ಮಾಸ್ಕ್ ಗಳನ್ನು ಕರೊನ, ಕರೊನ ಅಂತ ಮಾರುತ್ತಿದ್ದ ವೀಡಿಯೊ ಎಲ್ಲರೂ ನೋಡಿದ್ದಾರೆ. ಕರೊನ ವಿರುದ್ಧ ಹೋರಾಡಲು ಬೇಕಾದ ಅವುಗಳನ್ನೇ ಕರೊನ ಎಂದು ಕರೆದು ಒಂದು ತಮಾಷೆಯ ನೋಟವಾಗಿಸಿದ ಅವನ ಮನಸ್ಸಲ್ಲಿ ಏನಿತ್ತೋ?
” ಅಬ್ಬಾ, ಈ ಮಕ್ಕಳಿಗೆ ರಜೆ ಕೊಟ್ಟುಬಿಟ್ಟರಲ್ಲಾ, ಇನ್ನು ೩ ತಿಂಗಳು ಇವರನ್ನು ಹಿಡಿದಿಟ್ಟುಕೊಳ್ಳುವುದು ಹೇಗಪ್ಪಾ? ಮ್ಯೂಸಿಕ್ ಕ್ಲಾಸ್ ಇಲ್ಲ, ಸ್ವಿಮ್ಮಿಂಗ್ ತರಗತಿಗಳಿಲ್ಲ, ಸಮ್ಮರ್ ಕ್ಯಾಂಪುಗಳು ರದ್ದು. ನೆನೆಸಿಕೊಂಡರೆ ಭಯ ಆಗುತ್ತೆ” ಇದು ಬಹಳಷ್ಟು ತಾಯಂದಿರ ಅಳುಕು. ಹೌದು. ಮಕ್ಕಳನ್ನು ಹಿಡಿದಿಟ್ಟುಕೊಳ್ಳುವುದು ಬಲು ಕಷ್ಟ. ಎಲ್ಲಾ ಇದ್ದರೇನೇ ನೋಡಿಕೊಳ್ಳುವುದು ಕಠಿಣ. ಇನ್ನು ಏನೂ ಇಲ್ಲದೆ ಅವುಗಳನ್ನು ಮನೆಯಲ್ಲಿ ಇರಿಸಿಕೊಳ್ಳುವುದು ದುಃಸ್ಸಾಹಸವೇ ಸರಿ. ಆದರೇನು ಮಾಡುವುದು, ಈ ಕರೋನ ಕಷ್ಟ ಕಾಲ ತಂದೊಡ್ಡಿದೆಯಲ್ಲ!
ಕರೋನ ಹರಡುತ್ತಿದ್ದ ಸಮಯ. ಆಗಷ್ಟೇ ಎಲ್ಲ ಕಡೆ ಕ್ಲೋಸ್ ಮಾಡಬೇಕೆಂದು ಸರಕಾರ ಆದೇಶ ಹೊರಡಿಸಿತ್ತು. ಮಾಲ್, ಸಿನೇಮ ಥೀಯೇಟರ್ಗಳು ಇತರೆ ಜಾಗಗಳು ಮುಚ್ಚಲ್ಪಟ್ಟಿದ್ದವು. ಒಂದು ಗೆಳತಿಯ ಮನೆಯಲ್ಲಿ ಪಾರ್ಟಿ ಎಂದು ತೀರ್ಮಾನಿಸಲಾಗಿತ್ತು, ಈಗ ಯಾಕೆ, ಮುಂದೂಡಲಾದೀತೆ ಎಂದು ನಾನು ಹೇಳಿದ್ದೇ ತಡ, ನನ್ನ ಮೇಲೆ ಎಲ್ಲರೂ ಮುಗಿ ಬಿದ್ದರು. ಅಯ್ಯೊ, ಮನೆಯಲ್ಲಿ ಬೋರ್ ಆಗ್ತಾ ಇದೆ, ಮಕ್ಕಳಿಗೆ ರಜೆ, ಎಲ್ಲಿಗೂ ಹೋಗಕ್ಕೆ ಆಗಲ್ಲ. ಇದೊಂದು ದಾರಿ ನಮಗೆ ಎಲ್ಲಾದರೂ ಹೊರಹೋಗುವುದಕ್ಕೆ. ನಿನಗೆ ಬೇಡದಿದ್ದರೆ ನೀ ಬರಬೇಡ ಅಷ್ಟೇ ಎಂದು ಒಕ್ಕೊರಳಿನಿಂದ ನುಡಿದಾಗ ನಾ ಸುಮ್ಮನಿರಲೇ ಬೇಕಾಯಿತು.
ಮಾಸ್ಕ್ ಹಾಕಿಕೊಂಡು ಬಂದಿದ್ದ ಒಬ್ಬಳು ಹುಡುಗಿ ಎಲ್ಲರೊಟ್ಟಿಗೆ ತರಗತಿಯಲ್ಲಿ ಕುಳಿತಾಗ ಗಾಬರಿಯಾಯಿತು ನನಗೆ. ” ಹುಶಾರಿಲ್ಲ, ನಾಳೆ ಕರೋನ ಟೆಸ್ಟ್ ಮಾಡಿಸುವುದಕ್ಕೆ ಹೋಗುತ್ತಾ ಇದೀನಿ ಅಂದಾಗ ಎದೆ ದಸಕ್ ಎಂದಿತು. ” ತಾಯಿ, ನೀ ಈಗಲೇ ಹೊರಡು. ರೆಸ್ಟ್ ತೊಗೊ. ಹುಶಾರಾಗು ಮೊದಲು” ಎಂದು ಹೇಳಿ ಅವಳನ್ನು ಮನೆಗೆ ಕಳಿಸುವುದರಲ್ಲಿ ಎಲ್ಲಾ ಸುಸ್ತು.
ಹೊಸದಾಗಿ ಮನೆ ಹತ್ತಿರ ತೆಗೆದಿರುವ ಹೋಟೆಲ್ ಅಲ್ಲಿ ನೂಕು ನುಗ್ಗಲು. ” ಅಲ್ಲ, ದೂರ ಇರಿ. ಆದಷ್ಟು ಒಬ್ಬರ ಹತ್ತಿರ ಒಬ್ಬರು ಬರಬೇಡಿ, ಅವಶ್ಯವಿದ್ದರೆ ಮಾತ್ರ ಮನೆಯಿಂದ ಹೊರಬನ್ನಿ ಎಂದೆಲ್ಲ ಹೇಳಿದರೂ ಜನರ ಮನಸ್ಸಿಗೆ ನಾಟದಿದ್ದರೆ ಏನು ಮಾಡುವುದು? ಅಲ್ಲಿ ಮಸಾಲೆ ದೋಸೆ, ಕಾಫ಼ಿ ಮುಗಿಸಿ ಬಂದ ಪಕ್ಕದ ಮನೆಯವರು ” ಹೊಸ ಹೋಟೆಲ್ ಅಷ್ಟೇನೂ ಚೆನ್ನಾಗಿಲ್ಲ. ದೋಸೆ ತಿಂದು ಬಾಯಿ ಕೆಟ್ಟಿ ಹೋಯಿತು. ನನ್ನ ಮಾಮೂಲಿ ಜಾಗದಲ್ಲಿ ತಿಂದು ನಾಲಿಗೆ ಸರಿ ಮಾಡಿಕೊಳ್ಳಬೇಕು. ನಾಳೆ ಹೋಗುವೆ!” ಎಂದು ಬಾಯಿ ಚಪ್ಪರಿಸಿದಾಗ ನಿರುತ್ತರಳಾದೆ.
“ಎಲ್ಲರೂ ತಮ್ಮ ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು ಚಪಾಳೆ ತಟ್ಟಿ, ನಮಗೆ ಸಹಾಯ ಮಾಡುತ್ತಿರುವ ವೈದ್ಯರು, ದಾದಿಯರು, ಪೌರಕಾರ್ಮಿಕರು ಮುಂತಾದವರಿಗೆ ಧನ್ಯವಾದಗಳನ್ನು ಅರ್ಪಿಸಿ” ಎಂದು ಹೇಳಿದ್ದನ್ನು ಅರ್ಥ ಮಾಡಿಕೊಳ್ಳುವುದು ಬಿಟ್ಟು ಜನ ಜಾತ್ರೆ ಹೊರಟರೆ ಏನು ಮಾಡುವುದು?
ಸುಮಾರು ವರುಷದ ಹಿಂದೆ ನನ್ನ ಸೋದರಮಾವನ ಮಗನಿಗೆ ಹತ್ತನೇ ತರಗತಿಯ ಪರೀಕ್ಷೆಯ ಸಮಯ. ಮನೆಯಲ್ಲಿ ಕೇಬಲ್ ಕನೆಕ್ಶನ್ ತೆಗೆಸಿದ್ದರು. ನನ್ನ ಅಜ್ಜಿ ಹಾಗೂ ಮದುವೆಯಾಗದ ದೊಡ್ಡಮ್ಮನಿಗೆ ಟೀವಿ ಮನೋರಂಜನೆಯ ಪ್ರಮುಖ ಸಾಧನವಾಗಿತ್ತು. ಅಜ್ಜಿ ನಾನು ಹೋದಾಗಲೆಲ್ಲಾ ಬೇಜಾರು ಮಾಡಿಕೊಳ್ಳುತ್ತಾ ಇದ್ದರು. ಎಷ್ಟು ಬೇಜಾರು ಆಗ್ತಾ ಇದೆ, ಮಾಡಲು ಏನೂ ಕೆಲಸವಿಲ್ಲ ಎಂದು. ಅಜ್ಜಿಗೆ ಓದುವ ಅಭ್ಯಾಸವಿತ್ತು. ಆದರೆ ಟೀವಿ ವೀಕ್ಷಣೆ ಶುರುವಾದ ಮೇಲೆ ಅದು ಕಡಿಮೆಯಾಯಿತೆನಿಸುತ್ತೆ. ಇನ್ನು ಕೆಲವೊಮ್ಮೆ ಅಜ್ಜಿಯನ್ನು ಕುರಿತು ಮನ ಮರುಗುವುದುಂಟು. ಪಾಪ, ವಯಸ್ಸಾದ ಮೇಲೆ ಕಷ್ಟ ಎಂದು.
ಈಗ ಎಲ್ಲರ ಮನೆಯಲ್ಲಿ ಇಂಟರ್ನೆಟ್ ಇದೆ. ಮನೆಯಲ್ಲೇ ಕುಳಿತು ವೀಕ್ಷಿಸಬಹುದಾದ ಕಾರ್ಯಕ್ರಮಗಳು, ಮಾಡಬೇಕಾದ ಕೆಲಸಗಳು ಬೇಕಾದಷ್ಟಿವೆ. ಮನೆಯಲ್ಲಿ ಇರುವುದು ಅಷ್ಟು ಕಷ್ಟವೇ? ಎಲ್ಲರ ಮನೆಯಲ್ಲೂ ಸರಿಪಡಿಸಬೇಕಾದ, ಮಾಡಬೇಕಾದ ಸಾಕಷ್ಟು ಕೆಲಸಗಳಿರುತ್ತವೆ. ಕಲಿಯಲು ಬೇಕಾದಷ್ಟಿದೆ. ದಿನ ನಿತ್ಯದ ಧಾವಂತದ ಬದುಕಲ್ಲಿ ಮಾಡಲಾಗದ ಕೆಲಸಗಳು ಈಗ ಮಾಡಬಹುದಲ್ಲವೇ? ಆದರೂ ಚಿಕ್ಕವರು, ನಡು ವಯಸ್ಸಿನವರು ” ಬೇಜಾರು”, ” ಬೋರು”. ” ಹೊತ್ತು ಹೋಗುವುದೇ ಇಲ್ಲ”, ” ಮನೆಯಲ್ಲಿದ್ದು ಏನು ಮಾಡುವುದು?” ಎಂದೆಲ್ಲಾ ಹೇಳಿದಾಗ ನನಗೆ ಆಶ್ಚರ್ಯ. ನಿಮ್ಮ ಮನೆಯಲ್ಲಿ ಇರುವುದಕ್ಕೂ ನಿಮಗೆ ಕಷ್ಟವೇ? ನಿಮ್ಮ ಒಡನಾಟವು ನಿಮಗೆ ಅಷ್ಟು ಬೇಸರವೇ? ಹಾಗೆಂದರೆ ನಿಮ್ಮ ಜತೆ ಇರುವವರು, ಕೆಲಸ ಮಾಡುವರು ಎಷ್ಟು ಕಷ್ಟ ಪಡುತ್ತಿದ್ದಾರೆ. ಇಷ್ಟೆಲ್ಲಾ ಸೌಲಭ್ಯವಿರುವ ಕಾಲದಲ್ಲಿ, “ಟೈಮ್ ಪಾಸ್” ಇರುವ ಸಮಯದಲ್ಲೂ ನೀವು ಟೈಮ್ ಅನ್ನು ಪಾಸ್ ಮಾಡಲು ಹೊರಗಿನವರ ಮೇಲೆ ಅವಲಂಬಿತರಾಗಿದೀರಿ ಎಂದರೆ ಸ್ವಲ್ಪ ಯೋಚಿಸುವ ವಿಷಯವೇ!
–ಸಹನಾ ಪ್ರಸಾದ್