ಇದರರ್ಥವೇನು?: ಸಹನಾ ಪ್ರಸಾದ್


ನಾನು ರಜಿತಾ. ರಂಜಿತಾ ಹೆಸರು ಬರೆಯುವಾಗ ಈ ರೀತಿ ತಿರುಚಲ್ಪಟ್ಟು, ಈ ಹೆಸರು ಖಾಯಂ ಆಯಿತು. ವಯಸ್ಸು ೫೫. ಗಂಡ ಸದಾಶಿವ, ದೊಡ್ಡ ಕಂಪನಿಯಲ್ಲಿ ಕೈ ತುಂಬಾ ಕೆಲಸ ಹಾಗು ಕೈ ತುಂಬಾ ದುಡ್ಡೂ ಸಹ. ಮೊದಲಿಂದಲೂ ಮಿತಭಾಷಿ. ಈಗ ವಯಸ್ಸಾದಂತೆ ಮಹಾ ಮೌನಿ. ಬೆಳಗ್ಗೆ ಎದ್ದು ತನ್ನ ಪ್ರಾತಃವಿಧಿಗಳನ್ನು ತೀರಿಸಿ, ೨೦ ನಿಮಿಷ ವ್ಯಾಯಾಮ ಮಾಡಿ , ತಿಂಡಿ ತಿನ್ನುತ್ತಾ ಪೇಪರ್ ಓದಿ ಹೊರಡುವರು. ಹೊಸ ಮಾದರಿಯ ಕಾರು, ಅದಕ್ಕೊಬ್ಬ ಡ್ರೈವರ್ ಇದಾನೆ. ಗಂಡನ ದಿನಚರಿಯಲ್ಲಿ ಒಂದಿನಿತೂ ಬದಲಾವಣೆ ಇಲ್ಲ. ಸಂಜೆ ಬಂದು ಕಾಫ಼ಿ ಕುಡಿದು, ಟೀವಿ ಹಚ್ಚಿ ಕುಳಿತರೆ, ಜಗತ್ತು ಮರೆಯುತ್ತಾರೆ. ಊಟ ಕಲೆಸಿ ತಟ್ಟೆ ಕೊಟ್ಟರೆ ತಿಂದು ಕೈ ತೊಳೆಯುತ್ತಾರೆ.

ನಗರದಿಂದ ಸ್ವಲ್ಪ ದೂರದಲ್ಲಿರುವ ಬಡಾವಣೆಯಲ್ಲಿ ಒಂದು ಲಕ್ಷುರ್‍ರಿ ಫ಼್ಲಾಟ್ ನಮ್ಮದು. ಮಕ್ಕಳಿಲ್ಲದ ನಮಗೆ ಮಾತನಾಡಲು ವಿಷಯವೇ ಇಲ್ಲ. ನನ್ನಪ್ಪ ಅಮ್ಮ ದೂರದ ಹರಿಯಾಣದಲ್ಲಿ ತಮ್ಮನೊಟ್ಟಿಗೆ ಇದ್ದಾರೆ. ಅವನದು ಅಲ್ಲಿ ಒಳ್ಳೆ ಹುದ್ದೆ, ಹೆಂಡತಿ ಮಕ್ಕಳು, ಸುಖಿ ಸಂಸಾರ. ದಕ್ಷಿಣಕ್ಕೆ ಬರುವುದು ಅಪರೂಪ. ಅತ್ತೆ ಅವರ ಕಾಲದ ಸುಂದರಿಯರಲ್ಲಿ ಒಬ್ಬರು. ಕೆಲಸ ಮಾಡುವ ಕಡೆ ಯಾವುದೋ ಸಹೋದ್ಯೋಗಿಯೊಬ್ಬನ ಆಕರ್ಷಣೆಗೆ ಬಿದ್ದು, ಅದು ಮಾವನಿಗೆ ಗೊತ್ತಾಗಿ ರಂಪವಾಗಿ, ಆ ಕೊರಗಿನಲ್ಲಿ ಮಾವ ಹೋಗಿಬಿಟ್ಟರಂತೆ. ಆಮೇಲೆ ಅತ್ತೆ ಸುಮಾರು ವರುಷಗಳ ಕಾಲ ಆ ಮನುಷ್ಯನೊಟ್ಟಿಗೆ ಇದ್ದರಂತೆ. ಅವನು ಕಾಲವಾದ ನಂತರ ಯಾವುದೋ ಆಶ್ರಮ ಸೇರಿ, ಯಾರೊಂದಿಗೂ ಸಂಪರ್ಕ ಇಟ್ಟುಕೊಂಡಿಲ್ಲ. ಅವರನ್ನು ಮದುವೆಯಾದ ಮೇಲೆ ನಾ ನೋಡಿದ್ದು ೨-೩ ಸಲ ಮಾತ್ರ. ಅವರನ್ನು ಅರ್ಥ ಮಾಡಿಕೊಳ್ಳುವುದಿರಲಿ, ಮುಖವೇ ನೆನಪಿಗೆ ಬರುತ್ತಿಲ್ಲ.

ಅರಸನ ಅಂಕೆ, ದೆವ್ವದ ಕಾಟ ಇಲ್ಲದೆ ನಾನು ಪರಮ ಸುಖಿ. ಯಾವಾಗಲೂ ಸ್ಮಾರ್ಟ್ ಆಗಿ ಡ್ರೆಸ್ ಮಾಡುವಳು. ವಾಕಿಂಗ್, ಯೋಗ, ಒಳ್ಳೇ ಆಹಾರ, ಹಣ್ಣು, ಸುಖಿ ಜೀವನ ನನ್ನ ನಿಜವಾದ ವಯಸ್ಸು ಮರೆಮಾಚಿತ್ತು. ಗಂಡನ ವಯಸ್ಸು ನೋಡಿ ನನ್ನ ವಯಸ್ಸನ್ನು ಊಹೆ ಮಾಡಬಹುದಿತ್ತು. ಪ್ರತಿ ತಿಂಗಳಿಗೊಮ್ಮೆ ಫ಼ೇಶಿಯಲ್, ಬಾಡಿ ಮಸಾಜ್, ಕೂದಲಿಗೆ ಒಳ್ಳೆ ಕಂಪನಿಯ ಬಣ್ಣ, ನನ್ನನ್ನು ಇನ್ನು ಯುವತಿಯರ ಸಾಲಲ್ಲಿ ನಿಲ್ಲಿಸಿದ್ದವು.

ಮಕ್ಕಳಿಲ್ಲದ ಕೊರಗು ಮನಸ್ಸಿನ ಮೂಲೆಯಲ್ಲಿದೆ, ಅದು ನಿವಾರಿಸಲು ಹತ್ತಿರದ ಅನಾಥಾಲಯಕ್ಕೆ, ಸರಕಾರಿ ಶಾಲೆಗಳಿಗೆ, ಎನ್-ಜೀ-ಓ ಗಳಿಗೆ ಭೇಟಿ ನೀಡಿ ಕೈಲಾದಷ್ಟು ಸಹಾಯ ಮಾಡುತ್ತೇನೆ. ಉಳಿದಂತೆ ಸಮಾಜಿಕ ಜಲತಾಣಗಳು, ಮಹಿಳಾ ಮಂಡಲಿಗಳಲ್ಲಿ ನನಗಾಸಕ್ತಿಯಿಲ್ಲ.

ಕಾಲ ಒಂದೇ ರೀತಿಯಲ್ಲಿ ಉರುಳುತ್ತಿರುವಾಗ ತಮ್ಮನ ಮಗಳು ಕರೆ ಮಾಡಿದಳು. ” ಅತ್ತೆ, ನನ್ನ ಕ್ಲೋಸ್ ಫ಼್ರೆಂಡ್ ಒಬ್ಬಳು ಗಂಡನೊಟ್ಟಿಗೆ ಟ್ರೈನಿಂಗ್ ಎಂದು ನಿಮ್ಮ ಊರಿಗೆ ಬರುತ್ತಿದ್ದಾಳೆ. ಹೊಸದಾಗಿ ಮದುವೆಯಾಗಿದೆ. ಹೋಟೆಲ್ಲು, ಲಾಡ್ಜು ಎಂದು ದುಡ್ಡು ಖರ್ಚು ಮಾಡಲಾರಳು. ಕಂಪೆನಿ ಒಂದು ಒಟ್ಟು ಮೊತ್ತ ನೀಡುತ್ತಿದೆ. ಅದರಲ್ಲಿ ವಸತಿ, ಊಟ, ತಿಂಡಿ, ಕಾಫ಼ಿ ಎಲ್ಲಾ ಮುಗಿಸಿಕೊಳ್ಳಬೇಕು. ನಿಮ್ಮ ಮನೆ, ಮನ ದೊಡ್ಡದಿದೆ. ಒಂದು ತಿಂಗಳ ಕಾಲ ನಿಮ್ಮಲ್ಲಿ ಉಳಿಯುವ ಅವಕಾಶ ಮಾಡಿಕೊಡಿ ಪ್ಲೀಸ್” ಹೇಳಿದ್ದನ್ನೇ ಒಂದಃತ್ತು ಸಾರಿ ಹೇಳಿದಳು. ಅವಳ ವರಾತ ತಡೆಯಲಾಗದೆ ಒಪ್ಪಿದೆ. ಗಂಡನಿಗೆ ತಿಳಿಸಿದಾಗ ಅವನ ಮುಖಭಾವ ಒಂದಿನಿತೂ ಬದಲಾಗಲಿಲ್ಲ, ನಾನೆಂದುಕೊಂಡ ಹಾಗೆ! ಅಬ್ಬಾ, ಸಾಯುವ ಮುನ್ನ ಒಮ್ಮೆಯಾದರೂ ಇವನ ಮುಖದಲ್ಲಿ ಭಾವನೆಗಳು ಕಾಣುವಂತಾಗಲಿ ಎಂದು ನಕ್ಕೆ.

ಹೊಸ ಅತಿಥಿಗಳಿಗಾಗಿ ಮನೆ ಸ್ವಲ್ಪ ಕ್ಲೀನ್ ಮಾಡಿಸಿದೆ. ವಾರಕೊಮ್ಮೆ ಕೆಲಸದವಳು ಧೂಳು ತೆಗೆದಿದ್ದರೂ, ಇನ್ನೊಮ್ಮೆ ಎಲ್ಲಾ ಕಡೆ ಶುಚಿ ಮಾಡಿಸಿದೆ. ಮೂರು ರೂಮಿನಲ್ಲಿ ಒಂದು ನನ್ನದು, ಒಂದು ಗಂಡನದು. ಅವರು ಮಲಗುತ್ತಿದ್ದು ತಡ, ಏಳುವುದು ಬೇಗ, ಆದರಿಂದ ಬೇರೆ ಬೇರೆ ರೂಮುಗಳಿದ್ದರೆ ವಾಸಿ ಎಂದು ಈ ವ್ಯವಸ್ಥೆ. ಮೂರನೆಯ ರೂಮು ದಂಪತಿಗಳಿಗಾಗಿ ಸಜ್ಜಾಯಿತು. ಹೊಸ ಪರದೆ, ಮೇಲು ಹಾಸುಗಳು, ದಿಂಬಿನ ಕವರ್, ಬೆಡ್ಶೀಟ್, ಹೊಸ ಹೂದಾನಿ, ಸೋಪುಗಳು, ಟವೆಲ್… ಸುಮಾರು ಖರ್ಚಾದರೂ ಮನಸ್ಸಿಗೆ ಏನೊ ಹರುಷ. ಹೊಸ ರೀತಿಯ ಅಡುಗೆಯ ಕುರಿತೂ ಓದಿಕೊಂಡೆ. ಮನಸ್ಸಿನಲ್ಲಿ ಹೊಸ ಉತ್ಸಾಹ, ಆಸಕ್ತಿ ಮೂಡಿ ಅವರಿಬ್ಬರ ಬರುವಿಕೆಗಾಗಿ ಕಾದೆ.

ಬಂದಿಳಿದ ಅವರಿಬ್ಬರನ್ನು ನೋಡಿ ದಂಗಾದೆ. ಸುಮಾರು ೨೬-೨೭ ವಯಸ್ಸಿರಬಹುದು. ಆಶ ಮತ್ತು ಸಾಗರ್ ಅವರ ಹೆಸರು.ರತಿ ಮನ್ಮಥ ಹೀಗೆ ಇರಬಹುದೇನೋ ಎನ್ನುವಷ್ಟು ರೂಪು. ಅಷ್ಟು ಸುಂದರ ಜೋಡಿಯನ್ನು ನಾನು ನೋಡಿರಲೇ ಇಲ್ಲ. ಅವರ ಆರ್ಥಿಕ ಸ್ಥಿತಿ ಸುಮಾರಾಗಿದೆಯೆಂದು ಅವರುಟ್ಟ ದಿರುಸು, ಅವರ ಲಗ್ಗೇಜು ಹೇಳುತ್ತಿತ್ತು. ಅವರ ರೂಪ ನನ್ನನ್ನು ದಂಗು ಬಡಿಸಿದರೆ, ನನ್ನ ಮನೆ ಅವರಿಬ್ಬರನ್ನು ಪರವಶಗೊಳಿಸಿತು, ಇಷ್ಟು ದೊಡ್ಡ, ಪಾಶ್ ಮನೆ ಅವರು ಬಹುಷಃ ನೋಡಿರಲಿಕ್ಕಿಲ್ಲ. ನಮ್ಮ ಮನೆಯ ಪ್ರತಿ ವಸ್ತುವೂ ಕಲಾತ್ಮಕವಾಗಿ ಜೋಡಿಸಲ್ಪಟ್ಟಿತ್ತು. ಮನೆ ಕೊಂಡ ಹೊಸತರಲ್ಲಿ ವಾಸ್ತುಶಿಲ್ಪಿಯೊಬ್ಬ ಅದನ್ನು ಡಿಸೈನ್ ಮಾಡಿದ್ದ. ಬೆಲೆ ಬಾಳುವ ಸೋಫ಼ಾ, ಡೈನಿಂಗ್ ಟೇಬಲ್, ಮನೆಯಲ್ಲಿ ಜೋಡಿಸಿದ ಬೆಲೆ ಬಾಳುವ ಶೋ ಪೀಸುಗಳು, ಆಧುನಿಕ ಅಡುಗೆ ಮನೆ, ಇವೆಲ್ಲಾ ನೋಡುತ್ತ ದಂಗಾದರು. ಹರಿಯಾಣಾದಲ್ಲಿ ಅವಳು ನನ್ನ ತಮ್ಮನ ಮಗಳು ಅಕ್ಕಪಕ್ಕದ ಮನೆಯವರು, ನನ್ನ ತಂದೆ ತಾಯಿಗೆ ಆತ್ಮೀಯಳು, ಇಷ್ಟು ತಿಳಿಯಿತು.

ಅವರಿಬ್ಬರೂ ಬಂದ ಮೇಲೆ ಮನೆ ಬದಲಾಯಿತು. ಒಬ್ಬಳೆ ಕೂತು ಬೆಳಗಿನ ಉಪಹಾರ, ರಾತ್ರಿಯೂಟ ಮಾಡುತ್ತಿದ್ದ ನನಗೆ ಕಂಪನಿ ಸಿಕ್ಕಿತು. ಸಂಜೆ ಅವರಿಬ್ಬರೂ ಬಂದ ಮೇಲೆ ಮೂವರೊ ವಾಕಿಂಗ್, ಕೆಲವೊಮ್ಮೆ ಗಂಡ ಬಂದ ಮೇಲೆ ಡ್ರೈವರ್ ಜತೆ ಹತ್ತಿರದ ಮಾರುಕಟ್ಟೆಗೆ ಹೋಗುವುದು ಶುರುವಾಯಿತು. ಒಂದು ಭಾನುವಾರ ಪಿಕ್ಚರಿಗೂ ಹೋಗಿ ಬಂದೆವು. ಅವರಿಬ್ಬರಿಗೆ ಹೋಟೆಲೂಟ, ಅವಳಿಗೆ ಒಂದು ಸೀರೆ ಕೊಡಿಸಿದೆ, ಸಂತೋಷದಿಂದ ಉಬ್ಬಿ ಹೋದಳು. ಅವನು ಸಹ ಕಣ್ಣಲ್ಲೇ ಧನ್ಯವಾದಗಳನ್ನುಸಿರಿದ.

ನನ್ನ ಹಾಗು ನನ್ನ ಗಂಡನ ಯಾಂತ್ರಿಕ ಸಂಬಧದ ಬಗ್ಗೆ ಅವರಿಬ್ಬರು ಗಮನಿಸಿರಬಹುದು. ತನ್ನ ಪಾಡಿಗೆ ಗಂಡ ಟೀವಿಯ ಮುಂದೆ ಕುಳಿತ್ತಿದ್ದರೆ, ನಾವು ಮೂವರು ತಮಾಶೆ ಮಾಡುತ್ತಾ, ಊಟ ಮುಗಿಸುತ್ತಿದ್ದೆವು. ಆ ದಿನದ ಟ್ರೈನಿಂಗ್ ಬಗ್ಗೆ ಅವರಿಬ್ಬರೂ ಚರ್ಚೆ ಮಾಡುತ್ತಿದ್ದರೆ ನಾನು ಕೇಳುತ್ತಾ ಕೂಡುತ್ತಿದ್ದೆ. ಅವರಿಬ್ಬರ ತಾಂತ್ರಿಕ ತಿಳುವಳಿಕೆ ನನಗೆ ದಂಗು ಬಡಿಸಿತ್ತು. ಇಬ್ಬರ ಮನಸ್ಸಿನಲ್ಲೊ ಈ ಕೆಲಸದ ಬಗ್ಗೆ ಅಸಮಾಧಾನವಿದ್ದು, ಆದಷ್ಟು ಬೇಗ ತಮ್ಮದೇ ಆದ ಕಂಪನಿ ಶುರು ಮಾಡುವ ಕನಸಿದೆ ಎಂದೂ ತಿಳಿಯಿತು, ದುಡ್ಡು ಕಾಸಿಗೆ ಸಾಕಷ್ಟು ಪರದಾಡುತ್ತಿದ್ದರು. ಅಲ್ಲಿ ಊಟ ಕೊಟ್ಟರೂ, ಮನೆಗೆ ಬರುವಷ್ಟರಲ್ಲಿ ಸುಸ್ತಾಗಿ ನಾನು ಕೊಡುವ ತಿಂಡಿ ಕಾಫ಼ಿಯನ್ನು ಆಸೆಯಿಂದ ತಿನ್ನುತ್ತಿದ್ದರು. ಅದನ್ನು ನೋಡಿ ನನಗೆ ಬಹಳ ಖುಶಿಯಾಗುತ್ತಿತ್ತು. ನನ್ನ ಗಂಡ ಏನು ಕೊಟ್ಟರೂ ಸುಮ್ಮನೆ ತಿನ್ನುತ್ತಿದ್ದರು. ಆದ್ದರಿಂದ ಪ್ರತಿಯೊಂದಕ್ಕೂ ಸಂತಸ, ಮೆಚ್ಚುಗೆ ಸೂಚಿಸುತ್ತಿದ್ದ ಅವರಿಬ್ಬರು ನನಗೆ ಅಚ್ಚುಮೆಚ್ಚಾದರು.

ಅವರು ಬಂದು ಸುಮಾರು ೧೦ ದಿನಗಳಾಗಿರಬಹುದು. ಆಫ಼ೀಸಿನಿಂದ ಬಂದ ಸದಾಶಿವ ತಕ್ಷಣ ತಾಯಿಯನ್ನು ನೋಡಲು ಹೋಗುತ್ತಿರುವೆ, ಅವರ ಆರೋಗ್ಯ ಹದಗೆಟ್ಟಿದೆ, ಆಶ್ರಮದವರು ಬರ ಹೇಳಿದ್ದಾರೆ ಎಂದು ಬಟ್ಟೆ ಬರೆ ಜೋಡಿಸಲು ತೊಡಗಿದರು. ಅವರ ಕಣ್ಣಲ್ಲಿ ಮೊದಲ ಬಾರಿಗೆ ಹನಿ ಹಾಗು ಮುಖದಲ್ಲಿ ವೇದನೆ ಕಂಡೆ.” ನಮಗೆ ಮಕ್ಕಳಿದ್ದರೆ ಅಮ್ಮ ನಮ್ಮನೇಗೆ ಬಂದಿರುತ್ತಿದ್ದಳೋ ಏನೊ. ಎಲ್ಲರೊಂದಿಗೆ ಸಂಪರ್ಕ ಕಡೆದುಕೊಂಡು ಬಿಟ್ಟಳು” ಅವರಷ್ಟಕ್ಕೆ ಅವರು ಗೊಣಗುತ್ತಿದ್ದು ಕೇಳಿಸಿತು. ” ನಾನು ಬರಲೇ?” ಎಂದು ಕೇಳಿದ್ದಕ್ಕೆ ನಕಾರಾತ್ಮಕವಾಗಿ ತಲೆ ಆಡಿಸಿದರು.” ಅಲ್ಲಿ ವಿಷಯ ತಿಳಿದು ಕರೆ ಮಾಡುವೆ, ನೋಡೊಣ” ಎಂದು ನನ್ನ ತಲೆ ಸವರಿ ಹೊರಟಾಗ ಅಚ್ಚರಿ. ಬೇಕಾದಷ್ಟು ಸಲ ಕೆಲಸದ ಮೇಲೆ ಹೋದಾಗ ನನ್ನನ್ನು ಒಬ್ಬಳೇ ಬಿಟ್ಟು ಹೋಗಿದ್ದಾರೆ, ಏನಿದು ಹೊಸ ಪರಿ?

ಇದಾದ ಎರದು ದಿನಗಳ ನಂತರ. ಮಧ್ಯಾನ್ಯ ೩ ಗಂಟೆಯ ಸಮಯ. ಮಜ್ಜಿಗೆ ಹುಳಿ, ಸಾರು, ತೊವ್ವೆಯ ಗಡದ್ದು ಊಟ ಮುಗಿಸಿ ಹಾಗೆ ಹಾಸಿಗೆಯ ಮೇಲೆ ಅಡ್ಡಾಗಿದ್ದೆ. ಬೆಲ್ ಬಾರಿಸಿದಾಗ ಅಚ್ಚರಿಯಿಂದ ಬಾಗಿಲು ತೆಗೆದೆ. ಯಾರೇ ಹೊರಗಿನವರು ಬಂದರೆ ಸೆಕ್ಯೂರಿಟಿ ಕರೆ ಮಾಡಿ ಕಳುಹಿಸಲು ಅಪ್ಪಣೆ ಕೇಳುವರು. ಯಾರಪ್ಪಾ? ಎಂದು ತೆಗೆದರೆ ಸಾಗರ್. ಒಳ ಬಂದು ಸೋಫ಼ಾ ಮೇಲೆ ಕುಳಿತ. ” ನಿಮ್ಮನ್ನು ನಾನು ಬಹಳ ಮೆಚ್ಚಿದ್ದೀನಿ. ಭೇಟಿ ಆದಾಗಲಿಂದ ನನ್ನ ಮನಸ್ಸು ಕದಡಿ ಹೋಗಿದೆ. ಇಲ್ಲ, ಪ್ಲೀಸ್, ನನ್ನ ಮಾತು ಕೇಳಿ, ವಯಸ್ಸು, ನಮ್ಮ ಜತೆಗಾರರು, ಇವೆಲ್ಲಾ ಈಗ ಬೇಡ. ನನಗೆ ನಿಮ್ಮ ಪ್ರೀತಿ, ಸಂಗಾತಿತನ ಬೇಕು…….” ಏನೇನೋ ಹೇಳುತ್ತಲೇ ಇದ್ದ. ತಲೆ ಸುತ್ತಲು ಪ್ರಾರಂಭವಾಗಿ ನನ್ನ ರೂಮಿಗೆ ಹೋಗಿ ಕದವಿಕ್ಕಿದೆ. ಅವನು ಯಾವಾಗ ಹೊರಟನೋ ಗೊತ್ತಿಲ್ಲ.

ಅವನ ಆಶಾಳ ಪ್ರೀತಿಯನ್ನುನಾನು ಕಂಡಿದ್ದೆ. ನಾನು ಸದಾಶಿವ ಮದುವೆಯಾದ ಹೊಸದರಲ್ಲಿ ಹೀಗಿದ್ದೆವಾ ಎಂದು ನೆನಪಿಸಿಕೊಳ್ಳಲು ಪ್ರಯತ್ನಿಸಿದ್ದೆ. ಅವರಿಬ್ಬರ ಕುಡಿನೋಟ ವಿನಿಮಯಗಳು, ರೇಗಿಸುವಿಕೆಗಳು, ಮೆಲ್ಲಗೆ ಕೈ ಹಿಡಿಯುವುದು, ರಾತ್ರಿ ರೂಮಿನಿಂದ ಪಿಸುಮಾತುಗಳು, ಮೆಲುನಗೆ, ಇದೆಲ್ಲಾ ಸುಳ್ಳಾ? ಅಥವಾ ಈಗ ಬಂದು ಹೋದದ್ದು ಕನಸಾ? ಸಂಜೆ ಇಬ್ಬರೂ ಒಟ್ಟಿಗೆ ಬಂದರು. ಮುಖದಲ್ಲಿ ವಿಪರೀತ ದಣಿವಿತ್ತು. ಆಶಾಳ ಮುಖ ಅವಳಿಗೆಲ್ಲಾ ಗೊತ್ತಾಗಿದೆಯೆಂದು ಸಾರಿ ಹೇಳುತ್ತಿತ್ತು. ಅವನು ನನ್ನ ಬಳಿ ಮಾತಾಡಿದ್ದು ನನ್ನ ದುಡ್ಡಿಗೋಸ್ಕರವಾ? ನಾನು ಹಣವಂತೆ, ಮಕ್ಕಳಿಲ್ಲ, ನನ್ನ ಹಾಗು ನನ್ನ ಗಂಡನ ಮಧ್ಯೆ ಜಾಸ್ತಿ ಇರುವುದು ಮೌನ, ಇದನೆಲ್ಲಾ ಗಮನಿಸಿ ಇವರಿಬ್ಬರೂ ಹೂಡಿದ ಜಾಲವೇ? ಅಥವಾ…..? ಇಬ್ಬರ ಮುಂದೆ ಕಾಫ಼ಿ ಲೋಟಗಳನಿಟ್ಟೆ. ತಿಂಡಿ ಮಾಡಿರಲಿಲ್ಲ. ಗಂಭೀರವಾಗಿ ನುಡಿದೆ” ನಾನು ರಾತ್ರಿ ನನ್ನತ್ತೆಯನ್ನು ನೋಡಲು ಹೋಗುತ್ತಿದ್ದೇನೆ. ನಿಮ್ಮಿಬ್ಬರಿಗೂ ಮುಂದಿನ ೧೫ ದಿನ ಓಯೋ ರೂಮಿನಲ್ಲಿ ಬುಕ್ ಮಾಡಿದ್ದೇನೆ. ದುಡ್ಡೂ ಕಟ್ಟಿರುವೆ, ನೀವು ಆದಷ್ಟು ಬೇಗ ಸಾಮಾನು ಜೋಡಿಸಿಕೊಂಡರೆ ವಾಸಿ”
ಮುಂದೆ ಮಾತಾಡಲು ಆಸ್ಪದ ಕೊಡದಂತೆ ರೂಮಿಗೆ ನಡೆದೆ.

-ಸಹನಾ ಪ್ರಸಾದ್


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x