ಆ ದಿನಗಳು: ವಾಸುಕಿ ರಾಘವನ್ ಅಂಕಣ

 
“ಆ ದಿನಗಳು” ಚಿತ್ರದ ಬಜೆಟ್ಟಿನ ಮೂರನೇ ಒಂದು ಭಾಗ ಖರ್ಚಾಗಿದ್ದು ಯಾವುದಕ್ಕೆ ಗೊತ್ತಾ? ಹೀರೋ ಸಂಭಾವನೆಗೆ ಅಲ್ಲ, ಅದ್ಧೂರಿಯಾದ ಸೆಟ್ಟಿಗೆ ಅಲ್ಲ, ವಿದೇಶದಲ್ಲಿ ಚಿತ್ರೀಕರಣ ಮಾಡಲು ಅಲ್ಲ. ಅದು ಖರ್ಚಾಗಿದ್ದು ಚಿತ್ರದಲ್ಲಿ ಇಳಯರಾಜಾ ಅವರ ಹಿನ್ನೆಲೆ ಸಂಗೀತಕ್ಕೆ. “ಆ ದಿನಗಳು” ಅಂದಾಕ್ಷಣ ಕಣ್ಣು ಮುಚ್ಚಿಕೊಂಡರೆ ನನಗೆ ಆ ಚಿತ್ರದ ಟೈಟಲ್ ಸಾಂಗ್ ತಲೆಯಲ್ಲಿ ಬರುತ್ತೆ, ಅದರಲ್ಲೂ ಆರಂಭದಲ್ಲಿ ಬರುವ ಆ ಬಿಟ್. ಇಡೀ ಚಿತ್ರದಲ್ಲಿ ಅಲ್ಲಲ್ಲಿ ಕೇಳಿಬರುವ ಈ ಥೀಮ್ ಮ್ಯೂಸಿಕ್ಕಿನಲ್ಲಿ ಚಿತ್ರದ ಭಾವ ಅಡಗಿದೆ!

ಅಗ್ನಿ ಶ್ರೀಧರ್ ಅವರ “ದಾದಾಗಿರಿಯ ದಿನಗಳು” ಪುಸ್ತಕವನ್ನು ಆಧರಿಸಿದ ತೆಗೆದ ಈ ಚಿತ್ರ 2007ರಲ್ಲಿ ಬಿಡುಗಡೆಯಾಯಿತು. ಗಿರೀಶ್ ಕಾರ್ನಾಡ್ ಅವರ ಬಿಗಿಯಾದ ಚಿತ್ರಕಥೆ, ಹೊಸತನದಿಂದ ಕೂಡಿದ ಚೈತನ್ಯ ನಿರ್ದೇಶನ ಹಾಗೂ ಅಗ್ನಿ ಶ್ರೀಧರ್ ಅವರ ನೈಜ ಸಂಭಾಷಣೆಗಳ ಕಾಂಬಿನೇಶನ್ ಇಂದ ಇದೊಂದು ಅಪರೂಪದ ಚಿತ್ರ ಅನಿಸಿಕೊಂಡಿದೆ! ಶ್ರೀಧರ್ ಈ ಜಗತ್ತನ್ನು ತುಂಬಾ ಹತ್ತಿರದಿಂದ ನೋಡಿರುವುದರಿಂದ “ಪ್ಯಾಡು”, “ಕಟಾಯ್ಸು”, “ನಾಯಿಗಳು” ಮುಂತಾದ ಸಹಜ ಪದಗಳುಳ್ಳ ಸಂಭಾಷಣೆ ಬರೆಯಲಿಕ್ಕೆ ಸಾಧ್ಯವಾಗಿದೆ.

ಭೂಗತ ಜಗತ್ತಿನ ಆರ್ಭಟಕ್ಕೆ ಸಿಕ್ಕಿ ನಲುಗುವ ಒಂದು ಸುಮಧುರವಾದ ಪ್ರೇಮವೇ, ಆ ಭೂಗತ ಜಗತ್ತಿನ ದಿಕ್ಕನ್ನು ಸಂಪೂರ್ಣವಾಗಿ ಬದಲಿಸುವ ಕಥೆ ಈ ಚಿತ್ರದ್ದು. ಸುಮಾರು 1986ರ ಇಸವಿ. ಜಯರಾಜ್ ಅನ್ನುವ ಭೂಗತ ಡಾನ್ ಜೈಲಿನಲ್ಲಿರುವ ಸಮಯದಲ್ಲಿ ಕೊತ್ವಾಲ್ ರಾಮಚಂದ್ರ ಪ್ರಬಲನಾಗಿ ಬೆಳೆದು ಅವನ ಜಾಗವನ್ನು ಆಕ್ರಮಿಸಿಕೊಳ್ಳುತ್ತಾನೆ. ಜಯರಾಜ್ ಬಿಡುಗಡೆಯಾಗಿ ಬಂದಮೇಲೆ ಅವನಿಗೂ ಕೊತ್ವಾಲ್ ಗೂ ತಿಕ್ಕಾಟ ಶುರುವಾಗುತ್ತದೆ. ಇಬ್ಬರಿಗೂ ರೋಲ್ ಕಾಲ್ ಕೊಡಬೇಕಾದ ಸಂಕಷ್ಟದಲ್ಲಿ ಸಿಲುಕುವ ಆಯಿಲ್ ಕುಮಾರ್, ಇನ್ಸ್ಪೆಕ್ಟರ್ ಶಿವರಾಜ್ ಜೊತೆ ಸೇರಿಕೊಂಡು ಇವರಿಬ್ಬರನ್ನೂ ಮುಗಿಸಿಬಿಡಲು ಮಸಲತ್ತು ಮಾಡುತ್ತಾನೆ. ಇನ್ನೊಂದು ಎಳೆಯಲ್ಲಿ ಚೇತನ್ ಮಲ್ಲಿಕಾರ ಪ್ರೇಮಕಥೆ. ಚೇತನ್ ತಂದೆ ಗಿರೀಶ್ ನಾಯಕ್, ಕೊತ್ವಾಲ್ ಕಡೆಯಿಂದ ಈ ಪ್ರೇಮಿಗಳಿಗೆ ಬೆದರಿಕೆ ಹಾಕಿಸುತ್ತಾನೆ. ಇವರ ಕಾಟ ತಾಳಲಾಗದೇ ಚೇತನ್, ಬಚ್ಚನ್ ಹಾಗು ಶ್ರೀಧರ್ ಅನ್ನುವವರ ಸಹಾಯದಿಂದ ಕೊತ್ವಾಲ್ ಅನ್ನು ಮುಗಿಸಿಬಿಡಲು ಸಂಚು ಹೂಡುತ್ತಾನೆ.

ಕನ್ನಡದಲ್ಲಿ ಭೂಗತ ಲೋಕದ ಚಿತ್ರಗಳಿಗೇನೂ ಬರವಿಲ್ಲ. ಆದರೆ ಈ ವಿಷಯ ಹೊಂದಿರುವ ಬಹುತೇಕ ಚಿತ್ರಗಳು ಅಸಹಜವಾದ ಸನ್ನಿವೇಶಗಳು, ನಂಬಲಸಾಧ್ಯವಾದ ಪಾತ್ರಗಳು, ಅಬ್ಬರದ ಸಂಭಾಷಣೆಗಳಿಂದ ಕೂಡಿರುತ್ತವೆ. ಭೂಗತಲೋಕದವರು ಅಂದರೆ ಕಿರುಚಾಡುವ, ಸೈಕೋಗಳು ಅನ್ನುವಂತೆ ತೋರಿಸುತ್ತಾರೆ. ಹಾಗಾಗಿ ಇವುಗಳನ್ನು “ಮಚ್ಚು ಲಾಂಗು ಚಿತ್ರಗಳು” ಅಂತಲೇ ಅವಹೇಳನಕಾರಿಯಾಗಿ ಕರೆಯುತ್ತಾರೆ. ಆದರೆ ಈ ಚಿತ್ರ  ತನ್ನ ನೈಜತೆಯಿಂದಲೇ ಭಿನ್ನವಾಗಿ ಎದ್ದು ನಿಲ್ಲುತ್ತದೆ. ಶ್ರೀಧರ್, ಕೊತ್ವಾಲ್, ಜಯರಾಜ್, ಆಯಿಲ್ ಕುಮಾರ್, ಬಚ್ಚನ್, ಸಿರಾಜ್, ಶೆಟ್ಟಿ ಹೀಗೆ ಒಂದೊಂದು ಪಾತ್ರವೂ ನೆನಪಿನಲ್ಲಿ ಉಳಿಯುವಂತೆ ಮೂಡಿಬಂದಿದೆ.

ಚಿತ್ರದಲ್ಲಿರುವ “ಅಟೆನ್ಷನ್ ಟು ಡೀಟೇಲ್” ನನಗೆ ತುಂಬಾ ಇಷ್ಟ ಆಯ್ತು. ರಸ್ತೆಯ ಎರಡೂ ಬದಿಗಳಲ್ಲಿರುವ ಗುಲ್ಮೊಹರ್ ಮರಗಳು, ಇವತ್ತಿಗಿಂತ ಕಮ್ಮಿ ಜನಸಂದಣೆ ಇವೆಲ್ಲವೂ ನಮಗೆ ಆ ಕಾಲವನ್ನು ತೋರಿಸುತ್ತವೆ. ಒಂದು ಸೀನಲ್ಲಿ ನಾಯಕಿ ತನ್ನ ಪರ್ಸ್ ತೆರೆದಾಗ, ಅದರಲ್ಲಿ ಹಳೇ ಕಾಲದ ಎರಡು ರುಪಾಯಿ ನೋಟೊಂದು ಹೊರ ಇಣುಕುತ್ತಿರುತ್ತದೆ. ಹಳೇ ಬೆಂಗಳೂರನ್ನು ತೋರಿಸುವ ಸಲುವಾಗಿ ಬೆಳಗ್ಗೆ ನಾಕು-ಐದು ಘಂಟೆಗೆ ಶೂಟಿಂಗ್ ಮಾಡುತ್ತಿದ್ದರಂತೆ. ಬಜೆಟ್ ಕಡಿಮೆ ಇದ್ದ ಕಾರಣ ಸುಮಾರಾಗಿರುವ ಕ್ಯಾಮೆರಾ ಉಪಯೋಗಿಸಬೇಕಾಗಿ, ಅನಿರೀಕ್ಷಿತವಾಗಿ ಇದರಿಂದಲೇ ದೃಶ್ಯಗಳಿಗೆ ಹಳೇ ಬೆಂಗಳೂರಿನ ಫೀಲ್ ಬಂದಿದೆ!

ಅಲ್ಲಿಯವರೆಗೆ ಬಂದಿರುವ ಭೂಗತ ಚಿತ್ರಗಳನ್ನು ಗಮನಿಸಿ. ಅವೆಲ್ಲವೂ ಒಬ್ಬ ವ್ಯಕ್ತಿಯ ಕಥೆಯಾಗಿರುತ್ತಿದ್ದವು. ಆದರೆ ಇದು ಚೇತನ್ ಕಥೆಯಲ್ಲ, ಶ್ರೀಧರ್ ಕಥೆಯಲ್ಲ, ಕೊತ್ವಾಲ್ ಕಥೆಯಲ್ಲ. ಇದರಲ್ಲಿ ಬರುವ ಸನ್ನಿವೇಶಗಳು ಇವತ್ತಿನ ಕಾಲದಲ್ಲಿ ಆಗಿದ್ದರೆ ಈ ಕಥೆ ನಡೆಯುತ್ತಲೇ ಇರಲಿಲ್ಲ. ಬೂತ್ ಗೆ ಹೋಗಿ ಫೋನ್ ಮಾಡಬೇಕಿದ್ದ ಕಡೆ ಈಗ ಮೊಬೈಲ್ ಬಂದಿದೆ, ಮಚ್ಚು ಲಾಂಗು ಮಾತ್ರ ಇದ್ದ ಕಡೆ ಈಗ ಗನ್ನುಗಳು ಬಂದಿವೆ. ಹಾಗಾಗಿ ಇದು ಆ ಕಾಲಘಟ್ಟದ ಕಥೆಯೂ ಹೌದು, ಇತಿಹಾಸದ ಒಂದು ತುಣುಕೂ ಹೌದು. ಚಿತ್ರದ ಹೆಸರೇ ಸೂಚಿಸುವಂತೆ ಇದು ನಾಸ್ಟಾಲ್ಜಿಯಾ ಇಂದ ಕೂಡಿದೆ. ಇಳಯರಾಜಾ ಅವರ ಥೀಮ್ ಮ್ಯೂಸಿಕ್ ಕೇಳಿದಾಗ ಮೂಡುವುದೂ ಅದೇ ಭಾವ. ಕಳೆದುಹೋಗಿರುವುದರ ಬಗ್ಗೆ ಬೇಸರ, ಮರಳಿ ಬರಲಾಗದ್ದರ ಬಗ್ಗೆ ವಿಷಾದ.

ಚಿತ್ರದುದ್ದಕ್ಕೂ ಬೆಂಕಿ ಅನ್ನುವುದನ್ನು “ಹಿಂಸೆ”ಯ ರೂಪಕದಂತೆ ತೋರಿಸಲಾಗಿದೆ. ಆಯಿಲ್ ಕುಮಾರನ ಸಿಗಾರ್, ಕೊತ್ವಾಲನ ಮನೆಯಲ್ಲಿ ಉರಿಯುತ್ತಿರುವ ಊದುಕಡ್ಡಿ, ಉರಿದು ಬೀಳುವ ಗೋಡೌನುಗಳೂ ಹೀಗೆ. ಕಡೆಯಲ್ಲಿ ಕೊತ್ವಾಲನ ಕೊಲೆಯಾದ ಮೇಲೆ, ಜೋರಾಗಿ ಮಳೆ ಬರುತ್ತದೆ. ಹಿಂಸೆಯ ಪರ್ವ ಮುಗಿದು ಶಾಂತಿ ನೆಲೆಸಿದ್ದರ ಸಂಕೇತ!

ಭೂಗತ ಲೋಕದ ಚಿತ್ರಗಳು ಅಂದರೆ ಧೂಮಪಾನವನ್ನು ಒಂದು ಸ್ಟೈಲ್ ಅನ್ನುವಂತೆ ತೋರಿಸುವುದು ಸಾಮಾನ್ಯ. ಆದರೆ ಈ ಚಿತ್ರದ ಕ್ಲೈಮಾಕ್ಸ್ ಗೆ ಸ್ವಲ್ಪ ಮುಂಚೆ ಚೇತನ್, ಬಚ್ಚನ್ ಮತ್ತು ಶ್ರೀಧರ್ ಕೊತ್ವಾಲನನ್ನು ಮುಗಿಸಿಬಿಡುವ ವಿಷಯ ಚರ್ಚಿಸುತ್ತಿರುತ್ತಾರೆ. ಇವತ್ತು ಬೇಡ ಅಂತ ಬಚ್ಚನ್ ಸ್ವಲ್ಪ ಹಿಂಜರಿಯುತ್ತಾನೆ. ಏನಾಗಲ್ಲ ಇವತ್ತೇ ಮುಗಿಸಿಬಿಡೋಣ ಅಂತ ಚೇತನ್ ಹುಚ್ಚು ಧೈರ್ಯ ತೋರಿಸುತ್ತಾನೆ. ಶ್ರೀಧರ್ ಒಂದು ಕ್ಷಣ ಅವನನ್ನು ಎವೆಯಿಕ್ಕದೆ ನೋಡಿ, ತಾನು ಹಚ್ಚಿಕೊಂಡಿದ್ದ ಸಿಗರೇಟನ್ನು ಚೇತನ್ ಗೆ ಕೊಡುತ್ತಾನೆ. ಆ ಕ್ಷಣದವರೆಗೂ ಚಿಕ್ಕ ಹುಡುಗ, ಪ್ಯಾಡು ಅನಿಸಿಕೊಳ್ಳುತ್ತಿದ್ದ ಚೇತನ್ ಹೇಳಿದ ಈ ಮಾತಿಂದ ಅವನನ್ನು ತಮಗೆ ಸರಿಸಮಾನನೆಂದು ಪರಿಗಣಿಸಿ, ಶ್ರೀಧರ್ ಅವನೆಡೆಗೆ ಮೆಚ್ಚುಗೆ, ಗೌರವ ಸೂಚಿಸುತ್ತಾನೆ. ಒಂದೇ ಒಂದು ಸಣ್ಣ ಗೆಸ್ಚರ್ ಇಂದ! ಇಂತಹ ಸಣ್ಣಪುಟ್ಟ ಡೀಟೇಲುಗಳೇ ಅಲ್ಲವಾ ಚಿತ್ರ ನೋಡುವಾಗ ದೊಡ್ಡ ಮಟ್ಟಿಗಿನ ಮಜಾ ಕೊಡುವುದು?

****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Venkatesh
Venkatesh
10 years ago

ಸಣ್ಣಪುಟ್ಟ ಡೀಟೇಲುಗಳೇ ಅಲ್ಲವಾ ಚಿತ್ರ ನೋಡುವಾಗ ದೊಡ್ಡ ಮಟ್ಟಿಗಿನ ಮಜಾ ಕೊಡುವುದು
Yes !! exactly

1
0
Would love your thoughts, please comment.x
()
x