ಸಂದರ್ಶಕರು ಮಾದೇವಿಯನ್ನು ಕೇಳಿದರು: ‘ನೀವು ಎಂದಿಗಾದರೂ ವಿಮಾನದಲ್ಲಿ ಪ್ರಯಾಣಿಸಿದ್ದೀರಾ?’
‘ಕ್ವಚಿತ್ತಾಗಿ.’
‘ವಿಮಾನಗಳಲ್ಲಿ ಏರ್ ಹೋಸ್ಟೆಸ್‍ಗಳು ಪ್ರಯಾಣಿಕರಿಗೆ ಕೆಲವು ಸಲಹೆಗಳನ್ನು ಕೊಡುವುದನ್ನು ನೀವು ಕೇಳಿದ್ದೀರಿ. ಅದನ್ನು ಹೇಳಿ.’
‘ಗೋ ಔಟ್ ವಿಮಾನದಲ್ಲಿ ಪ್ರಯಾಣಿಸುತ್ತಿರುವ ನಿಮಗೆಲ್ಲಾ ಆದರದ ಸ್ವಾಗತ. ಸ್ವಾಗತ ಎಂದರೆಷ್ಟು ಬಿಟ್ಟರೆಷ್ಟು, ಬಂದು ಅಂಡೂರಿ ಕುಳಿತುಬಿಟ್ಟಿದ್ದಿರಲ್ಲ, ಬೇರೇನೂ ಕ್ಯಾಮೆ ಇರದವರ ಹಾಗೆ.’
‘ಏನೆಂದಿರಿ?’
‘ಏನೂ ಇಲ್ಲ. ನಮ್ಮ ವಿಮಾನದಲ್ಲಿ ಮುಂದೆ ಎರಡು ಬಾಗಿಲುಗಳಿವೆ, ಹಿಂದೆ, ತಿರುಗಿಯೇನೂ ನೋಡಬೇಕಾಗಿಲ್ಲ. ಅಲ್ಲೇನೂ ಕರಡಿ ಕುಣಿಯುತ್ತಿಲ್ಲ, ಅಲ್ಲಿ ಎರಡು ನಿರ್ಗಮನ ದ್ವಾರಗಳಿವೆ. ನಡುವೆ ಇನ್ನೆರಡು ಇದ್ದು, ಮಾರ್ಗ ಸೂಚ್ಯಂಕಗಳನ್ನು ಕೆಳಗೆ ಮಾಡಲಾಗಿದೆ. ತುರ್ತು ಸಂದರ್ಭಗಳಲ್ಲಿ ನೀವು ಈ ಬಾಗಿಲುಗಳನ್ನು ಬಳಸಿ ಹೊರಹೋಗಬಹುದು. ಇಲ್ಲಿನ ಬಾಗಿಲುಗಳಲ್ಲಿ ಯಾವುದೇ ಮೀಸಲಾತಿ ಇಲ್ಲ. ವೃದ್ಧರು, ಯುವಕರು, ಅಲ್ಪ ಸಂಖ್ಯಾತರು, ಹಿಂದುಳಿದವರು, ಪ್ರತಿಷ್ಠಿತರು, ಅಪ್ರತಿಷ್ಠರು, ರಾಜಕಾರಣಿಗಳು, ಮನುಷ್ಯರು, ಇವರೆಲ್ಲರೂ ಇದೇ ಬಾಗಿಲುಗಳನ್ನು ಬಳಸಬೇಕೇ ವಿನಃ ಅವರಿಗೆ ಆದ್ಯತೆ ನೀಡುವ ಕ್ರಮ ಇಲ್ಲ. ಹಾಗಂತ ಎಲ್ಲರೂ ಒಂದೇ ಬಾಗಿಲುಗಳತ್ತ ನುಗ್ಗಬೇಡಿ. ನುಗ್ಗಿದರೆ ಹೆಣ್ಣುಗಳ ಮೇಲೆ ಗಂಡುಗಳು, ಗಂಡುಗಳ ಮೇಲೆ ಹೆಣ್ಣುಗಳು ಬಿದ್ದು ಅನಾಹುತವಾಗುವ ಸಂದರ್ಭಗಳಿವೆ. ಹಾಗಾಗಿ ಎಲ್ಲಾ ದ್ವಾರಗಳಲ್ಲಿಯೂ ಹಂಚಿಕೊಂಡು ಹೋಗುವುದು ಸೂಕ್ತ.’
‘ಸರಿ, ಮುಂದುವರಿಸಿ.’
‘ನಿಮ್ಮ ಸೇವೆಯೇ ನಮ್ಮ ಗುರಿ. ಅಕಸ್ಮಾತ್ ವಿಮಾನವೇನಾದರೂ ನೀರಿನಲ್ಲಿ ಬಿದ್ದರೆ ನಿಮ್ಮ ಸೀಟಿನ ಕೆಳಗೆ ತೇಲು ರಕ್ಷಕಗಳಿವೆ. ಅವನ್ನು ನಿಮ್ಮ ಎದೆಗೆ ಕಟ್ಟಿಕೊಳ್ಳಿ. ಇದು ನಿಮ್ಮ ಶೃಂಗಾರದ ವಸ್ತುವಲ್ಲ. ಅದನ್ನು ಧರಿಸಿದಾಗ ಹೇಗೆ ಕಾಣಿಸುತ್ತೀರಿ ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ಸೆಲ್ಫಿಯ ಛಾಯಾಗ್ರಹಣ ಮಾಡಿ, ಫೇಸ್‍ಬುಕ್‍ನಲ್ಲೋ, ವ್ಯಾಟ್ಸ್‍ಅಪ್‍ನಲ್ಲೋ ಲೋಡ್ ಮಾಡುವಷ್ಟು ಸಮಯ ಇಲ್ಲಿಲ್ಲ. ಕೆಳಗಿನ ಸಮುದ್ರದ ನೀರು ಉಪ್ಪಾಗಿರುತ್ತದೆಯಾದರೂ ರಕ್ತದೊತ್ತಡ ಇರುವವರು ಯೋಚಿಸುತ್ತಾ ಕೂರುವಂತಿಲ್ಲ. ಕೆಳಗೆ ಜಲಚರಗಳಿವೆ ಎಂದು ಅಪ್ಪಟ ಸಸ್ಯಾಹಾರಿಗಳೂ ಆತಂಕಪಡುವಂತಿಲ್ಲ. ಪ್ರಾಣ ಉಳಿಸಿಕೊಳ್ಳುವುದೇ ಮುಖ್ಯ. ಜೀವ ಇದ್ದರೆ ಬೆಲ್ಲ ಬೇಡಿಕೊಂಡು ತಿನ್ನಬಹುದು ಎಂದು ಹಿರಿಯರೇ ಹೇಳಿದ್ದಾರೆ. ಹಾಗಾಗಿ ಕೆಳಕ್ಕೆ ಧುಮುಕಿಬಿಡಿ.’
‘ಸೀಟ್ ಬೆಲ್ಟ್ ಕಟ್ಟಿಕೊಳ್ಳಬೇಕೆಂದು ಹೇಳಲೇ ಇಲ್ಲ.’
‘ನಿಮ್ಮ ರಕ್ಷಣೆಗಾಗಿ ಸೀಟ್ ಬೆಲ್ಟ್ ಕಟ್ಟಿಕೊಂಡಿರಿ. ಅದು ನೀವು ಧರಿಸಿದ ಬಟ್ಟೆಗೆ ಮ್ಯಾಚ್ ಆಗುತ್ತೆಯೋ ಇಲ್ಲವೋ ಎಂದು ಯೋಚಿಸಬೇಕಿಲ್ಲ. ಯಾಕೆಂದರೆ ಅದು ಇರೋದೇ ಹಾಗೆ. ಹಾಗಂತೆ ಟೈಟಾಗಿ ಕಟ್ಟಿಕೊಳ್ಳಬೇಡಿ, ಅದು ತುಂಡಾಗುವ ಸಾಧ್ಯತೆಗಳಿವೆ. ಹಾಗಾದರೆ ಅದರಿಂದಾದ ನಷ್ಟವನ್ನು ನಿಮ್ಮಿಂದ ವಸೂಲು ಮಾಡುತ್ತೇವೆ. ಅಕಸ್ಮಾತ್ ಆ ಬೆಲ್ಟ್ ಸರಿಯಾಗಿಲ್ಲವಾದರೆ ನೀವು ಧರಿಸಿದ ಬೆಲ್ಟ್ ಅನ್ನು ಅದಕ್ಕೆ ಸಿಕ್ಕಿಸಿಕೊಂಡುಬಿಡಿ.’
‘ಸರಿ, ಈಗ ಆನ್‍ಬೋರ್ಡ್ ಫುಡ್ ಮಾರಾಟದ ಬಗ್ಗೆ ಅನೌನ್ಸ್ ಮಾಡಿ.’
‘ನಿಮ್ಮ ಸಂತೋಷಕ್ಕಾಗಿ ನಾವು ಈಗ ಸಂಚಾರಿ ಆಹಾರ ಗಾಡಿಯನ್ನು ತಿನಿಸುಗಳ ಮಾರಾಟಕ್ಕೆಂದು ತರುತ್ತೇವೆ. ನಾವು ರೈಲು ನಿಲ್ದಾಣಗಳಂತೆ ಬಿಸಿ ಬಿಸಿ ಸಮೋಸ, ಇಡ್ಲಿ, ಪೂರಿ, ಎಂದೆಲ್ಲಾ ಕೂಗುವುದಿಲ್ಲ. ನಿಮಗೆ ಹಸಿವಾಯಿತೆಂದು ನುಗ್ಗಿ, ಮೇಲೆ ಬಿದ್ದು, ದೊಂಬಿ-ಗೊಂದಲಗಳನ್ನು ಮಾಡಬೇಡಿ. ನಾವು ನಮ್ಮ ಗಾಡಿಗಳನ್ನು ನಿಮ್ಮ ಹತ್ತಿರವೇ ತಳ್ಳಿಕೊಂಡು ಬರುತ್ತೇವೆ. ನಮ್ಮ ಕಂಪನಿಯು ಮೂರು ತಿಂಗಳುಗಳಿಂದ ಸಂಬಳ ಕೊಟ್ಟಿಲ್ಲ, ನಮ್ಮ ವಿಮಾನ ಯಾನ ಸಂಸ್ಥೆ ಯಾವಾಗ ಮುಚ್ಚಿಹೋಗುತ್ತದೆಯೋ, ನಾವು ಎಂದು ಬೀದಿ ಪಾಲಾಗುತ್ತೇವೆಯೋ ತಿಳಿಯದು, ಆದರೂ ನಾವು ನಮ್ಮ ಮುಖಕ್ಕೆ ಬಳಿದ ಎರಡು ಕಿಲೋ ಮೇಕಪ್ ಸಾಮಗ್ರಿಗಳ ನಡುವೆ ಹುಗಿದು ಹೋಗಿದ್ದ ತುಟಿಗಳಲ್ಲಿ ನಗುವನ್ನು ತುಂಬಿಕೊಂಡಂತೆ ಹಸನ್ಮುಖರಾಗಿರುತ್ತೇವೆ. ನಿರಂತರ ಪ್ರಯಾಣದಿಂದ ನಮ್ಮ ಕಣ್ಣುಗಳು ಬಸವಳಿದಿವೆ, ಮುಖ ಬಾಡಿದೆ, ಅವನ್ನು ಸಮಗೊಳಿಸಲು ನಾವು ಪ್ರೀತಿಯಿಂದ ಉಲಿಯುತ್ತೇವೆ. ದಯವಿಟ್ಟು ಸಹಕರಿಸಿ.’
‘ಸರಿ, ಹೇಗೆ ನೀವು ವ್ಯಾಪಾರ ಮಾಡುತ್ತೀರಿ?;
‘ನಿಮ್ಮ ಮುಂದಿನ ಸೀಟಿನ ಹಿಂಭಾಗದಲ್ಲಿ ಇರುವ ಪಟ್ಟಿಯಲ್ಲಿ ನಾವು ಮಾರುವ ವಸ್ತುಗಳ ಹೆಸರುಗಳು, ಬೆಲೆಗಳನ್ನು ಬರೆದಿದ್ದೀವಿ. ನನ್ನ ನಮ್ರ ವಿನಂತಿಯೆಂದರೆ ತಾವು ಅದನ್ನು ನೋಡದಿರುವುದೇ ಒಳ್ಳೆಯದು. ಕಾಫಿಗೆ ಮುನ್ನೂರು ರೂಪಾಯಿ, ಉಪ್ಪಿಟ್ಟಿಗೆ ಐದುನೂರು, ಎಡರು ಚೂರು ಬ್ರೆಡ್ಗಳ ನಡುವೆ ಒಂದಿಷ್ಟು ಚೀಸ್ ಹಾಕಿ, ಮೇಲೊಂದು ಪ್ಲಾಸ್ಟಿಕ್ ಹೊದಿಕೆ, ಹೊರಗೊಂದು ಕಾಗದದ ಬಾಕ್ಸ್ ಇರುವ ‘ಸ್ಯಾಂಡ್‍ವಿಚ್’ಗೆ ನಾಲ್ಕು ನೂರು ರೂಪಾಯಿ, ಈ ದರ ಪಟ್ಟಿ ನೋಡಿದರೆ ಹೃದಯಾಘಾತ ಆಗುವುದು ಗ್ಯಾರಂಟಿ. ಬಿಸಿ ಬಿಸಿ ಸಮೋಸ ಎಂದು ನಾವು ಹೇಳಿದರೂ ಅದನ್ನು ರಸೆಲ್ ಮಾರ್ಕೆಟಿನ ಬೀದಿ ಬದಿಯ ಅಂಗಡಿಯವನು ತನ್ನ ಬಾಣಲೆಯಲ್ಲಿರುವ ಡೀಸೆಲ್‍ನಷ್ಟೇ ದಪ್ಪವಾದ ಎಣ್ಣೆಯಲ್ಲಿ ನಿನ್ನೆ ರಾತ್ರಿ ಕರಿದಿದ್ದು. ಇದನ್ನೆಲ್ಲಾ ಯೋಚಿಸಹೋಗಬೇಡಿ. ಖರೀದಿಸಿ, ಆನಂದಿಸಿ. ಹಾಗಾದರಾದರೂ ನಮ್ಮ ವಿಮಾನ ಸಂಸ್ಥೆಗೆ ಲಾಭವಾಗಿ ನಮಗೆ ಒಂದಿಷ್ಟು ವೇತನ ಕೊಡಬಹುದು.’
‘ಒಳ್ಳೆಯ ನಿರೂಪಣೆ. ಮುಂದುವರಿಸಿ.’
‘ನಿಮಗೆ ಇಷ್ಟೊಂದು ಹಣ ಕೊಡಲು ಬೇಸರವಾದರೆ ಅದಕ್ಕೂ ನಮ್ಮಲ್ಲಿ ಪರಿಹಾರವಿದೆ. ನಾವೇ ನಿಮ್ಮ ಜೇಬಿಗೆ ಕೈ ಹಾಕಿ ಹಣ ತೆಗೆದುಕೊಳ್ಳುತ್ತೇವೆ. ನೂಡಲ್ಸ್ ಪ್ಯಾಕೆಟ್ಟಿಗೆ ಬಿಸಿ ಬಿಸಿ ನೀರು ಸುರುವಿ ಕೊಡುತ್ತೇವೆ. ಅದು ಥೇಟ್ ಸ್ಟಾರ್ ಹೋಟೆಲಿನ ಆಹಾರದ ರುಚಿಯನ್ನು ಹೊಂದಿರುತ್ತದೆ. ಏನೆಂದಿರಾ? ಅದೇ ಸ್ವಾಮಿ, ಉಪ್ಪಿಲ್ಲ, ಹುಳಿಯಿಲ್ಲ, ಖಾರವಿಲ್ಲ. ರೋಗಗಳೂ ಬರುವುದಿಲ್ಲ.’
‘ತಿಂಡಿ ತಿಂದ ನಂತರದ ಕಸ ಇರುತ್ತದಲ್ಲ, ಅದನ್ನು ಸಂಗ್ರಹಿಸುವ ಪ್ರಕಟಣೆಯನ್ನು ತಿಳಿಸಿ.’
‘ಮತ್ತೆ ನಾನು ನೆನಪಿಸುತ್ತೇನೆ, ಇದು ಸರಕಾರಿ ಬಸ್ ಅಲ್ಲ, ಹಾಗಾಗಿ ಕಿಟಕಿಯನ್ನು ತೆರೆಯಲು ಆಗುವುದಿಲ್ಲ. ಜೋರಾಗಿ ಬಲಪ್ರಯೋಗಿಸಿದರೆ ಆಗಬಹುದೋ ಏನೋ, ಆದರೆ ದಯವಿಟ್ಟು ಹಾಗೆ ಮಾಡಬೇಡಿ, ನಿಮ್ಮ ದಮ್ಮಯ್ಯ. ನೀವು ತಿಂದಾದ ಮೇಲೆ ತಿಂಡಿಗಿಂತ ಹೆಚ್ಚಾದ ಪ್ರಮಾಣದ ಕಸವನ್ನು ಸಂಗ್ರಹಿಸಲು ನಾವೇ ಬರುತ್ತೇವೆ. ಕಿಟಿಕಿಯಿಂದ ಹೊರಗೆಸೆಯುವ ದುರಾಲೋಚನೆಯನ್ನು ಮಾಡಬೇಡಿ.’
‘ಹವಾಮಾನ ವೈಪರೀತ್ಯವಾಗುತ್ತದೆ. ಆಗ ಏನು ಮಾಡಬೇಕು?’
‘ಹೊರಗೆ ಮೋಡಕವಿದ ವಾತಾವರಣವಿದ್ದು, ಪ್ರಯಾಣಿಕರೆಲ್ಲರೂ ಕೂಡಲೇ ತಮ್ಮ ಸೀಟಿಗೆ ಬಂದು, ಅಂಡೂರಿ, ಸೀಟ್ ಬೆಲ್ಟ್ ಕಟ್ಟಿಕೊಳ್ಳಬೇಕು. ಅಲ್ಲಿ-ಇಲ್ಲಿ ಅಡ್ಡಾಡಬಾರದು. ಶೌಚಾಲಯದಲ್ಲಿ ಇರುವವರು ಹೇಗಿರುವಿರೋ ಹಾಗೆ, ಎಂತಿರುವಿರೋ ಅಂತೆಯೇ ತಮ್ಮ ಆಸನಕ್ಕೆ ಬಂದು ಆಸೀನರಾಗಬೇಕು. ಮುಂದಿನ ಸೂಚನೆ ಬರುವ ತನ್ಕ ಸೀಟ್ ಬೆಲ್ಟ್ ಅನ್ನು ಬಿಚ್ಚಬಾರದು. ನಿಮ್ಮ ಸೀಟ್ ಬೆಲ್ಟ್ ಹಾಳಾಗಿದ್ದರೆ ದಯವಿಟ್ಟು ನಮ್ಮ ಗಗನ ಸಖಿಯರನ್ನು ಕರೆಯಿರಿ. ನಮ್ಮಲ್ಲಿ ಎಕ್ಸ್‍ಟ್ರಾ ಸೀಟ್‍ಬೆಲ್ಟ್‍ಗಳಿಲ್ಲವಾದ್ದರಿಂದ ಗಗನಸಖಿಯರೇ ತಮ್ಮ ತೋಳುಗಳನ್ನು ಸೀಟ್‍ಬೆಲ್ಟ್‍ಗಳಾಗಿ ಪರಿವರ್ತಿಸುತ್ತಾರೆ ಎಂದು ಏನೇನೋ ಯೋಚಿಸಬೇಡಿ, ಅವರು ಸೀಟ್ ಬೆಲ್ಟ್ ಸರಿಯಾಡಿಕೊಡುತ್ತಾರೆ ಮಾತ್ರ. ನಿಮ್ಮ ಜೇಬಿನಲ್ಲಿ ಬಿಪಿ ಮಾತ್ರೆ ಇದೆಯೇ ಎಂದು ಇನ್ನೊಮ್ಮೆ ತಪಾಸಿಸಿ. ನಿಮ್ಮ ಮನೆಯ ದೇವರನ್ನು ನೆನಪಿಸಿಕೊಳ್ಳಿ. ನಿಮ್ಮ ಸಂತೋಷವೇ ನಮ್ಮ ಸಂತೋಷ. ವಂದನೆಗಳು.’
‘ವಿಮಾನ ಇನ್ನೇನು ಲ್ಯಾಂಡಿಂಗ್ ಆಗುತ್ತದೆ, ಆಗಿನ ಪ್ರಕಟಣೆಯೇನು?’
‘ನೀವು ಆಗಾಗ ಕರೆಗಂಟೆ ಒತ್ತಿ ಯಾವತ್ತು ವಿಮಾನ ಲ್ಯಾಂಡ್ ಆಗುತ್ತದೆ ಎಂದು ನಮ್ಮನ್ನು ಕೇಳಿ ಕಿರಿಕಿರಿ ಕೊಡಬೇಡಿ. ಅದು ಇಳಿಯುವಾಗ ನಾವೇ ಹೇಳುತ್ತೇವೆ. ವಿಮಾನ ನಿಲ್ಲುತ್ತಲೇ ಒಮ್ಮೆಲೇ ಹೊರಬರಲು ಬಾಗಿಲಿನ ಹತ್ತಿರಕ್ಕೆ ನುಗ್ಗಬೇಡಿ. ಎಲ್ಲರೂ ಹೊರಹೋಗುವ ತನಕ ವಿಮಾನ ಇಲ್ಲೇ ಇರುತ್ತದೆ. ಬಸ್ಸುಗಳ ಕಂಡಕ್ಟರಂತೆ ನಾವು ಬೇಗ ಇಳೀರಿ, ಬೇಗ, ಎಂದು ಕೂಗುವುದಿಲ್ಲ. ನಿರ್ಗಮನ ದ್ವಾರದ ಹತ್ತಿರ ನಿಂತು ನಿಮ್ಮ ದ್ರಾಬೆ ಮುಖವನ್ನು ನೋಡುತ್ತಾ ನಾವು ಮುಗುಳ್ನಗುತ್ತೇವೆ. ನೀವು ಅದನ್ನು ಕಾಂಪ್ಲಿಮೆಂಟ್ ಎಂದು ಭಾವಿಸುತ್ತಾ ಎಲ್ಲೂ ಅಪಘಾತವಾಗದೇ ಜೀವ ಸಹಿತ ತಲುಪಬೇಕಾದ ಜಾಗ ಸೇರಿದ್ದಕ್ಕೆ ದೇವರಿಗೆ ವಂದನೆ ಹೇಳುತ್ತಾ, ಮೆಟ್ಟಲಿನಿಂದ ಇಳಿಯಬಹುದು.’
ಸಂದರ್ಶನ ಮುಗಿಯಿತು. ಮಾದೇವಿಗೆ ಕೆಲಸ ಸಿಕ್ಕಿತೋ ಇಲ್ಲವೋ ಕಾಣೆ.
**