ನೈತಿ(ಕತೆ)

 

'ಸಾರ್ ನಿಮ್ಮನ್ನ ಎಲ್ಲೋ ನೋಡಿದ್ದೀನಿ ಸಾರ್….ನೀವು…..ನೀವ್ ದಾರವಾಯಿಲಿ ಬತ್ತೀರ ಅಲ್ವಾ?' ಅಂತ ಶುರು ಮಾಡಿದ ಅವನು. ನಾನು ಸುಮ್ಮನೆ 'ಹ್ಞೂಂ' ಅಂದೆ.

'ಅದೇ ಅನ್ಕೊಂಡೆ… ನೀವು ಬಸ್ ಅತ್ದಾಗಿಂದ ತಲೆ ಕೆಡುಸ್ಕೊತಿದ್ದೆ, 'ಇವ್ರುನ್ನ ಎಲ್ಲೋ ನೋಡ್ದಂಗದಲ್ಲ ಅಂತ…ಈಗ ವಳಿತು ಸಾರ್… 'ನಮಸ್ಕಾರ ಸಾರ್…ನನ್ನೆಸ್ರು ಕೃಷ್ಣ ಅಂತ…'

'ಈ ಬಸ್ ಕಂಡಕ್ಟರ ನೀವು?'   

' ಊಂ ಸಾರ್ ಒಂತರ ಅಂಗೆ ಅನ್ಕೊಳ್ಳಿ… ಈ ಬಸ್ಗೆ ನಾನೇ ಕಂಡಕ್ಟ್ರು, ಕ್ಲೀನರ್ರು, ಕ್ಯಾಶಿಯರ್ರು ಎಲ್ಲಾ'  ಅವನ ಮಾತಿನ ಧಾಟಿಗೆ ನಕ್ಕು ಮೆಚ್ಚುಗೆ ಸೂಚಿಸಿದೆ. 

'ನಿಮ್ಮನ್ನ ಟೀವಿಲಿ ಸುಮಾರ್ ಸಲ ನೋಡಿದ್ದೀನಿ ಸಾರ್…ಅದೇ "ಆ" ದಾರವಯಿಲಿ ನಿಮ್ಮೆಂಡ್ರು ಗಾಂಚಲಿ ಮಾಡಿದಕ್ಕೆ ತಗದು ಒಂದ್ ಬುಟ್ರಲ್ಲ ಸಕತ್ತಾಗಿತ್ತು ಸಾರ್ ಅದು' ಎಂದ ಕಂಡಕ್ಟರ್ ಕಮ್, ಕ್ಲೀನರ್ ಕಮ್ ಕ್ಯಾಶಿಯರ್ರು ಕಮ್ ಎಲ್ಲಾ' ಆಗಿದ್ದ ಕೃಷ್ಣ.   

'ಲೇ ಅಲಾಲ್ ಟೋಪಿ! ಟೀಬಿಲಿ ನಿಜವಾಗಲು ವಡದಾರೆನೋ ಸುಮ್ನೆ ಅಂಗ್ ವಡದಂಗ್ ಮಾಡ್ತಾರೆ ಅಷ್ಟೇ' ಎಂದರು ಪಂಚೆ ಶರ್ಟು ದರಿಸಿ ಹೆಗಲ ಮೇಲೊಂದು ಟವೆಲ್ ಹಾಕಿಕೊಂಡು ನನ್ನ ಪಕ್ಕದಲ್ಲಿ ಕುಳಿತಿದ್ದ ಮಧ್ಯ ವಯಸ್ಸಿನ ಗೌಡರೊಬ್ಬರು.  

ಆ ಖಾಸಗಿ ಬಸ್ಸು ಕನಕಪುರ ಹಾಗೂ ಅದೇ ತಾಲ್ಲೂಕಿನ ಗಡಿ ಭಾಗದ ಊರೊಂದರ ನಡುವೆ ಇದ್ದ ಏಕೈಕ ಬಸ್ಸು. ಆ ಊರಿನ ಸೆರಗಿನಲ್ಲಿ ಹರಿಯುತ್ತಿದ್ದ ಕಾವೇರಿ ನದಿಯ ರಮ್ಯ ಪರಿಸರದಲ್ಲಿ ಧಾರವಾಹಿಯೊಂದರ ಚಿತ್ರೀಕರಣಕ್ಕಾಗಿ ಲೋಕೇಶನ್ ಹುಡುಕಾಟಕ್ಕಾಗಿ ಡಿಸೆಂಬರ್ ತಿಂಗಳಲ್ಲಿ ನಾನು ಅಲ್ಲಿಗೆ ಹೊರಟ್ಟಿದ್ದೆ. ಧಾರಾವಾಹಿಯ ನಿರ್ಮಾಪಕ ಪ್ರಭುಗಳು ಕೊಡುವ ಬಡ್ಜೆಟ್ಟಿನಲ್ಲಿ ಕಾರಿನಲ್ಲಿ ಹೋಗುವುದು ಸಾಧ್ಯವೇ ಇಲ್ಲದ್ದರಿಂದ ಹೆಗಲಿಗೆ ಡಿಜಿಟಲ್ ಕ್ಯಾಮೆರಾ ಏರಿಸಿಕೊಂಡು ಆ ಧಾರಾವಾಹಿಯ ನಟ ಕಮ್ ನಿರ್ದೇಶಕನಾದ ನಾನು ಹಾಗು ನಮ್ಮ ಪ್ರೊಡಕ್ಷನ್ ಮ್ಯಾನೇಜರ್ ಆ ಬಸ್ ಹತ್ತಿದ್ದೆವು. 

ಆ ಗೌಡ್ರು ನಮ್ಮ ಕಂಡಕ್ಟರ್ ಕಮ್, ಕ್ಲೀನರ್ ಕಮ್, ಕ್ಯಾಶಿಯರ್ ಕಮ್ ಎಲ್ಲಾ ಆಗಿದ್ದ ಕೃಷ್ಣನನ್ನ ತುಂಬಾ ವರ್ಷಗಳಿಂದ ಬಲ್ಲವರಿರಬೇಕು ಅನ್ನಿಸಿತು. ಇಲ್ಲ ಎಂದರೆ ಈ ರೀತಿ ಏಕಾ ಏಕಿ " ಅಲಾಲ್ ಟೋಪಿ" ಎಂದು ಹೇಗೆ ಗೌರವ ಸೂಚಿಸಲು ಸಾಧ್ಯ? 

'ಅಂಗೇನಯ್ಯ? ಅಂಗಾರೆ ಟೀವಿಲಿ, ಪಿಚ್ಚರೆಲಿ ನಿಜವಾಗಲು ವದೆ ಬೀಳಲ್ವೆ? ನಾನು ನಿಜವಾಗಲು ವಡೀತಾರೆ ಅನ್ಕೋಬುಟ್ಟಿದ್ದೇ' ಎಂದ ಕೃಷ್ಣ

ಅದೇನು ನಿಜವಾಗಿಯೂ ಅವನು ತನ್ನ ಮುಗ್ಧತೆ ಪ್ರದರ್ಶಿಸಿದನೋ ಅಥವಾ ಗೊತ್ತಿದ್ದೂ ಕಾಲಹರಣಕ್ಕಾಗಿ ಸುಮ್ನೆ ಪ್ರಶ್ನೆ ಹಾಕುತ್ತಿದ್ದನೋ ಏನೋ, ನನ್ನ ಅಲ್ಪ ಬುದ್ದಿಗೆ ಹೊಳೆಯಲಿಲ್ಲ.

'ಉಂ ವಡಿತರ್ ನಿನ್ ತಲೆ. ಅಂಗೆನಾರ ವಡ್ದು ಬಡ್ದು ಮಾಡುವಂಗಿದ್ರೆ ಯಾರು ದಾರವಾಯಿ ಮಾಡ್ತಿರಲಿಲ್ಲ ಕಣೋ ತರ್ಲೆ' ಎಂದ ಗೌಡ್ರು ‘ಕರೆಕ್ಟ್ ಅಲ್ವಾ ಸಾರ್?’ ಎನ್ನುತ್ತಾ ಅವರ ಉತ್ತರ ಸರಿಯೋ ತಪ್ಪೋ ಎಂದು ಧೃಡೀಕರಿಸಿಕೊಳ್ಳುವವರಂತೆ ನನ್ನನ್ನ ಕೇಳಿದರು. 

ನಾನು ಬಾಯಿ ಬಿಡುವ ಮೊದಲೇ ನಮ್ಮ ಪ್ರೊಡಕ್ಷನ್ ಮ್ಯಾನೇಜರ್ 'ಕರೆಕ್ಟ್ ಯಜಮಾನ್ರ್ರೆ' ಎಂದು ಅಣಿ ಮುತ್ತು ಉದುರಿಸಿಯಾಗಿತ್ತು.

'ಓ ಅಂಗ ಸಾರ್? ಅಂಗಾರೆ ಪಿಚ್ಚರಲೆಲ್ಲ ತಬ್ಕೋಳ್ಳೋದು ಮುತ್ತಿಕ್ಕೋದು ಇನ್ನ ಏನೇನೋ(?) ಮಾಡ್ತಾರಲ್ಲ ಅದೆಲ್ಲ ನಿಜ ಅಲ್ವಾ ಸಾರ್?' ಎಂದು ಮತ್ತೊಂದು ಬಾಣ ಪ್ರಯೋಗಿಸಿದ ಕೃಷ್ಣ.  

ನಮ್ಮ ಪ್ರೊಡಕ್ಷನ್ ಮ್ಯಾನೇಜರ್ ನಿರುತ್ತರರಾಗಿ ನನ್ನ ಕಡೆ ಶರಣಾಗತಿಯ ನೋಟ ಹರಿಸಿದರು. ನನಗ್ಯಾಕೋ ಈ ಕೃಷ್ಣನ ಕುತೂಹಲ ಸ್ವಲ್ಪ 'ಜಾಸ್ತಿ' ಆಗ್ತಿದೆ ಅನ್ನಿಸುವುದಕ್ಕೆ ಶುರುವಾಯಿತು. 

'ಯಾರ್ರಿ ಉಯ್ಯಂಬಳ್ಳಿ?' ಅಷ್ಟರಲ್ಲಿ ಕೃಷ್ಣ ಇಡೀ ತಾಲ್ಲೂಕಿಗೆ ಕೇಳುವ ಹಾಗೆ ಕೂಗು ಹಾಕಿದ. ಕಚ್ಚಾ ರಸ್ತೆಯ ಮೇಲೆ ಮೇಲೆ ಕೆಳಗೆ ಎತ್ತಿ ಹಾಕುತ್ತ ಸಾಗುತ್ತಿದ್ದ ಬಸ್ಸು ಊರೊಂದರ ಮುಂದೆ ನಿಂತಿತು. ಬಸ್ಸು ನಿಂತ ಕೂಡಲೇ ಮಧ್ಯವಯಸ್ಸಿನ ಇಬ್ಬರು ಹೆಂಗಸರು ನಾವು ಕುಳಿತ್ತಿದ್ದ ಸೀಟಿನ ಕೆಳಗೆ ಇದ್ದ ಎರಡು ಬುಟ್ಟಿಗಳನ್ನು ಹೊರಕ್ಕೆ ಎಳೆದುಕೊಂಡು ಕೆಳಗೆ ಇಳಿದರು.

ಬುಟ್ಟಿಗಳೊಳಗಿಂದ ಕೋಳಿ ಮರಿಗಳ ಕಿಚಿ ಪಿಚಿ ಕೇಳಿ ಬರುತ್ತಿತ್ತು. ಅದುವರೆಗೂ ಆ ಸೀಟಿನಲ್ಲಿ ಕುಳಿತ್ತಿದ್ದದ್ದು ನಾನು ನಮ್ಮ ಮ್ಯಾನೇಜರ್ ಇಬ್ಬರೇ ಅಂತ ಅಂದುಕೊಂಡಿದ್ದೆ ನಾನು.

ಬಸ್ಸಿನ ಕರ್ಕಶ ಸದ್ದಿನಲ್ಲಿ  ಹಾಗು ಕೃಷ್ಣನೊಟ್ಟಿಗಿನ ಮಾತುಕತೆಯಲ್ಲಿ ಈ ನಿರುಪದ್ರವಿ ಜೀವಿಗಳ ಇರುವಿಕೆಯನ್ನು ಗಮನಿಸಿರಲಿಲ್ಲ.

ಬಸ್ಸು ನಿಂತ ಕೂಡಲೆ ಈ ಬಸ್ಸಿಗಾಗಿಯೇ ಕಾಯುತ್ತಿದ್ದ ಹಲವರು ಬಸ್ಸಿನೊಳಗೆ ಹತ್ತಿಕೊಂಡರು. ನಾವು ಇಳಿಯಬೇಕಾಗಿದ್ದ ಊರು ಬರಲು ಇನ್ನು ಸಮಯವಿತ್ತು. ಹೊಸದಾಗಿ ಬಸ್ಸು ಹತ್ತಿದವರ ಬಳಿ ಹಣ ವಸೂಲಿ ಮಾಡಲು ಕೃಷ್ಣ ಎದ್ದು ಹೋದ. ನಾನು ರಸ್ತೆಯ ಎರಡು ಬದಿ ಚಾಚಿಕೊಂಡಿದ್ದ ಆ ಊರಿನ ಸೊಬಗನ್ನು ನೋಡುವುದರಲ್ಲಿ ಮಗ್ನನಾದೆ. ನಮ್ಮ ಮ್ಯಾನೇಜರ್ ಸಣ್ಣಗೆ ತೂಕಡಿಸಲು ಶುರು ಮಾಡಿದ್ದರು. 

'ಸಾರ್' ಧ್ವನಿ ಕೇಳಿ ಎಚ್ಚೆತ್ತು ನೋಡಿದರೆ ಕ್ರಿಷ್ಣ ತನ್ನಷ್ಟೂ ದಂತ ಪಂಕ್ತಿಗಳನ್ನು ಪ್ರದರ್ಶಿಸುತ್ತಾ ನನ್ನೆದುರು ನಿಂತಿದ್ದ. ಕೈ ಬೆರಳುಗಳ ಸಂಧಿಯಲ್ಲಿ ಉದ್ದಕ್ಕೆ ಮಡಚಿದ್ದ ಹಲವು ನೊಟುಗಳಿದ್ದವು.

"ನನ್ ಮಾತಿಗೆ ಏನೂ ಹೇಳ್ಲೆ ಇಲ್ವಲ್ಲ ಸಾರ್ ನೀವು" ಎಂದ.

ನಾನು "ಯಾವ ಮಾತು ಪುಣ್ಯಾತ್ಮ" ಎನುವಷ್ಟರಲ್ಲಿ "ಅದೇ ಸಾರ್" ಎಂದು ನಂತರ ಕೊಂಚ ದನಿ ತಗ್ಗಿಸಿ

"ಪಿಚ್ಚರಲ್ಲಿ ಈರೋ ಈರೋಇನ್ ಗಳನ್ನ ತಬ್ಕೊಂಡ್ ಮುದ್ದಾಡ್ತಾರಲ್ಲ ಅದು ನಿಜಾನ ಸುಳ್ಳ ಸಾರ್" ಎಂದು ನಾನು ಅದಾಗಲೇ ಮರೆತಿದ್ದ ಟಾಪಿಕನ್ನು ಮತ್ತೆ ಎಳೆದು ತಂದಿದ್ದ.

ಮೆಲುದನಿಯಲ್ಲೇ ಕೇಳಿದ್ದರು ಅವನ ಮಾತು ಬಸ್ಸಿನಲ್ಲಿದ್ದವರಿಗೆಲ್ಲಾ ಕೇಳಿಸಿತ್ತು ಅಂತ ಕಾಣುತ್ತೆ ಎಲ್ಲರು ನಮ್ಮ ಕಡೆ ತಿರುಗಿ ನೋಡತೊಡಗಿದರು.

ಕ್ರಿಷ್ಣನ ಪ್ರಶ್ಣೆಗೆ ನನ್ನ ಉತ್ತರ ಎನಿರಬಹುದು ಎಂಬ ಕುತೂಹಲ ಅವರಿಗೂ ಇದ್ದಂತೆ ಕಾಣುತ್ತಿತ್ತು.

’’ತಬ್ಕೊಳ್ಳೊದು, ಮುತ್ತಿಡೋದು ನಿಜ, ಆ ದೃಶ್ಯಕ್ಕೆ ಅವಶ್ಯಕತೆ ಇರೋದರಿಂದ ಹಾಗೆ ನಟಿಸಬೇಕಾಗುತ್ತೆ. ಆದ್ರೆ ಅದು ಬರೀ ನಟನೆ ಅಷ್ಟೆ’’ ಎಂದು ಹೇಳಿ ಅವನ ಕುತೂಹಲ ತಣಿಸಲು ಯತ್ನಿಸಿದೆ.  ತಕ್ಷಣ ‘’ಅಂಗಾರೆ ಪಿಚ್ಚರೆಲಿ ಫಸ್ಟ್ ನೈಟ್ ಮಾಡ್ಕೊತಾರಲ್ಲ ಅದು ನಿಜಾನ ಸಾರ್?’’ ಎಂದು ಮತ್ತೊಂದು ಬ್ರಹ್ಮಾಸ್ತ್ರ ನನ್ನ ಮೇಲೆ ಪ್ರಯೋಗಿಸಿದ.

ಈ ಬಾರಿಯಂತು ನಾನು ತೀರ ಮುಜುಗರಕ್ಕೊಳಗಾದೆ. ಕ್ರಿಷ್ಣನ ಪ್ರಶ್ನೆಗೆ ಉತ್ತರಿಸುವುದು ಸಾಧ್ಯವೇ ಇರಲಿಲ್ಲ. ಇತರೆ ಪ್ರಯಾಣಿಕರು ನಮ್ಮ ಕಡೆ ಇನ್ನೂ ನೋಡುತ್ತಲೇ ಇದ್ದರು.

ನನ್ನ ಅಸಹಾಯಕ ಸ್ಥಿತಿಯನ್ನು  ಅರ್ಥ ಮಾಡಿಕೊಂಡ ಆ ಗೌಡರು ’’ಲೇ ಮಿಂಡ್ರುಗುಟ್ದೊನೆ! ನಿನ್ ಕೆಲ್ಸ ಎಷ್ಟದೋ ಅಷ್ಟ್ ನೋಡ್ಲ. ಯಾಕ್ ಅವರ್ ತಲೆ ತಿಂದಿ. ಓಹೋಹೋ ಎನ್ ದೊಡ್ಡ ಮೀಸೆ ಮಿಂಡಾಳು, ಬಾಯಿಗ್ ಬಂದಂಗ್ ಮಾತಾಡ್ತಾನೆ. ವಯಸ್ಸಿಗ್ ತಕ್ಕಂಗ್ ಮಾತಾಡ್ಲ!’’ ಎಂದು ಕೃಷ್ಣನನ್ನು ಗದರಿಸಿ ಸುಮ್ಮನಾಗಿಸಲು ನೋಡಿದರು. 

ಹಾಗೆ ನೋಡಿದರೆ ಕೃಷ್ಣನಿಗೆ ಚಿಕ್ಕ ವಯಸ್ಸೇನು ಆಗಿರಲಿಲ್ಲ. "ಈ" ರೀತಿಯ ವಿಷಯಗಳ ಬಗ್ಗೆ ಯೋಚನೆ ಮಾಡುವ ವಯಸ್ಸಂತು ಖಂಡಿತ ಆಗಿತ್ತು.

ಗೌಡರ ಗದರಿಕೆಗೆ ಸುಮ್ಮನಾಗುತ್ತಾನೇನೊ ಎಂದುಕೊಂಡರೆ ’’ಕಂಡಿದ್ದೀನ್ ಕುಂತ್ಕೊಳ್ಳಯ್ಯೊ!! ಹೋ ನಂಗೆ ಏಳಾಕ್ ಬಂದ್ಬುಟ್ಟ. ಸುಮ್ನೆ ತಿಳ್ಕೋಳ್ಳೊಣ ಅಂತ ಕೇಳ್ದೆ, ಎನ್ ತಪ್ಪು? ಏನ್ ತಪ್ಪು ಸಾರ್ ನಾನ್ ಕೇಳಿದ್ರಲ್ಲಿ?’ ಎಂದು ಕಡೆಗೆ ನನ್ನನ್ನೆ ಮರು ಪ್ರಶ್ನೆ ಮಾಡಿದ.

ನಾನು ವಿಧಿಯಿಲ್ಲದೆ ’’ತಪ್ಪಿಲ್ಲ’’ ಎಂಬಂತೆ ತಲೆಯಾಡಿಸಿದೆ. ‘ತಪ್ಪಿಲ್ಲ ಅಂದ್ಮೇಲೆ ಹೇಳಿ ಸಾರ್’ ಎಂದು ನನ್ನ ಉತ್ತರಕ್ಕಾಗಿ ಕಾಯುತ್ತ ಕುಳಿತ. ಇತರೆ ಪ್ರಯಾಣಿಕರು ಸಹ ಉತ್ತರಕ್ಕಾಗಿ ಕಾತುರರಾಗಿದ್ದರು.

“ನೋಡು ಟಿವಿಯಲ್ಲಿ, ಸಿನಿಮಾದಲ್ಲಿ ನಡೆಯುತ್ತಿರುವುದೆಲ್ಲಾ ನಿಜ ಅಂತ ನಂಬೊ ಹಾಗೆ ತೋರಿಸಬೇಕಾಗುತ್ತದೆ. ಆದ್ರೆ ಅದೆಲ್ಲಾ ನಿಜ ಅಲ್ಲ” ಎಂದು ಚುಟುಕಾಗಿ ಅವನ ಪ್ರಶ್ನೆಗೆ ಉತ್ತರಿಸಿದೆ.

’’ಓ…………ಅಂಗಾರೆ ಎಲ್ಲಾ ಸುಳ್ಳಾ ಸಾರ್?’’ ಎಂದು ರಾಗ ಎಳೆದ. ನಾನು ಸುಮ್ನೆ "ಹೂಂ" ಎಂದು ಹೇಳಿ ನಿರಾಳನಾದೆ. ಕೃಷ್ಣ ನಿರಾಶನಾಗಿಬಿಟ್ಟ. ನಮ್ಮ ಕಡೆ ನೋಡುತ್ತಿದ್ದ ಇತರೆ ಪ್ರಯಾಣಿಕರಿಗೂ ನಿರಾಶೆಯಾಯಿತು ಅಂತ ಕಾಣುತ್ತೆ, ಅವರು ಸಹ ಇನ್ನಿವರ ಮಾತಿನಲ್ಲಿ ಯಾವ ಸ್ವಾರಸ್ಯವು ಇಲ್ಲ, ಕೇಳುವುದರಿಂದ ನಮಗ್ಯಾವ ಪ್ರಯೋಜನವು ಇಲ್ಲ ಎಂದು ಭಾವಿಸಿದವರಂತೆ ಮುಂದೆ ತಿರುಗಿ ತಮ್ಮ ತಮ್ಮ ಲೋಕಗಳಲ್ಲಿ ಮುಳುಗಿ ಹೋದರು,

ಕೃಷ್ಣ ಬಾಗಿಲ ಮೇಲೆ ನಿಂತು ಗಾಢವಾದದ್ದೇನನ್ನೊ ಯೋಚಿಸುವವನಂತೆ ಹೊರಗೆ ನೋಡುತ್ತಿದ್ದ. ನನ್ನ ಪಕ್ಕ ಕುಳಿತಿದ್ದ ಗೌಡರು ಹಾಗು ನಮ್ಮ ಮ್ಯಾನೇಜರ್ ಸ್ಫರ್ಧೆಗೆ ಬಿದ್ದವರಂತೆ ತೂಕಡಿಸುತ್ತಾ ಆಗಾಗ ಅಕ್ಕ ಪಕ್ಕದವರ ಮೇಲೆ ಬಿದ್ದು ಕಿರಿಕಿರಿಯುಂಟು ಮಾಡುತ್ತಿದ್ದರು. ಬಸ್ಸು ಕಲ್ಲು ಮಣ್ಣಿನ ರಸ್ತೆಯ ಮೇಲೆ ಧೂಳೆಬ್ಬಿಸುತ್ತಾ ಸಾಗಿತ್ತು. ಕಿವಿಗೆ ಬಸ್ಸಿನ ಕರ್ಕಶ ಶಬ್ಧ ಬಿಟ್ಟರೆ ಬೇರೇನೂ ಕೇಳಿಸುತ್ತಿರಲಿಲ್ಲ.

ಸ್ಟೆಪ್ನಿ ಟೈರಿನ ವಾಸನೆ ಬಸ್ಸಿನ ತುಂಬೆಲ್ಲಾ ಹರಡಿತ್ತು. ನಾನು ಬಸ್ಸಿನ ಹೊರಗೆ ಹಸಿರು ಹೊದ್ದು ಮಲಗಿದ್ದ ಬೆಟ್ಟ ಗುಡ್ಡಗಳು ಹಾಗು ಹೊಲ ಗದ್ದೆಗಳ ಚೆಲುವನ್ನು ಕಣ್ಣುಗಳೊಳಕ್ಕೆ ಇಳಿಸಿಕೊಳ್ಳುತ್ತಿದ್ದೆ. 

ಆಗ ಇದ್ದಕ್ಕಿದ್ದಂತೆ ಕೃಷ್ಣ ಸೀಟಿ ಹೊಡೆದು ಬಸ್ಸು ನಿಲ್ಲಿಸಿದ. ಬಸ್ ಸ್ಟಾಪ್ ಇರಬೇಕು ಎಂದುಕೊಂಡೆ. ಆದರೆ ಯಾರು ಹತ್ತಲು ಇಲ್ಲ ಇಳಿಯಲೂ ಇಲ್ಲ.

ಕೃಷ್ಣ ಮಾತ್ರ ದಡ ದಡ ಬಸ್ಸಿಳಿದು ಓಡಿಹೋದ.

*****

ನಾನು ಕಿಟಕಿಯಿಂದ ಹೊರಗೆ ತಲೆ ಹಾಕಿ ನೋಡಿದೆ. ರಸ್ತೆಯ ಬದಿಯಲ್ಲಿ ಬೈಕೊಂದರ ಮೇಲೆ ಒರಗಿ ಹುಡುಗನೊಬ್ಬ ಕುಳಿತಿದ್ದ. ಅವನ ಎದುರಿಗೆ ಸುಮಾರು ೧೬ ರಿಂದ ೧೮ ವರ್ಷ ವಯಸ್ಸಿನ ಹುಡುಗಿಯೊಬ್ಬಳು ನಿಂತು ಮಾತನಾಡುತ್ತಿದ್ದಳು. ಕೃಷ್ಣ ಬಿರುಸಾಗಿ ನಡೆದು ಅವರ ಬಳಿ ಹೋದ. ಕೃಷ್ಣನನ್ನು ಕಂಡಿದ್ದೆ ಆ ಹುಡುಗಿ ಮಾತು ನಿಲ್ಲಿಸಿ ತಲೆ ತಗ್ಗಿಸಿ ನಿಂತಳು. ಕೃಷ್ಣ ಹಾಗು ಆ ಹುಡುಗನ ನಡುವೆ ಕೆಲ ನಿಮಿಷ ಏನೋ ಬಿರುಸಾದ ಮಾತು ಕತೆಗಳು ನಡೆದವು. ಬಸ್ಸು ನಿಂತಿದ್ದ ಜಾಗದಿಂದ ಅವರು ದೂರ ಇದ್ದುದ್ದರಿಂದ ಅವರ ಮಾತುಗಳು ಕೇಳುತ್ತಿರಲಿಲ್ಲ. ಸ್ವಲ್ಪ ಹೊತ್ತಿನ ನಂತರ ಇವರ ಮಾತುಕತೆಗಳು ಮುಗಿದವು ಅಂತ ಕಾಣುತ್ತೆ, ಹುಡುಗ ಬೈಕ್ ಏರಿ ಅಲ್ಲಿಂದ ಹೊರಟು ಹೋದ. ಆ ಹುಡುಗಿ ಕೃಷ್ಣನನ್ನು ಹಿಂಬಾಲಿಸಿ ಬಂದು ಮುಂಬಾಗಿಲಿನಿಂದ ಬಸ್ಸು ಹತ್ತಿ ಕುಳಿತಳು. 

ನಾನು ಗಮನಿಸುತ್ತಲ್ಲೇ ಇದ್ದೆ. ಆದರೆ ಈ ಮೂಕ ನಾಟಕದ ಸಾರಾಂಶವೇನೆಂದು ನನಗೆ ಒಂಚೂರು ತಿಳಿಯಲಿಲ್ಲ.

ಆ ಮೂಕ ನಾಟಕಕ್ಕೆ ತೆರೆ ಬಿದ್ದ ನಂತರ ಕೃಷ್ಣ ಹಿಂದೆ ಬಂದು ’’ಸ್ವಲ್ಪ ಜರಿಕೊಳಿ ಸಾರ್’’ ಅಂದವನು ನಾನು ಪಕ್ಕಕ್ಕೆ ಸರಿದು ಜಾಗ ಬಿಡುವುದನ್ನೂ ಕಾಯದೆ ಸೀಟಿನ ಮೇಲೆ ಕುಳಿತುಕೊಂಡ.

ಕುಳಿತವನೆ ಅಪರಾಧಿಯಂತೆ ಮುಖಭಾವ ಮಾಡಿ ನನ್ನ ಕಡೆ ನೋಡಿ ಮತ್ತೊಮ್ಮೆ ತನ್ನ ದಂತ ಪ್ರದರ್ಶನ ನಡೆಸಿದ.

ನಾನು ‘’ಏನಯ್ಯ ಇದು ನಿನ್ನ ಹೊಸ ನಾಟಕ? ಅ ಹುಡ್ಗಿ ಯಾರು? ಎಂದೆ.   

’’ಹೆಹೆಹೆ…ನಮ್ಮೂರುಡ್ಗಿ ಸಾರ್. ನಂಗೆ ಆ ಹುಡ್ಗಿ ಮನೇವ್ರು ಚೆನ್ನಾಗ್ ಗೊತ್ತು.  ಬೇಜಾನ್ ಒಳ್ಳೇವ್ರು. ಈ ಹುಡ್ಗೀನು ಒಳ್ಳೇದೆ ಸಾರ್, ಕಾಲೇಜಲ್ಲಿ ಅದೇನೊ ಒದ್ತದೆ. ಆದ್ರೆ ಅವನ್ಯಾವನ್ನೊ ಲವ್ ಮಾಡ್ಬುಟ್ಟವ್ಳೆ ಸಾರ್. ನೀವ್ ನೋಡುದ್ರಲ್ಲ ಅದೆ ಉಡ್ಗ ಸರ್. ಅವ್ನು ಒಳ್ಳೆವ್ನೆ, ಗೊತ್ತಿರೊ ಉಡ್ಗ, ಅನುಕೂಲಸ್ತರ ಮನೆಯವ್ನು’’. 

’’ಹಾಗಾದ್ರೆ ಇವರಿಬ್ಬರ ಲವ್ ಕೇಸು ಅಂತ ಪ್ರಾಬ್ಲಮ್ ಏನು ಅಲ್ಲ ಬಿಡು’’ ಎಂದೆ ಪೂರ್ತಿ ತಿಳಿದುಕೊಳ್ಳದೆ. 

 ‘ಪ್ರಾಬ್ಲಮ್ ಅಯ್ತೆ ಸಾರ್. ಹುಡ್ಗ ಲೋ ಕ್ಯಾಸ್ಟು. ನಮ್ಮೂರ್ ಬಡ್ಡೆತ್ತೊವ್ ಕಿವಿಗೆ ಇಂತ ವಿಸ್ಯ ಬಿದ್ರೆ ಸಾಕು ತಲ್ಗೊನ್ನೊಂದ್ ಮಾತಾಡ್ತಾರೆ. ಹುಡುಗಿ ಮನೇವ್ರು ಮಾನ ಮರ್ಯಾದೆಗೆ ಅಂಜೊ ಜನ ಸಾರ್. ಈ ವಿಸ್ಯ ಕಿವಿಗ್ ಬಿದ್ರೆ ಸುಮ್ನಿದ್ದಾರ ಸಾರ್? ಎಳ್ಡೂರಲ್ಲೂ ರಾಣ ರಂಪ ಅಗೋಯ್ತದೆ ಅಷ್ಟೆ.  ಅದಕ್ಕೆ ಇಬ್ಬರುಗು ಬೈದು ಆ ಹುಡ್ಗೀನ ಬಸ್ಸು ಹತ್ಸಿ ಕರ್ಕೊಂಡ್ ಬಂದೆ. ತಪ್ಪಾ ಸಾರ್?’’ ಎಂದ.

ನಾನು ‘ಆಲ್ಲಯ್ಯ ಪ್ರೀತಿ ಮಾಡುವವರನ್ನ ಬೇರೆ ಮಾಡಬಾರದು ಅಂತ ಗೊತ್ತಿಲ್ಲವೇನಯ್ಯ ನಿನಗೆ. ಇಷ್ಟ ಪಟ್ಟ ಜೀವಗಳು ಜೊತೆಗಿರೊದೆ ನ್ಯಾಯ. ಈ ಜಾತಿ ಗೀತಿ ಎಲ್ಲಾ ನಮ್ಮ ಸುತ್ತ ನಾವೇ ಕಟ್ಟಿಕೊಂಡಿರುವ ಬೇಲಿ ಇದ್ದ ಹಾಗೆ. ಜಗತ್ತಿನಲ್ಲಿ ಇರೋದು  ಎರಡೇ ಜಾತಿ, ಒಂದ್ ಗಂಡು ಇನ್ನೊಂದ್ ಹೆಣ್ಣು! ತಿಳಿತಾ?’ ಎಂದು ಒಂದು ಸಣ್ಣ ಹರಿಕಥೆಯನ್ನೆ ಮಾಡಿದೆ.

’ನೀವೇಳೋದು ಒಂತರ ಸರಿ ಸಾರ್. ಈಗ ನೀವೇಳ್ದಂಗೆ ಅವರಿಬ್ಬರಿಗೂ ಇವತ್ತು ನಾನು ಸಪೋ‍ರ್ಟ್ ಮಾಡ್ದೆ ಅಂತ ಇಟ್ಕೊಳಿ. ಆಗ ಏನಾಗುತ್ತೆ? ಒಂದಲ್ಲ ಒಂದ್ ದಿನ ಇಬ್ಬರು ಮನೇವ್ರುಗು ವಿಸ್ಯ ತಿಳ್ದೇ ತಿಳಿತದ? ಆಗ ಏನಾಗುತ್ತೆ ಗೊತ್ತ ಸಾರ್? ಎರಡು ಊರು ಹತ್ಕೊಂಡ್ ಉರಿತವೆ ಸಾರ್. ನೋಡು ನೋಡುತ್ತಿದ್ದಂಗೆ ಕೊಲೆಗಳು ಆಗಿ ಓಯ್ತವೆ. ಇವ್ರು ಅವರನ್ನ, ಅವರು ಇವರನ್ನ ಹುರಿದು ಮುಕ್ಕುಬುಡ್ತಾರೆ. ಅಮೇಲೆ ಎರಡು ಊರವರು ಇರೊ ಕೆಲ್ಸ ಬಿಟ್ಟು ಕೋರ್ಟು, ಕಛೇರಿ ಅಂತ  ಅಲಿಬೇಕಾಗುತ್ತೆ. ಇದೆಲ್ಲಾ ಬೇಕಾ ಸಾರ್? ಇಬ್ಬರಿಗೋಸ್ಕರ ಎರಡು ಊರು ಹಾಳು ಮಾಡೋದು ಎಷ್ಟು ನ್ಯಾಯ ಹೇಳಿ? ಅದೆಲ್ಲಾ ಪಿಚ್ಚರೆಲಿ, ದಾರವಾಯಿಲಿ ಮಾತ್ರ ನೋಡಕ್ಕೆ ಚಂದ ಸಾರ್. ನಿಜ ಜೀವನದಲ್ಲೂ ಪಿಚ್ಚರೆಲಿ, ಟಿವಿಲಿ ಮಾಡ್ದಂಗೆ ಮಾಡಕ್ಕೆ ಓದ್ರೆ ಆಗುತ್ತಾ ಸಾರ್?’ 

ಕೃಷ್ಣನ ಮಾತು ಕೇಳಿ ನಾನು ದಂಗುಬಡಿದು ಹೋದೆ.

ಆ ಕ್ಷಣಕ್ಕೆ ನನಗೆ ಹೇಗೆ ಪ್ರತಿಕ್ರಿಯಿಸಬೇಕೊ ತಿಳಿಯಲಿಲ್ಲ. ಕೃಷ್ಣ ಹೇಳಿದ್ದು ನನಗೆ ಸರಿ ಅನ್ನಿಸಿತು. ಹುಡುಗಾಟಿಕೆಯ ಮುಸುಗಿನೊಳಗೆ ತನ್ನ ಊರು, ಸಮಾಜ, ನೆರೆಹೊರೆಯವರ ಬಗ್ಗೆ ಯೋಚಿಸುವ ಮನಸ್ಸಿರುವ ಮನುಷ್ಯನೊಬ್ಬ ಆ ಕ್ಷಣಕ್ಕೆ ನನಗೆ ಕಂಡಿದ್ದ.

ಅವನು ಇನ್ನು ಮುಂದುವರಿಸಿ "ಟಿವಿ ಒಂದ್ ಬಂದು ನಮ್ ಹಳ್ಳಿ ಜನ ಎಲ್ಲ ಹಾಳಾಗ್ ಒಯ್ತಾವ್ರೆ ಸಾರ್. ಪಿಚ್ಚರೆಲಿ, ದಾರಾವಾಯಿಲಿ ಮಾಡ್ದಂಗೆ ಮಾಡಕ್ಕೋಯ್ತವೆ. ಆದ್ರೆ ಟಿವಿಲಿ ಬರೋದೆಲ್ಲಾ ನಿಜ ಅಲ್ಲ ಅಂತ ಅವರಿಗೆ ಗೊತ್ತಾಗೊದೇ ಇಲ್ಲ ಅಲ್ವ ಸಾರ್? ಟಿವಿಲಿ ನಡೆಯೋದು ಸುಳ್ಳು ಲವ್ವು, ಸುಳ್ಳು ಮದ್ವೆ. ಆದ್ರೆ ಅದೆಲ್ಲಾ ನೋಡಿ ನಮ್ ಜನ ರಿಯಲ್ ಲೈಪಲ್ಲು ಅಂಗಂಗೆ ಮಾಡಕ್ಕೊಯ್ತರೆ”.

ನಮ್ಮ ಪಕ್ಕದಲ್ಲಿ ಕುಳಿತಿದ್ದ ಗೌಡರು ಕೃಷ್ಣನ ಮಾತಿಗೆ ಸಹಮತ ವ್ಯಕ್ತಪಡಿಸುತ್ತಾ

 “ಈಗ ಬರೊ ಪಿಚ್ಚರ್, ದಾರಾವಾಯಿಗೊಳು ಅಂಗೆ ಅವೆ ಬುಡು. ಯಾವ್ ಚಾನಲ್ ಅಕುದ್ರು ಅವ್ನು ಇವ್ನ್ ಜೊತೆ ಓಡೋದ, ಇವ್ಳು ಇನ್ನೊಬ್ಬನೊಂದಿಗೆ ಮನಿಕೊಂಡ್ಳು…. ಅವ್ಳು ಇನ್ನೊಬ್ಬನಿಗೆ ಬಸ್ರಾದ್ಲು, ಅತ್ತೆ ಸೊಸೇರ ಕಿತ್ತಾಟ, ಕೊಲೆ, ಸುಲಿಗೆ…ಥುಃ!!! ಬರಿ ಇಂತೆವೆ. ಇಂಗಾದ್ರೆ ನಮ್ ಮಕ್ಳು ಮರಿ ಹಾಳಾಗ್ದೆ ಇನ್ನೇನಾದವು?” ಎಂದು ಕೃಷ್ಣನ ಮಾತಿಗೆ ಪೂರಕವಾಗಿ ತಮ್ಮ ಧ್ವನಿಗೂಡಿಸಿದರು.

ನನ್ನಿಂದ ಬೇರೆ ಮಾತುಗಳೇ ಹೊರಡಲಿಲ್ಲ. ತಲೆ ತಗ್ಗಿಸುತ್ತಾ ಅವರ ಮಾತು ಕೇಳಿಸಿಕೊಂಡೆ.

ಅವರಿಬ್ಬರ ಪ್ರಶ್ನೆಗಳು ಇಡೀ ಸಿನಿಮಾ ಹಾಗು ಟಿವಿ ಉದ್ಯಮದ ನೈತಿಕತೆಯನ್ನು ಕುರಿತು ಕೇಳಿದ ಪ್ರಶ್ನೆಗಳಂತೆ ಭಾಸವಗತೊಡಗಿದ್ದವು.  

ಆ ಕ್ಷಣಕ್ಕೆ ನನಗೆ ಪ್ರಸ್ತುತ ಕಿರುತೆರೆ ಕ್ಷೇತ್ರದಲ್ಲಿ ಟಿ ಅರ್ ಪಿ ಸಮರಕ್ಕೆ ಬಿದ್ದು ನಾವು ಸಮಾಜಕ್ಕೆ ನೀಡುತ್ತಿರುವ ಧಾರಾವಾಹಿಗಳ ವಸ್ತು, ವಿಷಯಗಳೆಲ್ಲಾ ಮನಸ್ಸಿನಲ್ಲಿ ಹಾಯ್ದು ಹೋದವು.

“ಯಾರ್ರಿ ಸಂಗಮ ಕ್ರಾಸು?” ಕೃಷ್ಣನ ಕೂಗು ಮತ್ತೆ ನನ್ನನ್ನು ಎಚ್ಚರಿಸಿತ್ತು. “ಸಾರ್ ಇದೆ ಸರ್ ಸಂಗಮ ಕ್ರಾಸು. ಇಳ್ಕೊಳಿ ಸಾರ್” ಅಂದ. ನಮ್ಮ ಮ್ಯಾನೇಜರು ಬಸ್ ಚಾರ್ಜ್ ಹಣ ಕೊಡಲು ಹೋದಾಗ

“ಹೇ ದುಡ್ಡು ಬೇಡ ಸಾರ್” ಎಂದ. ಬಲವಂತಪಡಿಸಲು ಹೋದಾಗ “ನೀವು ನಮ್ಮ ಗೆಸ್ಟ್ ಇದ್ದಂಗೆ ಸಾರ್ ದುಡ್ಡು ಬೇಡ”, ಎಂದ. ಆದರು ಬಲವಂತದಿಂದ ೧೦೦ ರೂಪಾಯಿಯನ್ನು ಅವನ ಜೇಬಿಗೆ ತುರುಕಿ ನಾನು ನಮ್ಮ ಮ್ಯಾನೇಜರು ಬಸ್ಸು ಇಳಿದೆವು.

ನಮ್ಮ ಮ್ಯಾನೇಜರ್ ಫೊನ್ ಬಂತೆಂದು ಹೇಳಿ ಮಾತನಾಡಲು ಬಸ್ಸಿನಿಂದ ಸ್ವಲ್ಪ ದೂರ ಹೋದರು. ಕೃಷ್ಣ ’”ಏನಾರ ತಪ್ಪ್ ಮಾತಾಡಿದ್ರೆ ಕ್ಷಮಿಸಿ ಸಾರ್. ನನ್ನನ್ನ ಮರಿಬೇಡಿ ಸಾರ್” ಎಂದ. ಅಷ್ಟರಲ್ಲಿ ಬಸ್ಸು ಹೊರಟಿತು. ನಾನು ಧೂಳೆಬ್ಬಿಸುತ್ತಾ ಹೊರಟ ಬಸ್ಸನ್ನೇ ನೋಡುತ್ತ ಒಂದರೆ ಕ್ಷಣ ಹಾಗೆ ನಿಂತಿದ್ದೆ.

ಕಡೆಯಲ್ಲಿ ಕೃಷ್ಣ ಏನೋ ನೆನಪಾದವನಂತೆ "ಸಾರ್ ಒಳ್ಳೆ ಸೀರಿಯಲ್ಲು…….." ಎಂದು ಎನನ್ನೋ ಹೇಳಲು ಯತ್ನಿಸಿದ. ಆದರೆ ಬಸ್ಸಿನ ಆ ಕರ್ಕಶ ಸದ್ದಿನಲ್ಲಿ ಮುಂದಿನ ಅವನ ಮಾತುಗಳೆಲ್ಲಾ ವಿಲೀನವಾಗಿ ಹೋಗಿ ಸರಿಯಾಗಿ ಕೇಳಲಿಲ್ಲ. ಬಸ್ಸು ದೂರ ದೂರ ಸಾಗಿ ಕಣ್ಮರೆಯಾಯಿತು.

 ಹಿಂತಿರುಗಿ ನೋಡಿದರೆ ಮ್ಯಾನೇಜರ್ ನನ್ನ ಕಡೆ ಓಡಿ ಬರುತ್ತಿದ್ದರು. ಅವರು ಆತಂಕಗೊಂಡವರಂತೆ ಕಾಣುತ್ತಿದ್ದರು.

’”ಎನ್ರಿ ವಿಷ್ಯ? ಏನಾಯ್ತು? ಯಾಕೆ ಗಾಬರಿಯಾಗಿದ್ದೀರ?’” ಎಂದೆ.

“ಸಾರ್ ಇಮ್ಮಿಡಿಯಟ್ಟಾಗಿ ಬೆಂಗಳೂರಿಗೆ ವಾಪಸ್ ಹೋಗ್ಬೇಕು ಸಾರ್” ಎಂದರು.

’ನಾನು ”ಯಾಕೆ”’ ಎಂದು ಕೇಳುವ ಮೊದಲೇ “ನಮ್ ಸೀರಿಯಲ್ ಹೀರೋಯಿನ್ನು ಪೋಲಿಸ್ ರೈಡ್ ನಲ್ಲಿ ಯಾರೊ ಮಿನಿಸ್ಟ್ರು ಜೊತೆ ಸ್ಟಾರ್ ಹೊಟೆಲ್ನಲ್ಲಿ ಸಿಕಾಕೊಂಡಿದಾಳಂತೆ. ಟಿವಿಲಿ ಬ್ರೇಕಿಂಗ್ ನ್ಯೂಸ್ ಬರ್ತಾ ಇದ್ಯಂತೆ. ಪ್ರೊಡುಝರ್ ಫೋನ್ ಮಾಡಿದ್ರು” ಎನ್ನುತ್ತಾ ಏದುಸಿರು ಬಿಡುತ್ತಿದ್ದರು.

ಯಾಕೊ ಅರ್ದಂಬರ್ದ ಕೇಳಿಸಿದ್ದ ಕೃಷ್ಣನ ಕಡೆಯ ಮಾತು "ಸಾರ್ ಒಳ್ಳೆ ಸೀರಿಯಲ್ಲು…….." ಪೂರ್ತಿಯಾಗಿ ಕೇಳಿಸಿ ಕಿವಿಯೊಳಗೆ, ಮನಸ್ಸಿನೊಳಗೆ ಪ್ರತಿಧ್ವನಿಸಿತು.

*****

-ಪರಮೇಶ್ವರ್ .ಕೆ. 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

8 Comments
Oldest
Newest Most Voted
Inline Feedbacks
View all comments
sharada moleyar
sharada moleyar
11 years ago

kathe chennagide………………..

Utham
11 years ago

Chenagidhe nimma lekana
Yla cinima daravahigallu ketavagiruvudila
Adare halliya mugda janarige arthavaguvudila
Artha madisuva oleya kelasa agabekaste shubhavagali

parthasarathy N
parthasarathy N
11 years ago

ಹೌದು ಅದೊಂದು ಲೋಕ 

Prasad V Murthy
11 years ago

ಇಂದಿನ ದೃಶ್ಯ ಮಾಧ್ಯಮಕ್ಕೆ ಅಂಟಿಕೊಂಡಂತೆ ಬಿಡಿಸಿಕೊಂಡ ಕಥೆ, ತನ್ನ ಹರಳು ಹುರಿದಂಥಾ ಸಂಭಾಷಣೆಗಳ ಮೂಲಕ ದೃಶ್ಯ ಮಾಧ್ಯಮದ  ನೈತಿಕತೆಯನ್ನೇ ಒರೆಗೆ ಹಚ್ಚುವ ಕಾರ್ಯ ಮಾಡುತ್ತದೆ. ಹಿಡಿಸಿತು ಕಥೆ.
– ಪ್ರಸಾದ್.ಡಿ.ವಿ.

sarvesh kumar M.V
sarvesh kumar M.V
11 years ago

ಹಳ್ಳಿ ಮತ್ತು ಪಟ್ಟಣ ಸೊಗಡಿನ ಸಂಭಾಷಣೆಯಲ್ಲಿ  ಇಂದಿನ ದೃಶ್ಯ ಮಾಧ್ಯಮದ ನೈತಿಕತೆಯನ್ನು ಅಣುಕಿಸುವ ನಿಮ್ಮ ಕಥೆ ಹಾಸ್ಯದೊಂದಿಗೆ ಅರ್ಥಪೂರ್ಣವಾಗಿದೆ. ಧನ್ಯವಾದಗಳು.

Santhoshkumar LM
Santhoshkumar LM
11 years ago

ಮಗಾ ಸೂಪರ್,
ನಿಜವಾಗಲೂ ನಮ್ಮೂರ ಕಡೆಯ ಪ್ರೈವೇಟ್ ಬಸ್ಸು ಹತ್ತದೆ ಈ ರೀತಿಯ ಅನುಭವಗಳು ಆಗಲಿಕ್ಕೆ ಸಾಧ್ಯವೇ ಇಲ್ಲ.
ಈಗಲೂ ಊರಿಗೆ ಹೋಗುವಾಗ ಒಬ್ಬನೇ ಹೋಗುವ ಪ್ರಸಂಗ ಬಂದರೆ ಪ್ರೈವೇಟ್ ಬಸ್ಸಿನಲ್ಲೇ ಪ್ರಯಾಣಿಸುತ್ತೇನೆ.
ಯಾಕಂದರೆ ಅಲ್ಲಿರುವ ವಾತಾವರಣ ಮತ್ತು ಬದುಕೇ ಬೇರೆ.

ಕೃಷ್ಣ ಎನ್ನುವ ಅಮಾಯಕ ಬಸ್ಸು ಕಂಡಕ್ಟರ್ ನ ಪಾತ್ರದಿಂದ "ಒಳ್ಳೆಯ ಸೀರಿಯಲ್" ಎನ್ನುವ ಸಮಾಜಮುಖಿ ಸಂದೇಶವನ್ನು ಹೇಳಿಸುವ ಕಾರ್ಯವನ್ನು ಅತ್ಯಂತ ಯಶಸ್ವೀ ರೀತಿಯಲ್ಲಿ ನಿಭಾಯಿಸಿದ್ದೀರ.
ಬಸ್ಸಿನ ಪ್ರಯಾಣ ಎಲ್ಲೂ ಬೋರ್ ಹೊಡೆಸುವುದಿಲ್ಲ. ನಿರೂಪಣೆಯ ಮೇಲೆ ಒಳ್ಳೆಯ ಹಿಡಿತ!! ಅಲ್ಲಿ ಹುಟ್ಟುವ ಹಾಸ್ಯಕ್ಕೆ ಬಿದ್ದು ಬಿದ್ದು ನಕ್ಕೆ.

ಬರೀತಾ ಇರಿ:)

ದಿವ್ಯ ಆಂಜನಪ್ಪ

ಕತೆ ಚೆನ್ನಾಗಿದೆ ಸರ್. ಧನ್ಯವಾದಗಳು.

ಸುಮತಿ ದೀಪ ಹೆಗ್ಡೆ

ತುಂಬಾ ಇಷ್ಟ ಆಯ್ತು ಪರಮೇಶ್ವರ್.  'ನನ್ನ ಪಕ್ಕ ಕುಳಿತಿದ್ದ ಗೌಡರು ಹಾಗು ನಮ್ಮ ಮ್ಯಾನೇಜರ್ ಸ್ಫರ್ಧೆಗೆ ಬಿದ್ದವರಂತೆ ತೂಕಡಿಸುತ್ತಾ ಆಗಾಗ ಅಕ್ಕ ಪಕ್ಕದವರ ಮೇಲೆ ಬಿದ್ದು ಕಿರಿಕಿರಿಯುಂಟು ಮಾಡುತ್ತಿದ್ದರು'. ಹಾಸ್ಯದ ಈ ತರದ ಸಾಲುಗಳು ಓದಿ ನಕ್ಕು ನಕ್ಕು ಸಾಕಾಯ್ತು. keep writing… 🙂

8
0
Would love your thoughts, please comment.x
()
x