ನನ್ನ ಹಾಡಿನ ಪಲ್ಲವಿ
ಸ್ನೇಹದ ಸವಿನೆನಪಿನ ಇಂಪಾದ ಸ್ವರ ನೀನು,
ಬಯಸಿರುವೆ ನಿನ್ನ ವಾಣಿಯ ಮಾಯೆಯನು;
ನನ್ನ ರಹಸ್ಯ ಹೊತ್ತಿಗೆಯ ಸಾರಾಂಶ ನೀನು,
ಲೇಖನಿಯು ಕಾತರಿಸಿದೆ ಮೊದಲ ಅಕ್ಷರವನು;
ಇಳಿಸಂಜೆಯ ಮಧುರವಾದ ಕಲ್ಪನೆ ನೀನು,
ಕಾದಿರುವೆ ನಿನ್ನ ಒಲವಿನ ಆಗಮನವನು;
ಮುಂಬರುವ ಕ್ಷಣದಲ್ಲಿ ನಿನ್ನ ಕಾಣುವೆನು,
ಕಬಳಿಸಿರುವ ಪುಟ್ಟ ಹೃದಯದ ಕೋಣೆಯಲಿ;
ಬರೆಯುವೆ ನನ್ನ ಜೀವಾಳದ ಸುಮಧುರ ಹಾಡನು
ಆಗುವೆಯಾ ಆ ಹಾಡಿನ ಚರಣಕ್ಕೆ ಪಲ್ಲವಿ ನೀನು.
– ಬಿ. ಸಿ. ಪ್ರಮೋದ.
ಮಂಥನ
ಆಡದ ಮಾತೊಂದು ಹುದುಗಿದೆ
ಮನದೊಳಗೆ
ಸಾವಿರ ಮಾತಲ್ಲಿ ಸಮಜಾಯಿಸಿದರೂ
ಸಾಂತ್ವನ ಗೊಳ್ಳಲಿಲ್ಲ !
ಮಂದರವ ಕಡೆಗೋಲು ಮಾಡಿ
ಹದ ಹದವಾಗಿ ಕಡೆದೆ
ತಲವ ಬಿಟ್ಟು ಕದಲಲಿಲ್ಲ !
ಒಳಗಿನ ವಿಷವು ಸರಿಯಲಿಲ್ಲ !
ಮೌನವ ಕಲಕಿ ರಾಡಿ ಮಾಡಿದೆ
ಎದೆಯ ಬಗೆ ಬಗೆಯಲ್ಲಿ ಬಗೆದೆ
ಮಂಥಿಸಿ ಮಥಿಸಿ ಚಿಂತೆಗೀಡಿಕ್ಕಿ
ಧ್ಯಾನದಲ್ಲೂ ಇಲ್ಲವಾದೆ !
ಆಡದ ಮಾತೊಂದು ಸಿಡಿಯಲಿಲ್ಲ
ತಿರಳು ತೇದು ಸುಗಂಧಕ್ಕೆ ಹವಣಿಸಿದೆ
ಪುಟವಿಕ್ಕಿ ಕಾಯಿಸಿದೆ ಹೊಳೆಯಲಿಲ್ಲ
ಕಾರಣದ ಹುಡುಕಾಟದಲ್ಲಿ ಕಳೆದು ಹೋದೆ !
ಶಬ್ದಗಳಿಗಿಳಿಸಲು ಶತ ವ್ಯಥೆ ಪಟ್ಟೆ
ಪದಗಳ ಜೋಡಿಸಿ ಸಾಲುಗಳಲ್ಲಿ ನೆಟ್ಟೆ
ಚಿಗುರೊಡೆದು ಮಾತಾಡಿತು
ಹೂ ಬಿಟ್ಟು ನಲಿದಾಡಿತು
ಆಡದ ಮಾತೊಂದು ಬೇರುಗಳಲ್ಲಿ ಹುದುಗಿತು !
ಕಾಂಡಗಳ ತೊಗಟೆಯಲ್ಲಿ ಮರೆಯಾಯಿತು !
ಆಡದ ಮಾತಿಂದು ಗಿಡಕ್ಕೆ ಗೊಬ್ಬರವಾಯಿತು
ಕವಿತೆಗೆ ತಿರುಳಾಯಿತು !!
ಕವಿತೆ ಉದ್ಭವವಾಯಿತು !!
– ಅಶೋಕ್ ಕುಮಾರ್ ವಳದೂರು (ಅಕುವ)