ಕಳೆದು ಹೋಗುವ ಸುಖ (ಭಾಗ 1): ಡಾ. ಹೆಚ್ಚೆನ್ ಮಂಜುರಾಜ್

ಗುರುತಿಸಿಕೊಳ್ಳುವುದಕಿಂತ ಕಳೆದು ಹೋಗುವುದೇ ಈ ಅಖಂಡ ವಿಶ್ವದ ಮೂಲತತ್ತ್ವವಾಗಿದೆ ಅಥವಾ ಗುರುತಿಸಿಕೊಂಡ ಮೇಲೆ ಕಳೆದು ಹೋಗುವುದೇ ಸೃಷ್ಟಿಯ ನಿಯಮವಾಗಿದೆ. ಅದು ಆಕಾಶಕಾಯವೇ ಇರಲಿ, ಜೀವಸೃಷ್ಟಿಯೇ ಇರಲಿ, ಮಾನವ ನಿರ್ಮಿತ ತತ್ತ್ವಸಿದ್ಧಾಂತಗಳೇ ಇರಲಿ, ಪದವಿ-ಪ್ರತಿಷ್ಠೆ-ಹುದ್ದೆ-ಅಧಿಕಾರ-ಅಂತಸ್ತು-ಸಾಧನೆಗಳೇ ಇರಲಿ ಎಲ್ಲವೂ ಕಾಲ ಕ್ರಮೇಣ ಕಳೆದು ಹೋಗುತ್ತವೆ ಮತ್ತು ಹಾಗೆ ಕಳೆದು ಹೋಗಬೇಕು. ಹಳತು ನಶಿಸುತಾ, ಹೊಸತು ಹುಟ್ಟುತಿರಬೇಕು. ‘ನಿದ್ದೆಗೊಮ್ಮೆ ನಿತ್ಯ ಮರಣ; ಎದ್ದ ಸಲ ನವೀನ ಜನನ’ ಎಂದಿಲ್ಲವೇ ಕವಿನುಡಿ.

ಅಂದರೆ ಅಸ್ತಿತ್ವವು ವ್ಯಕ್ತಿತ್ವವನ್ನು ಹೊಂದಿದ ಮೇಲೆ ಸಾವು ಶತಸಿದ್ಧ ; ಸಾವು ಎಂಬುದು ಅಂತಿಮವಲ್ಲ ; ಹಾಗೆ ತೋರುವ ಆಭಾಸ ಅಷ್ಟೇ. ಸಾವಿನಿಂದಾಗಿ ನಮ್ಮ ಪ್ರಜ್ಞೆಯನ್ನು ಕಳೆದುಕೊಳ್ಳುವುದರಿಂದ ಅಥವಾ ದೇಹವನ್ನು ತೊರೆಯುವುದರಿಂದ ಅದೊಂದು ಕೆಡುಕೆನಿಸಿದೆ ಅಷ್ಟೇ. ಜನ್ಮಗಳಿದ್ದ ಮೇಲೆ ಅದಕೊಂದು ಹಿಂದಿನ ಮತ್ತು ಮುಂದಿನ ಅವಸ್ಥೆಯೂ ಇರಬೇಕು; ಇದ್ದೀತು ಕೂಡ. ಹಾಗಾಗಿ, ‘ಪುನರಪಿ ಜನನಂ ಮತ್ತು ಪುನರಪಿ ಮರಣಂ; ಪುನರಪಿ ಜನನಿ ಜಠರೇ ಶಯನಂ…ʼ ಎಂಬುದು ಜೀವಿಗಳಿಗೆ ಮಾತ್ರವಲ್ಲ, ಒಟ್ಟಾರೆ ವಿಶ್ವದ ಎಲ್ಲ ಚಟುವಟಿಕೆಗಳಿಗೂ ಅನ್ವಯ! ಈ ಕಾಲಚಕ್ರದೊಳಗೆ ಭವಚಕ್ರವೂ ಒಂದು; ಇದನ್ನೇ ‘ಭವಾವಳಿ’ಎಂದು ಜೈನಧರ್ಮದಲ್ಲಿ ಹೆಚ್ಚು ಧಾರ್ಮಿಕ ಪರಿಭಾಷೆಯಲ್ಲಿ ನುಡಿದದ್ದು. ಏಕೆಂದರೆ ಯಾವುದೂ ಸ್ವತಂತ್ರವಲ್ಲ. ಇಂದು ಎಂಬುದು ನಿನ್ನೆಯ ಮುಂದುವರಿಕೆ, ಹಾಗೆಯೇ ನಾಳೆ ಎಂಬುದು ಇಂದಿನ ಮುಂಬರಿತ. ಒಂದರ್ಥದಲ್ಲಿ ನಿನ್ನೆ, ಇಂದು ಮತ್ತು ನಾಳೆಗಳು ಕಾಲದ ಚಲನೆಯನ್ನು ಕುರಿತ ನಮ್ಮ ಭ್ರಮೆಗಳು. ಎಲ್ಲವೂ ಅಖಂಡವಾದದ್ದು. ಇಡಿಯಾದುದನ್ನು ಬಿಡಿಯಾಗಿಸಿ ನೋಡುವ ಅಭ್ಯಾಸ ನಮಗೆ ಬಂದ ಮೇಲೆ ವಿದ್ಯಾಭ್ಯಾಸವು ವಿದ್ಯಾಭಾಸವಾಯಿತು; ವಿಶ್ವಸತ್ಯವು ವಿಸ್ಮೃತಿಗೆ ಸಂದಿತು. ಇಂಥ ಇಡಿಯಾದ ಬಿಡಿಯಲ್ಲದ ಚಿಂತನೆಯನ್ನೇ ಕುವೆಂಪು ಅವರು ‘ಪೂರ್ಣದೃಷ್ಟಿ’ಎಂದು ಕರೆದದ್ದು.

ನನ್ನ ಲಕ್ಷ್ಯವಿರುವುದು: ಗುರುತಾದ ಮೇಲೆ ಕಳೆದು ಹೋಗುವ ಪ್ರಕ್ರಿಯೆಯಲ್ಲಿ ಒಂದು ರೀತಿಯ ಸುಖವಿದೆ ಮತ್ತು ನಿರಾಳವಿದೆ ಎಂಬುದನ್ನು ಹೇಳಲು. ಸೂರ್ಯುನ ಹಿಡಿತದಲ್ಲಿರುವ ಈ ಭೂಗ್ರಹದಲ್ಲೇ ಇದುವರೆಗೂ ಎಂಟರಿಂದ ಒಂಬತ್ತು ಸಲ ಹೀಗೆ ಎಲ್ಲವೂ ಕಳೆದು ಹೋಗಿ ಮತ್ತೆ ಹೊಸದು ಹುಟ್ಟಿದೆ ಎಂಬ ಮಾತಿದೆ! ಪ್ರಳಯ ಮತ್ತು ಪ್ರಳಯಾನಂತರ ಎಂಬುದನ್ನು ಹೀಗೆ ಎಲ್ಲವೂ ನಶಿಸಿ, ಕಣ್ಮರೆಯಾಗಿ ಮತ್ತೆ ಎಷ್ಟೋ ಲಕ್ಷ-ಸಾವಿರ ವರ್ಷಗಳ ತರುವಾಯ ಜೀವಿಗಳ ಆವಾಸಕ್ಕೆ ಹದಗೊಳ್ಳುವ ಚೋದ್ಯಕ್ಕೆ ಸಂಕೇತಿಸಬಹುದು. ಕಳೆದು ಹೋಗುವುದು ಎಂದರೆ ಒಂದು ದಿನ ಇದ್ದಕ್ಕಿದ್ದಂತೆ ಎಲ್ಲವೂ ಕಣ್ಮರೆಯಾಗಿ ಬಿಡುತ್ತದೆ ಎಂದರ್ಥವಲ್ಲ. ಹಾಗೆ ನೋಡಿದರೆ, ಪ್ರಗತಿ ಎಂಬುದೇ ವಿನಾಶದ, ಕಳೆದು ಹೋಗುವಿಕೆಯತ್ತ ಸಾಗುವುದು ಎಂದೇ ಎನಿಸುತ್ತದೆ. ಕಳೆದು ಹೋಗುವುದು ಮತ್ತು ಕಳೆದು ಹೋಗಲು ಮತ್ತೆ ಆವಿರ್ಭವಿಸುವುದು ಸೃಷ್ಟಿಯ ನಿಗೂಢಗಳಲ್ಲಿ ಒಂದು.

ನಮ್ಮ ಭೂಮಿ ಹೀಗೆ ನಿಧಾನವಾಗಿ ವಿನಾಶದತ್ತ ಚಲಿಸುತ್ತಿದೆ; ಅದರ ಅಂತ್ಯ ಸಮೀಪಿಸುತ್ತಿದೆ ಎಂದು ವಿಜ್ಞಾನದ ಸಂಶೋಧನೆಗಳು ಹೇಳುವುದಿರಲಿ, ನಮ್ಮಂಥ ಅಜ್ಞಾನಿಗಳ ಅನುಭವಕ್ಕೇ ಬರುತ್ತಿದೆ. ಇದೊಂದು ಯಾರೂ ತಡೆಯಲಾಗದ ಮತ್ತು ನಿರೀಕ್ಷಿತ ವಿದ್ಯಮಾನ. ಎಲ್ಲಕೂ ಸಾವಿದೆ ಎಂದ ಮೇಲೆ ನಮ್ಮ ಭೂಮಿಗೂ ಸಾವಿದೆ ಅಷ್ಟೇ. (ನಮ್ಮ ಪಾಲಿಗೆ ವಿನಾಶ; ಪ್ರಕೃತಿಯ ಪಾಲಿಗದು ನಿಯಮದ ನಿಷ್ಠಾವಂತ ಅನುಷ್ಠಾನದಾವೇಶ!)

ಹದಿನೈದು ಶತಕೋಟಿ ವರುಷಗಳ ಹಿಂದೆ ಆದ ಮಹಾಸ್ಫೋಟದಿಂದ ಲೆಕ್ಕ ಹಾಕಿದರೆ ವಿಶ್ವದ ವಯಸ್ಸು ಸುಮಾರು ಸಾವಿರದ ನಾನೂರು ಕೋಟಿ ವರುಷವಂತೆ. ಈ ವಿಶ್ವದಾಚೆಗೆ ಏನಿದೆ? ಎಂದು ಕೇಳುವಂತೆಯೇ ಇಲ್ಲ; ಏನೆಲ್ಲವೂ ಇದೆ; ಅದೇ ವಿಶ್ವ ! ನಮ್ಮ ಭೂಮಿಗೆ ಹತ್ತಿರದಲಿರುವ ನಕ್ಷತ್ರವೆಂದರೆ ಅದು ಸೂರ್ಯಾ. ಸೂರ್ಯೆನಿರುವ ಬ್ರಹ್ಮಾಂಡ ಅಥವಾ ಆಕಾಶಗಂಗೆಯಲ್ಲೇ ಇನ್ನೂರರಿಂದ ನಾನೂರು ಶತಕೋಟಿ ನಕ್ಷತ್ರಗಳಿವೆ! ಕನಿಷ್ಠವೆಂದರೂ ಇಂಥ ಬ್ರಹ್ಮಾಂಡದಲಿ ನೂರು ಶತಕೋಟಿ (ಬಿಲಿಯನ್) ಗ್ರಹಗಳಿವೆ! ಈ ವಿಶ್ವದಲಿ ಇಂಥ ಕೋಟಿ ಕೋಟಿ ಬ್ರಹ್ಮಾಂಡಗಳಿವೆ. ಒಂದೊಂದು ಬ್ರಹ್ಮಾಂಡದಲ್ಲಿಯೂ ಕೋಟಿ ಕೋಟಿ ನಕ್ಷತ್ರಗಳಿವೆ. ಸೂರ್ಯಿನಿಗಿಂತಲೂ ಸಾವಿರದೈನೂರು ಪಟ್ಟು ದೊಡ್ಡದಾದ ನಕ್ಷತ್ರಗಳಿವೆ. ಸೂರ್ಯದನೇ ಭೂಮಿಗಿಂತ ಒಂದು ನೂರಾ ಒಂಬತ್ತು ಪಟ್ಟು ದೊಡ್ಡದು; ಅಂತಹುದರಲ್ಲಿ ಸೂರ್ಯ್ನಿಗಿಂತ ಲಕ್ಷಾಂತರ ಪಟ್ಟು ದೊಡ್ಡದಾದ ನಕ್ಷತ್ರಗಳು ಈ ವಿಶ್ವದ ಮೂಲೆ ಮೂಲೆಗಳಲ್ಲಿ ಬೆಳಗುತ್ತಿವೆ. ‘ಯುವೈ ಸ್ಕೂಟಿ’ ಯನ್ನು ವಿಶ್ವದ ಅತ್ಯಂತ ದೊಡ್ಡ ನಕ್ಷತ್ರವೆಂದು ಗುರುತಿಸಿದ್ದಾರೆ. ಈ ಒಂದು ಬೃಹತ್ ತಾರೆಯಲ್ಲಿ ಸುಮಾರು ಐದು ಬಿಲಿಯನ್ಗೂದ ಅಧಿಕ ಸೂರ್ಯೊರನ್ನು ತುರುಕಬಹುದಂತೆ, ಸೂರ್ಯನೆಂಬುದು ಬಟಾಣಿ ಕಾಳೆಂದುಕೊಂಡರೆ, ಈ ಸ್ಕೂಟಿಯೆಂಬುದು ಫುಟ್ಬಾುಲ್ ಗಾತ್ರ!

ಈ ಎಲ್ಲ ಗಣಿತ-ಅಗಣಿತಗಳನ್ನು ಪಕ್ಕಕಿಟ್ಟು ನೋಡಲಾಗಿ, ಇಂಥ ನಕ್ಷತ್ರಗಳೂ ಉರಿದುರಿದು ಸವೆಯುತ್ತವೆ ಮತ್ತು ಸಾಯುತ್ತವೆ ಎಂಬುದು ವಿಶ್ವಾತ್ಮಕ ವಾಸ್ತವ! ನಮ್ಮ ಸೂರ್ಯ ನೂ ಹಾಗೇ ಒಂದು ದಿನ ಸಾಯುವವನೇ! ಅದಕೂ ಮುಂಚೆಯೇ ನಾವಿರುವ ಈ ಭೂಮಿ ಸತ್ತಿರಬಹುದು ಅಥವಾ ಸೂರ್ಯಮನನ್ನು ನಂಬಿ ಬದುಕುತಿರುವ ಸಕಲ ಜೀವರಾಶಿಗಳೂ ಆಗ ಸಾಯಬಹುದು. ಒಟ್ಟಾರೆ ಜನನ ಮತ್ತು ಮರಣಗಳು ಪರಸ್ಪರ ಪೂರಕ; ಒಂದಿಲ್ಲದೆ ಇನ್ನೊಂದಿಲ್ಲ; ಹುಟ್ಟಿಗೆ ಸಾವು ಉಚಿತ ಮತ್ತು ಖಚಿತ! ಮತ್ತೊಂದು ಜನ್ಮದ ಕಲ್ಪನೆ, ಜನನ ಮರಣಗಳ ನಿರಂತರ ಚಕ್ರ, ಋತುಗಳ ಮತ್ತು ಸಂವತ್ಸರಗಳ ಪುನರಾವರ್ತನೆ, ನಾಲ್ಕು ಯುಗಗಳಾದ ಸತ್ಯ, ಕೃತ, ದ್ವಾಪರ ಮತ್ತು ಕಲಿಗಳು ಸೇರಿ ಆದ ಒಂದು ಮಹಾಯುಗ. ಇಂಥ ನೂರು ಮಹಾಯುಗಗಳು ಸೇರಿದರೆ ಅದು ಬ್ರಹ್ಮನ ಒಂದು ದಿವಸ! ಹೀಗೆ ಕಾಲಗಣನೆಯು ಮುಂದುವರಿಯುತ್ತದೆ! ಇಲ್ಲೆಲ್ಲಾ ನಾವು ಗಮನಿಸುವುದು ಕಾಲಯಾನವನ್ನು. ಇಂಥ ಯಾನದಲ್ಲಿ ಎದ್ದು ಕಾಣುವುದೇ ಕಳೆದು ಹೋಗುವಿಕೆ! ಕಳೆಯುವುದು ಎಂದರೆ ಇನ್ನಿಲ್ಲವಾಗುವುದು ಮಾತ್ರವಲ್ಲ; ಬೇರೊಂದು ರೂಪದಲ್ಲಿ ಕಾಣಿಸುವುದು ಎಂದೇ. ಹಾಗಾಗಿಯೇ ‘ರೂಪಾಂತರ’ ಎಂಬ ಪದವನ್ನು ಬಳಸುತ್ತೇವೆ.

ಈ ವಿಶ್ವದಲ್ಲಾಗಲೀ, ಈ ವಿಶ್ವದ ಒಂದು ಭಾಗವಾದ ನಮ್ಮ ಭೂಮಿಯಲ್ಲಾಗಲೀ ‘ಹೊಸತು’ ಎಂಬುದು ಯಾವುದೂ ಇಲ್ಲ. ಹಾಗೆಯೇ ‘ಹಳತು’ ಎಂಬುದೂ ಇಲ್ಲ! ಇರುವುದೊಂದೇ ರೂಪಾಂತರ. ಮೂಲವಸ್ತುವು ಸತತವಾಗಿ ರೂಪಾಂತರ ಹೊಂದುವುದೇ ಸೃಷ್ಟಿಪ್ರಕ್ರಿಯೆ. ನದಿಗೆ ಬಂದ ಹೊಸನೀರು ನಮ್ಮ ಪಾಲಿಗೆ ಮಾತ್ರ ಹೊಸತು! ಸೃಷ್ಟಿಯಲ್ಲಿ ಅದು ಹಳತು. ಆದಿಮಹಾಕವಿ ಪಂಪನು ಕವಿತ್ವವನ್ನು ವರ್ಣಿಸುವಾಗ ‘ಇದು ನಿಚ್ಚಂಪೊಸತು, ಅರ್ಣವಂಬೋಲ್….’ ಎನ್ನುತ್ತಾನೆ. ಅಂದರೆ ಸಮುದ್ರವು ಅತಿ ಹಳೆಯದೂ ಹೌದು; ನಿತ್ಯವೂ ಹೊಸ ನೀರು ಬಂದು ಸೇರುವುದರಿಂದ ಅದು ಹೊಸತೂ ಹೌದು!

ಭುವಿಯಲ್ಲಿರುವ ಎಲ್ಲ ರೀತಿಯ ನೀರು ಆವಿಯಾಗಿ, ಘನೀಭವಿಸಿ, ಮೇಘವಾಗಿ, ಗರ್ಜಿಸಿ, ಮಳೆಯಾಗಿ ಬಂದಾಗ ನಮಗದು ಹೊಸ ನೀರು. ಇಲ್ಲೆಲ್ಲಾ ಆಗುತ್ತಿರುವುದು ರೂಪಾಂತರವಲ್ಲದೇ ಮತ್ತೇನಲ್ಲ! ಇದಕಾಗಿಯೇ ರೂಪಾಂತರಗೊಳ್ಳುವ ಸಂದರ್ಭದಲ್ಲಿ ನಾವು ಕಳೆದು ಹೋಗುತ್ತೇವೆ ಅರ್ಥಾತ್ ಸಾಯುತ್ತೇವೆ. ಸಾವು ಎಂಬುದು ನಿಜವಾದ ಅರ್ಥದಲ್ಲಿ ರೂಪಾಂತರ ಪ್ರಕ್ರಿಯೆಯ ಒಂದು ನಮೂನೆಯಷ್ಟೇ. ಜನನ ಮತ್ತು ಮರಣಗಳು ಇಂಥ ರೂಪಾಂತರದ ಎರಡು ಬಿಂದುಗಳು. ಈ ಎರಡು ಬಿಂದುಗಳು ಯಾವುದೋ ಗೆರೆಯಲ್ಲಿರುವ ಎರಡು ತುದಿಗಳಂತಲ್ಲ; ಒಂದು ಸರಳರೇಖೆಯು ವೃತ್ತವಾಗಿ ಪರಸ್ಪರ ಸೇರಿ ಹೋಗಿರುವ ಕಣ್-ಮರೆ. ವೃತ್ತದಲೊಂದು ಸರಳರೇಖೆ ಇದೆ, ಆದರೆ ಅದು ನೇರವಾಗಿಲ್ಲ; ವೃತ್ತವಾಗಿದೆ. ಅದರ ಎರಡು ತುದಿಗಳು ಒಂದರೊಳಗೊಂದು ಪ್ರತ್ಯೇಕಿಸಲು ಬಾರದಷ್ಟು ಬೆರೆತು ಹೋಗಿವೆ. ಇದು ಫಿಲಾಸಫಿ.

ಹುಟ್ಟಿದ ಮೇಲೆ ಸಾಯುವ ತನಕ ಇರುವುದೇ ಜೀವನ, ಈ ಜೀವನದಲ್ಲಿ ಎರಡು ರೀತಿ ಕಳೆದು ಹೋಗುತ್ತೇವೆ. ಸತ್ತ ಮೇಲೆ ಮತ್ತೆ ಹುಟ್ಟುವ ಮೂಲಕ. ಮತ್ತೊಂದು ರೀತಿಯಲ್ಲಿ ಕಳೆದು ಹೋಗುವುದು ಎಂದರೆ, ನಾವು ಬದುಕಿರುವಾಗಲೇ!

ಕೆಲವರಿರುತ್ತಾರೆ: ‘ಅನ್ನಕ್ಕೆ ದಂಡ; ಭೂಮಿಗೆ ಭಾರ’ ಎಂಬಂತೆ. ‘ಮನೆಗೆ ಮಗನಲ್ಲ; ಮಸಣಕ್ಕೆ ಹೆಣವಲ್ಲ’ ಎಂಬ ಗಾದೆಯಂತೆ! ಸ್ಮಶಾನಕ್ಕೆ ಒಂದು ಒಳ್ಳೆಯ ಹೆಣವಾದರೂ ಆಗಬೇಕಂತೆ! ಅಂದರೆ ಶವವನ್ನು ಕಂಡು ಎಂಥ ಸಾವು, ಎಂಥವರು ಹೋಗಿಬಿಟ್ಟರಲ್ಲಾ! ಎಂದು ಮಂದಿ ಪೇಚಾಡಿಕೊಳ್ಳಬೇಕಂತೆ. ಅದರ ಬದಲು ಸದ್ಯ, ಈಗಲಾದರೂ ಸತ್ತನಲ್ಲ! ಎಂದು ನಿಟ್ಟುಸಿರು ಬಿಡುವಂತೆ ಬದುಕಿರಬಾರದು. ಹೀಗೆ ಭೂಮಿಗೆ ಭಾರವಾದವರು ಸ್ಮಶಾನಕ್ಕೆ ಒಳ್ಳೆಯ ಹೆಣವೂ ಆಗಲಾರರು. ಮನುಷ್ಯ ಜೀವನದ ಘನತೆ ಮತ್ತು ಮಮತೆಗಳನ್ನು ಅರಿಯದೆ ಕತ್ತಲಲ್ಲಿ ತೆವಳುತ್ತ ಬದುಕಿದವರು ಹಾಗೂ ಹೇಗೋ ಬದುಕಿ, ಹೇಗೋ ಸಾಯುವವರು. ಇವರೂ ಕಾಲನ ಕಾಲಿನಡಿಯಲ್ಲಿ ಸಿಕ್ಕಿಕೊಂಡು ನಜ್ಜುಗುಜ್ಜಾಗಿ ಕಳೆದು ಹೋಗುವವರೇ. ‘ಸತ್ತಂತಿಹರನು ಬಡಿದೆಚ್ಚರಿಸು’ ಎಂದು ಕವಿ ಕನಿಕರಿಸಿದ್ದು ಇಂಥವರನ್ನು ನೋಡಿಯೇ. ಇದೊಂದು ನಕಾರಾತ್ಮಕ ಕಳೆದು ಹೋಗುವಿಕೆ.

ಆದರೆ ಇನ್ನೊಂದು ರೀತಿಯಲ್ಲಿ ನಾವು ಕಳೆದು ಹೋಗುತ್ತಿರುತ್ತೇವೆ. ನಮ್ಮನ್ನು ನಾವು ಮರೆತು ಬದುಕುತ್ತಿರುತ್ತೇವೆ. ಅಂಥ ಸಂದರ್ಭಗಳಲ್ಲಿ ಸಮಯ ಸರಿದದ್ದೇ ಗೊತ್ತಾಗುವುದಿಲ್ಲ! ಪ್ರೇಮಿಗಳು ಹೇಳುವಂತೆ, ಯುಗವೊಂದು ಕ್ಷಣವಾಗಿ, ಆನಂದಮಯವಾಗಿ ಮೈ ಮನಗಳು ಚೇತೋಹಾರಿಯಾಗಿರುತ್ತವೆ. ಜೀವ ಧನ್ಯ; ಜೀವನ ಮಾನ್ಯ ಎಂಬ ಸಾರ್ಥಕ್ಯ ಸುಳಿದಾಡಿ, ನರನಾಡಿಗಳಲ್ಲಿ ನಿರಾಳತೆ ಪ್ರವಹಿಸಿ, ಸುಖದ ಚರಮಸೀಮೆಯನ್ನು ದರ್ಶಿಸುತ್ತೇವೆ. ಈ ರಸೋಲ್ಲಾಸ ಅಥವಾ ರಸೋತ್ಕರ್ಷವನ್ನು ನಾವು ನಂನಮ್ಮ ಅರ್ಹತೆ ಮತ್ತು ಯೋಗ್ಯತಾನುಸಾರ ಯಾವುದರಲ್ಲಾದರೂ ಕಂಡುಕೊಳ್ಳಬಹುದು. ಅದು ತತ್ಕಾಲದ ಸುಖಾಕರ್ಷಣೆಯಾದ ಲೈಂಗಿಕತೆಯೇ ಇರಬಹುದು; ದೈವವನ್ನು ಆರಾಧಿಸಿ, ತನ್ನನೇ ಸಮರ್ಪಿಸಿಕೊಳ್ಳುವ ಮಧುರ ಭಕ್ತಿಯೇ ಇರಬಹುದು. ವಿಶ್ವದ ರಹಸ್ಯವನ್ನು ಅರಿಯುವ ತವಕದಿಂದ ಹಲವು ಮಾರ್ಗಗಳನರಿತು, ತಪವನಾಚರಿಸುವ ಸತ್ಯಾನ್ವೇಷಣೆಯೇ ಇರಬಹುದು. ಮನುಕುಲವನ್ನು ಅದಕ್ಕಂಟಿರುವ ಶಾಪಗಳಿಂದ ವಿಮುಕ್ತಿಗೊಳಿಸಲು ಸತತ ಹೋರಾಡಿ, ಜಾಗೃತಿ ಮೂಡಿಸಿ, ನ್ಯಾಯವನ್ನು ದೊರಕಿಸಿ ಕೊಡುವ ನಿಟ್ಟಿನಲ್ಲಿ ತನ್ನ ಜೀವನವನ್ನೇ ಮುಡುಪಾಗಿಟ್ಟ ಸಮಾಜ ಸುಧಾರಕರೂ ಹರಿಕಾರರೂ ಆಗಿರಬಹುದು. ತನ್ನೆಲ್ಲ ಕುಟುಂಬದ ಅಕ್ಕರೆಯನ್ನು ಪಕ್ಕಕ್ಕಿಟ್ಟು ತನ್ನ ಸ್ವಂತದೆಲ್ಲವನ್ನೂ ನಗಣ್ಯವಾಗಿಸಿ, ಪ್ರಯೋಗಾಲಯಗಳಲ್ಲಿ ಅಹರ್ನಿಶಿ, ಅವಿರತ ಬದುಕಿ, ಕಾಡುವ ಜಾಡ್ಯಗಳಿಂದ ಮುಕ್ತಿಗೊಳಿಸುವ ಔಷಧೋಪಚಾರಗಳನ್ನು ಕಂಡುಕೊಡುವ ವಿಜ್ಞಾನಿಗಳೇ ಇರಬಹುದು. ತನಗೆ ದೊರಕಿದ ಹುದ್ದೆ ಮತ್ತು ಅಧಿಕಾರಗಳನ್ನು ಜನಸೇವೆಗಾಗಿ ಮುಡುಪಾಗಿಟ್ಟು, ನೀತಿ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಾ ನಾಲ್ಕು ಜನಕ್ಕೆ ಬೇಕಾಗುವ ಸಾರ್ಥಕ ಸೇವೆಯನ್ನು ಜೀವಿತಾವಧಿ ನಡೆಸಿಕೊಂಡು ಬಂದಿರುವ ಮಹಾ ಮಹಿಮರೇ ಇರಬಹುದು. ತನ್ನ ಪಾಡಿಗೆ ತಾನು ನಿಸರ್ಗದ ನೇಹಿಗನಾಗಿ, ಭಗವಂತನನ್ನು ನಂಬಿ, ಉಳುಮೆ ಮಾಡುತ್ತಾ ‘ಲೋಕದೊಳೇನೇ ನಡೆಯುತಲಿರಲಿ ತನ್ನೀ ಕಾರ್ಯೆವ ಬಿಡದೆ’ ಹಸಿವನ್ನು ತಣಿಸುವ ಶ್ರೇಷ್ಠ ಕಾಯಕದಲಿ ತೊಡಗಿರುವ ಅನ್ನದಾತನೇ ಇರಬಹುದು. ದೇಶವಾಸಿಗಳ ಸುಖನಿದ್ರೆಗೆ ಅನುಕ್ಷಣ-ಅನುದಿನ ಭಂಗ ಬಾರದ ಹಾಗೆ ದೇಶದ ಗಡಿಗಳಲ್ಲಿದ್ದು, ತಾಯಿಯಂತೆ ಕಾಪಾಡುತಿರುವ ವೀರ ಸೈನಿಕನೇ ಇರಬಹುದು! ನಮಗಿಷ್ಟವಾದವರೊಡನೆ ಹೊಂದುವ ಸಾಹಚರ್ಯೆ ಮತ್ತು ನಮಗಿಷ್ಟವಾದುದರೊಂದಿಗಿನ ಒಡನಾಟಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಆಗೆಲ್ಲಾ ಸಮಯ ಸರಿದದ್ದೇ ಗೊತ್ತಾಗುವುದಿಲ್ಲ. ಇಲ್ಲೆಲ್ಲ ‘ನಾನು’ ಎಂಬುದು ಕಳೆದು ಹೋಗಿರುವುದೇ ಇದಕ್ಕೆ ಕಾರಣ; ಅಂಥಲ್ಲಿ ಅಹಮಿನ ಮರಣ! ಅಂಥ ಕಂಡುಕೊಳ್ಳುವಿಕೆಯನ್ನು ನಾನು ಬದುಕಿನ ಪರಮ ಗಂತವ್ಯ ಎಂದು ಭಾವಿಸುವೆ.

-ಡಾ. ಹೆಚ್ಚೆನ್ ಮಂಜುರಾಜ್


ಮುಂದುವರೆಯುವುದು…

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
ಲಕ್ಷ್ಮಿ ಗೋಪಾಲಕೃಷ್ಣ
ಲಕ್ಷ್ಮಿ ಗೋಪಾಲಕೃಷ್ಣ
3 years ago

ಒಂದು ಹೆಣ್ಣು ತನ್ನದ್ದಲ್ಲದ ಮನೆಗೆ ಹೋಗಿ ನಂತರ ತನ್ನದಾಗಿಸಿ ಕೊಂಡು ಕೊನೆಗೆ ತನ್ನ ತವರನ್ನೇ ಮರೆಯುವ ಅಥವಾ ಮರೆಸುವ ಗಂಡನ ಮನೆಯವರನ್ನು ತನ್ನವರನ್ನಾಗಿಸಿಕೊಂಡು ಜೀವನವಿಡೀ ಜವಾಬ್ದಾರಿ ಹೊರುವ ಕಣ್ಣು.
ಈ ನಿಟ್ಟಿನಲ್ಲಿ ಈ ಹೆಣ್ಣು ಕಾಲದ ಆವರಣದಲ್ಲಿ ಕಳೆದುಹೋಗಿರುತ್ತಾಳೆ.
ಲೇಖಕರ ಲೇಖನಿಯಿಂದ ಕಳೆದು ಹೋಗುವ ಪಟ್ಟಿ ಓದುತ್ತಿದ್ದಾಗ ನನಗೆ ಹೊಳೆದ ಒಂದು ನಾನು ಕಳೆದು ಹೋದ ಅನುಭವ ಹೀಗೊಮ್ಮೆ ಬಂತು.
ಲೇಖನ ಸುಂದರವಾಗಿ ಓದಿಸಿಕೊಂಡು ಹೋಗುತ್ತದೆ. ಎರಡನೇ ಭಾಗ ಓದುವ ತವಕವಿದೆ.👌👍ಲಕ್ಷ್ಮಿ ಗೋಪಾಲಕೃಷ್ಣ.
ಮೈಸೂರು.

Manjuraj H N
Manjuraj H N
3 years ago

ಧನ್ಯವಾದಗಳು…..

3
0
Would love your thoughts, please comment.x
()
x