ಯುದ್ಧವೆಂದರೆ ಬರೀ ಸೋಲು ಗೆಲುವಲ್ಲ: ವಾಸುಕಿ ರಾಘವನ್

ನಮ್ಮಲ್ಲಿ ಯುದ್ಧದ ಸಿನಿಮಾಗಳೇ ಬಹಳ ಅಪರೂಪ. ಐತಿಹಾಸಿಕ ಚಿತ್ರವಾದರೆ ಯುದ್ಧ ಅಂದರೆ ರಾಜರ ಕಾಲದ ಕಾಸ್ಟ್ಯೂಮ್ ಧರಿಸಿ ಮಾಡುವ ಫೈಟಿಂಗ್ ಅಷ್ಟೇ. ಈಗಿನ ಕಾಲದ ಕಥೆ ಆಗಿದ್ದರೆ ಅದು ಯಾವುದಾದರೊಂದು ಯುದ್ಧದ ಡಾಕ್ಯುಮೆಂಟರಿ ಥರ ಇರುತ್ತೆ. ಜೊತೆಗೆ ಅದೇ ಕ್ಲೀಷೆಗಳು – ಮಗನ ಬರುವಿಕೆಗಾಗಿ ಕಾಯುತ್ತಿರುವ ವಿಧವೆ ಅಮ್ಮ, ಪರ್ಸಿನಲ್ಲಿ ಇರೋ ಹೆಂಡತಿ ಫೋಟೋ ನೋಡ್ತಾ ಸಾಯೊ ಸೈನಿಕ, ಯೋಧರು ಅಂದರೆ ಬರೀ ಒಳ್ಳೆಯವರು ಅನ್ನೋ ಭಾಷಣ. ನಮ್ಮಲ್ಲಿ anti-war ಸಿನಿಮಾಗಳು ಇಲ್ಲವೇ ಇಲ್ಲ. ಸ್ವಲ್ಪ ಮಟ್ಟಿಗೆ ನಮ್ಮ “ಮುತ್ತಿನ ಹಾರ” anti-war ಸಿನಿಮಾ ಅಂತ ಹೇಳಬಹುದು. ಈ anti-war ಚಿತ್ರಗಳಲ್ಲಿ ಯುದ್ಧವನ್ನು ಶೌರ್ಯ, ಸೋಲು-ಗೆಲುವು ಮುಂತಾದ ಆಯಾಮಗಳಿಂದ ನೋಡುವುದಿಲ್ಲ – ಬದಲಿಗೆ ಯುದ್ಧದ ಭೀಕರತೆ, ಮನುಷ್ಯನ ಕ್ರೌರ್ಯ, ಮಾನಸಿಕವಾಗಿ ಘಾಸಿಗೊಳ್ಳುವುದು, ಸಂಬಂಧಗಳಲ್ಲಿ ಮೂಡುವ ಬಿರುಕುಗಳು ಮುಂತಾದ ಅಂಶಗಳ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತೆ. ನಿರಾಶಾವಾದದ ಮೊರೆ ಹೋಗುವ ಈ ಚಿತ್ರಗಳು ನೈಜ ಚಿತ್ರಣದಿಂದ ನಮ್ಮನ್ನು ಆಕರ್ಷಿಸುತ್ತವೆ. ನಂಗೆ ತುಂಬಾ ಪ್ರಿಯವಾದ anti-war ಚಿತ್ರಗಳೆಂದರೆ “ಪಾತ್ಸ್ ಆಫ್ ಗ್ಲೋರಿ” ಮತ್ತು “ಅಪೋಕ್ಯಾಲಿಪ್ಸ್ ನೌ”.

ಪಾತ್ಸ್ ಆಫ್ ಗ್ಲೋರಿ
1957ರಲ್ಲಿ ಬಂದ ಸ್ಟಾನ್ಲಿ ಕ್ಯುಬ್ರಿಕ್ ನಿರ್ದೇಶನದ ಈ ಚಿತ್ರ ಬಹುಶಃ ತುಂಬಾ ಹಳೆಯ anti ವಾರ್ ಚಿತ್ರಗಳಲ್ಲಿ ಒಂದಿರಬೇಕು. ಕಿರ್ಕ್ ಡಗ್ಲಾಸ್ ನಟನೆಯ ಈ ಕಪ್ಪು ಬಿಳುಪಿನ ಚಿತ್ರದ್ದು ಮೊದಲನೇ ವಿಶ್ವಯುದ್ಧದ ಸಮಯದ ಕಥೆ.

ಕಮ್ಯಾಂಡರ್ ಜಾರ್ಜ್ ತನ್ನ ಬ್ರಿಗೇಡಿಯರ್ ಪೌಲ್ ಗೆ ಜರ್ಮನ್ ಸೈನ್ಯದ ಬಿಗಿಹಿಡಿತದಲ್ಲಿರುವ “ಆಂಟ್-ಹಿಲ್” ಅನ್ನು ವಶಪಡಿಸಿಕೊಳ್ಳಬೇಕೆಂದು ಆಜ್ಞಾಪಿಸುತ್ತಾನೆ. ಅಸಾಧ್ಯವಾದ ಈ ಕೆಲಸಕ್ಕೆ ಮೊದಲು ಒಪ್ಪದಿದ್ದರೂ ಪ್ರಮೋಷನ್ ಆಸೆ ತೋರಿಸಿದಾಗ ಪೌಲ್  ಒಪ್ಪುತ್ತಾನೆ. ಪೌಲ್ ತನ್ನ ಅನುಯಾಯಿ ಕರ್ನಲ್ ಡ್ಯಾಕ್ಸ್ (ಕಿರ್ಕ್ ಡಗ್ಲಾಸ್) ಗೆ ಈ ಆದೇಶವನ್ನು ತಿಳಿಸುತ್ತಾನೆ. ಡ್ಯಾಕ್ಸ್ ಇದರಿಂದ ನಮ್ಮ ಸಂಖ್ಯಾಬಲ ಕಮ್ಮಿ ಆಗುತ್ತದೆ ಹೊರತು ಏನೂ ಗಳಿಸಿದಂತೆ ಆಗಲ್ಲ ಅಂತ ತಿಳಿಹೇಳಲು ಪ್ರಯತ್ನಿಸಿದರೂ, ಕಡೆಗೆ ನಿಸ್ಸಹಾಯಕನಾಗಿ ಆದೇಶವನ್ನು ಪಾಲಿಸಬೇಕಾಗುತ್ತದೆ.

ಆಕ್ರಮಣದ ದಿನ ಮೊದಲ ತುಕಡಿ ವೈರಿಗಳ ತೀವ್ರ ಗುಂಡಿನ ದಾಳಿಯಲ್ಲಿ ಸಾಯುತ್ತಾರೆ. ಗುಂಡಿನ ದಾಳಿ ಎಷ್ಟು ಜೋರಾಗಿರುತ್ತೆ ಅಂದರೆ ಎರಡನೇ ತುಕಡಿಗೆ ಹಳ್ಳದಿಂದ ಆಚೆ ಬರಲು ಆಗೋದೇ ಇಲ್ಲ. ಈ ಸೋಲಿನಿಂದ ಕೋಪಗೊಂಡ ಪೌಲ್ ಇಡೀ ಎರಡನೇ ತುಕಡಿಯನ್ನು ಕೋರ್ಟ್ ಮಾರ್ಷಲ್ ಮಾಡಲು ಮುಂದಾಗುತ್ತಾನೆ. ಆದರೆ ಜಾರ್ಜ್ ಅಷ್ಟೊಂದು ಕಠೋರ ನಿರ್ಧಾರ ಬೇಡ, ಬದಲಿಗೆ ಯಾರಾದರೂ ಮೂರು ಜನರ ಮೇಲೆ ಹೇಡಿತನದ ಆರೋಪ ಹೊರಿಸಿ ಕ್ರಮ ತೆಗೆದುಕೊಂಡರೆ ಅದು ಬೇರೆ ಸೈನಿಕರಿಗೂ ಪಾಠ ಕಲಿಸಿದಂತೆ, ಕುಗ್ಗಿಹೋಗಿರುವವರಿಗೆ ಉತ್ತೇಜನ ಸಿಕ್ಕಂತೆ ಕೂಡ ಎನ್ನುತ್ತಾನೆ. ಈ ಮೂವರಲ್ಲಿ ಒಬ್ಬನನ್ನು ಚೀಟಿ ಎತ್ತುವುದರ ಮೂಲಕ ಆಯ್ದುಕೊಳ್ಳಲಾಗುತ್ತೆ – ವಿಪರ್ಯಾಸ ಅನ್ನುವಂತೆ ಅವನು ಹಿಂದೆ ಎರಡು ಸಲ ಶೌರ್ಯಕ್ಕೆ ಪ್ರಶಸ್ತಿಯನ್ನು ಪಡೆದಿರುತ್ತಾನೆ. ಇನ್ನೊಬ್ಬ ಬೇರೆ ಸೈನಿಕರೊಂದಿಗೆ ಸರಿಯಾಗಿ ಬೆರೆಯುವುದಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಆಯ್ಕೆ ಆಗ್ತಾನೆ. ಮೂರನೆಯವನು ತನ್ನ ಆಫೀಸರ್ ಅಚಾತುರ್ಯದಿಂದ ಒಬ್ಬ ಸೈನಿಕ ಸತ್ತಿದ್ದ ಅನ್ನೋ ವಿಷಯ ಗೊತ್ತಿರುವ ಕಾರಣಕ್ಕೆ ಆಯ್ಕೆ ಆಗ್ತಾನೆ. ಈ ಮೂರೂ ಜನರನ್ನ ಪರ ವಾದ ಮಾಡಲು ಡ್ಯಾಕ್ಸ್ ಬರುತ್ತಾನೆ. ಆದರೆ ನೆರೆದಿರೋ ಕೋರ್ಟ್ ಬರೀ ಒಂದು ಕಣ್ಣು ಒರೆಸುವ ತಂತ್ರ ಅಷ್ಟೇ. ಹೊರನೋಟಕ್ಕೆ ಎಲ್ಲರೂ ಒಂದೇ ದೇಶಕ್ಕಾಗಿ, ಒಂದೇ ಉದ್ದೇಶಕ್ಕಾಗಿ ಹೋರಾಡುತ್ತಾರೆ ಅಂತ ಅನಿಸಿದರೂ, ಅದರ ಹಿಂದೆ ಇರಬಹುದಾದ ಸಮಯಸಾಧಕತನ, ನೀಚಬುದ್ಧಿ, ಸಣ್ಣತನಗಳು, ವಿಧೇಯತೆಯ ಪರಿಸರದಲ್ಲಿ ‘ಸರಿ’ಯ ಪಕ್ಷ ವಹಿಸಲಾಗದ ಅಸಹಾಯಕತೆ – ಇವುಗಳ ಪರಿಚಯ ಮಾಡಿಸೋ ಈ ಮನಕಲಕುವ ಚಿತ್ರವನ್ನು ಒಮ್ಮೆ ನೋಡಲೇಬೇಕು.

ಅಪೋಕ್ಯಾಲಿಪ್ಸ್ ನೌ
1979ರಲ್ಲಿ ಬಿಡುಗಡೆಯಾದ ಇದು ಕೇವಲ ಒಂದು ಚಿತ್ರವಲ್ಲ. ಇದು ಒಂದು ದೃಶ್ಯಕಾವ್ಯ, ಒಂದು ಅನೂಹ್ಯ ಸಿನಿಮಾ ಅನುಭವ. ‘ಗಾಡ್ ಫಾದರ್’ ಖ್ಯಾತಿಯ ಫ್ರಾನ್ಸಿಸ್ ಫೋರ್ಡ್ ಕೊಪೊಲ ನಿರ್ದೇಶನದ ಈ ಚಿತ್ರ ಪ್ರತೀ ವೀಕ್ಷಣೆಯಲ್ಲೂ ನನ್ನನ್ನು ಅಷ್ಟೇ ಬೆಚ್ಚಿಬೀಳಿಸುತ್ತೆ, ಗಾಢವಾದ ಚಿಂತನೆಗೆ ಹಚ್ಚುತ್ತೆ!

ಅದು ವಿಯೆಟ್ನಾಂ ಯುದ್ಧದ ಕಾಲ. ಅಮೆರಿಕಾದ ಸ್ಪೆಷಲ್ ಆಪರೇಶನ್ಸ್ ನ ಬೆಂಜಮಿನ್ ವಿಲ್ಲರ್ಡ್ ಗೆ ಅವನ ಮೇಲಧಿಕಾರಿಗಳು ಒಂದು ತುರ್ತು ಮಿಷನ್ ಒಂದರ ಬಗ್ಗೆ ತಿಳಿಸುತ್ತಾರೆ. ಅದೇನೆಂದರೆ ಕಾಂಬೋಡಿಯಾದಲ್ಲಿ ಅಡಗಿರುವ ಕರ್ನಲ್ ವಾಲ್ಟರ್ ಕರ್ಟ್ಸ್ ಅನ್ನು ಹುಡುಕಿ ಕೊಲ್ಲುವುದು. ಈ ವಾಲ್ಟರ್ ಅಮೆರಿಕಾದ ಸೈನ್ಯದಲ್ಲಿ ಕರ್ನಲ್ ಆಗಿರುತ್ತಾನೆ. ಬೇಗಬೇಗನೆ ಸೈನ್ಯದಲ್ಲಿ ಭಡ್ತಿ ಪಡೆದ ಅತ್ಯಂತ ಒಳ್ಳೆಯ ಸಿಪಾಯಿ. ಮುಂದೊಂದು ದಿನ ಸೈನ್ಯದ ಜನರಲ್ ಆಗುತ್ತಾನೆ ಎಂದು ಭರವಸೆ ಮೂಡಿಸಿದ್ದ ಪರಾಕ್ರಮಿ. ಆದರೆ ಅವನು ಯುದ್ಧದ ಸಮಯದಲ್ಲಿ ಒಂದು ರೀತಿಯಲ್ಲಿ ಮತಿ ಭ್ರಮಣೆಗೊಂಡು ತನ್ನ ಸೈನ್ಯದಿಂದ ಬೇರೆಯಾಗಿ ಕಾಂಬೋಡಿಯಾಗೆ ಹೋಗಿ ಅಲ್ಲಿ ಒಂದು ಬುಡಕಟ್ಟು ಜನರ ಗುಂಪಿಗೆ ನಾಯಕನಾಗಿ ತನ್ನದೇ ರೀತಿಯಲ್ಲಿ ಯುದ್ಧವನ್ನು ಮಾಡುತ್ತಿರುತ್ತಾನೆ ಮತ್ತು ಯಾರ ಕೈಗೂ ಸಿಗುವುದಿಲ್ಲ. ಇವನಿಂದ ಅಮೆರಿಕಾಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅವಮಾನ, ಹಾಗಾಗಿ ಅವನ್ನು ಮುಗಿಸಿಬಿಡುವ ಕೆಲಸವನ್ನು ಬೆಂಜಮಿನ್ ಗೆ ಒಪ್ಪಿಸುತ್ತಾರೆ.  

ಕರ್ಟ್ಸ್ ಅನ್ನು ಹುಡುಕಿಕೊಂಡು ಬೆಂಜಮಿನ್ ಬೇರೆ ಬೇರೆ ಆರ್ಮಿ ಯೂನಿಟ್ ಗಳ ಸಹಾಯದಿಂದ ಕಾಂಬೋಡಿಯಾ ಕಡೆಗೆ ಹೊರಡುತ್ತಾನೆ. ಚಿತ್ರದ ಸುಮಾರು ಮುಕ್ಕಾಲು ಭಾಗ ನಾವು ಕರ್ಟ್ಸ್ ಅನ್ನು ನೋಡೋದೇ ಇಲ್ಲ, ನಮಗೆ ಅವನ ಬಗ್ಗೆ ಗೊತ್ತಾಗೋದು ಬೆಂಜಮಿನ್ ಅವನ ಬಗ್ಗೆ ರಿಪೋರ್ಟ್ ಓದುವುದರ ಮೂಲಕ ಅಷ್ಟೇ. ಇದು ಬರೀ ಯುದ್ಧಭೂಮಿಯ ಪಯಣ ಅಷ್ಟೇ ಅಲ್ಲ, ಭಾವನಾತ್ಮಕ ಯಾತ್ರೆಯೂ ಹೌದು. ಹಿನ್ನೆಲೆಯಲ್ಲಿ ಪ್ರಕೃತಿಯ ರಮಣೀಯ ದೃಶ್ಯ, ಸ್ವರ್ಗವೇಕೆ ಅನ್ನುವಂತ ಪರಿಸರದ ಸೌಂದರ್ಯ, ಅದರ ನಡುವೆ ಮಾರಣಹೋಮ.

ಕರ್ಟ್ಸ್ ಎಂಬ ಅತ್ಯಂತ ಕ್ಲಿಷ್ಟ ಪಾತ್ರದಿಂದ ಇದು ಕೇವಲ ಒಂದು ಯುದ್ಧದ ಚಿತ್ರ ಆಗದೆ ಮನುಷ್ಯಸ್ವಭಾವದ ಒಂದು ಸುದೀರ್ಘ ಧ್ಯಾನದಂತೆ ಆಗಿದೆ! ಕರ್ಟ್ಸ್ ದು ಒನ್ ಲೈನ್ ಪಾತ್ರ – “ಅವನು ಯುದ್ಧದ ಭೀಕರತೆ, ಭೀಬತ್ಸ್ಯದ ಪ್ರತೀಕ” – ಅವನಿಗೆ ಹೆಚ್ಚಿನ ಸೀನ್ ಗಳು ಇಲ್ಲ, ದೊಡ್ಡ ಬ್ಯಾಕ್ ಸ್ಟೋರಿ ಇಲ್ಲ, ಆದರೂ ನಮ್ಮನ್ನು ಹಿಡಿದು ಕೂರಿಸಿಬಿಡುವಂತಹ ನಟನೆ ಮಾಡಿರುವ ಬ್ರಾಂಡೊ ನಿಜಕ್ಕೂ ಜೀನಿಯಸ್!

ಕೊನೆಯ ಮಾತು
ಯುದ್ಧ ಎಂದರೆ ಬರೀ ಸೋಲು ಗೆಲುವು ಅಲ್ಲ. ಯುದ್ಧದಿಂದ ಸಾಯೋದು ಬರೀ ಸೈನಿಕರು, ನಾಗರೀಕರು ಮಾತ್ರ ಅಲ್ಲ. ಯಾವುದೋ ಒಂದು ಮಟ್ಟದಲ್ಲಿ ಮನುಷ್ಯತ್ವವೇ ಸಾಯುತ್ತದೆ, ಮುಗ್ಧತೆ ಸಾಯುತ್ತದೆ, ನಂಬಿಕೆ ಸಾಯುತ್ತದೆ. ಯಾಕೋ ಬರ್ಟ್ರಾಂಡ್ ರಸಲ್ ಹೇಳಿರೋದು ನೆನಪಿಗೆ ಬರ್ತಾ ಇದೆ – “War does not decide who is right, but who is left”.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

7 Comments
Oldest
Newest Most Voted
Inline Feedbacks
View all comments
sharada moleyar
sharada moleyar
11 years ago

chennagide

Raghunandan K
11 years ago

ನಿಜ –  “War does not decide who is right, but who is left”
Nice.

Santhoshkumar LM
11 years ago

Interesting!!

Rukmini Nagannavar
11 years ago

NODalEbEkennuva kutoohala nannalloo kaaDide…

Utham Danihalli
11 years ago

Kuthuhala katharathe hutisuvanthaha lekana
Shubhavagali

Darshan
Darshan
11 years ago

ಲೇಖನ ಚೆನ್ನಾಗಿದೆ.. ಇದೇ ಸಂದೇಶ ಇರುವ ಇನ್ನೊಂದು ಚಿತ್ರ .. "All Quiet on Western Front".. ಒಮ್ಮೆ ನೋಡಿ .. ಇಷ್ಟವಾಗ ಬಹುದು…. 🙂

ಪ್ರಮೋದ್
10 years ago

ವಾರ್ ಚಿತ್ರಗಳಿಗಿ೦ತ ಆ೦ಟಿ ವಾರ್ ಗಳೇ ಚೆನ್ನಾಗಿರುತ್ತವೆ. ಹೃದಯವನ್ನು ಘಾಸಿಗೊಳಿಸುತ್ತವೆ. ಯುದ್ಧದ ಕ್ರೂರತೆ ಎಲ್ಲರಿಗೂ ಗೊತ್ತಿರಬೇಕು. ರಷ್ಯನ್ ಚಿತ್ರಗಳಾದ Idi i smotri , Letyat zhuravli ನನಗಿಷ್ಟದವು. ಕ್ಲಿ೦ಟ್ ಈಸ್ಟ್ ವುಡ್ ನ letters from iwo jima ಕೂಡ

7
0
Would love your thoughts, please comment.x
()
x