ಲೇಖನ

ಕನ್ನಡವೇ ಇಲ್ಲದ ಆ ವಠಾರದಲ್ಲಿ: ಬಂದೇಸಾಬ ಮೇಗೇರಿ


ಅಲ್ಲಿದ್ದದ್ದು ಈತ 58 ದಿನ ಮಾತ್ರ. ಅದು ಸ್ವಲ್ಪ ಹೆಚ್ಚು ಕಡಿಮೆ ವಿಹ್ವಲ ಮನಸಿನ ಗೂಡಾಗಿತ್ತು ಆ ವಠಾರ. ಅಫ್‍ಕೊರ್ಸ್ ವಾತಾವರಣ ಸಂಪೂರ್ಣ ಗೊಂದಲಮಯ. ಅರೇಬಿಕ್, ಉರ್ದು ಭಾಷೆಗಳಿಂದ ಅದು ಕೂಡಿ ಹೋಗಿತ್ತು. ಅಷ್ಟಕ್ಕೂ ಅದು ಅವನದೇ ಕೋಮಿನ ವಠಾರ. ಅಲ್ಲಿ ಕನ್ನಡದ ಪರಿಮಳ ಸೂಸುತ್ತಿದ್ದರೂ ಅದರ ಗೊಡವೆಗೆ ಹೋಗುವವರು ತುಂಬಾ ವಿರಳ. ಸಲಾಮ್ ಅಲೈಕುಮ್ ಜೀ ಅಂದರೆ ಅವರು ಸ್ವಾಗತಿಸುವ, ನಮಸ್ತೆ ಎನ್ನುವ ಮಾತಿಗೂ ವ್ಯತ್ಯಾಸ ಮಾತ್ರ ತುಂಬಾನೇ ಇತ್ತು. ಪರಿಚಯಸ್ತರಿಂದ ಸಿಕ್ಕ ಆ ರೂಮು ಅವನ ಆಫೀಸ್‍ಗೆ ಸನಿಹವಾದ್ದರಿಂದ ಅವನಲ್ಲಿರಬೇಕಾಯ್ತು.

ಅವನೊಬ್ಬ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುವ ಯುವಕ. ಮುಖ ಮೈದಾ ಹಿಟ್ಟಿನಕ್ಕಿಂತಲೂ ಬೆಳ್ಳಗಿದ್ದ. ಆರು ಫೂಟಿಗೆ ಒಂದಿಂಚು ಕಡಿಮೆ ಇದ್ದ. ತೆಳ್ಳಗೆ ನುಗ್ಗೆ ಮರದ ಹಾಗೇ ಕಾಣುತ್ತಿದ್ದ. ಆತನ ಹೆಸರು ನವಾಬ. ವಿದ್ಯಾಕಾಶಿಯಲ್ಲಿ ಪ್ರಥಮ ವರ್ಷ ಪೂರೈಸಿದ ನಂತರ ಹೋಗಿದ್ದು ಸೀದಾ ಬಯಲು ಸೀಮೆಯ ಒಂದು ಪುಟ್ಟ ಊರಿಗೆ. ಅದು ಅವನ ಅಪ್ಪನದಾಗಿತ್ತು. ರಜೆಯಲ್ಲಿ ಅವನು ಕೆಲಸ ಮಾಡುವುದು ಅಷ್ಟ್ರಲ್ಲಿತ್ತು. ದೊಡ್ಡ ಎಕ್ಸ್‍ಪಿರೀಯನ್ಸ್ ಆಗತ್ತೆ, ನಿನ್ ಖರ್ಚಿಗೂ ದುಡ್ಡು ಸಿಗತ್ತೇ ಹೋಗು ಮಗಾ ಪಟ್ಟಣ ಸೇರ್ಕಾ ಅಂತ ಅವರಪ್ಪ ಹೇಳ್ತಾನೆ.

ಅವರ ಮಾತಿನಲ್ಲೂ ಅರ್ಥವಿದೆ ಅಲ್ಲವೇ ಎಂದು ಈತನೂ ನಾಗರಿಕರು ಇರುವ ನಗರಕ್ಕೆ ಹೋದ. ಅಲ್ಲಿದ್ದದ್ದು ಸಿಮೆಂಟ್, ಕಡಿ, ಇಟ್ಟಿಗೆಗಳಿಂದ ಕೂಡಿದ ಸಾಮ್ರಾಜ್ಯ. ಮೇನ್ ರೋಡ್‍ನಲ್ಲಿ ಚರಂಡಿಗಳು ಕಾಣದಿದ್ದರೂ ಮುಂದೆ ಸ್ವಲ್ಪ ದೂರ ಹೋದ್ರು ಅಲ್ಲಿ ಸಿಗುತ್ತೇ ಬಾಯಿ, ಮೂಗು, ಕಣ್ಣು ಮುಚ್ಚಿಕೊಂಡು ಹೋಗುವ ದೃಶ್ಯ. ಇದು  ಅನಿಸಿಕೊಂಡ ನಗರದ ನಿಜರೂಪ.

ಕೆಲಸ ಸಿಕ್ತು, ರೂಮು ಸಿಕ್ತು. ಇಲ್ಲಿ ಶುರುವಾಗುತ್ತೆ ನೋಡಿ ಆಟ. ಇವನುಳಿದುಕೊಂಡ ರೂಮ್‍ನಲ್ಲಿ ಬೇರೇಯಾರೋ ಜಾರ್ಖಂಡ್‍ವಾಲಾ ಆಗಲೇ ಝಾಂಡಾ ಊರಿದ್ದ. ಅವನು ಗದಗಿಗೆ ಬಂದು 15 ದಿನಗಳಾದರೂ ಕನ್ನಡದ ಗಂಧದ ಪರಿಮಳದ ಅನುಭವವೇ ಇರದಂತಿತ್ತು. ಇದಕ್ಕೆ ಕಾರಣ ಬೇರೆ ಭಾಷೆಯ ಮೇಲೆ ಜೀವ ಇಟ್ಟಿರುವ ಜನ. ಅವನ ಜೊತೆ ಉರ್ದು, ಹಿಂದಿ ಕೂಡಿ ಮಾತಾಡ್ತಿದ್ರು. ಈ ನಮ್ ಹುಡುಗನಿಗೆ ದೊಡ್ಡ ಪ್ರಾಬ್ಲಮ್ ಏನಂದ್ರೆ ರಾಷ್ಟ್ರ ಭಾಷೆನೇ ಈತನಿಗೇ ಸರಿಯಾಗಿ ಗೊತ್ತಿರಲಿಲ್ಲ. ಸ್ಕೂಲ್‍ನಲ್ಲಿ ನಾಲ್ಕಾರು ಶಬ್ದಗಳನ್ನು ಕಲಿತಿದ್ದ. ಆದರೆ ಅದೂ ನಿಷ್ಪ್ರಯೋಜಕವಾಗಿತ್ತು. ಆ ಜಾರ್ಖಂಡ್‍ವಾಲಾ ನಕ್ಕು ನಕ್ಕು ಇವನ ಜೀವಾನೇ ಹಿಂಡ್ತಿದ್ದ. ರೂಮಿನಲ್ಲಿ ಒಬ್ಬನಿದ್ರೂ ಇಲ್ಲದಂತಿತ್ತು ಆ ರೂಮು. ‘ಅರೇ, ಯಾರೂ ಇಲ್ವಾ ರೂಮಿನಲ್ಲಿ’ ಅಂತ ಬಂದೇ ಬಿಟ್ಟ ನೋಡಿ ಲುಂಗಿಯನ್ನುಟ್ಟ ಒಬ್ಬ ದಾಡಿವಾಲಾ. ಅವನು ಆ ವಠಾರದ ಸಫಾಯ್‍ವಾಲಾನಾಗಿದ್ದ. ಅವನು ಮಾತಿನಮಲ್ಲ. ಅವನಿಂದಲೇ ಇವರಿಬ್ಬರ ಸಂವಾದ, ಮಾತುಕತೆ ಏನಿದ್ದರೂ ನಡೆಯಬೇಕಾಗಿತ್ತು. ಹಗಲೊತ್ತು ಆಫೀಸ್ ಕೆಲಸ, ರಾತ್ರಿ ಈ ಮಾತು ಬರದ ಬರಗಾಲದಂತಿರುವ, ಪರಿಚಯವಿದ್ದು ಅಪರಿಚಯಸ್ಥನಂತಿರುವ ವ್ಯಕ್ತಿ ಜೊತೆ ಕಾಲ ಕಳೆಯುವುದಿದೇಯಲ್ಲ ಅದಂತೂ ದುರ್ಗಮ ಹಾದಿ ಇದ್ದಂತೆ. ರೂಮ್ ಓನರ್ ಬಂದ್ ಆಗಾಗ ‘ಇದು ನಿಮ್ ಮನಿ ಅಂತ ತಿಳ್ಕೊಳ್ಳಿ’ ಅಂತಿದ್ದ. ಆದರೆ ರಾತ್ರಿ ಆದೊಡನೆ ಬರೊಬ್ಬರಿಗೆ ಹತ್ತು ಗಂಟೆಗೆ ಲೈಟ್ ಆಫ್ ಮಾಡಿಬಿಡುತ್ತಿದ್ದ. ತನ್ನ ಕೆಲಸ ಮುಗಿಸಿಕೊಂಡು ಬಂದು, ಲೈಟಾಗಿ ಫ್ರೆಶ್ ಆಗುವುದರಲ್ಲಿಯೇ ‘ಕರೆಂಟ್ ಇಸ್ ನೊ ಮೋರ್’ ಅಂತ ಕತ್ತಲು ಆವರಿಸುತ್ತಿತ್ತು. ಅನಾಮಿಕನೊಂದಿಗೆ, ಹರಕು ಭಾಷೆಯೊಂದಿಗೆ ಗುದ್ದಾಟ ಮಾತ್ರ ಎಗ್ಗಿಲ್ಲದೇ ನಡೆಯುತ್ತಿತ್ತು. ಹೇಗಾಯ್ತೋ ಗೊತ್ತಿಲ್ಲ. ಜಾರ್ಖಂಡ್‍ವಾಲಾನೊಂದಿಗೆ ಇವನ ಸ್ನೇಹ ಮೀರಿ ಬೆಳೆದಿತ್ತು. ಅವನೂ ಕೂಡ ಹಾಗೇ ಇದ್ದ.
    
ಬಂತು ನೋಡಿ, ಲಾಸ್ಟ್ ಡೇ ಬಿಳ್ಕೋಡುಗೆಯ ಸಮಾರಂಭ. ಈತನ ವಸ್ತುಗಳನ್ನು ಆತನಿಗೆ ಕೊಡುವುದು, ಆತನದ್ದು ಈತ ತಗೊಳ್ಳುವುದು ನಡೆದಿತ್ತು. ಅಲ್ಲಿಗೆ ಬಂದ ಆಗಂತುಕ ರೂಮಿನ ಮಾಲೀಕ. ‘ಬಾಡಿಗೆ ಬಾಳ ಕಡಿಮಿ ಆತು, ಕೊಡಿ ಸ್ವಲ್ಪ ಎಸ್ಟ್ರಾ ದುಡ್ಡು’ ಎಂದು ಹೆಣ ಬಾಯಿ ಬಿಡುವ ಹಾಗೆ ಕೇಳಿದ. ಇವರಿಬ್ಬರ ಉತ್ತರಕ್ಕೆ ಮಾಲೀಕ ಮಾರು ಹೋದ. ಏನು ಬೂದಿ ಎರಚಿದ್ದರೋ ಏನೋ ಅವನಿಗೆ. ಸುಮ್ಮನೇ ಬಾಲ ಮುದುರಿಸಿಕೊಂಡು ಹೊರಟೇ ಹೋದ. ಆದರೆ ಕೊನೆಯ ದಿನ ಅಂತ ಇದೇ ಅಲ್ಲ ಅದು ತುಂಬ ಭಾವುಕನನ್ನಾಗಿ ಮಾಡಿತ್ತು ಈ ಕನ್ನಡಿಗನನ್ನು.

ಒಂದು ವಿಷ್ಯಾ ಏನೆಂದರೆ ಕನ್ನಡದ ಕಂದ ಆಗ ಹಿಂದಿಯನ್ನು ಕರಗತ ಮಾಡಿಕೊಂಡಿದ್ದ. ಎಲ್ಲರಿಗೂ ಆಶ್ಚರ್ಯ. ಇಷ್ಟು ಬೇಗ ಹಿಂದಿ ಮಾತಾಡಲು ಹೇಗೆ ಕಲಿತ ಎಂದು. ಆ ಕಲಿಕೆಯ ಹಿಂದಿತ್ತು ನೋಡಿ ಒಂದು ಕರಾಳ ಸತ್ಯ. ಹಿಂದಿ ಬಂದರೂ ಬರದಿರುವ ಹಾಗೇ ನಾಟಕವಾಡಿದ್ದ. ಭಾಷೆ ಬರದಿದ್ದರೆ ಮೋಸ ಖಂಡಿತ. ಕೊನೆಗೆ ಆದದ್ದೂ ಅದೇ, ಮಾಲೀಕ ಈತನ ಭಾಷೆಯ ರಹಸ್ಯ ತಿಳಿದು ಬೆಪ್ಪಾಗಿ ಹೋದ. ರೂಮ್‍ವಾಲಾನಿಗೆ ಗುಡ್‍ಬಾಯ್ ಹೇಳುತ್ತಾ ಮತ್ತೆ ವಿದ್ಯಾ ಕಾಶಿಗೆ ಪಯಣ ಬೆಳೆಸಿದ್ದ. ಧಾರವಾಡ ನಾನ್‍ಸ್ಟಾಪ್ ಬಸ್ಸಿನಲ್ಲಿ ಜಾರ್ಖಂಡ್‍ವಾಲಾನದ್ದೇ ನೆನಪು. ಸ್ನೇಹಿತೆಯೊಬ್ಬಳು ಚಾಟಿಂಗ್ ನಡೆಸಿದ್ದಳು ಅಂತೆ ಕಾಣುತ್ತೆ. ಅದರಲ್ಲೇ ತಲ್ಲೀನನಾದ.
-ಬಂದೇಸಾಬ ಮೇಗೇರಿ

****

ಕನ್ನಡದ ಬರಹಗಳನ್ನು ಹಂಚಿ ಹರಡಿ

4 thoughts on “ಕನ್ನಡವೇ ಇಲ್ಲದ ಆ ವಠಾರದಲ್ಲಿ: ಬಂದೇಸಾಬ ಮೇಗೇರಿ

Leave a Reply

Your email address will not be published. Required fields are marked *