"ಉತ್ತರೇ ಯತ್ಸಮುದ್ರಸ್ಯ, ಹಿಮಾದ್ರೇಶ್ಚೈವ ದಕ್ಷಿಣಾತ್.
ವರ್ಷೇ ತದ್ಭಾರತಂ ನಾಮ, ಭಾರತೀಯತ್ರ ಸಂತತಿ:"
ಅಂತೊಂದು ಶ್ಲೋಕ ಇತ್ತು ಹೈಸ್ಕೂಲಲ್ಲಿ. ಹುಟ್ಟುತ್ತಿರೋ ಸೂರ್ಯ ನಿಮ್ಮ ಎಡಭಾಗದಲ್ಲಿರುವಂತೆ ನೀವು ಈ ದೇಶದ ಯಾವುದೋ ಭಾಗದಲ್ಲಿ ನಿಂತಿದ್ದೀರ ಎಂದು ಕಲ್ಪಿಸಿಕೊಂಡರೆ ಈ ಶ್ಲೋಕವನ್ನು ಅರ್ಥ ಮಾಡಿಕೊಳ್ಳೋದು ಸುಲಭ. ಯಾವ ದೇಶದ ಉತ್ತರದಲ್ಲಿ(ಕೆಳಭಾಗ) ಕಣ್ಣು ಹಾಯಿಸಿದಷ್ಟೂ ಮುಗಿಯದ ಸಮುದ್ರವಿದೆಯೋ , ದಕ್ಷಿಣದಲ್ಲಿ ಹಿಮಾಲಯದಂತಹ ವಿಶ್ವದ ಅತಿ ಎತ್ತರದ ಪರ್ವತಶ್ರೇಣಿಯಿದೆಯೋ, ಎಲ್ಲಿ ಭಾರತೀಯರೆಂಬ ಸಂತತಿಯಿದೆಯೋ ಆ ದಿವ್ಯ ಭಾರತ ನನ್ನದು ಅಂತ.. ಕೇಳುತ್ತಾ ಇದ್ರೆ ಎಷ್ಟು ಖುಷಿಯಾಗುತ್ತಲ್ಲ… ಉತ್ತರದ ಕಾಶ್ಮೀರದಲ್ಲಿ, ಪಶ್ಚಿಮದ ಗುಜರಾತಿನಲ್ಲಿ, ಪಂಜಾಬಿನಲ್ಲಿ, ನಾಗಾ ಗಡಿಯಲ್ಲಿ, ಕಡಲ ಕಿನಾರೆಗಳಲ್ಲೂ ಸಹ ನಮ್ಮ ರಕ್ಷಕರು ಅಹರ್ನಿಶಿ ಪಹರೆ ಹಾಕುತ್ತಿರೋದ್ರಿಂದ ಸುತ್ತೆಲ್ಲಾ ಪಾಕು,ಬಾಂಗ್ಲಾಗಳ ಉಗ್ರರು, ಚೀನಾ ಸೇನೆ,ನೇಪಾಳದ ಮಾವೋಗಳಂತ ತರಹೇವಾರಿ ತರಲೆಗಳಿದ್ದರೂ ನಮಗೆ ದಿನಾ ನೆಮ್ಮದಿಯ ನಿದ್ದೆ. ಆದ್ರೆ ಇತ್ತೀಚೆಗೆ ಈ ನಿದ್ರೆಯ ಮೇಲೆ ಪ್ರಕೃತಿಗೂ ಹೊಟ್ಟೆಕಿಚ್ಚಾದಂತಿದೆ. ನಮ್ಮ ಹೆಮ್ಮೆಯ ಭವ್ಯ ಭಾರತಕ್ಕ್ಯಾಕೋ ತೊಂದರೆಗಳ ಮೇಲೆ ತೊಂದರೆ. ಬಾಧೆಗಳ ಭಾರ ಇಳಿಯುವಂತೆಯೇ ಕಾಣುತ್ತಿಲ್ಲ. ಪೈಲಿನ್ ಮಾರುತದಿಂದ ಲಕ್ಷಾಂತರ ಮಂದಿ ಸಾವಿಗೀಡಾಗೋ ಭಯವೇರ್ಪಟ್ಟು ಅವರನ್ನೆಲ್ಲಾ ಸ್ಥಳಾಂತರಿಸಿದ್ದಾಯ್ತು. ಮುಂಜಾಗೃತಾ ಕ್ರಮಗಳಿಂದ ಸಾವಿನ ಸಂಖ್ಯೆ ಇಳಿಯಿತಾದರೂ ನೋವೆಂತೂ ಕಮ್ಮಿಯಾಗಲಿಲ್ಲ. ಅಸ್ಥವ್ಯಸ್ತವಾಗಿರೋ ವಿದ್ಯುತ್ತು, ಸಂಪರ್ಕವ್ಯವಸ್ಥೆಗಳನ್ನು ಸರಿಮಾಡಲು ಇನ್ನೆಷ್ಟು ಕಾಲ ಬೇಕೋ ? ಮುಂದಿನ ವರ್ಷ ಚುನಾವಣೆ ಎಂದು ನೆನಪಾದ ನಾಯಕರಿಗೆಲ್ಲಾ ಇದ್ದಕ್ಕಿದ್ದಂತೆ ಬೆಳಗಾಗಿ ಬಿಟ್ಟಿದೆ. ಪ್ರಚಾರದ ಮೇಲೆ ಪ್ರಚಾರ. ನಾಡೆಲ್ಲಾ ಸರ್ಫ ಎಕ್ಸೆಲ್ ಹಾಕಿ ತೊಳೆದು ಶುಭ್ರ ಮಾಡುತ್ತೇವೆನ್ನೋದೊಂದು ಬಾಕಿ ! ರಾಗಾ ನಮೋರಲ್ಲಿ ಯಾರು ಹಿತವರೆಂಬ ಈ ರಾಗದಲ್ಲೇ ಗಡಿಯಲ್ಲಿ ಸಾಯುತ್ತಿರೋ ಸೈನಿಕರು ಮರೆತು ಹೋಗುತ್ತಿದ್ದಾರೆ. ಎಷ್ಟೆಂದರೂ ಕನ್ನಡ ನಾಡಿನಲ್ಲಿರೋ ನಮಗೆ ಸುತ್ತ ಬಂದು ಗುಂಡಿಕ್ಕೋಕೆ ಯಾವ ಗಡಿಯೂ ಇಲ್ಲ, ಉಕ್ಕೋಕೆ ಸಮುದ್ರವೂ ಇಲ್ಲ. ಆರಾಮಾದ ಜೀವನದ ತಾಣವಲ್ಲವೇ ನಮ್ಮದು ? ಹೊಟ್ಟೆ ತುಂಬಿದ ಜನಕ್ಕೆ ಇಲ್ಲಿರೋರಲ್ಲೇ ಆ ಭಾಷೆ ಈ ಭಾಷೆ ಅಂತ ಕಚ್ಚಾಡೋದು, ಜಾತಿ, ಮತ, ಉತ್ಸವಗಳ ಜಗಳಗಳಲ್ಲಿ ಮೇಲುಗೈ ಸಾಧಿಸೋದು ಹೇಗೆಂಬುದೇ ಅತಿ ದೊಡ್ಡ ತಲೆನೋವು !! ಕೆಲ ಕ್ಷಣವಾದರೂ ಗಡಿಯಲ್ಲಿ ತಮ್ಮ ನಿನ್ನೆ, ಇಂದುಗಳ ಬಲಿಕೊಟ್ಟು ನಮ್ಮ ಭದ್ರ ನಾಳೆಗಳಿಗೆ ಕಾರಣವಾಗುತ್ತಿರೋ ರಕ್ಷಕರ ಬಗ್ಗೆ ಆಲೋಚಿಸೋಣವೇ ?
"ನೆನ್ನೆ ಗಡಿಯಲ್ಲಿ ನುಸುಳಲು ಪ್ರಯತ್ನಿಸುತ್ತಿದ್ದ ೪ ನುಸುಳುಕೋರರ ಹತ್ಯೆ" ಅಂತ ಗೆಳೆಯ ಓದುತ್ತಾ ಇದ್ದ.ನಮ್ಮ ಭಾರತದ ಎಷ್ಟು ಭದ್ರತಾ ಸಿಬ್ಬಂದಿಗೆ ಗಾಯವಾಯ್ತಪ್ಪಾ ಅಂದೆ. ಓ ಅದ್ರ ಬಗ್ಗೆ ಇಲ್ಲಿ ಕೊಟ್ಟಿಲ್ಲ ಕಣೋ .ಎಲ್ಲೋ ಮೂಲೆಯಲ್ಲಿ ಹಾಕಿರ್ಬೇಕು. ಹುಡುಕ್ತೀನಿ ತಡಿ ಅಂದ. ಯಾವುದೋ ಪ್ರಚಾರದ ಸುದ್ದಿ, ಇನ್ಯಾರಿಗೋ ಅನ್ಯಾಯವಾದ ಸುದ್ದಿ ನೊಂದವರಿಗೆ ಮತ್ತಷ್ಟು ಅವಮಾನ ಮಾಡುವಂತೆ ಮುಖಪುಟದಲ್ಲಿ ಹಾಕೋ ಪತ್ರಿಕೆಗಳಲ್ಲಿ ಇಂತ ಸುದ್ದಿಗಳು ಎಲ್ಲೋ ಮೂಲೆಯಲ್ಲಿ ಬಿದ್ದಿರುತ್ತೆ. ಇದಕ್ಕೆ ಬರೆಯೋರೋ ಅಥವಾ ಯಾರಿಗೇನಾದ್ರೆ ನಮಗೇನೆನ್ನೋ ಓದುಗರ ದಿವ್ಯ ನಿರ್ಲಕ್ಷ್ಯ ಕಾರಣವೋ ಅಥವಾ ಎರಡೂ ಕಾರಣವೋ ಅನ್ನೋ ಪ್ರಶ್ನೆ ಹಲವು ಸಲ ಮೂಡ್ತಾ ಇರುತ್ತೆ. ಮತ್ತೆ ವಿಷಯಕ್ಕೆ ಬರೋದಾದ್ರೆ ಈ ವರ್ಷ ಪ್ರತಿವರ್ಷಗಳಿಗಿಂತಲೂ ಹೆಚ್ಚು ಸಲ ಆ ಪಾಪಿ ಪಾಕಿಗಳು ಗಡಿಯಾಚೆಯಿಂದ ಗುಂಡು ಹಾರಿಸಾಗಿದೆಯಂತೆ. ಇನ್ನು ಈ ನುಸುಳುಕೋರರ ಕಾಟ ಬೇರೆ. ಯುದ್ದವಿಲ್ಲ ಏನೂ ಇಲ್ಲ. ಸುಮ್ಮಸುಮ್ಮನೇ ಗುಂಡು ಹಾರಿಸೋದು ಬಿಟ್ಟು ಆ ಕಡೆಯವರಿಗೆ ಬೇರೆ ಕೆಲಸವೇ ಇಲ್ಲವಾ ಅಂತ ಎಷ್ಟೋ ಸಲ ಅನಿಸಿದ್ದಿದೆ. ಬಲೂಚಿಸ್ಥಾನದಲ್ಲಿ ಹಾಗೆ ಮಾಡಿದ್ದೀರಿ. ಇನ್ನೆಲ್ಲೋ ಹೀಗೆ ಮಾಡಿದ್ದೀರೆಂಬ ಆಧಾರವಿಲ್ಲದ ಮಾತುಗಳ ಬಿಟ್ರೆ ಪಾಕಿಗಳತ್ರ ಸದ್ಯಕ್ಕೆಂತೂ ಯಾವ ಸಬೂತೂ ಇದ್ದಂತಿಲ್ಲ. ಕಾರಣವಿಲ್ಲದೇ ಕಾಲು ಕೆರೆದು ಜಗಳಕ್ಕೆ ಬರೋ ಜನ ಇನ್ನು ಆಧಾರವಿದ್ದಿದ್ರೆ ಇಷ್ಟು ದಿನ ಸುಮ್ನೆ ಕೂತಿರ್ತಿದ್ರಾ ? !! ಒಟ್ಟು ವಿಶ್ವಮಟ್ಟದಲ್ಲಿ ಭಾರತ ಪಾಕಿನ ಜೊತೆ ಶಾಂತಿ ಸಂಧಾನಕ್ಕೆ ಕೂತಾಗೆಲ್ಲಾ ಏನೂ ಒಪ್ಪಿಕೊಳ್ಳದೇ ನುಣುಚಿಕೊಳ್ಳೋಕೆ ಪಾಕಿಗೆ ಒಂದು ಅಸ್ತ್ರ ಅಷ್ಟೆ ಇದು. ಪಾಕವ್ರ ಕಥೆ ದೂರದ್ದಾಯ್ತು. ಮೊನ್ನೆಯ ನುಸುಳುಕೋರರ ಹತ್ಯೆ ಬಗ್ಗೆ ಇಲ್ಲೇ ಹುಟ್ಟಿಬೆಳೆದ ಕೆಲ ಬುದ್ದಿಜೀವಿಗಳ ಹೇಳಿಕೆಗಳನ್ನ ನೋಡಿ ದಂಗಾದೆ ಒಮ್ಮೆ. ಒಬ್ಬ ಬರೀತಾನೆ. ಗಡೀಲಿ ಈಗಿನ ಅಶಾಂತಿಗೆ ಭಾರತವೂ ಸಮಭಾಗಿ. ಗಡಿಯಲ್ಲಿ ಸಿಕ್ಕ ಸ್ಥಳೀಯರನ್ನೆಲ್ಲಾ ಕೊಂದು ನುಸುಳುಕೋರರು ಅನ್ನೋ ಹೆಸರು ಕೊಡುತ್ತಿದ್ದಾರೆ. ಅದಕ್ಕೇ ರೊಚ್ಚಿಗೆದ್ದ ಜನ, ಅವರ ನೆರವಿಗೆ ನಿಂತ ಪಾಕಿಗಳು ಗುಂಡುಹಾರಿಸುತ್ತಿದ್ದಾರೆ ಅಂತ! ಮತ್ತೊಬ್ಬನ ಪ್ರಕಾರ ಗಡೀಲಿರೋ ಸೈನಿಕರ ಕೈಯಲ್ಲಿರೋ ಶಸ್ತ್ರಾಸ್ತ್ರ ಕಸಿದು ಗುಲಾಬಿ ಹೂ ಕೊಟ್ಟು ಬಿಡ್ಬೇಕಂತೆ !!! ಆ ಕಡೆಯಿಂದ ಬರ್ತೀರೋರೆಲ್ಲಾ ಶಾಂತಿದೂತರು. ಅವರನ್ನ ತಡೆಯೋಕೆ ಸೈನಿಕರ್ಯಾರು ಅನ್ನೋ ಮನೋಭಾವ !!! ಇದು ಕೆಲ ಸ್ಯಾಂಪಲ್ಗಳಷ್ಟೇ. ಇಂತ ದೊಡ್ಡ ದೊಡ್ಡ ಹೇಳಿಕೆ ಕೊಡೋ ಮಹಾನುಭಾವರು ಎಷ್ಟೋ.
ದಾಲ್ ಲೇಖ್ ನೋಡ್ಬೇಕು, ಪಾಕ್ ಸೇಬುಗಳ ತೋಟ ನೋಡ್ಬೇಕು, ಗಿರಿಶಿಖರಗಳ ನೋಡ್ಬೇಕು ಅಂತ ವಿಶ್ವದೆಲ್ಲೆಡೆಯಿಂದ ಜನ ಕಾಶ್ಮೀರಕ್ಕೆ ಬರ್ತಾ ಇದ್ರು. ಆದ್ರೆ ಈಗ ಈ ಗಡಿ ತಂಟೆಗಳಿಂದ ಬೇಜಾರಾದ ಕಾಶ್ಮೀರ ನಿವಾಸಿಗಳೇ ಮನೆಮಠ ಬಿಟ್ಟು ಬೇರೆಡೆ ಹೋಗೋ ಮಾತಾಡುತ್ತಿದ್ದಾರೆ. ಮೊನ್ನೆ ಓದ್ತಾ ಇದ್ದೆ. "ಈ ಪಾಕ್ ಕಡೆಯಿಂದ ಹಾರಿ ಬರೋ ಗುಂಡುಗಳಿಂದ ನಮ್ಮ ಜಾನುವಾರುಗಳು ಸಾಯ್ತಾ ಇದೆ. ಮನೆಗಳೆಲ್ಲಾ ಹಾಳಾಗ್ತಾ ಇದೆ.. ಅದಕ್ಕೆ ನಾವು ಊರು ಬಿಡೋ ಯೋಚನೆಯಲ್ಲಿದ್ದೇವೆ.." ಅನ್ನೋ ಕಾಶ್ಮೀರನಿವಾಸಿಗಳ ಹೇಳಿಕೆ ನೋಡಿ ಬೇಜಾರಾಯ್ತು. ಎಲ್ಲೋ ಮನೆಗೆ, ಕಾರಿಗೆ ಕಲ್ಲು ಬಿದ್ದರೇನೆ ಜೀವ ಹಾರಿದಂತೆ ಆಗುತ್ತದೆ ಅಲ್ವಾ ? ಯಾರೋ ಪಕ್ಕದ ಮನೆಯವರು ಮಧ್ಯರಾತ್ರಿಯವರೆಗೆ ಟೀವಿ ಜೋರಾಗಿ ಹಾಕಿದ್ರೇನೆ ಸಿಡುಕ್ತಾ ಇರ್ತೀವಲ್ವಾ. ಅಂತಾದ್ರಲ್ಲಿ ದಿನಾ ಗುಂಡಿನ ಮಳೆಯ ಮಧ್ಯೆ ಮಲಗಿರೋ ಆ ಜನರ ಪರಿಸ್ಥಿತಿಯ ಬಗ್ಗೆಯೂ ಯೋಚಿಸಿ. ಅವರಿಗಿಂತಲೂ ಸ್ವಲ್ಪ ಮುಂದೆ ನಿಂತು ಈ ಗುಂಡಿನ ಮಳೆ ಮಧ್ಯ ಗಡಿಯೊಳಗೆ ನುಸುಳೋಕೆ ಪ್ರಯತ್ನಿಸ್ತಾ ಇರೋ ಭಯೋತ್ಪಾದಕರನ್ನು ತಡೀಬೇಕಾದ ಆದ್ರೆ ಗಡಿಯ ಆಚೆ ನುಗ್ಗಿ ಅವರಿಗೆ ಕುಮ್ಮಕ್ಕು ಕೊಡ್ತಿರೋ ಜನರನ್ನ ಒಂದೇ ಸಲ ಸದೆಬಡಿಯಲಾಗದ ಅನಿವಾರ್ಯತೆಯಲ್ಲಿರೋ ನಮ್ಮ ಸೈನಿಕರ ಸ್ಥಿತಿ ಯೋಚಿಸಿ. ಅವರಿಗೂ ಮನೆ, ಮಕ್ಕಳು ಮರಿ ಇರ್ತಾರೆ ಸ್ವಾಮಿ. ಇಂತಾ ಪರಿಸ್ಥಿತಿಯಲ್ಲಿ ಊಟ, ನಿದ್ರೆಗಳೂ ಇಲ್ಲದ ಎಷ್ಟು ದಿನ ರಾತ್ರಿಗಳನ್ನು ಕಳೆದರೂ ಅವರು ಕ್ಯಾಮರಾ ಮುಂದೆಯೋ, ಪೇಪರುಗಳ ಮುಂದೆಯೋ ಬಂದು ಅಲವತ್ತುಕೊಳ್ಳೋದಿಲ್ಲ. ತಮ್ಮ ಕೆಲಸ ತಾವು ಮಾಡುತ್ತಿದ್ದೇವೆಂಬ , ಭವ್ಯ ದೇಶಕ್ಕೆ ತಮ್ಮ ಕೈಯಲ್ಲಾದ ಕಿರುಗಾಣಿಕೆ ಸಲ್ಲಿಸುತ್ತಿದ್ದೇವೆಂಬ ನಿಗರ್ವಿ ಬದುಕು ಅವರದ್ದು. ಆದರೆ ನಾವು ? ಇಲ್ಲಿ ಎಲ್ಲಾ ಸೌಲಭ್ಯಗಳೂ ಹೆಚ್ಚಾಗಿ ಜೀರ್ಣವಾಗದೇ ಅವರ ಮೇಲೇ ಇಲ್ಲ ಸಲ್ಲದ ಗೂಬೆ ಕೂರಿಸುತ್ತಾ ಕೂರುತ್ತೇವೆ !!.
ಕೆಲವೊಮ್ಮೆ ನನಗೆ ಪಾಪಿ ಪಾಕಿಗಿಂತಲೂ ಇಲ್ಲಿ ಕೂತು ಅದರ ಬಗ್ಗೆ ಮಹಾನ್ ವಿಚಾರಗಳನ್ನ ಮಂಡಿಸೋ, ಗಡಿಯ ರಕ್ತಮೇಧಗಳನ್ನು ಸಮರ್ಥಿಸೋ ಬುದ್ದಿಜೀವಗಳ ಬಗ್ಗೆ ಹೆಚ್ಚು ಸಿಟ್ಟು ಬರುತ್ತದೆ. ಇನ್ನು ನಮ್ಮ ಸರ್ಕಾರ. ಶಾಂತಿ ಶಾಂತಿ ಶಾಂತಿ. ಗಡಿಯಲ್ಲಿ ಹುಲ್ಲೂ ಹುಟ್ಟೋಲ್ಲ. ಚೀನಾದವರು ದಾಳಿ ಮಾಡಿ ತಗೊಂಡರೆ ತಗೊಳ್ಳಲಿ ಬಿಡಿ ಅಂದಿದ್ದರಂತೆ ಒಬ್ಬ ಮಹಾನ್ ಪ್ರಧಾನಿ. ನಿಮ್ಮ ತಲೆಯಲ್ಲಿ ಒಂದು ಕೂದಲೂ ಹುಟ್ಟೊಲ್ಲ. ಅದನ್ನೂ ಕಿತ್ತು ಕೊಟ್ಟುಬಿಡಿ ಚೈನಾಕ್ಕೆ ಅಂದಿದ್ದರಂತೆ ವಿರೋಧ ಪಕ್ಷದ ನಾಯಕರು. ಯಾರು, ಯಾವ ಪಕ್ಷ, ಅವರ ನಿಲುವುಗಳು ಅನ್ನೋ ವಾದಏನೇ ಇರ್ಲಿ. ದೇಶದ ಭದ್ರತೆ, ಅಖಂಡತೆ, ರಕ್ಷಣೆಗಳ ಬಗ್ಗೆಯ ಈ ರೀತಿಯ ನಿರ್ಲಕ್ಷ್ಯ ನೋಡಿ ಏನೆನ್ನಬೇಕೋ ಗೊತ್ತಾಗೊಲ್ಲ. ಗೂಟದ ಕಾರು, ಏಸಿ ನಿವಾಸಗಳ ಬದಲು ಅವರನ್ನೆಲ್ಲಾ ಗಡಿಯಲ್ಲಿ ಒಂದು ತಿಂಗಳು ಬಿಟ್ಟರೆ ನಿಜಸ್ಥಿತಿ ಅರಿವಾಗಬಹುದೇನೋ ! ಇತ್ತೀಚಿಗಿನ ಶಾಂತಿ ಸಂಧಾನಗಳೆಲ್ಲಾ ಮುರಿದು ಬೀಳುತ್ತಲೇ ಇರೋ ಬಗ್ಗೆ ಬೇಜಾರಲ್ಲಿದ್ದಾಗ ಹಿಂದಿನ ತಿಂಗಳ ನ್ಯೂಯಾರ್ಕ ಸಮ್ಮೇಳನದಲ್ಲಿನ ನಮ್ಮ ಪ್ರಧಾನಿಗಳ ಹೇಳಿಕೆ ಇದ್ದದ್ದರಲ್ಲೇ ಸ್ವಲ್ಪ ಸಮಾಧಾನ ತಂತು. Have not become indian PM to redraw borders ಅನ್ನೋ ಮಾತು ಕೇಳಿ ಭಲೇ ಎನಿಸಿತು. ಆದರೆ ಎಲ್ಲಿ ಹೋಗಿತ್ತು ನಾಲ್ಕು ವರ್ಷಗಳಿಂದ ಇಂತ ಧೈರ್ಯ, ಚುನಾವಣೆ ಹತ್ತಿರ ಬಂತೆಂದೇ ಇಂತಾ ಪೋಸೇ ಎಂಬ ಕುಹಕಗಳು ಏನೇ ಇದ್ದರೂ ಅದನ್ನು ಸದ್ಯಕ್ಕೆ ಬದಿಗಿಡೋಣ. ಇಂತ ದಿಟ್ಟತನ ಬೇಕಾಗಿದೆ ಅನಿಸುತ್ತೆ. ಪಾಕ್ ಮೇಲೆ ರಾತ್ರೋರಾತ್ರಿ ಯುದ್ದ ಸಾರಿಬಿಡಬೇಕು ಅಂತಲ್ಲ. ಆದ್ರೂ ನಿಲ್ಲದೇ ನಡೀತಿರೋ ಈ ಗಡಿತಂಟೆಗಳಿಗೆ, ಅದರ ನಂತರ ಪಾಕಿಗಳು ಕೊಡುತ್ತಿರೋ ಹುಚ್ಚುಚ್ಚು ಹೇಳಿಕೆಗಳಿಗೆ ದಿಟ್ಟ ಪ್ರತ್ಯುತ್ತರ ಕೊಡಲೇಬೇಕು. ಯುದ್ದದಿಂದ ಎರಡೂ ಕಡೆಯ ಅಪಾರ ಜೀವಹಾನಿ .ಆ ಕಡೆಯಿಂದ ಗಡಿಕಾಯುತ್ತಿರುವವರೂ ಮನುಷ್ಯರೆ. ಅವರಿಗೂ ಇವರಂತೆ ಮಕ್ಕಳು ಮರಿ ಇರುತ್ತಾರೆ. ಅಪಾಯವಿರೋದು ಅವರಿಂದಲ್ಲ ಅನ್ನೋ ಹೊತ್ತಿಗೆ ಬುದ್ದಿಜೀವಿಗಳ ಮತ್ತೊಂದು ಪ್ರಶ್ನೆ ನೆನಪಾಗುತ್ತೆ.
ಗಡಿಯೀಚೆ ನುಗ್ಗೋಕೆ ಪ್ರಯತ್ನಿಸೋ ಬ್ರೈನ್ ಭಯೋತ್ಪಾದಕರೂ ಮನುಷ್ಯರೇ ಅಲ್ಲವಾ ಅನ್ನೋ ಬುದ್ದಿಜೀವಿಗಳೇ ಸ್ವಲ್ಪ ತಡೆಯಿರಿ. ಅಪಾಯವಿರೋದು ಒಬ್ಬಿಬ್ಬ ಭಯೋತ್ಪಾದಕನಿಂದಲ್ಲ. ಮುಗ್ದ ಜನರ ಮನಸ್ಸು ಕೆಡಿಸಿ ಅವರನ್ನ ಭಯೋತ್ಪಾದಕರನ್ನಾಗಿ ತಯಾರಿಸಿ, ಹಣ, ಶಸ್ತ್ರಾಸ್ತ್ರ ಕೊಟ್ಟು ಗಡಿಯೆಡೆಗೆ ಕಳುಹಿಸೋ ಕೇಂದ್ರಗಳಿಂದ. ಅಂತಹ ಕೇಂದ್ರಗಳಿಗೆ ಕುಮ್ಮಕ್ಕು ಕೊಡೋ ಹುಚ್ಚು ನಾಯಕರುಗಳಿಂದ ಶಾಂತಿ, ತಾಳ್ಮೆಗಳು ಅತಿಯಾದರೆ ಅದನ್ನು ಮೂರ್ಖರು ಕೈಲಾಗದವನು ಅಂತದುಕೊಳ್ಳೋ ಅಪಾಯವೂ ಇದೆ! ಹಾಗಾಗಿ ದೊಡ್ಡ ಸಂಧಾನಗಳ ಮೂಲಕವೋ(ಅದಕ್ಕೆ ಬಗ್ಗುವುದು ಡೌಟೇ ಎಂಬುದು ಬೇರೆ ಮಾತು) ಅದಾಗದಿದ್ದರೆ ನಮ್ಮ ಗಡಿಭದ್ರತಾ ಪಡೆಗಳ ಕೈಬಲಪಡಿಸೋ ಮೂಲಕವೋ ಈ ಸಮಸ್ಯೆಗೆ ಶೀಘ್ರವೇ ನಾಂದಿ ಹಾಡಬೇಕಾದ ಅನಿವಾರ್ಯತೆ ಇದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಮನಬಂದಂತೆ ಹೇಳಿಕೆ ಕೊಡೋ ಬುದ್ದಿಜೀವಿಗಳಿಗೆ, ಗಡಿಯಲ್ಲೇನಾದರೆ ನಮಗೇನೆನ್ನೋ ದಿವ್ಯ ನಿದ್ರೆಯಲ್ಲಿರೋ ಕಾಮನ್ ಮ್ಯಾನ್ಗೆ ನನ್ನ ಕೋರಿಕೆ ಅಷ್ಟೆ. ಒಂದು ತಿಂಗಳು ಗಡಿಯಲ್ಲಿದ್ದು ಬನ್ನಿ. ಕಷ್ಟವಾದರೆ ಗಡಿಯಲ್ಲಿದ್ದ ಸೈನಿಕನ ಜೊತೆ ಒಂದು ವಾರ ಇರಿ.. ಆಗಲಾದರೂ ನಿಮಗೆ ನಿಜಸ್ಥಿತಿ ಅರ್ಥವಾಗಬಹುದು. ಕಣ್ಣುತೆರೆಯಬಹುದು.. ಆಗಲೂ ನಿಮಗನಿಸಿದ್ದೇ ಸತ್ಯ ಅನಿಸಿದರೆ ಆಮೆಲೆ ನಿಮ್ಮ ಹೇಳಿಕೆಗಳ ಕೊಡಿರೆಂಬ ವಿನಮ್ರ ವಿನಂತಿಯೊಂದಿಗೆ ಈ ವಾರದ ಲೇಖನದಿಂದ ವಿರಮಿಸುತ್ತಿದ್ದೇನೆ.
ನಿಮ್ಮ
ಪ್ರಶಸ್ತಿ
ಚೆನ್ನಾಗಿದೆ ಲೇಖನ. ಎತ್ತರದ ಶಿಖರಗಳಲ್ಲಿ, ಹಿಮಕಣಿವೆಗಳಲ್ಲಿ, ಮರುಭೂಮಿಗಳಲ್ಲಿ ಎಲ್ಲೆಂದರಲ್ಲಿದ್ದುಕೊಂಡು ನಮ್ಮನ್ನು ಕಾಪಾಡುತ್ತಿರುವ ಜೀವಗಳ ಸಾವುಗಳು, ನೋವು-ಕಷ್ಟಗಳು ತಿಳಿಯಲಾರದಷ್ಟು ದಡ್ಡರೆ ನಮ್ಮ ಬುಧ್ದಿ ಜೀವಿಗಳು?
ವಿಚಾರ ಪೂರ್ಣ ಲೇಖನ !