ಕರುನಾಡಿನ ದಾಸಶ್ರೇಷ್ಟ ಕನಕಕದಾಸರು: ಹಿಪ್ಪರಗಿ ಸಿದ್ಧರಾಮ

ಕರುನಾಡಿನ ದಾಸ ಪರಂಪರೆಯಲ್ಲಿ ಭಕ್ತ ಕನಕದಾಸರು (1508-1606) ವಿಶಿಷ್ಟ ವ್ಯಕ್ತಿತ್ವದ ಸಮಾಜ ಸುಧಾರಕರು. ದಾಸ ಸಾಹಿತ್ಯದ ದಿಗ್ಗಜ ದಾಸಶ್ರೇಷ್ಟ ಕನಕದಾಸರ ಕರ್ಮಭೂಮಿ ಕಾಗಿನೆಲೆಯಾಗಿದ್ದರೂ ಅವರು ಜನಿಸಿದ್ದು ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ. ಇಲ್ಲಿ ಕನಕದಾಸರ ಅರಮನೆ ಇದ್ದ ಬಗ್ಗೆ ಇತ್ತೀಚಿನ ಉತ್ಖನನ ಮತ್ತು ದಾಖಲೆಗಳು ಖಚಿತಪಡಿಸಿವೆ. ತಂದೆ ಬೀರಪ್ಪ ಡಣ್ಣಾಯಕರ ಅಕಾಲ ಮರಣದಿಂದ ಕಿರಿಯ ವಯಸ್ಸಿನಲ್ಲಿಯೇ ವಿಜಯನಗರ ಆಡಳಿತಕ್ಕೊಳಪಟ್ಟ ಶಿಗ್ಗಾಂವ-ಬಂಕಾಪುರ ಪ್ರದೇಶಕ್ಕೆ ಡಣ್ಣಾಯಕರಾಗಿ, ತಾಯಿ ಬಚ್ಚಮ್ಮನ ಮಾರ್ಗದರ್ಶನದಲ್ಲಿ ಆಡಳಿತ ನಡೆಸುವ ಕನಕದಾಸರ ಮೂಲ ಹೆಸರು ತಿಮ್ಮಪ್ಪ. ಯಾವುದೋ ಕಾರಣಕ್ಕೆ ಭೂಮಿಯನ್ನು ಅಗೆಯುತ್ತಿರುವಾಗ ಅಪಾರ ನಿಧಿ ದೊರೆತು, ಅದನ್ನು ಸ್ವವಿಲಾಸಿ ಜೀವನಕ್ಕೆ ಬಳಸಿಕೊಳ್ಳದೇ, ಸರ್ವಪ್ರಜೆಗಳ ಹಿತಕ್ಕಾಗಿ ಮತ್ತು ಧಾರ್ಮಿಕ, ಸಾಮಾಜಿಕ ಕಾರ್ಯಗಳಿಗಾಗಿ ವಿನಿಯೋಗಿಸಿ ಕನಕನಾಯಕರಾಗಿ ಹೆಸರಾಗುತ್ತಾರೆ. ಅವರ ಮೋಹನ ತರಂಗಿಣಿ ಕೃತಿಯಲ್ಲಿ ಉಲ್ಲೇಖಗೊಂಡಿರುವಂತೆ ಕನಕನಾಯಕರ ವಿವಾಹವು ಸುಗುಣಿ ‘ಸುಜ್ಞಾನವದೂಟಿ’ಯೊಂದಿಗೆ ಜರುಗಿ, ಜನಿಸಿದ ಮಗು ಬಹುಕಾಲ ಬದುಕಲಿಲ್ಲ. ಅಧಿಕಾರದಲ್ಲಿದ್ದಾಗ ಹಲವಾರು ತಲ್ಲಣ, ಆಘಾತಗಳನ್ನು ಅನುಭವಿಸುತ್ತಾ ಯುದ್ಧಭೂಮಿಯಲ್ಲೊಮ್ಮೆ ಬಲವಾಗಿ ಗಾಯಗೊಂಡು ಬಿದ್ದಿರುವಾಗ ಯಾವುದೋ ಅಗೋಚರ ಚೇತನಶಕ್ತಿಯೊಂದು ಅವರನ್ನು ಹಿಡಿದೆತ್ತಿ ‘ಕನಕಾ, ಇನ್ನಾದರೂ ನನ್ನ ದಾಸನಾಗು’ ಎಂಬ ಅಶರೀರವಾಣಿಯನ್ನು ಕೇಳಿ, ಎಲ್ಲವನ್ನೂ ತ್ಯಾಗ ಮಾಡಿ ಕನಕದಾಸರಾದರು. ವಿಜಯನಗರ ಸಾಮ್ರಾಜ್ಯದಲ್ಲಿ ವಾಸವಾಗಿದ್ದ ಗುರು ವ್ಯಾಸರಾಯರಿಂದ ದೀಕ್ಷೆ ಪಡೆದ ಅವರ ಕಾವ್ಯ, ಸಮಾಜ-ವಿಮರ್ಶೆಗಳು ದನಿಯಿಲ್ಲದವರ ದನಿಯಾಗಿದೆ. 

ಕವಿ ಮನಸ್ಸಿನ ಕನಕದಾಸರು ಮೋಹನ ತರಂಗಿಣಿ, ನಳಚರಿತೆ, ರಾಮಧ್ಯಾನ ಚರಿತೆ, ಹರಿಭಕ್ತಿಸಾರ ಮುಂತಾದ ಕಾವ್ಯಗಳು ಸೇರಿದಂತೆ ನೂರಾರು ಕೀರ್ತನೆಗಳ ಕರ್ತೃಗಳಾಗಿ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅನನ್ಯ-ಅಪೂರ್ವ ಸ್ಥಾನ ಪಡೆದಿದ್ದಾರೆ. ‘ಆತ್ಮಯಾವ ಕುಲ, ಜೀವಯಾವ ಕುಲ, ತತ್ವೇಂದ್ರೀಯಗಳ ಕುಲ ಪೇಳಿರಯ್ಯ’ ಎಂದು ಪ್ರಶ್ನಿಸುವ ಕನಕದಾಸರು ಮೂಲತಃ ಕೆಳಸ್ತರದಿಂದ (ಹಾಲುಮತ ಕುರುಬ) ಬಂದವರಾದ್ದರಿಂದ ಕೆಳಸ್ತರದವರ ಕಷ್ಟ, ನೋವು, ನಿರಾಶೆಯಂತಹ ಸಂಗತಿಗಳೊಂದಿಗೆ ಮೇಲ್ವರ್ಗದವರ ಸುಖದ ಸುಪ್ಪತ್ತಿಗೆಯ ವೈಭೋಗದ ಜೀವನಾನುಭವೂ ಇತ್ತು. ತಮ್ಮ ಸಮಕಾಲೀನ ದಾಸರಂತೆ ಸಾಹಿತ್ಯದಲ್ಲಿ ಏಕಮುಖಿಯಾಗಿ ಹೊಗಳದೆ ‘ಆರು ಬದುಕಿದರಯ್ಯ ನಿನ್ನ ನಂಬಿ’ ಎಂದು ಪ್ರಶ್ನಿಸುತ್ತಾರೆ.  ಕಾವ್ಯ-ಕೀರ್ತನೆಗಳಲ್ಲಿ ಸಮಕಾಲೀನ ಜನಜೀವನದ ಚಿತ್ರಣವನ್ನು ಮಾರ್ಮಿಕವಾಗಿ ಬಿಂಬಿಸಿದ್ದಾರೆ. ಕಾಗಿನೆಲೆ ಆದಿ ಕೇಶವ, ಬಾಡದಾದಿಕೇಶವ, ಆದಿಕೇಶವರಾಯ ಎಂಬ ಅಂಕಿತನಾಮಗಳನ್ನು ಬಳಸುತ್ತಾ, ತಾವು ತೀರ್ಥಯಾತ್ರೆ ಮಾಡಿದ ಸ್ಥಳಗಳನ್ನು ಸಮೀಕರಿಸಿದ್ದು ವಿಶಿಷ್ಟವಾಗಿದೆ. ಬೇಧ-ಭಾವವಿಲ್ಲದ ಮಾನವ ಕುಲದ ಒಳಿತನ್ನು ಬಯಸುವ ವಿಶ್ವಮಾನವ, ಸಮಾಜ ಸುಧಾರಕ ಮತ್ತು ಹರಿದಾಸ ಶ್ರೇಷ್ಟರಾಗಿ ಇಂದಿಗೂ ಪ್ರಾತಃಸ್ಮರಣೀಯರಾಗಿದ್ದಾರೆ. ಶಾಸನಗಳ ಆಧಾರದಿಂದ ಸುಮಾರು 98 ವರ್ಷ ಜೀವಿಸಿದ್ದ ಕನಕದಾಸರು ತಮ್ಮ ಬರವಣಿಗೆಯಲ್ಲಿ ಜಾತಿ-ಮತ-ಪಂಥ ಮೀರಿದ ಸಮಾನತೆ ಬೋಧಿಸಿದ್ದಾರೆ. ಅವರ ಕೃತಿಗಳನ್ನು ಅವಲೋಕಿಸಿದರೆ ವೈವಿಧ್ಯಮಯ ಮತ್ತು ಜನಪರ ನಿಲುವನ್ನು ಕಾಣಬಹುದು. ಕನಕದಾಸರ ಮಂಡಿಗೆಗಳು, ಕೀರ್ತನೆಗಳು ಜಾನಪದ ಸೊಗಡಿನ ಪದಗಳಾಗಿವೆ. ಲಘುಕಾವ್ಯ, ಷಟ್ಪದಿ, ಅಲಂಕಾರಗಳಲ್ಲಿ ಹೊರಹೊಮ್ಮಿದ ಅವರ ಸಾಹಿತ್ಯದಲ್ಲಿ ಆಧ್ಯಾತ್ಮಿಕ, ಸಾಮಾಜಿಕ, ವೈಚಾರಿಕ ಪ್ರಜ್ಞೆಯೊಂದಿಗೆ ಜಾತಿವ್ಯವಸ್ಥೆಯನ್ನು ‘ಕುಲಕುಲವೆಂದು ಹೊಡದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?’ ಎಂದು ಪ್ರಶ್ನಿಸುತ್ತಾ ವಿರೋಧಿಸುತ್ತಾರೆ. ‘ಕುಲಂ ಕುಲಮಲ್ತು ಚಲಂ ಕುಲಂ ಗುಣಂ ಕುಲಂ ಅಭಿಮಾನವೊಂದೆ ಕುಲಂ’ ಎಂಬ ಆದಿಕವಿ ಪಂಪನ ಸಾಲುಗಳನ್ನು ನೆನಪಿಸುತ್ತಾರೆ.  
  
ಹಾಗೇ ನೋಡಿದರೆ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ 12ನೇ ಶತಮಾನದ ವಚನ ಸಾಹಿತ್ಯ ಮತ್ತು 16ನೇ ಶತಮಾನದ ದಾಸ ಸಾಹಿತ್ಯ ಹೆಚ್ಚು ಜನಮುಖಿ ಸಾಹಿತ್ಯ ಪ್ರಕಾರಗಳು. ವಚನ ಸಾಹಿತ್ಯದ ಸಾಮರಸ್ಯ, ವ್ಯಾಪಕತೆ ದಾಸ ಸಾಹಿತ್ಯಕ್ಕೆ ಇರದಿದ್ದರೂ ಜಾತಿ, ನೀತಿ, ಕರ್ಮಠತನದ ಪರಮಾವಧಿಯನ್ನು ಖಂಡಿಸುವ ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಸಾಮಾಜಿಕ ಚಿಂತನೆಯನ್ನು ಉಣಬಡಿಸಿ ದಾಸ ಸಾಹಿತ್ಯದ ತೂಕ ಹೆಚ್ಚಿಸಿದವರು. 13ನೇ ಶತಮಾನದ ಕಾಲಘಟ್ಟವೊಂದರಲ್ಲಿ ಆರಂಭವಾಗುವ ದಾಸ ಸಾಹಿತ್ಯ ಪರಂಪರೆಯು ಮುಂದಿನ ಐದು ಶತಮಾನಗಳ ಕಾಲ ಮುಂದುವರೆದು ದಾಸ ಸಾಹಿತ್ಯದ ‘ಸುವರ್ಣಯುಗ’ವೆಂದು 16ನೇ ಶತಮಾನವು ಬೆಳಗುವುದರೊಂದಿಗೆ ಕನಕದಾಸರು ‘ದಾಸ ಸಾಹಿತ್ಯ ಬನದ ಕೋಗಿಲೆ’ಗಳಾಗಿ ಹೊರಹೊಮ್ಮಿದ್ದಾರೆ. ವ್ಯಾಸ ಕೂಟದ ಕರ್ಮಠರು ಕನಕದಾಸರನ್ನು ನಿಂದಿಸಿದಾಗ ಸಾಧನೆಗೆ ಬೆಲೆ ಕೊಡದೆ ಆಚಾರಕ್ಕೆ ಬೆಲೆ ಕೊಟ್ಟು ಮಡಿವಂತಿಕೆ ಮಾಡುವುದನ್ನು ಪ್ರಶ್ನಿಸುತ್ತಾ ವಾಸ್ತವತೆಯ ವೈಜ್ಞಾನಿಕ ಮನೋಭಾವದೊಂದಿಗೆ ವೈಚಾರಿಕೆಯ ಉತ್ತುಂಗಕ್ಕೇರಿದವರು. ಇಂದಿಗೂ ಉಡುಪಿಯ ಶ್ರೀಕೃಷ್ಣ ಮಠದ ಕನಕನ ಕಿಂಡಿ ಪ್ರಸಂಗ (ಕನಕದಾಸರ ಯಾವುದೇ ಕೃತಿಯಲ್ಲಿ ಈ ಪ್ರಸಂಗ ಉಲ್ಲೇಖವಿಲ್ಲದಿದ್ದರೂ, ಜನಮನದ ನೆನಪಿನಿಂದ) ಸೇರಿದಂತೆ ಹಲವಾರು ಪ್ರಸಂಗಗಳಲ್ಲಿ ಪಾರಾಗುವ ಕನಕದಾಸರು ಮೌಡ್ಯಾಚಾರ, ಆಡಂಭರ, ಡಾಂಭಿಕತೆಯನ್ನು ಪ್ರಶ್ನಿಸಿದವರು.   
‘ಸತ್ಯವಂತರ ಸಂಗವಿರಲು ತೀರ್ಥವೇತಕೆ? ನೇಮವಿಲ್ಲದ ಹೋಮವೇತಕೆ? ಹೊಲೆಯ ಹೊರಗಿಹನೆ? ಇನ್ನೆಷ್ಟು ಕಾಲ ಮಲಗಿದ್ದರೂ ನಿನ್ನನೆಬ್ಬಿಸುವವರನೊಬ್ಬರನು ಕಾಣೆ, ಉತ್ತಮ ಪ್ರಭುತ್ವ ಲೊಳಲೊಟ್ಟೆ’ ಎಂದು ಸಮತಾ ಸಮಾಜದ ನಿರ್ಮಾಣಕ್ಕಾಗಿ ಅಂದು ಪ್ರಶ್ನಿಸಿದ ಕನಕದಾಸರ ಪ್ರಶ್ನೆಗಳು ಇಂದಿಗೂ ಸಮಸ್ಯೆಗಳಾಗಿಯೇ ಉಳಿದಿರುವುದು ವಿಷಾದನೀಯ. ಆಧುನಿಕ ಕಾಲದಲ್ಲಿ ನಿಂತು ಯೋಚಿಸಿದಾಗ ‘ಕನಕದಾಸರು ದಾಸಪಂಥದ ವಚನಕಾರರಷ್ಟೇ ಅಲ್ಲ ; ಎಲ್ಲ ಮತೀಯ ಬಂಧನಗಳಿಂದ ಪಾರಾಗಿ, ಸಾಮಾಜಿಕ ಕಟ್ಟುಪಾಡುಗಳಿಂದ ಮುಕ್ತರಾಗಿ, ಆಧ್ಯಾತ್ಮ ಸಿದ್ಧಿಯ ಶಿಖರವನ್ನೇರಿದ ವಿಶ್ವಬಂಧು ಮತ್ತು ಸಂತಕವಿ’ಯೆಂದು ಹೇಳಿದ ಪ್ರೊ.ದೇಜಗೌ ಮಾತುಗಳು ಅರ್ಥಪೂರ್ಣ. ‘ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎಂದು ಉದ್ಯೋಗದಲ್ಲಿ ಮೇಲು-ಕೀಳುಗಳಿಲ್ಲವೆಂದು ಹೇಳುತ್ತಾ ಸಾಮಾಜಿಕ ಸಮಾನತೆಯ ಸತ್ಯವನ್ನು ಸಾರ್ವಕಾಲಿಕವಾಗಿಸಿದ್ದಾರೆ.

ಅದ್ಬುತ ಕಲ್ಪನಾ ಶಕ್ತಿ, ಸಹಜ ಪ್ರತಿಭೆ, ಭವ್ಯ ಕಲ್ಪನೆ, ಭಾಷಾ ಪ್ರಭುತ್ವಗಳ ಸಂಗಮದಂತಿದ್ದ ದಾಸಶ್ರೇಷ್ಟ ಕನಕದಾಸರ ಕರ್ಮಭೂಮಿ ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ಅವರ ನೆನಪಿಗಾಗಿ ಸರಕಾರ ಪ್ರಾಧಿಕಾರವೊಂದನ್ನು ಸ್ಥಾಪಿಸಿ ಸಾಹಿತ್ಯ, ಸಂಶೋಧನೆಗೆ ಮುಂದಾಗಿದೆ. ಅವರ ಹೆಸರಿನಲ್ಲಿ ಸಾಧಕರಿಗೆ ಪ್ರತಿವರ್ಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಕೇವಲ ಸರಕಾರವಷ್ಟೇ ಅಲ್ಲ, ಸಾಮಾಜಿಕ ಚಿಂತಕರು ಸಹ ಕನಕದಾಸರ ಹೆಸರಿನಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳುವಲ್ಲಿ ಹಿಂದೆ ಬಿದ್ದಿಲ್ಲ. ಈ ಸಂದರ್ಭದಲ್ಲಿ ಪ್ರಗತಿಪರ ಚಿಂತಕರು, ಸಮಾಜದಲ್ಲಿಯ ಅನಿಷ್ಟಗಳ ಆಚರಣೆಗಳನ್ನು ತೀವ್ರವಾಗಿ ಖಂಡಿಸುವ ಮತ್ತು ಕನಕದಾಸರ ಅಪ್ಪಟ ಅಭಿಮಾನಿಗಳು, ಅನುಯಾಯಿಗಳೂ ಆಗಿರುವ ನಮ್ಮ ನಡುವಿನ ಸಾಕ್ಷಿಪ್ರಜ್ಞೆಯಂತಿರುವ ಧಾರವಾಡ ಹತ್ತಿರದ ಮನಸೂರಿನ ಸುಕ್ಷೇತ್ರ ಶ್ರೀ ರೇವಣಸಿದ್ದೇಶ್ವರ ಮಹಾಮಠದ ಪರಮಪೂಜ್ಯ ಶ್ರೀ ಬಸವರಾಜ ದೇವರು ನೇತೃತ್ವದಲ್ಲಿ ಕನಕ ಜಯಂತಿ ಅಂಗವಾಗಿ ‘ಕನಕ ಪಂಚಮಿ ಸಾಂಸ್ಕøತಿಕ ಉತ್ಸವ-2014ನ್ನು ಇದೇ ನವೆಂಬರ್ 06 ರಿಂದ 10ರ ವರೆಗೆ ಕನಕದಾಸರ ಬದುಕು-ಬರಹ ವಿಚಾರ ಸಂಕಿರಣವನ್ನು ಹಮ್ಮಿಕೊಂಡು ನಾಡಿನ ವಿದ್ವಾಂಸರನ್ನು ಆಹ್ವಾನಿಸಿದ್ದಾರೆ. ಕನಕ ಗ್ರಂಥಗಳ ಬಿಡುಗಡೆ, ಪ್ರತಿಷ್ಟಿತ ಕನಕ ಪ್ರಶಸ್ತಿ ಪ್ರಧಾನ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನೂರೊಂದು ಜನ ಸಾಧಕರಿಗೆ ಕನಕ ಗೌರವ ಸಂಮಾನ ನೀಡುವುದ ಸೇರಿದಂತೆ ನಾಟಕ, ನೃತ್ಯ, ಸಂಗೀತ, ಜಾನಪದ ಕಲಾತಂಡಗಳ ಪ್ರದರ್ಶನವನ್ನು ಏರ್ಪಡಿಸಿದ್ದಾರೆ. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜನೆಗೊಂಡಿರುವ ಈ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ನಾಡಿನ ಹಲವಾರು ಸಚಿವರು, ಗಣ್ಯರು ಆಗಮಿಸಲಿದ್ದಾರೆ. ಸಹೃದಯರಿಗೆ ಕನಕ ಪಂಚಮಿ ಸಾಂಸ್ಕೃತಿಕ ಉತ್ಸವ-2014ರ ಸಮಿತಿ ಆತ್ಮೀಯವಾಗಿ ಆಹ್ವಾನಿಸುತ್ತಿದೆ.

(ಕಳೆದ ತಿಂಗಳು ನವೆಂಬರ್ 06 ರಿಂದ ನವೆಂಬರ್ 10ರ ವರೆಗೆ ಧಾರವಾಡ ಹತ್ತಿರದ ಮನಸೂರಿನ ಸುಕ್ಷೇತ್ರ ಶ್ರೀ ರೇವಣಸಿದ್ದೇಶ್ವರ ಮಹಾಮಠದ ಪರಮಪೂಜ್ಯ ಶ್ರೀ ಬಸವರಾಜ ದೇವರು ನೇತೃತ್ವದಲ್ಲಿ ಕನಕ ಜಯಂತಿ ಅಂಗವಾಗಿ ‘ಕನಕ ಪಂಚಮಿ ಸಾಂಸ್ಕೃತಿಕ ಉತ್ಸವ-2014ನ್ನು ಹಮ್ಮಿಕೊಳ್ಳಲಾಗಿತ್ತು. ಅದರ ಪ್ರಯುಕ್ತ ಈ ಲೇಖನ) 

*****        

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x