ಕಡಿದೊಗೆದ ಬಳ್ಳಿಯು ಕುಡಿಯೊಡೆಯುವಂತೆ: ಎಸ್. ಜಿ. ಸೀತಾರಾಮ್, ಮೈಸೂರು

“ತ್ಯಾಜ್ಯ ವಸ್ತು” ವಿಲೇವಾರಿಯ ಬಗ್ಗೆಯೇನೋ ಇಂದು ಎಲ್ಲೆಡೆ ಬಿಸಿಬಿಸಿ ಚರ್ಚೆಗಳಾಗುತ್ತಿವೆ; ಆದರೆ, ತಮ್ಮ ಕುಟುಂಬ, ಬಂಧು-ಬಳಗ, ಸಮುದಾಯ, ಯಾವುದಕ್ಕೂ ಬೇಡವಾದ “ತ್ಯಾಜ್ಯ ವ್ಯಕ್ತಿ”ಗಳ ಸ್ಥಿತಿಗತಿಯ ಬಗ್ಗೆ ‘ಕ್ಯಾರೇ?’ ಎನ್ನುವ ಮಂದಿ ಎಷ್ಟಿದ್ದಾರು? ಹಾಗೆನ್ನುವವರಲ್ಲೂ, ಈ ಪರಿಸ್ಥಿತಿಗೆ ಏನಾದರೊಂದು ಪರಿಹಾರ ಹೊಂದಿಸಬೇಕೆಂದು ನಿಜವಾಗಿ ‘ಕೇರ್’ ಮಾಡುವವರು ಅದೆಷ್ಟು ಇದ್ದಾರು? ಇಂಥ ದಾರುಣ ಅವಸ್ಥೆಯ ನಡುವೆ, ಸಮಾಜದ ಕುಪ್ಪೆಯಲ್ಲಿ ಕಾಲ ತೇಯುತ್ತ, ಬದುಕಾಟದ ಕೊಟ್ಟಕೊನೆಗೆ ಹೇಗೋ ‘ಜೋತುಬಿದ್ದಿರುವ’ ಸ್ತ್ರೀಯರಿಗೆ ಅನ್ನ, ಆರೈಕೆ, ನೆರಳು, ನೆಮ್ಮದಿ ನೀಡುವ ಸಲುವಾಗಿ, ವಿದ್ಯಾವಂತ, ದಯಾಶೀಲ, ಸಾಹಸಿ ಯುವತಿಯೊಬ್ಬರು ತಮ್ಮ ಜೀವಿತವನ್ನೇ ಮುಡಿಪಾಗಿಟ್ಟಿರುವರೆಂದರೆ ಅಚ್ಚರಿಯಾಗದೇ? ಅಂಥ ಅತಿಶಯ ಸಮಾಜಸೇವಕಿ, 28 ವಯಸ್ಸಿನ ಎಮ್. ಎಸ್. ಸುಷ್ಮಾ. ಪತಿ ರವಿಕುಮಾರ್‍ರವರ ಸಹಯೋಗದಲ್ಲಿ ಇವರು ಮೈಸೂರಿನಲ್ಲಿ ನಡೆಸುತ್ತಿರುವ “ಚಿಗುರು ಆಶ್ರಮ”, ಸಮಾಜದ ಅನಾದರದಿಂದ, ಅಮಾನವೀಯತೆಯಿಂದ ಚಿವುಟಿಹಾಕಲ್ಪಟ್ಟ ಬಾಳಬಳ್ಳಿಗಳನ್ನು ಮರುಚಿಗುರಿಸಲು, ಕೊಯ್ದು ಕೊರಡಾಗಿಸಲ್ಪಟ್ಟಿದ್ದ “ಕೊನೆ”ಗಳನ್ನು ಕೊನರಿಸಲು, “ಅನಿಕೇತನ” ಆಗಿರುವ ಪೀಡಿತ ಚೇತನಗಳಿಗೆ “ನಿಕೇತನ” ನೀಡಲು, ಅಮೋಘ ಪ್ರಯತ್ನವನ್ನು ಮಾಡುತ್ತಿದೆ. ಸಮಾಜದಿಂದ, ಬದುಕಿನಿಂದ “ಗಡೀಪಾರಾಗಿರುವವರನ್ನು” ಕಾಯುವ “ಬಾರ್ಡರ್ ಸೆಕ್ಯೂರಿಟಿ ಫೋರ್ಸ್” ಆಗಿ ಶ್ರೇಷ್ಠ ಕರ್ಮವೊಂದನ್ನು ನೆರವೇರಿಸುತ್ತಿದೆ.

ಜನಸೇವೆಗಾಗೆಂದೇ ಕೂಡಿಬಂದ ಮೂಲಬಲಗಳು
ಮಂಡ್ಯ ಜಿಲ್ಲೆ, ಕೆ. ಆರ್. ಪೇಟೆ ತಾಲ್ಲೂಕಿನ ಮದ್ದಿಕ್ಯಾಚಮ್ಮನ ಹಳ್ಳಿಯ ಕೃಷಿಕ ಕುಟುಂಬ ಹಿನ್ನೆಲೆಯ ಸುಷ್ಮಾ, ಮೂಲತಃ ತಮ್ಮ ಅಜ್ಜಿ ಸಾವಿತ್ರಮ್ಮನವರಿಂದ ಪರೋಪಕಾರಿ ಮೌಲ್ಯಗಳನ್ನು ಶಾಲಾದಿನಗಳಲ್ಲೇ ರೂಢಿಸಿಕೊಂಡರು. ಕೆಲವು ಪ್ರಾಥಮಿಕ ಮತ್ತು ಪ್ರೌಢಶಾಲಾ ಮಾಸ್ತರರೂ ಇವರಿಗೆ ಇದೇ ಮಾರ್ಗದಲ್ಲಿ ಮತ್ತಷ್ಟು ಉತ್ತೇಜನವಿತ್ತರು. ಕಾಲೇಜಿನ ಓದಿಗಾಗಿ ಮೈಸೂರಿಗೆ ಸ್ಥಳಾಂತರಗೊಂಡ ಸುಷ್ಮಾರಿಗೆ ತಮ್ಮ ಸಮಾಜಮುಖಿ ಪ್ರವೃತ್ತಿಯನ್ನು ಗಟ್ಟಿಪಡಿಸಿಕೊಳ್ಳಲು ಒಂದು ಸುವರ್ಣಾವಕಾಶವೇ ಸಿಕ್ಕಂತಾಯಿತು. ಉತ್ಸಾಹದಿಂದ ಎನ್.ಎಸ್.ಎಸ್. ಸೇರಿದ ಸುಷ್ಮಾ, ಅದರಲ್ಲಿ ಇಡೀ ಮೈಸೂರು ವಿಶ್ವವಿದ್ಯಾನಿಲಯಕ್ಕೇ “ಅತ್ಯುತ್ತಮ ಸ್ವಯಂಸೇವಕಿ” ಎಂಬ ವಾರ್ಷಿಕ ಪ್ರಶಸ್ತಿಯನ್ನು ಗೆದ್ದುಕೊಂಡರು; ಕಾಲೇಜನ್ನು ಬಿಟ್ಟ ಬಳಿಕವೂ “ಹಿರಿಯ ಸ್ವಯಂಸೇವಕಿ” ಆಗಿ ಮುಂದುವರಿದು, ಎನ್.ಎಸ್. ಎಸ್. ವ್ಯೂಹದ ‘ಮಾದರಿ ಮುಂದಾಳು’ ಆಗಿ ಶೋಭಿಸಿದರು. ಇದರ ಜೊತೆಯಲ್ಲೇ ಮೈಸೂರಿನ ‘ರಂಗಾಯಣ’ ಸಂಸ್ಥೆಯ ‘ಜನಮನ’ ತಂಡವನ್ನು ಸೇರಿ, ನಾಟಕರಂಗದಲ್ಲಿ ತಮ್ಮನ್ನು ತೀವ್ರವಾಗಿ ತೊಡಗಿಸಿಕೊಂಡು, ಸ್ವತಃ ನಿರ್ದೇಶನ ಮಾಡುವವರೆಗೂ ಪರಿಣತಿ ಸಂಪಾದಿಸಿದರು. ನಟಿ, ನಿರೂಪಕಿ ಮತ್ತು ಚರ್ಚಾಪಟುವಾಗಿ ಬಹುವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಮಿನುಗಿದರು. ರಂಗಭೂಮಿ ಮತ್ತು ಎನ್.ಎಸ್. ಎಸ್., ಈ ಎರಡು ಹವ್ಯಾಸಗಳಿಂದಾಗಿ ಇವರಿಗೆ ವ್ಯಾಪಕ ಪ್ರವಾಸಾನುಭವವೂ, ಜನಸಂಪರ್ಕವೂ ದೊರೆತು, ಇವರ ಸೇವೆ-ಸಾಹಸ ಮನೋಭಾವಕ್ಕೆ ದ್ವಿಭುಜಬಲ ಬಂದಂತಾಯಿತು. ಜೀವನವನ್ನು ರೂಪಿಸುವುದರಲ್ಲಿ ಪಾಠ್ಯೇತರ ಚಟುವಟಿಕೆಗಳ ಮಹತ್ತ್ವವನ್ನು, ಹಳ್ಳಿಯಿಂದ ದಿಲ್ಲಿವರೆಗೆ ಬೆಳೆದ ಈ ಹುಡುಗಿಯ ವ್ಯಕ್ತಿತ್ವದಲ್ಲಿ ಸ್ಫುಟವಾಗಿ ಕಾಣಬಹುದು. (ಪ್ರಸಿದ್ಧ “ಜಲಗಾರ” ನಾಟಕದ, “ಪರಿಶ್ರಮವೇ ಪರಮಾತ್ಮ” ಎಂಬಂಥ ಸಂದೇಶವು ತಮಗಿತ್ತ ಸ್ಫೂರ್ತಿಯನ್ನು ಇವರು ಈಗಲೂ ನೆನೆಯುತ್ತಾರೆ). ಎನ್. ಎಸ್. ಎಸ್. ಬಲವೇ ಮುಂದೆ (2013ರಲ್ಲಿ) ಇವರನ್ನು MSW (Master of Social Work) ಪದವಿ ಪಡೆಯುವ ಹಂತಕ್ಕೆ ಒಯ್ದಿತು. ಬಿ.ಎ. ಓದುತ್ತಿದ್ದಾಗಲೇ ತನ್ನ ಹಾಸ್ಟೆಲ್‍ನ ಹಿಂದೆ ಅಲೆದಾಡಿಕೊಂಡಿದ್ದ, ಮಾನಸಿಕ ತೊಂದರೆಯಿದ್ದ ಸ್ತ್ರೀಯೊಬ್ಬಳನ್ನು ಕಂಡು ಕರುಳು ಚುರುಗುಟ್ಟಿದಾಗ, ತನ್ನ ಮಿತಿಮೀರಿ ಆಕೆಗೆ ನೆರವಾದ ಸುಷ್ಮಾರಿಗೆ, ಆ ಘಟನೆಯಿಂದಾಗಿ ಬದುಕಿನಂಚಿನಲ್ಲಿ, ಬೀದಿಬದಿಯಲ್ಲಿ, ಚಳಿ-ಮಳೆಯಲ್ಲಿ, ಜಾಡ್ಯ-ಜಖಂಗಳ ಹಿಂಸೆಯಲ್ಲಿ ದಿನದೂಡುತ್ತಿರುವ ಹೆಂಗಸರ ಪಾಲನೆಗಾಗಿ ತಾನೊಂದು ಏರ್ಪಾಟನ್ನು ಮಾಡಲೇಬೇಕೆಂಬ ಹೆಬ್ಬಯಕೆ ಹಸಿರೊಡೆಯಿತು. ಮುಂದೆ MSW ಮುಗಿಸುವ ವೇಳೆಗೆ, “ಹೀಗೆಯೇ ಮುನ್ನಡೆಯುವುದರಲ್ಲೇ ಅಡಗಿದೆ ನನ್ನ ಬಾಳಹಾದಿ” ಎಂಬ ದಿಟವನ್ನು ಕಂಡುಕೊಂಡ ಸುಷ್ಮಾ, ಆ ದಿಸೆಗೇ ತಮ್ಮನ್ನು ನಿಶ್ಚಿತವಾಗಿ ತಿರುಗಿಸುವ ಒಂದು ಸೂಕ್ತ ಉದ್ಯೋಗವನ್ನು, ಬೆಂಗಳೂರಿನ ‘ಆರ್. ವಿ. ಎಮ್. ಫೌಂಡೇಶನ್’ ಸೇವಾಸಂಸ್ಥೆಯಲ್ಲಿ ಪಡೆದರು. ನಿರ್ಗತಿಕರಾಗಿ, ಅತೀವ ಮಾನಸಿಕ ಅಥವಾ ದೈಹಿಕ ದೌರ್ಬಲ್ಯಗಳಿರುವ ದೀನರ ‘ಶುಲ್ಕರಹಿತ’ ಸೇವೆಗಾಗಿ ಬನ್ನೇರುಘಟ್ಟದಲ್ಲಿ ಒಂದು ವಿಶಿಷ್ಟ ಆಸ್ಪತ್ರೆಯನ್ನೂ, ಚಿಕ್ಕಗುಬ್ಬಿಯಲ್ಲಿ ಒಂದು ವಿಶಾಲ ‘ಬಿಡಾರ’ವನ್ನೂ ನಡೆಸುತ್ತಿರುವ ಈ ಸಂಸ್ಥೆಯು, ಈ ಸೌಲಭ್ಯಗಳ ಜರೂರು ಇರುವವರನ್ನು ತನ್ನದೇ “ಪಾರುಮಾಡುವ ಪಡೆ” ಮೂಲಕವಲ್ಲದೇ, ಇದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಎನ್.ಜಿ.ಓ.ಗಳ ಮೂಲಕವೂ ಮೂಲೆಮೂಲೆಗಳಿಂದ ಕರೆಸಿಕೊಂಡು, ಸುಧಾರಣೆಯಾದ ಬಳಿಕ ಅಂಥವರನ್ನು ಸಂಬಂಧಿತ ಎನ್.ಜಿ.ಓ.ಗಳಲ್ಲೇ ಪುನರ್ವಸತಿಗೊಳಿಸುವ ಜನಹಿತೈಷಿ ಕಾರ್ಯವನ್ನು ಈಡೇರಿಸುತ್ತಿದೆ. ಈ ಉದ್ದೇಶಕ್ಕಾಗಿ, ಆರ್.ವಿ.ಎಮ್. ಫೌಂಡೇಶನ್‍ನಲ್ಲಿ “ನೆಟ್‍ವರ್ಕ್ ಕೋ-ಆರ್ಡಿನೇಟರ್” ಎಂಬ ಹೊಣೆಯನ್ನು ಹೊತ್ತ ಸುಷ್ಮಾ, ಎನ್.ಜಿ.ಓ.ಗಳೊಡನೆ ವ್ಯಾಪಕ ಸಂಬಂಧಗಳನ್ನೂ, ತಮ್ಮ ವೃತ್ತಿಯಲ್ಲಿ ಅಮೂಲ್ಯ ಅನುಭವವನ್ನೂ, ಮತ್ತು ಪ್ರಧಾನವಾಗಿ, ಆರ್. ವಿ. ಎಮ್. ಜೊತೆ, ಭವಿಷ್ಯದಲ್ಲಿ ಶಾಶ್ವತವಾಗಿ ಫಲದಾಯಕವಾಗುವಂಥ ಸ್ನೇಹವನ್ನೂ ಗಳಿಸಿಕೊಂಡರು. ಇಲ್ಲಿಂದಾಚೆಗೆ ಮೈಸೂರಿಗೆ ಮರಳಿದ ಸುಷ್ಮಾ, ಮಹಿಳೆಯರ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾಮಟ್ಟದ, “ಕಾಣೆಯಾದ ಮಕ್ಕಳ” ಸಹಾಯವಾಣಿಯಲ್ಲಿ ತಮ್ಮ ವ್ಯವಹಾರಜ್ಞಾನವನ್ನೂ, ಆತ್ಮವಿಶ್ವಾಸವನ್ನೂ ಮತ್ತಷ್ಟು ಬಲಪಡಿಸಿಕೊಂಡು, 2014ರಲ್ಲಿ ತಮ್ಮ ಕನಸಿನ ಕೂಸು “ಚಿಗುರು ಆಶ್ರಮ”ಕ್ಕೆ ಜನ್ಮವಿತ್ತರು.

ಖಿನ್ನಮನಸ್ಕ ಅಬಲೆಯರಿಗೊಂದು ಅಭಯಾಶ್ರಮ
ತಮ್ಮ ಉದ್ಯೋಗಾವಧಿಯಲ್ಲಿ ಕೂಡಿಸಿಟ್ಟುಕೊಂಡಿದ್ದ ಅಲ್ಪಧನಬಲದಿಂದಲೇ, “ಜನಸೇವಾ ಟ್ರಸ್ಟ್” ಎಂಬ ಹೆಸರಿನಡಿಯಲ್ಲಿ, 6.2.14 ದಿನಾಂಕದಲ್ಲಿ, ಮನೋವೈಕಲ್ಯವಿರುವ ಮತ್ತು ಮನೆಯಿಂದಾಚೆಯಾಗಿರುವ ಎಂಟು ಸ್ತ್ರೀಯರ ಹದುಳಕ್ಕಾಗಿ “ಚಿಗುರು ಆಶ್ರಮ”ವನ್ನು ನೆಟ್ಟಗೆ, ದಿಟ್ಟಗೆ ಹೂಡಿಯೇಬಿಟ್ಟ ಸುಷ್ಮಾರಿಗೆ, ಸಹಾಯ, ಸಹಕಾರ, ಸಹಮತಿ, ಸಮರ್ಥನೆ ಏಕಪ್ರಕಾರವಾಗಿ ಲಭಿಸಲಾರಂಭಿಸಿದವು; “ಪರಹಿತ ಕಾರ್ಯಗಳಿಗೆ ಒತ್ತಾಸೆ ಎಂದಿಗೂ ತಪ್ಪದು” ಎಂದು ಅವರಲ್ಲಿ ಭರವಸೆಯನ್ನು ತುಂಬತೊಡಗಿದವು. ಈ ಸೇವಾಸದನಕ್ಕಾಗಿ ಅವರು ಮೈಸೂರು ಬಳಿಯ ಬೆಳವಾಡಿಯಲ್ಲಿ ತಾಣವೊಂದನ್ನು ಬಾಡಿಗೆಗೆ ಹಿಡಿದಾಗ, ಅಜ್ಜಿ ಸಾವಿತ್ರಮ್ಮನವರು ಧನದಾನ ಮಾಡಿದ್ದಲ್ಲದೇ, ಶ್ರಮದಾನಕ್ಕೂ ಟೊಂಕಕಟ್ಟಿ ನಿಂತರು. ಜೊತೆಗೆ ಸುಷ್ಮಾರ ಕೆಲವು ಸಹಪಾಠಿಗಳೂ, ಸ್ನೇಹಿತರೂ ಕೊಡುಗೈ ಕಾಣಿಕೆಗಳನ್ನಿತ್ತರು, ಮತ್ತು ಖ್ಯಾತ ಉದ್ಯಮಿಯೊಬ್ಬರು ದಿನಂಪ್ರತಿ ಅನ್ನದಾನದ ಜವಾಬ್ದಾರಿಯನ್ನು ವಹಿಸಿಕೊಂಡರು. ಈ ಘಟ್ಟದಲ್ಲಿ ಸುಷ್ಮಾರ ಬದುಕಿಗೆ ‘ವರದಾನ’ವಾಗಿ ಬಂದ ಬಲವೆಂದರೆ, ಬಿ.ಎ.-ಬಿ.ಬಿ.ಎಮ್. ಓದಿ, ಅಲ್ಲೇ ಹತ್ತಿರದಲ್ಲಿ ತಮ್ಮದೇ ಒಂದು ಸಣ್ಣ ವಹಿವಾಟನ್ನು ನಡೆಸುತ್ತಿದ್ದ ‘ಬಿ. ರವಿಕುಮಾರ್’. ಸುಷ್ಮಾರ ಮನೋಧರ್ಮ, ಸಾಹಸಕರ್ಮಗಳನ್ನು ಮೆಚ್ಚಿ, ಸಹಾಯಹಸ್ತವನ್ನೂ ಚಾಚಿದ್ದ ರವಿಕುಮಾರ್, ತಡವಿಲ್ಲದೆ ಸುಷ್ಮಾರ ಬಾಳಸಂಗಾತಿಯಾಗಿಬಿಟ್ಟರು; “ಚಿಗುರು ಆಶ್ರಮ”ದಲ್ಲಿ ಸುಷ್ಮಾರಿಗೆ ಹೆಗಲೆಣೆಯಾಗಿ ನೆಲೆನಿಂತು, ಅದನ್ನು ತಮ್ಮವರ ವಶದಲ್ಲೇ ಇದ್ದ, ಕೂರ್ಗಳ್ಳಿ ಕೈಗಾರಿಕಾ ಪ್ರದೇಶದ ನಿವೇಶನವೊಂದಕ್ಕೆ ವರ್ಗಾಯಿಸಿ, ಮುಂಬರುವ ಅದರ ಬೆಳವಣಿಗೆಗೆ ಒಂದು ಹದವಾದ ಅವಕಾಶವನ್ನು ಕಲ್ಪಿಸಿದರು. ಮನೋಗತ ಆಘಾತಕ್ಕೆ ಬಲಿಯಾಗಿರುವವರ ಶುಶ್ರೂಷೆಯು ಬೇಡುವ ಅಸಾಮಾನ್ಯ ಮನೋಶಕ್ತಿಯನ್ನು ಸಮವಾಗಿ ಹೊಂದಿರುವ ಸುಷ್ಮಾ-ರವಿಕುಮಾರ್ ನಡುವೆ ನಡೆದ ‘ಮನಸ್ಸುಗಳ ಮದುವೆ’ ಇಲ್ಲಿ ಗಮನಾರ್ಹ.

ಕೊನೆಯಿಲ್ಲದ ಸಮಸ್ಯೆಗಳು ~ ಎಣೆಯಿಲ್ಲದ ಉತ್ಸಾಹ
ಕಂಗೆಟ್ಟ ಎಂಟು ಹೆಂಗಸರ ಆಹಾರ, ಆರೋಗ್ಯ ಮತ್ತು ಆಶ್ರಯದ ಅಗತ್ಯವನ್ನು ಪೂರೈಸಲು, ಐದು ವರ್ಷಗಳ ಹಿಂದೆ ಮೊದಲ್ಗೊಂಡ “ಚಿಗುರು”, ಇಂದು ಅಂಥ 35 ಹೆಂಗಸರಿಗೆ ಅನುಕೂಲವನ್ನು ಒದಗಿಸುವ ದರ್ಜೆಗೆ ಬೆಳೆದಿದ್ದು, ಈಗ 25 ಹೆಂಗಸರು ಇದರ ಫಲಾನುಭವಿಗಳಾಗಿದ್ದಾರೆ. ಇವರಲ್ಲಿ ಮನೋರೋಗಕ್ಕೊಳಗಾಗಿರುವವರು ಮತ್ತು ಯಾವುದೇ ಆಸರೆಯಿಲ್ಲದ ತೀರ ಅಶಕ್ತರು; ತೀಕ್ಷ್ಣ ದೈಹಿಕ ಅಡಚಣೆಗಳಿದ್ದು ಹಾಸಿಗೆ ಅಥವಾ ಗಾಲಿಕುರ್ಚಿ ಹಿಡಿದಿರುವವರು, ಮತ್ತು ಅದೇ ಕಾರಣಕ್ಕಾಗಿ ಬೇರೆ ಇಂಥ ಆಶ್ರಮಗಳಲ್ಲಿ ನಿರಾಕರಿಸಲ್ಪಟ್ಟವರು; ಮನತಪ್ಪಿ, ಮನೆತಪ್ಪಿ, ಬೀದಿಪಾಲಾಗಿ, ತಿರುಪೆ ಎತ್ತುತ್ತಿದ್ದು, ಕಡೆಗೆ ಇಲ್ಲಿಗೆ ಪಾರಾಗಿಸಲ್ಪಟ್ಟವರು ಮೊದಲಾದ ಬಗೆಗಳಿವೆ. ಇಲ್ಲಿ 18 ವಯಸ್ಸನ್ನು ದಾಟಿರುವ ಮತ್ತು “ನಿರಾಶ್ರಿತ” ಎಂದು ಪೊಲಿಸ್ ಅಥವಾ ಪಂಚಾಯ್ತಿ ಪ್ರಮಾಣಪತ್ರ ಇರುವವರನ್ನು ಮಾತ್ರ ಒಳತೆಗೆದುಕೊಳ್ಳುವ ನಿಯಮವಿದ್ದು, ಈಗ 70 ವಯಸ್ಸಿನವರೆಗಿನವರೂ, ಮತ್ತು ಕನ್ನಡವೇ ಅಲ್ಲದೆ, ಹೆಚ್ಚಾಗಿ ತಮಿಳು, ಜೊತೆಗೆ ಮಲೆಯಾಳಂ, ತೆಲುಗು, ಮರಾಠಿ ಅಥವಾ ಹಿಂದಿ ಮಾತನಾಡುವವರೂ, ಮಾತನ್ನೇ ಆಡಲಾಗದ ತ್ರಾಸವಿರುವವರೂ, ವಿಭಿನ್ನ ಜಾತಿಮತಗಳವರೂ ಕಾಣಪಡುತ್ತಾರೆ. ನಿತ್ಯಕರ್ಮಗಳು, ಯೋಗಾಭ್ಯಾಸ, ಪ್ರಾರ್ಥನೆ ಮತ್ತು ಉಪಾಹಾರದಿಂದ ಮೊದಲ್ಗೊಂಡು, ಸಂಜೆಯ ವ್ಯಾಯಾಮ ಮತ್ತು ರಾತ್ರಿಯೂಟದೊಡನೆ ಮುಕ್ತಾಯವಾಗುವ ಇಲ್ಲಿಯ ದಿನಚರಿಯಲ್ಲಿ, ಕಾಗದದಿಂದ ಪೊಟ್ಟಣಗಳನ್ನು ಮಾಡುವುದು, ‘ಫೀನಾಲ್’ (phenol) ತಯಾರಿಕೆ ಇತ್ಯಾದಿ ಉಪಯುಕ್ತ ಕೆಲಸಗಳೂ ಸೇರಿವೆ, ಮತ್ತು ಸಣ್ಣ ಮಟ್ಟದಲ್ಲಿ ಹಸುಗಳನ್ನು ಸಾಕಲು ಈಗ ತಯಾರಿ ನಡೆದಿದೆ. ಆಶ್ರಮವಾಸಿಗಳು ಚಟುವಟಿಕೆಗಳಲ್ಲಿ ತೊಡಗಿರುವಾಗ ಮೊಲಗಳು ಮತ್ತು ಪಾರಿವಾಳಗಳನ್ನು ಸುತ್ತಲಲ್ಲಿ ಆಡಲು ಬಿಟ್ಟು, ಮನಸ್ಸಿಗೆ ಉಲ್ಲಾಸದ ಉಪಚಾರವನ್ನು ನೀಡಲಾಗುತ್ತದೆ; ಅವಶ್ಯವಿದ್ದಾಗ ಸರ್ಕಾರಿ ಕೆ.ಆರ್. ಆಸ್ಪತ್ರೆಗೆ ಕರೆದೊಯ್ದು, ಅನಿವಾರ್ಯವಾದಾಗ ಆ ಆಸ್ಪತ್ರೆಗೂ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತದೆ. ಇಲ್ಲಿಗೆ ಬರುವ ಹಲವು ಪ್ರಕರಣಗಳನ್ನು ಪರೀಕ್ಷೆ ಮತ್ತು ಪರಿಹಾರಕ್ಕಾಗಿ (ಮೇಲೆ ಹೇಳಿದ) ಆರ್. ವಿ. ಎಮ್. ಫೌಂಡೇಶನ್‍ಗೆ ಒಪ್ಪಿಸಲಾಗುತ್ತದೆ, ಮತ್ತು ಇದರಲ್ಲಿ, ಎಚ್. ಐ. ವಿ., ಗ್ಯಾಂಗ್ರೀನ್ ಇತ್ಯಾದಿ ಗಂಭೀರ ವೈದ್ಯಕೀಯ ಬೇನೆಗಳಿರುವವರನ್ನುಳಿದು ಬೇರೆಯವರಿಗೆ “ಚಿಗುರು” ಅಡಿಯಲ್ಲೇ ಮರುವಸತಿ ನೀಡಲಾಗುತ್ತದೆ. ಸಾವು ಸಂಭವಿಸಿದಲ್ಲಿ, ಪೊಲಿಸ್ ಠಾಣೆ ಮತ್ತು ಮಾನವ ಹಕ್ಕುಗಳ ಆಯೋಗದ ಸಹಯೋಗದಲ್ಲಿ ಮುಂದಿನ ಕ್ರಮವನ್ನು ಜರುಗಿಸಲಾಗುತ್ತದೆ.

ಒಟ್ಟಾರೆ, ಈ ನಿವಾಸಿಗಳ ನಿರ್ವಹಣೆ ನಿರಾಯಾಸವಲ್ಲ. ಇವರಲ್ಲಿ ಕೆಲವರು ಕೆಲವು ದಿನಗಳಲ್ಲಿ ಇದ್ದಕ್ಕಿದ್ದಂತೆ ಕೆರಳಿ ಜಗಳ-ಬೈಗುಳಗಳಿಂದ ಗಲಭೆ ಎಬ್ಬಿಸುತ್ತಾರೆ; ಬಲಪ್ರಯೋಗಿಸಿ ಹಾನಿ ಮಾಡುತ್ತಾರೆ (ಹಾಗಿದ್ದವರಲ್ಲೊಬ್ಬರು ಈಗ ಸುಧಾರಿಸಿ, ಇಲ್ಲೇ ಚಿಕ್ಕಪುಟ್ಟ ಸಹಾಯ ಮಾಡಿಕೊಂಡಿದ್ದಾರೆ). ಇಂಥವರ ನಡೆನುಡಿಗಳನ್ನು ಸೂಕ್ಷ್ಮವಾಗಿ ಗ್ರಹಿಸಿರುವ ಸುಷ್ಮಾ, “ಎಂಥ ವಿಷಮ ಪರಿಸ್ಥಿತಿಯಲ್ಲೂ ಕ್ಷಮಾಗುಣ, ವಾಸ್ತವತೆಯ ಸ್ವೀಕಾರ, ಸಮಾಧಾನದಿಂದ ಆಲಿಸುವುದು ಮತ್ತು ಗಮನಿಸುವುದು ಮುಖ್ಯ; ಇಂಥವರನ್ನು ಜಾಣತನದಿಂದಲೇ ನಿಭಾಯಿಸಬೇಕೇ ಹೊರತು, ‘ಹುಚ್ಚರು’ ಎಂದು ಹಣೆಪಟ್ಟಿ ಹಾಕಿ ತಳ್ಳಿಬಿಡುವ ನಾವು ಹುಚ್ಚರಲ್ಲವೇ?”ಎಂದು ಪ್ರಶ್ನಿಸುತ್ತಾರೆ. “ದೈನಂದಿನ ವ್ಯವಹಾರಗಳಲ್ಲಿ ನನಗೆ ಎಂದೂ ಕಷ್ಟವೆನಿಸಿಲ್ಲ; ನನ್ನ ಕೆಲಸ ತುಂಬ ತೃಪ್ತಿ ತಂದಿದೆ” ಎಂದು ತಮ್ಮ ಕಠಿಣ ವೃತ್ತಿಯೆಡೆಗೆ ತಮಗಿರುವ ಅಪಾರ ಅನುರಾಗವನ್ನೂ, ಆದರವನ್ನೂ ಮೆರೆಯುತ್ತಾರೆ.

ಚಿಗುರು ಆಶ್ರಮವಾಸಿಗಳಲ್ಲಿ ಅಧಿಕಾಂಶ ಯಾರಿಗೂ ತಮ್ಮ ಊರು, ವಿಳಾಸ ಇತ್ಯಾದಿ ವಿವರಗಳಿರಲಿ, ಅಸಲು ತಮ್ಮ ಹೆಸರೇ ಗೊತ್ತಿರುವುದಿಲ್ಲ. ಕಡುನೋವಿನ ಅನುಭವಗಳಿಂದಾಗಿ ಅವರು ತಮ್ಮ ಹಿನ್ನೆಲೆಯ ಕೆದಕುವಿಕೆಯನ್ನು ತಪ್ಪಿಸಿಕೊಳ್ಳಲು ಬಯಸಬಹುದು, ಗೊತ್ತಿದ್ದೂ ಬೇಕೆಂದೇ ತಪ್ಪು ಉತ್ತರ ಕೊಡಬಹುದು, ಅಥವಾ ಅವರ ನೆನಪುಗಳೇ ಮಬ್ಬಾಗಿಬಿಟ್ಟಿರಬಹುದು ಅಥವಾ ಅಳಿಸಿಯೇ ಹೋಗಿರಬಹುದು. ಕೆಲವರು ಬರಿಯ ಅಳು ಅಥವಾ ಮೌನದಲ್ಲೇ ಮುಳುಗಿದರೆ, ಇನ್ನು ಕೆಲವರು ಇಲ್ಲಿಯ ಆವರಣದಿಂದ ರಾತ್ರೋರಾತ್ರಿ ಪರಾರಿಯಾಗಲು ಪ್ರಯತ್ನಿಸುವರು (ಹೀಗಾಗಬಾರದೆಂದು ಇಲ್ಲಿ ಎತ್ತರದ ಕಾಂಪೌಂಡ್ ಏರಿಸಲಾಗಿದ್ದು, ಗೇಟಿಗೆ ಸದಾ ಬೀಗ ಹಾಕಿರುತ್ತಾರೆ), ಮತ್ತೆ ಕೆಲವರು ಮನೆಯಂತಿರುವ ಇಲ್ಲಿಯ ಸುಖವಾಸಕ್ಕೆ ತೀರ ಒಗ್ಗಿಹೋಗಿ, ತಾವು ಸರಿಹೋದ ಮೇಲೂ ಬಿಟ್ಟುಹೋಗಲೊಲ್ಲರು. ಇಲ್ಲಿಯ ವೃದ್ಧ ನಿವಾಸಿಯೊಬ್ಬರು ತೀರಿಕೊಂಡಾಗ, ಅವರನ್ನು “ಬದುಕಿದ್ದೀಯ?” ಎಂದು ಎಂದೂ ಕೇಳದೆ, ಅವರು ಸತ್ತಾಗಲೂ ತಲೆಹಾಕದೆ, ಅವರ ಆಸ್ತಿಗಾಗಿ ಮರಣಪತ್ರ ‘ಗಿಟ್ಟಿಸಲು’ ಮಾತ್ರ ಒಂದು ಬೆಳಗ್ಗೆ ಹಠಾತ್ತನೆ ಪ್ರತ್ಯಕ್ಷವಾದ ಅವರ ಸಂತತಿಯವರ ಹಗರಣವು ಈಚೆಗೆ ಬಹಿರಂಗವಾಗಿತ್ತು. ಹಾಗೆಯೇ, ಇಲ್ಲಿಯ ನಿವಾಸಿಗಳಲ್ಲಿ ಒಬ್ಬರನ್ನು ಅವರ ಸಂಬಂಧಿಗಳು ಕೆಲವು ವರ್ಷಗಳ ಬಳಿಕ ಹುಡುಕಿ ಬಂದು ಬಿಡಿಸಿಕೊಂಡು ಹೋದ, ಮತ್ತು ಇನ್ನೊಬ್ಬರ ಸ್ಥಿತಿ “ವಾಸಿ”ಯಾಗಿ ಅವರು ಮನೆಸೇರಿದ ಪ್ರಸಂಗಗಳೂ ದಾಖಲೆಯಲ್ಲಿವೆ.

ತಮ್ಮ ಆಶ್ರಮವಾಸಿಗಳ ದಶೆಯನ್ನು ಸಾವಧಾನವಾಗಿ ಪರಿಶೀಲಿಸಿರುವ ರವಿಕುಮಾರ್, “ದಿಕ್ಕುದೆಸೆಯಿಲ್ಲದೆ ತಿರುಗಾಡುತ್ತಿರುವವರೂ ಸಂತಪ್ತ ಮನಸ್ಕರೇ. ವಿಶೇಷವಾಗಿ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚು ಕಾಣುತ್ತದೆ, ಮತ್ತು ಹಳ್ಳಿಗಾಡುಗಳಲ್ಲಂತೂ ಬಹುತೇಕ ಮಂದಿ ಇಂಥವರ ದುರವಸ್ಥೆಗೆ ಸ್ಪಂದಿಸುವುದೇ ಇಲ್ಲ. ದಿನಗೂಲಿಯಿಂದ ಬದುಕುತ್ತಿರುವವರಿಗೆ, ತಮ್ಮ ಕುಟುಂಬದ ಇಂಥ ಸದಸ್ಯರಿಗೆ ಚಿಕಿತ್ಸೆಯನ್ನು ಕೊಡಿಸಲು ಹಣ, ಸಮಯ, ತಿಳಿವಳಿಕೆ ಹೇಗೆ ಬಂದೀತು? ಇದಲ್ಲದೆ, ದೈಹಿಕ ವಿಕಲತೆ ಇರುವವರನ್ನಾದರೂ ಹೇಗೋ ನಿಭಾಯಿಸಬಹುದೇ ಹೊರತು, ಮನಸ್ಸು ನೆಟ್ಟಗಿಲ್ಲದವರನ್ನು ಇಟ್ಟುಕೊಳ್ಳುವ ಉಮೇದು ಎಷ್ಟು ಕುಟುಂಬಗಳಿಗಿದ್ದೀತು? ಪುಟ್ಟಮಕ್ಕಳನ್ನು ಕಣ್ಣಿಟ್ಟು ಕಾಯುವಂತೆ ಇಂಥವರಿಗೆ ನಿಗಾ ಕೊಡಲು ಇಂದಿನ ಎಷ್ಟು ಕುಟುಂಬಗಳಿಗೆ ಕಾರ್ಯಸಾಧ್ಯವಾದೀತು?” ಎಂದು ಮನವರಿಕೆ ಮಾಡುತ್ತಾರೆ; “ಮಾನಸಿಕ ಮಾಂದ್ಯ ಇರುವವರನ್ನೇ ದೃಷ್ಟಿಯಲ್ಲಿಟ್ಟು ವಿಶೇಷ ಸಮೀಕ್ಷೆ ನಡೆಸಬೇಕು; ಅಂಥವರಿಗೆಂದೇ ವಿಶೇಷ ವೇತನವನ್ನು ಬಜೆಟ್‍ಗಳಲ್ಲಿ ಸೇರಿಸಬೇಕು” ಎಂದು ಒತ್ತಾಯಿಸುತ್ತಾರೆ. ಇನ್ನೂ ಮುಂದುವರಿಸಿ, “ಹೆಸರು, ವಿಳಾಸ, ಫೋನ್ ನಂಬರು” ಮೊದಲಾದ ಮೂಲವಿವರಗಳೇ ಸಿಗದಿರುವಾಗ, ಇಂಥವರಿಗೆ ‘ಆಧಾರ್ ಕಾರ್ಡ್’ ಮಾಡಿಸುವುದು ಹೇಗೆ? ‘ರೇಶನ್ ಕಾರ್ಡ್’ ಕೊಡಿಸುವುದು ಹೇಗೆ? ಹಾಗಿದ್ದರೆ, ಚಿತ್ತವಿಕಾರವಿದ್ದವರು ದೇಶದ ಪ್ರಜೆಗಳೇ ಅಲ್ಲವೇ? ‘ಅವರಿಂದ ಓಟು ಸಿಗದು’ ಎಂಬ ಕಾರಣಕ್ಕಾಗಿ, ಅವರು ಯಾವ ನೇತಾರರಿಗೂ ಬೇಡವಾದರೇ?” ಎಂದು ಕಳಕಳಿಯಿಂದ ಕೇಳುವ ರವಿಕುಮಾರ್, “ಮನತಪ್ಪಿ ಬೀದಿಪಾಲಾಗಿರುವವರಿಗೆ ಮನೆಯಿತ್ತು, ಮೈಸೂರನ್ನು ಅಂಥವರಿಂದ ಮುಕ್ತವಾಗಿಸುವ, ಮತ್ತು ದೌರ್ಜನ್ಯಕ್ಕೆ ಬಲಿಯಾಗಿ ಕುಟುಂಬದಿಂದ ಹೊರಗಟ್ಟಲ್ಪಟ್ಟವರಿಗೆ ನ್ಯಾಯ ಮತ್ತು ಪೋಷಣೆ ದೊರಕಿಸಿಕೊಡುವ” ಹೆಗ್ಗುರಿಯನ್ನು ಹೊಂದಿದ್ದಾರೆ.

ಧನಾಧಾರ ಮತ್ತು ಜನಾದರ
ಚಿಗುರು “ಧರ್ಮಶಾಲೆ”ಯು ಒದಗಿಸುತ್ತಿರುವ ಸೇವೆಗೆ ಬೆಲೆ ಕಟ್ಟಲಾಗದು; ಇಲ್ಲಿ ಸರ್ವಸೌಕರ್ಯಗಳೂ “ಧರ್ಮಾರ್ಥ”; ಸರ್ಕಾರದ ಕಾರ್ಯಕ್ಕೆ, ಈ ಪುಟ್ಟ, ಖಾಸಗಿ ವ್ಯವಸ್ಥೆ ಚೊಕ್ಕವಾಗಿ ನೆರವಾಗುತ್ತಿದ್ದರೂ, ಇದಕ್ಕೆ ಯಾವುದೇ ಸರ್ಕಾರಿ ಅನುದಾನ ದೊರಕಿಲ್ಲ (ಕೆಲವು ನೇತಾರರು ವೇದಿಕೆಗಳಲ್ಲಿ ಚಪ್ಪಾಳೆ ಗಿಟ್ಟಿಸಲೆಂದೇ ಈ ಸಂಸ್ಥೆಗೆ ನೆರವನ್ನು ಘೋಷಿಸಿ, ಆಮೇಲೆ ಇವರತ್ತ ಕಣ್ಣೆತ್ತಿಯೂ ನೋಡದ ಪ್ರಸಂಗಗಳೂ ಉಂಟು!). ಆದರೆ, ವಿವಿಧ ಖಾಸಗಿ ಸಂಘಸಂಸ್ಥೆಗಳು ಇಲ್ಲಿಗೆ ದೇಣಿಗೆಗಳನ್ನಿತ್ತಿವೆ. ‘ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ’ಯವರು, ಈ ಆಶ್ರಮದ ಚಟುವಟಿಕೆಗಳನ್ನು “ಬೆಸ್ಟ್ ಕಮ್ಯೂನಿಟಿ ಸರ್ವಿಸ್” ಎಂದು ಪುರಸ್ಕರಿಸಿ, ತಾವಾಗಿಯೇ (ಯಾವ ಅರ್ಜಿಯೂ ಇಲ್ಲದೆ) ಇಲ್ಲಿಯ ಪ್ರಾಂಗಣವೊಂದರ ನಿರ್ಮಾಣದೆಡೆಗೆ 2016ರಲ್ಲಿ ಮತ್ತು 2019ರಲ್ಲಿ ಒಂದೊಂದು ಲಕ್ಷ ರೂಪಾಯಿಗಳ ದಾನವಿತ್ತಿದ್ದಾರೆ. ಮೈಸೂರು ರೋಟರಿ ಸಂಸ್ಥೆಯು ಸುಷ್ಮಾರನ್ನು “ಸಮಾಜ ಸೇವಾರತ್ನ” ಎಂದು ಗೌರವಿಸಿ, ಇಲ್ಲಿಯ ವಾಸದ ಅಂಗಳ ಮತ್ತು ಊಟದ ಮನೆ ಕಟ್ಟಡಗಳಿಗಾಗಿ ಧಾರಾಳ ಆರ್ಥಿಕ ಕೊಡುಗೆ ನೀಡಿದೆ; ನಾನಾ ಪೀಠೋಪಕರಣಗಳನ್ನೂ ಒದಗಿಸಿದೆ. ಮೈಸೂರಿನ ಎನ್. ಆರ್. ಗ್ರೂಪ್‍ನವರು ಉದಾರ ಧನದಾನ ನೀಡಿರುವುದಲ್ಲದೆ, ಅಮೂಲ್ಯ ಸಂಪರ್ಕಗಳನ್ನು ಕೊಡಿಸಿದ್ದಾರೆ; ಹಾಗಾಗಿ, ಮೈಸೂರಿನ ‘ಆಟಮೋಟಿವ್ ಆ್ಯಕ್ಸಲ್ಸ್’ ಕಂಪನಿಯಿಂದ ‘ಚಿಗುರು’ ಆಶ್ರಿತರಿಗೆ ಉತ್ತಮ ಆಹಾರ ಈಗ ನಿತ್ಯವೂ ದೊರಕುವಂತಾಗಿದೆ. ಮಂಡ್ಯದ ‘ಹನಕೆರೆ ಎಮ್. ಶ್ರೀನಿವಾಸ್ ಪ್ರತಿಷ್ಠಾನ’ ಮತ್ತು ಮೈಸೂರಿನ ‘ಚೈತ್ರ ಫೌಂಡೇಶನ್’, ಸುಷ್ಮಾರಿಗೆ ಪ್ರಶಸ್ತಿಯೊಡನೆ ನಗದು ಬಹುಮಾನಗಳನ್ನಿತ್ತಿದ್ದಾರೆ. ರೂಪಾಯಿ ರೂಪದಷ್ಟೇ, ವಸ್ತುರೂಪದಲ್ಲಿ ಮತ್ತು ಪ್ರಚಾರರೂಪದಲ್ಲಿ ಕೂಡ ಇಲ್ಲಿಗೆ ಹಲವಾರು ಖಾಸಗಿ ಆಕರಗಳಿಂದ ಬೆಂಬಲ ಹರಿದುಬಂದಿದೆ. ಸದ್ಯಕ್ಕೆ, ಒಬ್ಬ ಪೂರ್ಣಾವಧಿ ನರ್ಸ್ ತುರ್ತಾಗಿ ಬೇಕಿದ್ದು, ಅದಕ್ಕಾಗುವ ತಿಂಗಳ ಸಂಬಳವನ್ನು ದಾನಿಗಳು ಭರಿಸಿಕೊಳ್ಳಬೇಕಿದೆ [ಅಜ್ಜಿ ಸಾವಿತ್ರಮ್ಮನವರು ಈ ‘ನರ್ಸ್’ ಕೆಲಸವನ್ನಲ್ಲದೆ, ತಾವು (86 ವಯಸ್ಸಿನಲ್ಲಿ, ಮಾರ್ಚ್ 2019ರಲ್ಲಿ) ಗತಿಸುವವರೆಗೂ ಇಲ್ಲಿಯ ಎಲ್ಲ ಒಳಕೆಲಸಗಳನ್ನೂ ಒಬ್ಬರೇ ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಿದ್ದರು; ಈಗ ಆ ಜಾಗವನ್ನು ತುಂಬುವುದು ಸುಲಭವೆನಿಸುತ್ತಿಲ್ಲ; ಇಲ್ಲಿಯ ‘ನರ್ಸಿಂಗ್’ ಸೇವೆಗೆ, ವಿಶಿಷ್ಟ ಕೌಶಲ, ಸ್ಥೈರ್ಯ ಮತ್ತು ಅನುಕಂಪ ಅತ್ಯವಶ್ಯ]. ಅಪೂರ್ವ ಕರ್ತವ್ಯಪ್ರಜ್ಞೆಯಿಂದ ಸಮಾಜಕ್ಕೆ, ಅನೇಕ ಕುಟುಂಬಗಳಿಗೆ ಉಚಿತವಾಗಿ ಹಿತವೀಯುತ್ತಿರುವ “ಚಿಗುರು ಆಶ್ರಮ”ದ ಸೇವಾಕಾರ್ಯಗಳ ಮೌಲ್ಯವನ್ನು ಮನಗಂಡು, ಸರ್ಕಾರವು ಇದಕ್ಕೆ ಪೋಷಣೆಯನ್ನೂ, ಪ್ರೋತ್ಸಾಹವನ್ನೂ ವಿಸ್ತರಿಸಬೇಕು; ಮತ್ತು ಜನೋಪಕಾರಿ ರೂಪಾಯಿಗಳು ಈ ಅಬಲಾಶ್ರಮದ ಸಾರ್ಥಕ ಕಾರ್ಯಗಳಿಗೆ ವಿನಿಯೋಗವಾಗಿ ಇದನ್ನು ಸಬಲಗೊಳಿಸುವಂತಾಗಬೇಕು.

ಸಾಮಾಜಿಕ ಕಾರ್ಯದಲ್ಲಿ ಸಮರ್ಥ ‘ಮಾಸ್ಟರ್’
ಎಷ್ಟೆಲ್ಲ ಪಂಡಿತರು MSW ಪಾಠ ಮಾಡುತ್ತಾರೆ; ಎಷ್ಟೆಲ್ಲ ಯುವಜನರು ಆ ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಿ, ಉತ್ತಮ ಹುದ್ದೆಗಳನ್ನೂ ಗಳಿಸುತ್ತಿರುತ್ತಾರೆ; ಆದರೆ, ಅವರಲ್ಲಿ ಸಕ್ರಿಯವಾಗಿ, ಯಥಾರ್ಥವಾಗಿ, ಸುಷ್ಮಾರಂತೆ “Master Social Worker” ಆಗಿರುವವರು ಎಷ್ಟಿದ್ದಾರು? ಇನ್ನೂ ನಿರ್ದಿಷ್ಟವಾಗಿ ಕೇಳುವುದಾದರೆ, “MSW” ಎಂಬುದು “Managing Spurned Women” ಎಂದಾಗುವಂಥ ಪ್ರಚಂಡ ಮಾನವೀಯ ಸಾಹಸಕ್ಕೆ ಧುಮುಕಿರುವ “M S ಸುಷ್ಮಾ” ನಮೂನೆಯ “ದಯಾವೀರ”ರು ಎಷ್ಟಿದ್ದಾರು? ಸುಷ್ಮಾರ ಸಾಧನೆಯನ್ನು ಕಂಡಾಗ, ಪದವಿ ಕುರಿತ ಓದು ಒತ್ತಟ್ಟಿಗಿರಲಿ, ಇವರಂತೆ “ಹೃದಯವನ್ನು ಓದಿ”, ಅಸಾಮಾನ್ಯ ಮುತುವರ್ಜಿ ಬೇಕಿರುವ ಆರ್ತರ ಒಳಿತಿಗಾಗಿ ಮುನ್ನುಗ್ಗಿದವರು ಎಷ್ಟಿದ್ದಾರೆ ಎಂದೂ, ಅಂತೆಯೇ, ‘NSS ’ ಪ್ರಶಂಸೆ ಪಡೆದ ತರುಣಿಯರಲ್ಲೂ, ಕಡೆಗೆ ‘MSS’ (ಎಮ್.ಎಸ್. ಸುಷ್ಮಾ) ಧಾಟಿಯಲ್ಲಿ, “ನಾನು ಏನಾಗಬೇಕೆಂದಿದ್ದೇನೋ ಅದೇ ಆಗುವೆ” ಎಂದು ಕೆಚ್ಚಿನಿಂದ ಪ್ರಜಾಹಿತಕ್ಕಾಗಿ ಸಮರ್ಪಿಸಿಕೊಂಡವರು ಎಷ್ಟಿದ್ದಾರೆ ಎಂದೂ ಅಪ್ಪಟ ಸೋಜಿಗವಾಗುವುದು. “ಸುಷಮಾ” (ಬಳಕೆಯಲ್ಲಿ ಇದು ‘ಸುಷ್ಮಾ’ ಆಗಿಬಿಟ್ಟಿದೆ) ಎಂಬುದನ್ನು “ತುಂಬ ಸುಂದರ”, “ಉಜ್ಜ್ವಲ” ಎಂದಾಗುವ ಅದರ ಅರ್ಥಗಳ ಬೆಳಕಿನಲ್ಲಿ ಕಂಡಾಗ, “ಚಿಗುರು ಆಶ್ರಮ” ನಡೆಸುತ್ತಿರುವ ಈ ‘ಸುಸ್ಮಿತ’ ಯುವತಿಗೆ ಈ ಹೆಸರು ಯಾವಂದದಲ್ಲಿ ಒಪ್ಪುತ್ತದೆ, “Most Significant Word” ಆಗುತ್ತದೆ ಎನಿಸಿ ಮನವರಳುವುದು. ಹಾಗೆಯೇ, ಅಸಾಧ್ಯ ಅಡಚಣೆಗಳು ಹೊಸಕುತ್ತಿರುವಾಗಲೂ, ಇವರೂ, ಇವರ ಸಂಗಡಿಗ-ಆಶ್ರಮವಾಸಿಗಳೂ ಹೋರಾಡುತ್ತ ಸಾಗುತ್ತಿರುವುದನ್ನು ಕಂಡಾಗ, ಕೋಟೆಕೊತ್ತಲಗಳ ಕಲ್ಲುಬಂಡೆಗಳ ನಡುವೆಯೂ ನುಸುಳಿ ನಲಿಯುವ “ಚಿಗುರಿನ” ಚೈತನ್ಯವು ಮನಮುಟ್ಟುವುದು; ಕುಗ್ಗಿದವರನ್ನು ಹುರಿಗೊಳಿಸುವುದು. ಅಜ್ಜಿ, ಗಂಡ, ಗುರುಗಳು, NSS, MSW, RVM ಎಲ್ಲ ಅಂಶಗಳೂ ಸುಷ್ಮಾರ ಬಾಳಗುರಿಗೆ ತಕ್ಕಂತೆಯೇ ಅನುಗೂಡಿದ ವೈಚಿತ್ರ್ಯಕ್ಕೆ ಹುಬ್ಬೇರಿಸುತ್ತಿದ್ದಂತೆಯೇ, ಮುಂದೆಯೂ ಇದೇ ಪರಿಯಲ್ಲಿ ಎಲ್ಲ ನಿಟ್ಟಿನಿಂದ ಇವರಿಗೆ ಶಕ್ತಿಗಳು ಒದಗುತ್ತ, “ಅನಾಥರಂ ಸುಷಮ ರಕ್ಷಿಪಳ್” ಎಂದು ಇವರು ವಿಶ್ರುತರಾಗಲಿ ಎಂಬ ಹಾರೈಕೆಯು ತಾನಾಗಿಯೇ ಹೊಮ್ಮುವುದು.
ಅಸ್ವಸ್ಥ ಮನಗಳನ್ನು ಸುಸ್ಥಿತಿಗೆ ಅನುಗೊಳಿಸುತ್ತ, ವಿಪನ್ನರಿಗೆ ವಿಪುಲಾಶ್ರಯವನೀಯುತ್ತ, “ಚಿಗುರು ಆಶ್ರಮ”ವು ಉಪಕಾರಿಯಾಗಿ ನೈಜಮಾದೊಳ್ಪಿನಿಂ ಬಾಳಲಿ, ಬೆಳೆಯಲಿ, ಬೆಳಗಲಿ! “ಚಿಗುರು” ಪ್ರಕಾರದ ಚೇತನಗಳು ಸುತ್ತಲಲ್ಲೆಡೆ ಚಿಗುರಲಿ! ಹಾಗೆ ಹಬ್ಬುವ ಹಸಿರಿನಿಂದಾಗಿ, ಹೆಚ್ಚು-ಹೆಚ್ಚು ನೊಂದಜೀವಗಳು ತಂಪಾಗಿ ಉಸಿರಾಡುವಂತಾಗಲಿ!

ಸಂಪರ್ಕ ಮಾರ್ಗ: 95906 30366, 78993 73102, mswsushma@gmail.com
[ಯೂಟ್ಯೂಬ್‍ನಲ್ಲಿ “Chiguru Ashrama” ಹೆಸರಿನಡಿ, ಅಲ್ಲಿಯ ಚಟುವಟಿಕೆಗಳ ಒಂದು ಕಿರುನೋಟವನ್ನು ಪಡೆಯಬಹುದು.]


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x