ಸರಣಿ ಬರಹ

ಕನಸುಗಳಿಗೆ ಒಂದಿಷ್ಟು ಪುಷಪ್ ಕೊಡಿ: ಕೃಷ್ಣ ಶ್ರೀಕಾಂತ ದೇವಾಂಗಮಠ

krishna-devangamath

ಮನುಷ್ಯರೆಲ್ಲರಿಗೂ ಕನಸು ಬೀಳುತ್ತವೆ. ಅದರಲ್ಲಿ ಕೆಲವು ಬರಿ ಕಾಣುವ ಕನಸುಗಳು ಮಾತ್ರ, ಆದರೆ ಕನಸುಗಳನ್ನು ಕಟ್ಟುವವರು ಬಹಳ ಕಡಿಮೆ ಹಾಗೆಯೇ ಕಟ್ಟಿದ ಕನಸುಗಳಿಗೆ ರೆಕ್ಕೆ ಕೊಡುವವರು ಇನ್ನೂ ಬಹಳ ಕಡಿಮೆ. ಹಾಗಾದರೆ ಮೊದಲು ನೀವು ಕನಸು ಕಾಣುವುದು ಮತ್ತು ಕಟ್ಟುವುದರ ಮಧ್ಯೆಯ ಸೂಕ್ಷ್ಮ ವ್ಯತ್ಯಾಸವನ್ನು  ತಿಳಿದುಕೊಳ್ಳಬೇಕು. ಇದನ್ನು ನಿಮಗೆ ಅಬ್ದುಲ್ ಕಲಾಂ ಅವರ ಮಾತುಗಳಿಂದ ಬೇಗ  ತಿಳಸಬಹುದು ಅನ್ನಿಸುತ್ತದೆ. ಅಬ್ದುಲ್ ಕಲಾಂ ಹೇಳುತ್ತಾರೆ " ಮಲಗಿದಾಗ ಬೀಳುವುದು ಕನಸಲ್ಲ , ನಿಮ್ಮನ್ನು ಯಾವುದು ಮಲಗಲು ಬಿಡುವುದಿಲ್ಲವೋ ಅದು ನಿಜವಾದ ಕನಸು " ಈ ಮಾತುಗಳ ಹಿಂದೆ ನಿಮ್ಮ ಕನಸುಗಳನ್ನು ಕಟ್ಟಿ ಬೆಳೆಸುವುದು ಮತ್ತು ನನಸಾಗಿಸಿಕೊಳ್ಳುವುದರ ಮೆಟ್ಟಿಲುಗಳಿವೆ. ಒಬ್ಬ ವಿಜ್ಞಾನಿ ಆವಿಷ್ಕಾರದಲ್ಲಿ ತೊಡಗಿಕೊಂಡರೆ ಅವನಿಗೆ ಆವಿಷ್ಕಾರ ಬಿಟ್ಟರೆ ಇನ್ಯಾವ ಹೊರ ಪ್ರಪಂಚವೂ ಕಾಣಿಸುವುದಿಲ್ಲ ಹಾಗೆ ನೀವು ಹಾಡಗಾರರಾಗಬೇಕೆಂದರೆ ಹಾಡು ನಿಮ್ಮ ಸರ್ವಸ್ವವೂ ಆಗಿಬಿಡಬೇಕು ಹಾಗಾದರೆ ಮಾತ್ರ ನೀವು ಪರಿಪೂರ್ಣತೆಯತ್ತ ಸಾಗಲು ಸಾಧ್ಯ. ನಿಮ್ಮ ಕನಸುಗಳಿಗೆ ನೀವು ಮತ್ತು ನಿಮಗೆ ಕನಸುಗಳು ಬೆಂಗಾವಲಾಗಿರಬೇಕಾಗುತ್ತದೆ. ಒಂದು ವೇಳೆ ಹಾಗಾಗದಿದ್ದಲ್ಲಿ ರೆಕ್ಕೆ ಇಲ್ಲದ ಪಕ್ಷಿಯಂತೆ ನೀವಾಗುತ್ತೀರಿ ಎಚ್ಚರ ! ಒಮ್ಮೆ ಯೋಚಿಸಿ ನೋಡಿ ರೆಕ್ಕೆ ಪುಕ್ಕ ಇಲ್ಲದ ಹಕ್ಕಿಯ ಪರಿಸ್ಥಿತಿ ಹೇಗಿರುತ್ತದೆ ? ಹಾರಲು ಬಾರದೆ ನೆಲದಲ್ಲಿ ವಿಲವಿಲ ಒದ್ದಾಡುವ ಪರಿಸ್ಥಿತಿ ಬರುತ್ತದೆ, ಆಗಸಕ್ಕೆ ಹಾರುವುದು ಇನ್ನು ಬರಿಯ ಕನಸೆ ಆಗಿಬಿಡುತ್ತದೆ. ಹಾಗಾಗಬಾರದು ಎಂದರೆ ನೀವು ಮತ್ತು ನಿಮ್ಮ ಕನಸುಗಳು ಒಟ್ಟಾಗಿರಬೇಕು. ದೇಹ ಮತ್ತು ಆತ್ಮಗಳು ಯಾವಾಗಲೂ ಒಂದಾಗಿರುವಂತೆ. ಆಗಲೆ ನೀವು ಸರಾಗವಾಗಿ ಉಸಿರಾಡಬಹುದು ಹಾಗೆ ನಿಮ್ಮ ಕನಸುಗಳೂ ಕೂಡ. ಕನಸುಗಳನ್ನು ಕಟ್ಟುವುದು ಇವತ್ತಿನ ಕಾಲಕ್ಕೆ ಮನೆ ಕಟ್ಟಿದಷ್ಟೆ ಕಷ್ಟದ ಕೆಲಸ ಆದರೆ ಈ ಕಷ್ಟದಲ್ಲಿ ಒಂದು ನಗು ನೆಮ್ಮದಿ ಸಾರ್ಥಕತೆ ಇದೆ ಎನ್ನುವುದನ್ನು
ಮರೆಯುವಂತಿಲ್ಲ.

ಇನ್ನು ಕನಸುಗಳನ್ನು ಬೆಳೆಸುವುದೂ ಸುಲಭವಿಲ್ಲ. ತಾಯಿ ಮಕ್ಕಳನ್ನು ಲಾಲಿಸಿ – ಪೋಷಿಸಿ ಬೆಳೆಸುವಷ್ಟೇ ಶ್ರಮವಿದೆ. ಸಸಿ ಬೆಳೆದು ಹೆಮ್ಮರವಾಗಲು ಬೇಕಾದಷ್ಷೇ ಶಕ್ತಿ ನಿಮ್ಮಲ್ಲಿರಬೇಕಾಗುತ್ತದೆ ಅದರೊಟ್ಟಿಗೆ ತಾಳ್ಮೆಯೂ. ನಿಮ್ಮ ಕನಸುಗಳಿಗೆ ನೀವು ಸದಾ ಒತ್ತಾಸೆಯಾಗಿದ್ದರೆ ಎಲ್ಲವೂ ಸಾಧ್ಯವಾಗುತ್ತಾ ಹೋಗುತ್ತವೆ. ನಿಮ್ಮ ಬೆನ್ನಿಗೆ ಅಪ್ಪನೋ, ಗುರುವೋ, ಸ್ನೇಹಿತನೋ ನಿಂತಂತೆ. ಕನಸಗಳು ಕಾಲಕಾಲಕ್ಕೆ ವಯೋಸಹಜದಂತೆ ಬಲಿಯುತ್ತಾ, ಬೆಳೆಯುತ್ತಾ ,ಬೇರೊಬ್ಬರನ್ನು ಬೆಳೆಸುತ್ತಾ, ತನ್ನಲ್ಲಿ ಬದಲಾವಣೆಗೊಳ್ಳುತ್ತಾ ಸಮಾಜದ ಬದಲಾವಣೆಗೆ ಒಗ್ಗಿಕೊಂಡು ಮುನ್ನುಗ್ಗಬೇಕು. ಹೊರಗಿನ ಪ್ರಭಾವಕ್ಕೆ ನಿಮ್ಮ ಕನಸುಗಳನ್ನು ಎಂದಿಗೂ ಬಲಿಕೊಡಬೇಡಿ. ಒಂದನ್ನು ಪಡೆಯಲು ಹೋಗಿ ಮತ್ತೊಂದನ್ನು ಕಳೆದುಕೊಳ್ಳುವುದು ಮುಟ್ಠಾಳತನವೇ ಸರಿ ಅದು ಬಹಳಷ್ಟು ಬಾರಿ ನಮಗೆ ಗೊತ್ತಿಲ್ಲದೇ ಆಗಿಬಿಡುವಂಥದ್ದು , ಅದು ಒಂಥರಾ ಎರಡು ದೋಣಿಯ ಮೇಲಿನ ಪಯಣದಂತಾಗುತ್ತದೆ.  ಎಲ್ಲಕ್ಕೂ ಮಿಗಿಲಾದದ್ದು ಬದುಕೆ. ದಾಸರು ಹೇಳಿದಂತೆ ಬಾಳು ನೀರಮೇಲಿನ ಗುಳ್ಳೆ, ಒಂದು ವೇಳೆ ತೆಪ್ಪ ಸುಳಿಗೆ ಸಿಕ್ಕಿಬಿಟ್ಟರೆ ಕಷ್ಟ.

ಚಿಕ್ಕ ವಯಸ್ಸಿಗೆ ಕನಸು ಕಟ್ಟಲು ಶುರು ಮಾಡುತ್ತೀರಿ ಅದೂ ಅಪ್ಪನನ್ನು ನೋಡಿ. ಅಪ್ಪ ಡಾಕ್ಟರ್ ಎಂದಾದರೆ ನಿಮ್ಮಲ್ಲಿ ಅಪ್ಪನಂತೆ ನೀವು ಆಗಬೇಕು ಅನ್ನುವ ಅಂಕುರ ಪುಟಿದೆದ್ದು ಬಿಡುತ್ತದೆ. ಇಲ್ಲಿ ಹೀಗೆ ಮೊದಲುಗೊಂಡ ಕನಸು ಬೆಳೆಯುತ್ತಾ ಜಗತ್ತನ್ನು ನಿಮ್ಮದಾಗಿಸಿಕೊಳ್ಳುತ್ತಾ ಬಾವಿಯೊಳಗಿನ ಕಪ್ಪೆಯಂತಿದ್ದ ಕನಸನ್ನು ಸಮುದ್ರದ ತಿಮಿಂಗಿಲವಾಗಿಸಿಬಿಡುತ್ತದೆ. ಆ ಕನಸನ್ನು ಸಾಕಾರಗೊಳಿಸಲು ಜೀರ್ಣಿಸಿಕೊಳ್ಳಲು ಬಹುತೇಕ ಸಮಯ ಹಿಡಿದೆ ಹಿಡಿಯುತ್ತದೆ. ನೀವು ಬಿಡದೆ ಪಟ್ಟು ಹಿಡಿದು ಸೆನಸಾಟ ನಡೆಸುವಂತಿದ್ದರೆ ಕನಸೆಂಬ ಕುದುರೆಯನ್ನೇರಿ ಕೂರುವುದು ಶತಸಿದ್ಧ. 100% ಖಾತ್ರಿ. ಇದೆಲ್ಲದಕ್ಕೂ ಬದುಕು ಅಷ್ಟು ಸಲೀಸಾಗಿ ನಿಮ್ಮನ್ನು ತೊಡಗಿಸಿಕೊಳ್ಳಲು ಬಿಡುವುದಿಲ್ಲ. ಒಳ್ಳೆಯ ಕೆಲಸಕ್ಕೆ ಹತ್ತಾರು ವಿಘ್ನಗಳು ಎಂಬಂತೆ ಕಷ್ಟಗಳು ಹಾದಿಯುದ್ದಕ್ಕೂ ಹಾಸಿಕೊಂಡಿರುತ್ತವೆ. ಅದರಲ್ಲಿ ಕೆಲವು ನಿಮ್ಮ ಶ್ರಮಕ್ಕೆ ಹೂವಾದರೆ ಕೆಲವು ಮುಳ್ಳಿನಂತೆ ಚುಚ್ಚಿಕೊಂಡು ನಿಮ್ಮ ಧೈರ್ಯವನ್ನು ಕುಂಠಿತಗೊಳಿಸಲು ಸದಾ ಯತ್ನಿಸುತ್ತಿರುತ್ತವೆ ಆದರೆ ಇವೆಲ್ಲಕ್ಕೂ ಸೊಪ್ಪು ಹಾಕದೆ, ತಲೆ ಕೆಡಿಸಿಕೊಳ್ಳದೆ ಮನೋಸ್ಥೈರ್ಯದಿಂದ ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು. ಹೀಗೆ ಮುನ್ನುಗ್ಗುವಾಗ ಮೈಯೆಲ್ಲ ಕಣ್ಣಾಗಿದ್ದರೆ ಒಳಿತು ಇಲ್ಲವೇ ಮುಗ್ಗರಿಸಿ ಬೀಳುವ ಅಪಾಯವಿದೆ.  ಅತೀ ಎನ್ನುವುದು ನಮ್ಮೊಡನೆ ಬೇಗ ಹೊಂದಿಕೊಂಡು ಬಿಡುವಂಥದ್ದು ಅದು ನಮ್ಮನ್ನು ಇನ್ನಿಲ್ಲದ ಕಷ್ಟಗಳ ಗುಂಡಿಗೆ ನೂಕಿಬಿಡುತ್ತದೆ.

-ಕೃಷ್ಣ ಶ್ರೀಕಾಂತ ದೇವಾಂಗಮಠ




 

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಕನಸುಗಳಿಗೆ ಒಂದಿಷ್ಟು ಪುಷಪ್ ಕೊಡಿ: ಕೃಷ್ಣ ಶ್ರೀಕಾಂತ ದೇವಾಂಗಮಠ

  1. ತುಂಬ ಚೆನ್ನಾಗಿ ಮೂಡಿಬಂದಿದೆ ಬರವಣಿಗೆ ಹೀಗೆ ಸಾಗಲಿ

Leave a Reply

Your email address will not be published. Required fields are marked *