ಲೋಕಸಭೆ ಚುನಾವಣೆ ಹತ್ತಿರ ಬಂದೇ ಬಿಟ್ಟಿದೆ. ಕಾರ್ಪೋರೇಟ್ ಲಾಬಿಗೆ ಮಣಿಯುವ ಸರ್ಕಾರಗಳು ಲಾಬಿಗೆ ಅನುಕೂಲ ಮಾಡಿಕೊಡುವಲ್ಲಿ ತಮ್ಮ ಅತಿಸಹಕಾರವನ್ನು ನೀಡುತ್ತವೆ. ಪರಿಸರದ ಬಗ್ಗೆ ವೈಯಕ್ತಿಕವಾಗಿ ಸ್ವಲ್ಪ ಬದ್ಧತೆ ತೋರಿದ್ದ ಜೈರಾಂ ರಮೇಶ್‌ರನ್ನು ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಕಿತ್ತು ಹಾಕಿ ಜಯಂತಿ ನಟರಾಜ್‌ರನ್ನು ತಂದು ಕೂರಿಸಿದರು. ಪಕ್ಷ ಸಂಘಟಿಸುವ ನೆವದಲ್ಲಿ ಜಯಂತಿ ನಟರಾಜ್‌ರಿಂದ ರಾಜಿನಾಮೆ ಕೊಡಿಸಿ ಇಂಧನ ಮಂತ್ರಿಯಾದ ವೀರಪ್ಪ ಮೊಯ್ಲಿಗೆ ಹೆಚ್ಚುವರಿ ಖಾತೆಯಾಗಿ ಅರಣ್ಯ ಮತ್ತು ಪರಿಸರ ಇಲಾಖೆಯ ಜವಾಬ್ದಾರಿಯನ್ನು ನೀಡಿದ್ದಾರೆ. ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಕವಿ ಮನಸ್ಸಿನ ಮೊಯ್ಲಿ ಈಗ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ, ಈ ದೇಶದಲ್ಲಿ ಅರಣ್ಯಗಳು ಉಳಿಯುವುದು ಕಷ್ಟ. ಅರಣ್ಯ ಇಲಾಖೆಯ ಖಾತೆಯನ್ನು ವಹಿಸಿಕೊಂಡ ೧ ತಿಂಗಳಲ್ಲಿ ಮಾಡಿದ ಅವಾಂತರ ನೋಡಿದರೆ ಸಾಕು. ಉತ್ತರ ಕೊರಿಯಾದ ದೈತ್ಯ ಉಕ್ಕು ಕಂಪನಿಯ ಹೆಸರು ಪೋಸ್ಕೊ. ೫೨ ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿ ವರ್ಷಕ್ಕೆ ೧೨ ಮಿಲಿಯನ್ ಟನ್ ಉಕ್ಕು ಉತ್ಪಾದಿಸಲಿರುವ ಪೋಸ್ಕೊ ಉಕ್ಕು ಕಂಪನಿಗೆ ಒಡಿಶಾ ರಾಜ್ಯದಲಿ ತರಾತುರಿಯಲ್ಲಿ ನಿಯಮ ಮೀರಿ ಉಕ್ಕು ತೆಗೆಯಲು ಅವಕಾಶ ಮಾಡಿಕೊಡಲಾಗಿದೆ (ನಮ್ಮ ರಾಜ್ಯದಿಂದ ಈ ಕಂಪನಿಯನ್ನು ಓಡಿಸಿದ್ದನ್ನು ಈಗಿಲ್ಲಿ ನೆನಪಿಸಿಕೊಳ್ಳಬಹುದು). ದೇಶದ ಜನರ ಪ್ರತಿಭಟನೆಯಿಂದಾಗಿ ನೆನೆಗುದಿಗೆ ಬಿದ್ದಿದ್ದ ಕುಲಾಂತರಿ ತಳಿಗಳ ಕ್ಷೇತ್ರ ಪರೀಕ್ಷೆಗೂ ಅವಕಾಶ ಮಾಡಿಕೊಟ್ಟಿದ್ದಾರೆ. ಈ ದೇಶದಲ್ಲಾದ ಅತಿದೊಡ್ಡ ಬೋಪಾಲ್ ದುರಂತದ ನಂತರದಲ್ಲಿ ಸಾಲು-ಸಾಲು ಇಂತಹ ದುರಂತಗಳಿಗೆ ಕಾರಣವಾಗಬಲ್ಲ ಅಂಶಗಳಿಗೆ ಮೊಯ್ಲಿ ಕಾರಣವಾಗುತ್ತಿದ್ದಾರೆ.
ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ರಾಜಕೀಯ ಜೀವನಗಳೇನೆ ಇರಲಿ, ಅವರೊಬ್ಬ ದೂರದೃಷ್ಟಿ ಹೊಂದಿದ ಮಹಿಳೆಯಾಗಿದ್ದಳು. ಕೇರಳದ ಸೈಲೆಂಟ್ ವ್ಯಾಲಿಯನ್ನು ಸಂರಕ್ಷಿತ ಪ್ರದೇಶವೆಂದು ಪರಿಗಣಿಸಿ ಅದನ್ನು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಹೀಗೆ ದೇಶದಲ್ಲಿ ಹಲವಾರು ಅರಣ್ಯ ಪ್ರದೇಶಗಳನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಿದ ಕೀರ್ತಿ ಅವರಿಗೆ ಸಲ್ಲಬೇಕು. ಇದೇ ಇಂದಿರಾಗಾಂಧಿಯ ಮೊಮ್ಮೊಗನ ಹೇಳಿಕೆಯೆಂದರೆ, ದೇಶದ ಅಭಿವೃದ್ಧಿಗೆ ಪರಿಸರ ಪರ ನಿಲುವುಗಳು ಮಾರಕವಾಗಿವೆ ಎಂಬುದಾಗಿದೆ. ಇನ್ನು ಕಾರ್ಪೊರೇಟ್ ವಲಯಗಳು ಹಣದ ಥೈಲಿಯನ್ನು ಹರಡಿಕೊಂಡು ಕುಳಿತಿವೆ. ತೈಲ ಕಂಪನಿಗಳಿಗೆ ತುರ್ತಾಗಿ ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಪರವಾನಿಗೆ ಬೇಕು. ವೀರಪ್ಪ ಮೊಯ್ಲಿಯ ಹತ್ತಿರ ಇಂಧನ ಖಾತೆಯಿದೆ ಜೊತೆಗೆ ಅರಣ್ಯ ಮತ್ತು ಪರಿಸರ ಖಾತೆ. ಕಾರ್ಪೊರೇಟ್ ವ್ಯಕ್ತಿಗಳ ರೊಟ್ಟಿ ಜಾರಿ ಇದೀಗ ತುಪ್ಪದಲ್ಲಿ ಬಿದ್ದಿದೆ. ನೀಟಾಗಿ ಡೀಲ್ ಮಾಡಿ ಇದೇ ತುಪ್ಪದ ರೊಟ್ಟಿಯನ್ನು ಹಂಚುವುದೊಂದೇ ಮೊಯ್ಲಿಯ ಕೆಲಸವಾಗಲಿದೆ.
ಬೆಳೆಯುತ್ತಿರುವ ಜನಸಂಖ್ಯೆಗೆ ಮೂಲ ಸೌಕರ್ಯಗಳನ್ನು ನೀಡುವುದು ನಮ್ಮನ್ನಾಳುವ ಸರ್ಕಾರಗಳ ಮೊದಲ ಕರ್ತವ್ಯವಾಗಬೇಕು. ಆದರೆ ವಿದೇಶಿ ಕಂಪನಿಗಳಿಗೆ ನಮ್ಮ ನೆಲದ ಅತ್ಯಮೂಲ್ಯ ಖನಿಜಗಳನ್ನು ಆಣೆ-ಪೈಸೆಗಳಲ್ಲಿ ಮಾರಿ ನಾವು ಸಾಧಿಸುವುದೇನನ್ನು? ಇದೇ ಉಕ್ಕಿನ ಉತ್ಪನ್ನಗಳನ್ನು ಮೂಲಬೆಲೆಗಿಂತ ನೂರಾರು ಪಟ್ಟು ಹೆಚ್ಚು ತೆತ್ತು ಈ ದೇಶದ ಸಾಮಾನ್ಯ ಖರೀದಿಸುವಂತಾಗುವ ಈ ವ್ಯವಹಾರದಲ್ಲಿ ಅದೆಷ್ಟು ರೂಪಾಳುಗಳು ಅತ್ತಿಂದ್ದಿತ್ತ ಆಗಿರಬಹುದು ಊಹಿಸಿ. ಪೋಸ್ಕೊದಂತಹ ಅತಿದೊಡ್ಡ ನೇರ ಹೂಡಿಕೆಯ ಜೊತೆ-ಜೊತೆಯಲ್ಲಿ ಇನ್ನೂ ಹಲವು ಪರಿಸರ ವಿರೋಧಿ ಕಂಪನಿಗಳಿಗೆ ಕಾಯ್ದೆಗಳನ್ನು ಗಾಳಿಗೆ ತೂರಿ ಮಣೆ ಹಾಕಲಾಗಿದೆ. ಅರಣ್ಯ ಮತ್ತು ಪರಿಸರ ಇಲಾಖೆಯ ಪ್ರಕಾರ ೨ ವಿದ್ಯುತ್ ಕಂಪನಿ, ೨ ಕಲ್ಲಿದ್ದಲು ಕಂಪನಿ ಮತ್ತು ೧ ತೈಲ ಕಂಪನಿ, ಮತ್ತು ಕಚ್ಚಾ ತೈಲ ಸಾಗಾಣಿಕೆ ಕಂಪನಿಗಳಿಗೆ ಪರವಾನಿಗೆ ನೀಡಲಾಗಿದೆ. ಇದರಲ್ಲಿ ೧೦೫೦ ಮೆ.ವ್ಯಾ ವಿದ್ಯುತ್ ಉತ್ಪಾದಿಸುವ ಮಾನೆಟ್ ಪವರ್ ಎಂಬ ಕಂಪನಿಯು ೫,೧೦೦ ಕೋಟಿ ರೂಪಾಯಿಗಳ ಬಂಡವಾಳವನ್ನು ಒಡಿಶಾದಲ್ಲಿ ಹೂಡುತ್ತಿದೆ. ಹಿಂದೂಜಾ ನ್ಯಾಷನಲ್ ಪವರ್ ಕಾರ್ಪೊರೇಷನ್ ಎಂಬ ಕಂಪನಿಯು ತನ್ನ ೬೦೦ ಕೋಟಿ ರೂಪಾಯಿಗಳ ಯೋಜನೆಗೆ ಆಂದ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಪ್ರಾರಂಭಿಸುತ್ತಿದೆ. ಆಂಧ್ರಪ್ರದೇಶದ ಪುಲಿಕಟ್ ಸರೋವರ ಪಕ್ಷಿಧಾಮದಿಂದ ಬರೀ ೨ ಕಿ.ಮಿ. ದೂರದಲ್ಲಿರುವ ದುರ್ಗರಾಜಪಟ್ಟಣಂನಲ್ಲಿ ೪೦೦೬ ಕೋಟಿ ರೂಪಾಯಿಯ ಯೋಜನೆಗೆ ಅನುಮತಿ ನೀಡಿರುವುದು ಅಲ್ಲಿಯ ಪರಿಸರಾಸಕ್ತರ ನಿದ್ದೆಗೆಡಿಸಿದೆ.
ಅರಣ್ಯ ಮತ್ತು ಪರಿಸರ ಇಲಾಖೆಯಿಂದ ತೀವ್ರವಾದ ಆಕ್ಷೇಪಣೆಯಿದ್ದ ಕಡತಗಳನ್ನು ತರಾತುರಿಯಲ್ಲಿ ಬಗೆಹರಿಸುವುದರ ಮೂಲಕ ಕಾರ್ಪೊರೇಟ್‌ಗಳ ಕಣ್ಮಣಿಯಾಗಿ ಹೊರಹೊಮ್ಮಿದ ಮೊಯ್ಲಿಯವರು ಇತ್ತ ಮಾಧ್ಯಮದೆದುರು ಇಂಧನ ಸಚಿವನಾಗಿ ತಾನೆಷ್ಟು ಸುಭಗನೆಂದು ತೋರಿಸಿಕೊಳ್ಳುವ ನಾಟಕವನ್ನು ಶುರುವಿಟ್ಟುಕೊಂಡಿದ್ದಾರೆ. ಇಂಧನ ಖಾತೆ ಕಚೇರಿಯ ಎಲ್ಲರೂ ವಾರದಲ್ಲಿ ಒಂದು ದಿನ ಸಾರ್ವಜನಿಕ ಸಾರಿಗೆಯನ್ನು ಬಳಸಬೇಕು ಎಂದು ಫರ್ಮಾನು ಹೊರಡಿಸಿದ್ದಾರೆ. ಪೆಟ್ರೋಲಿಯಂ ಖಾತೆಯ ಇಬ್ಬರು ಜಂಟಿ ಕಾರ್ಯದರ್ಶಿಗಳು ಸೈಕಲ್ ಏರಿ ಕಚೇರಿಗೆ ಬರುತ್ತಿದ್ದಾರೆ. ಉಳಿದ ೨೦೦ ಸಿಬ್ಬಂದಿಗಳು ಸಾರ್ವಜನಿಕ ಸಾರಿಗೆಯನ್ನು ಉಪಯೋಗಿಸುತ್ತಿದ್ದಾರೆ. ಖುದ್ದು ಮೊಯ್ಲಿ ಬುಧವಾರದಂದು ಮೆಟ್ರೋ ರೈಲಿನಲ್ಲಿ ಕಚೇರಿಗೆ ಆಗಮಿಸಿ, ಮಧ್ಯಾಹ್ನ ಊಟಕ್ಕೆ ಹೋಗುವಾಗಲೂ ರೈಲಿನಲ್ಲೇ ಹೋಗಿ ಬಂದು ಮಾಡುತ್ತಿದ್ದಾರೆ. ಇದರಿಂದ ತನ್ನ ಕಚೇರಿ ಆ ದಿನದಲ್ಲಿ ೬೦೦ ಲೀಟರ್ ಪೆಟ್ರೋಲ್ ಉಳಿತಾಯ ಮಾಡಿದೆ ಎಂದು ಮಾಧ್ಯಮದೆದಿರು ಮಾನ್ಯ ವೀರಪ್ಪ ಮೊಯ್ಲಿಯವರು ಬಿಚ್ಚಿಕೊಂಡಿದ್ದಾರೆ. ಜೊತೆಗೆ ದೇಶದ ಎಲ್ಲಾ ಸರ್ಕಾರಿ ಸಿಬ್ಬಂದಿಗಳು ಪ್ರತಿ ಬುಧವಾರದಂದು ಸಾರ್ವಜನಿಕ ಸಾರಿಗೆಯನ್ನು ಉಪಯೋಗಿಸಿ ದೇಶ ಸೇವೆ ಮಾಡಬೇಕು ಎಂದು ಕರೆ ನೀಡಿದ್ದಾರೆ. ಹೇಗಿದೆ ಭೂತದ ಬಾಯಲ್ಲಿ ಭಗವದ್ಗೀತೆ!!
ಅರಣ್ಯ ಮತ್ತು ಪರಿಸರ ಖಾತೆಯನ್ನು ವಹಿಸಿಕೊಂಡ ಕೇವಲ ೨೦ ದಿನಗಳಲ್ಲಿ ವಿವಾದಾತ್ಮಕವಾದ ೭೦ ಯೋಜನೆಗಳಿಗೆ ಮೊಯ್ಲಿಯವರು ಹಸಿರು ನಿಶಾನೆ ತೋರಿದ್ದಾರೆ. ಇನ್ನುಳಿದ ನಾಲ್ಕು ತಿಂಗಳಲ್ಲಿ ಅದಿನ್ನೆಷ್ಟು ವಿವಾದಾತ್ಮಕವಾದ, ಕಾನೂನಿನ ತೊಡಕಿರುವ, ಪರಿಸರ ವಿರೋಧಿ ಯೋಜನೆಗಳಿಗೆ ಅನುಮತಿ ನೀಡಲಿದ್ದಾರೆ ಎಂಬುದನ್ನು ಗಮನಿಸಿದರೆ ನಿಜವಾಗಲೂ ಭಯವಾಗುತ್ತದೆ. ಈ ನೆಲದ ಕಾನೂನನ್ನು ತುಳಿದು ಬರೀ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಪೊರೇಟ್ ವಲಯಕ್ಕೆ ಅನುಕೂಲ ಮಾಡಿಕೊಡುವ ಯುಪಿಎ ಸರ್ಕಾರದ ಕಾಯವೈಖರಿ ಹೀಗಿರಬೇಕಿತ್ತು:
ದೇಶದ ಅಮೂಲ್ಯ ಸಸ್ಯ ಮತ್ತು ಪ್ರಾಣಿ ಸಂಪತ್ತನ್ನು ರಕ್ಷಿಸುವುದು ಮತ್ತು ಸಮೀಕ್ಷೆ ನಡೆಸುವುದು.
ಸಮರ್ಥವಾಗಿ ಮಾಲಿನ್ಯ ನಿಯಂತ್ರಣ ಮಾಡುವುದು
ಮರುಅರಣ್ಯೀಕರಣ ಇತ್ಯಾದಿಗಳು
ಆದರೆ ಈಗಿನ ಸರ್ಕಾರದ ಕಾರ್ಯವೈಖರಿ ಹೀಗಿದೆ:
ಕಾರ್ಪೊರೇಟ್ ವಲಯಗಳ ಎಲ್ಲಾ ಯೋಜನೆಗಳಿಗೆ ತರಾತುರಿಯಲ್ಲಿ ಮಂಜೂರಾತಿ ನೀಡುವುದು
ದೇಶದ ಸಾಮಾನ್ಯ ಜನತೆಯ ಆಶಯಗಳನ್ನು ಧಿಕ್ಕರಿಸುವುದು
ಅತ್ಯಂತ ಸುಲಭವಾಗಿ ಪರಿಸರ ವಿರೋಧಿ ಕಾರ್ಪೊರೇಟ್ ವಲಯಗಳಿಗೆ ಅನುಕೂಲವೊದಗಿಸುವುದು.
ಕೇಂದ್ರ ಸರ್ಕಾರಿ ಸ್ವಾಮ್ಯದ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ (ಎನ್.ಟಿ.ಪಿ.ಸಿ)ಯ ಮೂರು ಬೃಹತ್ ಯೋಜನೆಗಳಿಗೆ ಕೇಂದ್ರದ ಮಾಲಿನ್ಯ ಸೂಚ್ಯಂಕದ ಪರವಾನಿಗೆ ಸಿಗಬೇಕಾಗಿದ್ದು, ಮಧ್ಯಪ್ರದೇಶದ ಸಿದ್ದಿ ಮತ್ತು ಉತ್ತರ ಪ್ರದೇಶದ ಸೋನಾಭದ್ರ ವಿದ್ಯುತ್ ಯೋಜನೆಗಳು ಕೇಂದ್ರದ ಅನುಮತಿ ಲಭಿಸಿದ ಕೂಡಲೇ ಕಾರ್ಯಾರಂಭ ಮಾಡಲಿವೆ. ಇತ್ತ ಭವ್ಯ ಭಾರತದಲ್ಲಿ ಪರಿಸರ ಕಾಯ್ದೆಗಳನ್ನು ಧಿಕ್ಕರಿಸಿ ಒಂದಾದ ಮೇಲೊಂದರಂತೆ ಕಲ್ಲಿದ್ದಲು, ಪೆಟ್ರೋಲ್, ಶಾಖೊತ್ಪನ್ನ ವಿದ್ಯುತ್ ಯೋಜನೆಗಳು ಅನುಷ್ಠಾನಗೊಳ್ಳುತ್ತಿರುವ ಸಂದರ್ಭದಲ್ಲಿ ಅತ್ತ ಶೆಲ್‌ನಂತಹ ಅಂತಾರಾಷ್ಟ್ರೀಯ ಕಂಪನಿಗಳ ಅರ್ಕ್‌ಟಿಕ್ ಪ್ರದೇಶದಲ್ಲಿ ಪೆಟ್ರೋಲ್ ಬಗೆಯುವ ಯೋಜನೆಗಳಿಗೆ ಹಿನ್ನೆಡೆಯಾಗಿದೆ. ಧ್ರುವ ಪ್ರದೇಶದಲ್ಲಿ ಪೆಟ್ರೋಲ್ ಬಗೆದು ಲಾಭ ಮಾಡಿಕೊಳ್ಳುವ ಭರದಲ್ಲಿ ಶೆಲ್ ಕಂಪನಿ ಅಲ್ಲಿ ೫೦೦೦ ಬಿಲಿಯನ್ ಡಾಲರ್‌ಗಳನ್ನು ಹೂಡಿಕೆ ಮಾಡಿದೆ. ಪ್ರಪಂಚದಾದ್ಯಂತ ಈ ಯೋಜನೆಗೆ ವಿರೋಧ ಬಂದ್ದಿದ್ದರಿಂದ ತಾತ್ಕಾಲಿಕವಾಗಿ ತಾನು ಅಲ್ಲಿ ಪೆಟ್ರೋಲ್ ನಿಕ್ಷೇಪಗಳನ್ನು ಬಗೆಯುವುದಿಲ್ಲ ಎಂದು ಶೆಲ್ ಮೊನ್ನೆಯಷ್ಟೆ ಹೇಳಿಕೆ ನೀಡಿದೆ. ಆದರೂ ಇದು ತಾತ್ಕಾಲಿಕ ತಡೆಯಷ್ಟೆ. ಬ್ಯೂರೋ ಆಫ್ ಓಶಿಯನ್ ಎನರ್ಜಿ ಮ್ಯಾನೇಜ್‌ಮೆಂಟ್ ಎಂಬ ಸಂಸ್ಥೆಯ ಪರವಾನಿಗೆಯನ್ನು ಪಡೆದು ಧ್ರುವ ಪ್ರದೇಶಗಳಲ್ಲಿ ಪೆಟ್ರೋಲ್ ನಿಕ್ಷೇಪಗಳನ್ನು ಪಡೆಯಬಹುದು. ಅಮೇರಿಕಾದ ಫೆಡರಲ್ ಕೋರ್ಟ್ ಶೆಲ್ ಕಂಪನಿ ೨೦೧೪ರಲ್ಲಿ ಧ್ರುವ ಪ್ರದೇಶದಲ್ಲಿ ಪೆಟ್ರೋಲ್ ನಿಕ್ಷೇಪಗಳನ್ನು ಬಗೆಯುವ ಕುರಿತು ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಇದು ಗ್ರೀನ್‌ಪೀಸ್‌ನಂತಹ ಅಂತಾರಾಷ್ಟ್ರೀಯ ಪರಿಸರ ಸಂಸ್ಥೆಗಳಿಗೆ ಸಿಕ್ಕ ಜಯವಾಗಿದೆ. ಆದರೆ ಇದೊಂದು ತಾತ್ಕಾಲಿಕ ತಡೆಯಾಜ್ಞೆಯಾಗಿದ್ದು ಒಂದು ವರ್ಷಕ್ಕೆ ಮಾತ್ರ ಈ ತಡೆಯಾಜ್ಞೆ ಅನ್ವಯವಾಗುತ್ತದೆ. ೫೦೦೦ ಬಿಲಿಯನ್ ಹಣ ಹೂಡಿದ ಶೆಲ್ ಸಂಸ್ಥೆಗೆ ಕೋರ್ಟ್ ಈ ಕ್ರಮದಿಂದಾಗಿ ಅತೀವ ಹಿನ್ನೆಡೆಯಾದಂತಾಗಿದೆ. ಶೆಲ್ ಕಂಪನಿಯಲ್ಲಿ ಹಣ ತೊಡಗಿಸಿಕೊಂಡ ಷೇರುದಾರರು ಕಂಪನಿಯ ಆಡಳಿತ ಮಂಡಳಿಯನ್ನು ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ತರಹದ ಒತ್ತಡವನ್ನು ಮುಂದಿನ ದಿನಗಳಲ್ಲೂ ಶೆಲ್ ಕಂಪನಿಯ ಮೇಲೆ ಹಾಕಿದರೆ, ಈ ಶೆಲ್ ಎಂಬ ಭೂತ ಶಾಶ್ವತವಾಗಿ ಧ್ರುವ ಪ್ರದೇಶದಿಂದ ಕಂಬಿ ಕೀಳಲಿದೆ. ಶೆಲ್ ಕಂಪನಿ ಸುಮ್ಮನೆಯೇನು ಕುಳಿತಿಲ್ಲ. ರಷ್ಯಾದ ಪೆಟ್ರೋಲಿಯಂ ದೈತ್ಯ ಗಾಝಾಪಾಂ ಕಂಪನಿಯ ಜೊತೆ ಸೇರಿ ಪರವಾನಿಗೆಯನ್ನು ಪಡೆದುಕೊಂಡು ಪೆಟ್ರೋಲ್ ಎತ್ತುವ ಹುನ್ನಾರದಲ್ಲಿದೆ. ಶೆಲ್ ನಡೆಯನ್ನು ಜಗತ್ತಿನ ಇತರ ಎಣ್ಣೆ ಕಂಪನಿಗಳು ಎಚ್ಚರಿಕೆಯಿಂದ ಕಾಯುತ್ತಿವೆ. ಒಂದೊಮ್ಮೆ ಶೆಲ್ ಕಂಪನಿಗೆ ಪರವಾನಿಗೆ ಸಿಕ್ಕಿದರೆ, ಧ್ರುವ ಪ್ರದೇಶದ ಕತೆ ಮುಗಿದಂತೆ. ಅಲ್ಲಿನ ಅಪರೂಪದ ಹಿಮಕರಡಿಗಳ ನೆಲೆಯನ್ನು ಶಾಶ್ವತವಾಗಿ ನಾಶ ಮಾಡಿ ಎಣ್ಣೆ ಕಂಪನಿಗಳು ವಿಜೃಂಭಿಸುತ್ತವೆ. ಅಲ್ಲಿ ವಾಸಿಸುವ ಸೀಲ್‌ಗಳು, ತಿಮಿಂಗಿಲಗಳಿಗೆ ಮರಣ ಶಾಸನ ಬರೆದಂತೆ ಆಗುತ್ತದೆ. ಶೆಲ್ ಕಂಪನಿ ಪರವಾನಿಗೆಯನ್ನು ಪಡೆಯಲು ಸಫಲವಾದರೆ, ಇನ್ನುಳಿದ ಕಂಪನಿಗಳು ಧ್ರುವ ಪ್ರದೇಶದಲ್ಲಿ ಎಣ್ಣೆ ಎತ್ತಲು ಪರವಾನಿಗೆಯನ್ನು ಪಡೆದು ತೈಲವನ್ನೆತ್ತಿ ಸಾಗಿಸುತ್ತಾರೆ.
ಈ ಲೇಖನದ ತಲೆಬರಹದಲ್ಲಿ ಇಲ್ಲಿ ಎಂದರೆ ಅರಣ್ಯ ಮತ್ತು ಪರಿಸರ ಇಲಾಖೆ ಎಂದುಕೊಂಡರೆ, ಅಲ್ಲಿ ಎಂಬುದನ್ನು ಇಂಧನ ಖಾತೆ ಎಂದು ಕೊಳ್ಳಬೇಕು. ಎರೆಡೂ ಖಾತೆಯ ಮಂತ್ರಿಗಳು ಒಬ್ಬರೆ ಆಗಿದ್ದರಿಂದ, ಅದೂ ಪರಸ್ಪರ ವಿರೋಧಾಭಾಸಗಳಿಂದ ಕೂಡಿದ ಇಲಾಖೆಯಾದ್ದರಿಂದ, ಮತ್ತು ಅರಣ್ಯ ಮತ್ತು ಪರಿಸರ ಇಲಾಖೆಯಲ್ಲಿ ನಿರೀಕ್ಷಿತ ನೋಟು ರೂಪದ ಆದಾಯವಿಲ್ಲವಾದ್ದರಿಂದ, ಅರಣ್ಯ ಮತ್ತು ಪರಿಸರ ಇಲಾಖೆಯ ಖಾತೆಯನ್ನು ಸನ್ಮಾನ್ಯಶ್ರೀ ವೀರಪ್ಪ ಮೊಯ್ಲಿಯಿಂದ ಹಿಂಪಡೆದು, ಪರಿಸರದ ಬಗ್ಗೆ ಕಾಳಜಿಯಿರುವ ಸಂಸದರಿಗೆ ಆ ಸ್ಥಾನವನ್ನು ನೀಡುವುದು ಸೂಕ್ತ. ಮತ್ತು ಮುಂದಿನ ಪ್ರಧಾನಿ ಅಭ್ಯರ್ಥಿಯಾದ ರಾಹುಲ್ ಗಾಂಧಿಯವರು ತಮ್ಮ ಅಜ್ಜಿಯಿಂದ ಕಲಿಯಬೇಕಾದ ಪಾಠ ಸಾಕಷ್ಟಿದೆ. ಅರಣ್ಯ ಮತ್ತು ಪರಿಸರ ಇಲಾಖೆ ಈ ದೇಶದ ಅಭಿವೃದ್ಧಿಗೆ ಮಾರಕವಾಗುತ್ತಿದೆ ಎಂಬ ಅವರ ಬಾಲಿಶ ಹೇಳಿಕೆಯನ್ನು ಸಾಷ್ಟಾಂಗ ವಾಪಾಸು ಪಡೆಯಬೇಕು. ಈ ದೇಶದ ಸಾಮಾನ್ಯರಿಗೆ ವಾತಾನುಕೂಲವುಳ್ಳ ಮನೆ ಮತ್ತು ಕಾರುಗಳಿಲ್ಲ, ಕುಡಿಯಲು ಎಲ್ಲರಿಗೂ ಬಿಸ್ಲೇರಿ ನೀರಿಲ್ಲ, ಅದೆಷ್ಟೋ ಮಂದಿಗೆ ಸೂರಿ ಇಲ್ಲ ಎಂಬುದನ್ನು ಅರಿಯಬೇಕು. ದೇಶದ ಅರ್ಧ ಸಂಪತ್ತು ಬರೀ ಬೆರೆಳೆಣಿಕೆಯಷ್ಟು ಮಂದಿ ಹೊಂದಿದ್ದಾರೆ ಎಂಬ ಘೋರ ಸತ್ಯವನ್ನು ಅರಿತು ಮುಂದಿನ ಚುನಾವಣೆಗೆ ಸಜ್ಜಾಗಬೇಕು. ಹಣಕ್ಕಾಗಿ ಕಾರ್ಪೊರೇಟ್ ವಲಯಗಳಿಗೆ ಅನುಕೂಲ ಮಾಡಿಕೊಟ್ಟ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಕಾರ್ಪೊರೇಟ್ ವಲಯಗಳು ಬೆನ್ನು ತಟ್ಟಿ ಪ್ರೋತ್ಸಾಹಿಸಿರಬಹುದು. ಆದರೆ ದೇಶದ ಸಾಮಾನ್ಯರ ದೃಷ್ಟಿಯಲ್ಲಿ ಇದೇ ಸರ್ಕಾರ ಕುಬ್ಜವಾಗಿ ನಿಂತಿದೆ.
*****