ನಮ್ಮ ಹಳ್ಳಿಗಳಲ್ಲಿ ಇನ್ನೂ ಕತೆ ಕೇಳುವ ಮತ್ತು ಹೇಳುವ ಹಂಬಲ ಕಮ್ಮಿಯಾಗಿಲ್ಲ. ಎಷ್ಟೋ ಕಥನಗಳು ಕಟ್ಟೆಯ ಮುಶೈರಾಗಳಲ್ಲಿ ಹಾಗೆ ಉಳಿದಿದ್ದಾವೆ ಎಂದರೆ ಉತ್ತರಕ್ಕಾಗಿ ಮಾಯಾಪೆಟ್ಟಿಗೆಯ ಕಡೆ ನೋಡಬೇಕಾಗುತ್ತದೆ. ಅಲ್ಲಿನ ಆರಂಭದ ಅಪಲಾಪದಿಂದ ಹಿಡಿದು ಜಾಹಿರಾತಿನ ತುಣುಕು ಸುರುವಾಗುವತನಕ ನೆಟ್ಟನೋಟದಿಂದ ಆಚೀಚೆ ಸರಿದಾಡದೇ ಕುಳಿತುಬಿಡುವವರ ವಯಸ್ಸಿಗೆ ನಿರ್ಬಂಧವೇ ಇಲ್ಲ. ಹಾಗೆ ನೋಡುವವರ ಮತ್ತು ನೋಡಿಸಿಕೊಳ್ಳಲ್ಪಡುವವರ ಕುರಿತು ವ್ಯವಹಾರಿಕ ಅಧ್ಯಯನ ಏನೇ ಹೇಳಿರಲಿ ಅಲ್ಲಿ ಸಹಜ ಅನುಕಂಪಗಳೇ ಬಂಡವಾಳವಾಗುತ್ತ ಹೋಗುವ ರೀತಿ ಮಾತ್ರ ಸಮಾಜದ ಆಂತರಿಕ ಸ್ಥಿರತೆಗೆ ಪೆಟ್ಟುಕೊಡುವುದಂತೂ ಖಚಿತ. ಕನವರಿಸಲು, ಸ್ವಗತಗಳನ್ನು ಹೇಳಿಕೊಳ್ಳಲು ಹಿನ್ನೆಲೆಯಾಗಿ ಒದಗಿಬರುವ ಸಂಗೀತವೂ, ಅಚ್ಚುಕಟ್ಟಾಗಿ ತೋರಿಸಲ್ಪಡುವ ವೈಭವಯುತ ದೃಶ್ಯಗಳೂ ಮತ್ತು ಮಾತುಗಳನ್ನು ಅಳೆದು ತೂಗಿ ಮಾತಾಡುವ ವಿಧಾನವಂತೂ ಅಸಹಜವಾದ ಜಗತ್ತನ್ನು ಸೃಷ್ಟಿಸುತ್ತಿರುತ್ತದೆ. ಆ ವಲಯದ ನಿಲುವು ಪಕ್ಕ ಟಿ.ಆರ್.ಪಿ ಆಧರಿಸಿಯೇ ನಿರ್ಮಿತವಾಗುವುದರಿಂದ ಅವಾಸ್ತವಿಕ ಕಥನಗಳನ್ನು ಸಹಜವಾಗಿಸುತ್ತವೆ. ಹಾಗಾಗಿ ಮಹಾಕಾವ್ಯಗಳು ನಿರೂಪಿಸಿದ್ದ ಸಾಮಾಜೋ ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ ಸಂವಾದಗಳು ನಾಗರೀಕ ವಲಯದಿಂದ ಮಾಯವಾಗುತ್ತ, ಸಾಧುವಲ್ಲದ ಸಾಂಸ್ಕೃತಿಕ ಪ್ರತಿಮೆಗಳು ತಲೆಎತ್ತುತ್ತಿರುವುದಕ್ಕೆ ಆಶ್ಚರ್ಯಪಡಬೇಕಾಗಿಲ್ಲ.
ಇನ್ನು ಚಲನಚಿತ್ರದ ಜನಪ್ರಿಯ ಮಾದರಿಗಳಂತೂ ವಿಚಿತ್ರವಾದ ಸಾಹಸಿಯ ದೃಶ್ಯ ಸಾಮ್ರಾಜ್ಯದಲ್ಲಿ, ಕಲ್ಪನಾತೀತ ಲೋಲುಪತೆಯಲ್ಲಿ ಪ್ರೇಕ್ಷಕನನ್ನು ಧ್ಯಾನಮಗ್ನಗೊಳಿಸಿ ವಾಸ್ತವದ ಅರಿವಿನ ವಿಸ್ತಾರವನ್ನು ಕುಗ್ಗಿಸುವ ಸಾಂಸ್ಕೃತಿಕ ಸಂಕುಚಿತತನದ ಕೆಲಸವನ್ನು ಭರಾಟೆಯಿಂದಲೇ ಮಾಡುತ್ತ ಬಂದಿವೆ.
ಆದರೆ… ಸಮಾಜೋ ಸಾಂಸ್ಕೃತಿಕ ಪ್ರಜ್ಞೆ ಅನ್ನೋದು ಯಾವತ್ಕಾಲಕ್ಕೂ ಸಮಾಜದ ಓರೆಕೋರೆಗಳನ್ನು ತಿದ್ದುವುದಕ್ಕಿಂತ ಆ ಕುರಿತಾದ ಅನುಮಾನ ಅಸಮಾಧಾನಗಳನ್ನು ಹುಟ್ಟುಹಾಕುವ ಮೂಲಕ ಮನುಷ್ಯನ ಅಂತಃಶಕ್ತಿಯನ್ನು ಜಾಗೃತಗೊಳಿಸುತ್ತದೆ. ಆ ಸಾಧ್ಯತೆಗಳನ್ನು ಭವಿಷ್ಯತ್ತಿನ ಚಲಚ್ಚಿತ್ರಗಳಲ್ಲಿ ಕಾಣುತ್ತೇವೆ. ಸೂಕ್ಷ್ಮಬಾವಗಳು ಕೂಡ ತೀಕ್ಷ್ಣ ಸಂವೇದನೆಯ ಮೊನಚನ್ನು ಹೊಂದಿರುತ್ತವೆ. ಅಂಥ ಸಿನೇಮಾಗಳನ್ನು ಕನ್ನಡದ ಪ್ರೇಕ್ಷಕರಿಗೆ ಕೊಡುವ ಒಂದು ಗುಂಪು ಸದಾ ಕ್ರಿಯಾಶೀಲವಾಗಿ ತೊಡಗಿಕೊಂಡಿರುವುದು ಸಂತಸದ ಸಂಗತಿ. ಕನ್ನಡದ ಸಾಹಿತ್ಯಿಕ ಕೃತಿಗಳನ್ನಾಯ್ದು ಸದಭಿರುಚಿಯ ಚಿತ್ರಗಳನ್ನು ನಿರ್ಮಿಸುವ ಈ ಗುಂಪು ಸಹಿತ ಪ್ರಶಸ್ತಿಯ ಗರಿಗಾಗಿ ಕೆಲಸ ಮಾಡುತ್ತವೆ ಎಂದು ಓರೆಗಣ್ಣಲ್ಲಿ ನೋಡಿಸಿಕೊಳ್ಳುತ್ತವೆ. ಆದರೆ ಆ ಸೃಜನಶೀಲ ಕೆಲಸಕ್ಕಾಗಿ ಬೇರೆಲ್ಲ ಮಾದರಿಯ ಜನಪ್ರಿಯಗಳನ್ನು ನಗಣ್ಯಗೊಳಿಸಿ ಜನಪರವಾದ ರೀತಿಯಲ್ಲಿ ಕಲಾಕೃತಿಗಳನ್ನು ಕಟ್ಟುತ್ತಾರೆ. ಅವರ ಚಲನಚಿತ್ರಗಳು ಕಥೆಯ ಸಂವಿಧಾನವನ್ನು ಮೀರಿದ ಆಯಾಮಗಳನ್ನು ಸೃಷ್ಟಿಸುತ್ತವೆ. ಆ ಕಾರಣಕ್ಕಾಗಿಯೇ ಕನ್ನಡ ಕಲಾಪ್ರಪಂಚವನ್ನು ಇನ್ನಷ್ಟು ವಿಸ್ತರಿಸುವ ಕೆಲಸ ಮಾಡುವ ಸಿನೆಮಾಗಳಾಗಿ ಸಹೃದಯರ ಮನಸ್ಸನ್ನು ಸೂರೆಗೊಳ್ಳುತ್ತವೆ. ಅಂಥ ಚಿತ್ರಗಳ ಪರಂಪರೆ ಇದ್ದಾಗ್ಯೂ ಕನ್ನಡದಲ್ಲಿ ಜನಪ್ರಿಯ ಮಾದರಿಯಲ್ಲಿ ಬರುವ ಚಿತ್ರಗಳು ಯಾವ ಸಂವೇದನೆಯನ್ನು ಕಟ್ಟುತ್ತಿವೆ ಅನ್ನುವುದು ಪ್ರಶ್ನೆಯಾಗಿದೆ..?
ಚಲನಚಿತ್ರಗಳು ಸದಭಿರುಚಿ ಬೆಳೆಸಬೇಕಾದ ಸಂದರ್ಭದಲ್ಲಿಯೇ ಆಡಳಿತಶಾಹಿಯ ಅಪೇಕ್ಷೆಗೆ ತಕ್ಕಂತೆ ಮೈಮರೆಸುವ ತಂತ್ರವನ್ನಷ್ಟೆ ಪೋಷಿಸಲಾರಂಭಿಸಿದವು. ಆ ಕಾರಣಕ್ಕಾಗಿಯೇ ಕರ್ತೃ, ಕೃತಿ(ಕಲೆ), ಪ್ರೇಕ್ಷಕರ ಟ್ರಯಾಂಗಲ್ ನಡುವೆ ವ್ಯವಸ್ಥಿತ ಹುನ್ನಾರವೊಂದು ತನ್ನ ಅಭಿಪ್ರಾಯ ರೂಪಿಸಲೋಸುಗ ಕಲಾಭಿರುಚಿಯನ್ನು ತನ್ನ ಆಶಯದಂತೆ ರೂಪಿಸತೊಡಗಿತು. ಅಲ್ಲಿನ ವಿರಾಮಗಳ ನಂತರದ ಕಥನ ಪಲ್ಲಟದ ಸಿನಿಮೀಯ ಗುಣ ಮತ್ತು ಎರಡು ಗಂಟೆಗಳ ಕಾಲ ಪ್ರೇಕ್ಷಕನೊಳಗೆ ಯಾವ ಪ್ರಶ್ನೆಗಳು – ಸಂಕಷ್ಟಗಳೂ ಅನುಭವಕ್ಕೆ ಬಾರದಂತೆ ಹಿಡಿದಿಟ್ಟುಕೊಳ್ಳುವ ಕಥಾಹಂದರದಲ್ಲಿ ಚಿತ್ರ ತಯಾರಾದರೆ ಅದೊಂದು ಭ್ರಮಾಜಗತ್ತಿನ ಸಮ್ಮೋಹನ ತಂತ್ರವೇ ಅನ್ನಬೇಕು, ಚಿತ್ರಮಂದಿರದ ಹೊರಗೆ ಕಾಲಿಡುತ್ತಿದ್ದಂತೆಯೇ ಹೊರಬೆಳಕಿನ ಪ್ರಖರತೆಯಲ್ಲಿ ಚಿತ್ರದ ಅನುಭವ ಬರೀ ಚಾಕಚಕ್ಯೆತೆಯ ಸ್ಟೋರಿಯಾಗಿ ತಲೆಯಲ್ಲಿ ಉಳಿಯುವುದರಿಂದ ಅದರ ಕೀಳು ಮನೋರಂಜನೆ ಕ್ಷಣದ ಸಂತೋಷವನ್ನು ನೀಡುತ್ತದೆ. ಆದರೆ ಆ ಶೈಲೀಕೃತ ಬದುಕು ನೋಡುಗನ ವರ್ತನೆಗಳನ್ನು ಬದಲಿಸುತ್ತ, ಆಸೆ-ಭಾಷೆಗಳನ್ನು ಜಾಗತಿಕ ಬದುಕಿನ ಸವಾಲುಗಳ ನಡುವೆ ತಂದು ನಿಲ್ಲಿಸುತ್ತದೆ. ಆಗ ಸಿನಿಮೀಯ ಗುಣಗಳು ನಾಗರೀಕ ಸಮಾಜದ ಸರ್ವೇಸಾಮಾನ್ಯ ಲಕ್ಷಣಗಳ ಹಾಗೆ ಗೋಚರಿಸತೊಡಗುತ್ತವೆ. ನಾವು ಯಾವದನ್ನು ಕಾಣಬೇಕಿತ್ತೋ ಅದನ್ನು ಕಾಣಿಸದೇ ಇರುವ ಸಾಂಸ್ಕೃತಿಕ ಲೋಕ, ನಮಗೆ ತೋರಿಸುವ ಚಿತ್ರಗಳ ಚಿತ್ರಕಶಕ್ತಿಯಲ್ಲಿ ಯಾವ ರಸಾನುಭವದ ಲವಲೇಶಗಂಧವೂ ಇರದಿದ್ದರೂ ವಿಕೃತ ಸಂತೋಷವನ್ನು ಅತಿರಂಜಿತವಾಗಿ ನೀಡುವ ಮುಖೇನ ಅದು ಮೈಮರೆಸುತ್ತದೆ. ಆ ಮೈಮರೆವಿನಲ್ಲಿ ವಾಸ್ತವದ ಲಕ್ಷಣಗಳು ಮಾಯವಾಗುತ್ತ ನೋಡುವ ಭ್ರಮೆಯನ್ನು ಮಾತ್ರ ನಮ್ಮದಾಗಿಸಿ ವ್ಯವಸ್ಥೆಯ ಕುರೂಪಗಳನ್ನು ಮುಚ್ಚಿಹಾಕುತ್ತದೆ. ಆಗ ನೋಡುಗನ ಪ್ರತಿನಿಧಿಯಾಗಿ ಪಾತ್ರಗಳು ಮೂಡುವುದಿಲ್ಲ, ಪಾತ್ರಧಾರಿಯ ಪ್ರತಿನಿಧಿಯಾಗಿ ನೋಡುಗ ತನ್ನತನ ಬಿಟ್ಟುಕೊಡುತ್ತಾನೆ. ಹೀಗೆ ಪರಿಣಾಮ ಬೀರುವ ಚಿತ್ರಗಳು ನಮಗೆ ಬೇಕೇ… ? ಜನಪರ ಚಿತ್ರಗಳನ್ನು ನೋಡುವ ಮನಸ್ಸುಗಳ ಮೌನದಲ್ಲಿ ಸಮೃದ್ಧ ಸಾಂಸ್ಕೃತಿಕ ರೂಪು ಮೂಡುತ್ತದೆ. ಅಂಥ ಚಿತ್ರಗಳನ್ನು ಹುಡುಕಿಕೊಂಡು ಹೋಗಿ ನೋಡಬೇಕಾದ ಮನಃಸ್ಥಿತಿ ಕನ್ನಡದಲ್ಲಿದ್ದರೂ ಅಂಥ ಚಿತ್ರಗಳು ಚಿತ್ರಮಂದಿರದಲ್ಲಿ ಬಿಡುಗಡೆ ಆಗದಿರುವುದು ದುರಂತ.
ಆದರೆ ಇವತ್ತಿನ ಚಲನಚಿತ್ರ ಮಾಧ್ಯಮದ ಜನಪ್ರಿಯತೆ ಯಾವ ಮಾದರಿಯ ಅಭಿರುಚಿಯನ್ನು ಪ್ರೇರೇಪಿಸುತ್ತಿದೆ? ಯಾಕಾಗಿ ಇಂಥ ಕಥಾ ಮಾದರಿಗಳನ್ನು ದೃಶ್ಯೀಕರಿಸಿ ಜನರ ಸಹೃದಯತೆಯನ್ನು ಹಾಳುಗೆಡುವುತ್ತಿದೆ, ಇಂಥ ಚಲನಚಿತ್ರಗಳು ಸಮುದಾಯದ ಆಳದ ನೋವನ್ನು ಮರೆಮಾಚುವ ಕಾರಣವಾದರೂ ಏನು? ಇದೆಲ್ಲದರ ಹಿಂದೆ ಕಾರ್ಪೋರೇಟ್ ಜಗತ್ತಿನ ಆಶಯಗಳು ಕೆಲಸ ಮಾಡುತ್ತಿರುವುದಂತೂ ಸ್ಪಷ್ಟವಾಗಿವೆ.
ಸಮಕಾಲೀನ ಬದುಕಿನ ಯಾವ ಮಜಲನ್ನೂ ತೋರದ ಮತ್ತು ರಂಜನೆಯನ್ನೇ ವೈಭವೀಕರಿಸಿ ನಿರ್ಮಿಸುವ ಚಿತ್ರಗಳ ತಾಂತ್ರಕತೆಗೆ ಬೆಕ್ಕಸ ಬೆರಗಾಗಿ ಹೋಗುವ ಶ್ರೀಸಾಮಾನ್ಯನ ಜೀವನೋತ್ಸಾಹದಲ್ಲಿ ಬರೀ ಸಿನಿಮೀಯ ಗುಣಗಳೇ ಇಂದು ಅವ್ಯಾಹತವಾಗಿ ಕಾಣಿಸಿಕೊಳ್ಳುತ್ತಿವೆ. ದಾರ್ಷ್ಟ್ಯ, ಆನಂದ, ಅನುಕಂಪ, ಆದರ್ಶ, ದುಷ್ಟತನ, ಕೇಡು-ಸೇಡು, ಶಿಷ್ಟ, ಅತಿರಂಜನೆ, ಹುಸಿಭಾವದ ಗಾಯನ ಮತ್ತು ಕ್ರೌರ್ಯವನ್ನೇ ಕಥೆಯಾಗಿಸುವ ಚಿತ್ರಗಳ ಜನಪ್ರಿಯತೆಯ ಮಗ್ಗುಲಿನ ಪಥದಲ್ಲಿ ನೈಜ ಬದುಕಿನ ಕಲಾ ಕೌಶಲ್ಯವೂ ಕನ್ನಡ ಸಿನೇಮಾದಲ್ಲಿ ತಾಳಿಕೊಂಡು ಬಾಳಿ ಬದುಕಿ ಬಂದಿದೆ. (ತಾಳಿಕೆ ಅನ್ನುವುದು ಜನಪ್ರಿಯ ಉನ್ಮಾದದಲ್ಲಿ ಕೊಚ್ಚಿಕೊಂಡು ಹೋಗದೆ ಇರುವ ಕಾರಣಕ್ಕಾಗಿ ಬಳಸಿರುವ ಪದ) ಸತ್ಯವಾದ ಕಲೆಯು ಸಾಯುವುದಿಲ್ಲ ಎಂಬಂತೆ ಇಂದಿಗೂ ಕಲಾತ್ಮಕ ಮಾರ್ಗದ ಚಲನಚಿತ್ರಗಳು ಹತ್ತಾರು ಪ್ರಶ್ನೆಗಳನ್ನು ದಿನದ ಬದುಕಿನೊಂದಿಗೆ ಕೆದಕುತ್ತಲಿರುತ್ತವೆ. ಅಂಥ ಮಾನವೀಯ ಕಾಳಜಿಗಳುಳ್ಳ ಚಿತ್ರಗಳು ಹೆಚ್ಚೆಂದರೆ ವರ್ಷದಲ್ಲಿ ಒಂದೋ ಎರಡೋ ಬರುತ್ತಿವೆ. ನೈಜ ಅಭಿವ್ಯಕ್ತಿಯ ಆ ಚಿತ್ರಕತೆಗಳು, ಚಿತ್ರದ ಚೌಕಟ್ಟು, ಚಿತ್ರದ ಪರಿಣಾಮಗಳು ಸಾಮಾನ್ಯನ ಸಂವೇದನೆಯನ್ನು ಚುರುಕುಗೊಳಿಸುತ್ತ ಸಮಕಾಲೀನ ಜೀವನದ ವಾಸ್ತವಾಂಶಗಳನ್ನು ನೋಡುಗನ ಕಣ್ನಲ್ಲಿ ಪುನರ್ ಸೃಷ್ಟಿಸುತ್ತ – ಅಂತರಂಗದೊಂದಿಗೆ ಪ್ರೇಕ್ಷಕ ಸಂವಾದ ಮಾಡುವ ಹಾಗೆ ಸಿನಿಮಾ ಕಲೆಯನ್ನು ಕಾವ್ಯವಾಗಿಸಿರುವ ಬಗೆ ಅದ್ಭುತವಾಗಿದೆ.
ಕಲಾತ್ಮಕ ಮಾದರಿಯು ಸಮಾಜಕ್ಕೆ ಕನ್ನಡಿಯಾದಾಗ ಭಾವತಲ್ಲೀನತೆಯಲ್ಲೂ ಭಾವಶೋಧನೆ ಸಾಧ್ಯವಾಗುತ್ತದೆ. ಆ ಮಾರ್ಗದಲ್ಲಿ ಅವಿರತವಾಗಿ ಕೆಲಸ ಮಾಡುತ್ತಿರುವ ನಿರ್ದೇಶಕರು ಕನ್ನಡದ ಸಮಸ್ತ ಪ್ರೇಕ್ಷಕರನ್ನು ಬಹುವಾಗಿ ಮುಟ್ಟಲು ಸಾಧ್ಯವಾಗಿರಲಿಕ್ಕಿಲ್ಲ ಆದರೆ ಹೃದಯಸ್ಪರ್ಶಿಯಾದ ಕಲಾಮಾರ್ಗ ಒಂದಿಲ್ಲೊಂದು ದಿನ ಜನಸಾಮಾನ್ಯನ ಸರಳಗ್ರಹಿಕೆಗೆ ನಿಲುಕುವುದಂತೂ ಖಚಿತವಾಗಿರುತ್ತದೆ. ಕ್ರಿಯಾಶೀಲ ಮನಸ್ಸುಗಳಿಗೆ ಬರೀ ಗುರಿ ತಲುಪುವುದೇ ಉದ್ಧೇಶವಾಗಿರಲಾರದು: ಗುರಿ ಮುಟ್ಟಿದ ನಂತರದ ಸವಾಲು ಎದುರಿಸುವುದು ಆತ್ಮತೃಪ್ತಿಯನ್ನು ನೀಡಬಲ್ಲದಾಗಿರುತ್ತದೆ. ಸವಾಲಿಗೆ ಜವಾಬು ಕೊಡುವುದಾದರೆ ಆತ ತುಂಬು ಪ್ರಯೋಗಶೀಲನಾಗಿರಬೇಕು. ಅಂದಾಗ ಮಾತ್ರ ಉತ್ಕಟ ಭಾವಪ್ರಪಂಚ ತೆರೆದುಕೊಳ್ಳಲು ಸಾಧ್ಯವಾಗುತ್ತದೆ. ಆ ತೀವ್ರ ಸಂವೇದನೆ ಸಾಹಿತ್ಯದ ಸಹವಾಸದಿಂದ ಸಿಗುವ ಕಾರಣಕ್ಕೊ ಏನೋ ಕನ್ನಡದ ಮಾರ್ಗೀಯ ನಿರ್ದೇಶಕರುಗಳೆಲ್ಲ ಹೆಚ್ಚಾಗಿ ಸಾಹಿತ್ಯಕೃತಿಗಳನ್ನೇ ಆಯ್ದುಕೊಂಡು ಆ ಮೌಲೀಕೃತ ಕೃತಿಗಳ ಬಹು ಆಯಾಮದ ಹೊಸ ಹೊಳವುಗಳೊಡನೆ ಸಿನೇಮಾ ಮಾಡುತ್ತ ಬಂದಿದ್ದಾರೆ. ಕತೆಯ ಬಂಧದ ರೂಪಕಾತ್ಮಕ ಭಾಗಗಳು ಚಿತ್ರಕತೆ ಆಗುವಷ್ಟರಲ್ಲಿ ಹೊಸದೇ ಆಕಾರ ಪಡೆದುಕೊಂಡು ಕತೆಗಿಂತಲೂ ಭಿನ್ನವಾದ ದೃಶ್ಯಕಾವ್ಯಗಳಾಗಿ ಹೊಸ ಕಲ್ಪನೆಯ ಸಂಕೆತಗಳಾಗಿ, ಪ್ರತಿಮೆಗಳಾಗಿ ಚಲನಚಿತ್ರಗಳಲ್ಲಿ ಕಾಣಿಸಿರುವುದು ಗಿರೀಶ ಕಾಸರವಳ್ಳಿಯವರ ಸಿನೇಮಾಗಳ ವಿಶೇಷತೆಯಾಗಿದೆ.
ಸದಭಿರುಚಿ ಬೆಳೆಸಬೇಕಾಗಿಲ್ಲ ಬೆಳೆಯಬೇಕು. ಆಗ ಮಾತ್ರ ಮಾರ್ಗದ ಶಾಸ್ತ್ರೀಯತೆ ಅಮರತ್ವದ ಕಡೆಗೆ ನಡೆಯುತ್ತದೆ. ಅಂಥ ಕ್ಲಾಸಿಕ್ ಸಿನಿಮಾಗಳನ್ನು ಹಳ್ಳಿ-ಹಳ್ಳಿಯ ಜನ ಬಹುವಾಗಿ ಮೆಚ್ಚಿಕೊಳ್ಳುತ್ತಿರುವುದನ್ನು ನೋಡಿದಾಗ ಮುಖ್ಯವಾಹಿನಿಯ ಅಲ್ಪಾಯುಷ್ಯದ ಚಿತ್ರಗಳಿಗಿಂತಲೂ ಅಧಿಕವಾಗಿ ಕಲಾತ್ಮಕ ನಿರೂಪಣೆ(ಸಿಂಹಾವಲೋಕನ) ಮಾದರಿಯ ಸಿನೇಮಾಗಳು ಹಳ್ಳಿಗಳನ್ನು ಮುಟ್ಟಬೇಕು ಎಂದೆನಿಸುತ್ತದೆ. ಹಳ್ಳಿಚಿತ್ರೋತ್ಸವಗಳು ಹೆಚ್ಚೆಚ್ಚು ಆಗುವ ಮೂಲಕ ಮತ್ತು ಊರಿನ ಹಲವು ಸಮಾಜದ ಸಮೂಹದೊಟ್ಟಿಗೆ ಈ ಸಿನೆಮಾ ನೋಡುವಂತಾದರೆ ಮಾತ್ರ ಸಮಷ್ಟಿಪ್ರಜ್ಞೆಯನ್ನು ನಾಗರೀಕ ಮೌಲ್ಯಗಳೊಂದಿಗೆ ಜಾಗೃತವಾಗಿಡಲು ಸಾಧ್ಯವಾಗುತ್ತದೆ.
good
nice article
ಮಾದೇವಣ್ಣಾ…ನಿಮ್ಮ ಲೇಖನ ಚೆನ್ನಾಗಿದೆ ! ವಂದನೆಗಳು
ಸಿನಿಮಾ ವಿದ್ಯಾರ್ಥಿಗಳು ಜರೂರಾಗಿ ಓದಲೇ ಬಕಾದ ಬರಹ