ಕಳೆದು ಹೋಗುವ ಸುಖ (ಭಾಗ 2): ಡಾ. ಹೆಚ್ಚೆನ್ ಮಂಜುರಾಜ್

ಇಲ್ಲಿಯವರೆಗೆ

ಏನಾದರೊಂದು ಕೆಲಸಗಳಲ್ಲಿ ಅದರಲ್ಲೂ ರಚನಾತ್ಮಕ ಕಾರ‍್ಯಗಳಲ್ಲಿ ತೊಡಗಿಸಿಕೊಳ್ಳುವ ಮನೋಧರ್ಮ ಇಂದಿನ ಅಗತ್ಯವಾಗಿದೆ. ‘ಕೆಲಸದ ಬಗ್ಗೆ ಮಾತಾಡಿದರೆ ಕೆಲಸ ಮಾಡಿದಂತಾಗುವುದಿಲ್ಲ’ ಎಂದು ಬಹು ಹಿಂದೆಯೇ ವಕ್ರೋಕ್ತಿಯೊಂದನ್ನು ಹೊಸೆದಿದ್ದೆ. ಇಂದು ನಾವು ಕೆಲಸ ಮಾಡುವುದು ಕಡಮೆ; ಅದನ್ನು ಕುರಿತು ಮಾತಾಡುವುದು ಹೆಚ್ಚು. ಬದುಕುವುದು ಕಡಮೆ; ಬದುಕಲು ಮಾಡಿಕೊಳ್ಳುವ ಸಿದ್ಧತೆಯೇ ಹೆಚ್ಚು. ‘ಕಂಪ್ಯೂಟರ್ ಬಳಸಿ ಕೆಲಸ ಮಾಡಬೇಕು; ಕಂಪ್ಯೂಟರ್ ಬಳಸುವುದೇ ಕೆಲಸವಾಗಬಾರದು’ ಎಂದೂ ಇನ್ನೊಮ್ಮೆ ಬರೆದಿದ್ದೆ. ಅಂದರೆ ಮಂತ್ರಕ್ಕಿಂತ ಉಗುಳೇ ಹೆಚ್ಚು ಎಂಬಂತಾಗಿದೆ ನಮ್ಮಗಳ ಪರಿಸ್ಥಿತಿ! ಬಹುತೇಕ ಸಭೆ/ಮೀಟಿಂಗುಗಳ ನಿರ್ಧಾರವೇನೆಂದರೆ ಮುಂದಿನ ಸಭೆಯಲ್ಲಿ ಪರಿಶೀಲಿಸಲಾಗುವುದು ಎಂದೇ! ಹೀಗೆ ಕೆಲಸಗಳನ್ನು ಕೈಗೊಳ್ಳುವ ಮನಸ್ಥಿತಿಯಿಲ್ಲದಿದ್ದರೆ ಯಾವುದೇ ದೇಶ-ಸಮಾಜ ಊರ್ಜಿತವಾಗುವುದಿಲ್ಲ.

ಸುಮ್ಮನೆ ಕೆಲಸ ಮಾಡಿದರೂ ಅದಕೆ ಅರ್ಥವಿಲ್ಲ; ಕತ್ತೆಯು ತಾನು ಹೊತ್ತ ಕಸ್ತೂರಿಯ ಪರಿಮಳವನ್ನು ಆಘ್ರಾಣಿಸಲು ಅಸಮರ್ಥವಾಗಿರುವಂತೆ. ಆದರೆ ಕತ್ತೆಗೂ ಬೆಲೆಯಿದೆ, ಅದರ ಶ್ರಮಕೂ ಅರ್ಥವಿದೆ. ಕಸ್ತೂರಿಯ ಪರಿಮಳವನ್ನು ಆಘ್ರಾಣಿಸಲು ಅದು ಅಸಮರ್ಥವಾಗಿರಬಹುದು; ಆದರದಕೆ ತಾನೇನನೋ ತನ್ನ ಯಜಮಾನನಿಗೆ ಶಕ್ತ್ಯನುಸಾರ ನೆರವಾಗುತ್ತಿದ್ದೇನೆ ಎಂಬ ಧನ್ಯಭಾವವಿದೆ! ಇದನ್ನೇ ಕಾಯಕ ಎನ್ನುವುದು. ಬಹಳಷ್ಟು ಬಾರಿ ಯಾರನ್ನೋ ಮೆಚ್ಚಿಸಲು ಮತ್ತು ತಾನು ಮಾಡಿರುವುದನ್ನು ಲೋಕಕ್ಕೆ ಡಂಗುರ ಹೊಡೆದು ಸಾರಲು ನಾವು ಕಾಯುತ್ತಿರುತ್ತೇವೆ. ಕೆಲಸವಾಯಿತು ಎಂಬ ಸಂತಸಕ್ಕಿಂತ ಕೆಲಸ ಮಾಡಿದವನು ನಾನು ಎಂಬ ಅಹಮ್ಮೇ ಮುಂದಾಗಿ ಆ ಕಾರ‍್ಯದ ಘನತೆಯು ಸುಗಂಧವಾಗದೇ, ಗಬ್ಬೆದ್ದು ನಾರುವ ದುರ್ನಾತವಾಗುತ್ತದೆ. ರಚನಾತ್ಮಕ ಮತ್ತು ಅರ್ಥಪೂರ್ಣ ಕೆಲಸಗಳನ್ನು ಕೈಗೊಂಡಾಗ ಅದರಿಂದ ಸಮುದಾಯಕ್ಕೆ ಒಳಿತಾದಾಗ, ಮುಖ್ಯವಾಗಿ ಕೆಲಸ ಮಾಡಿದ ವ್ಯಕ್ತಿ ನೇಪಥ್ಯಕ್ಕೆ ಸರಿದು, ಕೆಲಸಗಳ ಉಪಯುಕ್ತತೆ ಅಥವಾ ಅದರ ಸಕಾರಾತ್ಮಕತೆ ಮುಂದಾದಾಗ, ಅದರಿಂದ ಉಂಟಾಗುವ ಧನ್ಯತಾಭಾವವು ದೈವಸಾಕ್ಷಾತ್ಕಾರಕ್ಕೆ ಸಮ. ಇಂಥ ಸಂದರ್ಭದಲ್ಲಿ ಅಂಥವರು ಕೆಲಸಗಳಲ್ಲಿ ಕಳೆದು ಹೋಗುವ ಸುಖವನ್ನು ಸಾಕ್ಷಾತ್ತಾಗಿ ಉಂಡವರಾಗಿ ಸತ್ಯವೂ ಶಿವವೂ ಆನಂದವೂ ಆದ ಪ್ರಸನ್ನತೆಯನ್ನು ಅನುಭವಿಸಿರುತ್ತಾರೆ. ಕಳೆದುಕೊಳ್ಳುವುದೆಂದರೆ ಇನ್ನೊಂದರ್ಥದಲ್ಲಿ ಪಡೆದುಕೊಳ್ಳುವುದೆಂದೇ ಅರ್ಥ!

ಜಗತ್ತಿನಲ್ಲಿ ಆಗಿ ಹೋದ ಮಹಾಮಹಿಮರ ಹಾಗೂ ಕರ್ತೃತ್ವಶಕ್ತಿಯುಳ್ಳ ಮಹಾನ್ ಪ್ರತಿಭಾಶಾಲಿಗಳ ಕೆಲಸಕಾರ‍್ಯಗಳನ್ನು ಅವಲೋಕಿಸಿದರೆ ಇದು ಮನದಟ್ಟಾಗುವುದು. ವಿಜ್ಞಾನಿಗಳು, ತಾಂತ್ರಿಕ ಮತ್ತು ವೈದ್ಯಕೀಯ ಸಂಶೋಧಕರು, ಬೃಹತ್ ವಾಣಿಜ್ಯೋದ್ಯಮಿಗಳು, ನಿಸ್ವಾರ್ಥ ಸೇವಾ ಮನೋಭಾವದ ಜನನಾಯಕರು, ಬರೆಹಗಾರರು, ಆಧ್ಯಾತ್ಮಿಕ ಸಿದ್ಧಿ ಗಳಿಸಲು ಹಾತೊರೆದವರು, ಸಂಗೀತಗಾರರು, ಶಿಲ್ಪಿಗಳೇ ಮೊದಲಾದವರು ಹತ್ತಾರು ವರುಷಗಳ ತಮ್ಮ ನಿರಂತರ ಕಾಯಕ ಅಥವಾ ಸಾಧನೆಯ ಪಥದಲ್ಲಿ ಹೀಗೆ ತಮ್ಮನ್ನು ಕಳೆದುಕೊಂಡು ಮತ್ತೇನನ್ನೋ ಪಡೆದುಕೊಂಡವರೇ ಆಗಿರುತ್ತಾರೆ.

ಥಾಮಸ್ ಆಲ್ವಾ ಎಡಿಸನ್ ತನ್ನ ಸಂಶೋಧನೆಯಲ್ಲಿ ನೂರಾರು ಸಲ ನೂರಾರು ವಿಧದಲ್ಲಿ ಶ್ರಮಿಸಿ ವಿಫಲನಾದವನು. ಕೊನೆಗೂ ವಿದ್ಯುತ್ ಬಲ್ಬ್ ಕಂಡು ಕೊಡುವಲ್ಲಿ ಸಫಲನಾದನು. ಆಗ ಅವನು ಹೇಳಿದ ಮಾತುಗಳು ಕಾಯಕದ ಪ್ಲಸ್ಸು ಮೈನಸ್ಸುಗಳನ್ನು ಬಹು ಚೆನ್ನಾಗಿ ಮನದಟ್ಟು ಮಾಡಿಸುತ್ತವೆ: ‘ನಾನು ಒಂದು ವಿದ್ಯುತ್ ಬಲ್ಬನ್ನು ಕಂಡು ಹಿಡಿಯಲು ನೂರಾರು ಸಲ ವಿಫಲನಾಗಲಿಲ್ಲ; ಹೇಗೆ ಕಂಡು ಹಿಡಿಯಬೇಕೆಂಬುದನ್ನು ಕಲಿತುಕೊಂಡೆನು.’ ಕೆಲಸವೊಂದರ ಧನ್ಯತಾಭಾವ ಎಂದರೆ ಇದು!

ಇವರೆಲ್ಲ ತಾವು ನಂಬಿದ ಧ್ಯೇಯಕ್ಕೋಸ್ಕರ ಜೀವನಪೂರ್ತ ಕಡುನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದವರು. ಅಲ್ಲಮನು ಹೇಳುವಂತೆ, ಕೊಟ್ಟ ಕುದುರೆಯನೇರಿ, ಮತ್ತೊಂದು ಕುದುರೆಯನ್ನು ಬಯಸದೇ ತಮ್ಮ ಅಂತರಾತ್ಮದ ನಿರ್ದೇಶನದನ್ವಯ ತಮಗೆ ಸರಿ ಅನಿಸಿದ್ದನ್ನು ಸರಿದಾರಿಯಲ್ಲಿ ಸಾಧಿಸಿದವರು. ಇದನ್ನೇ ವಿವೇಕದಿಂದ ದೊರೆಯುವ ಆನಂದ ಎನ್ನುವುದು.

ಯಾವುದೇ ಕೆಲಸಗಳಿರಲಿ, ಅದರಲಿ ಕಳೆದುಹೋಗುವುದೇ ನಿಜವಾದ ಸುಖ, ಇದನ್ನೇ ಕರ್ತವ್ಯ ನಿಷ್ಠೆ ಎಂದು ಕರೆಯುವುದು! ಸುಮ್ಮನೆ ಕುಳಿತು ತುಕ್ಕು ಹಿಡಿಯುವುದಕಿಂತ ಕೆಲಸ ಮಾಡಿ ಸವೆದು ಹೋಗುವುದು ಲೇಸು ಎಂಬುದು ಇಂಥ ಕರ್ತವ್ಯ ನಿಷ್ಠೆಯ ಪರಮ ಪ್ರತೀಕವಾಗಿದ್ದ ಸರ್ ಎಂ ವಿಶ್ವೇಶ್ವರಾಯನವರ ಮನೋಭಾವವಾಗಿತ್ತು. ಬಸವಣ್ಣನವರು ಬಹಳ ಹಿಂದೆಯೇ ‘ಕಾಯಕವೇ ಕೈಲಾಸ’ ಎಂದುಚ್ಚರಿಸಿ, ಅದರಂತೆ ನಡೆದು ಬಹು ದೊಡ್ಡ ಆದರ್ಶವನ್ನು ಸಾಧಿಸಿ, ಅನುಕರಣೀಯವಾಗಿದ್ದಾರೆ. ಇದಕೂ ಮುಂಚೆ ಭಗವದ್ಗೀತೆಯಲ್ಲಿ ‘ಕರ್ಮಣ್ಯೇವಾಧಿಕಾರಸ್ತೆ…..’ ಎಂಬುದಾಗಿ ಶ್ರೀಕೃಷ್ಣನ ಮೂಲಕ ಉದ್ಘೋಷಿಸಲಾಗಿದೆ. ಭಗವದ್ಗೀತೆಯ ಎರಡನೇ ಅಧ್ಯಾಯದ ನಲವತ್ತೇಳನೆಯ ಶ್ಲೋಕವಿದು: ‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ; ಮಾ ಕರ್ಮಫಲ ಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ, ಕರ್ಮಣಿ ಏವ ಅಧಿಕಾರಃ ತೇ ಮಾ ಫಲೇಷುದ ಕದಾಚನ.’ ಕೆಲಸ ಮಾಡುವಾಗ ಫಲಾಫಲಗಳನ್ನು ಕುರಿತು ಚಿಂತಿಸದಿರು ಎಂಬುದೇ ಇದರ ಅಂತರಾರ್ಥ. ಫಲಾಫಲಗಳನ್ನು ಕುರಿತು ಚಿಂತಿಸಿದರೆ ಅದು ಕೆಲಸದ ಮೇಲೆ ಪರಿಣಾಮ ಬೀರಬಹುದು, ಪರಿಣಾಮಗಳನ್ನು ಆಲೋಚಿಸಿದ ಮೇಲೆ ಆ ಕೆಲಸವನ್ನು ಮಾಡದೆಯೂ ಇರಬಹುದು! ಹಾಗಾಗಿ, ಸುಮ್ಮನೆ ಕೆಲಸ ಮಾಡು; ಅದರಲೇ ಒಂದು ಆನಂದವಿದೆ ಎಂಬುದು ಈ ಶ್ಲೋಕದ ಅಂತರಾಳ. ಯಾವ ಕಾಲಕ್ಕೂ ನಿಷ್ಕ್ರಿಯನಾಗಿ ಕುಳಿತುಕೊಳ್ಳದೆ ಸದಾ ಕರ್ತವ್ಯಶೀಲನಾಗು ಎಂಬುದೇ ಇದರ ಬೋಧೆ.

ನಮ್ಮ ಸಂಸ್ಕೃತಿಯು ‘ಕೆಲಸ’ ಕ್ಕಿಂತ ‘ಕಾಯಕ’ ಕ್ಕೆ ಹೆಚ್ಚಿನ ಮನ್ನಣೆಯನ್ನು ನೀಡಿದೆ. ಅಂದರೆ ಅದನ್ನು ಹೆಚ್ಚು ಧಾರ್ಮಿಕಗೊಳಿಸಲಾಗಿದೆ. ಮಾಡುವ ಕೆಲಸವು ಇಹಕೆ ಪ್ರಯೋಜನವನ್ನೂ ಪರಕೆ ಸದ್ಗತಿಯನ್ನೂ ತಂದುಕೊಡುವುದೆಲ್ಲ ಕಾಯಕವೇ ಆಗಿರುತ್ತದೆ. ಭಾರತೀಯರು ಎಲ್ಲವನ್ನೂ ಅಂತಿಮವಾಗಿ ಧಾರ್ಮಿಕಗೊಳಿಸಿ, ಲೋಕೋತ್ತರವನ್ನು ಆರೋಪಿಸುತ್ತಾರೆಂಬುದು ವಾಮಪಂಥೀಯರ ಕಟು ಟೀಕೆ. ಆದರೆ ಇದೇ ನಮ್ಮ ನೆಲದ ವೈಶಿಷ್ಟ್ಯ ಎಂಬುದನ್ನು ನಾವೀಗ ಅರ್ಥ ಮಾಡಿಕೊಳ್ಳುತ್ತಿದ್ದೇವೆ. ಕೇಶಿರಾಜನು ವ್ಯಾಕರಣದ ಪ್ರಯೋಜನವನ್ನು ಕುರಿತು ಹೇಳುವಾಗಲೂ ‘ಆಕಾಂಕ್ಷಿಪ ಮುಕ್ತಿಯಕ್ಕುಮಿದೆ ಬುಧರ್ಗೆ ಫಲಂ’ ಎನ್ನುತ್ತಾನೆ. ಅಂದರೆ ಶುಷ್ಕವೂ ಕಠಿಣವೂ ಆದ ವ್ಯಾಕರಣದ ಅಧ್ಯಯನದಿಂದಲೂ ನಾವು ಬಯಸುವ ಮೋಕ್ಷವನ್ನು ಪಡೆಯಬಹುದು ಎಂಬುದೇ ಆಗಿದೆ. ವ್ಯಾಕರಣದ ನೆಪದಲ್ಲಿ ತತ್ತ್ವಜ್ಞಾನವನ್ನು ಅಭ್ಯಾಸ ಮಾಡುತ್ತೇವೆ. ಈ ತತ್ತ್ವವು ಅಂತಿಮವಾಗಿ ನಮ್ಮ ಭ್ರಮೆಗಳನ್ನೂ ಶಾಪಗಳನ್ನೂ ಕಳಚಿ, ಸತ್ಯದರ್ಶನ ಮಾಡಿಸುತ್ತದೆ; ನೇರವಾದ ಅರ್ಥದಲ್ಲಿ ಮುಕ್ತಿ ಅಂದರೆ ನಮ್ಮನ್ನು ಅಹಂಕಾರದಿಂದ ಬಿಡುಗಡೆಗೊಳಿಸುವುದೇ ಆಗಿದೆ. ಹೀಗೆ ಎಲ್ಲವನ್ನೂ ಲೋಕೋತ್ತರಕ್ಕೆ ಜೋಡಿಸುವ, ಜನರಲ್ಲಿ ಒಳಿತನ್ನು ಪ್ರಚೋದಿಸುವ ಪ್ರಣಾಳಿಕೆ ನಮ್ಮ ಸಂಸ್ಕೃತಿಯದು. ಕವಿನುಡಿಯೊಂದು ಹೀಗಿದೆ: ‘ಎಲ್ಲ ದಾರಿಗೊಂದೆ ಗುರಿ ಬಿಡುಗಡೆ; ಸೃಷ್ಟಿ ನಿಯಮದಲ್ಲಿ ಇಲ್ಲ ನಿಲುಗಡೆ.’

ನನ್ನ ಪ್ರಕಾರ ಏನಾದರೊಂದು ಕೆಲಸಗಳನ್ನು ಹಚ್ಚಿಕೊಂಡು ಮಾಡುತಿದ್ದರಷ್ಟೇ ಮಾನಸಿಕ ಆರೋಗ್ಯ. ಏಕೆಂದರೆ ಅನಗತ್ಯವಾದ ಮಾತುಗಳನ್ನಾಡುವವರಿಗೆ ‘ನಿನಗೆ ಬೇರೇನೂ ಕೆಲಸವಿಲ್ಲವೇ?’ ಎಂದೇ ನಮ್ಮ ಸಮಾಜ ಪ್ರಶ್ನಿಸುತ್ತದೆ. ಸರ್ಕಾರಿ ಕೆಲಸದಿಂದ ನಿವೃತ್ತರಾದವರು ತಮ್ಮ ಮುಂದಿನ ಜೀವನದ ಸಮರ್ಪಕ ಮತ್ತು ಸಮಂಜಸ ಕಾರ‍್ಯಯೋಜನೆಗಳನ್ನು ರೂಪಿಸಿಕೊಳ್ಳದಿದ್ದರೆ ಬಹುಬೇಗ ಜಡವಾಗುತ್ತಾರೆ. ತಮ್ಮ ವೃತ್ತಿ ಮತ್ತು ಪ್ರವೃತ್ತಿಗಳನ್ನು ಕಂಡುಕೊಳ್ಳುವ ಮತ್ತು ಜೋಡಿಸಿ ಸಮನ್ವಯಿಸಿಕೊಳ್ಳುವ ‘ಪ್ಲಾನ್’ ಮಾಡದಿದ್ದರೆ ಸಮಾಜದಿಂದಲೂ ಕುಟುಂಬದವರಿಂದಲೂ ತಿರಸ್ಕೃತರಾಗುತ್ತಾರೆ. Life begins at sixty ಎಂಬ ಮಾತು ಬಂದಿರುವುದೇ ಈ ಕಾರಣಕ್ಕಾಗಿ. ಒಂದು ಸಂವತ್ಸರ ಚಕ್ರ ಪೂರ್ಣಗೊಂಡ ಮೇಲೆ ನಾವು ಹೊಸಬರಾಗುತ್ತೇವೆ. ಆ ವರೆಗೂ ಸಮಾಜಮುಖಿಯಾಗಿದ್ದ ವ್ಯಕ್ತಿತ್ವವು ಆತ್ಮೋನ್ನತಿಯತ್ತ ವಾಲುತ್ತದೆ. ಧಾರ್ಮಿಕ ಕೆಲಸ ಕಾರ‍್ಯಗಳಲ್ಲಿ ನಿರತಗೊಂಡು, ಬದುಕಿನ ತತ್ತ್ವಜ್ಞಾನದ ಸಾರಾಂಶವನ್ನು ಅನುಭವಕ್ಕೆ ತಂದುಕೊಳ್ಳುತ್ತದೆ. ಇದನ್ನೇ ನಮ್ಮ ಪರಂಪರೆಯು ವಾನಪ್ರಸ್ಥಾಶ್ರಮವೆಂದು ಕರೆದದ್ದು. ವೃತ್ತಿಯಲ್ಲಿ, ಸೇವೆಯಲ್ಲಿ ತೊಡಗಿದ್ದಾಗ ನಿರ್ವಂಚನೆಯಿಂದಲೂ ನಿರುಮ್ಮಳತೆಯಿಂದಲೂ ಪ್ರಾಮಾಣಿಕವಾಗಿಯೂ ಇದ್ದಂಥವರು ನಿವೃತ್ತಿಯ ದಿನಗಳನ್ನು ಎಂಜಾಯ್ ಮಾಡಬಲ್ಲರು! ಹೀಗಾಗದಿದ್ದಾಗ ವಯಸ್ಸಾಗುತ್ತಿದ್ದಂತೆ ಶಾರೀರಕ ಅನಾರೋಗ್ಯದ ಜೊತೆಗೆ ತಮ್ಮ ನಕಾರಾತ್ಮಕ ವರ್ತನೆಗಳಿಂದ ಮಾನಸಿಕ ಆರೋಗ್ಯವನ್ನೂ ಕಳೆದುಕೊಂಡು ಅಕ್ಷರಶಃ ಜೋಬದ್ರರಾಗುವುದು ಈ ಕಾರಣಕ್ಕಾಗಿಯೇ.

ಒಂದು ಕೆಲಸದಿಂದ ಇನ್ನೊಂದು ಕೆಲಸಕ್ಕೆ ನಮ್ಮನ್ನು ಬದಲಿಸಿಕೊಳ್ಳುವುದೇ ನಿಜವಾದ ವಿಶ್ರಾಂತಿ ಎಂಬೊಂದು ಮಾತಿದೆ. ಏಕೆಂದರೆ ಕೆಲಸದಲ್ಲಿಯಾಗಲೀ, ಅದರ ಪರಿಣಾಮದಲ್ಲಾಗಲಿ ಇರುವ ಖುಷಿಗಿಂತ ಕೆಲಸಗಳನ್ನು ಮಾಡುವಾಗ ನಮ್ಮನ್ನು ನಾವು ಸಂಪೂರ್ಣ ತೊಡಗಿಸಿಕೊಂಡು ಕಳೆದು ಹೋಗುತ್ತೇವಲ್ಲ, ಅದರಲ್ಲಿ ನಿಜವಾದ ಸುಖವಿದೆ. ಎಲ್ಲಕ್ಕಿಂತ ಹೆಚ್ಚು ಬೆಲೆ ಬಾಳುವ ಬಂಡವಾಳವೆಂದರೆ ದುಡಿಮೆ ಎಂದಿದ್ದಾರೆ ಕಾರ್ಲ್‍ಮಾರ್ಕ್ಸ್. ದುಡಿಮೆಯೇ ದುಡ್ಡಿನ ತಾಯಿ ಎಂಬುದನ್ನು ನಾವು ಪ್ರಾಥಮಿಕ ಶಾಲಾ ಶಿಕ್ಷಣದಲ್ಲೇ ಪಾಠದಲ್ಲೇ ಕಲಿತಿದ್ದೇವೆ. ಎಲ್ಲ ದೊಡ್ಡ ದೊಡ್ಡ ಕೆಲಸಗಳೂ ಚಿಕ್ಕ ಪುಟ್ಟ ನಿರ್ಲಿಪ್ತ ಕಾಯಕಗಳ ಮೊತ್ತವೇ ಆಗಿದೆ ಎಂದಿದ್ದಾರೆ ಓಶೋ ರಜನೀಶ್. ಗಂಗೆ ಪವಿತ್ರಳು ನಿಜ; ಆದರೆ ಅದಕಿಂತ ಪವಿತ್ರವಾದುದು ದುಡಿಯುವವನ ಬೆವರು ಎಂಬ ಮಾತಲ್ಲಿ ನಾವೀ ಭಾವವನ್ನು ಗುರುತಿಸಬೇಕು. ಅಂದರೆ ಶ್ರಮ ವಹಿಸಿ ದುಡಿದ ಗಳಿಗೆಗಳಿವೆಯಲ್ಲಾ ಅವು ಈ ಸೃಷ್ಟಿಯ ಮಹೋನ್ನತ ಆನಂದವನ್ನು ದೊರಕಿಸಿ ಕೊಡುತ್ತವೆ, ಅದು ದೈಹಿಕ ಶ್ರಮವೇ ಆಗಿರಲಿ, ಬೌದ್ಧಿಕ ಅಥವಾ ಮಾನಸಿಕ ಶ್ರಮವೇ ಆಗಿರಲಿ! ಈ ಲೋಕ ಸಾಗಲು ಎಲ್ಲ ರೀತಿಯ ಶ್ರಮಗಳೂ ಅಗತ್ಯವೇ. ನಾವು ಕಲಿತ ವಿದ್ಯೆ ಅಥವಾ ಪಡೆದ ಜ್ಞಾನ ಅಥವಾ ಬಳಸುವ ವಿವೇಕಗಳು ಅಂತಿಮವಾಗಿ ನಮ್ಮ ಬದುಕನ್ನು ಕಟ್ಟಿಕೊಡುವ ಹಾಗೂ ಆ ಮೂಲಕ ಸಮಾಜೋಪಯೋಗಿಯಾಗುವ ಹಾದಿಯಲ್ಲಿ ಇರದಿದ್ದರೆ ಅದು ವ್ಯರ್ಥ; ವ್ಯಕ್ತಿ ಸಾಧನೆಗಳು ಸಮಾಜಕ್ಕೆ ಮತ್ತು ಸಮುದಾಯದ ಕಲ್ಯಾಣಕ್ಕೆ ಬಳಕೆಯಾಗದಿದ್ದರೆ ಅದು ಅಹಂಕಾರ ಜನ್ಯ; ಜೊತೆಗೆ ಅಂಥವರು ಸಮಾಜಕ್ಕೆ ಹೊರೆ. ಸರಿಯಾದ ದುಡಿಮೆ ಯಾವತ್ತೂ ವ್ಯಕ್ತಿಯನ್ನು ವಂಚಿಸುವುದಿಲ್ಲ; ಆದರೆ ವ್ಯಕ್ತಿಯೇ ದುಡಿಮೆಯನ್ನು ವಂಚಿಸುವನು ಎಂಬರ್ಥದ ರಷ್ಯನ್ ಗಾದೆಯಿದೆ.

ಇವೆಲ್ಲವನ್ನೂ ನಮ್ಮ ಸನಾತನ ದರ್ಶನಗಳು ಜ್ಞಾನಯೋಗ, ಭಕ್ತಿಯೋಗ ಮತ್ತು ಕರ್ಮಯೋಗ ಎಂದು ಮೂರು ವಿಧಗಳಲ್ಲಿ ಅಡಕಗೊಳಿಸಿ ವಿವರಿಸಿವೆ. ಭಗವದ್ಗೀತೆಯು ಈ ಮೂರೂ ಯೋಗಗಳನ್ನು ಸಂಯೋಜಿಸಿ, ನಿರ್ವಂಚನೆಯ ಕೆಲಸಗಳನ್ನು ಮಾಡಲು ಮತ್ತು ಅದರಲ್ಲಿ ಜನಸಾಮಾನ್ಯರನ್ನು ತೊಡಗಿಸಲು ಪ್ರೇರಿಸುತ್ತದೆ. ಜ್ಞಾನವನ್ನೂ ಭಕ್ತಿಯನ್ನೂ ಅದರೆಲ್ಲ ಬಹುವಿಧವಾದ ಆಯಾಮಗಳಲ್ಲಿ ಬೋಧಿಸುತ್ತದೆ. ಜೊತೆಗೆ ಬಹುಮುಖ್ಯವಾಗಿ ‘ಕರ್ಮ’ ವನ್ನು ಕುರಿತೂ ಮಾತಾಡುತ್ತದೆ. ವಿಶ್ವಾತ್ಮಕ ತಿಳಿವಳಿಕೆಯನ್ನು ನಿಷ್ಠೆ ಮತ್ತು ನಿರಹಂಕಾರಿ ವ್ಯಕ್ತಿಗಳಾದವರಿಗೆ ತಮ್ಮ ಕರ್ತವ್ಯಗಳನ್ನು ಮಾಡಲು ಬೆಂಬಲಿಸುತ್ತದೆ. ‘ನಾನು ಹೇಳುತ್ತಿದ್ದೇನೆ; ನೀನು ಮಾಡು ಅಷ್ಟೇ’ ಎಂಬ ಶ್ರೀ ಕೃಷ್ಣನ ಧ್ವನಿಯನ್ನು ಆಕ್ರಮಣಕಾರಿಯೆಂಬಂತೆ ಮತ್ತು ಸರ್ವಾಧಿಕಾರಿಯ ಆಜ್ಞೆಯೆಂಬಂತೆ ಕೇಳಿಸಿಕೊಳ್ಳಬಾರದು. ಹೀಗೆ ಕೇಳಿಸಿಕೊಂಡರೆ ಉದ್ದೇಶ ಮತ್ತು ಆಶಯಗಳನ್ನು ಸನ್ಮಾರ್ಗದಲ್ಲಿ ಅರ್ಥೈಸಿಕೊಳ್ಳಲು ಸಾಧ್ಯವಾಗದೆ, ಅರಿವಿನ ಶುದ್ಧತೆ ಮಲಿನವಾಗಿ ಬಿಡುವ ಅಪಾಯವಿದೆ. ಉದಾಹರಣೆಗೆ ಶ್ರೀ ಕೃಷ್ಣನು ಪರಮಾತ್ಮನಾಗಿ ನಾನೇ ಎಂದು ಅಹಂಕಾರದಿಂದ ಹೇಳುವುದು ಸರಿಯೇ? ಯುದ್ಧರಂಗದಲ್ಲಿ ಶತ್ರುಪಾಳಯದವರು ತೊಡೆ ತಟ್ಟಿ ನಿಂತಿರುವಾಗ ಹೀಗೆ ಗಂಟೆಗಟ್ಟಲೆ ಅಥವಾ ದಿನಗಟ್ಟಲೆ ‘ಉಪದೇಶ’ಕೊಡುವುದು ಸರಿಯೇ? ಸಾಧ್ಯವೇ? ಎಂಬ ಪ್ರಶ್ನೆಗಳನ್ನು ಇನ್ನೆಷ್ಟು ದಿನ, ಇನ್ನೆಷ್ಟು ಕಾಲ ಕೇಳಿಕೊಂಡು, ಕಿಚಾಯಿಸಿಕೊಂಡು ಇರೋಣ? ‘ನೂರಾರು ಭಾವದ ಬಾವಿ; ಎತ್ತಿಕೋ ನಿನಗೆ ಬೇಕಾದಷ್ಟು ಸಿಹಿನೀರ! ಪಾತ್ರೆಯಾಕಾರಗಳ ಕುರಿತು ಏತಕೆ ಜಗಳ? ನಮಗೆ ಬೇಕಾದದ್ದು ದಾಹ ಪರಿಹಾರ’ ಎಂಬ ಕವಿನುಡಿಯ ಬೆಳಕಿನಲ್ಲಿ ನಾನು ನಡೆದರೆ ಈವರೆಗಿನ ನಮ್ಮೆಲ್ಲ ಪೂರ್ವಗ್ರಹಿಕೆ ಮತ್ತು ತಪ್ಪುಗ್ರಹಿಕೆಗಳು ಮನದಟ್ಟಾಗಿ ‘ಸರಿಯಾಗಿ ಓದು’ವುದನ್ನು ಕಲಿಯುತ್ತೇವೆ ಎಂಬುದೇ ನನ್ನ ಪ್ರಾಮಾಣಿಕ ಕಳಕಳಿ. ಹೀಗಾಗಿ ಭಗವದ್ಗೀತೆಯು ಕರ್ಮಯೋಗವನ್ನು ಬೋಧಿಸುವ ಬಹು ದೊಡ್ಡ ‘ಕಾಯಕ ಚಳವಳಿ’ ಯೇ ಆಗಿದೆ.

ಗೌತಮಬುದ್ಧ, ಮಹಾವೀರರೇ ಮೊದಲಾದ ಧರ್ಮಗುರುಗಳು ಅಜ್ಞಾನವನ್ನು ಹೋಗಲಾಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದರು. ಅದಕೂ ಮುಂಚೆ ನಮ್ಮ ವೇದೋಪನಿಷತ್ತುಗಳು ಜ್ಞಾನಮಾರ್ಗವನ್ನು ಬೋಧಿಸಿದವು. ಈ ಜ್ಞಾನಯೋಗವು ಇಡೀ ಜಗತ್ತಿಗೆ ಭಾರತವು ಕೊಟ್ಟ ಬಹು ದೊಡ್ಡ ಕೊಡುಗೆ; ವಿಶ್ವಸತ್ಯವನ್ನು ಉಣಬಡಿಸುವ ಸಮಾರಾಧನೆಯೇ ಸರಿ. ಬ್ರಹ್ಮವನ್ನೂ ಬ್ರಹ್ಮಾಂಡವನ್ನೂ ಇಂಥ ಲಕ್ಷ ಕೋಟಿ ಬ್ರಹ್ಮಾಂಡಗಳನ್ನು ಒಳಗೊಂಡ ವಿಶ್ವವನ್ನೂ ಅರಿಯುವ ಹಾಗೂ ಅದರಲ್ಲಿ ನಮ್ಮ ಪಾತ್ರವೇನು? ಎಂದು ಮನವರಿಕೆ ಮಾಡಿಕೊಳ್ಳುವ ಸಲುವಾಗಿ ಮನುಕುಲವನ್ನು ‘ಎಜುಕೇಟ್’ ಮಾಡಿದವು. ಇದನ್ನರಿಯದೆ ನಾವು ಎಜುಕೇಟ್ ಆಗದಿದ್ದರೆ ಅದು ಜ್ಞಾನಯೋಗದ ತಪ್ಪಲ್ಲ! ಈಗಲೂ ನಾವು ಇವೆಲ್ಲಾ ‘ವೈದಿಕ ಪರಂಪರೆʼ ಎಂದು ಜರಿದು, ದೂರವಿಟ್ಟರೆ ಅದು ನನ್ನ ಅವಿವೇಕ ಮತ್ತು ಅವಿವೇಚನೆಯ ಅಂಶವೇ ವಿನಾ ಬೇರೇನೂ ಅಲ್ಲ. ಸಿದ್ಧಾಂತಗಳ ರಾದ್ಧಾಂತಗಳನ್ನು ಇನ್ನೆಷ್ಟು ಕಾಲ ಮೈಮೇಲೆಳೆದುಕೊಂಡು ಪ್ರತಿಷ್ಠೆ ಮತ್ತು ಪಾಶ್ಚಿಮಾತ್ಯರ ಕಣ್ಣಿಂದ ಬದುಕೋಣ? ಪಾಶ್ಚಿಮಾತ್ಯರೇ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಸದಸದ್ವಿವೇಕವನ್ನು ಅರಿತು ಅದರ ಸದುಪಯೋಗವನ್ನು ಪಡೆದುಕೊಳ್ಳುತ್ತಿರುವಾಗ!

ನಾವಿಂದು ನಮ್ಮ ಕಾಲದ ತಿಳಿವಳಿಕೆಯ ರೀತ್ಯ ಬದುಕುತ್ತಿರುವಂತೆಯೇ ಅಂದಿನ ಕಾಲದ ಮಂದಿ ತಮಗನಿಸಿದ, ತಮ್ಮ ಅರಿವಿಗೆ ನಿಲುಕಿದ ಮತ್ತು ತಮಗಾದ ದರ್ಶನಗಳ ಸತ್ಯದ ಸತ್ತ್ವವನ್ನು ತಮಗೆ ತೋಚಿದ ಹಾಗೆ ದಾಖಲಿಸಿ, ಉಪಕರಿಸಿದ್ದಾರೆ ಅಷ್ಟೇ. ಅವರು ಹೇಳುವ ಈ ಕಾಲಕ್ಕೆ ಸಲ್ಲದ ಆಚರಣೆಗಳನ್ನೂ ವಿಧಿ ವಿಧಾನಗಳನ್ನೂ ಕೈ ಬಿಟ್ಟು, ಅದರ ಸದಾಶಯಗಳತ್ತ ಗಮನ ಹರಿಸಿದರೆ ಜ್ಞಾನನಿಧಿಯೇ ದೊರೆಯುವುದು. ನದಿಯೊಂದು ಹರಿಯುವಾಗ ಮಲಿನವಾಗುವುದು ಸಹಜ; ಹಾಗೆಂದು ಹರಿವ ನದಿಯನ್ನೇ ನಿರಾಕರಿಸುವುದು ವಿವೇಚನೆಯೇ? ನಿರಾಕರಿಸಿದ ಮಾತ್ರಕೇ ನದಿಯು ಹರಿಯದೇ ಸುಮ್ಮನಾದೀತೆ? ಹಾಗಾಗಿ, ಮಲಿನವಾದ ನೀರು ತಿಳಿಯಾಗುವ ತನಕ ಕಾಯುವ ಮತ್ತು ಶುದ್ಧಜಲವನ್ನು ಪಡೆದುಕೊಳ್ಳುವ ಕೌಶಲ್ಯದ ಬಗ್ಗೆ ಯೋಚಿಸುವುದು ವಿವೇಕ ತಾನೆ. ಇಂಥಲ್ಲಿ ವಿವೇಕದ ಜೊತೆಗೆ ಜಾಣ್ಮೆಯೂ ಬೇಕು.

ಶಿವಶರಣರಾದ ವಚನಕಾರರು ಭಕ್ತಿ ಮತ್ತು ಕರ್ಮಯೋಗವನ್ನು ಬೆಸೆದು ಕಾಯಕ ಚಳವಳಿಯನ್ನೇ ಮಾಡಿದರು; ಹೊಸತೊಂದು ವಿಶ್ವಮಾನವಧರ್ಮವನ್ನು ರೂಪಿಸಲು ಪ್ರಯತ್ನಿಸಿದರು. ‘ಕೆಲಸದಲ್ಲಿ ಚಿಕ್ಕದು, ದೊಡ್ಡದು ಎಂಬ ಭೇದವಿಲ್ಲ; ಚೆನ್ನಾಗಿ ಮಾಡಿದ ಎಲ್ಲ ಕೆಲಸವೂ ದೊಡ್ಡದೇ’ ಎಂಬ ಕುವೆಂಪು ಮಾತಿನಂತೆ ಕಾಯಕ ಮಾರ್ಗಕ್ಕೊಂದು ಗೌರವ ತಂದುಕೊಟ್ಟರು. ಉದರಂಬರಣಕ್ಕಾಗಿ ಆತ್ಮಗೌರವವನ್ನು ಕಳೆದುಕೊಳ್ಳದೆ ಪ್ರಾಮಾಣಿಕವಾಗಿ ದುಡಿಯುವ ಯಾವ ಕೆಲಸವೂ ಅವಮಾನಕರವಾದುದಲ್ಲ ಎಂಬ ಸಂದೇಶ ಇವರಿಂದ ನಮಗೆ ಪಾಠವಾಯಿತು. ಹಾಗೆಯೇ ಲೌಕಿಕದಲ್ಲಿ ನೆಲೆ ನಿಲ್ಲದೆ, ಪರತತ್ತ್ವವನ್ನು ಅರಿತು, ಜೀವಾತ್ಮವು ಧಾರ್ಮಿಕವಾಗಬೇಕು; ಅಂತಿಮವಾಗಿ ಅಧ್ಯಾತ್ಮವನ್ನು ಧರಿಸಬೇಕು ಎಂಬುದೇ ಅಲ್ಲಮ, ಬಸವಣ್ಣ ಮೊದಲಾದ ಮುಖಂಡರ ಆಶಯವಾಗಿತ್ತು. ಕೆರೆಕಟ್ಟೆಗಳನ್ನು ಕಟ್ಟಿಸುತ್ತಾ ತನ್ನ ಕರ್ಮಮಾರ್ಗದಲ್ಲಿ ತನಗೇ ಗೊತ್ತಿಲ್ಲದ ಅಹಮಿನಿಂದ ಮೆರೆಯುತಿದ್ದ ಸಿದ್ಧರಾಮನಿಗೆ ಅಲ್ಲಮನು ಉಪದೇಶ ಮಾಡಿ, ಕಣ್ತೆರೆಸುವ ಘಟನೆಯನ್ನು ಇಲ್ಲಿ ಸ್ಮರಿಸಬಹುದು.

ಕಾಯಕ ಮತ್ತು ದಾಸೋಹಗಳೆಂಬ ಎರಡು ಪ್ರಬಲ ತತ್ತ್ವಗಳನ್ನು ಆಧ್ಯಾತ್ಮೀಕರಿಸಿ, ಸಮಾಜೋ ಆರ್ಥಿಕ ಪರಿಹಾರ ಮಾರ್ಗಗಳನ್ನಾಗಿಸಿದ ಕೀರ್ತಿ ಬಸವಾದಿ ಪ್ರಮಥರಿಗೆ ಸಲ್ಲುತ್ತದೆ. ಸಮಾಜದ ತಳವರ್ಗದ ಶ್ರಮಜೀವಿಗಳಿಗೆ ಇವರು ತುಂಬಿದ ಆತ್ಮವಿಶ್ವಾಸ ಅತಿ ಮುಖ್ಯವಾದದ್ದು. ‘ಸೋಮಾರಿಗಳಾಗಿರುವ ಮನುಷ್ಯರನ್ನು ಬಿಟ್ಟರೆ ಜಗತ್ತಿನಲ್ಲಿ ಇರುವವರೆಲ್ಲ ಒಳ್ಳೆಯವರೇ’ ಎಂದು ವಾಲ್ಟೇರ್ ಮಹಾಶಯ ನುಡಿದಂತೆ, ಏನಾದರೊಂದು ಕಾಯಕದಲ್ಲಿ ತೊಡಗಿಸಿಕೊಳ್ಳಬೇಕೆಂಬ ಆ ಮೂಲಕ ತನ್ನ ಹಾಗು ತಾನು ವಾಸಿಸುತ್ತಿರುವ ಸಮಾಜದ ಏಳಿಗೆಗೆ ಅದು ಪೂರಕವಾಗಬೇಕೆಂಬ ತುಡಿತವನ್ನು ಹುಟ್ಟು ಹಾಕಿದರಿವರು. ‘ಒಂದೇ ಕೆಲಸದಲ್ಲಿ ತೊಡಗಿರುವವರೆಲ್ಲರದೂ ಒಂದೇ ಜಾತಿ’ ಎಂಬ ನಮ್ಮ ಮಾಜಿ ರಾಷ್ಟ್ರಾಧ್ಯಕ್ಷರಾದ ಬಾಬು ರಾಜೇಂದ್ರಪ್ರಸಾದರ ಮಾತನ್ನು ನಾನು ಶರಣರ ಆಂದೋಲನಕ್ಕೆ ಲಗತ್ತಿಸಿ ನೋಡಲು ಇಷ್ಟ ಪಡುತ್ತೇನೆ. ಇಂಥಲ್ಲಿ ಒಂದೇ ಕೆಲಸ ಎಂಬುದನ್ನು ‘ಒಂದೇ ಸದಾಶಯ’ (behind a good cause) ಎಂದು ಪರಿಭಾವಿಸಬೇಕು. ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನು ಎಂತೊಲಿವನಯ್ಯಾ? ಎಂದು ಪ್ರಶ್ನಿಸಿಕೊಳ್ಳುತ್ತಾರೆ ಬಸವಣ್ಣನವರು.

ಅಂದರೆ, ಶಿವಪಾರಮ್ಯವನ್ನು ಎತ್ತಿ ಹಿಡಿದ ಶರಣರು ಅಂತಿಮವಾಗಿ ಕಲ್ಯಾಣರಾಜ್ಯವನ್ನು ಸಂಸ್ಥಾಪಿಸುವ ಒಂದೇ ಕೆಲಸವನ್ನು ನಾವೆಲ್ಲ ಸೇರಿ ಮಾಡುತ್ತಿದ್ದೇವೆಂಬ ಪ್ರಜ್ಞೆಯನ್ನು ಎಲ್ಲರಲ್ಲೂ ಬಿತ್ತಿದರು. ಜೊತೆಗೆ, ನುಡಿ ಮತ್ತು ನಡೆಗಳನ್ನು ಬೆಸೆದು ಇವುಗಳ ನಡುವೆ ಅಂತರವಿರಬಾರದೆಂದು ಎಚ್ಚರಿಸಿದರು. ಆ ಮಟ್ಟಿಗೆ ನೈತಿಕ ಮೌಲ್ಯವನ್ನು ಜಾಗೃತಗೊಳಿಸಿದರು. ‘ನಿನ್ನ ಶ್ರಮವನ್ನು ಶ್ರಮವಿಲ್ಲದೆ ಮಾಡು; ಕೆಲಸವನ್ನು ಕೆಲಸವೇ ಅಲ್ಲ ಎಂಬಂತೆ ಮಾಡು; ಇಷ್ಟೇ ಸಾಕೆಂಬ ತೃಪ್ತಿಯಿಂದ ಜೀವಿಸು, ಅದಕಿಂತ ಬೇರೆ ನೆಮ್ಮದಿಯಿಲ್ಲ’ ಎಂದು ಲಾವೋತ್ಸೆ ಬಹಳ ಹಿಂದೆಯೇ ಹೇಳಿದ್ದು ವಚನಕಾರರ ಜೀವನಧರ್ಮಕ್ಕೆ ಚೆನ್ನಾಗಿ ಒಪ್ಪುತ್ತದೆ. ಆ ದಿನಕೆಷ್ಟು ಬೇಕೋ ಅಷ್ಟೇ ಅಕ್ಕಿಯನ್ನು ಆಯ್ದು ತರುತ್ತಿದ್ದ ಆಯ್ದಕ್ಕಿ ಮಾರಯ್ಯನವರು ಒಂದು ದಿವಸ ಹೆಚ್ಚು ಸಂಗ್ರಹಿಸಿ ತಂದಾಗ ‘ಈಸಕ್ಕಿಯಾಸೆ ನಿಮಗೇಕಯ್ಯ’ ಎಂದು ಆಯ್ದಕ್ಕಿ ಲಕ್ಕಮ್ಮನವರು ತನ್ನ ಪತಿದೇವರಿಗೆ ಬುದ್ಧಿ ಹೇಳುವುದಿದೆಯಲ್ಲಾ, ಅದು ಇಡೀ ಜಗತ್ತಿನಲ್ಲಿ ನಡೆದ ಅಪರೂಪದ ಎಚ್ಚರಿಕೆ. ಗೌತಮ ಬುದ್ಧರು ಮತ್ತು ಶಿವಶರಣರು ಅಸಂಗ್ರಹ ತತ್ತ್ವವನ್ನು ಜಗತ್ತಿಗೆ ವಿಭಿನ್ನವಾಗಿ ಮತ್ತು ಅಷ್ಟೇ ವಿಶೇಷವಾಗಿ ಬೋಧಿಸಿದರು. ‘ತನಗೆ ಸ್ವಲ್ಪ ; ಸಮಾಜಕ್ಕೆ ಸರ್ವಸ್ವ’ ಎಂದು ಹೇಳಿ ಬದುಕಿದ ಮಹಾತ್ಮರಿವರು.

ಆದರೆ ಭಾರತೀಯ ತತ್ತ್ವಶಾಸ್ತ್ರ ಪರಂಪರೆಯು ತನ್ನ ಉದ್ದಾನುದ್ದ ಚರ್ಚಿಸುವ ಕರ್ಮಫಲ ಮತ್ತು ಕರ್ಮಸಿದ್ಧಾಂತವನ್ನು ಅದು ಹೇಳುವಂತೆ ಯಥಾವತ್ತಾಗಿ ಒಪ್ಪುವುದು ಕಷ್ಟ. ಯಾವುದೇ ಕರ್ಮಕ್ಕೆ ಫಲವಿದೆ ಎಂಬುದು ಸರಿ; ಸತ್ಕರ್ಮಕ್ಕೆ ಸತ್ಫಲ; ದುಷ್ಕರ್ಮಕ್ಕೆ ದುಷ್ಫಲ ಎಂಬುದೂ ಸರಿ. ಕಾರ‍್ಯ-ಕಾರಣ ಸಂಬಂಧದ ಆಧಾರದ ಮೇಲೆ ಇದನ್ನು ಹೇಳುವಂಥದು. Nothing happens accidentally; everything has a reason ಎಂಬ ಮಾತೊಂದುಂಟು. ಆಕಸ್ಮಿಕವಾಗಿ ಏನೂ ಸಂಭವಿಸದು; ಪ್ರತಿಯೊಂದಕೂ ಕಾರಣವುಂಟು ಎಂಬುದಿದರ ಭಾವ. ಕರ್ಮಸಿದ್ಧಾಂತ ಮತ್ತು ಕಾರ್ಯ ಕಾರಣ ಸಂಬಂಧಗಳನ್ನು ಬಲವಾಗಿ ಪ್ರತಿಪಾದಿಸುವ ಈ ಹೇಳಿಕೆಯು ನಮ್ಮೆಲ್ಲರ ಜೀವನದಲ್ಲೂ ಈ ರೀತಿ ಅಂದುಕೊಳ್ಳುವ ಮತ್ತು ನೊಂದುಕೊಳ್ಳುವ ಘಟನಾವಳಿಗಳು ಜರುಗಿಯೇ ಇರುತ್ತವೆ. ಇದೇನೇ ಇರಲಿ, ಧರ್ಮಶಾಸ್ತ್ರಗಳು ಸಂಚಿತ ಕರ್ಮ, ಪ್ರಾರಬ್ಧ ಕರ್ಮ ಮತ್ತು ಆಗಾಮಿ ಕರ್ಮಗಳೆಂದು ಮೂರು ರೀತಿಯಲ್ಲಿ ವಿವರಿಸುತ್ತವೆ. ಇಂಥಲ್ಲಿ ಪೂರ್ವಜನ್ಮ ಮತ್ತು ಪುನರ್ಜನ್ಮಗಳ ವಿಚಾರ ಉದ್ಭವಿಸುತ್ತದೆ. ಈ ಪರಿಕಲ್ಪನೆಯು ಧರ್ಮ ಪ್ರವೃತ್ತಿಗೆ ಆಧಾರವಾಗಿರುವಂಥದು; ಜನರನ್ನು ಸನ್ಮಾರ್ಗದಲ್ಲಿ ನಡೆಸಲು ಧರ್ಮ ಮತ್ತು ದರ್ಶನಶಾಸ್ತ್ರಗಳು ಇಂಥ ಹಲವು ವಿಧದ ಕಟ್ಟು ಕಟ್ಟಳೆಗಳನ್ನು ವಿಧಿಸಿದವು. ದಾರಿ ಮತ್ತು ಗುರಿಗಳೆರಡೂ ಪರಿಶುದ್ಧವಾಗಿರಬೇಕು ಎಂದೂ ಸಾರಿದವು. ಸತ್ಕರ್ಮದಿಂದ ಪುಣ್ಯವೂ ದುಷ್ಕರ್ಮದಿಂದ ಪಾಪವೂ ಜನಿಸುತ್ತವೆ. ತಾನೆಸಗಿದ ಪಾಪಕರ್ಮಗಳಿಂದ ವ್ಯಕ್ತಿಯು ಅಪರಾಧೀ ಭಾವದಿಂದ ನರಳಿ, ಪಶ್ಚಾತ್ತಾಪದಿಂದ ನೊಂದು, ಬೆಂದು ನರಕದ ಶಿಕ್ಷೆಗಳನ್ನು ನೆನಪಿಸಿಕೊಂಡು, ಇನ್ನು ಮುಂದಾದರೂ ಪುಣ್ಯವಂತನಾಗಲು ಪ್ರಯತ್ನಿಸಲಿ ಎಂದೇ ಈ ಎಲ್ಲ ವಿಚಾರಗಳ ಸದಾಶಯ.

-ಡಾ. ಹೆಚ್ಚೆನ್ ಮಂಜುರಾಜ್


ಮುಂದುವರೆಯುವುದು…

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
1
0
Would love your thoughts, please comment.x
()
x