ಮುಚ್ಚಿದ ಕಿಟಕಿ: ಜೆ.ವಿ.ಕಾರ್ಲೊ


ಇಂಗ್ಲಿಷಿನಲ್ಲಿ: ಆಂಬ್ರೊಸ್ ಬಿಯರ್ಸ್
ಕನ್ನಡಕ್ಕೆ: ಜೆ.ವಿ.ಕಾರ್ಲೊ

ಇದು 1830ರ ಮಾತು. ಅಮೆರಿಕಾದ ಒಹಾಯೊ ರಾಜ್ಯದ ಸಿನ್ಸಿನಾಟಿ ನಗರದಿಂದ ಕೊಂಚ ದೂರದಲ್ಲಿ ಅಂತ್ಯವೇ ಕಾಣದಂತ ವಿಸ್ತಾರವಾದ ದಟ್ಟ ಕಾಡು ಹಬ್ಬಿತ್ತು.
ಈ ಕಾಡಿನ ಸರಹದ್ದಿನಲ್ಲಿ ನೆಲೆಸಿದ್ದ ಕುಟುಂಬಗಳಲ್ಲಿ ಬಹಳಷ್ಟು ಜನ ಹೊಸ ಬದುಕನ್ನು ಹುಡುಕಿಕೊಂಡು ಮತ್ತೂ ಮುಂದೆ ಹೋಗಿದ್ದರು. ಹಾಗೆ ಉಳಿದವರಲ್ಲಿ ಅವನೊಬ್ಬ ಕಾಡಿನ ಅಂಚಿನಲ್ಲೊಂದು ಮರದ ದಿಮ್ಮಿಗಳ ಗುಡಿಸಲೊಂದನ್ನು ಕಟ್ಟಿಕೊಂಡು ವಾಸಿಸುತ್ತಿದ್ದ. ನಾನು ನೋಡಿದಂತೆ ಎಂದೂ ನಗೆಯಾಡದ, ಯಾರೊಂದಿಗೂ ಬೆರೆತು ಮಾತನಾಡದ ಅವನು ಆ ನಿಶ್ಶಬ್ಧ ಕತ್ತಲ ಕಾಡಿನ ಒಂದು ಅವಿಭಾಜ್ಯ ಭಾಗವೇ ಅನ್ನುವಂತಿದ್ದ. ಬೇಕಾದಾಗ ನಗರದ ಜನರಿಗೆ, ವ್ಯಾಪಾರಿಗಳಿಗೆ ಕಾಡು ಪ್ರಾಣಿಗಳ ಚರ್ಮಗಳನ್ನು ಮಾರಿ ತನ್ನ ಸರಳ ಅಗತ್ಯತೆಗಳನ್ನು ಪೂರೈಸುತ್ತಿದ್ದ.

ಅವನ ಮರದ ದಿಮ್ಮಿಗಳ ಗುಡಿಸಿಲಿಗೆ ಒಂದೇ ಬಾಗಿಲಿತ್ತು. ಅದರ ನೇರಕ್ಕೇ ಒಂದು ಕಿಟಕಿ. ಆದರೆ ಕಿಟಕಿಯನ್ನು ಮರದ ತುಂಡುಗಳನ್ನು ಹೊಡೆದು ಭದ್ರವಾಗಿ ಮುಚ್ಚಲಾಗಿತ್ತು. ಅದು ತೆರೆದಿದ್ದನ್ನು ಯಾರೂ ನೋಡಿರಲಿಲ್ಲವಂತೆ ಮತ್ತು ಅದನ್ನು ಯಾವ ಕಾರಣಕ್ಕಾಗಿ ಮುಚ್ಚಲಾಗಿದೆ ಎನ್ನುವುದೂ ಯಾರಿಗೂ ಗೊತ್ತಿರಲಿಲ್ಲವಂತೆ. ಆದರೆ ನನ್ನೆಣಿಕೆಯ ಪ್ರಕಾರ ಕೆಲವರಿಗೆ ಈ ರಹಸ್ಯ ಗೊತ್ತಿತ್ತು. ಅವರಲ್ಲಿ ನಾನೂ ಒಬ್ಬ ಎನ್ನುವುದು ನಿಮಗೆ ಗೊತ್ತಾಗಲಿದೆ.

ಈ ವಿಕ್ಷಿಪ್ತ ಒಂಟಿ ಮನುಷ್ಯನ ಹೆಸರು ಮರ್ಲಾಕ್. ವಯಸ್ಸು ಐವತ್ತಷ್ಟೇ ಆಗಿದ್ದರೂ ಎಪ್ಪತ್ತರಂತೆ ಕಾಣಿಸುತ್ತಿದ್ದ. ವಯಸ್ಸಿಗಿಂತ ಮತ್ತಿನ್ನೇನೋ ಅವನನ್ನು ಹಣ್ಣಾಗಿಸಿದಂತೆ ಭಾಸವಾಗುತ್ತಿತ್ತು
ಅವನ ಕ್ಷೌರ ಕಾಣದ ಕೂದಲು, ಉದ್ದನೆಯ ಧಾಡಿ ನೆರೆತು ಹಣ್ಣಾಗಿತ್ತು. ಕೋಲಿನಂತೆ ತೆಳ್ಳಗೆ ಎತ್ತರಕ್ಕಿದ್ದ ಅವನ ಭುಜಗಳು ಸೋತು ಜೋತು ಬಿದ್ದಿದ್ದವು. ಮುಖ ಸುಕ್ಕುಗಟ್ಟಿತ್ತು. ಕಾಂತಿಹೀನ ಕಣ್ಣುಗಳು ಪ್ರಪಾತಕ್ಕಿಳಿದಿದ್ದವು.

ತಮಾಶೆ ಏನಪ್ಪ ಅಂದರೆ ನಾನು ಅವನನ್ನು ನೋಡೇ ಇರಲಿಲ್ಲ! ನಾನು ಈಗ ಹೇಳಿದ್ದೆಲ್ಲಾ ನನ್ನ ಅಜ್ಜನಿಂದ ಕೇಳಿಸಿಕೊಂಡಿದ್ದು! ಅದೂ ನಾನು ಹುಡುಗನಾಗಿದ್ದಾಗ ಅಜ್ಜ ಹೇಳಿದ್ದು. ಅಜ್ಜನಿಗೆ ಅವನ ಬಗ್ಗೆ ಎಲ್ಲಾ ಗೊತ್ತಿತ್ತು

ಒಂದು ದಿನ ಮರ್ಲಾಕ್ ತನ್ನ ಗುಡಿಸಿಲಿನಲ್ಲಿ ಹೆಣವಾಗಿ ಬಿದ್ದಿದ್ದ. ಆಗೆಲ್ಲಾ ಪೋಸ್ಟ್ಮಾರ್ಟಂ ಎಂದಾಗಲಿ, ಪತ್ರಿಕೆಗಳಲ್ಲಿ ಸುದ್ಧಿಯಾಗುವುದೆಂದಾಗಲೀ ಯಾವುದೂ ಇರಲಿಲ್ಲ. ಅವನು ಸಹಜ ಕಾರಣಗಳಿಂದಾಗಿಯೇ ಸತ್ತಿರಬೇಕು ಎಂದು ನನ್ನ ಅನಿಸಿಕೆ. ಇಲ್ಲದಿದ್ದಲ್ಲಿ ಅಜ್ಜ ಹೇಳಿರುತ್ತಿದ್ದರು.

ಮರ್ಲಾಕನಿಗೆ ಅವನ ಗುಡುಸಿಲ ಹಿಂಭಾಗದಲ್ಲೇ, ಈ ಹಿಂದೆ ಅವನ ಹೆಂಡತಿಯನ್ನು ಹೂತಿದ್ದ ಜಾಗದ ಪಕ್ಕದಲ್ಲೇ ಸಮಾಧಿ ಮಾಡಲಾಗಿತ್ತು. ಅವನ ಹೆಂಡತಿ ಬಹಳ ವರ್ಷಗಳ ಹಿಂದೆಯೇ ಮೃತಪಟ್ಟಿದ್ದು ಜನ ಅವಳೊಮ್ಮೆ ಅಲ್ಲಿ ವಾಸಿಸುತ್ತಿದ್ದಳು ಎಂಬ ವಿಚಾರವನ್ನೇ ಮರೆತು ಹೋಗಿದ್ದರು. ನನ್ನ ಕತೆಯ ಮುಖ್ಯ ಪಾತ್ರಧಾರಿಯೇ ಸತ್ತು ಹೋದ ಮೇಲೆ ಇನ್ನೇನು ಉಳಿದಿದೆ ಅಂತ ನಿಮಗೆ ಅನಿಸುತ್ತಿರಬೇಕಲ್ಲವೆ?
ಮರ್ಲಾಕ್ ಸತ್ತು ಹೋದ ನಂತರ ಅವನ ಗುಡಿಸಿಲು ಪಾಳು ಬಿದ್ದು ಹೋಯಿತು. ಅದರಲ್ಲಿ ದೆವ್ವಗಳಿವೆ ಎಂದು ಯಾರೂ ಆ ಕಡೆಗೆ ಸುಳಿಯುತ್ತಿರಲಿಲ್ಲ. ನಾನಾಗ ಬಿಸಿ ರಕ್ತದ ಹುಡುಗನಾಗಿದ್ದೆ. ಹುಚ್ಚು ಧೈರ್ಯದಿಂದ ಮರ್ಲಾಕನ ಗುಡಿಸಿನ ಕಡೆಗೆ ಆದಷ್ಟು ದೂರದಿಂದಲೇ ಕಲ್ಲು ಎಸೆದು ಓಡಿ ಬಂದಿದ್ದೆ!

ಈ ಕತೆಗೆ ಅಜ್ಜ ಹೇಳಿದ ಪೂರ್ವಾರ್ಧ ಭಾಗವೊಂದಿದೆ.
ಈ ಮರದ ದಿಮ್ಮಿಗಳ ಗುಡಿಸಿಲನ್ನು ಕಟ್ಟಿದಾಗ ಮರ್ಲಾಕ್ ಆಗಿನ್ನೂ ಬಿಸಿ ರಕ್ತದ ತರುಣ. ರಟ್ಟೆಗಳ ಬಲದಿಂದಲೇ ಜಗತ್ತನ್ನು ಜಯಿಸುವ ಕೆಚ್ಚು ಅವನ ಕಂಗಳಲ್ಲಿತ್ತು. ಹುರುಪಿನಿಂದಲೇ ಒಂದಷ್ಟು ಕಾಡು ಕಡಿದು ಭೂಮಿ ಹಸನುಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡ. ಅಲ್ಲಿಯ ಎಲ್ಲರಂತೆ ಅವನ ಬಳಿಯೂ ಒಂದು ರೈಫಲ್ ಇತ್ತು. ಬೇಟೆಯಾಡುವುದನ್ನು ಉಪವೃತ್ತಿಯಾಗಿಸಿ ಜೀವನ ಸಾಗಿಸತೊಡಗಿದ.
ಅಷ್ಟರಲ್ಲಿ ಅವನ ಮದುವೆಯೂ ಆಗಿತ್ತು. ಅವರಿಬ್ಬರ ಸಂಸಾರ ತುಂಬಾ ಅನ್ಯೋನ್ಯವಾಗಿ ಪ್ರೀತಿಯಿಂದ ಸಾಗುತ್ತಿತ್ತು. ಮರ್ಲಾಕ್ ಅವಳನ್ನು ಮನಸಾರೆ ಪ್ರೀತಿಸುತ್ತಿದ್ದ. ಅವಳೂ ಕೂಡ ಅಷ್ಟೇ ಅಕ್ಕರೆಯಿಂದ ಅವನಿಗೆ ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಹಕಾರ ನೀಡುತ್ತಿದ್ದಳು.

ಒಂದು ದಿನ ಬೇಟೆಗೆಂದು ಹೋಗಿದ್ದ ಮರ್ಲಾಕ್ ಹಿಂದಿರುಗಿ ಬರುವುದು ಸ್ವಲ್ಪ ತಡವಾಯಿತು. ಅವನು ಮನೆಗೆ ಬಂದಾಗ ಹೆಂಡತಿ ಜ್ವರ ಏರಿ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದು ಹೋಗಿದ್ದಳು. ಡಾಕ್ಟರುಗಳಾಗಲೀ, ನೆರೆಹೊರೆಯವರಗಲೀ ಮೈಲುಗಳಷ್ಟು ದೂರ ಹೋಗಬೇಕಿತ್ತು. ಅವಳನ್ನು ಒಂಟಿಯಾಗಿ ಬಿಡುವಂತೆಯೂ ಇರಲಿಲ್ಲ. ಆದ್ದರಿಂದ ಅವನೇ ಹೆಂಡತಿಯ ಶುಶ್ರೂಷೆ ಮಾಡತೊಡಗಿದ. ಅವಳು ಕಿಂಚಿತ್ತೂ ಸುಧಾರಿಸಿದಂತೆ ಕಾಣಿಸಲಿಲ್ಲ. ಮೂರನೇ ದಿನದ ಕೊನೆಗೆ ಅವಳು ಪೂರ್ಣವಾಗಿ ಪ್ರಜ್ಞೆ ಕಳೆದುಕೊಂಡು ಕೆಲವು ತಾಸುಗಳ ಬಳಿಕ ಸತ್ತು ಹೋದಳು.

ಹೆಂಡತಿ ತೀರಿಕೊಂಡಿದ್ದಾಳೆ ಎನ್ನುವುದು ಖಾತ್ರಿಯಾದ ಮೇಲೆ ಅವಳ ಅಂತ್ಯ ಸಂಸ್ಕಾರಕ್ಕೆ ಮೃತ ದೇಹವನ್ನು ತಯಾರಿಗೊಳಿಸಬೇಕೆಂಬ ಅರಿವು ಅವನಿಗಿತ್ತು. ಇದೆಲ್ಲಾ ಅವನಿಗೆ ಹೊಸದಾದ್ದರಿಂದ ಕೆಲವು ತಪ್ಪುಗಳೂ ಆಗಿದ್ದು ಸಹಜವಾಗಿತ್ತು

ಹೆಂಡತಿ ತೀರಿಕೊಂಡಿದ್ದಾಳೆಂದು ಗೊತ್ತಿದ್ದೂ ಕಣ್ಣೀರು ಬಾರದಿರುವುದನ್ನು ಗಮನಿಸಿ ಅವನಿಗೆ ಅತೀವ ನಾಚಿಕೆಯಾಯಿತು. ಇದು ಸರಿಯಲ್ಲ. ಪ್ರೀತಿ ಪಾತ್ರರು ಸತ್ತಾಗ ಅಳುವುದು ಧರ್ಮ. ಆದರೂ ಅವನಿಗೆ ಕಣ್ಣೀರು ಬರಲೇ ಒಲ್ಲದು!

“ನಾಳೆ ಅವಳಿಗೊಂದು ಶವಪೆಟ್ಟಿಗೆ ತಯಾರಿಸಿ ಧಪನ್ ಮಾಡಲು ಗುಂಡಿ ತೋಡಬೇಕು.” ಅವನು ಜೋರಾಗಿ ಹೇಳಿಕೊಂಡ. ಅವಳು ತೀರಿಕೊಂಡಿದ್ದರೂ ತನ್ನೆದುರಿಗೇ ಇದ್ದಾಳೆ. ಅದಕ್ಕಂತಲೇ ತನಗಿನ್ನೂ ಒಂಟಿತನ ಕಾಡುತ್ತಿಲ್ಲ ಅನಿಸುತ್ತೆ. ಅವಳನ್ನು ಸಮಾಧಿ ಮಾಡಿದ ಮೇಲೆ ತನಗೆ ಒಂಟಿತನ ಕಾಡಿ, ದುಃಖ ಬರುತ್ತದೇನೋ ಎಂದು ಅವನೆಂದುಕೊಂಡ
ಅವನು ಎದ್ದು ನಿಂತು ಹೆಂಡತಿಯ ಕೂದಲನ್ನು ಹಿಂದಕ್ಕೆ ಬಾಚಿ ಒಪ್ಪಗೊಳಿಸಿ ಮರಣದಲ್ಲೂ ಅವಳು ಚಂದ ಕಾಣಲು ತನಗೆ ತೋಚಿದ ಸಣ್ಣಪುಟ್ಟ ನೇರ್ಪಾಟುಗಳನ್ನು ಬಹಳ ಜತನದಿಂದ ಮಾಡತೊಡಗಿದನಾದರೂ ಅವನಿಗೆ ಹೆಂಡತಿಯನ್ನು ಶಾಶ್ವತವಾಗಿ ಕಳೆದುಕೊಂಡಿದ್ದೇನೆಂದು ಅನಿಸುತ್ತಿರಲೇ ಇಲ್ಲ.

ಮರ್ಲಾಕನಿಗೆ ಎಂದೂ ಆಳವಾದ ದುಃಖವನ್ನು ಅನುಭವಿಸಿ ಗೊತ್ತಿರಲಿಲ್ಲ. ಅಂತ ಅನುಭವ ಅವನ ಭಾವನೆಗಳಿಗೆ ಹೊರತಾಗಿತ್ತು. ಅವನಿಗದು ಅರ್ಥವಾಗುತ್ತಿರಲಿಲ್ಲ. ಅವನ ಹೆಂಡತಿಯ ದುರ್ಮರಣದ ಹೊಡೆತ ಅವನಿಗಿನ್ನೂ ತಾಗಿರಲಿಲ್ಲ.

ಆಳವಾದ ದುಃಖ ಒಬ್ಬೊಬ್ಬರ ಮೇಲೂ ಒಂದೊಂದು ತೆರನಾದ ಪ್ರಭಾವ ಬೀರುತ್ತದೆ. ಕೆಲವರಿಗೆ ಮೊನಚಾದ ಬಾಣದಂತೆ ತಿವಿದು ಘಾಸಿಗೊಳಿಸಿದರೆ, ಮತ್ತೆ ಕೆಲವರಿಗೆ ಗಧಾಪ್ರಹಾರದಂತೆ ನುಜ್ಜುಗುಜ್ಜಾಗಿಸುತ್ತದೆ.

ಮೇಜಿನ ಮೇಲೆ ಮಲಗಿಸಿದ್ದ ಹೆಂಡತಿಯ ಕಳೇಬರವನ್ನು ಸಂಸ್ಕಾರಕ್ಕೆ ಸಿದ್ಧಗೊಳಿಸಿದ ಮೇಲೆ ಅವನು ಪಕ್ಕದಲ್ಲೇ ಇದ್ದ ಕುರ್ಚಿಯ ಮೇಲೆ ಕುಸಿದು ಕುಳಿತುಕೊಂಡ. ಹೊಯ್ದಾಡುತ್ತಿದ್ದ ಮೇಣದ ಬತ್ತಿಯ ಬೆಳಕಿಗೆ ಅವನ ಹೆಂಡತಿಯ ಲಕ್ಷಣವಾದ ಸುಂದರ ಮುಖ ರಕ್ತ ಹೀರಿ ತೆಗೆದಂತೆ ಬಿಳುಚಿಕೊಂಡು ಹೆದರಿಕೆ ಹುಟ್ಟಿಸುವಂತಿತ್ತು. ಮೊಣಕೈಗಳನ್ನು ಮೇಜಿನ ಮೇಲಿರಿಸಿ ಅವನು ಅವುಗಳ ಮೇಲೆ ತಲೆಯಾನಿಸಿದ. ಅವನಿಗೆ ನಿದ್ದೆ ಎಳೆಯುತ್ತಿತ್ತು.

ಗಾಢ ನಿದ್ದೆಯಲ್ಲಿದ್ದ ಮರ್ಲಾಕನಿಗೆ ಯಾರೋ ದೀರ್ಘವಾಗಿ ಕಿರಿಚಿದ್ದು ಕೇಳಿಸಿ ಅವನು ಧಡಬಡಿಸಿ ಎದ್ದು ಸುತ್ತ ದೃಷ್ಟಿ ಹರಿಸಿದ. ಅವನ ಎದೆ ಡವಗುಟ್ಟುತ್ತಿತ್ತು. ಕಿರಿಚುವ ಶಬ್ಧ ತೆರೆದ ಕಿಟಕಿಯಿಂದ ಬಂದಿತ್ತು. ಕಾಡಿನ ಕಾರ್ಗತ್ತಲಿನಲ್ಲಿ ತಪ್ಪಿಸಿಕೊಂಡು ಹೆದರಿಕೆಯಿಂದ ಹುಯಿಲಿಡುವ ಮಗುವಿನಂತೆ! ಅವನು ಕಲ್ಲಿನ ಹಾಗೆ ಅಲ್ಲಾಡದೆ ಹಾಗೇ ಕುಳಿತು ಕೊಂಡು ಮತ್ತೆ ನಿದ್ದೆಗೆ ಜಾರಿದ.
ಆ ಭಯಾನಕ ಕಿರಿಚುವ ಸದ್ದು ಮತ್ತೆ ಮೊದಲಿಗಿಂತಲೂ ಹತ್ತಿರದಿಂದ ಎಂಬಂತೆ ಕೇಳಿಸಿದಾಗ ಅವನಿಗೆ ಎಚ್ಚರವಾಯಿತು ಯಾವುದೋ ಕ್ರೂರ ಮೃಗವಿರಬೇಕು ಇಲ್ಲ, ತಾನು ಕನಸು ಕಾಣುತ್ತಿರಬೇಕು! ಅವನು ಮೇಜಿನ ಮೇಲಿಂದ ತಲೆ ಎತ್ತಿ ಸುತ್ತಲೂ ಗಮನಿಸಿದ. ಮೇಜಿನ ಸುತ್ತ ಗಾಢಾಂಧಕಾರ ಹರಡಿತ್ತು. ಅವನಿಗೆ ಎಲ್ಲವೂ ಜ್ಞಾಪಕಕ್ಕೆ ಬಂದಿತು. ಅವನ ಕಣ್ಣುಗಳು ತೀಕ್ಷ್ಣವಾಗಿ ಕತ್ತಲೆಯನ್ನು ಬಗೆಯತೊಡಗಿದವು. ಉಸಿರಾಡುವುದನ್ನೂ ಮರೆತಂತೆ ಮೈಯೆಲ್ಲಾ ಕಿವಿಯಾಗಿಸಿದ. ತನ್ನನ್ನು ಎಚ್ಚರಗೊಳಿಸಿದ್ದಾದರೂ ಏನು? ಅದು ಎಲ್ಲಿದೆ?

ಒಮ್ಮೆಲೆ ಅವನು ಕುಳಿತುಕೊಂಡಿದ್ದ ಮೇಜು ಜೋರಾಗಿ ಅಲ್ಲಾಡಿತು. ಜೊತೆಗೆ ಏನೋ ಮೆಲ್ಲಗೆ ಹೆಜ್ಜೆ ಹಾಕುತ್ತಿರುವ ಸಪ್ಪಳ.

ಬೇಕೆಂದರೂ ಅವನ ಬಾಯಿಂದ ಒಂದೂ ಶಬ್ಧ ಹೊರಡಲಿಲ್ಲ. ಮೇಲೆ ಏಳಲಿಕ್ಕೂ ಶಕ್ತಿ ಸಾಲದಂತಾಯಿತು. ಅವನ ಎದೆ ನಗಾರಿಯಂತೆ ಹೊಡೆದುಕೊಳ್ಳುತ್ತಿತ್ತು. ಅವನು ಗರಬಡಿದವನಂತೆ ಕಾಯುತ್ತಾ ಕುಳಿತುಕೊಂಡ. ಅವನು ಹೆಂಡತಿಯ ಹೆಸರಿಡಿದು ಕರೆಯಲು ಪ್ರಯತ್ನಪಟ್ಟನಾದರೂ ಮಾತೇ ಹೊರಡಲಿಲ್ಲ. ಕೈಯನ್ನು ಮುಂದಕ್ಕೆ ಚಾಚಿ ಮೇಜಿನ ಮೇಲಿದ್ದ ಹೆಂಡತಿಯನ್ನು ಮುಟ್ಟಲು ಯತ್ನಿಸಿದ. ಅದು ಕೊರಡಿನಂತಾಗಿತ್ತು.

ಒಮ್ಮೆಲೇ ಮೇಜಿನ ಮೇಲೆ ಎಂತಾದ್ದೊ ಭಾರವಾದ ವಸ್ತು ಬಿದ್ದಂತಾಯಿತು. ಮಾರ್ಲಾಕನ ಗುಡಿಸಿಲು ಕಳಚಿಬೀಳುವಂತೆ ಅದುರಿತು ಅದು ಬಿದ್ದ ರಭಸಕ್ಕೆ ಮೇಜು ಅವನ ಎದೆಗೆ ಜೋರಾಗಿ ಗುದ್ದಿತು. ಅದೇ ವೇಳೆಗೆ ಮೇಜಿನ ಮೇಲಿಂದ ಏನೋ ದೊಪ್ಪನೆ ಕೆಳಗೆ ಬಿದ್ದಿತು.

ಮಾರ್ಲಾಕ್ ಭಯಂಕರವಾಗಿ ಅರಚುತ್ತಾ ದಿಗ್ಗನೆ ಮೇಲೆದ್ದ. ಮೇಜಿನ ಮೇಲೆ ಎರಡೂ ಕೈಗಳಿಂದ ಕುರುಡನಂತೆ ತಡಬಡಾಯಿಸಿದ. ಮೇಜಿನ ಮೇಲಿಂದ ಅವನ ಹೆಂಡತಿಯ ಕಳೇಬರ ಮಾಯವಾಗಿತ್ತು!
ಒಂದು ಹಂತ ದಾಟಿದರೆ ಭಯ ಬುದ್ಧಿ ವಿಕಲ್ಪತೆಗೆ ತಿರುಗುತ್ತದೆ. ಬುದ್ಧಿ ವಿಕಲ್ಪತೆ ಹುಚ್ಚು ಸಾಹಸಕ್ಕೆ ಕೈ ಹಾಕುವಂತೆ ಮಾಡುತ್ತದೆ. ಯಾವುದೇ ನಿರ್ದಿಷ್ಟ ಗುರಿಯಿಲ್ಲದೆ ಅವನು ಹುಚ್ಚನಂತೆ ಗೋಡೆಗಾನಿಸಿದ ಕೋವಿಯನ್ನು ಎಳೆದು ಲೋಡ್ ಮಾಡುತ್ತಾ ಹೆಗಲಿಗೇರಿಸಿ ಸುಮ್ಮನೆ ಗುಂಡು ಹಾರಿಸತೊಡಗಿದ.

ಸಿಡಿಮದ್ದಿನ ಉರಿಯಿಂದ ಗುಡಿಸಿಲೊಮ್ಮೆ ಜಗ್ಗನೆ ಬೆಳಗಿತು. ಒಂದು ದೈತ್ಯಾಕಾರದ ಚಿರತೆ ಅವನ ಹೆಂಡತಿಯ ಕಳೇಬರವನ್ನು ಕಿಟಕಿಯ ಕಡೆಗೆ ಎಳೆದುಕೊಂಡು ಹೋಗುತ್ತಿತ್ತು. ಅವನ ಹೆಂಡತಿಯ ಕುತ್ತಿಗೆ ಅದರ ಬಾಯೊಳಗಿತ್ತು! ಮತ್ತೆ ಅಂಧಕಾರ ಕವಿಯಿತು. ಅದರೊಟ್ಟಿಗೆ ಮತ್ತೊಮ್ಮೆ ನೀರಸ ಮೌನ.

ಅವನಿಗೆ ಎಚ್ಚರವಾದಾಗ ಸೂರ್ಯ ಆದಾಗಲೇ ಬಹಳಷ್ಟು ಮೇಲೇರಿದ್ದ. ಕಾಡೂ ಎಚ್ಚರಗೊಂಡಿತ್ತು. ಮಾರ್ಲಾಕನ ಹೆಂಡತಿಯ ಕಳೇಬರ ಕಿಟಕಿಯ ಬಳಿ ಅಸ್ತವ್ಯಸ್ತವಾಗಿ ಬಿದ್ದುಕೊಂಡಿತ್ತು. ಗುಂಡಿನ ಶಬ್ಧಕ್ಕೆ ಮತ್ತು ಬೆಳಕಿಗೆ ಗಾಬರಿಗೊಂಡು ಚಿರತೆ ಪರಾರಿಯಾಗಿತ್ತು.. ಅವಳ ಹರಿದ ಕುತ್ತಿಗೆಯಿಂದ ರಕ್ತ ಹರಿದು ಒಂದೆಡೆ ಜಮೆಯಾಗಿ ಗಟ್ಟಿಯಾಗಿತ್ತು. ಅವಳ ಕೈಗಳನ್ನು ರಿಬ್ಬನಿನಿಂದ ಅವನು ಕಟ್ಟಿದ್ದ. ಅದು ಬಿಚ್ಚಿಕೊಂಡಿತ್ತು. ಮುಷ್ಠಿಗಳು ಬಿಗಿದುಕೊಂಡಿದ್ದವು. ಅವಳ ಅವಡುಗಚ್ಚಿದ್ದ ಬಾಯಿಂದ ಚಿರತೆಯ ಕಿವಿ ಹೊರಕಾಣುತ್ತಿತ್ತು

ಜೆ.ವಿ.ಕಾರ್ಲೊ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
John suntikoppa
John suntikoppa
4 years ago

ಅಬ್ಬಾ! ಮೈ ನಡುಗಿಸುವ ಕಥೆ.ಅದ್ಭುತವಾದ ಅನುವಾದ ಸರ್.

G.W.Carlo
G.W.Carlo
3 years ago

Thank you, John.

2
0
Would love your thoughts, please comment.x
()
x