ಓಯಸಿಸ್: ನಿನಾದ

ಅಂದು ಶನಿವಾರ ನಿನಾದಳಿಗೆ ಮನೆಯಲ್ಲಿ ಒಬ್ಬಳೆ  ಕೂತು ಸಾಕಾಗಿ ಹೋಗಿತ್ತು. ಸಾಮಾನ್ಯವಾಗಿ ನಿಶಾಂತ್ ಗೆ ಶುಕ್ರವಾರ, ಶನಿವಾರ ವಾರದ ರಜೆ. ಆದರೆ ಅವನ ಟೀಂ ಲೀಡರ್ ಒಂತರಾ ವಿಚಿತ್ರ ಮನುಷ್ಯ. ರಜೆ ಅಂದ್ರು ಮನೆಯಲ್ಲಿ ಇರೋಕೆ ಬಿಡುತ್ತಿರಲಿಲ್ಲ. ಹೀಗಾಗಿ ಎಲ್ಲ ಶನಿವಾರಗಳು ಆಫೀಸ್ ಗೆ ಹೋಗೋದು ಅನಿವಾರ್ಯ ಆಗಿತ್ತು. ಇತ್ತ ನಿನಾದ ಕಿರಿ ಕಿರಿ ಮಾಡಿದ್ದಕ್ಕೆ ಸರಿ ನೀನು ಬಾ ನನ್ನ ಜೊತೆಗೆ ಅಂದು ನಿಶಾಂತ್ ಆಫೀಸ್ ಗೆ ಹೊರಟ. ಹೀಗೆ ನಿನಾದ ನಿಶಾಂತ್ ಜೊತೆ ಆಫೀಸ್ ಗೆ ಬಂದಳು. ಆ ಸಮಯದಲ್ಲಿ ಆ ಡಿಪಾರ್ಟ್ಮೆಂಟ್ನ ಯಾರು ಬರದೆ ಇದ್ದ ಕಾರಣ  ನಿಶಾಂತ್ ನೀ ಮ್ಯಾಗಜಿನ್ ಓದಿ ಕೊಂಡು ಒಂದು ಬದಿಯಲ್ಲಿ ಕೂತು ಬಿಡು ಅಂದು ಕೂರಿಸಿ ಬಿಟ್ಟ. ಸ್ವಲ್ಪ ಹೊತ್ತಿಗೆ ಅಲ್ಲಿ ಇರೋಕೆ ಬೇಜಾರಾಗಿ ನಿನಾದ ಹೊರಗೆ ಬಂದಳು. ಮತ್ತೆ ಒಳಗೆ ಹೋದಾಗ ಅಲ್ಲೊಬ್ಬ ಹಾಡು ಕೇಳಿಕೊಂಡು ಚಕ್ಕಳ ಮ್ಕಳ ಹಾಕಿ ಚೈರ್ನಲ್ಲಿ ಕೂತು ಕೆಲಸ ಮಾಡುತ್ತಿದ್ದ ಆತನನ್ನು  ಕಂಡು ನಿನಾದ ಬೆಚ್ಚಿ ಬಿದ್ದಳು. ಅವನೇ ಜೈನ್ ! ನಿಶಾಂತ್ ನಿನಾದಳಿಗೆ ಜೈನ್ ನ ಪರಿಚಯಿಸಿದ. ಎದ್ದು ನಿಂತಾಗ ಅವನ ಆಜಾನು ಬಾಹು  ಗಾತ್ರಕಂಡು ಮೊದಲೇ ಹೆದರಿದ ಹರಿಣಿಯಂತಾದ ನಿನಾದ ಪೂರಾ ಮುದ್ದೆಯಾಗಿ ಹೋದಳು. ಜೈನ್ ಶಿಷ್ಟಾಚಾರಕ್ಕೆ ಕೇಳಿದ ೪ ಪ್ರಶ್ನೆಗೆ ಸೌಜನ್ಯಕ್ಕಾಗಿ ಉತ್ತರಿಸಿ ಸುಮ್ಮನಾದಳು. ಕೆಲಸ ಮುಗಿಸಿದ ನಿಶಾಂತ ಹೊರಡೋಣವಾ ಅಂದಾಗ ನಿನಾದ ಒಮ್ಮೆ ಅಲ್ಲಿಂದ ಹೊರ ಬಿದ್ದರೆ ಸಾಕು ಅಂತ ಕಾದವಳಿಗೆ ಅಯ್ಯಬ್ಬ ನಿರಾಳ ಆಯಿತು. ತಿಂಗಳಿಗೆ ಒಮ್ಮೆಯೋ ಎರಡು ತಿಂಗಳಿಗೆ ಒಮ್ಮೆಯೋ ಹೀಗೆ ಭೇಟಿ ಆಗುವ ಅನಿವಾರ್ಯತೆ ಬರುತ್ತಾ ಇತ್ತು. ನಿನಾದಳಿಗೆ ಇದೊಂದು ತರ ಹಿಂಸೆ ಅನ್ನಿಸಿ ಪತಿಯೊಡನೆ ಬಾಲದಂತೆ ಹೋಗುವ ಅಭ್ಯಾಸ ಕೈ ಬಿಟ್ಟಳು. 

ನಿಶಾಂತ್ ತಿಂಡಿ ತಿನ್ನೋವಾಗ ಜೈನ ಅಲ್ಲಿ ಬಂದರೆ ಅವನಿಗೂ ಪದ್ದು, ದೋಸೆ, ಇಡ್ಲಿ ಚಿತ್ರಾನ್ನಗಳು ಸಿಗುತ್ತಿದ್ದವು. ಕೊನೆಗೆ ಒಂದು ದಿನ ನಿಶಾಂತ್ ನಿನಾದ….  ಜೈನ್ ನಿಂಗೆ ಥ್ಯಾಂಕ್ಸ್ ಹೇಳಬೇಕಂತೆ ಅಂತ ಫೋನ್ ಲೈನ್ ಟ್ರಾನ್ಫರ್ ಮಾಡಿಯೇ ಬಿಟ್ಟ. ಅಯ್ಯೋ ಬೇಡ ಕಣೋ ನ೦ಗೆ ಆಗೋಲ್ಲ ಮಾತಾಡೋಕೆ ಅಂದರೂ ಕೇಳದೆ ಲೈನ್ ಟ್ರಾನ್ಫರ್ ಮಾಡಿ ಬಿಟ್ಟ. ಅತ್ತ ಕಡೆಯಿಂದ ಅವ ಹೆಲೊ … ಥ್ಯಾಂಕ್ಸ್ ಫಾರ್ ಡೆಲಿಶಿಯಶ್ ಫುಡ್ .. ವೆಲ್ಕಮ್ ಅಂದು ಕರೆ ಮುಗಿಸೋವರೆಗೆ ಅವಸರ ನಿನಾದಳಿಗೆ. ಹೀಗೆ ದಿನಗಳು ಸಾಗಿ ಹೋದುವು. ಕೆಲವು ಸಲ ನಿನಾದ ನಿಶಾಂತ್ ಗೆ ಅಂದು ಫೋನ್ ಮಾಡಿದರೆ ಅದು ಈ ಜೈನ ಗೆ ಹೋಗುತ್ತಿತ್ತು. ಆಗಂತೂ ಇನ್ನಷ್ಟು ಮುದುರಿ ಮುದ್ದೆ ಆಗಿ ಹೋಗ್ತಾ ಇದ್ಲು,  ಆದರೆ ಜೈನ ಯಾವುದನ್ನೂ ಗಂಬೀರವಾಗಿ ತೆಗೆದು ಕೊಂಡವನೆ ಅಲ್ಲ. ಈ ಕಡೆಯಿಂದ ದಿನ ಕಳೆದಂತೆ ನಿನಾದ ಕಾಳಿಯ ಅಪರಾವತಾರವೇ ಆಗಿ ಮಾರ್ಪಟ್ಟಿದ್ದಳು . ಮುಗಿಯದ ಜವಾಬ್ದಾರಿ, ತಲೆಗೆ ಎಳೆದರೆ ಕಾಲಿಗೆ ಸಿಗದ ವೇತನ. ಹೇಳಿದ್ದು ಕೇಳದ ನಿಶಾಂತ್. ನಿನಾದಳ  ಕೋಪ ಅಂದ್ರೆ…. ವಾರಗಟ್ಟಲೆ ಮುಂದುವರೆಯುತ್ತಿತ್ತು. ಒಂದು ದಿನ ಅದೇನು ಅನ್ನಿಸಿತೋ ನಿಶಾಂತ್ ಗೆ, ನೋಡು…  ನಿನ್ನ ಕೋಪ ಆ ಜೈನ್ ನ ಕೋಪ ಒಂದೇ ತರದ್ದು.. ಅಬ್ಬಾ !! ನಿನಾದ ಏನೂ ಕಿವಿಗೆ ಹಾಕಿಕೊಳ್ಳಲಿಲ್ಲ. ಸುಮ್ನೆ ಕೋಪ ಶಮನಕ್ಕೆ ಹೇಳಿದ್ದು ಅಂತ ಸುಮ್ಮನಾದಳು. 

ವಾರ ಕಳೆದು ಮತ್ತೆ ಯಾಕೋ ಮುನಿಸು ನಿಶಾಂತ್ ಮೇಲೆ ಒಂದಷ್ಟು ಹೊತ್ತು ರೇಗಿಯೇ ಬಿಟ್ಟಳು. ಮತ್ತೆ ಅದೇ ಮಾತು, ಭಗವಂತ ನಿಮ್ಮಿಬ್ಬರನ್ನು ಒಂದೇ ಎರಕದಲ್ಲಿ ಹೊಯ್ದು ತೆಗೆದಿದ್ದಾ ?ಡಿಟ್ಟೋ ಡಿಟ್ಟೋ ಅದೇ  ರೀತಿ ಕೂಗೋದು … ನಿನಾದಳ ಸಿಟ್ಟು ಇನ್ನು ಹೆಚ್ಚಾಗಿ ಅವನ ಜನ್ಮದಿನಾಂಕ ಕೇಳಿಕೊಂಡು ಬಾ ಅಂದು ಹೇಳಿದಳು. ಅಲ್ಲಿವರೆಗೂ ನಿಶಾಂತ್ ಗೂ ಅವನ ಜನ್ಮದಿನಾಂಕ ಗೊತ್ತೇ ಇರಲಿಲ್ಲ . ಸಧ್ಯ ಒಂದೇ ದಿನ ಅಥವಾ ಒಂದೇ ವರ್ಷ ಹುಟ್ಟಿಲ್ಲ ನೀವು ಅಂದು ಸಂಜೆ ಮನೆಗೆ ಬಂದು ರೇಗಿಸಿದ್ದೂ ಆಯಿತು. ಹೇಯ್ ಅವನ ಜನ್ಮ ದಿನಾಂಕ ಹೇಳೋ ಅಂದ್ರೆ … ಅಕ್ಟೋಬರ್ ೪ ನಿನಗಿಂತ ಒಂದು ವರ್ಷ ಮೊದಲು ಅಂದು ನಿಶಾಂತ್ ಸುಮ್ಮನಾದ. ಇನ್ನೊ೦ದು ದಿನ ಏನೋ ಒಂದು ವಿಷಯ ನಿಶಾಂತ್ ನಿನಾದ ಬಳಿ ಕೇಳಿದಾಗ ಹೇಳಿದ ವಿವರಣೆ ನೋಡಿ .. ಅಲ್ಲ ಆ ಜೈನ್ ಕೂಡಾ ಹೀಗೆ ಇಡೀ  ಪುಸ್ತಕ ಬಾಯಲ್ಲಿ ಬರುತ್ತೆ .ನೀವೆಲ್ಲಾ  ಏನು ಪುಸ್ತಕವನ್ನು ಜ್ಯೂಸು ಮಾಡಿ ಕುಡಿದ್ದೀರಾ ? ಅಂದಾಗ ನಿನಾದಳಿಗೆ ನಗು ತಡ್ಕೊಲ್ಲೋಕೆ ಆಗಲಿಲ್ಲ. ಮುಂದೊಂದು ದಿನ ಏನೋ ನಿಶಾಂತ್ ಗೆ ಮರೆತು ಹೋಯಿತು. ಆಫೀಸ್ ಗೆ ಹೋದಮೇಲೆ ನೆನಪಾಗಿ ನಿನಾದಳಿಗೆ ಫೋನ್ ಮಾಡಿ ಕೇಳಿದಾಗ ನಿಖರ ಉತ್ತರ. ಅಂದು ಇನ್ನೊ೦ದು  ಏನೋ ಮರೆತು ಹೋದಾಗ ಈ  ಜೈನ್ ಲೀಲಾಜಾಲವಾಗಿ ನೆನಪಿಸಿಕೊಂಡು ಹುಡುಕಿ ಕೊಟ್ಟ ಅಂತ ಹೇಳಿ ನಿಶಾಂತ್, ಅಲ್ಲ…  ನಿಮ್ಮ ತಲೆಯಲ್ಲಿ ಅದು  ಯಾವ ನಮೂನೆ ನೆನಪಿನ ಗಿಡ ಇದೆ ? ಅಂದಾಗ ನಿನಾದ ತಬ್ಬಿಬ್ಬು. 

ಕಾಲ ಸಾಗಿ ಹೋಗುತ್ತಾ ಇತ್ತು . ಒಂದು ದಿನ ಅವ ಆಫೀಸ್ ಗೆ ಬರೋಲ್ಲ ಅಂದು ನಿಶಾಂತ್ ಗೆ ಗೊತ್ತಿತ್ತು ಮತ್ತೆ ನಿನಾದಳನ್ನು ಕರೆದುಕೊಂಡು ಹೋದ. ನಿನಾದ ಮೂಡು ಸರಿ ಇದ್ದರೆ ಮಂಗನ ಅಪರವತಾರ. ಒಳಗೆ ಹೋದಾಗ ಅಲ್ಲಿ ಯಾರು ಇರಲಿಲ್ಲ. ಸರಿ ಅಂದು ಹಾಡು ಹಾಕಿಕೊಂಡು ನಿಶಾಂತ್ ಗೆ ಬೇಗ ಬೇಗ ಕೆಲ ರೀಡಿಂಗ್ ಹೇಳಿ ಬೇಗ ಮನೆಗೆ ಹೋಗುವ ಯೋಚನೆಯಲ್ಲಿ ಇದ್ದಳು. ನಡುವೆ ಸಮಯ ಸಿಕ್ಕಾಗ ಕತ್ತೆ ರಾಗದಲ್ಲಿ ಹಾಡ್ತಾ ಇದ್ದಳು. ಇಡೀ ಆಫೀಸಿನಲ್ಲಿ ಯಾರೂ ಇರಲಿಲ್ಲ ಹೀಗಾಗಿ ಹಾಯಾಗಿ ಇದ್ದಳು. ಸುಮಾರು ಹೊತ್ತು ಕಳೆದು ಒಂದು ಅಕ್ಷಿ ಅಂದ ಸದ್ದು ಕೇಳಿತು. ಅಬ್ಬಾ ಯಾರೂ ಇಲ್ಲ ಎಂದು ತಿಳಿದು ಕೊಂಡರೆ ಇದು ಯಾರು ? ನಿನಾದ ನಿಶಾಂತ್ ನ ಪೀಡಿಸ ತೊಡಗಿದಳು.  ಸರಿ ಯಾರು ಇದ್ದಾರೆ ನೋಡಿಕೊಂಡು ಬರೋಣ ಅಂತ ನಿನಾದ ನಿಶಾಂತ್ ಜೊತೆ ಹೋದರೆ ಅಲ್ಲಿ ಮೂಲೆಯಲ್ಲಿ ಜೈನ್ ! ಅಯ್ಯಬ್ಬಾ ಪೂರಾ ಮುದ್ದೆಯಾಗಿ ಹೋದಳು ನಿನಾದ. ಸಾರೀ .. ನಿಮ್ಮ ಲೋಕದಲ್ಲಿ ನೀವು ಇದ್ರಿ ಸರಿ ನಾನ್ ಯಾಕೆ ತೊಂದ್ರೆ ಮಾಡಲಿ? ಅಂತ ಸುಮ್ನೆ ಇದ್ದೆ. ಅಂದು ಹೇಳಿ ಜೈನ್ ತನ್ನ ಪಾಡಿಗೆ ಕೆಲಸದಲ್ಲಿ ಮುಳುಗಿ ಹೋದ. ನಿನಾದ  ಮಾತ್ರ ನಿಶಾಂತ್ ಗೆ ಏನೋ ನೀನು ಮೊದಲೇ ಹೇಳೋದು ಅಲ್ವಾ ಆವಾ ಬ೦ದಿದ್ದಾನೆ  ಅಂತ ..ನೋಡು  ನನ್ನ ಮರ್ಯಾದೆ ಹೋಯಿತು ಅಂತ ತನ್ನ ಅಳಲನ್ನು ತೋಡಿಕೊಂಡಳು. ಇರಲಿ ಬಿಡು ಜೈನ್ ತಾನೇ ಒಳ್ಳೆ ಹುಡುಗ ಅವ .. ಹಾಗೆಲ್ಲ ತಿಳ್ಕೊಳಲ್ಲ … ಅಂದರೂ ನಿನಾದಳ  ಕಸಿವಿಸಿ ಕಮ್ಮಿ ಆಗಲಿಲ್ಲ. ಒಂದು ದಿನ ನಿಶಾಂತ್ ಅಬ್ಬಾ ಆ ಜೈನ್  ಭಯಂಕರ ಟಾಲೆಂಟೆಡ್ … ಇವತ್ತು ಜನರಲ್ ಮ್ಯಾನೇಜರ್ ಕೇಳಿದ್ರು ಹೇಗೆ ಜೈನ್ ?? ನಾ ನೇರ ಹೇಳಿ ಬಿಟ್ಟೆ ಅವ ಈಗಿರುವ ಹುದ್ದೆಗೆ ಹೇಳಿದವನು ಅಲ್ಲ ಆವ ಮೇಲಿನ ಹುದ್ದೆಗೆ ಯೋಗ್ಯ ಅಂತ ಹೇಳಿಯೇ ಬಿಟ್ಟೆ. ಅಂದರೂ ನಿನಾದ ಕಿವಿಗೆ ಹಾಕಿ ಕೊಳ್ಳಲಿಲ್ಲ. 

ಅಂದು ಸೆಪ್ಟೆಂಬರ್ ೩ ೨೦೦೮ ನಿಶಾಂತ್ ಅಂದು ಬಂದು ನಿನಾದ ನಾಳೆ ಕಾರ್ಪ್ ಬ್ಯಾಂಕ್ ನ ಓವರ್ಸೀಸ್ ಬ್ರಾಂಚ್ ಗೆ ಹೋಗಬೇಕು. ಎಲ್ಲ ದಾಖಲೆ  ಜೋಡಿಸಿ ಇಡು. ನಮ್ಮಿಬ್ಬರದು ಒಂದೊಂದು  NRI ಅಕೌಂಟ್ ತೆರೆಯೋಣ. ಅದರ  ಮೂಲಕವೇ ಬ್ಯಾಂಕಿಂಗ್ ಮಾಡೋಣ ಎಂದು ಹೇಳಿದಾಗ ಇದೇನು ಹೊಸ ಯೋಚನೆ ? ಅಂದರೆ ಇಲ್ಲ ಜೈನ್  ಹಾಗೆ ಮಾಡೋದು ನಮ್ಮ ದುಡ್ಡು ನಮ್ಮ ಅಕೌಂಟ್ ಮೂಲಕವೇ ಸಾಗಬೇಕು .. ನಾನು ಇಷ್ಟು ದಿನ ಮಾಡಿದ್ದು ಮೂರ್ಖತನ . ಇನ್ನಾದ್ರು ಎಚ್ಚೆತ್ತು ಕೊಳ್ಳುವೆ ಅಂದಾಗ ಸರಿ ಅಂದು ನಿನಾದ  ಬೇಕಿದ್ದೆಲ್ಲ ಜೋಡಿಸಿ ಇಟ್ಟಳು.  

ಅದೊಂದು ದಿನ ನಿಶಾಂತ್ ಬಂದು ನಿನಾದ .. ಜೈನ್ ರೆಸಿಗ್ನೇಶನ್ ಕೊಡುತ್ತಾನಂತೆ .. ನಿನಾದ ನಿಭಾವುಕಳಾಗಿ ಯಾಕೆ? ಅಂದಳು . ಆಫೀಸಿನಲ್ಲಿ ಟೀಂ ಲೀಡರ್ ಕಾಟ, ದಿನ ಬೆಳಗಾದ್ರೆ ಈ ಜೈನ್ ಆ ಶ್ರೀಲಂಕನ್ ಸುಪ್ರಭಾತ. ಇಬ್ಬರೂ ಒಂದೇ ಕಡೆ ಇದ್ರೆ ಆಗೋಲ್ಲ ಅಂತ ಅವ ಬೇರೆ ಕಡೆ ಹೋಗ್ತಾನೆ. ಸರಿ ಅಂದು ಸುಮ್ಮನಾದಳು. ಇಷ್ಟಕ್ಕೂ ನಿನಾದಳಿಗೆ ಯಾವ ವಿಷಯದಲ್ಲೂ ಆಸಕ್ತಿ ಇಲ್ಲವಾಗಿತ್ತು. ಅವನಾದ್ರೂ ಬಿಟ್ಟು ಹೋಗಿ ನೆಮ್ಮದಿಯಾಗಿ ಇರಲಿ. ನೀನು ಹೇಗೂ ಬಿಟ್ಟು ಹೋಗುವ ಯೋಚನೆ ಮಾಡೋಲ್ಲ, ಮನೆಗೆ ಬೇಗ ಬರೋಲ್ಲ. ನಂಗೆ ಒಂದು ಹಬ್ಬ & ಹುಣ್ಣಿಮೆ ಯಾವುದೂ ಇಲ್ಲ ಅಂದು ಸುಮ್ಮನಾದಳು. ಮತ್ತೆ ಒಂದೇ ವಾರಕ್ಕೆ ಜೈನ್ ನ ರೆಸಿಗ್ನೇಶನ್ ತಿರಸ್ಕೃತ ಅಂತ ತಿಳಿಯಿತು. ಹಿರಿಯ ಅಧಿಕಾರಿಗಳು ನಿನ್ನಂತಹ ದಕ್ಷ ಸಂಸ್ಥೆ ತೊರೆದರೆ ಅದು ಸಂಸ್ಥೆಯ ನಷ್ಟ. ನೀ ಹೋಗೋದು ಬೇಡ ಅಂದಿದ್ದೂ ಆಯಿತು. ಸಂಸ್ಥೆಯಲ್ಲಿ ಆಗುವ ಹಣದ ದುರುಪಯೋಗ ನೋಡಿ ಸುಮ್ಮನೆ ಇರೋಕೆ ಸಾಧ್ಯ ಆಗದೆ  ದಿನ ಬೆಳಗ್ಗೆ ಸುಪ್ರಭಾತ. ನಂಗೆ ಇದನ್ನು ನೋಡೋಕೆ ಆಗೋಲ್ಲ ಇದರ ಬಗ್ಗೆ ಕ್ರಮ ಯಾರು ಸರಿಯಾಗಿ ತೊಗೊಳಲ್ಲ.  ಸರಿ ನಾನೇ ತೊರೆದು ಹೋಗುವೆ ಅಂತ ಮತ್ತೆ ಗಟ್ಟಿ ನಿರ್ಧಾರ ಮಾಡಿದ. ಮತ್ತೆ ತಿಂಗಳು ಕಳೆಯುವುದರ ಒಳಗೆ ಮತ್ತೆ ರಾಜಿನಾಮೆ ಪತ್ರ ಇತ್ತ. ಮತ್ತೆ  ಲೀಡರ್ ಅಹಮದ್, ನೋಡು  ಜೈನ್ ಸುಮ್ನೆ ನೀನು  ಶೋ ಆಫ್ ಮಾಡಬೇಡ ನೀನು ಎಲ್ಲಿ ಹೋಗುವೆ ನಿಂಗೆ ಬೇರೆ ಎಲ್ಲಿ ಓಪನಿಂಗ್  ಸಿಗುತ್ತೆ ?? ಅಂತ ಕುಹಕ ಬೇರೆ ಹೇಳಿದ. ಪಾಪ ಈ ಜೈನ್ … ಯಾಕಾದ್ರು  ಕಂಪನಿ ಬಿಟ್ಟು ಹೋಗುವೆ ಅಂತ ಹೇಳಿದನೋ ಏನೋ .. ಒಳ್ಳೆ ಅವಸ್ಥೆಯಲ್ಲಿ ಸಿಕ್ಕಿ ಹಾಕಿಕೊಂಡ, ಆ ಜೈನ್ ಹಟಕ್ಕೆ ಬಿದ್ದವರಂತೆ ಮತ್ತೆ ಒಂದೇ ವಾರಕ್ಕೆ ದ್ವಿಗುಣ ವೇತನಕ್ಕೆ ಆಫರ್ ಲೆಟರ್ ಮುಂದಿಟ್ಟು ಬಿಟ್ಟ. ಮತ್ತೆ ಜನರಲ್ ಮ್ಯಾನೇಜರ್ ಬೇಡ ಕಣೋ ನೀ ಹೋಗ ಬೇಡ ಅಂದರು . ಹೀಗಾಗಿ ಮತ್ತೆ ರೆಸಿಗ್ನಶನ್ ವಾಪಾಸ್ ತೆಗೆದ. ಮತ್ತೆ ದಿನ ನಾಲ್ಕು ಕಳೆಯಲು ಈ ಅಹಮದ್ ಮತ್ತೆ ಗೇಲಿ ಮಾಡೋಕೆ ಶುರು ನಾ ಹೇಳಿ ಎಲ್ಲಿ ಹೋಗಿದ್ದೆ ನಿಂದೆಲ್ಲ ಬರೀ ಶೋ ಆಫ್ … ನೀ ಬೇರೆ ಕಡೆ ಹೋಗೋದು ಇಲ್ಲ. ನೀ ಬೆಳೆಯೋದು ಇಲ್ಲ. 

ಈ ಸಲ ಮಾತ್ರ  ಜೈನ್ ಪಟ್ಟು ಬಿಡದೆ ಮತ್ತೆ ರೆಸಿಗ್ನಶನ್ ಲೆಟರ್ ಮುಂದೆ ಇತ್ತು ಮ್ಯಾನೇಜ್ಮೆಂಟ್ ಎದುರು ಖಡಾ ಖಂಡಿತವಾಗಿ ಹೇಳಿಯೇ ಬಿಟ್ಟ . ದಯಮಾಡಿ ನನ್ನ ಇಲ್ಲಿಂದ ರಿಲೀಸ್ ಮಾಡಿ ನಾ ಹೋಗುವೆ. ಅ೦ತೂ ಕೊನೆಗೆ ರಿಲೀಸ್ ಸಿಕ್ಕಿ ಜೈನ್ ಹೊಸ ಕಂಪನಿಗೆ  ಹಾರಿದ. ಮೊದಲು ಅಹಮದ್ ಗೆ ೪  ಮಾತು ಹೇಳಿ ಹೋದ. ನೋಡು ನಾ ಎಲ್ಲ ಕಡೆ ಸಲ್ಲುವೆ. ನೀ ಮಾತ್ರ ೬ ವರ್ಷ ದಿಂದ ಇಲ್ಲೇ ಕೊಳೆಯುತ್ತ ಇರೋದು ..  ಅಂದ ಹಾಗೆ ನೀ ಮೂದಲಿಸಿದ್ದಕ್ಕೆ ನಾ ಬಿಟ್ಟು ಹೊಗೋದಲ್ಲ, ಬೆಳೆಯೋಕೆ ಹೋಗೋದು ನಾನು… ಆಗಲೂ ಅಹಮದ್ ಕುಯುಕ್ತಿ ಮಾಡಿಯೇ ಬಿಟ್ಟ. ಏನೋ ಒಂದಿಷ್ಟು ಬೋನಸ್ ಸಿಕ್ಕಿತ್ತು. ಅದನ್ನು ವಾಪಸ್ ಕೊಟ್ಟು ಹೋಗು, ಕಂಪನಿ ಬಿಟ್ಟು ಹೋಗುವವರಿಗೆ ಬೋನಸ್ ಯಾಕೆ ಕೊಡ್ಬೇಕು ? ಜೈನ್ ಅದಕ್ಕೂ ಕೇರ್ ಅನ್ನದೆ ಅವನ ಮುಖದ ಮೇಲೆ ಬಿಸಾಕಿ ಒದ್ದು ಕಂಪನಿ ತೊರೆದು ಹೋದ. ಸುಮಾರು ಸಮಯ ಹಳೆ ಕಂಪನಿಯ ಯಾವ ಸಹುದ್ಯೋಗಿಗಳ ಜೊತೆ ಸಂಪರ್ಕ ಇರಲಿಲ್ಲ. ಆದರೂ ನಿಶಾಂತ್ ಜೊತೆ ಕೆಲಬಾರಿ ಕೆಲಸದ ಬಗೆ ಅದು ಹ್ಯಾಗೆ ಮಾಡೋದು ಇದು ಹ್ಯಾಗೆ ಮಾಡೋದು ಅಂದು ಫೋನ್ ನಲ್ಲಿ ಕೇಳಿ ಕೊಳ್ಳುತ್ತಿದ್ದ . 

                                                                    (ಮುಂದುವರೆಯುವುದು…)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
trackback

[…] ಇಲ್ಲಿಯವರೆಗೆ… […]

1
0
Would love your thoughts, please comment.x
()
x