ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ (ಅವಲೋಕನ-೫): ಅಖಿಲೇಶ್ ಚಿಪ್ಪಳಿ

ಮುಂದುವರೆದಿದೆ. . .

ಮಾಧವ ಗಾಡ್ಗಿಳ್ ವರದಿ: ಸುಸ್ಥಿರ ಅಭಿವೃದ್ಧಿ-ಚಿಂತನಾಯುಕ್ತ ಸಂರಕ್ಷಣೆ: ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಕೇದ್ ತಾಲ್ಲೂಕಿನಲ್ಲಿ ಮಹಾರಾಷ್ಟ್ರ ಕೈಗಾರಿಕ ಅಭಿವೃದ್ದಿ ನಿಗಮವಿದೆ. ಇಲ್ಲಿ ಭರಪೂರ ರಾಸಾಯನಿಕ ಕೈಗಾರಿಕೆಗಳಿವೆ. ನೆರೋಲ್ಯಾಕ್, ಹಿಂದೂಸ್ತಾನ್ ಲಿವರ್, ರತ್ನಗಿರಿ ಕೆಮಿಕಲ್ಸ್ ಹೀಗೆ ಹತ್ತು ಹಲವು ವಿಷಕಕ್ಕುವ ಕಾರ್ಖಾನೆಗಳಿವೆ. ಈ ತರಹದ ಕಾರ್ಖಾನೆಗಳಿಂದ ಸಾಮಾನ್ಯ ಜನರಿಗೆ ತೊಂದರೆಯಾಗದಿರಲೆಂದು ಅಲ್ಲಿನ ಸರ್ಕಾರ ೨೦೦೬ರಲ್ಲಿ ಲೋಟೆ ಅಭ್ಯಾಸ್ ಗಾತ್ ಎಂಬ ಕಾರ್ಖಾನೆಗಳ ಮೇಲ್ವಿಚಾರಣೆ ಅಧ್ಯಯನ ತಂಡವನ್ನು ರಚಿಸಿತು. ಈ ಸಮಿತಿಯು ಕಾಲ-ಕಾಲಕ್ಕೆ ತನ್ನ ವರದಿಯನ್ನು ಮಹಾರಾಷ್ಟ್ರ ವಾಯುಮಾಲಿನ್ಯ ನಿಯಂತ್ರಣ ಮಂಡಲಿಗೆ ತಿಳಿಸಬೇಕಿತ್ತು. ಕಳೆದ ಎಂಟು ವರ್ಷಗಳಿಂದ ಇವರು ಯಾವುದೇ ಸಭೆಯನ್ನು ಕರೆದಿಲ್ಲ. ಸ್ಥಳೀಯರ ಅಹವಾಲು ಕೇಳಿಲ್ಲ. ಮಾಲಿನ್ಯ ನಿಯಂತ್ರಣಕ್ಕೆ ಕಡಿವಾಣ ಹಾಕುವಲ್ಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ದಾಖಲೆಗಳಲ್ಲಿ ಮಾತ್ರ ಈ ಸಮಿತಿ ಜೀವಂತವಾಗಿದೆಯಷ್ಟೆ. ೫/೧೦/೨೦೧೦ರಂದು ಗಾಡ್ಗಿಳ್ ಸಮಿತಿಯು ಮುಂಬೈನಲ್ಲಿ ಸಭೆ ಕರೆದಿತ್ತು. ಲೋಟೆ ಅಭ್ಯಾಸ್ ಗಾಟ್ ಸಮಿತಿಯ ಅಧ್ಯಕ್ಷರು ರತ್ನಗಿರಿ ಜಿಲ್ಲೆಯ ಜಿಲ್ಲಾಧಿಕಾರಿಗಳು. ಕೇದ್ ತಾಲ್ಲೂಕಿನ ಕೊತೆಯಾಲ ಗ್ರಾಮದಲ್ಲಿರುವ ವಿಷಕಾರಿ ಕಾರ್ಖಾನೆಗಳ ಮಾಲಿನ್ಯ ಕುರಿತು ವಿಚಾರಿಸಿದಾಗ ಅಲ್ಲಿ ಯಾವುದೇ ತರಹದ ಮಾಲಿನ್ಯವಿಲ್ಲ ಎಲ್ಲಾ ಸರಿಯಿದೆ ಎಂಬ ಉತ್ತರ ಬಂತು. ಆದರೆ, ಖುದ್ದು ಗಾಡ್ಗಿಳ್ ಸಮಿತಿ ಸ್ಥಳ ಪರಿಶೀಲನೆ ಮಾಡಿದಾಗ ಆಘಾತಕಾರಿ ಸತ್ಯ ಹೊರಬಿತ್ತು. ಹಲವು ಬಾರಿ ದೂರು ನೀಡಿದರೂ ಮಾಲಿನ್ಯ ನಿಯಂತ್ರಣಕ್ಕೆ ಕಡಿವಾಣ ಹಾಕಲು ವಿಫಲವಾದ ಹಿನ್ನೆಲೆಯಲ್ಲಿ ಆ ಗ್ರಾಮದ ಸರಪಂಚ ಹರಿಯುವ ಹೊಳೆಯ ನೀರನ್ನು ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ, ತಕ್ಷಣ ಅವನನ್ನು ಮುಂಬೈ ಆಸ್ಪತ್ರೆಗೆ ಸೇರಿಸಲಾಯಿತು. ಕಾರ್ಖಾನೆಗಳ ನೀರು ಆ ಗ್ರಾಮದ ಜನ ಉಪಯೋಗಿಸುವ ಹೊಳೆಗೆ ಹರಿ ಬಿಡಲಾಗುತ್ತಿತ್ತು. 

ಕಲುಷಿತ ನೀರನ್ನು ಸಂಸ್ಕರಿಸುವ ಘಟಕ ಕೆಲಸ ಮಾಡುತ್ತಿರಲಿಲ್ಲ. ಎಲ್ಲಾ ತರಹದ ವಿಷಕಾರಿ ರಾಸಾಯನಿಕಗಳನ್ನು ಹಾಗೆಯೇ ಹರಿಯ ಬಿಡಲಾಗಿತ್ತು. ದಾಬೋಲ್ ನದಿಯನ್ನು ನಂಬಿಕೊಂಡ ಸುಮಾರು ೨೦ ಸಾವಿರ ಮೀನುಗಾರರು ಕೆಲಸವಿಲ್ಲದೆ ಕುಳಿತ್ತಿದ್ದರು. ಆ ನದಿಯಲ್ಲಿನ ಜಲಚರಗಳು ನಾಮಾವಶೇಷವಾಗಿದ್ದವು. ಕೆಲವು ಕಾರ್ಖಾನೆಗಳು ಕಲುಷಿತ ನೀರನ್ನು ಬೋರ್‌ವೆಲ್ ಮೂಲಕ ಅಂತರ್ಜಲಕ್ಕೆ ಸೇರಿಸುವ ಕಾರ್ಯವನ್ನೂ ಮಾಡಿದ್ದರು. ವಿಷಕಾರಿ ಘನತ್ಯಾಜ್ಯಗಳು ಕೆರೆ-ಕಟ್ಟೆಗಳನ್ನು ಮುಚ್ಚಿ ಹಾಕಿದ್ದವು. ಇಲ್ಲಿ ಉತ್ಪಾದಿಸಲಾಗುವ ಉತ್ಪನ್ನಗಳು ಅಮೇರಿಕಾ ಮತ್ತು ಯೂರೋಪ್ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ. ಇಲ್ಲಿನ ಜನರ ಬದುಕನ್ನು ಕಸಿದುಕೊಂಡ ಕಂಪನಿಗಳು ರಫ್ತು ವಹಿವಾಟಿನಲ್ಲಿ ಕೋಟಿಗಟ್ಟಲೆ ಗಳಿಸಿದ್ದರು. ಕೇದ್ ನಗರದ ಕುಡಿಯುವ ಬೋರಜ್ ಡ್ಯಾಂಗೂ ವಿಷತ್ಯಾಜ್ಯವನ್ನು ಸುರಿಯಲಾಗಿತ್ತು. ಇದರಿಂದಾಗಿ ಅಲ್ಲಿನ ನಗರಸಭೆಗೆ ಹಲವು ದಿನಗಳವರೆಗೆ ಕುಡಿಯುವ ನೀರನ್ನು ಪೂರೈಸಲಾಗಲಿಲ್ಲ.

ಕರ್ನಾಟಕದ ಬಿಳಿಗಿರಿರಂಗಯ್ಯನ ಬೆಟ್ಟದಲ್ಲಿ ಸೋಲಿಗರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಲಾಗಾಯ್ತಿನಿಂದ ಇವರು ಬೇಟೆ ಮತ್ತು ಪಲ್ಲಟ ಕೃಷಿಯಲ್ಲಿ ತೊಡಗಿದ್ದವು. ಇವರ ಕೃಷಿರೀತಿಯೆಂದರೆ, ವರ್ಷದಿಂದ ವರ್ಷಕ್ಕೆ ಕೃಷಿಭೂಮಿಯನ್ನು ಬದಲಾಯಿಸುತ್ತಾ ಸಾಗುವುದು. ಇದರಿಂದ ಅಲ್ಪ ಪ್ರಮಾಣದ ಕಾಡು ನಾಶವಾಗುತ್ತಿತ್ತು. ಈ ಸಂದರ್ಭದಲ್ಲಿ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರವೆಂಬ ಸ್ವಯಂಸೇವಾ ಸಂಸ್ಥೆ ಇವರ ನೆರವಿಗೆ ಬಂತು. ಕಾಡನ್ನು ನಾಶ ಮಾಡದೇ ಕಾಡಿನಲ್ಲಿ ವಾಸಿಸುವ ಹೊಸತಂತ್ರದ ಆವಿಷ್ಕಾರವಾಯಿತು. ಅಪಾರ ಪ್ರಮಾಣದಲ್ಲಿ ಸಿಗುವ ನೆಲ್ಲಿಕಾಯಿಯನ್ನು ಸಂಗ್ರಹಿಸಿ, ಸಂಸ್ಕರಿಸಿ, ನೇರ ಮಾರುಕಟ್ಟೆ ಮಾಡುವ ವಿಧಾನ ಚಾಲ್ತಿಗೆ ಬಂತು. ಇದರಿಂದ ಸೋಲಿಗರ ಆದಾಯ ಗಣನೀಯವಾಗಿ ಹೆಚ್ಚಾಯಿತು. ಜೇನು ಸಂಗ್ರಹ ಮತ್ತು ಇತರೆ ಕಾಡಿನ ಕಿರುಉತ್ಪನ್ನಗಳಿಗೂ ಮಧ್ಯವರ್ತಿಗಳಿಲ್ಲದ ಕಾರಣಕ್ಕೆ ಉತ್ತಮ ಬೆಲೆ ಸಿಗಲಾರಂಭಿಸಿತು. ಈಗ ಸೋಲಿಗರು ಹೆಚ್ಚು ನೆಮ್ಮದಿಯಿಂದ ಬದುಕಲಾರಂಭಿಸಿದರು. ಬೇಟೆ ಮತ್ತು ಕೃಷಿ ಚಟುವಟಿಕೆಗಳು ಗಣನೀಯವಾಗಿ ಕಡಿಮೆಯಾಯಿತು. ತನ್ಮಧ್ಯೆ ಈ ಪ್ರದೇಶವನ್ನು ವನ್ಯಜೀವಿ ಸಂರಕ್ಷಣಾ ಕೇಂದ್ರವಾಗಿ ಪರಿವರ್ತಿಸಲಾಯಿತು. ೨೦೦೬ರಿಂದ ಅರಣ್ಯ ಇಲಾಖೆ ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸುವುದಕ್ಕೆ ಕಟ್ಟುನಿಟ್ಟಾದ ನಿಷೇಧ ಹೇರಿ ಅಕ್ಷರಷ: ಸೋಲಿಗರನ್ನು ನಿರಾಶ್ರಿತರನ್ನಾಗಿ ಮಾಡಿದೆ. ಸಾವಿರಾರು ವರ್ಷಗಳಿಂದ ಕಾಡಿನಲ್ಲೆ ತಮ್ಮ ಬದುಕನ್ನು ಕಂಡುಕೊಂಡಿದ್ದ ಸೋಲಿಗರ ಬದುಕು ಅಸಹನೀಯವಾಗಿದೆ. ಅನಾಥವಾದ ಹಲವು ಕುಟುಂಬಗಳು ಕೆಲಸಗಳನ್ನು ಹುಡುಕಿಕೊಂಡು ದೂರದ ಕಾಫಿ ಎಸ್ಟೇಟ್‌ಗಳಿಗೆ ವಲಸೆ ಹೋದರು. ಇನ್ನು ಕೆಲವರು ತಮಿಳುನಾಡು ಕಡೆ ಗುಳೆ ಹೋದರು. ಇನ್ನು ಕೆಲವರು ಕೇರಳ, ಕೊಡಗು ಹೀಗೆ ಚದುರಿದರು. ಬರೀ ಅರಣ್ಯ ಉತ್ಪನ್ನಗಳಿಂದಲೇ ಜೀವನ ನಿರ್ವಹಣೆ ಮಾಡುತ್ತಿದ್ದ ಐತಿಹಾಸಿಕ ಜನಾಂಗವನ್ನು ಸರ್ಕಾರ ಕಾನೂನಿನಡಿಯಲ್ಲಿ ನಿರಾರ್ಶಿತರನ್ನಾಗಿಸಿತು. 

ಮೇಲಿನ ಎರಡೂ ಉದಾಹರಣೆಗಳು ಆಳುವವರ ದೌರ್ಜನ್ಯದ ಪರಮಾವಧಿಯನ್ನು ಎತ್ತಿ ತೋರಿಸುತ್ತದೆ. ಅಭಿವೃದ್ಧಿಯೆಂಬ ನೆಪದಲ್ಲಿ ಕೇದ್ ತಾಲ್ಲೂಕಿನ ಜನರ ಬದುಕು ಅಸಹನೀಯವಾಯಿತು. ಹಾಗೆಯೇ ಸಂರಕ್ಷಣೆಯ ಹೆಸರಿನಲ್ಲಿ ಸೋಲಿಗರ ಬದುಕು ಮೂರಾಬಟ್ಟೆಯಾಯಿತು. 

ಇಲ್ಲಿ ಸಹನಿರ್ವಹಣೆ ಅಳವಡಿಕೆ ಎಂಬ ಸೂತ್ರವನ್ನು ಅನುಸರಿದ್ದರೆ ಈ ಮೇಲಿನ ೨ ಉದಾಹರಣೆಗಳು ದುರಂತಮಯವಾಗುತ್ತಿರಲಿಲ್ಲ.  ರಾಸಾಯನಿಕ ವಿಷಗಳನ್ನು ಉತ್ಪನ್ನ ಮಾಡುತ್ತಿರುವ ಬಲುದೊಡ್ಡ ಕಂಪನಿಗಳು ಅಲ್ಲಿನ ಸ್ಥಳೀಯ ಅಧಿಕಾರಿಗಳನ್ನು ಓಲೈಸಿಕೊಂಡು ಅಲ್ಲಿನ ಜನರ ಹಾಗು ಮೀನುಗಾರರ ಬದುಕನ್ನು ಕಸಿದುಕೊಂಡರು. ಕಾನೂನು ರೂಪಿಸುವುದು ಸಂಸತ್ತಿನಲ್ಲಾದರೂ, ಅದರ ಅನುಷ್ಠಾನವನ್ನು ಸ್ಥಳೀಯ ಆಡಳಿತಗಳೇ ನಿರ್ವಹಣೆ ಮಾಡಬೇಕು. ಕಾನೂನಿನ ಯಶಸ್ವಿ ಜಾರಿ ಮಾಡಿದ್ದರೆ ಸಮಸ್ಯೆ ಸೃಷ್ಟಿಯಾಗುತ್ತಿರಲಿಲ್ಲ. ಬಿಳಿಗಿರಿರಂಗಯ್ಯನ ಬೆಟ್ಟದ ಸೋಲಿಗರ ವಿಷಯದಲ್ಲೂ ಅಷ್ಟೆ ಅವರನ್ನು ಕಾಡಿನಿಂದ ಬೇರ್ಪಡಿಸಿ ನೋಡುವುದಕ್ಕಿಂತ, ಕಾಡಿನ ಭಾಗವಾಗಿ ನೋಡಿದ್ದರೆ, ಅವರು ತಮ್ಮ ಮೂಲಸ್ಥಾನವನ್ನು ಬಿಟ್ಟು ವಲಸೆ ಹೋಗಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲ. ಇಲ್ಲಿ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರವು ಹಲವು ವರ್ಷಗಳ ಶ್ರಮದಿಂದ ಕಾಡು ಹಾಗೂ ಸೋಲಿಗರ ನಡುವೆ ಸಮನ್ವಯತೆಯನ್ನು ಅಭಿವೃದ್ಧಿಗೊಳಿಸಿತ್ತು. ಸರ್ಕಾರಗಳು ಇದೇ ತರಹದ ಪರಿಸರ ಹಾಗೂ ಸಮಾಜಮುಖಿಯಾದ ಆರ್ಥಿಕ ಅಭಿವೃದ್ದಿಯನ್ನು ಮಾಡಬೇಕಾಗಿದೆ. ಸಹನಿರ್ವಹಣೆ ಎಂಬ ಸೂತ್ರವನ್ನು ಅಳವಡಿಸಿದಲ್ಲಿ ಈ ಕ್ರಮ ಪರಿಣಾಮಕಾರಿಯಾಗಬಲ್ಲದು.

ಕಸ್ತೂರಿರಂಗನ್ ವರದಿ: ಪಶ್ಚಿಮಘಟ್ಟಗಳ ಪ್ರಾಮುಖ್ಯತೆ ಹಾಗೂ ಪ್ರಸ್ತುತ ಪರಿಸ್ಥಿತಿಯಲ್ಲಿ ಘಟ್ಟಪ್ರದೇಶದಲ್ಲಿ ಆಗುತ್ತಿರುವ ವಿಪ್ಲವಗಳು, ಜನಸಂಖ್ಯೆ ಹೆಚ್ಚಳದಿಂದ, ಅಭಿವೃದ್ಧಿಗಾಗಿ ನಾಶವಾಗುತ್ತಿರುವ ಜಗತ್ತಿನ ಅತಿಮುಖ್ಯ ಈ ಪ್ರದೇಶದ ಅವನತಿಯನ್ನು ತಡೆಯಲು ಅನುಸರಿಸಬೇಕಾದ ತುರ್ತುಕ್ರಮಗಳ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಮಾಧವ ಗಾಡ್ಗಿಳ್ ಸಮಿತಿಯನ್ನು ರಚಿಸಲಾಯಿತು. ಗಾಡ್ಗಿಳ್ ವರದಿಯನ್ನು ಸಾರ್ವಜನಿಕ ಅಭಿಪ್ರಾಯಕ್ಕೆ ಬಹಿರಂಗಗೊಳಿಸಿದಾಗ ಒಟ್ಟು ೧೭೦೦ ಆಕ್ಷೇಪಣೆಗಳು ಕೇಳಿ ಬಂದವು. ಇದನ್ನು ನಿವಾರಿಸಲು ಕಸ್ತೂರಿ ರಂಗನ್ ಸಮಿತಿಯನ್ನು ರಚಿಸಿ ಈ ಸಮಿತಿಗೆ ಕೆಲವೊಂದು ನಿರ್ಧಿಷ್ಟ ಮಾರ್ಗಸೂಚಿಗಳನ್ನು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ನೀಡಿತು. ಗಾಡ್ಗಿಳ್ ವರದಿಯನ್ನು ಕೂಲಂಕಶವಾಗಿ ಅಧ್ಯಯನ ಮಾಡುವುದು ಹಾಗು ಇದರ ಬಗ್ಗೆ ಬಂದಿರುವ ಆಕ್ಷೇಪಣೆಗಳನ್ನು ಪರಿಗಣಿಸುವುದು. ಗಾಡ್ಗಿಳ್ ವರದಿಯು ವಿವಿಧ ಸ್ತರಗಳ ಅಧ್ಯಯನವನ್ನು ಸಮರ್ಪಕವಾಗಿ ಮಾಡಿದೆಯೇ? ಎಲ್ಲಾ ಆರು ರಾಜ್ಯಗಳ ಅಭಿಪ್ರಾಯವನ್ನು ವಿವೇಚನಯುಕ್ತವಾಗಿ ಪಡೆದಿದೆಯೇ? ಸಲ್ಲಿಸಿದ ವರದಿಯಲ್ಲಿನ ಸಾರಾಂಶದಲ್ಲಿ ಪರಿಶುದ್ಧ ಘಟ್ಟಪ್ರದೇಶಗಳನ್ನು ರಕ್ಷಿಸುವತ್ತ ಗಮನ ನೀಡುವ ಅಂಶಗಳ ಜೊತೆಗೆ ಆರ್ಥಿಕ ಮತ್ತು ಸಮಾಜಿಕ ಸಮತೋಲನ ಕಾಪಾಡುವ ಅಂಶಗಳಿವೆಯೇ? ಇತ್ಯಾದಿಗಳನ್ನು ಪರಿಗಣಿಸಿ ಈ ವರದಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಪರಿವರ್ತಿಸಿ ರಂಗನ್ ವರದಿಯನ್ನು ಸಲ್ಲಿಸುವುದು.

ಗಾಡ್ಗಿಳ್ ವರದಿಯನ್ನು ಅಧ್ಯಯನ ನಡೆಸಿ, ೧೦ ಸಭೆಗಳನ್ನು ಮಾಡಿ, ನಾಲ್ಕು ಕ್ಷೇತ್ರವೀಕ್ಷಣೆಯ ಜೊತೆಗೆ ಆರು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಿ, ಹೂಡಿಕೆದಾರರೊಂದಿಗೆ ಚರ್ಚೆ ಮಾಡಿ, ಜೊತೆಗೆ ವಾಸ್ತವ ಸಂಗತಿಯನ್ನು ತಿಳಿಯಲು ಅತಿಪಳ್ಳಿ ಹಾಗು ಗುಂಡ್ಯ ಜಲವಿದ್ಯುತ್ ಯೋಜನೆ, ಗೋವಾದಲ್ಲಿನ ಗಣಿಗಾರಿಕೆ, ರತ್ನಗಿರಿ ಮತ್ತು ಸಿಂಧುದುರ್ಗ ಇತ್ಯಾದಿ ಸ್ಥಳಗಳಿಗೆ ಅಲ್ಲಿನ ಸ್ಥಳೀಯ ಸರ್ಕಾರದ ಅಧಿಕಾರಿವರ್ಗಗಳ ಜೊತೆಯಲ್ಲಿ ಚರ್ಚೆ ನಡೆಸಿತು. ಹಾಗೂ ಕೇಂದ್ರ ಸರ್ಕಾರದ ಕಬ್ಬಿಣ ಮತ್ತು ಉಕ್ಕು, ಗಣಿ, ನಗರಾಭಿವೃದ್ಧಿ, ಕೇಂದ್ರ ವಿದ್ಯುತ್ ನಿಗಮ, ಕೃಷಿ, ಬುಡಕಟ್ಟು ಇಲಾಖೆ, ಗ್ರಾಮೀಣಾಭಿವೃದ್ದಿ ಹಾಗೂ ಪ್ರವಸೋಧ್ಯಮ ಇಲಾಖೆಗಳಿಂದ ಸಲಹೆಗಳನ್ನು ಪಡೆಯಲು ತೀರ್ಮಾನಿಸಿತು. ಒಟ್ಟಾರೆಯಾಗಿ, ಕಸ್ತೂರಿ ರಂಗನ್ ಸಮಿತಿಯು ಗಾಡ್ಗಿಳ್ ವರದಿಯ ಅಂಶಗಳನ್ನು ಹಲವು ಭಾಗಗಳನ್ನು ಪರಿಗಣಿಸದೇ ದುರ್ಭಲಗೊಳಿಸಿದ ವರದಿಯನ್ನು ತಯಾರು ಮಾಡುವತ್ತ ಗಮನಹರಿಸಿತು.

(ಮುಂದುವರೆಯುವುದು. . .)

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x