ಹಳೆಯ ಸಿನೆಮಾಗಳಲ್ಲಿ ನಾವು ನೋಡುತ್ತಿದ್ದೆವು. ಬಾಲ್ಯದಲ್ಲಿ ತಂದೆ ತಾಯಿಯೊಂದಿಗಿರುವ ಮಕ್ಕಳು ಜಾತ್ರೆಯಲ್ಲೋ, ಭಯಂಕರ ಗಿಜಿಗುಡುತ್ತಿರುವ ರೈಲಿನ ಭೊಗಿಯಲ್ಲೋ, ಗಲಭೆಯಲ್ಲೋ … ಆಟಿಕೆ ಆಡುತ್ತಾ, ಐಸ್ ಕ್ರೀಮ್ ತರಲು ಹೋಗಿಯೋ , ಆಗುವ ಅನಾಹುತದಿಂದ ತಪ್ಪಿಸಿಕೊಳ್ಳಲು ಅವಸರವಸರ ವಾಗಿ ಓಡಿ ಹೋಗುವ ಭರಾಟೆಯಲ್ಲೋ ಮಕ್ಕಳ ಪುಟ್ಟ ಪುಟ್ಟ ಕೈಗಳನ್ನು ಭಧ್ರತೆ ಫೀಲ್ ಕೊಟ್ಟು ಹಿಡಿದಿಟ್ಟುಕೊಂಡ ತಂದೆ ತಾಯಿಯು ಅದಾವ ಮಾಯೆಯಲ್ಲೋ ಕೈ ಬಿಟ್ಟು ತಂದೆ ತಾಯಿ ಅವರನ್ನು "ಕಳೆದುಕೊಂಡು" ಮಕ್ಕಳನ್ನು ಹುಡುಕುತ್ತಾರೆ, ಮಕ್ಕಳು ಅಳುತ್ತಾ ಅತ್ತಿತ್ತ ಸಾಗುತ್ತಿರುತ್ತಾರೆ.
ಮಾನವ ಸಹಜ ಕಳಕಳಿಯ ಅಪರಿಚಿತರು ಯಾರೋ ಆ ಮಕ್ಕಳನ್ನು ಕುಳ್ಳಿರಿಸಿಕೊಂಡು ಸಾಧ್ಯ ವಾದಷ್ಟು ಸಮಾಧಾನಿಸುತ್ತಲೇ ಅವರ ಪಾಲಕರನ್ನು ಹುಡುಕುತ್ತಾರೆ. ಕೊನೆಗೂ ಪಾಲಕರನ್ನು ಹುಡುಕುವಲ್ಲಿ ಸಫಲರಾಗುತ್ತಾರೆ. ಮಕ್ಕಳು ಕಳೆದು ಕೆಲ ಘಂಟೆಗಳವರೆಗಿನ ಮಕ್ಕಳ ಮುಖದಲ್ಲಿ ಕಾಣುವ ದಿಗಿಲು ಭಯ, ಪೋಷಕರು ಸಿಕ್ಕೊಡನೆ ಆಗುವ ಸಂತೋಷ, ತಪ್ಪಿಸಿಕೊಂಡ ಕರ್ಮಕ್ಕೆ ಎಲ್ಲಿ ಒದೆ ಬೀಳುತ್ತವೋ ಎಂಬ ಸಂದೇಹ, ಹುಡುಕಿ ತಂದ ಅಪರಿಚಿತರು ಮಕ್ಕಳನ್ನೂ, ಪೋಷಕರನ್ನೂ ಸಮಾಧಾನಿಸಿರುತ್ತಾರೆ. ಪಾಲಕರು ಹುಡುಕಿದ, ತಲುಪಿಸಿದ ಅಪರಿಚಿತರಿಗೆ "ತುಂಬಾ ಉಪಕಾರ ವಾಯ್ತು ತಮ್ಮಿಂದ" ಎನ್ನುತ್ತಲೋ ಅಥವಾ ಏನು ಹೇಳಲಾಗದೇ ಕೈ ಮುಗಿದು ಧನ್ಯತೆ ವ್ಯಕ್ತಪಡಿಸು ವುದು….. ಹೀಗೆ ಸಾಗುತ್ತದೆ. ಇದು ಕಳೆದು ಹೋಗಿ ಮತ್ತೆ ಸಿಕ್ಕ ಹೊತ್ತಿನ ಮಾತಾಯಿತು. ಸಿಗ ದಿದ್ದರೆ? ಆ ಮಕ್ಕಳು ದೊಡ್ಡವರಾಗಿ ಬೆಳೆದು ಕೊನೆಗೊಮ್ಮೆ ಸಿಕ್ಕು ಸಂತೋಷವೋ, ಸೆಂಟಿಮೆಂಟೋ ಒಟ್ಟಿನಲ್ಲಿ ಪರದೆಗೆ ತೆರೆ.
ನಿಜವಾಗಿ ನಾವು ದಿನನಿತ್ಯ ಬಿತ್ತಿ ಪತ್ರಗಳನ್ನು"ಕಾಣೆಯಾಗಿದ್ದಾರೆ" ಬರಹದೊಂದಿಗೆ ಅಲ್ಲಲ್ಲಿ ಅಂಟಿಸಿರು ವುದನ್ನು, ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲೂ ಕಾಣುತ್ತೇವೆ. ಕಾಣೆಯಾದವರಲ್ಲಿ ಕೆಲ ಮಕ್ಕಳು, ವಯಸ್ಕರು, ವೃದ್ಧರು, ಹೆಂಗಸರು ಪ್ರಾಯದ ಹುಡುಗಿಯರು ಇರುತ್ತಾರೆ. ಅದರಲ್ಲೂ ಕೆಲವರು ಬುದ್ಧಿಮಾಂಧ್ಯ, ಮೂಗರು, ಕಿವುಡರು. ಹೀಗಿದ್ದಾಗಂತೂ ಅವರು ಗೊತ್ತಿಲ್ಲದವರಿಗೆ ಸಿಕ್ಕರೂ ಅವರಿಂದ ಏನೊಂದು ಮಾಹಿತಿ ಲಭ್ಯವಾಗುವುದೇ ಇಲ್ಲ. ಆದರೆ, ಕಳೆದುಕೊಂಡವರ ಆತಂಕ, ಹುಡುಕಾಟ ಕಳೆದು ಹೋದ ಕ್ಷಣದಿಂದ ಸಿಕ್ಕುವ ಸಮಯದವರೆಗೆ ಅನುಭವಿಸುವ, ಹಳಹಳಿಸುವ ಆ ಪರಿಸ್ಥಿತಿ ಇದೆಯಲ್ಲಾ? ಅದನ್ನು ನಾವು "ಸಾಮಾನ್ಯವಾಗಿ" ದಾರಿಹೋಕರಾಗಿ ಮಾತ್ರ ನೋಡಿರುತ್ತೇವೆಯೇ ಹೊರತು ಕಳೆದುಕೊಂಡವರಾಗಿ ಅಲ್ಲ.
ನಮ್ಮ ಕುಟುಂಬದ ಚಿಕ್ಕ ವಯಸ್ಸಿನಲ್ಲಿ "ಕಳೆದು ಹೋಗುವ", ಹುಡುಕುವ ವಿಶೇಷ ಕಾರ್ಯಾಚರಣೆ ಕುಟುಕುಗಳು, ಮತ್ತೆ ಸಿಕ್ಕ ಸಂತೋಷಗಳು ಇಲ್ಲಿವೆ. ಒಂದಷ್ಟು ಸಂಕ್ಷಿಪ್ತವಾಗಿ ಹೇಳುತ್ತೇನೆ. ಅದು ನಮ್ಮ ಅಪ್ಪನಿಂದ ಇದ್ದಿದ್ದಿರ ಬಗ್ಗೆ ಗೊತ್ತಿಲ್ಲವಾದರೂ ನಾನು, ನನ್ನ ಇಬ್ಬರೂ ಮಕ್ಕಳು "ಕಳೆದು ಹೋದ"ವರ ಸಾಲಿಗೆ ಹಾಗೂ ಪುನಃ ಸಿಕ್ಕೂ ಸಂತೋಷಪಟ್ಟವರ ಕಾಮೆಂಟುಗಳಿಗೆ ಭಾಜನರು. ನನ್ನ ಚಿಕ್ಕ ವಯಸ್ಸಿನಲ್ಲಿ ಎದುರು ಮನೆಯ ಹೆಂಗಸೊಬ್ಬಳು ನಶ್ಯ ಪುಡಿ ತರಲು ನಾಲ್ಕಾಣೆ ಕೊಟ್ಟರೆ, ಜೊತೆಗಿದ್ದ ಅಕ್ಕನನ್ನು ಕರೆದುಕೊಂಡು ಅಂಗಡಿಗೆ ಹೋಗುವ ದಾರಿ ಮಧ್ಯೆ ಒದರುತ್ತಾ ಡಬ್ಬಿವಾಲಾನು ಮಾರುತ್ತಿದ್ದ ಕಡ್ಡಿ ಐಸ್ ತಿಂದ ನಂತರ ನಶ್ಯ ಪುಡಿ ನೆನಪಾಗಿ ಒದ್ದಾರೆಂದು ಹೆದರಿ ಸಿಕ್ಕ ಸಿಕ್ಕ ದಾರಿ ಹಿಡಿದು ಬರಿಗಾಲಲ್ಲಿ, ಸುಡು ಬಿಸಿಲಲ್ಲಿ ಅಲೆದಲೆದು ಕಡೆಗೆ ಅಪ್ಪನ ಅಂಗಡಿ ದಾರಿ ಪತ್ತೆ ಹಚ್ಚಿ ಹೋದೆವು. ದುರದೃಷ್ಟಕ್ಕೆ ಅಂಗಡಿಯಲ್ಲೂ ಅಪ್ಪನಿರದಿದ್ದದ್ದನ್ನು ಕಂಡು ಮತ್ತೆ ಕೆಟ್ಟ ಬಿಸಿಲಲ್ಲಿ ಮನೆ ದಾರಿ ಹಿಡಿದು ಮನೆ ಸೇರಿದ್ದೆವು. ಐಸ್ ತಿಂದು ತಪ್ಪಿಸಿಕೊಂಡಿದ್ದು ಮಧ್ಯಾನ್ಹ ಹನ್ನೆರಡು ಗಂಟೆಗೆ ಮತ್ತೆ ಮನೆಗೆ ವಾಪಾಸ್ಸು ಬಂದದ್ದು ನಾಲ್ಕಕ್ಕೆ. ಅಷ್ಟರೊಳಗೆ ಓಣಿ ಜನರೊಟ್ಟಿಗೆ ತಿರುಗಿ ತಿರುಗಿ ಹುಡುಕಿ ಹೈರಾಣಾಗಿದ್ದರು, ಅಜ್ಜಿ, ಅವ್ವ ಮತ್ತು ಅಪ್ಪ. ನನಗಾಗ ಬಹುಶಃ ಮೂರು ವರ್ಷ, ಅಕ್ಕನಿಗೆ ನಾಲ್ಕೂವರೆ ವರ್ಷ…
ಅದಾಗಿ ಎಷ್ಟೋ ವರ್ಷಗಳ ನಂತರ ನೌಕರಿಯಲ್ಲಿ ನನಗೆ ಬಳ್ಳಾರಿಯಿಂದ ವರ್ಗಾವಣೆ ಆದ ನಂತರ ಅದೇ ಮೊದಲ ಬಾರಿಗೆ ಎಲ್ಲರನ್ನೂ ಬಿಜಾಪುರಕ್ಕೆ ಬಸ್ಸಲ್ಲಿ ಕರೆದೊಯ್ದೆ. ಮುಂದೆ ಲಾರಿಯಲ್ಲಿ ಸಾಮಾನುಗಳನ್ನು ಹೇರಿಕೊಂಡು ಹೋಗಿ ಇಳಿಸಿದ್ದ ಬಾಡಿಗೆ ಮನೆಯಲ್ಲಿ ಮೊದಲ ದಿನದ ರಾತ್ರಿ ಸಾಮಾನು ಇಳಿಸಿ ಬೆಳಕು ಹರಿದು ಎಂಟು ಗಂಟೆಯಾಗಿಲ್ಲ, ನನ್ನ ದೊಡ್ಡ ಮಗ ಸಮರ್ಥ ಅಕ್ಕಪಕ್ಕದ ಹುಡುಗರೊಂದಿಗೆ ಚಾಕುಲೇಟ್ ಕೊಳ್ಳಲು ಹೋಗಿ ಹುಡುಗರು ಇವನಿಗೆ ಕೊಡದೇ ಇದ್ದುದರಿಂದ ಮುಖ ಸಿಂಡರಿಸಿಕೊಂಡು ಸಿಕ್ಕ ದಾರಿಗುಂಟ ನಡೆದು "ಕಳೆದುಹೋದ". ಸಾಮಾನು ಜೋಡಿಸುವ ಭರದಲ್ಲಿ ಇದ್ದ ನಮಗೆ, ಎಷ್ಟೋ ಹೊತ್ತಿನ ನಂತರ ಗೊತ್ತಾಗಿ ಇವನ ಹುಡುಕಾಟಕ್ಕೆ ಅಕ್ಕಪಕ್ಕದವರೂ, ನಮ್ಮೂರಿನವರಾದ ಬ್ಯಾಂಕ್ ಉದ್ಯೋಗಿಯಾಗಿದ್ದ ಶ್ರೀ. ಗಣೇಶ್ ರಾವ್ ಹವಾಲ್ದಾರ್, ಈ ಹಿಂದಿನ ನಮ್ಮ ಬಿಜಾಪುರ ವೇದಿಕೆಯ ನ್ಯಾಯಾಧೀಶರಾಗಿದ್ದ ಶ್ರೀ ಎನ್.] ಎಸ್. ಪಾಟೀಲ್ ಬಂದರು. ಫೋಟೋ ಹಿಡಿದು ಕೇಳುವುದು, ಓಡುವುದು, ನನ್ನ ಸ್ಮಾರ್ಟ್ ಎಕ್ಸ್ ಪ್ರೆಸ್ ಸ್ಕೂಟರ್ ನಲ್ಲೇ ಮುಂದೆ ಯಾವಾಗಲೋ ನೋಡಬಹುದಾಗಿದ್ದ ಬಿಜಾಪುರದ ಕೆಲ ಭಾಗವನ್ನು ಮಗನ ಹುಡುಕಾಟದಲ್ಲೇ ನೋಡುವಂತಾಯಿತು. ಕಡೆಗೆ ಚಾಕುಲೇಟ್ ತರಲು ಹೋಗಿದ್ದ ಅಂಗಡಿಯ ಮಾಲಿಕನೇ ನಾನು ಕೊಟ್ಟ ಫೋಟೋ ತೆಗೆದು ಕೊಂಡು ಹೋಗಿ ಪತ್ತೆ ಮಾಡಿಕೊಂಡು ಕರೆದರೆ, ಈ ನನ್ನ ಮಗ ಆತನಿಗೆ ಕೇಳಿದ್ದನಂತೆ; "ಹೌದು, ನೀನು ನನ್ನಪ್ಪಾಜಿ ಹತ್ರಾನೇ ಕರ್ಕೊಂಡು ಹೋಗ್ತೀಯಾ ಅಂತ ಏನ್ ಗ್ಯಾರಂಟಿ ?" ಆಗ ಅವನಿಗೆ ನಾಲ್ಕು ವರ್ಷ …
ಕಳೆದ ವರ್ಷ ನನ್ನ ಎರಡನೇ ಮಗ ಅಭಿ, ಅಭ್ಯುದಯ ಕೊನೆ ಬಾರಿಗೆ ಕಳೆದು ಹೋದ ದಿನದವರೆಗೆ "ಕಳೆದು ಹೋಗುವ" ಮತ್ತೆ ಮತ್ತೆ ಹುಡುಕುವ ವಿಶೇಷ ಕಾರ್ಯಾಚರಣೆಗಳು ನಡೆದೇ ಇದ್ದವು. ಕೊನೆ ಬಾರಿಗೆ ಏಕೆ ಅಂದೆನೆಂದರೆ, ಅವನು ಕಳೆಯುವುದು, ನಾವು ಓಣಿ ಓಣಿ, ರೋಡು, ಮನೆಗಳು ಎಲ್ಲವಲ್ಲಿಯೂ ಹುಡುಕುವುದು, ಅವನಿಗೆ ಒಂದೂವರೆ ಎರಡು ವರ್ಷದ ವಯಸ್ಸಿದ್ದಾಗಿನಿಂದ ನಮಗೆ ವಾರದ ವಿಶೇಷ, ತಿಂಗಳ ವಿಶೇಷ ಒಮ್ಮೊಮ್ಮೆ ಎರಡು ಮೂರು ದಿನದ ವಿಶೇಷವೂ ಆಗಿರುತ್ತಿತ್ತು. ನನ್ನ ಮತ್ತು ನನ್ನ ದೊಡ್ಡ ಮಗ ಸಮರ್ಥನ "ಕಳೆದು ಹೋಗುವ" ಅಪರೂಪದ ಚಾಳಿಯು ಅಭ್ಯುದಯನ ವಿಷಯದಲ್ಲಿ ತಿಂಗಳಿನ ಅಮಾವಾಸ್ಯೆ, ಹುಣ್ಣಿಮೆ, ಷಷ್ಠಿ, ಸಂಕಷ್ಟಿ ಲೆಕ್ಕಕ್ಕೆ ಬದಲಾಗಿದ್ದವು. ಪ್ರತಿ ಬಾರಿ ಕಳೆದು ಹೋದಾಗಲೂ ದಿಗಿಲುಗೊಂಡು ಬೈಕ್ ಏರಿ ಹುಡುಕುವುದು, ಫೋಟೋ ಹಿಡಿದು ತೋರಿಸಿ ಕೇಳುವುದು. ಈಗೊಂದು ವರ್ಷದ ಹಿಂದೆ ನಾನು ಮತ್ತು ನಮ್ಮ ಕುಟುಂಬದವರು ಅಂಥಾದ್ದೇ ಒಂದು ಪರಿಸ್ಥಿತಿ ಎದುರಿಸುವ ಪ್ರಸಂಗ ಬಂದಿತ್ತು.
ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ ವಿಶೇಷವೆಂದರೆ, ಅದೊಂದು ಕುಂಭಮೇಳದಂಥ ಜನ ಜಂಗುಳಿ.
ಆ ದಿನ ಸಂಜೆ ರಥೋತ್ಸವ ನಡೆಯಬೇಕು. ಬೆಳಿಗ್ಗೆಯಿಂದಲೇ ಊರೂರ ಜನರು ತಮ್ಮ ತಮ್ಮ ಅನುಕೂಲದ ಗಾಡಿಗಳನ್ನು ಮಾಡಿಕೊಂಡು ಬಯಲಲ್ಲಿ ಜಮೆಯಾಗುತ್ತಿದ್ದರು.ವಾಹನಗಳ ಸಂಖ್ಯೆಯೇ ಹತ್ತತ್ತಿರ ಸಾವಿರ ಲೆಕ್ಕದಲ್ಲಿರುತ್ತದೆ. ಜಾತ್ರ ಬಯಲ ಪಕ್ಕದ ಮನೆಗಳ ಸಾಲಲ್ಲಿಯೇ ನಮ್ಮ ಬಾಡಿಗೆ ಮನೆ. ನಾನು ಯಥಾ ಪ್ರಕಾರ ಹತ್ತು ಗಂಟೆಗೆ ಕಚೇರಿಗೆ ಬಂದೆ. ಹನ್ನೊಂದು ಗಂಟೆಯ ಸುಮಾರಿಗೆ ಕರೆ ಮಾಡಿ ಅಭಿ "ಕಳೆದು ಹೋದ" ಬಗ್ಗೆ ನನ್ನ ಹೆಂಡತಿ ಹೇಳಿದಳು. "ಅಲ್ಲೇ ಎಲ್ಲೋ ಇರ್ತಾನೆ ಸರಿಯಾಗಿ ಹುಡುಕಿ" ಅಂದೆ. ಅಷ್ಟೊತ್ತಿಗಾಗಲೇ ಅವನು "ಕಳೆದೇ" ಒಂದು ತಾಸಾಗಿದೆ. ಈ ಬಾರಿ ನಮಗೆ ಜಾತ್ರಾ ವಿಶೇಷ ಹುಡುಕಾಟ ಕಾರ್ಯಾಚರಣೆ. ಪಕ್ಕದ ಬಯಲಲ್ಲಿ ಜಾತ್ರಾ ಗದ್ದಲ. ಪೊಲೀಸರು ಅದಾಗಲೇ "ಪತ್ತೆಯಾದ ಅನಾಮಿಕ ವ್ಯಕ್ತಿಗಳು, ಮಕ್ಕಳ, ವಸ್ತುಗಳ ಬಗ್ಗೆ ಮೈಕ್ ನಲ್ಲಿ ಹೇಳುತ್ತಿದ್ದರು. ಅಷ್ಟು ದೊಡ್ಡ ಬಯಲಲ್ಲಿ, ಕೆಟ್ಟ ಬಿಸಿಲಲ್ಲಿ, ಅಸಂಖ್ಯ ಜನಗಳ ಮಧ್ಯೆ ಮಾತು ಬಾರದ ಅಭಿಯನ್ನು ಹುಡುಕುವುದೇ ದುಸ್ತರವಾಗಿತ್ತು. ಪೊಲೀಸರಿಗೆ ಅವನ ಗುರುತು ಪತ್ತೆಗೆ , ಫೋಟೋ, ಮಾಹಿತಿ, ದೂರವಾಣಿ ಸಂಖ್ಯೆ ಕೊಟ್ಟು ಪುನಃ ತಿರುಗು ತಿರುಗು….
ಎಲ್ಲಾ ಸುತ್ತರೆದು ಬಂದರೂ ಎದುರುಗೊಂಡ ಮನೆಯವರ, ಅಕ್ಕಪಕ್ಕದವರ ಮುಖಗಳಲ್ಲಿ "ಪತ್ತೆಯಿಲ್ಲ"ದ ಅಭಿ… ಕೆಟ್ಟ ಬಿಸಿಲು, ಮಾತು ಬಾರದ ಅಭಿಯ ಬಗ್ಗೆ ಗಾಬರಿ, ಮತ್ತು ಪ್ರಶ್ನೆಗಳು; ಏನಾದರೂ ಆದರೆ? ಸಿಗದಿದ್ದರೆ?. ಐದು ನಿಮಿಷ ಕೆಟ್ಟ ಬಿಸಿಲಲ್ಲೇ ಎ.ಪಿ. ಎಮ್. ಸಿ. ಮಾರುಕಟ್ಟೆಯಲ್ಲಿ ನಿಂತುಬಿಟ್ಟೆ. ನಿಧಾನವಾಗಿ ಯೋಚಿಸಿದೆ. ನಾನು ಅಭಿಯನ್ನು ಕರೆದುಕೊಂಡು ಹೋಗುತ್ತಿದ್ದ ಜಾಗ, ಪಾರ್ಕು, ದೇವಸ್ಥಾನ, ಹೋಟೆಲ್ಲುಗಳು, ಗೂಡಂಗಡಿಗಳು ಎಲ್ಲಾ ನೆನೆಸಿಕೊಂಡೆ. ಅವನನ್ನು ಈಗಾಗಲೇ ಹುಡುಕಿ ಬಂದ ಜಾಗಗಳನ್ನು ಹೊರತುಪಡಿಸಿ ಇನ್ನುಳಿದ ಜಾಗಗಳಿಗೆ ಹೊರಟೆ.
ಎಲ್ಲರದೂ ಒಂದೇ ಕಾಳಜಿ, "ನಾವೂ ಹುಡುಕ್ತೀವಿ ಸರ್". ಅಂದರು.ಮನೆಯವರು ಓಣಿಯವರು ಹುಡುಕುತ್ತಲೇ ಇದ್ದರು. ನಾನು ಅವನನ್ನು ಕರೆದುಕೊಂಡು ಹೋಗುತ್ತಿದ್ದ ಎಲ್ಲಾ ಜಾಗಗಳನ್ನು ಹುಡುಕಿ ಕೊನೆಗೆ "ಬೆನಕ ದರ್ಶಿನಿ" ಹೋಟೆಲ್ ಮುಂದೆ ಗಾಡಿ ನಿಲ್ಲಿಸುತ್ತಿದ್ದಂತೆಯೇ ಒಳಗಿನಿಂದಲೇ ಅದರ ಮಾಲೀಕ "ಸಾಆಆಆಆಅರ್ ….. ನಿಮ್ಮುಡ್ಗ ಇಲ್ಲಿದ್ದಾನೆ" ಅಂದ. ಅಭಿ ಅಲ್ಲಿಗೆ ಬಂದು ಕುಳಿತೇ ಎರಡೂವರೆ ತಾಸು ಮೇಲಾಗಿದೆ. ಹೋಟೆಲ್ ನವರಿಗೆ ನನಗೆ ತಿಳಿಸಲು ನನ್ನ ಮುಖ ಪರಿಚಯ ವಿದೆ, ಹೆಸರು ಗೊತ್ತಿಲ್ಲ, ಫೋನ್ ನಂಬರ್ ಗೊತ್ತಿಲ್ಲ. ಅಭಿಯನ್ನು ಇಷ್ಟಪಡುತ್ತಿದ್ದ ಹೋಟೆಲ್ ನವರು ತಿಂಡಿ ತಿನ್ನಿಸಲು ಪ್ರಯತ್ನಿಸಿದ್ದಾರೆ, ಅವನು ತಿಂದಿಲ್ಲ.ಮಾತನಾಡಿಸಿದ್ದಾರೆ, ಇವನು ಮಾತೇ ಆಡುತ್ತಿದ್ದಿಲ್ಲ. ನಾನು ಬಂದಿದ್ದು ನೋಡಿ ಕಾಲಿಗೆ ಬಳ್ಳಿ ತೊಡರಿದಂತೆ ಅಭಿ ಬಂದೆರಗಿದ.. ಮಾತೇ ಬರದೇ ಇದ್ದ ಅಭಿಗೆ ಆಗಿನ ವಯಸ್ಸು ಐದು ವರ್ಷ. ಮತ್ತವನು ಹೈಪೆರ್ ಆಕ್ಟಿವ್ ಆಗಿದ್ದ. ಈಗ ಬಿಡಿ ಮುದ್ದಾಗಿ ಮಾತಾಡುತ್ತಾನೆ. ಮನೆಗೆ ಬಂದ ನಂತರ ನನಗನ್ನಿಸ್ಸಿದ್ದು "BABY'S DAY OUT" ಸಿನೆಮಾ ಮಾದರಿಯಲ್ಲಿ ನಡೆದ "ABHI'S HALF DAY OUT"…..ಸಮಯ ನೋಡಿದೆ, ಬಹುಶಃ ಮಧ್ಯಾನ್ಹ ಒಂದೂವರೆ ಎರಡು ಗಂಟೆ ಆಗಿತ್ತು… ಈ ವಾರ ಕೊಪ್ಪಳದ ಜಾತ್ರೆ ಇದೆ. ಇದೆಲ್ಲಾ ನೆನಪಾಯಿತು..
ಇದೆಲ್ಲ ಎಳೆ ವಯಸ್ಸಿನಲ್ಲಿ ಅರಿವಿರದ, ಯೋಚನೆ ಇರದ ಕಾಲದಲ್ಲಿ ನಾನು, ನನ್ನ ಮಕ್ಕಳು "ಕಳೆದು" ಹೋಗಿ ಮತ್ತೆ ಸಿಕ್ಕು ಈಗ ನೆನೆಸಿಕೊಂಡು ಬರೆದ ಮಾತಾಯಿತು. ನಾನು, ನನ್ನಂತೆ ಇರಬಹುದಾದ, ಇರಲಾದಂಥಹ ಹಲವರು ಈಗಿನ ದಿನಗಳಲ್ಲಿ ಒಂದಿಲ್ಲೊಂದು ಗೋಜಲು , ಚಿಂತೆ, ಬೇಸರ, ವ್ಯಸನ, ದೌರ್ಬಲ್ಯ, ಹಪಾಹಪಿಯಲ್ಲಿ "ಕಳೆದು ಹೋಗು" ತ್ತಲೇ ಇರುತ್ತೇವೆ. ನಮಗದು ಗೊತ್ತೂ ಇರುತ್ತದೆ. ಮತ್ತೆ ಮತ್ತೆ ನಾವು ಅವುಗಳಿಂದ ಹೊರಬರಲಾರದೇ ಅಥವಾ ಹೊರಬರಲು ಇಚ್ಚಿಸದೇ ಅವುಗಳಲ್ಲೇ ನಮ್ಮತನವನ್ನು "ಕಳೆದು ಕೊಳ್ಳುತ್ತೇವೆ". ಯಾರೂ ಹುಡುಕುವ ಪ್ರಯತ್ನದ ಅವಶ್ಯವಿರದಿದ್ದರೂ ಸುಮ್ಮನೆ ಕುಳಿತು ಪ್ರಶಾಂತವಾಗಿ ಯೋಚಿಸಿ, ನಮ್ಮಲ್ಲೇ ನಮ್ಮನ್ನು ನಾವು ಹುಡುಕಿ ಸಣ್ಣ ಸಂತೋಷ ದಿಂದ ಹಿಡಿದು ದೊಡ್ಡ ಕುತೂಹಲದವರೆಗೆ, ಎಳೆ ಬಿಸಿಲ ಕಾಯುವ ಚಿಗುರಿನಿಂದ ಹಿಡಿದು ಸುಲಭಕ್ಕೆ ಸಿಕ್ಕದ ಆಳದ ಬೇರಿನಂತೆ ಸಕಾರಾತ್ಮಕವಾಗಿ ತೊಡಗಿಸಿಕೊಳ್ಳುವ ಹಾಗೂ ಜೀವನ ಎದುರಿಸುವ ಜರೂರತ್ತು ನಮಗಿದೆ. ಅಲ್ಲವಾ ?
*****
thumba chennagide sir thamma lekhana – "ABHI'S HALF DAY OUT" prati varsha Sri. Gavisiddeshwara Jatre samayakke nenapaguva ghatane.
ಸವಿನೆನಪುಗಳು
Nice experiences. Nanagu saha heege agitthu. Nimma lekhana odi nanu nanna thamma chikkavaragidaga thappisi kondidu. Swalpa dinagala hinde nanna magalu devasthanadalli thappisi kondidu nenapige banthu. Nimma maga half day out nanna magalu 1 minute out aste.
ಹೆ ಹೆ ಚೆನ್ನಾಗಿದೆ.. ಎಲ್ಲಾ ಕಳೆದುಹೋಗೋ ಘಟನೆಗಳು ಸುಖಾಂತ್ಯವಾಗಿದ್ದು ಸಂತೋಷ 🙂
ಬಾಲ್ಯದಲ್ಲಿ ಭೌತಿಕವಾಗಿ ಕಳೆದುಹೋಗುತ್ತಿದ್ದೆವು.
ಈಗ ಮಾನಸಿಕವಾಗಿ ಕಳೆದುಹೋಗುತ್ತಿದ್ದೇವೆ ಅನ್ನಿಸುತ್ತದೆ .
ಬರಹ ಚೆನ್ನಾಗಿದೆ ಸರ್.
ಕಳೆದು ಹೋಗುವ ಪ್ರಸಂಗದಲ್ಲಿ ಇಷ್ಟು ಹೊತ್ತು ನಾನೂ ಕಳೆದು ಹೋಗಿದ್ದೆ. ಚೆನ್ನಾಗಿದೆ ಸರ್ 🙂
ಅಯ್ಯೋ ಮಾರಾಯಾ, ಇಸ್ಟೊಂದು ಸಲ ಅಭಿ ಕಳೆದುಹೋಗಿರೋ ವಿಷಯ ಹೇಳೇ ಇಲ್ವಲ್ಲೋ?????????? ಬಹುಷ: ಇದು ನಿನಗೆ ರೂಟೀನ ಆಗಿದೆ ಅನಿಸುತ್ತೆ. ಹುಷಾರಾಗಿರಪ್ಪಾ ಅಮರ್
manassu tattitu baraha…. hinge baritiri… ishta aaytu
ನಾವು ಕಳೆದು ಒಗುವ ಮುನ್ನ ಒಂದು ಅನಿಸಿಕೆ. ಗುಣಮಟ್ಟದ ಜೊತೆಗೆ ಗಾತ್ರಕ್ಕೂ ಸ್ಡಲ್ಪ ಒತ್ತು ಕೊಟ್ರೆ ಒಳ್ಳೆಯದು. ಹಿಂದೆ ನಮ್ಮ ಹಿರಿಯರು ಉತ್ತಮ ಚಿಂತನಕಾರರು ಮತ್ತು ಅತ್ಯಂತ ವಿವೇಕಶಾಲಿಗಳು.
ಸುರೇಂದ್ರ .ಜಿ.ಎಸ್.
Chennagide, naanu balyadalli kaledu hogidde, olle peekalaata