“ಇಲ್ರೀ, ಇದೊಂದ್ ವಿಷ್ಯದಾಗ ತಲಿ ಹಾಕಬ್ಯಾಡ್ರೀ..”
“ಸರಿಯವ್ವಾ, ನಿನ್ನ ಬಂಧುಬಳಗ, ಕುಲಸ್ಥರು, ದೈವಸ್ಥರು ಹೇಳಿದ್ದಕ್ಕೇ ನೀ ಒಪ್ಪಿಲ್ಲ. ಇನ್ನು ನನ್ನ ಮಾತಿಗೆ ಒಪ್ಪಿಕ್ಯಂತೀ ಅಂತ ನಾ ಏನೂ ಅನ್ಕಂಡಿಲ್ಲ. ಆದ್ರ ದುರ್ಗಾಶಕ್ತಿ ಅಂತ ಒಬ್ಬಾಕಿ ಅದಾಳ ನೋಡು, ಆಕೀದು ಅಭಿಪ್ರಾಯ ಕೇಳಬೇಕಲ್ಲಾ..”
“ಅಂದ್ರ, ದುರುಗಮ್ಮನ ಗುಡೀಮುಂದ, ಪೂಜಾರಪ್ಪನೆದುರಿಗೆ ಹಾರ ಹಿಡ್ಕೊಂಡು ನಿಂದ್ರು ಅಂತ ಹೇಳಾಕ್ಹತ್ತೀರಿ ಹೌದಿಲ್ಲೋ..? ಆತು ಬಿಡ್ರೀ..ನಂಗೇನ್ ಅಭ್ಯಂತರ ಇಲ್ಲ. ನೋಡು ಪೂಜಾರಣ್ಣ, ಇದಾ ಮಂಗಳವಾರ ಹೂವಿನಹಾರ ತಗೊಂಡು ಗುಡಿ ಮುಂದ ಶರಣಾಗ್ತೀನಿ. ಅದೇನ್ ಮಾತು ನುಡಿಸ್ತಾಳೋ ನಿನ್ ಬಾಯಿಂದ ಆ ತಾಯಿ ನೋಡೋಣು..”
ಅಲ್ಲಿಗೆ ಆ ಪಂಚಾಯ್ತಿ ಬರಖಾಸ್ತಾಯ್ತು.
“ನನಿಗೆ, ನನ್ ಮಗಳಿಗೆ ಉಣ್ಣಾಕಿಲ್ಲ, ಉಡಾಕಿಲ್ಲ ಅಂದಾಗ ಯಾರಾದ್ರೂ ಬಂದಿದ್ರ ಇವ್ರು? ಈಗ ಮಗಳು ದೊಡ್ಡೋಕ್ಯಾದ ಕೂಡ್ಲೇ ಎಲ್ಲರ ದಾರಿ ನನ್ನ ಮನಿಬಾಗ್ಲಿಗೇ ಬಂದು ನಿಲ್ತೈತಿ..”
ಎಲ್ಲರಿಗೂ ಕೇಳಿಸುವಂತೆ ಹೇಳಿಕೊಳ್ಳುತ್ತಾ ಹೊರಟ ಆ ಅವಳ ದನಿಯಲ್ಲೂ, ಹೆಜ್ಜೆಯಲ್ಲೂ ಹೊಸಧೃಡತೆ ಇತ್ತು.
ವಿಷ್ಯ ಏನೂ ಅಂದ್ರೆ…..
ತುಂಗಭದ್ರೆಯ ಹೊಳೆನೀರು ಎಡಕ್ಕೂ,
ಭತ್ತದ ತೆನೆ ತುಂಬಿ ತೊನೆಯುವ ಗದ್ದೆ ಬಲಕ್ಕೂ,
ನಟ್ಟನಡುವೆ ವೀರಭದ್ರದೇವರೂ,
ಊರಹೊರಗಿನ ವಿಶಾಲ ಬೇವಿನಮರಕ್ಕೆ ಆತುಕೊಂಡಿರುವ ದುರ್ಗಾಶಕ್ತಿಯ ಗುಡಿಯೂ..,
ಇರುವ ತುಂಬ ಚೆಂದವಾಗಿ ತನ್ನ ಪಾಡಿಗೆ ತಾನಿರುವ ಅದು…..
ಹೀಗೇ ಒಂದೂರು..
ಹೆಸರಲ್ಲೇನಿದೆ? ಬೇಕಿಲ್ಲ.
ಗೌಡರೆದುರು ಪಂಚಾಯ್ತಿ ಕಟ್ಟೇಲಿ ಅಷ್ಟೂ ಜನರೆದುರಿಗೆ ನಿಂತು ವಾದಿಸಿದ ಆ ಅವಳೊಬ್ಬಳು ದೇವದಾಸಿ.
ಅವಳಿಗಾದರೂ ಹೆಸರ್ಯಾಕೆ..?
ಸುಮ್ಮನೆ ನೋಡುವವರಿಗೆ ವಯಸ್ಸಾದ, ಅನಕ್ಷರಸ್ತ ಹೆಣ್ಣುಮಗಳು ಅವಳು.
ತಿಳಿದು ನೋಡುವವರಿಗೆ ಚಿಕ್ಕವಯಸಿನಿಂದಲೂ ದೇವದಾಸಿತನದ ನೋವು, ಸಂಕಟ, ಅವಮಾನ, ಅಭಧ್ರತೆಯ ಭಾವನೆಯಿಂದ ನರಳಿ, ಸಿಡಿಯಲು ಸಿದ್ಧವಾಗಿರುವ ಮಾಗಿದ ಜೀವ.
ಪರವಾಗಿಲ್ಲ ಎಂಬಷ್ಟು ಮಾತ್ರ ಸ್ಥಿತಿವಂತಳು.
ಓಟ್ ಹಾಕತೊಡಗಿದಾಗಿಂದ ಬುದ್ಧಿ ಚುರುಕಾಗಿದೆ. ಮನಸು ತಿಳಿಯಾಗಿದೆ.
ಅವಳ ಮಗಳೀಗ ಯೌವನಕ್ಕೆ ಕಾಲಿಟ್ಟಿದ್ದಾಳೆ. ಕೇರಿಯ ಜನ ಸಂಬಂಧಿಕರು ಎಲ್ಲರನ್ನೂ ವಿರೋಧಿಸಿ ಮಗಳಿಗೆ ಮದುವೆ ಮಾಡಲು ಹೊರಟಿದ್ದಾಳೆ…..
ಊರುಕೇರಿಗಳಲ್ಲಿ ಹೊಸಅಲೆ ಎಬ್ಬಿಸಿದ್ದಾಳೆ.
ಎಲ್ಲ ಉತ್ತಮರಿಗೂ, ಅಧಮರಿಗೂ ಸುದ್ದಿ ತಲುಪಿದ ಪರಿಣಾಮವೇ ಆ ಪಂಚಾಯ್ತಿ.
ಊರೂ ಈಗ ಮೊದಲಿನಂತೆ ದೌರ್ಜನ್ಯ ಮಾಡಿದರೆ ನಡೆಯುವುದಿಲ್ಲವೆಂದು ಅರಿತಿದೆ.
ಹಾಗಾಗಿ ಗೌಡನ ಷರತ್ತು ಬಹುತೇಕ ಎಲ್ಲರಿಗೂ ಒಪ್ಪಿಗೆಯಾಗಿದೆ.
“ದೇವಿ ಆಶೀರ್ವಾದ ಮಾಡಿದರೆ ತಡೆಯಲು ನಾವೆಷ್ಟರವರು..? ಮದುವೆ ಮಾಡ್ಲಿ..”
ಎಂಬುದು ಎಲ್ಲರ ಅಭಿಮತ.
ಆ ಅವಳು ಮುಗ್ಧೆಯೂ ಹೌದು, ಪ್ರಬುದ್ಧೆಯೂ ಹೌದು.
ದೇವಿಯನ್ನು ನಂಬಿದಂತೆಯೂ, ನಂಬದಂತೆಯೂ ಇದ್ದಾಳೆ.
ದುರುಗಮ್ಮನನ್ನು ಮೈಮೇಲೆ ತಂದುಕೊಳ್ಳುವ ಪೂಜಾರಿ ಅವಳ ಸರೀಕ. ಅಣ್ಣ ಎಂದಾಗ ಓಗೊಟ್ಟವನು.
ಸರಿ, ಆ ಮಂಗಳವಾರ ಬಂತು.
ಊರು ಸಿದ್ದವಾಗಿತ್ತು. ಅವಳೂ ಕೂಡ. ತಮ್ಮ ಭಾಷೆಯಲ್ಲಿ ದುರುಗಮ್ಮನೂ, ಉತ್ತಮರ ಭಾಷೆಯಲ್ಲಿ ದುರ್ಗಾಶಕ್ತಿಯೂ ಆದ ದೇವಿಯ ಗುಡಿಯೆದುರು ಎಲ್ಲ ಸೇರಿದರು.
ಅವಳು ಹೂವಿನ ಹಾರವೊಂದನ್ನು ಗುಡಿಯ ಮಧ್ಯದಲ್ಲಿರಿಸಿ, ಕೈ ಮುಗಿದು ಕುಳಿತುಕೊಂಡಳು.
ಆ ಅವರೆಲ್ಲರ ಅ ಊರಿನ ಪ್ರಕಾರ,
ದುರುಗಮ್ಮ ಮೈಮೇಲೆ ಬರುವ ಪೂಜಾರಿ ಮಾತಾಡುವುದಿಲ್ಲ.
ಕೇಳಿದ ಪ್ರಶ್ನೆಗೆ ಒಪ್ಪಿಗೆಯಿದೆ ಎಂದಾದರೆ ಆ ಹಾರವನ್ನು ಎತ್ತಿ ಪ್ರಶ್ನಿಸಿದವರೆಡೆಗೆ ಎಸೀತಾನೆ.
ಒಪ್ಪಿಗೆಯಿಲ್ಲವೆಂದಾದಲ್ಲಿ ತಾನೆ ಆ ಹಾರವನ್ನು ಧರಿಸಿಕೊಂಡು ಗುಡಿಯ ಒಳಗೆ ಹೋಗಿ ಬಾಗಿಲು ಜಡಿದುಕೊಳ್ಳುತ್ತಾನೆ.
ಈಗ ನಡೀಬೇಕಾಗಿರೋದು ಅದೇನೇ.
ಬೆಳಿಗ್ಗೆ ತಂದಿಟ್ಟ ಹಾರ ಬಾಡುತ್ತಾ ಬಂದಿದೆ.
ಆದರೆ ಪೂಜಾರಪ್ಪ ಹಾರದತ್ತ ತಿರುಗಿಯೂ ನೋಡುತ್ತಿಲ್ಲ.
ಸುಮ್ಮನೆ ಕುಣೀತಾನೆ, ನಂತರ ಎಷ್ಟೋಹೊತ್ತು ಸುಮ್ಮನೆ ಬಿದ್ದುಕೊಂಡು ಬಿಡುತ್ತಾನೆ.
ಸುತ್ತಲೂ ಜನ ನಿಂತೇ ಇದ್ದಾರೆ.
ಹೀಗೆ…..
ಏಳು ಹಗಲು ಏಳು ರಾತ್ರಿ ಹೀಗೇ ನಡೀತು.
ಊಟ ಇಲ್ಲದೆ, ನೀರಿಲ್ಲದೆ ಆ ತಾಯಿ ಕುಳಿತೇ ಇದ್ದಾಳೆ.
ಪೂಜಾರಪ್ಪನೂ ಏಳುಹಗಲು, ಏಳು ರಾತ್ರಿಗಳಿಂದ ಸುಮ್ಮನೆ ಕುಣಿಯೋದು, ಬಿದ್ದುಕೊಳ್ಳೋದು ಹೀಗೆ ಮಾಡ್ತಾನೆ.
ಗೌಡನೂ ಹಾಗೇ, ಕೂಳು ನೀರು ಬಿಟ್ಟು ಕುಳಿತಿದ್ದಾನೆ.
ಅಷ್ಟೆ ಅಲ್ಲ,
ಪ್ರತಿದಿನ ಬಾಡಿಹೋದ ಹಾರವನ್ನು ಬಿಸಾಡಿ, ಹೊಸಹಾರವನ್ನು ತರಿಸಿ ಇಡುತ್ತಾ ಬರುತ್ತಿದ್ದಾನೆ.
ಕೊನೆಗೆ ಆ ಹೆಣ್ಣುಮಗಳು ಸಿಟ್ಟುಬಂದು ….
“ಏಯ್, ಹೋಗಯ್ಯ ಕಂಡಿದೀನಿ.. ಏನೋ ದುರುಗಮ್ಮನ ಪರಡಿ ಇಷ್ಟುದಿನ ಹೊತ್ತಿದೀನಿ ಅಂತ ಪ್ರಶ್ನೆ ಕೇಳಿದ್ರ ನನಗ ಆಟ ಆಡಿಸ್ತೀಯಲಾ..ನಾ ನನ ಮಗಳ ಮದ್ವಿ ಮಾಡುವಾಕೀನ.. ನೀ ಕೊಟ್ರೆಷ್ಟು ಬಿಟ್ರೆಷ್ಟು ಹಾರಾನ್ನಾ.. ಅದೇನ್ ಆಗ್ತದೆ ನೋಡೇಬಿಡೋಣ..”
ಎಂದು ಬೈದುಹೊರಟುಬಿಟ್ಟಳು.
ತಡೆಯಲು ಬಂದ ಗೌಡರಿಗೆ,
“ನೋಡ್ರೀ. ದುರುಗಮ್ಮ ನಿಮ್ಮ ದೇವ್ರಂತೂ ಅಲ್ಲಲಾ..? ಪೂಜೆ ಮಾಡ್ತಿರಿ ಖರೆ, ಮಂದೇವ್ರಂತು ಅಲ್ಲಲಾ..? ಮತ್ಯಾಕ ಹೆದರ್ತೀರಿ.. ಶಾಪ ಕೊಟ್ರ ನನಗ ಕೊಡ್ತಾಳ.. ಬಿಡ್ರಿ ಅದೇನಂತ ಕೆಟ್ಟದ್ದು ಮಾಡ್ತಾಳ ನೋಡೇಬಿಡಾಣ..”
ಎಂದು ಸಟಸಟ ಉತ್ತರಿಸಿ.. .. ಹೊರಟು ಹೋದಳು ತಿರುಗಿನೋಡದೆ..!
ಮಾರನೆಯ ದಿನ ಊರೆಲ್ಲಾ ನೋಡಿದ್ದು..
ಪ್ರಶ್ನೆಗಳಿಗೆಲ್ಲ ಉತ್ತರ ಹೇಳಬೇಕಾದ ಪೂಜಾರಿ ರಕ್ತ ಮಡುವಿನಲ್ಲಿ ಸತ್ತುಬಿದ್ದಿದ್ದ.
*****
ಮೌಢ್ಯಕ್ಕೆ ಸೆಡ್ಡು ಹೊಡೆದ ಆ ಅವಳು … ಮಗಳಿಗಾಗಿ ಆದರೂ ತನ್ನ ನಿಲುವಿಗಾದರೂ ನಡೆದುಕೊಂಡಿದ್ದು "ಹಸಿದವರ" ಕಣ್ಣಿಗೆ ಸೂಜಿ ಮೊನೆ ತಾಕಿಸಿದಂತೆಯೇ ಇದೆ……