ಲೇಖನ

ಕರೋನ ವಿರುದ್ಧ ಗೆದ್ದು ಮತ್ತೊಮ್ಮೆ ಚಪ್ಪಾಳೆ ತಟ್ಟೋಣ: ವೆಂಕಟೇಶ ಚಾಗಿ

ಇತ್ತೀಚಿನ ದಿನಗಳಲ್ಲಿ ಎಲ್ಲೆಡೆಯೂ ವ್ಯಾಪಕವಾಗಿ ಕೇಳಿಬರುತ್ತಿರುವ ವಿಷಯ ಕರೋನ ಕುರಿತು. ಕರೋನ ನಿಜವಾಗಿಯೂ ಒಂದು ಸಾಂಕ್ರಾಮಿಕ ಸೋಂಕಾಗಿ ಜಗತ್ತಿನ ತುಂಬಾ ಪಸರಿಸುತ್ತಿದೆ. ಚೀನಾದ ವುಹಾನ್ ನಲ್ಲಿ ಮೊಟ್ಟ ಮೊದಲು ಕಾಣಿಸಿಕೊಂಡ ಈ ವೈರಸ್, ತುಂಬಾ ಅಪಾಯಕಾರಿಯಾಗಿ ಕಂಡದ್ದು ರೋಗಕ್ಕೆ ತುತ್ತಾಗಿ ಸಾವಿಗೀಡಾಗಿರುವ ಜನರ ಸಂಖ್ಯೆಯಿಂದಲೇ. ಜಾಗತಿಕವಾಗಿ ಹಿಂದೆ ಅನೇಕ ವೈರಸ್ಗಳನ್ನು ಕಂಡಿದ್ದ ಚೀನಾ ಕರೋನಾದ ವಿಷಯದಲ್ಲಿ ಜಾಗೃತಿ ಹಾಗೂ ಅದರ ತೀವ್ರತೆಯ ಬಗ್ಗೆ ಜಗತ್ತಿಗೆ ಮನವರಿಕೆ ಮಾಡಲು ವಿಳಂಬ ಧೋರಣೆ ಅನುಸರಿಸಿದೆ ಎಂಬುದು ಸ್ಪಷ್ಟ. ಚೀನಾದಲ್ಲಿ ಸಾವಿನ ಸಂಖ್ಯೆ ಏರುತ್ತಿರುವಾಗ ಅಮೇರಿಕಾ ಈ ಕರೋನಾವನ್ನು ತಡೆಯಲು ತನ್ನ ನುರಿತ ವೈದ್ಯರು ಹಾಗೂ ವೈದ್ಯಕೀಯ ಸೇವೆಯನ್ನು ನೀಡುವ ಪ್ರಸ್ತಾವವನ್ನು ಚೀನಾ ಮುಂದಿಟ್ಟಿತ್ತು. ಆದರೆ ಇತ್ತೀಚೆಗೆ ಅಮೆರಿಕಕ್ಕೂ ಕರೋನವನ್ನು ಮಟ್ಟಹಾಕುವಂತಹ ಸಾಮರ್ಥ್ಯ ಕುಂದಿಹೊಂದಿದೆ. ಇಟಲಿ ಸ್ಪೇನ್ ಯುಕೆ ಮುಂತಾದ ಯುರೋಪ್ ರಾಷ್ಟ್ರಗಳಲ್ಲಿ ಕರೋನಾ ಮರಣಮೃದಂಗ ವನ್ನೇ ಬಾರಿಸುತ್ತಿರುವುದು ಅದರ ತೀವ್ರತೆಯನ್ನು ನಾವು ಮನಗಾಣಬಹುದು.

ಕರುನಾ ವೈರಸ್ನ ಸೋಂಕಿನ ವಿರುದ್ಧ ವಿಶ್ವಸಂಸ್ಥೆ ಹಾಗೂ ಹಲವಾರು ದೇಶಗಳು ಎಚ್ಚರಿಕೆ ನೀಡುತ್ತಾ ಬಂದಿವೆ. ಹಲವಾರು ನಗರಗಳು ಸ್ಥಬ್ದವಾಗಿದ್ದು ಸೋಂಕಿನ ಹರಡುವಿಕೆಯನ್ನು ತಡೆಯಲು ಹಲವಾರು ಕಸರತ್ತುಗಳನ್ನು ನಡೆಸುತ್ತಿವೆ. ಮುಂದುವರಿದ ರಾಷ್ಟ್ರಗಳೇ ಸೋಂಕು ತಡೆಯಲು ಕಷ್ಟಪಡುತ್ತಿರುವಾಗ ಬಡರಾಷ್ಟ್ರಗಳ ಗತಿಯೇನು ?ಎಂಬ ವಿಷಯವನ್ನು ನಾವಿಲ್ಲಿ ಗಮನಿಸಲೇಬೇಕು . ಅನೇಕ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ಮುಂದುವರಿದ ರಾಷ್ಟ್ರಗಳು ವಿವಿಧ ವೈರಸ್ ಗಳಿಗೆ ನೀಡಬಹುದಾದ ಚಿಕಿತ್ಸೆ ನೀಡಿ ಕರುನಾ ವಿರುದ್ಧ ಹೋರಾಟಕ್ಕೆ ನಿಂತಿವೆ . ಆದರೂ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ರಾಷ್ಟ್ರಗಳಲ್ಲಿ ವೈದ್ಯಕೀಯ ಸೇವೆಯನ್ನು ಒದಗಿಸುವುದು ಕಷ್ಟವಾಗುತ್ತಿದೆ. ಅಂತೆಯೇ ಸಾವಿಗೀಡಾದವರ ಅಂತ್ಯಸಂಸ್ಕಾರವೇ ಒಂದು ಸಮಸ್ಯೆಯಾಗಿ ಕಂಡುಬರುತ್ತಿರುವುದು ಶೋಚನೀಯ. ಪ್ರತಿದಿನ ಸಾಯುವವರಿಗೆ ಅಳುವವರಾರು ಎಂಬ ಪರಿಸ್ಥಿತಿ ಇಂದಿನದು.

ಜಾಗತಿಕವಾಗಿ ಸವಾಲನ್ನೆಸೆದ ಕೊರೋನಾ ವೈರಸ್ ಅಥವಾ ಕೋವಿಡ್-೧೯ ರೋಗದ ವಿರುದ್ಧ ಎಚ್ಚೆತ್ತ ಅನೇಕ ರಾಷ್ಟ್ರಗಳು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಅವಶ್ಯಕ ಎಂಬಂತೆ ತೋರುತ್ತಿದೆ. ಜನಜಂಗುಳಿಯಲ್ಲಿ ಕೇವಲ ಒಬ್ಬ ವೈರಸ್ ಸೋಂಕಿತ ವ್ಯಕ್ತಿ ಇದ್ದರೆ ಸಾಕು ಕರೋನಾ ವೈರಸ್ ಹರಡಲು. ಇದರ ಲಕ್ಷಣಗಳು ವಿಶಿಷ್ಟ . ಸಾಮಾನ್ಯವಾಗಿ ಕೆಮ್ಮು , ನೆಗಡಿ , ಜ್ವರ ಎಲ್ಲರಿಗೂ ಎಲ್ಲಾ ದಿನಗಳನ್ನು ಬರುವುದು ಗೊತ್ತು. ಆದರೆ ಕೋರೋಣ ಇದೇ ಲಕ್ಷಣಗಳಿಂದ ಅಂದರೆ ಕೆಮ್ಮು ಜ್ವರದಿಂದ ಪ್ರಾರಂಭವಾದರೂ ಮೊದಲಿಗೆ ಬಹುತೇಕ ಜನ ಅಂದುಕೊಳ್ಳುವುದು ಸಾಮಾನ್ಯ ಜ್ವರ ಕೆಮ್ಮು ಇರಬಹುದೆಂದು. ಸಾಮಾನ್ಯ ಜ್ವರ ಕೆಮ್ಮಿಗೆ ತೆಗೆದುಕೊಳ್ಳುವ ಚಿಕಿತ್ಸೆಯನ್ನು ಪಡೆದು ತಮ್ಮ ಕೆಲಸಕಾರ್ಯಗಳಲ್ಲಿ ತೊಡಗುವವರು ಇದ್ದಾರೆ. ಇಷ್ಟೇ ಸಾಕು ವೈರಸ್ ಸೋಂಕು ಹರಡಲು. ಇದು ಒಂದು ಚೈನ್ ಸಿಸ್ಟಮ್ ಇದ್ದಹಾಗೆ ಸೂಕ್ತ ಲಸಿಕೆ ಸಿಗದೇ ಹೋದಲ್ಲಿ ಜಗತ್ತಿನಲ್ಲಿ ಸಂಭವಿಸುವ ಅನಾಹುತವನ್ನು ಊಹಿಸಲು ಅಸಾಧ್ಯ. ಇದಕ್ಕೆ ಮುನ್ನೆಚ್ಚರಿಕೆಯೊಂದೇ ಮದ್ದು ಎಂಬುದನ್ನು ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ.

ಭಾರತದಂತಹ ಅಧಿಕ ಜನಸಂಖ್ಯೆಯುಳ್ಳ ರಾಷ್ಟ್ರದಲ್ಲಿ ಮುನ್ನಚರಿಕೆ ಎಂಬುದು ಅತ್ಯಗತ್ಯವಾಗಿ ಬೇಕು. ಅಧಿಕ ಜನಸಾಂದ್ರತೆಯ ಭಾರತದಲ್ಲಿ ಸೋಂಕಿತ ವ್ಯಕ್ತಿಗಳಿಂದ ಇತರ ವ್ಯಕ್ತಿಗಳಿಗೆ ವೈರಸ್ ಹರಡುವಿಕೆ ಅತಿ ತೀವ್ರ. ಭಾರತದಲ್ಲಿ ವೈವಿಧ್ಯತೆಯ ಪರಿಸ್ಥಿತಿಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದೇ ಒಂದು ಸವಾಲು. ಎಷ್ಟೇ ಮುನ್ನೆಚ್ಚರಿಕೆಯ ಕಾರ್ಯಗಳನ್ನು ತೆಗೆದುಕೊಂಡರೂ ಕರೋನ ಸೋಂಕಿನ ಅಂಕಿ ಸಂಖ್ಯೆಯಲ್ಲಿ ನಾಲ್ಕು ನೂರರ ಗಡಿ ದಾಟಿದ್ದೇವೆ. ಸರಕಾರ ಹಲವಾರು ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡಿದೆ . ಮಾಧ್ಯಮಗಳು ಎಚ್ಚರಿಕೆಯ ಸಂದೇಶವನ್ನು ಸಾರುತ್ತಿವೆ. ಆದರೂ ಸೋಂಕಿತ ವ್ಯಕ್ತಿಗಳು ಓಡಾಡುತ್ತಿರುವುದು ಹಾಗೂ ಗಂಭೀರ ಮಟ್ಟವನ್ನು ತಲುಪಿದಾಗ ಆಸ್ಪತ್ರೆಗೆ ದಾಖಲಾಗುವುದು ಎಷ್ಟು ಸರಿ.ಮೊದಲು ಜನರು ಜಾಗೃತರಾಗುವುದು ಮುಖ್ಯ ಅಲ್ಲವೇ. ಸರಕಾರ ವೈರಸ್ ಸೋಂಕಿತ ವ್ಯಕ್ತಿಗಳನ್ನು ಪತ್ತೆ ಹಚ್ಚುವ ಕಾರ್ಯವನ್ನು ತೀವ್ರವಾಗಿ ಮಾಡಬೇಕಿದೆ. ಪ್ರತಿ ಜಿಲ್ಲೆಗಳಲ್ಲಿ ವೈರಸ್ ಪತ್ತೆ ಹಚ್ಚುವ ಪ್ರಯೋಗಾಲಯಗಳನ್ನು ತುರ್ತಾಗಿ ಸ್ಥಾಪಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡುವುದು ಅವಶ್ಯಕವಾಗಿದೆ. ಸರ್ಕಾರ ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದು ಶ್ಲಾಘನೀಯ. ಕೆಲ ನಿರ್ಧಾರಗಳಿಂದ ಬಡ ಕಾರ್ಮಿಕರಿಗೆ, ದಿನಗೂಲಿ ನೌಕರರಿಗೆ ಹಾಗೆಯೇ ಎಲ್ಲಾ ವರ್ಗದವರ ಜೀವನ ನಿರ್ವಹಣೆಯಲ್ಲಿ ವ್ಯತ್ಯಯ ಉಂಟಾಗಬಹುದು. ಆದರೆ ಇದು ಇಂದು ಅನಿವಾರ್ಯವಾಗಿದೆ ಎಂಬುದನ್ನು ಎಲ್ಲರೂ ಮನಗಾಣಬೇಕು . ಸದ್ಯಕ್ಕೆ ಈ ಸೋಂಕಿಗೆ ಯಾವುದೇ ಲಸಿಕೆ ಇಲ್ಲ ಎಂಬುದಂತೂ ಸತ್ಯ. ” ರೋಗಬಂದಾಗ ತಡೆಗಟ್ಟುವುದಕ್ಕಿಂತ ರೋಗ ಬರದಂತೆ ತಡೆಯುವುದೇ ಮದ್ದು ” ಎನ್ನುವಂತೆ ಮುಂಜಾಗ್ರತೆ ಕ್ರಮಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಉತ್ತಮ.

ಕರುನಾ ವೈರಸ್ ಸೋಂಕಿತ ವ್ಯಕ್ತಿಯ ಬಳಿ ಇದ್ದರೂ ಸೂಕ್ತ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಒಂದು ಥ್ಯಾಂಕ್ಸ್ ಹೇಳಲೇಬೇಕು. ಸೋಂಕಿತ ವ್ಯಕ್ತಿ ಎನ್ನುತ್ತಲೇ ಮಾರುದ್ದ ಓಡುವ ನಾವು , ಅದೇ ವ್ಯಕ್ತಿಯ ಬಳಿ ಇದ್ದು ಚಿಕಿತ್ಸೆ ನೀಡುವ ವೈದ್ಯರು ನರ್ಸುಗಳು ಹಾಗೂ ಇನ್ನಿತರ ವೈದ್ಯಕೀಯ ಸಿಬ್ಬಂದಿಗಳು ನಿಜವಾಗಿಯೂ ದೇವರ ಸ್ವರೂಪವೆ. ಇಂಥವರಿಗೆ ತಮ್ಮ ಕೃತಜ್ಞತಾ ಮನೋಭಾವ ವ್ಯಕ್ತವಾಗಬೇಕು. ವೈದ್ಯಕೀಯ ಸಿಬ್ಬಂದಿಗೆ ಬೇಕಾಗಿರುವುದು ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳು ಹಾಗೂ ಸಿಬ್ಬಂದಿ.ಇದರ ಬಗ್ಗೆ ಸರಕಾರ ಗಮನ ಹರಿಸುತ್ತಿದೆ. ಎಲ್ಲರೂ ಸಂಘಟಿತ ಪ್ರಯತ್ನದಲ್ಲಿ ಕರೋನಾ ಸೋಂಕಿನ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಧರ್ಮಾಂಧತೆ ಹಾಗೂ ಅಜ್ಞಾನವನ್ನು ದೂರ ಮಾಡಿ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸಿದಾಗ ಮಾತ್ರ ಮಹಾಮಾರಿಯಿಂದ ದೂರವಾಗಲು ಸಾಧ್ಯ. ಇಲ್ಲವಾದಲ್ಲಿ ಮನುಕುಲದ ಬಹುಪಾಲು ನಾಶ ಖಂಡಿತ. ಈ ಮಾತು ಭಯ ಹುಟ್ಟಿಸುವಂತಹದಲ್ಲ. ಇದೊಂದು ಎಚ್ಚರಿಕೆ ಗಂಟೆಯ ಧ್ವನಿ.

-ವೆಂಕಟೇಶ ಚಾಗಿ


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *