“ಕನ್ನಡದ ಮಟ್ಟಿಗೆ ಒಂದು ಉತ್ತಮ ಪ್ರಯತ್ನ/ಚಿತ್ರ” – ಈ ವಾಕ್ಯವನ್ನು ನೀವು ತುಂಬಾ ಸಲ ಕೇಳಿರುತ್ತೀರ. ನೀವು ಬಳಸಿರುವ ಸಾಧ್ಯತೆಗಳೂ ಇವೆ. ಒಂದು ಕ್ಷಣ ಯೋಚಿಸಿ, ಹಿಂಗಂದ್ರೆ ನಿಜವಾದ ಅರ್ಥ ಏನು ಅಂತ. ‘ಫ್ರೆಂಚ್ ಮಟ್ಟಿಗೆ ಒಳ್ಳೆ ಚಿತ್ರ’ ಅಥವಾ ‘ಇಟಾಲಿಯನ್ ಮಟ್ಟಿಗೆ ಉತ್ತಮ ಪ್ರಯೋಗ’ ಅಂತೆಲ್ಲಾದ್ರೂ ಕೇಳಿದ್ದೀರಾ? ಅಥವಾ ‘ಕನ್ನಡದ ಮಟ್ಟಿಗೆ ಉತ್ತಮ ಪೇಂಟಿಂಗ್ ಇದು’ ಅಥವಾ ‘ಕನ್ನಡದ ಮಟ್ಟಿಗೆ ಉತ್ತಮ ಸಂಗೀತ ಇದು’ ಅಂತೇನಾದ್ರೂ? ಇಲ್ಲ ಅಲ್ವಾ? ಮತ್ತೆ ಕನ್ನಡ ಚಲನಚಿತ್ರಗಳಿಗೇಕೆ ಈ ವಾಕ್ಯಪ್ರಯೋಗ? ಯೋಚಿಸಿ! ಈ ರೀತಿ ಹೇಳುವುದರಿಂದ ನಾವೇ ನಮ್ಮನ್ನು ಕಳಪೆ ಅಂದುಕೊಂಡಂತೆ ಆಗುತ್ತೆ ಆಲ್ವಾ? ಕನ್ನಡ ಅಂದ ತಕ್ಷಣ ನಮ್ಮ ನಿರೀಕ್ಷೆಗಳನ್ನು ತುಂಬಾ ಕಡಿಮೆ ಮಾಡಿಕೊಳ್ಳಬೇಕು ಅಂತಾನಾ?
ಒಂದು ಉತ್ತಮ ಚಿತ್ರ ಭಾಷೆ, ದೇಶ, ಕಾಲ, ಬಜೆಟ್ – ಎಲ್ಲವನ್ನೂ ಮೀರಿ ನಿಲ್ಲುತ್ತೆ, ಕಾಡುತ್ತೆ, ಮನಸ್ಸಿನಲ್ಲಿ ಉಳಿಯುತ್ತೆ! ಗುರುಪ್ರಸಾದ್ ನಿರ್ದೇಶನದ ‘ಎದ್ದೇಳು ಮಂಜುನಾಥ’ ಈ ಗುಂಪಿಗೆ ಬರುವ ಒಂದು ಅಮೋಘ ಚಿತ್ರ. ‘ಕನ್ನಡದ ಮಟ್ಟಿಗೆ’ ಯ ಹಂಗಿಲ್ಲದೆ! ಇದು ಬಹುಶಃ ಕಳೆದ ದಶಕದಲ್ಲಿ ಬಂದ ಅತ್ಯಂತ ಒರಿಜಿನಲ್ ಕನ್ನಡ ಚಿತ್ರ. ಈ ಚಿತ್ರ ‘ನಮ್ಮೊಳಗೊಬ್ಬ ಮಂಜುನಾಥ’ ನ ಬಗ್ಗೆ! ನಮ್ಮೆಲ್ಲರಲ್ಲೂ ಬೇರೆ ಬೇರೆ ಪ್ರಮಾಣದಲ್ಲಿ ಇರುವ ಬೇಜವಾಬ್ದಾರಿತನ, ಉಡಾಫೆಯ ಬಗ್ಗೆ. ಹಾಗೆ ನೋಡಿದರೆ ಇದು ಒನ್ ಲೈನ್ ಕಥೆ. ಆದರೆ ಚಿತ್ರಕಥೆ, ಪಾತ್ರಗಳನ್ನು ಸೃಷ್ಟಿಸಿರುವ ರೀತಿ ಇದೊಂದು ವಿಭಿನ್ನ ಚಿತ್ರವಾಗುವಂತೆ ಮಾಡಿದೆ. ಇಡೀ ಚಿತ್ರ ಒಂದು ‘ಕ್ಯಾರೆಕ್ಟರ್ ಸ್ಟಡಿ’ ಆಗಿರುವ ಇನ್ನೊಂದು ಉದಾಹರಣೆ ನಂಗೆ ನೆನಪಿಗೆ ಬರುತ್ತಿಲ್ಲ!
ಚಿತ್ರದ ಓಪನಿಂಗ್ ತಗೊಳ್ಳಿ, ರಾಘವೇಂದ್ರಸ್ವಾಮಿ ಫೋಟೋ ವಾಯ್ಸ್ ಓವರ್ ನೋಡಿದ್ದೀರಾ ಬೇರೆ ಎಲ್ಲಾದ್ರೂ?
ಯಾರದ್ರೂ ತಮ್ಮ ಚಿತ್ರದ ಹೀರೋ ಎಂಟ್ರಿ ಸೀನ್ ಅಲ್ಲಿ ಒಂದು ಕೊಳಕು ರಗ್ ಹೊದ್ದು ಮಲಗಿರೋದನ್ನ ತೋರಿಸಿದ್ದಾರಾ?
ಜಗ್ಗೇಶ್ ಡ್ರಾಮಾ, ಸಿನಿಮಾ, ಸೀರಿಯಲ್ ಇವುಗಳ ನಟನೆಯಲ್ಲಿ ಇರೋ ವ್ಯತ್ಯಾಸ ಹೇಳ್ತಾರಲ್ಲ, ಅದೊಂದೇ ಸಾಕು ಎಂತಹ ಪ್ರತಿಭಾವಂತ ನಟ ಅಂತ ಗೊತ್ತಾಗಕ್ಕೆ (‘ನಾನು ಮಂಜ, ಲೋಹಿತಾಶ್ವ ವಾಯ್ಸ್ ಅಲ್ಲಿ’ ನೆನೆಸಿಕೊಂಡರೆ ಈಗಲೂ ಹೊಟ್ಟೆ ನೋಯುವಷ್ಟು ನಗು ಬರುತ್ತದೆ – ಎಂತಹ ಅಪ್ರತಿಮ ಮಿಮಿಕ್ರಿ ಕಲಾವಿದ ಆಲ್ವಾ ನಮ್ ಜಗ್ಗೇಶ್!).
ನನಗೆ ತುಂಬಾ ಇಷ್ಟವಾದ ಒಂದು ಪುಟ್ಟ ಸನ್ನಿವೇಶ ಇದು. ಮಂಜನಿಗೆ ಮಾಡುವೆ ಮಾಡಿಬಿಡೋಣ ಅಂತ ಅವರ ಅಮ್ಮ ಹೇಳುತ್ತಾರೆ. ಸರಿ ಹೋಗ್ತಾನೆ ಅಂತ ಹೇಳಕ್ಕೆ ಆಗಲ್ಲ, ಸರಿ ಹೋಗ್ಬೋದೇನೋ ಒಂದು ಪ್ರಯತ್ನ ಮಾಡೋಣ ಅಂತ ಅವರ ಚಿಕ್ಕಪ್ಪ ಅಭಿಪ್ರಾಯ ಕೊಡ್ತಾನೆ. ಮಾಡುವೆ ಮಾಡಿದರೆ ಆ ಹುಡುಗಿಯ ಬಾಳನ್ನೂ ಹಾಳುಮಾಡಿ, ಎಲ್ಲರ ಕೈಲೂ ಶಾಪ ಹಾಕಿಸ್ಕೊಬೇಕಾಗುತ್ತೆ ಅಷ್ಟೇ ಅಂತ ಮಂಜನ ಅಪ್ಪ ಹೇಳ್ತಾರೆ. ಇನ್ನೇನು ಸೀನ್ ಮುಗಿತು ಅಂದುಕೊತೀವಿ. ಆಗ ಸಡನ್ ಆಗಿ ಮಂಜನ ಅಮ್ಮ ‘ಇವರ ಅಭಿಪ್ರಾಯನ ಯಾವ ನಾಯಿ ಕೇಳ್ತು’ ಅಂತ ಅನ್ಎಕ್ಸ್ಪೆಕ್ಟೆಡ್ ಆಗಿ ಹೇಳ್ತಾಳೆ. ಹಿನ್ನೆಲೆಯಲ್ಲಿ ‘ಎಷ್ಟು ಕಷ್ಟವೋ ಹೊಂದಿಕೆಯೆಂಬುದು ನಾಲ್ಕು ದಿನದ ಈ ಬದುಕಿನಲಿ’ ಅಂತ ಅಪ್ಪಟ ನಾಟಕೀಯ ಶೈಲಿಯಲ್ಲಿ ಹಾಡು. ವಿಡಂಬನೆಗೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬೇಕಾ?
ಗಮನಿಸಿ, ಇಡೀ ಚಿತ್ರದಲ್ಲಿ ಜಗ್ಗೇಶ್ ಅವರ ಡೈಲಾಗ್ ಡೆಲಿವರಿ ಅವರ ಬೇರೆ ಚಿತ್ರಗಳಿಗಿಂತ ನಿಧಾನಗತಿಯಲ್ಲಿದೆ. ಅವರ ಟ್ರೇಡ್ಮಾರ್ಕ್ ‘ಔ’ ಆಗಲೀ, ಕಣ್ಣು ಕಿರಿದು ಮಾಡಿಕೊಂಡು ಮುಖ ಕಿವುಚುವ ಮಾಮೂಲಿ ಹಾವಭಾವಗಳಾಗಲೀ ಇಲ್ಲ. ಇಂತಹ ಒಳ್ಳೆಯ ನಟನನ್ನ ಕೆಟ್ಟ ರೂರಲ್ ಕಾಮಿಡೀಸ್ ಅಲ್ಲಿ ದೊಡ್ಡಣ್ಣನ ಹತ್ರ ಯಾವಾಗಲೂ ಒದೆಸಿಕೊಳ್ಳೋ, ಬ್ಯಾಂಕ್ ಜನಾರ್ಧನ್ ಹತ್ರ ‘ಸೋಬನ’ಕ್ಕೆ ಅಡ್ಡಿಪಡಿಸಿಕೊಳ್ಳೋ ಪಾತ್ರಗಳಲ್ಲಿ ಹಾಳು ಮಾಡಿಬಿಟ್ಟಿದೀವಿ ಅಲ್ವಾ?
ಒಂದು ಚಿತ್ರದಲ್ಲಿ ನಾಯಕ ಎಂದರೆ ಸಾಮಾನ್ಯವಾಗಿ ಅವನು ‘ಹೀರೋಯಿಕ್’ ಆಗಿರುತ್ತಾನೆ. ಅವನ ಗುರಿ ಬೇರೆ ಬೇರೆ ಇರಬಹುದು – ವೈರಿಗಳನ್ನು ಸೆದೆಬಡಿಯುವುದು, ತನ್ನ ಪ್ರೇಯಸಿಯನ್ನು ಒಲಿಸಿಕೊಳ್ಳುವುದು, ದೇಶವನ್ನು ರಕ್ಷಿಸುವುದು ಇತ್ಯಾದಿ. ಅವನಿಗೆ ಅಡೆತಡೆಗಳು ನೂರಾರು – ದುಷ್ಟಶಕ್ತಿಗಳು, ಪ್ರೇಮವನ್ನು ವಿರೋಧಿಸುವ ಅಪ್ಪ ಅಮ್ಮ, ಆತ್ಮವಿಶ್ವಾಸದ ಕೊರತೆ, ಸುತ್ತಮುತ್ತಲಿನ ಆಗುಹೋಗುಗಳು ಹೀಗೆ. ಈ ಎಲ್ಲಾ ಅಡೆತಡೆಗಳನ್ನು ಎದುರಿಸಿ ಗುರಿ ಮುಟ್ಟುವುದರಿಂದ ನಾಯಕ ಗೆಲ್ಲುತ್ತಾನೆ (ನಮ್ಮ ಸಿನಿಮಾಗಳು ಹೆಚ್ಚಾಗಿ ‘ಹೀರೋ’ ಕೇಂದ್ರಿತ ಆಗಿರೋದ್ರಿಂದ ಹೀಗೆ ಹೇಳ್ತಿದೀನಿ – ನಾನು ಹೇಳಿರುವುದು ನಾಯಕಿಪ್ರಧಾನ ಚಿತ್ರಗಳಿಗೂ ಅನ್ವಯ ಆಗುತ್ತೆ!) ಕೆಲವೊಮ್ಮೆ ಸನ್ನಿವೇಶಗಳು ಮೇಲುಗೈ ಹೊಂದಿ ನಾಯಕ ‘ಸೋತಾಗ’, ಅವನು ‘ದುರಂತನಾಯಕ’ ಅನ್ನಿಸಿಕೊಳ್ಳುತ್ತಾನೆ.
ನಮ್ಮ ‘ಮಂಜುನಾಥ’ ಒಂದು ರೀತಿಯಲ್ಲಿ ನೋಡಿದರೆ ದುರಂತನಾಯಕ. ಒಬ್ಬ ಸಾಧಾರಣ ನಿರ್ದೇಶಕ ಆಗಿದ್ದರೆ ಮಂಜುನಾಥ ಯಾಕೆ ಹಿಂಗೆ ಆದ – ಅದಕ್ಕೆ ಅವನ ಪೋಷಕರು ಅಥವಾ ಗೆಳೆಯರು ಕಾರಣ ಅಂತಲೋ, ಇಲ್ಲ ಬಡತನ, ನಿರುದ್ಯೋಗ ಇವುಗಳು ಇವನನ್ನು ಈ ರೀತಿ ಮಾಡಿದವು ಅಂತಲೋ ಹೇಳಿ ‘ನಾಯಕ’ನ ಮೇಲೆ ನಮಗೆ ಅನುಕಂಪ ಬರುವಂತೆ ಮಾಡುತ್ತಿದ್ದರು (‘ಅಯ್ಯೋ ನೋಡ್ರೀ ಪಾಪ, ಆ ಪಾರೋ ಪ್ರೀತಿ ಸಿಗದೇ ದೇವದಾಸ ಕುಡಿಯೋದು ಕಲಿತುಬಿಟ್ಟ’ ಥರ!) ಆದರೆ ಗುರು ಸಾಧಾರಣ ನಿರ್ದೇಶಕ ಅಲ್ಲ, ಇದು ಸಾಮಾನ್ಯ ಚಿತ್ರವೂ ಅಲ್ಲ! ಗುರುವಿನ ಅತಿ ದೊಡ್ಡ ಗೆಲುವು ಇರುವುದು ಈ ಪಾತ್ರವನ್ನು ಅನ್ಅಪೊಲೊಜೆಟಿಕ್ ಆಗಿ ಮಾಡಿರುವಲ್ಲಿ. ‘ನಾವು ಇರೋದೇ ಹಿಂಗೆ ಸ್ವಾಮಿ’ ಅಂತಾನೆ ನಮ್ಮ ಮಂಜ. ಮೇಷ್ಟ್ರು ಬೈತಾರೆ ಅಂತ ಶಾಲೆಗೇ ಹೋಗೋದಿಲ್ಲ. ಸ್ವಲ್ಪ ಗದರಿದರೆ ಕೆಲಸಾನೇ ಬಿಟ್ಟು ಬಿಡ್ತಾನೆ. ‘ಒಂದ್ ನಿಮಿಷದಲ್ಲಿ ಹತ್ತು ಸಾವಿರ ಹೊಂದುಸ್ತೀನಿ’ ಅಂತ ತನ್ನ ಸಾಲ ಮಾಡೋ ತಾಕತ್ತಿನ ಬಗ್ಗೆ ಕೊಚ್ಚಿಕೊಳ್ತಾನೆ. ವರದಕ್ಷಿಣೆ ರೂಪದಲ್ಲಿ ಸಿಕ್ಕ ಟೆನ್ ಬೈ ಟೆನ್ ಮನೆಯ ಬಗ್ಗೆ ಅಸಡ್ಡೆಯಿಂದ ಮಾತಾಡ್ತಾನೆ. ಅದೇ ಮನೆಯನ್ನ ಇನ್ಯಾರಿಗೋ ಮಾರಲು ಹೋಗ್ತಾನೆ. ದುಡ್ಡು ಕಮ್ಮಿ ಬಿದ್ದಾಗ ಮನೆಯ ಸಾಮಾನನ್ನೇ ಕದ್ದು ಮಾರುತ್ತಾನೆ. ಪಕ್ಕದ ಮನೆಯ ಮಗು ಅಳ್ತಾ ಇದ್ರೆ ಹಾಳಾದ್ದು ಶನಿ ಅಂತ ಶಪಿಸ್ತಾನೆ. ತನ್ನ ಬಗ್ಗೆ ಅಸಹ್ಯ ಪಟ್ಟುಕೊಳ್ಳೋ ಸಂಬಂಧಿಕರ ಮನೆಗೆ ಮಾನ ಮರ್ಯಾದೆ ಬಿಟ್ಟು ಹೋಗ್ತಾನೆ. ಎದುರು ಮನೆ ಹುಡುಗೀನ ‘ಪಟಾಯ್ಸಕ್ಕೆ’ ಟ್ರೈ ಮಾಡ್ತಾನೆ. ‘ನಮಗೂ ಮನುಷ್ಯತ್ವ ಇದೆ ಸ್ವಾಮಿ ಅಂತಾನೆ’, ಆದರೆ ಅದನ್ನ ಮರೆಮಾಚುವಷ್ಟು ‘ಮಂಜುನಾಥ’ತನವನ್ನ ಮೈಗೂಡಿಸಿಕೊಂಡಿರುತ್ತಾನೆ. ನೀವು ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಟ್ಟಷ್ಟೂ ಅರ್ಥವಾಗದೇ ಹೋಗ್ತಾನೆ. ‘ನಾವೇನು ಅಂತ ನಮಗೆ ಅರ್ಥ ಆಗಿಲ್ಲ ನೀವ್ಯಾಕೆ ಇರುವೆ ಬಿಟ್ಕೊತೀರಿ’ ಅಂತ ಬುದ್ಧಿವಾದನೂ ಹೇಳ್ತಾನೆ!
ಈ ಸಂಕೀರ್ಣವಾದ, ರಿಸ್ಕಿ ಪಾತ್ರವನ್ನು ಒಪ್ಪಿದ್ದಕ್ಕೆ ಜಗ್ಗೇಶ್ ಅವರನ್ನು ಎಷ್ಟು ಹೊಗಳಿದರೂ ಸಾಲದು. ತನ್ನ ಅಗಾಧ ಪ್ರತಿಭೆ ಮತ್ತೆ ಪ್ರೇಕ್ಷಕರ ಬುದ್ಧಿವಂತಿಕೆಯ ಮೇಲೆ ನಂಬಿಕೆ ಇಟ್ಟ ಗುರುಪ್ರಸಾದ್ ಗೂ ಥ್ಯಾಂಕ್ಸ್. ಹಾಗೂ ಈ ಚಿತ್ರವನ್ನು ಗೆಲ್ಲಿಸಿ, ನಮಗೆ ಬುದ್ಧಿ ಹಾಗು ಅಭಿರುಚಿ ಇದೆ ಅಂತ ಚಿತ್ರರಂಗಕ್ಕೆ ನೆನಪು ಮಾಡಿಕೊಟ್ಟ ಪ್ರೇಕ್ಷಕರ ಗೆಲುವು ಕೂಡ ಇದು!
-ವಾಸುಕಿ ರಾಘವನ್
Gurugallu estavagodhe adhe karannakke avru helbeku andidna directgi hell bidthare
Hage jagges kuda eli parakaya prevesisidare
Enthaha olleya chithrada vimarsheyannu nididakke panjuvina oduga ballagada paravagi danyvadagallu
surprised to see an ordinary film discussed here at length..he Director has contributed the ever decreasing taste of kannada cinema.
ಉಮೇಶ್ ರವರೆ,
ಕನ್ನಡ ಚಿತ್ರರಂಗಕ್ಕಿರುವ ಒಂದೇ ಒಂದು ಧನಾತ್ಮಕ ಅಂಶವೆಂದರೆ ಸದಭಿರುಚಿಯ ಚಿತ್ರಗಳನ್ನು ಕೆಲವರು ಅಲ್ಲಗೆಳೆಯುವುದು.
ಅದ್ಯಾವುದೋ "ಕಿತ್ತೋಗಿರೋ"(ಎಲ್ಲವೂ ಅಲ್ಲ) ಹಿಂದಿ, ಇಂಗ್ಲಿಷ್ ಚಿತ್ರಗಳನ್ನು awesome, super, excellent ಅಂತ ಹೊಗಳಿ ಅಟ್ಟಕ್ಕೇರಿಸುವವರು ಕೊನೆ ಪಕ್ಷ ಕನ್ನಡದಲ್ಲಿ ಬರುವ ಹೊಸ ಪ್ರಯೋಗಗಳಿಗೆ ಬೆನ್ನು ತಟ್ಟುವುದಿಲ್ಲ.
ಇದರಿಂದಲೇ ನಿರ್ದೇಶಕನಿಗೂ ಬೇಸರವಾಗಿ ಶಾಸ್ತ್ರಿ, ದಾಸ, ಲಾಂಗು, ಮಚ್ಚು, ಚೂರಿ , ಡೀಲು, ಮಚ್ಚಾ, ಪೂಜಾರಿ,…ಯಂತಹ ಹೆಸರುಗಳನ್ನಿಟ್ಟುಕೊಂಡು ಸಾಲು ಚಿತ್ರಗಳು ಬರುತ್ತವೆ.
Once again, ಮತ್ತೆ ಬುದ್ಧಿಜೀವಿಗಳು ಆ ಚಿತ್ರಗಳನ್ನೂ ಚೆನ್ನಾಗಿಲ್ಲವೆನ್ನುತ್ತಾರೆ.
ಬಹುಶಃ ನಿಮಗೆ ಗುರುಪ್ರಸಾದ್ ರವರ ಮಠ ಮತ್ತು ಎದ್ದೇಳು ಮಂಜುನಾಥ ಅರ್ಥವಾಗಿಲ್ಲವೆಂದರೆ ಇನ್ನೊಮ್ಮೆ ಕುಳಿತು (ಯಾವುದೇ ಪೂರ್ವಾಗ್ರಹವಿಲ್ಲದೆಯೇ) ನೋಡಿ.
ಆಗ ಆ ಚಿತ್ರಗಳ ಹಾಸ್ಯದ ಹಿಂದಿನ ಹೆಣೆದಿರುವ ಉದ್ದೇಶ ನಿಮಗೆ ಅರ್ಥವಾಗುತ್ತದೆ.
ಕನ್ನಡ ಚಿತ್ರರಂಗದಲ್ಲಿ ಒಂದು ಯಶಸ್ವಿ ಚಿತ್ರ ನೀಡೋದು ಅಂದರೆ ಅದು ದೊಡ್ಡ ಸವಾಲು. ಅಂತಹದ್ದರಲ್ಲಿ (ಯಾವುದೇ hype ಗಳಿಲ್ಲದೇ) ಕೇವಲ ಸ್ಕ್ರಿಪ್ಟ್ ನಲ್ಲೇ ಸಿನಿಮಾವನ್ನು ಗೆಲ್ಲಿಸಬಲ್ಲೆ ಅಂತ ಚಾಲೆಂಜು ಹಾಕಿ, ಕಡಿಮೆ ಬಜೆಟ್ ನ ಎರಡು ಸಿನಿಮಾಗಳನ್ನು ಈಗಾಗಲೇ ಗೆಲ್ಲಿಸಿರುವ ಗುರುಪ್ರಸಾದ್ ಎಲ್ಲರಿಗಿಂತ ವಿಭಿನ್ನ ಸ್ಥಾನದಲ್ಲಿ ನಿಲ್ಲುವ ಯಶಸ್ವೀ ನಿರ್ದೇಶಕ.
ಅಂಥ ಚಿತ್ರಗಳನ್ನು ಕೀಳು ಅಭಿರುಚಿಯ ಚಿತ್ರಗಳೆಂದು ಕರೆಯುವುದು ಅಷ್ಟೊಂದು ಸಮಂಜಸವಲ್ಲವೆಂದು ನನ್ನ ಅನಿಸಿಕೆ!!
ದಯವಿಟ್ಟು "ಧನಾತ್ಮಕ" ಎಂದು ಬರೆದಿರುವುದನ್ನು "ಋಣಾತ್ಮಕ" ಅಂತ ಓದಿಕೊಳ್ಳಿ. ಅವಸರದಲ್ಲಿ ತಪ್ಪಾಗಿದೆ.ಕ್ಷಮೆಯಿರಲಿ!
ಉಮೇಶ್ ಅವರೇ, ಚಲನಚಿತ್ರ ಬಹಳ ಪರ್ಸನಲ್ ಮತ್ತು ಸಬ್ಜೆಕ್ಟಿವ್ ವಿಷಯ ಅಂತ ನಾನು ನಂಬುತ್ತೇನೆ. ನಾನು ಯಾವ ಕಾರಣಗಳಿಗಾಗಿ ಈ ಚಿತ್ರವನ್ನು ಮೆಚ್ಚಿದ್ದೇನೋ ಅದೇ ಕಾರಣಗಳಿಗೆ ಈ ಚಿತ್ರವನ್ನು ಇಷ್ಟ ಪಡದವರನ್ನು ನಾನು ಬಲ್ಲೆ. ನನ್ನಷ್ಟೇ ಈ ಚಿತ್ರವನ್ನು ಇಷ್ಟಪಡೋ ಎಷ್ಟೋ ಜನ ಬೇರೆ ಬೇರೆ ಕಾರಣಗಳಿಗಾಗಿ ಇಷ್ಟ ಪಟ್ಟಿರುತ್ತಾರೆ ಕೂಡ. ಆದರೆ ನೀವು ಯಾವ ಕಾರಣಕ್ಕಾಗಿ 'ಕಳಪೆ' ಎಂದು ಹೇಳಿದಿರಿ ಎಂದು ಗೊತ್ತಾಗಲಿಲ್ಲ. ನೀವು ಇಷ್ಟ ಪಡಲೇಬೇಕೆಂದು ಯಾರೂ ಒತ್ತಾಯಿಸುತ್ತಿಲ್ಲ, ಆದರೆ ಸಂತೋಷ್ ಅವರು ಹೇಳಿದಂತೆ ನೀವು ಇನ್ನೊಮ್ಮೆ ಚಿತ್ರವನ್ನು ನೋಡಿದರೆ ಒಳಿತು.
ಯಾವುದೆ ಕಲಾಕೃತಿಯನ್ನ ನುಭವಿಸೋ ಮುಂಚೆ ನಿಮ್ಮೊಳಗೊಬ್ಬ ಕಲಾವಿದ ಇರಬೇಕು ಮಂಜುನಾಥ ಅಲ್ಲ ುಉಮೇಶ್ ಅವರೆ..! ನಿಮಗೆ ಈ ಉಪೇಂದ್ರ, ಓಂ ಪ್ರಕಾಶ್, ಸಾಯಿ ಪ್ರಕಾಶ್, ಎಸ್. ನಾರಾಯಣ್ ಅಂಡ್ ಟೀಮ್ ಎಲ್ಲಾ ಸೇರಿ ನಿಮ್ಮೊಳಗಿನ ಕಲಾವಿದನ್ನ ಮಂಜುನಾಥ ಮಾಡಿದಾರೆ.
ವಾಸುಕಿ ರಾಘವನ್,
ಹೇಳಬೇಕೆಂದಿರುವುದನ್ನೆಲ್ಲ ಮೇಲೆಯೇ ಹೇಳಿದ್ದೇನೆ.
ಚಿಕ್ಕ ಅತೀ ಮುಖ್ಯ ಅಂಶಗಳನ್ನು ಗುರುತಿಸಿ ಹೇಳಿದ್ದೀರ.ನಿಮ್ಮ ಲೇಖನ ಓದಿ ಬಹಳ ಖುಷಿಯಾಯಿತು.
ಮತ್ತೊಂದಷ್ಟು "ಕನ್ನಡ" ಚಿತ್ರರತ್ನಗಳ ಬಗ್ಗೆ ನಿಮ್ಮಿಂದ ವಿಮರ್ಶೆ ಆಶಿಸುತ್ತಾ….
ಸಂತೋಷ್
ಸಂತೋಷ್, ಕಾರಣಾಂತರಗಳಿಂದ ನಾನು ಹೆಚ್ಚಾಗಿ ಜಾಗತಿಕ ಸಿನಿಮಾಗಳನ್ನು ನೋಡಿದ್ದೀನಿ, ನನ್ನ ಮಾತುಕತೆಗಳಲ್ಲಿ, ಬರಹಗಳಲ್ಲಿ ಅವೇ ಹೆಚ್ಚಾಗಿ ಬರುವ ಸಾಧ್ಯತೆಗಳು ಇವೆ (ಕನ್ನಡೇತರ ಅಂದರೆ 'ಕೂಲ್' ಎನ್ನುವ ಮನೋಭಾವದಿಂದ ಖಂಡಿತ ಅಲ್ಲ!) ನಾನು ನೋಡಿರದ ಕನ್ನಡ ಚಿತ್ರಗಳನ್ನು ತೀರಾ ಇತ್ತೀಚಿನಿಂದ ಗಮನಿಸುತ್ತಿರೋದು. ಹೆಚ್ಚಾಗಿ ಕನ್ನಡ ಚಿತ್ರಗಳ ಬಗ್ಗೆ ಬರೆಯಬೇಕು ಮುಂದೆ ಅಂತ ನನಗೂ ಆಸೆ, ಸ್ವಲ್ಪ ಸಮಯ ಹಿಡಿಯುತ್ತದೆ ಅಷ್ಟೇ.
ನನಗೆ 'ಮಂಜುನಾಥ' ಗಿಂಥಾ 'ಮಠ' ಬಹಳ ಇಷ್ಟವಾದ ಸಿನೇಮಾ. ಬಹುಶಃ ನನಗೆ ಅಧ್ಯಾತ್ಮ ಬಹಳ ಸೋಜಿಗವೆನಿಸುವ ಕಾರಣದಿಂದಿರಬಹುದು! ಕನ್ನಡ ಸಿನೇಮಾಗಳಲ್ಲೇ ಅದು ನನಗೆ ತುಂಬಾ ಹಿಡಿಸಿತು ಎಂದೇ ಹೇಳಬಹುದು. 'ಮಂಜುನಾಥ'ನ ಕಲ್ಪನೆ ನಿಜಕ್ಕೂ ಸೃಜನಶೀಲ ಎಂಬುದನ್ನು ಒಪ್ಪುತ್ತೇನೆ. ಒಮ್ಮೊಮ್ಮೆ ನಾವೇ ಪಾತ್ರಗಳಂತೆ ಭಾಸವಾಗಬಹುದು 'ಮಂಜುನಾಥ'ನ ಫ್ರೇಮುಗಳಲ್ಲಿ. ಗುರು ಕನ್ನಡದ ಭರವಸೆಯ ನಿರ್ದೇಶಕ ಎಂಬುದು ನಿರ್ವಿವಾದಿತ ಸತ್ಯ!
– ಪ್ರಸಾದ್.ಡಿ.ವಿ.
chandada cinema, chaandada vimarshe…
ಎದ್ದೇಳು ಮಂಜುನಾಥದಂತಹ ಒಂದು ಅಪರೂಪದ ಚಿತ್ರದ ಸೂಕ್ಷತೆಗಳನ್ನು ತೆರೆದಿಟ್ಟಿದ್ದಕ್ಕೆ ಧನ್ಯವಾದಗಳು ವಾಸುಕಿ. ಎದ್ದೇಳು ಮಂಜುನಾಥ ಒಂದು "ಮಲ್ಟಿ ಲೇಯರ್ಡ್" ಚಿತ್ರ… ಬಿಡಿಸಿ ನೋಡಿದಷ್ಟು ಹೊಸ ಪದರಗಳು ಕಾಣತ್ತೆ ! ಪ್ರತಿಯೊಂದು ಸನ್ನಿವೇಶವನ್ನು ಗುರು ಕಟ್ಟಿ ಕೊಟ್ಟಿರುವ ರೀತಿ ಅಭಿನಂದನೆಗೆ ಅರ್ಹ .