ಆ ಬೆಳದಿಂಗಳ ರಾತ್ರಿಯಲಿ ಒಂಟಿತನ: ಪದ್ಮಾ ಭಟ್


ಅದೊಂದು ಸುಂದರ ಬೆಳದಿಂಗಳ ರಾತ್ರಿ.. ತಂಪು ತಂಗಾಳಿ ಎದೆಗೆ ಸೋಕಿರಲು ಕನಸುಗಳ ಪದಗುಚ್ಚವುಕವಲೊಡೆದು ಬಂದಿತು.ನಕ್ಷತ್ರಗಳನ್ನು ಎಣಿಸುತ್ತಾ ಎಣಿಸುತ್ತ ಚಂದಿರನ ನಗೆಯನು ನೋಡುತ್ತಿದ್ದೆ. ಭಾವನೆಗಳ ಹೊಸ್ತಿಲು ನೆಲಕೆ ತಾಕದಂತೇ ಹಾರುತಿರಲು ಮನಸಿಗೆ ಮುದ ನೀಡುವ ಬಚ್ಚಿಟ್ಟ ನವಿಲುಗರಿ. ಆಗಲೇ ಕಾಡುವಒಂಟಿತನ. ಕೆಲವೊಂದು ಸಮಯಕ್ಕೆ, ಯೋಚನೆಗಳಿಗೆ ಆಸ್ಪದ ನೀಡುವ ಒಂಟಿತನ. ಆ ಒಂಟಿತನವು ಕೆಲವು ಬಾರಿಅತ್ಯಂತ ಖುಷಿಯನ್ನುಕೊಡುತ್ತದೆ.ಕನಸುಗಳ ಲೋಕಕ್ಕೆ ಒಬ್ಬಂಟಿಯಾಗಿರುವಾಗ ಮಾತ್ರ ಹೋಗಲು ಸಾಧ್ಯ. ಕನಸೇ ಬದುಕನ್ನು ನನಸೆಂದು ಮಾಡುವೆ ಎಂದು ಕೇಳಿಕೊಳ್ಳಲು ಅವಕಾಶ ನೀಡುವುದು. ಬೇಕಾದ ಹಾಗೆ ತಿರುಗಿಸಿ ಒಂದು ಆಕಾರವನ್ನು ಹೆಣೆಯ ಬೇಕೆಂದು ಚಂದಿರನನ್ನು ನೋಡುತ್ತ ಒಬ್ಬನೇ ಕೂತುಬಿಟ್ಟೆ. ರಾಯರು ಬಂದರು ಹಾಡೇಕೋ ನೆನಪಾಗತೊಡಗಿತು. ಮುಂಬಾಳ ಸವಿಗನಸನು ಕಟ್ಟಲು ಆ ಹುಣ್ಣಿಮೆಯ ಚಂದಿರನೂ ಬೆಳಕ ನೀಡಿ ನಸುನಕ್ಕನು..ಅದೇ ಬೆರಗಾಗಿ ಸಾಗಿದಷ್ಟೂ ಕಂಗಳು ಮಿಟಿಮಿಟಿಸುತ್ತ ಪೃಕೃತಿಯ ಸುಂದರತೆಯಲ್ಲಿ ತಲ್ಲೀನವಾಗಿತ್ತು. ಒಂದು ಕವನವನ್ನು ಬರೆಯೋಣವೆಂದರೆ ಪದಗಳ ಸಂಖ್ಯೆಯೇ ಮಿತಿಗೆ ತಾಕದಲ್ಲ. ಸಣ್ಣಗೆ ಬೀಳುತಿರುವ ತುಂತುರು ಮಳೆಯಲ್ಲಿ ’ತುಂತುರು ಅಲ್ಲಿ ನೀರ ಹಾಡು, ಕಂಪನಾ ಇಲ್ಲಿ ಪ್ರೀತಿ ಹಾಡು’ ಎಂಬ ಹಾಡನ್ನು ಗುನುಗುನಿಸುತ್ತಿತ್ತು ಮನಸ್ಸು. ಮಿಂಚಿನ ಒಂದು ಬೆಳಕು ಮನದಲ್ಲಿ ಮಿಂಚನ್ನು ಬರಿಸದಿದ್ದರೂ ದೂರದಲ್ಲಿರುವ ಮಿಂಚನ್ನಾದರೂ ನೋಡಿ ಖುಷಿ ಪಟ್ಟಂತೆ ಮಾಡಿತ್ತು..ಒಂಟಿತನವೆಂಬುದು ಮನಸ್ಸನ್ನುಜೊತೆಗೆ ಕಾಡಿಸಿ,  ಕೇಳಿಸಿ, ಎಂದೋ ಓದಿದ ನಗೆಹನಿ ನಕ್ಕು ನಕ್ಕು ಒಬ್ಬನೇ ನಗುವವರಿಗೆ ಅದೇನೋ ಹೆಸರನ್ನು ಹೇಳುತ್ತಾರಂತಲ್ಲ ಹಾಗೇ ಆಗಿತ್ತು ನನ್ನ ಪರಿಯು. ಕತ್ತಲೆಯಲ್ಲಿ ಬೆಳಕನು ಸಣ್ಣಗೆ ಹುಡುಕಿ ಅಮ್ಮ ಹಚ್ಚಿದೊಂದು ಹಣತೆ ಹೃದಯದಲ್ಲಿ ಬೆಳಗಿದಂತೆ, ಮನಕೆ ಮಬ್ಬು ಕವಿಯದಂತೆ ಸದಾ ಕಾದಂತೆಯಾವುದೋ ಹಾಡು ಬೆಳಕಿನ ನಿಲುವಿನೆಡೆ ಸರಿಯುತ್ತಿತ್ತು. ಒಂಟಿತನದ ಸೋನೆ ಮಳೆಯು ಹೃದಯವನ್ನು ತೋಯದಂತೇ ಸಹಕರಿಸಿತ್ತು.

ಸಮಯ ಇನ್ನೂ ಹತ್ತಾದರೂ ಆ ಒಂಟಿತನದ ಬೆಚ್ಚನೇಯ ಕನಸುಗಳಲ್ಲಿ ನೆಚ್ಚಿತೊಂದು ಹಲವು ಆಸೆಗಳು. ಬೇಕು ಬೇಡಗಳು, ಖುಷಿ ದುಃಖಗಳು, ಎಲ್ಲವೂ ಚೌಚೌ ಬಾತಿನಂತೆ ಮಿಕ್ಸ್ ಆಗಿ ಇನ್ನೊಂದಿಷ್ಟು ಯೋಚನೆಗಳಿಗೆ ಎಡೆಮಾಡಿಕೊಟ್ಟಿತ್ತು..ಒಂಟಿತನದಲ್ಲಿ ಇಷ್ಟೊಂದು ಹಿತವಿದೆಯಾ? ಎಂದಿಗೂ ಎಲ್ಲರೂ ಹೆದರುವ, ಮಾನಸಿಕ ಸ್ಥಿತಿಯನ್ನು ಕುಗ್ಗಿಸುವ ಒಂಟಿತನಕ್ಕೂ ತನ್ನದೇ ಆದ ಭಾವಗಳಿವೆ. ಹೊಸ ಕನಸುಗಳನ್ನು ಕಾಣಿಸುತ್ತ, ಮನಸ್ಸಿನ ಜೊತೆಗೆ ನಾವೇ ಮಾತನಾಡಿಕೊಳ್ಳುತ್ತ, ಬದುಕಿನ ಬೆಚ್ಚು ಬೆರಗಾಗು ಅದೆಷ್ಟೋ ಭರವಸೆಗಳನ್ನು ಹೆಚ್ಚಿಸುತ್ತ ಹೋಗುತ್ತಿದ್ದರೆ ಸಮಯ ಹೋಗುವುದೇ ತಿಳಿಯುವುದಿಲ್ಲ. ಒಂಟಿತನಕ್ಕೆ ಮೂಲೆಯಲ್ಲಿ ಕುಳಿತು ನೆಗೆಟೀವ್ ಆಗಿ ಯೋಚನೆ ಮಾಡುವ ಅಗತ್ಯಗಳಿಲ್ಲ. ಅದೇ ಒಂಟಿತನದಲ್ಲಿ ಯೋಚನೆಗಳನ್ನು ಹುಟ್ಟಿಸುವ ಅದ್ಭುತ ಶಕ್ತಿಯಿದೆ. ಅರ್ಧಮಾಡಿಟ್ಟ ಕೆಲಸಗಳನ್ನು ಪೂರ್ತಿಗೊಳಿಸುವ ಸಾರವಿದೆ. ಬೇಕು ಎಂದೆನಿಸಿದ ಕನಸುಗಳನ್ನು ಕಾಣಲು ಸ್ವತಂತ್ರ್ಯವಿದೆ. ನಮ್ಮ ಪ್ರೀತಿ ಪಾತ್ರದವರ ಬಗೆಗೆ ಯೋಚಿಸುವ ಸಮಯವನ್ನು ಮೀಸಲಿಡಿಸಬೇಕಾಗಿದೆ. ನಮ್ಮೊಂದಿಗೆ ಬೆರೆಯುವ ಮನಸ್ಸಿಗೆ ಸಾಂತ್ವನ ನೀಡುವ ಬಗ್ಗೆ, ಖುಷಿಯನು ಆರದಂತೆ ನೋಡಿಕೊಳ್ಳುವ ಬಗ್ಗೆ ಒಂಟಿಯಾಗಿ ಯೋಚಿಸಲೇಬೇಕು..

ಒಂಟಿತನದಲ್ಲಿ ಅದೆಷ್ಟು ನಂಟುಗಳು.. ಪ್ರಕೃತಿಯ ಬೆರಗೇ ಸಾಕಿತ್ತು..ಮನಸಿನಾಳದ ಕನಸಿನ ಚಂದದ ಮೆರಗಿಗೆ..ಗುರಿಮುಟ್ಟದ ದೂರದೂರಿನ ಹತ್ತಾರು ಬಯಕೆಗಳಿಗೆ. ಎಲ್ಲವೂ ಗೊತ್ತಿದ್ದರೂ ಅದೆಷ್ಟೋ ಬಾರಿ ಪ್ರತಿಭಟಿಸದಿರುವ ಪುಕ್ಕಲು ಮನಸ್ಸಿಗೆ.. ಒಂಟಿತನವೆಂಬುದು ವರವೋ ಶಾಪವೋ ಎಂದು ಯೋಚಿಸಿದಷ್ಟೂ, ಕೈಗೆಟುಗದ ಉತ್ತರಗಳು.. ಎಲ್ಲಾ ಪ್ರಶ್ನೆಗೂ ಉತ್ತರವಿಲ್ಲವೇನೋ.. ಒಂದು ಉತ್ತರದ ಕೊನೆಯಲ್ಲಿಯೇ ಮತ್ತಷ್ಟು ಪ್ರಶ್ನೆಗಳು ಉದ್ಭವಿಸುವುದು ನಿಜವೇ. ಬೆಳದಿಂಗಳೆಂಬ ಸುಂದರ ರಾತ್ರಿಯ ಬೆನ್ನಿನಲ್ಲೇ , ಅದರ ಕೊನೆಯೂ ಬಂದುಬಿಡುತ್ತದೆಯೆಂಬ ಕಟು ಸತ್ಯವನ್ನು ಅರ್ಥಮಾಡಿಕೊಳ್ಳುವುದೆಂದು. ಒಂಟಿತನದಲ್ಲಿ ಮೂಡುವ ಕನಸಿಗೆ, ಬೆರಗಿಗೆ, ಹೆಣೆದಿಟ್ಟ ಎತ್ತರದ ಗೋಪುರದಿ ಕೆಲವು ಸಮಯವಾದರೂ ನಮ್ಮೊಬ್ಬರ ಜೊತೆಗೆ ನಾವು ಮಾತನಾಡಿಕೊಳ್ಳುವುದಂತೂ ನಿಜ. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x