ಸಮಯ: ರಾತ್ರಿ 9.10
ಸ್ಥಳ: ಕಸ್ತೂರಬಾ ರಸ್ತೆ, ಕಂಠೀರವ ಕ್ರೀಡಾಂಗಣದ ಹತ್ತಿರ
“ಧಗ್” ಅಂತು. ಥೇಟ್ ಬಂಡೆ ಕವನದಂತೆ; ಒಂದು ಬೆಂಕಿ ಕಡ್ಡಿ ತಲೆ ಸುಟ್ಟುಕೊಂಡು ಸತ್ತಿತ್ತು, ಕತ್ತಲಿನ ಜೊತೆ. ತೆಳು ಬಿಳಿ ಬಟ್ಟೆ ಸುತ್ತಿಕೊಂಡಿದ್ದ ಅಪ್ಸರೆಗೆ ಬೆಂಕಿ ಹಚ್ಚಲಾಗಿತ್ತು. ಆ ಅಪ್ಸರೆಯ ತಲೆ ಆ ಕೆಂದುಟಿಗಳನ್ನು ನುಂಗಿ ಹಾಕಿದ್ದವು. ಆ ಎರಡು ಕಣ್ಣುಗಳು ತಣ್ಣಗೆ ರೆಪ್ಪೆ ಬಡಿಯುತ್ತಿದ್ದವು. ಕತ್ತಲಿನ ಮಧ್ಯೆ ಆ ಬಿಳಿಗುಡ್ಡೆಗಳು ಕಬ್ಬನ್ ಪಾರ್ಕ್ ನ ಕಬ್ಬಿಣದ ಬೇಲಿಯ ಹಿಂದಿನಿಂದ ನನ್ನನ್ನೇ ನೋಡುತ್ತಿದ್ದವು. ಆ ಕಣ್ಣುಗಳ ಹಿಂದೆ ಬಿದಿರು ಮೆಳೆಯಿತ್ತು.
ಗೊತ್ತಿಲ್ಲ, ಕಳೆದ ಮೂರು ದಿನದಿಂದ ಆ ಕಣ್ಣುಗಳು ನನ್ನ ಬರುವಿಕೆಗಾಗಿಯೇ ಕಾಯುತ್ತಿದ್ದವು. ಚಿನ್ನಸ್ವಾಮಿ ಸ್ಟೇಡಿಯಂ ಹತ್ತಿರದ ಸಣ್ಣ ಪ್ಯಾಕ್ಟರಿಯಲ್ಲಿ ಕೆಲಸ ಮಾಡೋ ನಾನು, ಸರಿಯಾಗಿ ರಾತ್ರಿ 9 ಗಂಟೆಗೆ ಕೆಲಸ ಮುಗಿಸಿ ಮನೆಗೆ ಹೋಗೋಕೆ ಕಾರ್ಪೋರೇಷನ್ ಹತ್ತಿರ ನಡೆದು ಹೋಗೋದು ಇದೇ ದಾರಿಯಲ್ಲಿ. ಮೊದಲೇ ಎಚ್ಚರಿಕೆಯಿಂದ ನಡೆಯೋ ನನಗೆ ಆ ಕಣ್ಣುಗಳು ಆತಂಕವನ್ನುಂಟು ಮಾಡುತ್ತಿದ್ದವು. ನಾನು ತಲೆ ತಗ್ಗಿಸಿ ಸುಮ್ಮನೆ ನಡೆದುಬಿಡುತ್ತಿದೆ. ಬೋಳಿ ಮಕ್ಕಳು ಎರಡು ತಿಂಗಳಿಂದ ಸಂಬಳ ಬೇರೆ ಕೊಟ್ಟಿರಲಿಲ್ಲ. ಹಾಗಾಗಿಯೇ ಕ್ಷೌರ ಕೂಡ ಮಾಡಿಸದೆ ದೊಡ್ಡ ಕಳ್ಳನಂತೆ ಕಾಣುತ್ತಿದೆ. ಆದ್ರೂ, ಆ ಕಣ್ಣುಗಳು ನನ್ನೆಡೆ ನೋಡುವ ಮೂಲಕ ಏನನ್ನೋ ಬಯಸುತ್ತಿದ್ದವು. ಮೂರು ದಿನಗಳಿಂದ್ಲೂ ಆ ಕಣ್ಣುಗಳು ನನ್ನನ್ನು ನೋಡುತ್ತಿದ್ದವೇ ವಿನಃ ಸದ್ದು ಮಾಡುತ್ತಿರಲಿಲ್ಲ.
ಇವತ್ತೂ ಕೂಡ ಅ ಕಣ್ಣುಗಳು ನನ್ನತ್ತ ನೋಡುತ್ತಿದ್ದವು. ಅಲ್ಲಿ ಮಾಮೂಲಿ ಅಂದ್ರೆ ಹಿಜ್ಡಾಗಳೋ, ವೇಶ್ಯೆಯರೋ ಇರ್ತಾರೆ. ಆದ್ರೆ ಈ ಕಣ್ಣುಗಳು ಯಾರದ್ದೋ ಗೊತ್ತಿಲ್ಲ. ಆದ್ರೆ, ಕಣ್ಣುಗಳು ನನ್ನಿಂದ ಸುಖವನ್ನಾಗ್ಲಿ, ಹಣವನ್ನಾಗ್ಲಿ ಬಯಸುತ್ತಿಲ್ಲ ಅನಿಸಿತ್ತು. ಹೀಗ್ಯಾಕೆ ಅನಿಸಿತು ಅಂದ್ರೆ, ಆ ಕಣ್ಣುಗಳಿಂದ ಕಾಮನೆ ಬದಲಿಗೆ ಕಣ್ಣೀರು ಬರ್ತಿತ್ತು. ಅಷ್ಟೇ ಅಲ್ಲ, ಇವತ್ತು ಆ ಕಣ್ಣುಗಳ ಜೊತೆ ಆಕೃತಿ ಕೂಡ ಕಬ್ಬಿಣದ ಬೇಲಿ ದಾಟಿ ರಸ್ತೆಗೆ ಬಂತು ನಿಂತಿತ್ತು.
ನಾನು ಮಾಮೂಲಿಯಂತೆ ತಲೆ ತಗ್ಗಿಸಿದೆ. ಮುಂದೆ ಸುಮ್ಮನೆ ನಡೆಯಲು ಮುಂದಾದೆ. ಆ ಆಕೃತಿ ಅಡ್ಡ ಬಂದು ನಿಲ್ತು. ನೀರು ತುಂಬಿದ್ದ ಕಣ್ಣುಗಳು ಭಯ ಬರಿಸಲಿಲ್ಲ. ನೀಳ ಮೂಗು, ಹಣೆಯಲ್ಲೊಂದು ಚೆಂದದ ಸ್ಟಿಕ್ಕರ್, ತುಟಿಗೆ ಲಿಪ್ಸ್ಟಿಕ್ ಬಳಿದಿತ್ತು. ಒಂದು ಮುದ್ದಾದ ಸೀರೆಯೂ ಮೈಮೇಲಿತ್ತು. ಆದ್ರೆ ನೀಳ ಮೂಗಿನ ಕೆಳಗೆ ಒಂದಿಷ್ಟು ಮೀಸೆಗಳೂ ಇದ್ವು. ನವಿರಾದ ಹೂಮೈ ತುಂಬಾ ದಪ್ಪನೆಯ ಕೂದಲಿದ್ದವು. ದಪ್ಪ ದಪ್ಪ ನರ, ಬಿಗಿ ಮಾಂಸಲಗಳಿಂದ ತುಂಬಿದ್ದ ಸ್ನಾಯುಗಳು.
“ಹೇ ತಮ್ಮುಡಾ, ಎಲಾ ಉನ್ನಾವು?” ತೆಲುಗಿನಲ್ಲಿ ತಮ್ಮ ಹೇಗಿದ್ದೀಯಾ? ಅಂತು. “ನನಗೆ ತೆಲುಗು ಬರೋದಿಲ್ಲ” ಅಂದೆ.
ನಿನ್ನ ಹೆಸರು ಶರತ್ತಾ?
“ಅಲ್ಲ, ಕಿರಣ್"
“ಯಾವ ಊರು?”
“ತುಮಕೂರು”
“ತಪ್ಪಾಗಿ ತಿಳ್ಕೋಬೇಡಪ್ಪ, ನನ್ನ ಹೆಸರು ಶ್ಯಾಮಲಾ ಅಂತ. ನಂದು ಆಂಧ್ರದ ಅನಂತಪುರ ಜಿಲ್ಲೆಯ ಗುಂತಕಲ್. ಈಗ್ಗೆ 20 ವರ್ಷಗಳ ಹಿಂದೆ ನನ್ನ ತಮ್ಮನನ್ನ ಬಿಟ್ಟು ಈ ಬೆಂಗಳೂರಿಗೆ ಬಂದುಬಿಟ್ಟೆ. ಅವತ್ತಿನಿಂದ ಇವತ್ತಿನ ತನಕ ಅವನನ್ನ ಹುಡುಕೋ ಕೆಲಸ ಮಾಡ್ತಿದ್ದೀನಿ. ಅವನು ಥೇಟ್ ನಿನ್ನ ಥರವೇ ಕಾಣ್ತಾನೆ. ನಿನ್ನ ನೋಡಿ ನನಗೆ ಖುಷಿಯಾಯ್ತು. ಅವನನ್ನ ನಾನು ನೋಡಿದ್ದು 20 ವರ್ಷಗಳ ಹಿಂದೆ. ಇವತ್ತು ನೀನು ನನ್ನಪ್ಪನ ಹಾಗೇ ಕಾಣ್ತೀಯಾ? ಅವನೂ ನನ್ನಪ್ಪನ ಥರವೇ ಇದ್ದ. ಹಾಗಾಗಿಯೇ ನಾನು ನಿನ್ನನ್ನ ಮೂರ್ನಾಲ್ಕು ದಿನಗಳಿಂದ ನೋಡ್ತಾನೇ ಇದ್ದೀನಿ. ಕೇಳಿಯೇ ಬಿಡೋಣ ಅಂತ ಕೇಳಿಬಿಟ್ಟೆ.”
“ಪರ್ವಾಗಿಲ್ಲ ಬಿಡಿ, ನಾನು ಹೋಗಬಹುದಾ?”
“ಕೋಪ ಮಾಡಿಕೊಳ್ಳದೆ ಈ ಬಟ್ಟೆ ತಗೋ, ಇವತ್ತು ನನ್ನ ತಮ್ಮ ಶರತ ಹುಟ್ಟಿದ ದಿನ. ಅವನಲ್ಲದಿದ್ದರೇನು? ಅವಂನಂತಿರುವ ನಿನ್ನಲ್ಲಿ ಅವನನ್ನೇ ಕಂಡು ಖುಷಿಯಾಗಿದೆ.”
ಒಂದು ಪ್ಲಾಸ್ಟಿಕ್ ಕವರ್ನಲ್ಲಿ ಹೊಸ ಬಟ್ಟೆಗಳಿದ್ದುವು. ಪಾಪ ಆ ನೋವಿಗೊಂದು ಸಾಂತ್ವಾನ ಸಿಗೋದಾದ್ರೆ ಏನು ತಪ್ಪು? ಅಂದ್ಕೊಂಡು ಆ ಬಟ್ಟೆ ತಗೊಂಡೆ.
ಒಮ್ಮೆಗೆ ಕೈ ಹಿಡಿದು ಕಣ್ಣಿಗೊತ್ತಿಕೊಂಡ ಆ ಆಕೃತಿ ಗಳಗಳ ಅತ್ತುಬಿಟ್ಟಿತ್ತು. ಅಲ್ಲೇ ಬೆಂಚುಕಲ್ಲಿತ್ತು. ಅದರ ಮೇಲೆ ಕೂರಿಸಿಬಿಟ್ಟೆ.
ಒಂದಷ್ಟು ಗಾಡಿಗಳು ಓಡಾಡುತ್ತಿದ್ದವು. ಪರಿವೆಯೇ ಇರದೇ ಬಿಎಂಟಿಸಿ ಬರ್ರ್ ಅಂತ ಓಡಿ ಹೋಯ್ತು. ಕತ್ತಲಿತ್ತು. ಆ ಆಕೃತಿಯ ಸುಖ, ದುಃಖ, ಸಂಕಟಗಳಿಗೆಲ್ಲಾ ತಾಯಾಗಿದದ್ದು ಅದೇ ಅಲ್ಲವೇ.
“ಅಳಬೇಡಿ, ಅವನು ಸಿಕ್ಕೇ ಸಿಗುತ್ತಾನೆ” ಅಂದೆ. ಆ ಮಾತುಗಳಿಂದ ತುಸು ನೆಮ್ಮದಿ ಕಂಡ ಆ ಆಕೃತಿ ಕಣ್ಣೀರೊರೆಸಿಕೊಳ್ತು. ಆ ಹೊತ್ತಿಗೆ ಸರಿಯಾಗಿ ಹೊಯ್ಸಳ ಗಾಡಿ ಆ ಕಡೆಯೇ ಬರ್ತಿತ್ತು. ಅಕ್ಕನೂ ಅಲ್ಲದ, ಅಣ್ಣನೂ ಅಲ್ಲದ, ತಾಯಿಯೂ ಅಲ್ಲದ ಇದೆಲ್ಲವೂ ಆದ ಆಕೃತಿ ಚಂಗನೇ ಬೇಲಿ ಹಾರಿ ಕತ್ತಲೊಳಕ್ಕೆ ನುಗ್ಗಿಬಿಡ್ತು.
ನಾನು ತಲೆತಗ್ಗಿಸಿ ಮುಂದಕ್ಕೆರಡು ಹೆಜ್ಜೆ ಹಾಕಿದೆ. ಹೊಯ್ಸಳ ಗಾಡಿ ನನ್ನನ್ನೂ ದಾಟಿ ಹಿಂದೆ ಓಡ್ತು. ನಾನು ಮುಂದೆ ಹೊರಟೆ. ಒಂದು ಕ್ಷಣ ನಿಂತು ಹಿಂದೆ ತಿರುಗಿ ನೋಡಿದೆ. ಆ ಕಣ್ಣುಗಳ ದೃಷ್ಟಿ ಬೇರೆಡೆಗೆ ಸರಿದಿತ್ತು. ಬಿದಿರ ಮೆಳೆ ಮೈಮುರಿದು ಹೊಸ ತೂಗಾಟಕ್ಕೆ ತೆಕ್ಕೆ ಬದಲಿಸಿತ್ತು. ಇದೆಲ್ಲಕ್ಕೆ ಸಾಕ್ಷಿಯಾದ ಕತ್ತಲು ನುಂಗಿತ್ತಷ್ಟೇ, ಕಕ್ಕಲು ಅದಕ್ಕೆ ಬಾಯಿಲ್ಲ.
ಇವತ್ತಿಗೂ ಆಕೆ ಶರತನಿಗಾಗಿ ಹುಡುಕುತ್ತಿದ್ದಾಳೆ. ನನ್ನ ಕಂಡರೇ ಅದೇ ಪ್ರೀತಿಯಿಂದ ಮಾತಾಡಿಸುತ್ತಾಳೆ. ನಾನೂ ಮಾತಾಡಿಸುತ್ತೇನೆ, ಅಕ್ಕ ಅನ್ನದೆ, ಅಣ್ಣ ಅನ್ನದೆ, ಅಮ್ಮ ಅನ್ನದೆ. ಸಂಬಂಧ ಕೇವಲ ಮನುಷ್ಯರಿಗಷ್ಟೇ ಅಲ್ಲ, ವಸ್ತುಗಳಲ್ಲೂ, ಇಂಥಾ ಆಕೃತಿಗಳಲ್ಲೂ ಕಾಣಬೇಕು. ಭಾವಕ್ಕೆ ಭಾಷೆಯ, ಶಬ್ದ, ಪದಗಳ ಭಿಕ್ಷೆ ಯಾಕೆ? ಅಸಲಿಗೆ ಈ ಭಾವವೇ ಇರದೆ ಭಾಷೆ ಎಲ್ಲಿಂದ ಬರುತ್ತೆ.
ಈಗಲ್ಲೂ ಅಷ್ಟೇ, ಚಪ್ಪಾಳೆಯ ಸದ್ದು ಕೇಳಿದಾಗ್ಗೆಲ್ಲಾ ಆ ಶ್ಯಾಮಲಾ ಅನ್ನೋ ಆಕೃತಿಯ ನೆನಪಾಗುತ್ತೆ. ಅದು ಕೊಟ್ಟ ಬಟ್ಟೆಯನ್ನ ಹಾಗೇ ಇಟ್ಟಿದ್ದೇನೆ. ಒಮ್ಮೊಮ್ಮೆ ತೆಗೆದು ನೋಡುತ್ತೇನೆ.
ಶ್ಯಾಮಲಾಗೆ ಶರತ್ ಸಿಗಲಿ. ಸಿಗೋ ಶರತ ಆ ಆಕೃತಿಯನ್ನು ತಪ್ಪಾಗಿ ತಿಳಿಯೋದು ಬೇಡ. ಅವರಿಬ್ಬರೂ ಒಂದಾಗಲಿ. ಭೂಮಿ ಗುಂಡಗಿದೆ. ಶರತ ಸಿಕ್ಕೇ ಸಿಗುತ್ತಾನೆ. ನನಗೂ, ಆ ಆಕೃತಿಗೂ. ಸಮಾಜ ಅನ್ನೋ ವಿಷದ ಚುಚ್ಚು ಮಾತಿನ ಮುಳ್ಳುಹಂದಿಗೆ ಇಂಥಾ ಆಕೃತಿಗಳು, ಒಂದಷ್ಟು ಸಂಬಂಧಗಳು, ಸಲುಗೆಗಳು ಹಾದರದಂತೆ, ಅಸಹ್ಯದಂತೆ ಕಾಣುತ್ತವೆ. ಇಂಥಾ ಮುಳ್ಳುಹಂದಿಯಿಂದ ದೂರವಿರಲ್ಲೆಂದೇ ಕಕ್ಕಲು ಬಾಯಿಲ್ಲದ ಕತ್ತಲಲ್ಲೇ ಉಳಿಯುತ್ತವೆ ಇಂಥಾ ವಸ್ತುಗಳು, ವಿಷಯಗಳು, ಆಕೃತಿಗಳು, ತಿರಸ್ಕೃತರು. ಅಂಥಾ ಜನರಿಗೆಲ್ಲಾ ನನ್ನಂಥವನ್ನೊಬ್ಬ ಸಿಕ್ಕರೇ ಒಂದಿಷ್ಟು ನೆಮ್ಮದಿ ಸಿಕ್ಕಂತಾಗುತ್ತೆ. ಎರಗುವುದಷ್ಟೇ ಕತ್ತಲಲ್ಲಿ ನಡೆಯುವುದಿಲ್ಲ ಕರುಗುವುದೂ ಆಗುತ್ತೆ.
-ಬಸವರಾಜು ಕ್ಯಾಶವಾರ
*****
ಅಪರೂಪದ ಅನುಭವ!! ನಿಮ್ಮ ಸಾಂತ್ವನ ಆಕೆಗೆ ನೆಮ್ಮದಿ ಕೊಡಲಿ..ನಿಮ್ಮ ಜೊತೆ ನನ್ನದೂ ಒಂದು ಹಾರೈಕೆ.. ಶರತ ಸಿಗಲಿ ಆಕೆಗೆ
ಅದ್ಬುತವಾಗಿದೆ. ಧನ್ಯವಾದಗಳು ಬಸವರಾಜು.
ವಿನೋದ್ ಕುಮಾರ್ ವಿ.ಕೆ. ಅವರೇ ಬರಹವನ್ನು ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು!
ಅಖಿಲೇಶ್ ಚಿಪ್ಪಳಿಯವರೇ ನಿಮ್ಮ ಸಹೃದಯತೆಗೆ ಧನ್ಯವಾದ.
Aa akruthige sharath sigali..
Nimma anubhavavannu tumbasundaravagi barediddeeri.. good write up!
Thanks madam