ಹಗಲುಗನಸು, ರಾತ್ರಿಯ ಸೊಗಸಾದ ಕನಸು, ಬೆಚ್ಚಿಬೀಳಿಸೋ ಕನಸು, ಬೆಳಗು ಯಾವಾಗಾಗತ್ತೋ ಎಂದು ಕನವರಿಸುವಂತೆ ಮಾಡೋ ಸಾಧನೆಯ ಕನಸು..ಹೀಗೆ ಕನಸಲ್ಲೂ ಎಷ್ಟು ವಿಧ ಅಲ್ವಾ ? ಆಫೀಸಲ್ಲೇ ಕೂತು ತೂಕಡಿಸಿ ತೂಕಡಿಸಿ ಬೀಳೋ ತಿಮ್ಮನಿಗೆ ಬೀಳಬಹುದಾದ ಹಗಲುಗನಸ ಬಗ್ಗೆಯಲ್ಲ ನಾ ಹೇಳಹೊರಟಿರುವುದು ಈಗ. ರಾತ್ರಿಯ ಸೊಗಸಾದ ಪರಿಸರದಲ್ಲಿ, ಕರ್ಲಾನೋ, ಕಂಬಳಿಯೋ, ಚಾಪೆಯೋ,ಜಡ್ಡಿಯೋ, ಜಮಖಾನವೋ, ಕೊನೆಗೆ ಬರಿನೆಲದ ಮೇಲೇ ಮಲಗಿ ನಿರ್ದಿಸುತ್ತಿರುವಾಗ ನಮಗೆ ಬೀಳೋ ಸಹಜಗನಸುಗಳ ಬಗ್ಗೆ ನಾ ಹೇಳಹೊರಟಿದ್ದು.
ಕನಸೆಂದರೇನು ?
ಈ ಕನಸೆಂಬುದು ನಾವು ನಿತ್ಯಜೀವನದಲ್ಲಿ ಕಂಡುಕೇಳಿದ ಘಟನೆಗಳದೇ ಬದಲಾದ ರೂಪವೆಂದು ಹೇಳುತ್ತಾರೆ. ಹಗಲಲ್ಲಿ ಫುಟ್ಬಾಲ್ ಮ್ಯಾಚ್ ನೋಡಿ ಬಂದವನು ರಾತ್ರೆ ಮಲಗಿದಾಗ ತಾನೇ ಫುಟ್ಬಾಲ್ ಆಟಗಾರನಾಗಿದ್ದಂತೆ ಕನಸ ಕಂಡು ಅದರಲ್ಲೇ ತಲ್ಲೀನನಾಗಿ ಪಕ್ಕದಲ್ಲಿ ಮಲಗಿದವನಿಗೆ ಗೋಲ್ ಹೊಡೆಯುವುದು , ವಿಪರೀತ ಕ್ರಿಕೆಟ್ ನೋಡಿದವ ಕನಸಲ್ಲೂ ಔಟ್ ಔಟ್ ಎಂದು ಕನವರಿಸುವುದು, ಸಿಕ್ಕಾಪಟ್ಟೆ ಕಷ್ಟಪಟ್ಟು ಪ್ರೆಸೆಂಟೇಷನ್ ರೆಡಿ ಮಾಡಿದ ವಿದ್ಯಾರ್ಥಿ ಮಾರನೆಯ ದಿನದ ಬಗ್ಗೆಯೇ ಯೋಚಿಸುತ್ತಾ, ಸೀ, ದಿಸ್ ಈಸ್.. ಅಂತೇನೋ ನಿದ್ರೆಯಲ್ಲೂ ಕನವರಿಸೋದು ಹೀಗೆ ಚಿತ್ರವಿಚಿತ್ರದ ಪ್ರಸಂಗಗಳನ್ನು ಗಮನಿಸಿರುತ್ತೇವೆ. ರಾತ್ರೆ ಪಕ್ಕಂತ ಎದ್ದು ಕೂತವನನ್ನು ಇಲ್ಲಾ ಚಿಟಾರನೆ ಚೀರಿದವನನ್ನು ಏನಪ್ಪಾ, ಕೆಟ್ಟ ಕನಸ ಕಂಡ್ಯಾ ಅಂತ ಕೇಳೋದು ಸಾಮಾನ್ಯವೇ . ಅಂದ್ರೆ ಎಲ್ಲೋ ನೋಡಿದ, ಕೇಳಿದ ಘಟನಾವಳಿಗಳು ಹಲತರದ ಬದಲಾವಣೆಗಳಿಗೊಳಗಾಗಿ ಕನಸಾಗಿ ಕಂಡಿರುತ್ತದೆ, ಕಾಡಿರುತ್ತವೆ. ಪರೀಕ್ಷೆಗೆ ಓದುತ್ತಿದ್ದವನಿಗೆ ಎಕ್ಸಾಮಲ್ಲಿ ಫೇಲಾದ ಕನಸು ಬೀಳಬಹುದು. ರ್ಯಾಂಕ್ ಬಂದು ಎಲ್ಲರೊಡನೆ ಸಂಭ್ರಮಿಸುತ್ತಿರುವ ಕನಸೂ ಬೀಳಬಹುದು. ಹೀಗೆ ಕನಸೆಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ. .ಒಂದೇ ವ್ಯಕ್ತಿಗೆ ಒಂದು ದಿನದಲ್ಲಿ ಬಿದ್ದ ಕನಸು ಮಾರನೇ ದಿನ ಬೀಳದೇ ಇರಬಹುದು ಅಥವಾ ಅದೇ ವ್ಯಕ್ತಿಗೆ ಒಂದೇ ದಿನ ಎರಡು ಮೂರು ಕನಸುಗಳೂ ಬೀಳಬಹುದು. ಆದ್ರೆ ಈ ರೀತಿ ಬಿದ್ದ ಕನಸುಗಳೆಲ್ಲಾ ನೆನಪಿರುತ್ತವೆಯೇ ?
ಕನಸುಗಳ ಅವಧಿಯೆಷ್ಟು ?
ಒಂದು ಅಧ್ಯಯನದ ಪ್ರಕಾರ ಒಂದು ರಾತ್ರಿ ಬಿದ್ದ ಮೊದಲ ಕನಸಿನ ಅವಧಿ ಸರಾಸರಿ ಹತ್ತು ನಿಮಿಷವಂತೆ. ಆದಾದ ನಂತರ ಒಳ್ಳೆಯ ನಿದ್ರೆ ಮುಂದುವರಿದರೆ ತದನಂತರ ಬೀಳೋ ಕನಸುಗಳು ೪೫ ನಿಮಿಷದವರೆಗೂ ಇರಬಹುದಂತೆ.
ಒಂದು ರಾತ್ರೆಗೆ ಎಷ್ಟು ಕನಸು ಬೀಳಬಹುದು ?
ಒಂದು ಕನಸು ಬಿದ್ದ ಸರಿಸುಮಾರು ೯೦ ನಿಮಿಷದ ನಂತರ ಮತ್ತೊಂದು ಕನಸು ಶುರುವಾಗುತ್ತದಂತೆ. ಅಂದ್ರೆ ದಿನಕ್ಕೆ ಎಂಟು ಘಂಟೆ ನಿದ್ರಿಸೋ ವ್ಯಕ್ತಿಗೆ ಮೊದಲ ಕನಸು ಮೂವತ್ತನೇ ನಿಮಿಷದಲ್ಲಿ ಮುಗಿಯಿತು ಅಂದ್ಕಂಡ್ರೆ ಎರಡನೇ ಕನಸು ೨:೦೦, ಮೂರನೆಯದು ೩:೪೫, ನಾಲ್ಕನೆಯದು ೫:೩೦, ಐದನೆಯದು ೭:೧೫ ಘಂಟೆಗಳ ನಂತರ ಬೀಳಬಹುದು… (ಮೊದಲ ಕನಸಿನ ಅವಧಿ ಹತ್ತು ನಿಮಿಷ, ಉಳಿದ ಕನಸುಗಳ ಸರಾಸರಿ ಅವಧಿ ೧೫ ನಿಮಿಷ ಅಂತ ಅಂದ್ಕೊಂಡ್ರೆ). ಕನಸುಗಳ ಅವಧಿ ಹೆಚ್ಚುಕಮ್ಮಿಯಾಗುವ ಸಾಧ್ಯತೆಯಿರುವುದರಿಂದ , ರಾತ್ರೆಯಲ್ಲಿ ಮಧ್ಯ ಸೊಳ್ಳೆಕಾಟವೋ, ತಿಗಣೆ ಕಾಟವೋ, ಲೈಟು ಹಾಕಿದ ರೂಂಮೇಟಿನಿಂದ ಆದ ಎಚ್ಚರವೋ, ಮಧ್ಯ ರಾತ್ರಿಗೆ ಬಂದ ರಾಂಗ್ ನಂಬರೋ.. ಹೀಗೆ ಏನಾದ್ರೂ ಆಗಿ ಎಚ್ಚರ ಆಗಿ ಹಲಹೊತ್ತು ನಿದ್ರೆ ಬಾರದೇ ಹೋದ್ರೆ, ಮಾರನೇ ದಿನ ಆಫೀಸಿನ ಚಿಂತೆಗಳೇ ಫುಲ್ ತುಂಬ್ಕೊಂಡು ಸರಿಯಾಗಿ ನಿದ್ರೆ ಬಾರದೇ ಹೋದ್ರೆ, ಅಥವಾ ಇನ್ಯಾವುದೋ ಕಾರಣಾಂತರಗಳಿಂದ ನಾಲ್ಕೋ ಐದೋ ಘಂಟೆ ಅಷ್ಟೇ ನಿದ್ರಿಸಲಾದ್ರೆ ಹೀಗೆ ಬೀಳೋ ಕನಸುಗಳ ಸಂಖ್ಯೆಯಲ್ಲಿ ವ್ಯತ್ಯಾಸ ಕಾಣಬಹುದು. ಒಟ್ನಲ್ಲಿ, ಹೆಚ್ಚು ಹೊತ್ತಿನ ಸುಖನಿದ್ರೆ ಅಂದ್ರೆ ಹೆಚ್ಚಿನ ಕನಸುಗಳು.
ಬಿದ್ದ ಕನಸುಗಳೆಲ್ಲಾ ನೆನಪಲ್ಲುಳಿಯುತ್ತವೆಯೇ ?
ಕೆಲದಿನದ ಕನಸುಗಳು ನಮಗೆ ಆ ದಿನ ಬೆಳಗ್ಗೆ ತಿಂಡಿ ತಿನ್ನುವವರೆಗೂ ನೆನಪಿರಬಹುದು. ಕೆಲ ಕನಸುಗಳು ದಿನಗಳ, ವಾರಗಳವರೆಗೂ ನೆನಪಿರಬಹುದು. ಆದ್ರೆ ಕೆಲದಿನ ಹಿಂದಿನ ದಿನ ಯಾವುದೇ ಕನಸು ಬಿದ್ದೇ ಇಲ್ಲವೆಂಬಂತೆ ಬಿದ್ದ ಕನಸುಗಳೆಲ್ಲಾ ಅಳಿಸಿಹೋಗಿ ಏನೂ ನೆನಪಿಲ್ಲದೇ ಇರಬಹುದು. ನಂಗೆಂತೂ ಯಾವ ಕನಸುಗಳೂ ನೆನಪಲ್ಲುಳಿಯಲ್ಲಪ್ಪ ಅಂತೇಳೂ ಜನರನ್ನೂ ಕಾಣಬಹುದು.
ಕಂಡ ನೆನಪುಗಳನ್ನೆಲ್ಲಾ ದಾಖಲಿಸಬಹುದಾ ?
ವಿಜ್ನಾನಿಗಳ ಪ್ರಕಾರ ಇದು ಸಾಧ್ಯ ! ಅದ್ರೆ ಒಂದು ಕನಸಾದ ನಂತರ ವ್ಯಕ್ತಿಗೆ ಎಚ್ಚರವಾದರೆ ಮಾತ್ರ ಆ ಕನಸು ನೆನಪಲ್ಲುಳಿಯುವ ಸಾಧ್ಯತೆ ಹೆಚ್ಚಂತೆ. ಇಲ್ಲದೇ ಹೋದ್ರೆ ಆ ಕನಸಿನ ನಂತರ ಬರೋ ಮತ್ತೊಂದು ಕನಸು ಅದರ ಸ್ಥಾನವನ್ನು ಆಕ್ರಮಿಸಿಕೊಳ್ಳಬಹುದು. ಹಾಗಾಗಿ ನಮಗೆ ಬಿದ್ದ ಕೊನೆಯ ಕನಸು ಮಾತ್ರ ಬೆಳಗಾಗೆದ್ದಾಗ ನೆನಪಲ್ಲುಳಿಯುವ ಸಾಧ್ಯತೆಯಿರುತ್ತದಂತೆ. ಅದೇ ತರಹ ರಾತ್ರೆ ಹಲವು ಸಲ ಏಳುವ ಸಾಧ್ಯತೆಯಿರುವವರಿಗೆ(ಎದ್ದ ತಕ್ಷಣ , ಎದ್ದು ಎಲ್ಲೋ ಹೋಗಬೇಕೆಂದಲ್ಲ, ಎದ್ದು ಮಗ್ಗುಲು ಬದಲಾಯಿಸಿ ಮಲಗುವುದೂ ಆಗಬಹುದು) ಹೆಚ್ಚೆಚ್ಚು ಕನಸುಗಳು ನೆನಪುಳಿಯುವ ಸಾಧ್ಯತೆಯಿರುತ್ತದಂತೆ. ನನಗೆ ಸಖತ್ತಾದ ಕನಸುಗಳು ಬೀಳುತ್ತಪ್ಪ. ಆದ್ರೆ ನೆನಪೇ ಉಳಿಯೋಲ್ಲ. ಅದನ್ನ ನೆನಪಿಟ್ಟುಕೊಳ್ಳೋದು ಹೇಗೆ ಅನ್ನುವವರು lucitiy.com ನಲ್ಲಿ ಕೊಟ್ಟಿರುವ ಆಸಕ್ತಿಕರವಾದ ಕ್ರಮಗಳನ್ನು ಪಾಲಿಸಬಹುದು(ಉದಾ: ನಿಮ್ಮ ಹಾಸಿಗೆಯ ಪಕ್ಕ ಒಂದು ಬರೆಯೋ ಪುಸ್ತಕ ಇಟ್ಟುಕೊಂಡು , ಪ್ರತೀ ತೊಂಭತ್ತು ನಿಮಿಷಕ್ಕೊಂದು ಅಲಾರಾಂ ಇಟ್ಟು ಏನು ಕನಸ ಬಿದ್ದಿತ್ತು ಅಂತ ಅದರ ಸಂಕ್ಷಿಪ್ತ ಮಾಹಿತಿ ದಾಖಲಿಸಿ ಪುನಃ ಮಲಗೋದು !)
ಕನಸ ನೆನಪುಳಿಯುವಿಕೆಯಲ್ಲಿನ ಭಿನ್ನತೆಗೆ ಕಾರಣಗಳೇನು ?
ಹಿಂದಿನ ಭಾಗದಲ್ಲೇ ಈ ಪ್ರಶ್ನೆಗೆ ಉತ್ತರ ಸಿಕ್ಕಿರಬಹುದು. ಇಲ್ಲಿ ಆ ವಿಷಯವನ್ನು ಮೆದುಳ ಅಲೆಗಳು ಎಂಬ ಮತ್ತೊಂದು ಕೋನದಿಂದ ನೋಡೋಣ. ನಮ್ಮೆಲ್ಲ ನೆನಪೋಲೆಗಳು,ಭಾವನೆಗಳು, ಹಾವಭಾವಗಳಿಗೆ ಕಾರಣ ನಮ್ಮ ಮೆದುಳಲ್ಲಿರೋ ನ್ಯೂರಾನ್ಗಳು ಎಂಬ ವಿಷಯ ನಿಮಗೆ ತಿಳಿದಿದ್ದೇ. ಈ ನ್ಯಾರಾನ್ಗಳ ನಡುವಿನ ವಿದ್ಯುತ್ಕಾಂತೀಯ ಸಂಕೇತಗಳ ಕೊಡುಕೊಳ್ಳುವಿಕೆಯಿಂದ ಮೆದುಳಲೆಗಳು ಉತ್ಪನ್ನವಾಗುತ್ತವೆ. ಈ ಅಲೆಗಳಲ್ಲಿ ಐದು ವಿಧ.
ಅ)ಡೆಲ್ಟಾ(೦.೫ ಇಂದ ೩ ಹರ್ಟ್ಸ್)- ಗಾಢ ಧ್ಯಾನ ಮತ್ತು ಕನಸಿಲ್ಲದ ಸ್ವಪ್ನಾವಸ್ಥೆಯಲ್ಲಿ ಇವುಗಳ ಉಗಮ. ಗಾಯಗೊಂಡ ಕೋಶಗಳ ಗುಣವಾಗುವಿಕೆಗೆ ನೆರವಾಗುತ್ತದೆ.
ಆ)ಥೀಟಾ(೩ರಿಂದ ೮ ಹರ್ಟ್ಸ್). ನಿದ್ರಾವಸ್ಥೆಯಲ್ಲಿ ಹಲವು ಬಾರಿ ಮತ್ತು ಗಾಢ ಧ್ಯಾನದಲ್ಲೂ ಉಗಮವಾಗುತ್ತದಿದು. ಹೊರಗಿನ ಘಟನಾವಳಿಗಳ ಗ್ರಹಿಕೆಯಿಂದ ನಮ್ಮ ಜ್ನಾನೇಂದ್ರಿಯಗಳನ್ನು ತಡೆದು ಅಂತರಂಗದ ಅಲೆಗಳ ಮೇಲೆ ಗಮನಹರಿಸುವಂತೆ ಮಾಡುತ್ತವಿದು. ಕಲಿಯುವಿಕೆ ಮತ್ತು ಜ್ನಾಪಕ ಶಕ್ತಿಗೆ ಕಾರಣ
ಇ)ಆಲ್ಪಾ(೮ರಿಂದ ೧೨ ಹರ್ಟ್ಸ್)- ಭಾವಗಳ ಹರಿಯುವಿಕೆಯಲ್ಲಿ ಇವುಗಳ ಜನನ. ಕಲಿಯುವಿಕೆ, ಪ್ರಶಾಂತತೆ, ಎಚ್ಚರಗೊಳ್ಳುವಿಕೆಗೆ ಕಾರಣ
ಈ)ಬೀಟಾ(೧೨ರಿಂದ ೩೮ ಹರ್ಟ್ಸ್)-ಸಾಮಾನ್ಯ ಜಾಗೃತಾವಸ್ಥೆಯಲ್ಲಿ ಇವುಗಳ ಜನನ. ನಿರ್ಧಾರ ತಗೊಳ್ಳುವುದು, ಸಮಸ್ಯೆ ಬಿಡಿಸುವಿಕೆ ಮತ್ತಿತರ ಮೆದುಳ ಕ್ರಿಯೆಗಳಿಗೆ ಕಾರಣ
ಉ)ಗಾಮ(೩೨ರಿಂದ ೪೨ ಹರ್ಟ್ಸ್)- ಮೆದುಳಿನ ಹಲವು ಭಾಗಗಳು ಏಕಕಾಲದಲ್ಲಿ ಹಲವು ಕೆಲಸಗಳಲ್ಲಿ ತೊಡಗಿದಾದ ಉತ್ಪತ್ತಿಯಾಗುವ ಅಲೆಗಳಿವು. ವಾಸ್ತವ ಗ್ರಹಿಕೆಯ ಮೇಲೆ ತುಂಬಾ ಪ್ರಭಾವ ಬೀಳೋ ಇದರ ಮೇಲಿನ ಹೆಚ್ಚಿನ ಮಾಹಿತಿಗಾಗಿನ ಸಂಶೋಧನೆಗಳು ಇನ್ನೂ ನಡೆಯುತ್ತಿವೆ.
ಮತ್ತೆ ಮೂಲ ವಿಷಯಕ್ಕೆ ಬರೋದಾದ್ರೆ ಕನಸು ನೆನಪುಳಿಯೋಕೆ ಈ ಆಲ್ಪಾ ಅಲೆಗಳ ಹೆಚ್ಚು ಕಮ್ಮಿಯಾಗುವ ತರಂಗಾಂತರವೇ ಕಾರಣ ಎಂದು ಹಲವು ವಿಜ್ನಾನಿಗಳ ಅಂಬೋಣ. ವಿಜ್ನಾನಿ ಬಹುರ್ ಗೋಲಿಪೋರ್ ಅವ್ರ ತಂಡ ೩೬ ಜನರನ್ನು ಈ ಸಂಬಂಧದ ಒಂದು ಸಂಶೋಧನೆಗೆ ಒಳಪಡಿಸಿದ್ರಂತೆ. ಪ್ರತಿರಾತ್ರಿ ಬಿದ್ದ ಕನಸನ್ನು ನೆನಪಿಟ್ಟುಕೊಳ್ಳುತ್ತೇವೆ ಅನ್ನೋ ಒಂದಿಷ್ಟು ಜನ, ಬಿದ್ದ ಕನಸ್ಯಾವುದೂ ನೆನಪಲ್ಲೇ ಇರೋಲ್ಲ ಎಂಬ ಜನ ಆ ತಂಡದಲ್ಲಿದ್ದರು. ಕನಸ ನೆನಪಿಡುವವರು ರಾತ್ರೆ ಆಗಾಗ ಏಳುತ್ತಿದ್ದರಂತೆ. ಮತ್ತು ಅವರ ನಿದ್ರಾವಸ್ಥೆಯಲ್ಲಿ ಆಲ್ಪಾ ಅಲೆಗಳ ತರಂಗಾತರ ವ್ಯತ್ಯಾಸವಾಗುತ್ತಾ ಒಂದೆಡೆ ಸಾಗುತ್ತಿತ್ತಂತೆ(ಥೀಟಾದೆಡೆಗೆ). ಇದರ ಬಗ್ಗೆ ಹೆಚ್ಚು ತಿಳಿಯಲು ಇವರಿಗೆ ಒಂದೇ ತರದ ಲಘು ಸಂಗೀತವನ್ನು ಕೇಳಬಿಟ್ಟು(ಮಲಗಿದವರನ್ನು ಎಚ್ಚರಿಸುವಷ್ಟು ದೊಡ್ಡದಲ್ಲ ಮತ್ತೆ) ಅದರ ಮಧ್ಯ ಮಧ್ಯ ಅವರದೇ ಹೆಸರನ್ನು ಕೇಳಿಸಲಾಗುತ್ತಿತ್ತಂತೆ. ಈ ಪ್ರಯೋಗವನ್ನು ಅವರು ಎಚ್ಚರವಿದ್ದಾಗ ಮತ್ತು ನಿದ್ರಾವಸ್ಥೆಯಲ್ಲಿದ್ದಾಗ ಪುನರಾವರ್ತಿಸಲಾಯಿತಂತೆ. ಜಾಗೃತಾವಸ್ಥೆಯಲ್ಲಿದ್ದಾಗ ಗಾನದ ಮಧ್ಯೆ ತಮ್ಮ ಹೆಸರ ಕರೆದಾಗ ಎರಡೂ ಗುಂಪಿನವರ ಆಲ್ಪಾ ತರಂಗಗಳು ಕಡಿಮೆಯಾದ್ರೂ ಹೆಚ್ಚು ಕನಸ ನೆನಪಿಟ್ಟುಕೊಳ್ಳುವ ಮಂದಿಯಲ್ಲಿ ಕಮ್ಮಿಯಾಗುವ ಪ್ರಮಾಣ ಜಾಸ್ತಿಯಿತ್ತಂತೆ(ಬೀಟಾದೆಡೆಗೆ).ಆದ್ರೆ ನಿದ್ರೆಯಲ್ಲಿದ್ದಾಗ ಇದರ ವ್ಯತಿರಿಕ್ತ ಘಟನೆಗಳು ನಡೆಯುತ್ತಿತ್ತಂತೆ. ನಿದ್ರೆಯಲ್ಲಿದ್ದಾಗ ಶಬ್ದಗಳು ಕೇಳಿದಾಗ ಆಲ್ಪಾ ತರಂಗಗಳು ಕನಸ ನೆನಪಿಟ್ಟುಕೊಳ್ಳವ ಜನರಲ್ಲಿ ಉಳಿದವರಿಗಿಂತ ಹೆಚ್ಚು ಹೆಚ್ಚಾಗುತ್ತಾ(ಥೀಟಾ ಕಡೆಗೆ) ಸಾಗುತ್ತಿತ್ತಂತೆ. ಇದರ ಹಿಂದಿನ ಖಚಿತ ಕಾರಣ ತಿಳಿಯದಿದ್ದರೂ ನಿದ್ರೆಯಲ್ಲಿರೋ ವ್ಯಕ್ತಿಯನ್ನು ಹೊರಗಿನ ಘಟನಾವಳಿಗಳಿಂದ ಎಚ್ಚೆತ್ತುಕೊಳ್ಳುವುದನ್ನು ತಪ್ಪಿಸೋ ಸದುದ್ದೇಶ ಇರಬಹುದೆಂಬುದು ಅವರ ಊಹೆ.
ಕನಸು ಅಂತ ಶುರುವಾದ ಲೇಖನದಲ್ಲಿ ಆಲ್ಫಾ, ಬೀಟಾ, ಥೀಟಾ ಅಂತೆಲ್ಲಾ ಬಂದು ತಲೆ ಚಿತ್ರಾನ್ನವಾಯ್ತಾ ? ಹೆ.ಹೆ ತೀರಾ ತಲೆ ಕೆಡಿಸ್ಕೋಬೇಡಿ. ಕೊನೆಯೆರಡು ಪ್ಯಾರಾಗಳನ್ನು ಮತ್ತೊಮ್ಮೆ ಓದಿ ನಿಮ್ಮ ನಿದ್ರಾವಸ್ಥೆಯೊಂದಿಗೆ ಹೋಲಿಸಿ ನೋಡಿ. ಇನ್ನೊಂದಿಷ್ಟು ಸಮಂಜಸವಾಗಿ ಅರ್ಥವಾಗಬಹುದು. ಇನ್ನೂ ಅರ್ಥವಾಗಿಲ್ವಾ ? ಪರ್ವಾಗಿಲ್ಲ. ಬಿಟ್ಟು ಬಿಡಿ. ಎಲ್ಲಾ ಚಿಂತೆ ಬಿಡಿ. ಆರಾಮವಾಗಿ ನಿದ್ರಿಸಿ. ಒಳ್ಳೊಳ್ಳೆ ಕನಸು ಬೀಳಲಿ. ಬಿದೊಳ್ಳೆ ಕನಸುಗಳು ನೆನಪುಳಿಯಲಿ. ಮುಂದಿನ ಜೀವನಕ್ಕೆ ಸ್ಪೂರ್ತಿಯ ಚಿಲುಮೆಯಾಗಲಿ, ಗೆಲುವ ಹಾದಿಯಾಗಲಿ.
******