ಮರೆಯಾಗುತ್ತಿರುವ ಮದುವೆಮನೆಯ ಸಂಭ್ರಮಗಳು: ಸುಮನ್ ದೇಸಾಯಿ


ಮೊನ್ನೆ ಸಂಜಿಮುಂದ ಮನಿ ಹತ್ರ ಇರೊ ವೇಂಕಪ್ಪನ ಗುಡಿಗೆ ಹೋಗಿದ್ವಿ. ಅಲ್ಲೆ ಇದ್ದ ಕಲ್ಯಾಣಮಂಟಪದಾಗ ಮದುವಿ ಇತ್ತಂತ ಕಾಣಸ್ತದ. ಬ್ಯಾಂಡ ಭಂಜಂತ್ರಿಯವರು ಮಸ್ತ ಯಾವದೊ ಒಂದ ಸಿನೇಮಾ ಹಾಡಿನ ಬಾಜಾ ಬಾರಿಸ್ಲಿಕತ್ತಿದ್ರು. ಈಗೆಲ್ಲಾ ಕಡೆ ಒಂದ ಹೊಸಾ ಪಧ್ಧತಿ ಎದ್ದದ ಎನಂದ್ರ ಈ ಉತ್ತರಭಾರತದ ಕಡೆ ಮದುವಿಗೊಳೊಳನ್ಯಾಗ ಹೆಂಗ ವರನ್ನ ಕುದರಿಮ್ಯಾಲೆ ಕೂಡಿಸಿಕೊಂಢ ಬ್ಯಾಂಡ ಬಾಜಾ ಬಾರಿಸ್ಕೊತ, ಡ್ಯಾನ್ಸ ಮಾಡ್ಕೊತ ಕರ್ಕೊಂಡ ಬರತಾರ ಹಂಗ ಇಲ್ಲೆನು ವೇಂಕಪ್ಪನ ಗುಡಿಯಿಂದ ಕುದರಿಮ್ಯಾಲ ವರನ್ನ ಕುಡಿಸಿ ಬ್ಯಾಂಡ ಬಾಜಾ ಬಾರಿಸ್ಕೋತ,ಸಣ್ಣ ಹುಡುಗುರು, ದೊಡ್ಡವರು,ಹೆಣ್ಣ ಮಕ್ಕಳು ಎಲ್ಲಾರು ಡಾನ್ಸ ಮಾಡ್ಕೊತ ವರನ್ನ ಭಾಳ ಸಂಭ್ರಮದಿಂದ ಕರ್ಕೊಂಡ ಬರ್ಲಿಕತ್ತಿದ್ರು.ಪೇಟ್ರೋಮ್ಯಾಕ್ಸಿನ ಬೆಳಕಿನ್ಯಾಗ ಜರಿಪೇಟಾ ಸುತಗೊಂಡ ಕುದರಿಮ್ಯಾಲೆ ಕೂತ ವರಾ, ಝಗಭಗ ರೇಷ್ಮಿ ಸೀರಿ ಉಟ್ಟ ಹೆಣ್ಣಮಕ್ಕಳು, ಮಿಂಚ ಮಿಂಚಿನ ಡ್ರೇಸ್ ಹಾಕ್ಕೊಂಡ ಡ್ಯಾನ್ಸ ಮಾಡ್ಲಿಕತ್ತ ಹುಡುಗುರು ಹುಡಗ್ಯಾರು, ಇವರೆಲ್ಲಾರಿಂದ ಆ ಮೆರವಣಿಗಿಗೆ ಒಂದು ಛಂದ ಕಳೆ ಬಂದಿತ್ತು. 

ಈ ರೀತಿ ವರನ್ನ ಎದುರಗೊಂಬೊ ಪಧ್ಧತಿ ಹಿಂದಕ ಪೌರಾಣಿಕ ಕಾಲದಿಂದನು ಅದ ಅನ್ನೊದಕ್ಕ “ಶ್ರೀ ವೇಂಕಟೇಶ ಪಾರಿಜಾತದಾಗ “ಆಕಾಶರಾಜಾ” ವರನಾದ ತನ್ನ ಅಳಿಯಾ ಶ್ರೀಮನ್ನ ವೇಂಕಟೇಶನ್ನ ಇದ ಥರಾ ವಿಜ್ರಂಭಣೆಯಿಂದ ಪಟ್ಟಣದ ಬೀದಿಯೋಳಗ ಮೇರವಣಿಗಿ ಮಾಡಿ ಎದುರಗೊಂಡಾ ಅನ್ನೊ ಪ್ರಸಂಗನ ಸಾಕ್ಷಿ ಅದ.

ಈ ಗಂಡಬೀಗರಿಗೆ ಮದವಿ ಹಿಂದಿನ ದಿನಾ ಎನ ಆದರಾ ಉಪಚಾರಾ ಸಿಗತದಲ್ಲಾ ಅದು ಮರುದಿನಾ ಹೆಚ್ಚುಕಡಿಮಿ ಮಾಯಾಗಿ ಹೋಗಿರತದ ಅಂತ  ನನ್ನ ಅನಿಸಿಕಿ ಮತ್ತ ಅನುಭವ ನಮ್ಮ ಕಡೆ ಮದವಿ ಹಿಂದಿನ ದಿನಾ ರಾತ್ರಿ ನಡೆಯೋ ಕಾರ್ಯಕ್ರಮಕ್ಕ ರುಕ್ಕೋತ ಅಂತೇವಿ.ಈ ಕಾರ್ಯಕ್ರಮದಾಗ ಸಾಲಂಕೃತ ವಧು ಮತ್ತ ವರನ್ನ ಸಹಿತ ಅವರವರ ತಾಯಿ ತಂದೆಯರು ಪುಣ್ಯಾಹವಾಚನ ಮಾಡಿಸಿಕೊಂಡು ಒಬ್ಬರಿಗೊಬ್ಬರು ಉಡುಗೊರಿ ಕೋಡೊದಿರತದ. ಅರಿಷಿಣಾಕುಂಕಮದ್ವು ಛಂದಾ ಛಂದದ ಸಾಮಾನ ಮಾಡಿ ಬಂದ ಮುತ್ತೈದ್ಯಾರಿಗೆಲ್ಲಾ ಕೋಡತಾರ. ಎದುಗೊಳ್ಳು ಅಂದ್ರ ವರನ್ನ ಕಡೆ ಗಂಡಸರು ಮತ್ತ ಹೆಣ್ಣಿನ ಕಡೆ ಗಂಡಸರು ಒಬ್ಬರಿಗೊಬ್ಬರು ಕುಂಕಮಾ ಹಚ್ಚಿ ಕಾಯಿ ಬದಲಾಯಿಸಿಕೊಂಡು, ಗುಲಾಲು ಬುಕ್ಕಿಟ್ಟು ಹಾಕಿ ಆಲಾ-ಬಾಲಾ ಮಾಡೊದಿರತದ. ಹಂಗನ ವರನ್ನ ಕಡೆ ಹೆಣ್ಣ ಮಕ್ಕಳು ಮತ್ತ ಹೆಣ್ಣಿನ ಕಡೆ ಹೆಣ್ಣ ಮಕ್ಕಳು ಒಬ್ಬರಿಗೊಬ್ಬರು ಅರಿಷಿಣಾ ಕುಂಕಮಾ ಹಚ್ಚಿ,ಕಾಯಿ ಬದಲಾಯಿಸಿಕೊಂಡು ಇಬ್ಬರೊಳಗ ಯಾರ ದೊಡ್ಡವರಿರತಾರ ಅವರಿಗೆ ಸಣ್ಣವರು ನಮಸ್ಕಾರ ಮಾಡತಾರ. ಹೆಣ್ಣಿನ ಕಡೆ ಮತ್ತ ವರನ ಕಡೆ ಕಳಸಗಿತ್ತ್ಯಾರು ಎದುಗೊಂಡ ಮ್ಯಾಲೆ ಈ ಆಲಾಬಾಲಾ ಕಾರ್ಯಕ್ರಮ ಮುಕ್ತಾಯ ಆಗತದ. ರುಕ್ಕೋತದ ದಿನಾ ಭೂಮದುಟದ ಸಂಭ್ರಮ ಅಂತು ಮಸ್ತ ಇರತದ. ದೊಡ್ಡ ದೊಡ್ಡ ಎರೆಡೆರಡ ಬಾಳಿ ಎಲಿ ಒಂದರಮ್ಯಾಲ ಒಂದ ಬರೋ ಹಂಗ ಅಗಲಾಗಿ 5 ಎಲಿ ಹಾಕಿ ಸುತ್ತಲೂ ಛಂದನ ರಂಗೊಲಿ ಹಾಕಿ ಅಲಂಕಾರ ಮಾಡಿರತಾರ.ರಂಗೊಲಿ ತುದಿಗೆ ಮಸ್ತ ಸುವಾಸನಿವು ಉದಿನಕಡ್ಡಿ ಹಚ್ಚಿಟ್ಟರತಾರ. ನಡುವ ಬಾಳಿ ಎಲಿ ಮ್ಯಾಲೆ ವರಗ ಅಂತ ಬೆಳ್ಳಿ ತಾಟು ಬಟ್ಟಲಾ ಇಟ್ಟರತಾರ. 

ಅವತ್ತ ಮಾಡಿದ್ದ ಅಡಗಿ ಎಲ್ಲಾ ಹೊಸಾ ಪಾತ್ರಿಯೋಳಗ ಬಿಗರಿಗೆ ಬಡಿಸಲಿಕ್ಕೆ ತಂದಿಟ್ಟಕೊಂಡಿರತಾರ.ಛಂದನ ರಂಗೋಲಿ ನಡುವ ಜೊಡಿ ಸಮಯನ್ಯಾಗ ದೀಪಾ ಹಚ್ಚಿಟ್ಟು ಎಲಿತುಂಬ ಅಡಗಿ ಬಡಸಿ, ನಡುವ ದೊಡ್ಡವು ಅಖಂಡ ಮಂಡಗಿ ಹಾಕಿರತಾರ. ಬಣ್ಣ ಬಣ್ಣದ ಸಂಡಿಗಿ ಹಪ್ಪಳಗೊಳಿಂದ ಭೂಮದ ಎಲಿಯ ಅಲಂಕಾರಾ ಎದ್ದ ಕಾಣತಿರತದ. ಈ ಭೂಮದೂಟಕ್ಕ ವರನ ಜೋಢೀ ಅವನ ತಾಯಿ ಅಕ್ಕತಂಗ್ಯಂದ್ರು, ಮತ್ತ ಹತ್ತಿರದ ಬಳಗದ್ದ ಹೆಣ್ಣ ಮಕ್ಕಳು ಮಾತ್ರ ಕೂಡೊದಿರತದ. ಭೂಮಕ್ಕ ಕೂತವರ ಕೈಯ್ಯಾಗ ಹಾಲು ತುಪ್ಪ ಸಕ್ಕರಿಯ ಆಪೋಷಣ ಹಾಕಿ ಆರತಿ ಮಾಡಿ ಭಾಳ ಆದರೋಪಚಾರದಿಂದ ಊಟಕ್ಕ ಬಡಸತಾರ. ಹೆಣ್ಣಿನ ಕಡೆಯವರು ಛಂದ ಛಂದನ ದೇವರ ಹಾಡು ಹಾಡತಿರತಾರ. ಹಿಂದಕಿನ ಮಂದಿ  ಈ ಭೂಮದೂಟಕ್ಕ ಕೂತಾಗ ಬಿಗರ ಹಾಡು ಅಂದ್ರ ಗಂಡಬೀಗರು ಮತ್ತ ಹೆಣ್ಣ ಬೀಗರು ಒಬ್ಬರಿಗೊಬ್ಬರು ಚಾಷ್ಟಿ ಮಾಡೊ ಹಾಡು ಹಾಡತಿದ್ರಂತ ನಂಗಿನ್ನು ನೆನಪದ ನಮ್ಮ ಮಾಮಾನ ಮದುವ್ಯಾಗ ನಮ್ಮ  ಮಾಮಿ ಅಜ್ಜಿ  ವೇಂಕಟೇಶ ಪಾರಿಜಾತದಾಗ ಬರೊ ಬೀಗರ ಹಾಡು “ ಊಟಕೆ ಬಂದರು ನೋಡಿರಿ ಬಿಗರು || ಇವರೆಲ್ಲಾರು|| ಊಟಕೆ ಬಂದರು ನೋಡಿರಿ ಬೀಗರು ||ಊಟಕೆ ಬಂದು ಬೀಗರು,ಆರ್ಭಟದಿ ಒಡಲೊಳಗ್ಹಾಕುವರ|| ನಿಟದಿ ಅರಸರು ಉಂಬುವ ಅನ್ನದ ಊಟದ ರುಚಿಯನು ಅರಿಯರು ||ಇವರು|| ಊಟಕೆ ಬಂದರು ನೋಡಿರಿ ಬಿಗರು|| ಇವರೆಲ್ಲಾರು|| ಊಟಕೆ ಬಂದರು ನೋಡಿರಿ ಬೀಗರು||” ಅಂತಹಾಡಿದ್ರು. ನಮ್ಮಮ್ಮನು ಎನ ಕಡಮಿ ಇದ್ದಿದ್ದಿಲ್ಲಾ, ಅದಕ್ಕ ಪ್ರತಿ ಉತ್ತರ ಅಂತ “ ಊಟಕೆ ಬಂದವರಲ್ಲಾ  ಬಿಗರು || ನಾವೆಲ್ಲಾರು|| ಊಟಕೆ ಬಂದವರಲ್ಲಾ ಬೀಗರು|| ಚಾಟಕತನದಿ ರಾಜಕುಮಾರಿಯ || ಬೇಟೆಗೆ ಮೆಚ್ಚಿದಾತನ ಮದುವೆ|| ನೋಟಕೆ ಬಂದೇವೆ ಹೋರತು|| ಊಟಕೆ ಬಂದವರಲ್ಲಾ  ಬಿಗರು || ನಾವೆಲ್ಲಾರು|| ಊಟಕೆ ಬಂದವರಲ್ಲಾ ಬೀಗರು|| “ ಅಂತ ಹಾಡಿ ಸೇರಿಗೆ ಸವ್ವಾಸೇರ ಅನ್ನೊಹಂಗ ಉತ್ತರಾ ಕೊಟ್ಟಿದ್ಲು. ಆದರ ಈಗೇಲ್ಲಾ ಇಂಥಾ ಹಾಡಗೊಳನ ಯಾರು ಹಾಡುದಿಲ್ಲಾ. ಮದಲಿನಂಘ ಈಗಿನ ಜನರೊಳಗ ಹಾಸ್ಯ ವೀನೋದಾವಳಿಗಳಿಗೆ ಸಮಯನು ಇರುದಿಲ್ಲಾ ಮತ್ತ ಹಿಂಗ ಕಾಡಸೊದು ಮತ್ತ ಕಾಡಿಸ್ಕೊಳ್ಳಿಕ್ಕೆ ಎಲ್ಲಾರಗು ತಮ್ಮತಮ್ಮ ಪ್ರತಿಷ್ಠೆ ಅಡ್ಡ ಬರತದ.

ನಾನು ಭಾಳ ಪರಿಕ್ಷಾ ಮಾಡಿ ನೊಡೇನಿ ಈಗಿನ ಕಾಲದ ಮದವಿಗೋಳೊಳಗ ಮದಲನೆ ಅಕ್ಷತಾ ಆದಿಂದ ಸ್ಟೇಜ ಮ್ಯಾಲೆ ಮದಮಕ್ಕಳು ಮತ್ತ ಮದವಿ ಮಾಡಸೊ ಭಟ್ಟರನ ಬಿಟ್ಟರ ಯಾರು ಇರುದಿಲ್ಲಾ. ಇಂಥಾ ಧಾರ್ಮಿಕ ವಿಧಿ ವಿಧಾನಗಳನ್ನ ನೋಡಿ ತಿಳ್ಕೊಬೇಕನ್ನೊ ಹುರುಪು ಈಗಿನ ಕಾಲದ ಯಾವ ಹುಡುಗಲ್ಲೆ ಇರಂಗಿಲ್ಲಾ. ತಾವಾತು ತಮ್ಮ ಮೋಬೈಲಾತು ಅಷ್ಟ ಈಗಿನವರ ಜಗತ್ತು.ಹುಡುಗುರ,ಹುಡ್ಯಾರು ಒಂದ ಕಡೆ ಗುಂಪ ಕೂತು ಮೊಬೈಲ ಲೋಕದಾಗ ಮುಳಿಗಿಬಿಟ್ಟಿರತಾರ.

ಖರೇನು ನಾ ಸಣ್ಣವರಿದ್ದಾಗ ಈ ಮದವಿ ಕಾರ್ಯಕ್ರನ ಭಾಳ ಛಂದ ಎಂಜಾಯ್ ಮಾಡತಿದ್ವಿ. ಓಣ್ಯಾಗ ಯಾರದರ ಮನ್ಯಾಗ ಮದವಿ ಗೊತ್ತಾತಂದ್ರ ಸಾಕ ವಠಾರದಾಗ ಎಲ್ಲಾರಗು ಹುರುಪಾಗತಿತ್ತು.ಮದವಿ ಮನ್ಯಾಗಿನ “ಸಜ್ಜೆಯ ಮಹೂರ್ತ” ಹಿಡಕೊಂಡ ಅಂದ್ರ ನಮ್ಮ ಕಡೆ ಮದವಿ,ಮುಂಜವಿ ಯಾವದೇ ಶುಭ ಕಾರ್ಯಕ್ರಮ ಆಗಬೇಕಾದ್ರ ಒಂದ ಛೋಲೊ ದಿನಾ ಗಣಪತಿ ಪೂಜಾ ಮಾಡಿ,ಅವತ್ತ ಸಿಹಿ ಅಡಗಿ ಮಾಡಿ, ಸಂಜಿಮುಂದ ಮುತ್ತೈದ್ಯಾರಿಗೆ ಅರಿಷಿಣಾ ಕುಂಕಮಕ್ಕ ಕರದು,5 ಥರದ ದಿನಸಿನಕಾಳ ಅಂದ್ರ,ಗೌಲಿ,ಪರಡಿ,ಮಾಲತಿ,ಬಟವಿ,ಶ್ಯಾವಿಗಿ, ಮಾಡಿ ಮದುಮಕ್ಕಳಿಗೆ ಆರತಿ ಮಾಡತಾರ. ಆವಾಗಿಂದ ಹಿಡಕೊಂಡ ಮದವಿ ಮುಗದ ಸತ್ಯನಾರಾಯಣ ಪೂಜಾ ಮುಗಿಯೊ ತನಕಾ ಓಣ್ಯಾಗ ನಾಎಲ್ಲಾರು ಓಡ್ಯಾಡಿ ಮದವಿ ಕೆಲಸಕ್ಕ ಸಹಾಯ ಮಾಡತಿದ್ವಿ.ಓಣ್ಯಾಗ ಎನರೆ ಹೆಣ್ಣಿನ ಮದುವಿ ಇತ್ತಂದ್ರ ಮುಗಿತ ಕೆಲಸ ಇನ್ನು ಭರ್ಜರಿ ಇರ್ತದ.ಬಣ್ಣ ಬಣ್ಣದ ಹಪ್ಪಳಾ ಸಂಡಿಗಿ ಮಾಡೊದು, ಶ್ಯಾವಿಗಿ, ಗಿಲಗಂಚಿ,ಚಕ್ಕಲಿ,ಉಂಡಿ,ಅವಲಕ್ಕಿ ಫಳಾರ ಮಾಡೊದು. ಮತ್ತ ಮದುಮಗಳಿಗೆ ಕೋಡಲಿಕ್ಕೆ ಥಂಡಾ ಥಂಡದ ಶೋ ಸಾಮಾನ ಮಾಡೊದು, ಮತ್ತ ಮದವಿಗೆ ಬಂದವರಿಗೆಲ್ಲಾ ಕೋಡಲಿಕ್ಕೆ ಛಂದ ಛಂದನೆ ಅರಿಷಿಣಕುಂಕಮಾ, ಸಕ್ಕರಿದು, ಮತ್ತ ಉಡಿ ಪಾಕೀಟ ಮಾಡೋದು, ಹಿಂಗ ಎಲ್ಲಾ ಕೆಲಸಾನು ನಾವೆಲ್ಲಾ ಗೇಳತ್ಯಾರು ಹಂಚಕೊಂಡ ಮಾಡತಿದ್ವಿ. ಎಲ್ಲಾ ಕಾರ್ಯಕ್ರಮ ಮುಗದಮ್ಯಾಲೆ ಮದವಿ ಮನ್ಯಾಗಿನವರಕಿಂತಾ ನಾವ ಭಾಳ ಹೈರಾಣ ಆಗಿರತಿದ್ವಿ.

ಈಗೆಲ್ಲಾ ರೊಕ್ಕಾ ಕೊಟ್ರ ಎಲ್ಲಾ ರೇಡಿಮೆಡ್ ಸಿಗತದ ಹಿಂಗಾಗಿ ಯಾರು ತ್ರಾಸ ಪಟ್ಟ ಮಾಡೊ ಗೋಜಿಗೆ ಹೋಗುದಿಲ್ಲಾ. ಆಮ್ಯಾಲೆ ಈಗಿನ ಮದುವ್ಯಾಗು ಅಷ್ಟ ಊಟದ್ದು ನಾಷ್ಟಾದ್ದು ಕಾಂಟ್ರ್ಯಾಕ್ಟ ಕೊಟ್ಟಬಿಟ್ಟಿರತಾರ. ಮುಂಝಾನೆ ಒಂದ ಇಡ್ಲಿ ಚಟ್ನಿ ನಾಷ್ಟಾಕ್ಕ ಮತ್ತ ಊಟಕ್ಕ ಒಂದ ಪಲಾವ,ಪೂರಿ,ಕೂರ್ಮಾ,ಒಂದ ಸ್ವೀಟ,ಮಸರನ್ನಾ ಇಷ್ಟರಾಗ ಊಟಾ ಮುಗಿಸಿಬಿಡತಾರ. ಯಾರು ಮದಲಿನಂಘ ತ್ರಾಸ ಪಟ್ಟ ಹಪ್ಪಳಾ ಸಂಡಿಗಿ ಮಾಡೊದು, ಶ್ಯಾವಿಗಿ, ಗಿಲಗಂಚಿ,ಚಕ್ಕಲಿ,ಉಂಡಿ,ಮಾಡಲಿಕ್ಕೆ ಹೋಗುದಿಲ್ಲಾ.

ರುಕ್ಕೋತದ್ದ ದಿನಾ ರಾತ್ರಯಂತು ನಾವ ಮಲ್ಕೊಳತಿದ್ದೇಯಿಲ್ಲಾ,ಎರಡು ಬೀಗರ ಕಡೆ ಹುಡುಗುರು ಹುಡಗ್ಯಾರು ಮಸ್ತ ಅಂತ್ಯಾಕ್ಷರಿ ಆಡತಿದ್ವಿ.ನಡು ರಾತ್ರತನಕಾ ಧಾಂದಲೇ ಹಾಕಿ ಮಸ್ತ ಮಜಾ ಮಾಡತಿದ್ವಿ. ಈಗೆಲ್ಲಾ ಮದವಿಗೆ ಬಂದ ಹುಡುಗುರು ಹುಡಗ್ಯಾರು ಊಟಾ ಮಾಡಿ ಆರಾಮ ಒಂದ ಕಡೆ ಜಾಗಾ ಹಿಡಕೊಂಡ ಮೊಬೈಲನ್ಯಾಗ ಚಾಟ್ ಮಾಡ್ಕೊತ ಮಲ್ಕೊಂಡ ಬಿಡತಾರ. “ ಅಯ್ಯೊ ನಿದ್ದಿಗೆಟ್ಟರ ಫ್ರೇಶ್ ಇರಲಿಕ್ಕಾಗಂಗಿಲ್ಲ” ಅಂತಾರ. ನಾವೆಲ್ಲಾ ರಾತ್ರಿ ಬೆಳತನಕಾ ಎಚ್ಚರ ಇದ್ರು ತಾಜಾ ತಾಜಾ ಇರತಿದ್ವಿ.ಆವಾಗೆಲ್ಲಾ ಅದೊಂಥರಾ ಹುರುಪನ ಬ್ಯಾರೆ ಇರತಿತ್ತ.ಅಷ್ಟ ನಿದ್ದಿಗೆಟ್ಟರು ಮತ್ತ ನಸಿಕಲೇ ಎದ್ದು ಸುರಗಿ ತಯಾರಿ ಮಾಡೊಮುಂದ ದೊಡ್ಡವರಿಗೆ ಸಹಾಯಕ್ಕ ನಿಂದರತಿದ್ವಿ. ಓಡ್ಯಾಡಿ ಎರಡು ಕಡೆ ಬೀಗರಿಗೆ ಬಿಸಿ ಬಿಸಿ ನೀರು ಒದಗಸತಿದ್ವಿ.ಆದ್ರ ಈಗ ಸುರಗಿ ಮಾಡೊಮುಂದ ಅರಿಷಿಣಾ ಎಣ್ಣಿ ಹಚ್ಚಿದ್ರ ಮುಖಕ್ಕ  ಮೇಕಪ್ ಛಂದಾಗಿ ನಿಲ್ಲಂಗಿಲ್ಲಂತ ಮನ್ಯಾಗ ದೇವರೂಟದ್ದ ದಿನಾನ ಸಂಕ್ಷಿಪ್ತ ಮುಗಿಸಿಬೀಡತಾರ. ಈಗೆಲ್ಲಾ ಶಾರ್ಟಕಟ್ ಜಮಾನಾ ಬಂದದ. 

ಮದ್ಲೆಲ್ಲಾ ಈಗಿನಂಘ ಒಂದನೆ ಅಕ್ಷತಾ ಎರಡನೆ ಅಕ್ಷತಾ ಅಂತೆನ ಇರ್ತಿದ್ದಿಲ್ಲಾ. ಅಕ್ಷತಾದ್ದು ಒಂದ ಮಹೂರ್ತ ಇರ್ತಿತ್ತು. ಮುಂದ ಪಾಂಗತಾಗಿ ಎಲ್ಲಾ ಧಾರ್ಮಿಕ ಪಧ್ಧತಿಗೋಳ ನಡಿತಿದ್ವು.ನಾವೆಲ್ಲಾ ಮದಮಕ್ಕಳ ಸುತ್ತ ಮುತ್ತನ ಇರತಿದ್ವಿ.ಈಗೆಲ್ಲಾ ಮುಂಝಾನೆ ಲಗೂನ ಒಂದನೆ ಅಕ್ಷತಾ ಹಾಕಿಸಿ ಎರಡನೆ ಅಕ್ಷತಾ ಅನ್ನೊದ್ರಾಗ ಎಲ್ಲಾ ವಿಧಿ ವಿಧಾನಗಳನ್ನ ಗಡಿಬಿಡಿಯೋಳಗ ಸಂಕ್ಷೀಪ್ತ ಮುಗಿಸಿ ಝಮ ಝಮ ಅಂತ  ತಯಾರಾಗಿ ಆರಾಮಾಗಿ ಫೋಟೊಕ್ಕ ಮತ್ತ ವಿಡಿಯೋಕ್ಕ ಸಮಯ ಒದಗಿಸಕೊಂಡು ಫೋಸ್ ಕೋಡತಾರ. ವಿಚಿತ್ರ ಅನಿಸ್ತದ ಈಗಿನ ಮಂದಿ ಮೆಂಟಾಲಿಟಿ ಬಗ್ಗೆ. ಅಲ್ಲಾ ಎರಡ ಜೀವಗಳನ್ನ ಒಂದ ಪವಿತ್ರ ಬಂಧನದೊಳಗ ಬೆಸೆಯೊ ಅಂಥಾ ಧಾರ್ಮಿಕ ಮತ್ತ ಶಾಸ್ತ್ರೋಕ್ತ ಪಧ್ಧತಿಗಿಂತಾ ಈಗಿನ ಮಂದಿ ಆಡಂಬರ ಮತ್ತ ಶೋಕಿಗೆ ಹೆಚ್ಚಿನ ಸಮಯಾನ ಒದಗಿಸ್ಕೊತಾರ ಅಂದ್ರ ಈಗಿನ ಜನರೊಳಗ ಧಾರ್ಮಿಕತೆ ಎಷ್ಟರ ಮಟ್ಟಿಗೆ  ಸತ್ತಹೋಗೆದಂತ ಸ್ಪಷ್ಟ ಗೊತ್ತಾಗತದ. ಈ ಒಂದನೆ ಅಕ್ಕಿಕಾಳಾದಿಂದ ಮದಮಕ್ಕಳ ಹತ್ರ ಸತ್ತೆನಂದ್ರು ನೀರ ಬಿಡಲಿಕ್ಕೆ ಯಾರು ಬಳಗದವರಿರುದಿಲ್ಲಾ.

ನಾವೆಲ್ಲಾ ಅಕ್ಷತಾ ಹಾಕೊಮುಂದ ಭಾಳ ಕುತುಹಲದಿಂದ ಕಾಯತಿದ್ವಿ ಅಂದರ ಅಂತರಪಟಾ ಸರದ ಮ್ಯಾಲೆ ಯಾರ ಮದಲ ಜೀರಿಗಿ ಬೆಲ್ಲಾ ಹಾಕತಾರಂತ ಕಾಯತಿದ್ವಿ. ಯಾಕಂದ್ರ ಗಂಡಾ ಹೆಂಡತಿಯೊಳಗ ಯಾರ ಮದ್ಲ ಒಬ್ಬರಮ್ಯಾಲ ಒಬ್ಬರು ಜೀರಿಗಿಬೆಲ್ಲಾ ಹಾಕತಾರ, ಮನ್ಯಾಗ ಅವರದ ಮಾತ ನಡಿತದಂತ.ಆದ್ರ ಖರೆ ಹಕಿಕತ್ತ ಎನ ಅಂದ್ರ ಯಾರ ಮದಲ ಹಾಕಿದ್ರು ಮನ್ಯಾಗ ಯಜಮಾನಕಿ ನಡೆಯೊದ ಸಹಸಾ ಹೆಂಡತಿದ. ಆಮ್ಯಾಲೆ ಮನ್ಯಾಗ ಹೆಂಡತಿ ಮಾತ ನಡದ್ರನ ಛಂದ ಇರ್ತದ. ಎಲ್ಲೊ ಓದಿದ ನೆನಪು ಈ ಜಗತ್ತಿನೊಳಗ ಇಬ್ಬರು ಸ್ಪರ್ಧಿಸಿ ಇಬ್ಬರು ಗೆಲ್ಲೊ ಆಟ ಅಂದ್ರ ಅದು ದಾಂಪತ್ಯ. ಇಲ್ಲೆ ಯಾರೊಬ್ಬರು ಸೋತರು ಆ ಸೋಲು ಇಬ್ಬರದು ಮತ್ತ ಯಾರ ಗೆದ್ದರು ಆ ಗೆಲವು ಇಬ್ಬರದು ಆಗಿರತದ. 

ಇನ್ನ ಈ ಮದವ್ಯಾಗ ಇನ್ನೊಂದ ಗಮ್ಮತ್ತಿನ ಸಂಗತಿ ಎನಂದ್ರ ಈ ಮದುಮಗಂದು ಜೀರಗಿಗಂಟ ಕಳುಮಾಡೊದು. ಗಂಡಿನವರು ಎಷ್ಟ ಎಚ್ಚರಿಕಿಯಿಂದ ಇದ್ರು ನಾವೆನ ಕಡಮಿ ಇದ್ದಿಲ್ಲಾ ಹೆಂಗರಮಾಡಿ ಜೀರಿಗಿ ಗಂಟ ಹೊತ್ತಬಿಡತಿದ್ವಿ. ಆಮ್ಯಾಲೆ ನಾವ ಕೇಳಿದಷ್ಟ ರೊಕ್ಕಾ ಕೊಟ್ರ ಮಾತ್ರ ವಾಪಸಕೊಡತಿದ್ವಿ.ಮುಂದ ಮಾಂಗಲ್ಯಧಾರಣ,ಲಾಜಾಹೊಮ,ನಾಗೊಲಿ,ಸಿಂಧೂಪ, ಮನಿತುಂಬಿಸಿಕೋಳ್ಳೊದು, ಕೂಸಒಪ್ಪಸೊದು ಎಲ್ಲಾ ಕಾರ್ಯಕ್ರಮನು ಪಾಂಗತಾಗಿ ನಡಿತಿದ್ವು. ಈಗಿನಂಘ ಯಾವದು ಸಂಕ್ಷೀಪ್ತ ಆಗತಿದ್ದಿಲ್ಲಾ.

ಮನಿತುಂಬಿಸ್ಕೊಳ್ಳೊಮುಂದ “ಉರಟಣಿ” ಅಂತ ಮಾಡತಾರ ನಮ್ಮ ಕಡೆ. ಅಂದ್ರ ಗಂಡನ ಹೆಸರು ಹೆಂಡತಿ ಮತ್ತ ಹೆಂಡತಿ ಹೆಸರು ಗಂಡ ಒಗಟಾಹಾಕಿ ಹೇಳೊದಿರತದ. ನಾವೆಲ್ಲಾ  ತಿಂಗಳ ಮುಂಚೆನ ಅರಿಷಿಣಾ ಹಚ್ಚಿದ್ದು, ಕುಂಕಮಾ ಹಚ್ಚಿದ್ದು,ವಾಚ ಕೊಟ್ಟಿದ್ದು,ಪೆನ್ ಕೊಟ್ಟಿದ್ದು,ಹಿಂಗ ಭಾಳಷ್ಟ ಒಗಟಾ ಬಾಯಿಪಾಠ ಮಾಡಿರತಿದ್ವಿ.ಖರೇನು ಈ” ಉರಟಣಿ “ ಭಾಳ ಛಂದ ಇರತದ.ವೇಂಕಟೇಶ ಪಾರಿಜಾತದಾಗ ಹತ್ತನೇ ಅಧ್ಯಾಯದಾಗ ವೆಂಕಪ್ಪ ಪದ್ಮಾವತಿಯರ “ಉರಟಣಿ ಮಾಡಿದ್ದ ಹಾಡ ಅದ.ವೇಂಕಪ್ಪ ಪದ್ಮಾವತಿಗೆ ಅರಿಷಿಣಾ ಕುಂಕಮಾ ಹಚ್ಚಬೇಕಾದ್ರ ಎಷ್ಟ ಛಂದಾಗಿ “ ಎನ್ನರಸಿ ಘನ್ನರಸಿ ಎನ್ನ ಪ್ರಾಣದ ಅರಸಿ || ನಿನ್ನ ಮುಖವನು ತಾರೆ ಅರಿಷಿಣ ಹಚ್ಚುವೆ ನಾನು|| ಕೋರವಿ ಕೈಯಲಿ ಎನ್ನ ಪರಮ ಪಾದದ ರೇಣು || ಕರೆದು ಹಚ್ಚಿದ ಹಣೆಗೆ ಕುಂಕುಮ ಹಚ್ಚುವೆ ನಾನು|| ಅಂತ ವೇಂಕಪ್ಪ ಅಂದ್ರ ಅದಕ್ಕ ಉತ್ತರಂತ ಪದ್ಮಾವತಿ “ ಎನ್ನರಸ ಘನ್ನರಸ ಎನ್ನ ಪ್ರಾಣದ ಅರಸ || ನಿನ್ನ ಮುಖವನು ತನ್ನಿ ಅರಿಷಿಣ ಹಚ್ಚುವೆ ನಾನು|| ವಲ್ಲಭ ನೀ ಎನ ಕೈಲಿ || ಕಲ್ಲಲಿ ತಾಡಿತವಾದ ಬಲ್ಲಿದ ನಿಮ್ಮಯ ಹಣೆಗೆ ಕುಂಕುಮ ಹಚ್ಚುವೆ ನಾನು|| ಅಂಥೇಳಿ ಉರಟಣಿಯೋಳಗ ಒಗಟಾ ಹೇಳಿ ಕುಂಕಮಾ ಹಚ್ಚತಾಳ. 

ಈ ಪಧ್ಧತಿಗಳೊಳಗ ಅದೇಷ್ಟ ಸಂಭ್ರಮ ಮತ್ತ ಹಾಸ್ಯ ವಿನೋದಾವಳಿಗೊಳ ತುಂಬಿರತಾವ. ಇವೆಲ್ಲಾ ಎಂಥಾ ಮರಿಲಾರದ ಖುಷಿಯ ಕ್ಷಣಗಳನ್ನ ಕೋಡತಾವ. ನಾವಂತು ಬ್ಯಾರೆ ಊರಾಗಿನ ಬೀಗರ ಕಡೆಯಿಂದ ಬರೊವರಾಗ ಎಷ್ಟೊ ಮಂದಿನ್ನ ಗೆಳತ್ಯಾರನ ಮಾಡ್ಕೊಂಡ ಬಿಡತಿದ್ವಿ.ಅವರು ವಾಪಸ ಊರಿಗೆ ಹೋಗೊಮುಂದ ಕಣ್ಣಾಗ ನೀರ ಬರತಿದ್ವು. ಒಬ್ಬರಿಗೊಬ್ಬರು ಅಡ್ರೇಸ್ ಇಸ್ಕೊಂಡು ಪತ್ರಾ ಬರಿತಿದ್ವಿ. ಮದವಿಗೆ ಬಂದ ಹುಡುಗುರನ್ನ, ಅಡಗಿಯವರನ್ನ, ಈ ಫೋಟೊ ತಗಿಯೊ ಫೋಟೊಗ್ರಾಫರ್ ಗೊಳನ್ನಂತು ಕಾಡಿ ಕಾಡಿ ಕೈಬಿಡತಿದ್ವಿ.  

ಎಲ್ಲಾ ಮದವಿ ಕಾರ್ಯಕ್ರಮ ಮುಗದಿಂದ ಎಲ್ಲಾರು ಮದುಮಕ್ಕಳ ಜೋಡಿನ ಊಟಕ್ಕ ಕೂಡತಿದ್ವಿ. ಇಗೀಗ ಪರಿಸ್ಥಿತಿ ಹಿಂಗಾಗೆದ ಅಲ್ಲಾ ಕಡಿ ಕಡಿಕೆ ಮದಮಕ್ಕಳ ಜೋಡಿ ಊಟಕ್ಕಂತ ವರನ್ನ ಮತ್ತ ಹೆಣ್ಣಿನ  ತಾಯಿ ತಂದಿ ಅಕ್ಕತಂಗ್ಯಾರ ಬಿಟ್ರ ಯಾರು ಇರುದಿಲ್ಲಾ. ಈಗೆಲ್ಲಾರು ಅಕ್ಷತಾ ಆದಿಂದ ಬಫೆದಾಗ ಊಟಾ ಮಾಡಿ ತಮ್ಮ ತಮ್ಮ ಊರಿನ ಹಾದಿ ಹಿಡದ ಬಿಡತಾರ. ಯಾರಿಗು ಇನ್ನೊಬ್ಬರನ ಪರಿಚಯ ಮಾಡ್ಕೊಬೇಕು, ಮಾತಾಡಸಬೇಕು ಅನ್ನೊ ಆಸಕ್ತಿನ ಇರುದಿಲ್ಲ. ವಿನಾಕಾರಣ ಯಾರನ ಯಾಕ ಮಾತಾಡಸಬೇಕ ಅನ್ನೊ ಮನೋಭಾವನೆ ಬೇಳದದ ಈಗಿನ ಮಂದಿಯೋಳಗ. ಜೀವನದಾಗ ಕೇಲವೊಂದಿಷ್ಟ ಸಂಗತಿಗಳ ಇರತಾವ ಅವಕ್ಕ ಕಾರಣಾ ಹುಡಿಕ್ಕೊತ ಕುಡೊದಕ್ಕಿಂತಾ ಆ ಕ್ಷಣಗಳ ಖುಷಿಯನ್ನ ಅನುಭೊಗಸಬೇಕು. ಜೀವನಾ ಕಳಧಂಗ ಹಿಂದ ತಿರಗಿ ನೋಡಿದ್ರ ಆ ಸಂತೋಷದ ಘಳಿಗಿಗೊಳ ನೆನಪು ಕೊಡೊ ಸುಖಾ ಎಷ್ಟ ಹಿತಾ ಇರತದ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

7 Comments
Oldest
Newest Most Voted
Inline Feedbacks
View all comments
amardeep.p.s.
amardeep.p.s.
10 years ago

ಮೊದಲಿನ ಮದುವೆ ಸಡಗರದ ಸಂಗತಿಗಳ ಬಗ್ಗೆ ಹಾಗೂ ಈಗಿನ ಕಾಂಟ್ರಾಕ್ಟ್ ಕೆಲಸದಂಥ ಮದುವೆ ಅರೇಂಜ್ ಮೆಂಟ್ ಗಳ ಬಗ್ಗೆ ಭಾಳ ಛಲೋ ಬರೆದೀರಿ.

mamatha keelar
mamatha keelar
10 years ago

ಚನ್ನಾಗಿದೆ ನಿಮ್ಮ ಬರಹ…ಸದ್ಯಮದುವೆ ಅಂತ ತಾಳಿಕಟ್ಟೋ ಒಂದು ಸಮಾರಂಭ ಆದರೂ ಉಳಿದಿದೆಯಲ್ಲ 🙂

 

prashasti
10 years ago

ಮದ್ವಿ ಬಗ್ಗೆ ಚೆನ್ನಾಗಿ ಬರಿದೀರಿ ಅಕ್ಕೋರ. ಈಗಿನ ಫ್ರೇಶ್ ಇರೋ ಕ್ರೇಜ್, ಅರಿಶಿನ ಒಲ್ಲದ ಜನ .. ಎಲ್ಲಾ ಇಂದಿನ ಪರಿಸ್ಥಿತಿಯ ವಿಡಂಬನೆಯಾಗ ಚೆನ್ನಾಗಿ ಬಂದ್ಯವ. ನಿಮ್ಮೊಂದು ಮಾತು ಸಖತ್ ಇಷ್ಟ ಆತ್ರಿ.
>> ಜಗತ್ತಿನೊಳಗೆ ಇಬ್ಬರು ಸ್ಪರ್ಧಿಸಿ ಇಬ್ಬರೂ ಗೆಲ್ಲೋ ಅಟ ಅಂದ್ರೆ ದಾಂಪತ್ಯ ಅಂತ<< ಸೂಪರ್ರಿ..

Anil Talikoti
Anil Talikoti
10 years ago

ಬಹಳ ಮಸ್ತ ಬರದಿರಿ. 'ಆಮ್ಯಾಲೆ ಮನ್ಯಾಗ ಹೆಂಡತಿ ಮಾತ ನಡದ್ರನ ಛಂದ ಇರ್ತದ' -ಸುಖ ಬಾಳಿಗೆ ಒಂದೇ ಸೂತ್ರ ನೋಡ್ರಿ ಇದು!

ಶ್ರೀವಲ್ಲಭ ಕುಲಕರ್ಣಿ
ಶ್ರೀವಲ್ಲಭ ಕುಲಕರ್ಣಿ
10 years ago

ಹೂ !!!! ನನ್ ಮದುವಿ ನೆನಪ ಆತು !!!!

Swarna
Swarna
10 years ago

ಚಂದ ಬರೆದಿರಿ. ಒಂದು ಕಾಲಕ್ಕೆ ಹೋಗಿಬಂದಾಂಗಾತುಚಂದ ಬರೆದಿರಿ. ಒಂದು ಕಾಲಕ್ಕೆ ಹೋಗಿಬಂದಾಂಗಾತು

SURENDRA GS
SURENDRA GS
10 years ago

ತಾಂತ್ರಿಕತೆ ಬದುಕಿನಲ್ಲಿ ಸೇರಿದಾಗ  ಬದುಕು ಆರಾಮದಾಯಕವಾಗಿರುತ್ತದೆ. ಆದರೆ ಬದುಕೇ ತಾಂತ್ರಕತೆ ಮತ್ತು ತಂತ್ರವಾದರೆ ಇವತ್ತಿನ ಮದುವೆಗಳು ರಾತ್ರಿ  ಒಂದು ರೀತಿ .ಬೆಳಗ್ಗೆ ಒಂದು ರೀತಿ  ದಿನಾ ಸಾಯುವವರಿಗೆ ಅಳುವವರು ಯಾರು ಎನ್ನುವ ರೀತಿ ಆಗಿರುತ್ತದೆ ಎನ್ನುವ ಸಂದೇಶ ತಮ್ಮ ಲೇಖನದಲ್ಲಿ ಚೆನ್ನಾಗಿ  ಮುಡಿ ಬಂದಿದೆ.

 

ಸುರೇಂದ್ರ. ಜಿ.ಎಸ್.

7
0
Would love your thoughts, please comment.x
()
x