಹೇಳಿದಳು ಆಂಟಿ ಇದಾರಲ್ಲ ಅವರ ಅತ್ತೆ ಇವರು ಅಂತ, ಬಹಳ ಸಂತಸವಾಯಿತು. ಆಂಟಿಯ ವಯಸ್ಸು ಅರವತ್ತು ದಾಟಿತ್ತು, ಅವರತ್ತೆ ಎಂಬತ್ತೈದು ದಾಟಿದವರಂತೂ ಹೌದು. ಬಹಳ ಚೊಕ್ಕವಾಗಿತ್ತು ಅವರ ದೇಹ. ಆಕೆಯ ‘ಸೊಸೆ ಫೋನ್ ಮಾಡಿದಾಳೆ, ಅವಳೊಟ್ಟಿಗೆ ಮಾತನಾಡುತ್ತಿರುವುದಾಗಿ’ ಅಜ್ಜಿ ಹೇಳಿದರು. ಆಂಟಿ ಬಹಳ ಹೊತ್ತು ಸೊಸೆಯೊಂದಿಗೆ ಅಷ್ಟು ನಗು-ನಗುತ್ತ ಮಾತನಾಡಿದ್ದು ಕಂಡು ಮತ್ತೂ ಸಂತಸವೇ ಆಯಿತು. ಯಾವ ಸಂಬಂಧವೇ ಆಗಲಿ ಘಮ ಸೂಸುತ್ತಿದ್ದರೆ ಆ ಪರಿಮಳ ಸುತ್ತಿಲಿನವರಿಗೂ ನವಿರಾದ ಪುಳಕವನೇ ನೀಡುವುದರಲ್ಲಿ ಯಾವ ಸಂಶಯವೂ ಇಲ್ಲ.

ಸುಮಾರು ಹತ್ತು- ಹದಿನೈದು ನಿಮಿಷ ಮಾತನಾಡಿ ಆಂಟಿ ಅತ್ತೆಯ ಬಳಿ ಫೋನ್ ಕೊಟ್ಟರು ನನಗೆ ಮತ್ತೂ ಖುಷಿಯಾಯಿತು ಆ ಕಡೆಯಿಂದ ಮಾತನಾಡಿದ್ದ ಹೆಣ್ಣುಮಗಳು ತನ್ನ ಅತ್ತೆಯ ಬಳಿ ಮಾತನಾಡಿದಷ್ಟೇ ಸಮಯ ಅತ್ತೆಯವರ ಅತ್ತೆಯ ಬಳಿಯೂ ಮಾತನಾಡಿದ್ದು ಮತ್ತೂ ಖುಷಿ ತಂದಿತು. ಅವರು ತಮಿಳೊ ಅಥವಾ ತೆಲುಗೋ ಮಾತನಾಡುತ್ತಿದ್ದರು. ಮಾತು ಸಂಪೂರ್ಣ ಅರ್ಥವಾಗದಿದ್ದರೂ ಅರ್ಥವಾಗದೇ ಇರುತ್ತಿರಲಿಲ್ಲ. ಆದರೆ ಅತ್ತೆ ಮಾತನಾಡುವಾಗ ಅಜ್ಜಿ ತನಗೆ ಹರ್ನಿಯಾ ಆಗಿದೆ, ನಾಳೆ ಆಸ್ಪತ್ರೆಗೆ ಶಸ್ತ್ರಚಿಕಿತ್ಸೆಗಾಗಿ ಹೋಗುವುದಿದೆ ಎಂದು ಹೇಳುತ್ತಿದ್ದರು, ಅತ್ತೆಯ ಅತ್ತೆ ಆ ಅಜ್ಜಿ ಪೋನಿನಲ್ಲಿ ಮಾತನಾಡುವಾಗ ಆಂಟಿ ನಮ್ಮ ಜೊತೆಗೆ ಮಾತಿಗಿಳಿದು ಅತ್ತೆಯವರಿಗೆ ನಾಳೆ ಆಪರೇಷನ್ ಇರುವ ಕಾರಣದಿಂದ ನಾನು ಬರುತ್ತೇನೆ ನಿಮಗೆ ಸಹಾಯವಾಗುತ್ತದೆಂದು ಹೇಳುವ ಮತ್ತು ಕೇಳುವ ಸಲುವಾಗಿ ಸೊಸೆ ಫೋನ್ ಮಾಡಿದಾಳೆ ಎಂದರು. ನನಗೆ ಮತ್ತೂ ಖುಷಿಯಾಯಿತು. ಅನುಕೂಲಗಳಿಗಾಗಿ ಹಾತೊರೆವ ಈ ಕಾಲದಲ್ಲೂ ಇಂತ ಮಾನವೀಯ ಮೌಲ್ಯಗಳ ಗಣಿಯ ಗೂಡಿಗೆ ಕರೆ ತಂದ ಗೆಳತಿಗೆ ಮನದಲೇ ನಮಿಸಿದ್ದಂತೂ ಸತ್ಯ.

ಅಂತೂ ಮಾತು ಮುಗಿದು ಕಡೆಗೆ ಸೊಸೆಗೂ ಕೊಂಚ ಜ್ವರ ಇದೆಯಾದರೂ ಅದನ್ನು ಲೆಕ್ಕಿಸದೆ ಬರುವೆನೆಂದಳು ಬೇಡವೆಂದೆ ಎಂದು ಹೇಳಿದ ಆಂಟಿಗೆ ಆಗ ನನ್ನ ಗೆಳತಿ ನನ್ನ ಪರಿಚಯ ಮಾಡಿಕೊಟ್ಟಳು. ಅವರ ಮಾತಿನ ನಡುವೆಯೇ ಅವರ ಪರಿಚಯ ಮತ್ತು ಆಸಕ್ತಿಯ ಬಗೆಗೆ ನನ್ನ ಗೆಳತಿ ನನಗೆ ಪರಿಚಯ ಮಾಡಿಕೊಟ್ಟಿದ್ದಳು. ಆ ಆಂಟಿಗಿರುವ ಸೌಂದರ್ಯಪ್ರಜ್ಞೆ ಮುಖ್ಯದ್ವಾರದ ಬಳಿ ಎದುರಾದಾಗಲೇ ಅರಿವಾಯಿತು. ಮನೆಯಲ್ಲಿದ್ದರೂ ಅಂದದ ಮತ್ತು ಗೌರವ ಮೂಡಿಸುವ ಉಡುಗೆಯೇ ಅವರ ಆಂತರ್ಯದಲ್ಲಿದ್ದ ಸೌಂದರ್ಯಪ್ರಜ್ಞೆಗೂ ಕನ್ನಡಿ ಹಿಡಿದು ತೋರುವಂತಿತ್ತು. ಅವರ ಮಾತಿನ ನಡುವೆ ಮನೆಯ ಮೂಲೆ- ಮೂಲೆಯನ್ನೂ ಕಣ್ಣಾಡಿಸಿದ್ದೆ, ಕಾರಣ ಸೌಂದರ್ಯವ ಕಣ್ಣ ಮುಂದೆ ಇಟ್ಟರೂ ಸವಿಯದ ಅರಸಿಕಳಲ್ಲ ನಾನು.

ನನ್ನ ಬಲಭಾಗಕ್ಕಿದ್ದ ಕೊಠಡಿಯ ದ್ವಾರದ ಬಾಗಿಲ ಪ್ರವೇಶದ ಎಡಭಾಗದಲ್ಲಿಯೇ ಮೂರು ಹೂವಿನ ಕುಂಡಗಳಿದ್ದವು. ಪಿಂಗಾಣಿಯ ದೊಡ್ಡ ಹೂ ಕುಂಡಗಳು ಕ್ರಮವಾಗಿ ಕೇಸರಿ, ಬಿಳಿ, ಹಸಿರು ಈ ರೀತಿಯ ಜೋಡಣಾಕ್ರಮದಲ್ಲಿಯೇ ಅವರ ದೇಶಪ್ರೇಮವೂ ಧ್ವನಿತವಾಗುತ್ತಿತ್ತು. ಆ ಕುಂಡಗಳಲ್ಲಿ ಬೆಳೆದಿದ್ದ ಹಚ್ಚ ಹಸುರಿನ ದೊಡ್ಡ ಗಿಡಗಳಲ್ಲಿ ಸೂರ್ಯನ ಬೆಳಕಿನ ಪ್ರೀತಿಯ ಕೊರತೆಯೇ ಕಾಡಿದಂತಿರಲಿಲ್ಲ. ಗೋಡೆಯಲ್ಲಿ ಚೌಕಾಕಾರದಲಿ ಕೊರೆದು ಮರದ ಚೌಕಟ್ಟಿನಿಂದ ಅಲಂಕೃತಗೊಂಡ ಪುಟ್ಟ-ಪುಟ್ಟ ಗೂಡಿನಲ್ಲೂ ಹಲ ವಿಧದ ಹೂ ಕುಂಡಗಳು ಮನಸೆಳೆದವು. ಕೂತಲ್ಲಿಂದಲೇ ಮೇಲೇರಲು ಇರುವ ಹಂತಗಳ ದರ್ಶಿಸಲು ಅನುವಾಗಿದ್ದರಿಂದ ಒಂದೊಂದು ಹಂತವ ಬಿಟ್ಟು ಪ್ರತೀ ಹಂತದ ಮೇಲೂ ಇಟ್ಟಿದ್ದ ಹೂ ಕುಂಡಗಳು ನೈಜ ಹೂವನ್ನು ನಾಚಿಸುವಂತೆ ತಮ್ಮ ಸಹಜ ಸೌಂದರ್ಯ ಸೂಸಿ ನನ್ನ ಮನ ಸೂರೆಗೊಂಡು ಮನೆಯ ಮೇಲೆ ಮೇಲೆ ಇರುವ ಅಂತಸ್ತುಗಳಿಗೂ ಮನ ಹೋಗಿ ಬರಲು ತವಕಿಸುತ್ತಿತ್ತು. ಅವರ ಮಾತು ನಿಂತಿದ್ದೇ ತಡ ಗೆಳತಿಗೆ ಹೇಳಿಯೇ ಬಿಟ್ಟೆ. ಮೇಲೆ ಬಹಳ ಗಿಡಗಳನ್ನು ಹಾಕಿದ್ದಾರೆ ಅಂದ್ರಲ್ಲ ನೋಡೋಣ ಅಂತ ಅವರೂ ಆಂಟಿಗೆ ಹೇಳಿದರು ಅವರೂ ಖುಷಿಯಿಂದಲೇ ‘ಬನ್ನಿ ಮನೆಯನ್ನೆಲ್ಲಾ ತೋರಿಸುತ್ತೇನೆ’ ಎಂದು ಮೊದಲು ಅಡುಗೆ ಮನೆಗೆ ಕರೆದೊಯ್ದರು. ಅಡುಗೆ ಮನೆಯ ಅವರ ಜೋಡಣೆ ಶಿಸ್ತನ್ನೇ ಕೂರಿಸಿ ಪಾಠ ಹೇಳುತ್ತಿತ್ತು. ಬಹಳ ಖುಷಿಯಾಯಿತು. ಅಲ್ಲಿಗೆ ಬಂದ ಆಂಟಿಯ ಅತ್ತೆ ಇದ್ದೆರಡು ಪಾತ್ರೆಯ ತೊಳೆಯಲು ಮುಂದಾದರು, ನಾಳೆ ಸರ್ಜರಿ ಇದೆ ಎಂದರೆ ಈ ದಿನವೇ ಐ.ಸಿ.ಯು ಹಾದಿ ಹಿಡಿಯುವ ನಮ್ಮಂತ ದುರ್ಬಲ ಮನದವರಿಗೆ ಕೊಂಚವೂ ಭಯವಿಲ್ಲದ ಅವರ ನಿರಾತಂಕ ನಡೆ ನಿಜಕ್ಕೂ ಅಚ್ಚರಿ ಹುಟ್ಟಿಸಿತು. ಅಚ್ಚರಿಗಳ ನಿಧಿಗೇ ಬಂದ ಮೇಲೆ ಅಷ್ಟಕ್ಕೇ ನಿಬ್ಬೆರಗಾಗಿ ಅಲ್ಲಿಯೇ ಕೂರುವುದು ಅದೆಷ್ಟು ಸರಿ! ಕುತೂಹಲದ ಹೆಜ್ಜೆ ಇಡುತ್ತಾ ಮುಂದೆ ಸಾಗಿದ ನನ್ನ ವೇಗವನ್ನು ತಡೆದ ಅವರು ಬನ್ನಿ ದೇವರ ಕೋಣೆ ನೋಡಲಿಲ್ಲ ನೀವು. ಪೂಜೆಗಾಗಿ ಮೊನ್ನೆ ಅಲಂಕರಿಸಿದ್ದೆ ಎಂದು ಊಟದ ಟೇಬಲ್ ಪಕ್ಕ ಗಣಿಯಲ್ಲೇ ಹೊಳಪು ತೋರದ ಚಿನ್ನದ ಅದಿರಂತೆ ಘಮ್ಮೆನ್ನುವ ದೇವರ ಕೋಣೆ ಮರೆಯಲ್ಲಿತ್ತು ತನ್ನನ್ನು ಪ್ರದರ್ಶಿಸಿಕೊಳ್ಳುವ ಗೋಜಿಗೇ ಹೋಗದೆ.

ನೋಡಿದೆ ನಿಜಕ್ಕೂ ತಿರುಪತಿಯ ವೆಂಕಟೇಶ್ವರನ ದರ್ಶನವೇ ಆಗಿಹೋಯಿತು. ಇದನ್ನು ಮಾತಿಗೆ ಹೇಳುತ್ತಿಲ್ಲ ದೇವರ ಕೋಣೆಯಲ್ಲಿ ಕೆಳಗೆ ಗಣೇಶ, ಲಕ್ಷ್ಮಿ, ಸರಸ್ವತಿ, ಈಶ್ವರ- ಪಾರ್ವತಿಯರ ಫೋಟೋಗಳಿದ್ದು ಅವುಗಳಿಗೆ ನಾವೆಲ್ಲಾ ಪೂಜಿಸುವಂತೆಯೇ ಅಲಂಕಾರ ಪೂಜೆ ನೆರವೇರಿತ್ತು ಆ ಫೋಟೋಗಳ ಮೇಲೆ ಎರಡು ಅಡಿ ಎತ್ತರದಲ್ಲಿ ದಪ್ಪ ಗಾಜಿನ ಪಟ್ಟಿಯು ಗೋಡೆಗೆ ಅಂಟಿಕೊಂಡಿದ್ದು ಆ ಗಾಜಿನ ಭಾಗ್ಯವ ಅದೇನೆಂದು ಹೇಳಲಿ? ವೆಂಕಟೇಶ್ವರನ ಪಕ್ಕ ಪದ್ಮಾವತಿ, ಲಕ್ಷ್ಮಿದೇವಿಯರು ಆ ಗಾಜಿನ ಮೇಲೆ ನಿಂತು ಕಂಗೊಳಿಸುತ್ತಿದ್ದರು. ಆ ವಿಗ್ರಹಗಳಿಗೆ ಪುಟ್ಟ ಕಿರೀಟ, ತಾಳಿ, ಕನಿಷ್ಠ ಮೂರಾದರೂ ಒಂದರ ಕೆಳಗೊಂದು ಅಂತರ ಕಾಯ್ದುಕೊಂಡು ಕಂಗೊಳಿಸುತ್ತಿದ್ದ ಚಿನ್ನದ ಹಾರಗಳು, ದೇವರ ಕೋಣೆಯ ಮೇಲುಗೋಡೆಯನ್ನು ತಾಗುವಷ್ಟು ಎತ್ತರದ ಹೂವಿನ ಅಲಂಕಾರ ನಿಜಕ್ಕೂ ಪುಟ್ಟ ತಿರುಪತಿಯ ದರ್ಶನವೇ ಆಗಿಹೋಯ್ತು. ಗೆಳತಿ ಹೇಳಿದಳು ಎಲ್ಲವೂ ಚಿನ್ನವೇ.. ನೋಡು ಎಷ್ಟು ಸುಂದರವಾಗಿದೆ ಎಂದು ಒಂದೂ ಮಾತಾಡದ ನಾನು ಆ ದೇವಿ ವಿಗ್ರಹಗಳಿಗೆ ಜಡೆಯನ್ನು ಹಾಕಿ ಜಡೆಬಿಲ್ಲೆಯಿಂದಲೂ ಅಲಂಕರಿಸಿರುವ ಆಂಟಿಯ ತಾಳ್ಮೆ, ಭಕ್ತಿ, ಮತ್ತು ಆಸಕ್ತಿಗಳಿಂದ ನಿಜಕ್ಕೂ ದಂಗಾಗಿ ಹೋದೆ. ಅಂತೂ ತಿರುಪತಿಯ ಘೋಷವಾಕ್ಯದ ಕೊರತೆಯೂ ಇಲ್ಲದಂತೆ ದೇವರ ಕೋಣೆಯಲ್ಲಿ ಪಠಣದ ರೆಕಾರ್ಡರ್ ಗುನುಗುತ್ತಿತ್ತು. ಮೂರ್ತಿಯ ಆಕಾರ ಚಿಕ್ಕದಿತ್ತು, ತಿರುಪತಿಯ ದರ್ಶನಕ್ಕಿದ್ದ ಕಾಯುವಿಕೆ, ತುಳಿದಾಟ, ಜನಜಂಗುಳಿ ಇರಲಿಲ್ಲವಷ್ಟೇ ಬಿಟ್ಟರೆ ಅದು ಥೇಟ್ ತಿರುಪತಿಯೇ ಆಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ.
ನಂತರ ಮೆಟ್ಟಿಲೇರಿ ಮೊದಲ ಅಂತಸ್ತಿಗೆ ಹೋದೆವು. ಅಲ್ಲಿನ ಅಲಂಕಾರ ಮತ್ತೂ ಮನಸೂರೆಗೊಂಡಿತು. ಅಲ್ಲೂ ಒಂದು ಕೊಠಡಿ ಅಲ್ಲೆಲ್ಲಾ ಗಿಡ-ಗೆಂಟೆಗಳೇ. ಭದ್ರತೆಯ ಮಹಾಪೂರವಿದ್ದ ಕಾರಣ ಮನೆಯೊಳಗೆ ಹಕ್ಕಿಗಳು ಗೂಡು ಕಟ್ಟಲು ಅವಕಾಶವಾಗಲಿಲ್ಲವೆನಿಸುತ್ತದೆ. ನನ್ನ ಮನವಂತೂ ಹಕ್ಕಿಯೇ ಆಗಿ ಎಲ್ಲ ಗಿಡ-ಗಂಟೆಗಳಲ್ಲಿಯೂ ಕೂತು-ನಿಂತು ಆನಂದದ ವಿಹಾರ ಮಾಡಿದ್ದಂತೂ ಸತ್ಯ. ಅಂತೂ ಮೊದಲ ಅಂತಸ್ತಿನ ಬಾಲ್ಕನಿಯಲ್ಲಿ ಪ್ಲಾಸ್ಟಿಕ್ಕಿನ ಹಸಿರು ಹಾಸು, ಸುತ್ತಲೂ ಮೂರುಕಡೆಯೂ ಪುಟ್ಟ-ಪುಟ್ಟ ಕುಂಡಗಳಲ್ಲಿ ಹೂಗಳಿಂದ ಅಲಂಕೃತವಾದ ಶ್ರೀಮಂತಿಕೆಯ ಬಣ್ಣಿಸಲು ಪದಗಳ ಬಡತನ ನನ್ನಲಿ ಎದ್ದು ತೋರುತಿದೆ. ಅಂತೂ ಮತ್ತೂ ಮೇಲಿನ ಅಂತಸ್ತಿಗೆ ಹೋದರೆ ಅಲ್ಲೊಂದು ಹಸಿರು ಮನೆಯೇ ಇದೆ. ಕನಿಷ್ಠ ನೂರಾದರೂ ಕುಂಡಗಳಿವೆ, ನೀರಿನ ಬಾಟಲಿಯನ್ನು ಕೊಂಚ ಕತ್ತರಿಸಿ ಮೂಲಂಗಿಯ ಕೃಷಿ ನಡೆದಿದೆ ಎಂದರೆ ಬೇರೆ ಹೇಳಬೇಕೇ!?

ಸವತೆಕಾಯಿ, ಕ್ಯಾರೆಟ್, ಕೋಸು, ವಿವಿಧ ತರಕಾರಿ ಗಿಡಗಳು ಮತ್ತು ಏಲಕ್ಕಿ ಗಿಡವೂ ಅವರ ತೋಟದಲ್ಲಿ ಘಮಸೂಸದೆ ಬಿಟ್ಟಿಲ್ಲವೆಂದಮೇಲೆ ಇನ್ನಾವ ಗಿಡಗಳ ಕೊರತೆಯೂ ಅಲ್ಲಿ ಕಾಣಲಿಲ್ಲ. ಗೊಬ್ಬರ ತಯಾರಿಸಿಕೊಳ್ಳಲು ಬೇಕಾದ ಸಾಮಾಗ್ರಿಗಳು ಅಲ್ಲಿಯೇ ಇದ್ದವು. ಮಲಗಲು ಎರಡು ಸಿಂಗಲ್ ಕಾಟ್ಗಳು, ಅಲ್ಲಿಯೇ ಒಂದು ಊಟದ ಟೇಬಲ್, ಮೇಲೆ ಪೂರ್ಣ ನೆರಳಿರುವಂತೆ ಹಾಕಿಸಿದ್ದ ಕಬ್ಬಿಣದ ಮೇಲು ಹೊದಿಕೆ ಇದ್ದ ಕಾರಣ ಈ ಎಲ್ಲವೂ ಸಾಧಿತವಾಗಿತ್ತು. ಅಂತೂ ಇಂತಹ ಮನೆ-ಮನಗಳ ದರ್ಶನದ ಭಾಗ್ಯ ಕೊಡಿಸಿದ ಗೆಳತಿಗೆ ಮನದಲೇ ವಂದಿಸಿ, ಇಂತಹ ಭಾಗ್ಯವ ಅನಾಯಾಸವಾಗಿ ಕಳೆದುಕೊಳ್ಳಲು ತುದಿಗಾಲಲ್ಲಿ ನಿಂತಿದ್ದ ನನಗೆ ಮನದಲೇ ಶಪಿಸಿಕೊಳ್ಳುತ್ತಾ ಮತ್ತೆ ಮೊದಲ ಅಂತಸ್ತಿಗಿಳಿದು ಬಂದು ಅಲ್ಲಿದ್ದ ಕೊಠಡಿಗೆ ಹೋಗಿ ನನ್ನ ಗೆಳತಿಗೆ ತಂದಿದ್ದ ಟಪ್ಪರ್ವೇರ್ ಡಬ್ಬಿಗಳ ತೋರಿಸಿ ನಂತರ ಗೋಡೆಯ ಮೇಲಿದ್ದ ತಮ್ಮ ಭಾವಭಿತ್ತಿಯಲಿ ಒಡ ಮೂಡಿದ, ನಿಸರ್ಗದ ಸಹಜತೆಯ ಮುಂದೆ ಪೈಪೋಟಿಗಿಳಿಯಲು ಸಜ್ಜಾದಂತೆ ಕಂಗೊಳಿಸುತ್ತಿದ್ದ ಬಣ್ಣದ ಕುಸುರಿ ಕೆಲಸಗಳೂ ಅವರಿಂದ ಪರಿಚಯವಾದವು. ಅಷ್ಟಕ್ಕೇ ನಿಲ್ಲದೆ ನಾನು ಅಂಕಲ್ ಏನು ಕೆಲಸ ಮಾಡುತ್ತಾರೆಂದು ಕುತೂಹಲದಿಂದಲೇ ಕೇಳಿದೆ. ಕಾರಣ ಇಂತಹ ಸಹೃದಯಿಯ ಒಡನಾಡಿಯ ಬಗೆಗೆ ತಿಳಿವ ಕುತೂಹಲ ಎಂಥವರಿಗಾದರೂ ಮೂಡದಿರಲು ಹೇಗೆ ಸಾಧ್ಯ?

ಅದರಲ್ಲೂ ಎಲ್ಲವನ್ನೂ ಬೆರಗುಗಣ್ಣುಗಳಿಂದಲೇ ನೋಡುವ ನನ್ನಂಥವರಿಗಂತೂ ಅದು ಸಾಧ್ಯವಿಲ್ಲ ಬಿಡಿ. ಅವರು ಜಿಮ್ ಇಟ್ಟುಕೊಂಡಿದಾರೆ ಎಂದು ಮೂಲೆಯ ಟೇಬಲ್ ಮೇಲೆ ರಾರಾಜಿಸುತ್ತಿದ್ದ ತಮ್ಮ ಜೋಡಿಯ ಫೋಟೋ ತೋರಿಸಿದರು ಆಂಟಿ. ನನಗನಿಸಿತು ಇವರು ಮನಸಿಗೆ ಸುಂದರ ಮತ್ತು ಆರೋಗ್ಯವಾಗಿರಲು ಕಸರತ್ತು ಕೊಡುವವರು, ಅವರು ದೇಹವು ಸುಂದರ ಮತ್ತು ಆರೋಗ್ಯವಾಗಿರಲು ಕಸರತ್ತು ಕೊಡುವವರೆಂದು. ಆಂಟಿ ಎಷ್ಟು ಸ್ಫುರದ್ರೂಪಿ ಎಂದರೆ ದೇಹ ಸಪೂರಾಗಿತ್ತು ಮನಸು ಹೇಗೆಂಬುದು ಈ ವೇಳೆಗಾಗಲೇ ತಿಳಿದಿರುತ್ತದೆ ಬಿಡಿ, ಮನಸು ಮುಖದ ಕನ್ನಡಿ ಎಂಬುದನ್ನು ಮತ್ತೆ ಹೇಳಬೇಕಿಲ್ಲ ಅಲ್ಲವೇ! ಆ ಕೊಠಡಿಯ ಎದುರು ಇರುವ ಕೊಠಡಿಯ ಬಾಗಿಲು ತರೆದಿತ್ತು ಅಲ್ಲಿಗೆ ಕರೆದೊಯ್ದ ಆಂಟಿ ಇವನೇ ನನ್ನ ಮಗ ಎಂದು ಫೋಟೋ ತೋರಿಸಿದರು, ಆತನೂ ಬಹಳ ಏತ್ತರದ ಮೈಕಟ್ಟುಳ್ಳ ಸ್ಫುರದ್ರೂಪಿ. ಆಂಟಿ ನೋವಿನಲ್ಲಿ ಹೇಳಿದರು ಹೀರೋ ಥರ ಇದ್ದ ಅಂತ, ಇದ್ದ ಎಂದರೇನರ್ಥ? ಎಂದು ಕೇಳುವ ಮೊದಲೇ ಗೆಳತಿ ಹೇಳಿದಳು ಕ್ಯಾನ್ಸರ್ ಬಂದು ಹೋಗಿಬಿಟ್ಟರು ಮದುವೆಯಾಗಿ ಆರು ತಿಂಗಳಾಗಿತ್ತಷ್ಟೇ, ಹೋಗಿ ಆರು ತಿಂಗಳಾಯಿತು ಎಂದರು!

ಜೀವ ಪಾತಾಳವನೊಮ್ಮೆ ಮುಟ್ಟಿ ಬಂತು. ಆಂಟಿಯ ‘ಕಾಂತಿ’ ಎಂಬ ಹೆಸರಿನ ಕಾಂತಿ ಮುಖದಲ್ಲೂ, ಮನದಲ್ಲೂ ಇತ್ತು. ಆದರೆ ಅದನ್ನು ಕುಗ್ಗಿಸಲು ವಿಧಿ ಈ ಎಲ್ಲಾ ಸಂಚು ಹೂಡಿದೆ ಎನಿಸಿತು. ಈ ಎಲ್ಲಾ ನೋವಿನಲ್ಲೂ ಅವರ ಕಾಂತಿ ಕುಂದಿದಂತೆ ತೋರಲಿಲ್ಲ ನನಗೆ. ಜೊತೆಗೆ ಗಂಡನನ್ನು ಕೆಲ ತಿಂಗಳಲ್ಲೇ ಕಳೆದುಕೊಂಡ ಆ ಹೆಣ್ಣುಮಗಳ ಅತ್ತೆಯ ಮನೆಯ ಬಗೆಗೆ ಈಗಲೂ ಇರುವ ಕಾಳಜಿಯ ಕಂಡು ಕಣ್ಣು ಒದ್ದೆಯಾಯಿತು. ಆದರೆ ನೋವನ್ನು ಒಂದಿಷ್ಟೂ ತೋರಗೊಡದ ಕಾಂತಿಯುತ ಮುಖ- ಮನಗಳಿಂದಲೇ ಬೀಳ್ಕೊಡಲು ಮುಂದಾದ ಕಾಂತಿ ಆಂಟಿ ನನ್ನ ಮನೆ-ಮಗಳ ಬಗೆಗೆ ವಿಚಾರಿಸಿ, ಮಗಳನ್ನು ಕಳಿಸಿ ಸ್ತೋತ್ರಗಳನು ಹೇಳಿಕೊಡುತ್ತೇನೆ ಪ್ರತಿದಿನ ಒಂದೊಂದು ಗಂಟೆ, ಈ ಹಿಂದೆಯೂ ಹೇಳಿಕೊಡುತ್ತಿದ್ದುದಾಗಿ ಹೇಳಿ ಫೀಜ್ ಪಡೆಯುವುದಿಲ್ಲ, ಕೊಡುವ ಮನಸಿರುವವರು ತಿರುಪತಿಯ ಹುಂಡಿಯಲ್ಲಿ ಹಾಕಬಹುದು, ಅದನ್ನು ತಿರುಪತಿಗೆ ಹೋದಾಗ ಅಲ್ಲಿ ಹಾಕಿ ಬರುತ್ತೇನೆ, ಬೇರೊಬ್ಬರಿಂದ ಕಲಿತ ವಿದ್ಯೆಗೆ ನನಗೆ ಹಣ ಬೇಡವೆಂದರು. ಅತ್ತೆಯವರ ಆಪರೇಷನ್ ಮುಗಿದ ಮೇಲೆ ಕಳಿಸಿ ಎಂದು ನಗು ಮೊಗದಲೇ ಬೀಳ್ಕೊಡುವಾಗಲೂ ಮನೆಯ ಮುಖ್ಯದ್ವಾರದ ಬಲಭಾಗಕ್ಕೆ ಕಾಂಪೌಂಡ್ ಒಳಭಾಗದಲ್ಲಿ ಅಡುಗೆಗೆ ಆಗಾಗ ಅಗತ್ಯವಾಗಿ ಬೇಕಾದ ಮೆಂತ್ಯ, ಕರಿಬೇವು, ಪಾಲಾಕು, ಪುದೀನಾ ಸೊಪ್ಪುಗಳ ದೊಡ್ಡ ಪಾಟುಗಳನು ತೋರಿಸಿ ಖುಷಿಯಿಂದಲೇ ಬೀಳ್ಕೊಟ್ಟ ಕಾಂತಿಯವರ ಬದುಕು ಅರೆಕ್ಷಣ ದಂಗಾಗುವಂತೆ ಮಾಡಿತು. ಎಂಥಹ ಕಷ್ಟಗಳು ಬಂದರೂ ಬದುಕು ನಿಲ್ಲುವುದಿಲ್ಲ, ಅದು ಸಾಗುತ್ತಲೇ ಇರುತ್ತದೆ, ಆದರೆ ಆ ಕಷ್ಟ- ನೋವುಗಳ ನಡುವೆಯೂ ಸಂತಸ ಕೊಡುವ-ಕಾಣುವ ಬದುಕು ಮುಖ್ಯ ಎನಿಸಿತು.

ಮನುಷ್ಯ ಮೂಲತಃ ಸಂಘಜೀವಿ, ಹಾಗಾಗಿಯೇ ಮನುಷ್ಯ ತನ್ನವರಿಗಾಗಿ ಮಿಡಿಯುವ, ತುಡಿಯುವ, ನೋಯುವ, ನಲುಗುವ ಎಲ್ಲವೂ ಆ ಕಾರಣಕ್ಕಾಗಿಯೇ ಹೌದು. ಉಳಿದ ಜೀವಸಂಕುಲಗಳಿಗಿಲ್ಲದ ಬಹು ದೀರ್ಘಕಾಲದ ಅಟ್ಯಾಚ್ಮೆಂಟ್ ಇರುವುದೂ ಆ ಕಾರಣಕ್ಕಾಗಿಯೇ. ಆದರೂ ಅದನ್ನು ಮೀರಿ ಕೆಲವೊಮ್ಮೆ ಬದುಕಬೇಕಾಗುತ್ತದೆ. ಸಾಯುವವರೆಗೆ ಹೇಗೋ ಬದುಕದೆ ನೋವಿನಲ್ಲೂ ನನ್ನಂತೆ ನೋವುಂಡವರಿಗೆ ಮಾದರಿಯಾಗಿ ಬದುಕಿ ಬದುಕು ಮುಗಿಸುವುದು ಸರಿಯೆನಿಸುತ್ತದೆ. ‘ಬೆಂದರಲ್ಲವೇ ಬೇಂದ್ರೆ’ ಎಂಬ ಮಾತು ನೆನಪಾಗುತಿದೆ, ಬಿಸಿಗೆ ತನ್ನನ್ನು ಒಡ್ಡಿಕೊಂಡ ಕಾರಣ ಹೊಳೆವ ಕಾಂತಿಯುತ ಚಿನ್ನದಂತೆ, ತನ್ನಷ್ಟೇ ಹರಿತವಾದುದರಿಂದ ತನ್ನನ್ನು ಕತ್ತರಿಸಿಕೊಂಡು ಕಾಂತಿಯುತವಾಗಿ ಕಂಗೊಳಿಸುವ ವಜ್ರವಾಗಿ ಇಂದಿಗೂ ಕಾಡುತ್ತಿರುವ ಕಾಂತಿ ಆಂಟಿ ಬಹುಮನಗಳಿಗೆ ಮಾದರಿಯಾಗಬಲ್ಲ ವ್ಯಕ್ತಿತ್ವ.

ಜೀವಪರ ಕಾಳಜಿ, ಜೀವನಪ್ರೀತಿ, ಮಾನವತೆ, ಪ್ರಕೃತಿಪ್ರಿಯತೆ, ಸಹಜತೆ, ಸಹಬಾಳ್ವೆ, ಸನ್ಮಾರ್ಗ ಮುಂತಾದ ಮೌಲ್ಯಗಳನ್ನು ನಿತ್ಯವೂ ಸಾಹಿತ್ಯ ಮತ್ತು ಭಾಷೆಯ ಮೂಲಕ ಪಾಠ ಹೇಳುವ ನನ್ನಂಥ ಅಧ್ಯಾಪಕಿಗೆ ‘ಇವೆಲ್ಲಕೂ ನಿದರ್ಶನವಾಗಿ, ಅನುಸರಣಯೋಗ್ಯವಾಗಿ ಜೀವಂತ ಉದಾಹರಣೆ’ಯಾಗಿ ಕಂಡದ್ದನ್ನು ಇಲ್ಲಿ ಕಂಡರಿಸಿರುವೆ. ಸುಮ್ಮನೆ ಪದಗಳನ್ನುಚ್ಚರಿಸಿ ಹೇಗೋ ಬದುಕುವುದು ಬೇರೆ; ಈ ಪದಗಳನ್ನು ಉಚ್ಚರಿಸದೇ, ಅವನ್ನೇ ಉಸಿರಾಡುತ ಸದ್ದಿಲ್ಲದೆ ಬದುಕುವ ಕಾಂತಾಸಮ್ಮಿತ ಬೇರೆ ಎಂಬ ಅರಿವು ತಿಳಿವಾಗಿದ್ದು ನನಗೆ ಯಾವತ್ತೂ ಅಚ್ಚರಿ.

-ಸುಂದರಿ ಡಿ,


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
ಹೆಚ್ಚೆನ್‌ ಮಂಜುರಾಜ್
ಹೆಚ್ಚೆನ್‌ ಮಂಜುರಾಜ್
3 years ago

ಡಿ ಸುಂದರಿಯವರ ಈ ಅನುಭವ ಕಥನ ಸುಂದರವಾಗಿದೆ ಎಂದರೆ ಉತ್ಪ್ರೇಕ್ಷೆಯಲ್ಲ. ಬಯ್ಯುವ, ಟೀಕಿಸುವ, ವ್ಯಂಗ್ಯಿಸುವ ಮತ್ತು ತೇಜೋವಧೆ ಮಾಡಿ ಮನಸಿಗೆ ನೋವುಂಟು ಮಾಡುವ ಬರೆಹಗಳಂತಲ್ಲ ಎಂಬುದೇ ಸಂತೋಷ.

ಪಾಡನ್ನೂ ಹಾಡಾಗಿಸುವ ಮಾಂತ್ರಿಕತೆ ಸಾಹಿತ್ಯದ್ದು ಎಂಬುದರ ಜೊತೆಗೆ, ಹಾಡನ್ನೂ ಇನ್ನೂ ಚೆಂದದ ಹಾಡಾಗಿಸುವ ಪವಾಡವೂ ಅದರದ್ದು. ಯಾವುದೇ ತಳಕುಗಳಿಲ್ಲದೆ, ಸಹಜವಾಗಿ ಮತ್ತು ಅದು ಇರುವಂತೆ ಮನಸು ಮಿಂದಂತೆ ಆ ಹೊತ್ತು ಅನುಭವಿಸಿದ ಸಂತಸವನ್ನೂ ಅಚ್ಚರಿಯನ್ನೂ ಹಾಗೆಯೇ ನೆನಪಲಿಟ್ಟುಕೊಂಡು ದಾಖಲಿಸುವುದಿದೆಯಲ್ಲ ಅದಕ್ಕೆ ಕೇವಲ ನೆನಪು ಮಾತ್ರ ಸಾಕಾಗುವುದಿಲ್ಲ, ಜೊತೆಗೆ ಸಹೃದಯತೆಯೂ ಬೇಕು.

ಎಲ್ಲರೂ ನಮ್ಮನು ಮೆಚ್ಚಲಿ ಎಂದೇ ಎಲ್ಲರೂ ಇದ್ದರೆ ಮೆಚ್ಚುವವರು ಯಾರು? ಇಷ್ಟಕೂ ಅವರಲಿ ಏನಿದೆಯೆಂದು ಮೆಚ್ಚಬೇಕು? ಬಲವಂತ ಮಾಘಸ್ನಾನ ಎನ್ನುತ್ತಾರಲ್ಲ ಹಾಗೆ. ಈ ಬರೆಹದಲ್ಲಿ ಬರುವ ಕಾಂತಿ ಆಂಟಿ ಅನುಕರಣೀಯ ಆದರ್ಶ ಮಹಿಳೆ. ಸುಮ್ಮನೆ ಮೂಲೆಯಲ್ಲಿ ನರಳುತ್ತಾ ನಲುಗದೆ, ಬದುಕಿನ ಅರ್ಥವಂತಿಕೆಯನ್ನು ಹೆಚ್ಚಿಸುವ ಮತ್ತು ಹೆಚ್ಚಿಸಿಕೊಂಡು ಇರುವ ಈ ವರ್ತಮಾನವನ್ನೇ ಸುಖಿಸುವ ಗುಣವುಳ್ಳವರು. ಬದುಕಿನ ಸಿದ್ಧತೆಯೇ ಬದುಕು ಎಂದು ತಿಳಿದುಕೊಂಡ ಬಹಳಷ್ಟು ಮೂರ್ಖರಿಗೆ ಇಂಥವರು ಕಣ್ತೆರೆಸಲಿ. “ಯಾಕೆ ಬದುಕಿರಬೇಕು?” ಎಂಬ ಪ್ರಶ್ನೆಗೆ ” ಅದೇ ಸಾಯುವತನಕ ಬದುಕಿರಬೇಕಲ್ಲ” ಎಂದುತ್ತರ ಕೊಡುವವರಿಗೆ ಇಂಥ ಸಂತಸ, ಸಡಗರ ಮತ್ತು ಪ್ರಸನ್ನಚಿತ್ತ ಪಾಸಿಟಿವಿಟಿ ಅರ್ಥವಾಗುವುದಿಲ್ಲ! ಬರೆದ ಲೇಖಕಿಗೆ ಮತ್ತು ಪ್ರಕಟಿಸಿದ “ಪಂಜು”ವಿಗೆ ಧನ್ಯವಾದ ಮತ್ತು ಅಭಿನಂದನೆ.

ಹೆಚ್ಚೆನ್‌ ಮಂಜುರಾಜ್‌, ಮೈಸೂರು, 9900119518

Gerald Carlo
Gerald Carlo
3 years ago

ನೀವು ಪರಿಚಯಿಸಿದ ಆಂಟಿ, ಅವರ ಸೊಸೆ, ಮತ್ತು ಅತ್ತೆಯವರ ಜೀವನ ಪ್ರೀತಿ ಓದಿ ಮನಸ್ಸು ಮುದಗೊಂಡಿತು.

Sumanth
Sumanth
3 years ago

Tumba changiede madam

3
0
Would love your thoughts, please comment.x
()
x