ಯಾರಿಂದ ಸೃಷ್ಟಿಯಾದವೆಂದು ತಿಳಿಯದ ತ್ರಿಪದಿ, ಸೋಬಾನೆ ಹಾಡು, ಬೀಸುವಾಗ, ದವಸ ಧಾನ್ಯ ಕುಟ್ಟುವಾಗ ಬ್ಯಾಸರ ಕಳೆಯಲೆಂದು ಕಟ್ಟಿ ಹಾಡಿದ ಹಾಡು, ಕಾವ್ಯ, ಕಥೆ, ಗಾದೆ, ತೊಗಲು ಗೊಂಬೆ ಆಟ, ಕೋಲಾಟ, ಸೋಮನ ಕುಣಿತ, ಎತ್ತುಗಳಿಂದ ಬೆಂಕಿ ಹಾಯಿಸುವ ಸ್ಪರ್ದೆ, ಜಲ್ಲಿಕಟ್ಟು, ಯಕ್ಷಗಾನ, ಭಜನೆ, ನಂದಿಕೋಲು ಕುಣಿತ, ಕಂಬಳ, ವೀರಗಾಸೆ… ಮುಂತಾದವು ನಮ್ಮ ಸಂಪ್ರದಾಯವಾಗಿ ಪರಂಪರೆಯಲ್ಲಿ ಉಳಿದು ಬಂದಿವೆ. ಇವುಗಳನ್ನು ಜಾನಪದ ಎನ್ನುತ್ತೇವೆ.
ಕೆಲವು ಮಂಟೆ ಸ್ವಾಮಿಯಂಥ ಕಾವ್ಯಗಳು, ಕಥೆ, ತ್ರಿಪದಿ, ಸೋಬಾನೆ ಹಾಡು, ಕುಟ್ಟುವಾಗ, ಬೀಸುವಾಗ ಮುಂತಾದ ಸಂದರ್ಭಗಲ್ಲಿ ಹಾಡಿದ ಹಾಡು ಮುಂತಾದವನ್ನು ಯಾರು ಕಟ್ಟಿದರೆಂದು ತಿಳಿಯದು ಅವನ್ನು ಜಾನಪದ ಸಾಹಿತ್ಯ ಎಂದು ಕರೆಯುತ್ತೇವೆ. ಯಾರೋ ಅನಕ್ಷರಸ್ಥರು ತಮ್ಮ ದುಃಖ – ದುಮ್ಮಾನ, ಸುಖ – ಸಂತೋಷ, ಕಷ್ಟಗಳನ್ನು ಅವರವರ ಮಾತಿನಲ್ಲಿ ಸೆರೆಹಿಡಿದು ಮನದುಂಬಿ ಹಾಡಿರುತ್ತಾರೆ. ಅವು ಜನಮಾನಸದಲ್ಲಿ ಉಳಿದು ಬಂದಿವೆ ಅವನ್ನು ಜಾನಪದ ಗೀತೆಗಳು ಎಂದು ಕರೆಯುತ್ತಾರೆ. ಅವುಗಳಿಗೆ ಅವುಗಳದೇ ಆದ ಗೇಯತೆಯ ಗುಣ ಇದೆ. ಗೇಯತೆಯ ಗುಣ ಇರುವ ಪ್ರಯುಕ್ತ ಮತ್ತು ಜನರ ಬಾಯಿಂದ ಬಾಯಿಗೆ ಬಂದವಾದ್ದರಿಂದ ಅವನ್ನು ಜಾನಪದ ಗೀತೆಗಳು ಎನ್ನುವರು. ಅವು ಬೇರೆ ಬೇರೆ ಛಂದೋರೂಪಗಳಲ್ಲಿ ವೈವಿಧ್ಯತೆಯಿಂದ ಕೂಡಿವೆ. ಅದರಲ್ಲೇ ತ್ರಿಪದಿ ಛಂದೋರೂಪವೂ ಒಂದಾಗಿದೆ. ಜನಪ್ರಿಯವಾದುದು ಆಗಿದೆ! ಇದರ ಛಂದಸ್ಸು ಸಹಜ, ಸರಳ. ಭಾಷೆಯೂ ಸಹಜ ಆಡು ಮಾತು, ಸರಳ.
'ತ್ರಿಪದಿ' ಎಂದರೆ ಮೂರು ಪಾದವುಳ್ಳದ್ದು ಎಂದು ಅರ್ಥ. ಪಾದ ಎಂದರೆ ಸಾಲು . ಕನ್ನಡಿಯಲ್ಲಿ ಕರಿಯನ್ನು ಹಿಡಿದಿಟ್ಟಂತೆ, ಕಿರಿದರಲ್ಲಿ ಹಿರಿಯದನ್ನು ಹಿಡಿದಿಡುವ ಪ್ರಯತ್ನ ಬಹಳಷ್ಟು ತ್ರಿಪದಿಗಳಲ್ಲಿ ಆಗಿದೆ. ಇವನ್ನು ರಚಿಸಿದವರು ಯಾವ ಪ್ರತಿಭಾವಂತ ಕವಿಗಿಂತ ಕಡಿಮೆಯೇನಲ್ಲ ! ಮೂರು ಚಿಕ್ಕ ಚಿಕ್ಕ ಸಾಲಿನ ತ್ರಿಪದಿಗಳಲ್ಲಿ ಏನೆಲ್ಲಾ, ಎಷ್ಟೆಲ್ಲಾ ಹೇಳಲು ಸಾಧ್ಯ, ಅಷ್ಟೇ ಅಲ್ಲ ಒಂದು ಸನ್ನಿವೇಷವನ್ನು ಸೃಷ್ಟಿಸಲು ಸಾಧ್ಯ ಎಂಬುದನ್ನು ತೋರಿಸಿದ್ದಾರೆ. ತ್ರಿಪದಿಗಳನ್ನು ಮುಕ್ತಕಗಳು ಎಂದೂ ಕರೆಯುತ್ತಾರೆ. ಮುತ್ತಿನಂತೆ ಸುಂದರವೂ ಬೆಲೆಯುಳ್ಳವೂ ಆಗಿವೆ. ಜಾನಪದ ಸಾಹಿತ್ಯದಲ್ಲಿ ಗ್ರಾಮೀಣ ಬದುಕಿನ ಚಿತ್ರಣ ಸೊಗಸಾಗಿ ಮೂಡಿ ಬಂದಿದೆ. ಅದನ್ನು ಓದಿದಾಗ ನಮ್ಮ ಗ್ರಾಮಗಳ ಚಿತ್ರಣ ಕಣ್ಣಿಗೆ ಕಟ್ಟುತ್ತದೆ. ಅದರಲ್ಲೂ ಹೆಣ್ಣಿನ ತವರಿನೊಂದಿಗಿನ ಸಂಬಂಧ ಸೊಗಸಾಗಿ ಮೂಡಿಬಂದಿದೆ. ಇದಕ್ಕೆ ಸಂಬಂಧಿಸಿದ ಒಂದು ತ್ರಿಪದಿಯನ್ನು ನೋಡೋಣ. ಇಲ್ಲಿ ಹೆಣ್ಣೊಂದು ತವರಿಗೆ ಹೊರಟಾಗಿನ ಚಿತ್ರಣ ಸೊಗಸಾಗಿ ಚಿತ್ರಿತವಾಗಿದೆ. ಇಂದು ಸಂಬಂಧಗಳು ಜಾಳು ಜಾಳು ಆಗುವ ಸಂದರ್ಭದಲ್ಲಿ ಇವು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ!
ತೊಟ್ಟಿಲ ಹೊತ್ಕೊಂಡು ತೌರುಬಣ್ಣ ಉಟ್ಕೊಂಡು
ಅಪ್ಪ ಕೊಟ್ಟೆಮ್ಮೆ ಹೊಡಕೊಂಡು! ತಂಗ್ಯಮ್ಮ
ತಿಟ್ಹತ್ತಿ ತಿರುಗಿ ನೋಡ್ಯಾಳು.
ಈ ಮೂರು ಸಾಲಿನ ಚಿಕ್ಕ ತ್ರಿಪದಿ ಒಂದು ಸನ್ನಿವೇಶವನ್ನು ಸೃಷ್ಟಿಸಿ ಹೆಣ್ಣಿನ ತವರಿನ ಬಗೆಗಿನ ಅಪಾರ ಮಮತೆಯನ್ನು ಚಿತ್ರಿಸಿರಬೇಕಾದರೆ ಇದನ್ನು ಕಟ್ಟಿದ ಪ್ರತಿಭೆ ಅಸಾಮಾನ್ಯವೇ ಸರಿ. ತವರಿ ಹೆಣ್ಣು ಹೆರಿಗೆಗೆ ತವರಿಗೆ ಬರುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ. ತವರಿನಲ್ಲಿ ಬಾಣಂತನ ಮುಗಿದ ನಂತರ ಮಗನನ್ನೋ ಮಗಳನ್ನೋ ಪೋಷಿಸಿ ಅದು ನಡೆದಾಡುವಂತೆ ಆದ ನಂತರ ಗಂಡನ ಮನೆಗೆ ಕಳುಹಿಸುವುದು ತವರಿನವರ ಸಂಪ್ರದಾಯ. ತವರಿನವರ ಉಡುಗೊರೆ ಪಡೆದು ಗಂಡನ ಮನೆಗೆ ಹೊರಟು ನಿಂತ ಸಾಂಪ್ರದಾಯಿಕ ಹೆಣ್ಣೊಂದರ ಚಿತ್ರಣ ಇಲ್ಲಿದೆ.
ತವರಿಂದ ಗಂಡನ ಮನೆಗೆ ಹೆಣ್ಣೊಂದು ಹೊರಡಬೇಕಾದರೆ ಹಸಿರು ಬಣ್ಣದ ಸೀರೆ ಉಡಿಸಿ, ಮಡಿಲಿಗೆ ಹೂ ಹಣ್ಣು ತುಂಬಿ, ಮಗುವಿನ ಪೋಷಣೆಗೆ ಕೊರತೆ ಆಗದಿರಲೆಂದು ಒಂದು ಎಮ್ಮೆಯನ್ನೋ ಅಥವಾ ಹಸುವನ್ನೋ ಕೊಟ್ಟು ಮಗು ಅತ್ತಾಗ ಜೋಗುಳ ಹಾಡಿ ಬೇಗ ಸಂತೈಸಿ ಮಲಗಿಸಲೆಂದು ಒಂದು ತೊಟ್ಟಿಲನ್ನು ಕೊಟ್ಟು ಕಳುಹಿಸುವುದು ಸಂಪ್ರದಾಯ. ಅದನ್ನು ಈ ತ್ರಿಪದಿಯಲ್ಲಿ ಚಿತ್ರಿಸಿರುವುದನ್ನು ಕಾಣಬಹುದು.
ಹಿಂದೆಲ್ಲಾ ದೂರದ ಊರುಗಳಿಗೆ ಹೋಗಿ ಬರುವುದು ಸಾರಿಗೆ ವ್ಯವಸ್ಥೆ ಇಂದಿನಂತೆ ಇರದ ಕಾರಣ ಕಷ್ಟ ಆಗಿತ್ತು. ಆದ್ದರಿಂದ ಹತ್ತಿರದ ಊರುಗಳಲ್ಲಿ ವೈವಾಹಿಕ ಸಂಭಂಧಗಳನ್ನು ಮಾಡಿಕೊಳ್ಳುತ್ತಿದ್ದರು. ಹೆಣ್ಣೊಬ್ಬಳು ಗಂಡನ ಮನೆಗೆ ಹೊರಟು ಹೋಗುತ್ತಿದ್ದಾಳೆ. ಮುಂದೆ ಗಂಡನ ಊರು, ಹಿಂದೆ ತವರೂರು. ಮಧ್ಯೆ ಎತ್ತರವಾದ ಸ್ಥಳ ಆ ಎತ್ತರದ ಸ್ಥಳಕ್ಕೆ ಹೋಗಿ ನಿಂತುಕೊಂಡಿದ್ದಾಳೆ. ಮುಂದೆ ಎಂಟುಹತ್ತು ಹೆಜ್ಜೆ ಸಾಗಿದರೆ ಗಂಡನ ಊರು ಕಾಣಿಸಲು ಆರಂಭಿಸುತ್ತದೆ ಹಾಗೆ ತವರೂರು ಮರೆಯಾಗಲು ಆರಂಭಿಸುತ್ತದೆ. ಇನ್ನೇನು ಎಂಟ್ಹತ್ತು ಹೆಜ್ಜೆಯಿಟ್ಟರೆ ತವರೂರು ಮರೆಯಾಗುತ್ತದಲ್ಲಾ ಎಂದು ಒಮ್ಮೆ ತವರೂರನ್ನು ಕಣ್ತುಂಬ ನೋಡಿಬಿಡೋಣ ಎಂದು ಹಿಂದಕ್ಕೆ ತಿರುಗಿ ತವರನ್ನು ಒಮ್ಮೆ ಕಣ್ತುಂಬ ತುಂಬಿಕೊಳ್ಳುತ್ತಾಳೆ. ತವರಿನ ಬಗೆಗಿರುವ ಅಪಾರ ಪ್ರೀತೆ ಇಲ್ಲಿ ವ್ಯಕ್ತವಾಗಿದೆ. ಇದು ಹೆಣ್ಣಿಗೆ ತವರಿನ ಬಗೆಗಿನ ಮಮತೆಯನ್ನು ತೋರುತ್ತಿರುವ ಸನ್ನಿವೇಷದ ಸೊಗಸಾದ ಚಿತ್ರವಾಗಿ ಮೂಡಿ ಬಂದಿದೆ. ಮೂರು ಸಾಲಿನ ಚಿಕ್ಕ ಪದ್ಯಕ್ಕೆ ಇಷ್ಟನ್ನು ಚಿತ್ರಿಸುವ ಸಾಮರ್ಥ್ಯ ಅದ್ಬುತ! ಇಂದು ಸಂಬಂಧಗಳು ಬೆಲೆ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಇವು ಮಹತ್ವ ಪಡೆದುಕೊಂಡಿವೆ.
ಮಡದೀನ ಬಡದಾನ ಮನದಾಗ ಮರುಗ್ಯಾನ
ಒಳಗ್ಹೋಗಿ ಸೆರಗ ಹಿಡಿಯುತ್ತ ಕೇಳ್ಯಾನ
ನಾ ಹೆಚ್ಚೋ ನಿನ್ನ ತವರ್ಹೆಚ್ಚೋ.
ಈ ತ್ರಿಪದಿಯಲ್ಲಿ ಯಾವುದೋ ಸಿಟ್ಟಿನಿಂದ ಹೆಂಡತಿಯ ಬಡಿದಿರುವ ಪ್ರಿಯಕರ, ಮುನಿಸಿಕೊಂಡು ತವರಿಗೆ ಹೊರಟು ನಿಂತ ಮನದನ್ನೆಯನ್ನು ತಾನು ಕೋಪಕ್ಕೆ ಸಿಲುಕಿ ವರ್ತಿಸಿದ ರೀತಿಗೆ , ಜರುಗಿದ ಘಟನೆಗೆ ಪಶ್ಚಾತ್ತಾಪ ಉಂಟಾಗಿ, ತಾನು ಮಾಡಿದ ತಪ್ಪನ್ನು ಸರಿಮಾಡಿಕೊಳ್ಳಲು, ಪ್ರಿಯೆಯ ಮನವೊಲಿಸಿ ಅವಳು ತನ್ನ ವಿಷಯವಾಗಿ ಪ್ರಸನ್ನಳಾಗುವಂತೆ ಮಾಡಲು ಪ್ರಯತ್ನಿಸುತ್ತಿರುವ ಚಿತ್ರಣವಿದೆ.
ಬಡಿದ ತಪ್ಪು ಅರಿವಾಗಿ ಮನದಲ್ಲೇ ಮರುಗಿ ತವರಿಗೆ ಹೊರಟು ನಿಂತ ಇನಿಯಳನ್ನು ಪ್ರಸನ್ನಳಾಗುವಂತೆ ಮಾಡಲು ಹೋಗುವುದು. ಎದುರಿಗೆ ಹೋಗಿ ಮಾತನಾಡಿಸುವ ಧೈರ್ಯವಿಲ್ಲದೆ, ತಪ್ಪು ಮಾಡಿದವರು ವರ್ತಿಸುವ ರೀತಿಯಂತೆ ಅವಳ ಹಿಂದೆ ಹೋಗಿ ಸೆರಗಿಡಿಯುವ ದೃಶ್ಯ ಅವನಿಗಾದ ಪಶ್ಚಾತ್ತಾಪದ ಭಾವವನ್ನು ಮತ್ತು ಅವನ ದೈನ್ಯತೆಯನ್ನು ಸೂಚಿಸುತ್ತದೆ. ನಾ ಹೆಚ್ಚೋ, ನಿನ್ನ ತವರು ಹೆಚ್ಚೋ ಎಂದು ಪ್ರಶ್ನಿಸುವುದು ಎಂಥಾ ಇನಿಯಳ ಮನಸ್ಸನ್ನಾದರೂ ಕರಗಿಸಿಬಿಡುವಂತಿದೆ. ಜತೆಗೆ ಇನಿಯಳ ಬಗೆಗಿನ ಪ್ರೇಮ ಎದ್ದು ಕಾಣುತ್ತದೆ.ಮೊದಲ ಸಾಲಿನಲ್ಲಿ ಬರುವ ಪದಗಳು ಆಕರ್ಷಣೀಯವಾಗಿವೆ. ಇಂಥಾ ತ್ರಿಪದಿ ಸೃಷ್ಟಿಸಿ, ಅದರಲ್ಲಿ ಒಂದು ಚಿತ್ರಣ ಸೃಜಿಸಿದವರು ಸಾಮಾನ್ಯರೇ ? ಅನಕ್ಷರಸ್ಥರೇ?
ಬದುಕಿನಲ್ಲಿ ತಪ್ಪುಗಳು ಸಹಜ. ಒಂದೇ ಮನೆಯಲ್ಲಿ ಜತೆಯಲ್ಲೇ ಬದುಕುತ್ತಿರುವವರು ಆ ಕಡೆ ಈ ಕಡೆ ಎದುರು ಬದರು ನಡೆದಾಡುವಾಗ, ಒಬ್ಬರ ಕೈ ಕಾಲು ದೇಹ ಮತ್ತೊಬ್ಬರಿಗೆ ತಾಗುವುದು ಸಹಜ, ಹಾಗೆ ಜತೆಯಲ್ಲೇ ಹಗಲು ಇರುಳು ಬದುಕುವ ಇಬ್ಬರ ನಡುವೆ ಭಿನ್ನಾಭಿಪ್ರಾಯ ಸಹಜ. ಅದನ್ನು ಸರಿಪಡಿಸಿಕೊಂಡು ನಡೆದರೆ ಸಂಸಾರ ಸುಮಧುರ. ನಾ ಹೆಚ್ಚು, ನಾ ನಿನಗಿಂತ ಕಡಿಮೆಯಲ್ಲ ಎಂಬ ಅಹಂಭಾವ ಸಂಸಾರದಲ್ಲಿ ಸಲ್ಲದು. ಅದರಿಂದ ಸಂಸಾರ, ಬದುಕು ನಿಸ್ಸಾರವಾಗಿ, ಹಾಳಾಗುವುದು. ಇದನ್ನು ಅರಿತದ್ದರಿಂದ ಅವನು ತನ್ನ ತಪ್ಪನು ಸರಿಪಡಿಸಿಕೊಂಡು, ಸಂಸಾರವನ್ನು ಸುಂದರವಾಗಿಸುವ ಪ್ರಯತ್ನ ಮಾಡವುದ ಇಲ್ಲಿ ಕಾಣಬಹುದು.
ಹೀಗೆ ನಮ್ಮ ನಾಡಿನ, ದೇಶದ ಗ್ರಾಮೀಣ ಜನರ ಬದುಕಿನ ಚಿತ್ರಣ ಸಂಸ್ಕೃತಿ, ಸಂಪ್ರದಾಯ, ಇತಿಹಾಸ, ಮೌಲ್ಯ, ಆಚಾರ, ವಿಚಾರ ನಂಬಿಕೆಗಳನ್ನು ಕಟ್ಟಿ ಕೊಡುತ್ತಿರುವ ಜನಪದ ಸಾಹಿತ್ಯ ಅಮೂಲ್ಯ. ಇದು ಗ್ರಾಮೀಣ ಸೊಗಡಿನ ಐತಿಹಾಸಿಕ ದಾಖಲೆ. ಪ್ರಯುಕ್ತ ಇದನ್ನು ರಕ್ಷಿಸುವುದು ಅಗತ್ಯ.
* ಕೆ ಟಿ ಸೋಮಶೇಖರ ಹೊಳಲ್ಕೆರೆ.