ಪದೇಪದೇ ನಿಟ್ಟುಸಿರುಬಿಡುತ್ತಿದ್ದ್ದ್ದೆ! ಏನೋ ಒಂದು ರೀತಿಯ ಅಧೀರತೆ! ದುಗುಡ! ಯಾವ ಕೆಲಸವನ್ನೂ ಮಾಡಲಾರದೆ ಟಿವಿಯತ್ತ ನೋಡುತ್ತಿದ್ದೆ. ಜನಪ್ರಿಯ ಸೀರಿಯಲ್ಲಿನ ನಾಲ್ಕುನೂರ ಇಪ್ಪತ್ತನೆಯ ಎಪಿಸೋಡು ಬಿತ್ತರವಗುತ್ತಿತ್ತು! ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಮೂಲ ಕತೆ ಹಳ್ಳ ಹಿಡಿದಿದೆ ಎನ್ನುವುದು ಗೊತ್ತಿದ್ದರೂ ರಬ್ಬರಿನಂತೆ ಎಳೆಯುತ್ತಿದ್ದರು! ನನ್ನವಳು ಹುರಿಳಿಕಾಯಯನ್ನು ಚಟಚಟನೆ ಮುರಿಯುತ್ತಾ, ತುಟುಪಿಟಿಕ್ಕನ್ನದೆ ಸೀರಿಯಲ್ಲಿನಲ್ಲಿ ಕಣ್ಣು ನೆಟ್ಟಿದ್ದಳು. ನಾಲ್ಕು ನಿಮಿಷ ಸೀರಿಯಲ್ಲಿನ ನಂತರ ಐದು ನಿಮಿಷದ ಜಾಹೀರಾತು! ಮತ್ತೆ ನಾಲ್ಕು ನಿಮಿಷ ಸೀರಿಯಲ್ಲು ಹೀಗೆ ಸಾಗಿತ್ತು ಸೀ..ರಿ..ಯಲ್ಲು! ದೀರ್ಘ ಜಾಹೀರಾತಿನ ನಡುವೆ ಮನೆಯವಳು ಕೇಳಿದಳು.
"ಯಾಕೆ ಇಷ್ಟೊಂದು ಹೆದರಿದ್ದೀರ..?"
"ನಾಳೆ ಬೆಂಗ್ಳೂರಿಗೆ ಹೋಗ್ಬೇಕಲ್ಲಾ?" ಚಿಂತೆಯಿಂದ ಹೇಳಿದೆ.
"ಹೋಗ್ಬೇಡಿ ಬಿಟ್ಬಿಡಿ!" ಸರಳ ಸಲಹೆ ನೀಡಿದಳು.
"ಹೋಗ್ದಿದ್ರೆ ವಿಶ್ವ ಸುಮ್ಮನಿರ್ತಾನಾ.? ಜನ್ಮ ಜಾಲಾಡಿಬಿಡ್ತಾನೆ"
"ಹಾಗಿದ್ರೆ ಹೋಗಿ, ಹೀಗೆ ಹಗರಣದಲ್ಲಿ ಸಿಕ್ಕ ಮಿನಿಸ್ಟರ್ ತರಾ ನನ್ನೆದುರು ಕೂತ್ಕೋಬೇಡಿ"
ಉತ್ತರಿಸುವ ಗೋಜಿಗೆ ಹೋಗದೆ ಮತ್ತೊಮ್ಮೆ ನಿಟ್ಟುಸಿರಿಟ್ಟೆ! ನನ್ನ ಚಡ್ಡಿ ದೋಸ್ತ್ ವಿಶ್ವನ ಮಗಳ ಮದುವೆ ರಿಸೆಪ್ಷನ್! ಹೋಗದಿದ್ದರೆ ಅವನು ರೌದ್ರಾವತಾರ ತಳೆಯುವುದರಲ್ಲಿ ಅನುಮಾನವಿರಲಿಲ್ಲ. ಆದರೆ ಮದುವೆ ಬೆಂಗ್ಳೂರಿನಲ್ಲಿ! ಅದೇ ನನ್ನ ಚಿಂತೆಗೆ ಕಾರಣ! ಬೆಂಗ್ಳೂರಿನ ಟ್ರಾಫಿಕ್ಕು ನೆನಸಿಕೊಂಡರೆ ನನಗೆ ಚಳಿಜ್ವರ ಬರುತ್ತದೆ! ಆದಷ್ಟೂ ಬೆಂಗಳೂರಿಗೆ ಹೋಗುವುದನ್ನೇ ನಾನು ಅವಾಯ್ಡ್ ಮಾಡುತ್ತೇನೆ! ಕೆಲವೊಮ್ಮೆ ಸಾಧ್ಯವಾಗುವುದಿಲ್ಲ! ಆಗ ಒಲ್ಲದ ಮನಸ್ಸಿನಿಂದ ಹೋಗುತ್ತೇನೆ. ಮೈಸೂರಿಂದ ಬೆಂಗಳೂರಿಗೆ ಹೇಗೋ ಹೋಗಿಬಿಡುತ್ತೇನೆ. ಬೆಂಗ್ಳೂರಿನ ಬಸ್ ಸ್ಟ್ಯಾಂಡೋ ಇಲ್ಲಾ ರೈಲ್ವೇ ಸ್ಟೇಷನ್ನಿನಿಂದಲೂ ಬೇಕಾದ ಕಡೆಗೆ ಹೋಗಲು ಮಾತ್ರ ಯಮಯಾತನೆ. ಆ ಟ್ರಾಫಿಕ್ಕು, ವಾಹನಗಳ ಕಲುಷಿತ ಹೊಗೆ, ಜನಜಂಗುಳಿ, ಹೋಟಿಲಿನಲ್ಲಿನ ತಿಂಡಿ-ತಿನಿಸುಗಳ ರೇಟು ಇವೆಲ್ಲಾ ಬೆಂಗಳೂರಿನ ನೂರಾರು ಸಮಸ್ಯೆಗಳು ನನ್ನಲ್ಲಿ ಧಿಗಿಲು ಹುಟ್ಟಿಸುತ್ತವೆ! ಈ ಸಮಸ್ಯೆಗಳ ಚಕ್ರವ್ಯೂಹವನ್ನು ಅಭಿಮನ್ಯುವಿನಂತೆ ಭೇದಿಸಿ ಹೋರಾಡಿ ಕೊನೆಯಲ್ಲಿ ನುಜ್ಜುಗುಜ್ಜಾಗಿ ಮೈಸೂರಿಗೆ ವಾಪಸ್ಸಾಗುತ್ತೇನೆ.
ತಲೆಕೆಡಿಸಿಕೊಂಡರೆ ಸಮಯ ಸುಮ್ಮನಿರುತ್ತದೆಯೇ? ಬೆಳಗಾಗಿಯೇಬಿಟ್ಟಿತು. ಆರೂಮುಕ್ಕಾಲು ಗಂಟೆಯ ಟ್ರೈನಿಗೆಂದು ನಾಲ್ಕೂವರೆಗೆ ಅಲಾರಂ ಇಟ್ಟು ಮಲಗಿದ್ದೆ. ಎಲ್ಲಾ ಲೆಕ್ಕಾಚಾರದಂತೆಯೇ ಆಯಿತು. ಆರು ಗಂಟೆಗೆ ಮನೆ ಬಿಟ್ಟು ರೈಲ್ವೇಸ್ಟೇಷನ್ ತಲುಪಿದೆ. ಆರೂಕಾಲಿಗೆ ಕ್ಯೂನಲ್ಲಿ ನಿಂತದ್ದಕ್ಕೆ ಆರೂ ನಲವತ್ತಕ್ಕೆ ಟಿಕೆಟ್ ಸಿಕ್ಕಿತು. ಏಳುಬೀಳು ಲೆಕ್ಕಿಸದೆ ಟ್ರೈನು ಹಿಡಿಯಲು ಒಲಂಪಿಕ್ ಓಟಗಾರನಂತೆ ಓಡಿದೆ. ಇನ್ನೊಂದೇ ನಿಮಿಷ ತಡವಾಗಿದ್ದರೂ ಸ್ಟೇಷನ್ನಿನಲ್ಲೇ ಉಳಿಯಬೇಕಿತ್ತು! ಹೇಗೋ ಟ್ರೈನು ಹತ್ತಿದೆ. ಮೊದಲು ಬಂದವರಿಗೆ ಅವರ ಇಚ್ಛೆಯಂತೆ ಸೀಟುಗಳು ಸಿಕ್ಕಿದ್ದವು. ನನಗೆ ಬಾಗಿಲಿನ ಹತ್ತಿರದಲ್ಲಿ ಕೊಟ್ಟಕೊನೆಯ ಸೀಟು ಸಿಕ್ಕಿತು. ಹೇಗೋ ಸೀಟಂತೂ ಸಿಕ್ಕಿತಲ್ಲ ಎಂದು ಕೂತರೆ ಮೂರು ನಿಮಿಷದಲ್ಲೇ ಹತ್ತಿರದ ಟಾಯ್ಲೆಟ್ಟಿನಿಂದ ತೂರಿಬಂದ ವಾಸನೆ ನೆÀಮ್ಮದಿ ಕಲಕಿತು. ಹೇಗೋ ಮೂರು ಗಂಟೆಯಲ್ಲ ಎಂದು ಕರವಸ್ತ್ರ ಮೂಗಿಗೆ ಹಿಡಿದು ಕೂತೆ.
ಟ್ರೈನು ಹೊರಟು ಇನ್ನೂ ಹತ್ತು ನಿಮಿಷಗಳೇ ಆಗಿರಲಿಲ್ಲ. ಆಗಲೇ ಟಾಯ್ಲೆಟ್ಟು ಉಪಯೋಗಿಸುವವರು ಪರೇಡ್ ಮಾಡಹತ್ತಿದ್ದರು. ನಾನೇ ಅವತ್ತಿನ ಪೆರೇಡಿನ ಛೀಫ್ ಗೆಸ್ಟ್ ಎನ್ನುವಂತೆ ಎಲ್ಲರೂ ನನ್ನನ್ನು ನೋಡಿ ನಂತರ ಟಾಯ್ಲೆಟ್ಟಿಗೆ ಹೋಗುತ್ತಿದ್ದರು! ಟ್ರೈನು ಶ್ರೀರಂಗಪಟ್ಟಣದಲ್ಲಿ ನಿಂತು ಹೊರಟಿತು. ಅಲ್ಲಿ ಹತ್ತಾರು ಜನ ಬಕೇಟು, ಬ್ಯಾಗು, ಕಾಫಿಯ ಡ್ರಮ್ ಇತ್ಯಾದಿಗಳೊಂದಿಗೆ ಟ್ರೈನು ಹತ್ತಿದರು. ಅವರೆಲ್ಲಾ ಟ್ರೈನಿನಲ್ಲಿ ತಿಂಡಿ, ಕಾಫಿ ಮಾರುವವರು.
ದೇಹ ಬಾಧೆ ತೀರಿಸಿಕ್ಕೊಳ್ಳಲು ಟಾಯ್ಲೆಟ್ಟಿಗೆ ಎಡೆತಾಕುವವರ ಜೊತೆಗೆ ತಿಂಡಿ-ಕಾಫಿ ಮಾರುವವರೂ ಸೇರಿ ಪ್ರಯಾಣಿಕರಿಗೆ ಪುಕ್ಕಟೆ ಮನರಂಜನೆ!!
ಆ ಬೋಗಿಯಲ್ಲಿದ್ದ ಹೆಚ್ಚಿನವರು ತಮ್ಮ ಮೊಬೈಲುಗಳಿಗೆ ಕಣ್ಣು ಮತ್ತು ಕಿವಿ ಜೋಡಿಸಿಕೊಂಡಿದ್ದರು! ಕೆಲವರು ಕಿವಿಗೆ ಇಯರ್ ಫೆÇೀನು ಹಾಕಿಕೊಡು ಸಂಗೀತ ಕೇಳುತ್ತಿದ್ದರು, ಇನ್ನು ಕೆಲವರು ಮೊಬೈಲಿನಲ್ಲಿ ಎಸ್ಸೆಮ್ಮೆಸ್ಸಿನಲ್ಲಿ ಮಗ್ನರು, ಇನ್ನೂ ಕೆಲವರು ಫೆÇೀನಿನಲ್ಲಿ ಸಂಭಾಷಿಸುತ್ತಿದ್ದರು. ಯುವಜನರು ಮೊಬೈಲುಗಳಲ್ಲಿರುವ ಮಾಹಿತಿಯನ್ನು ತದೇಕ ಚಿತ್ತರಾಗಿ ನೋಡುತ್ತಿದ್ದರು. ಛೆ..ನಾನು ಒಂದು ಪುಸ್ತಕವನ್ನಾದರೂ ತರಬೇಕಿತ್ತು ಎನಿಸಿತು. ಮರುಕ್ಷಣವೇ ಓದಲು ಸಾಧ್ಯವಾಗುತ್ತಿರಲಿಲ್ಲ ಎನಿಸಿತು. ಕೊನೆಯ ಸೀಟಿನಲ್ಲಿ, ಪ್ಯಾಸೇಜಿನ ಹತ್ತಿರವೇ ಸೀಟಿನ ಕೊನೆಯಲ್ಲಿ ಕೂತಿದ್ದರಿಂದ, ಕಾಫಿಯ ಡಬ್ಬಾಗಳು, ತಿಂಡಿಯ ಬ್ಯಾಗುಗಳು ನನ್ನನ್ನು ಸವರಿಕೊಂಡೇ ಹೋಗುತ್ತಿದ್ದವು. ಜೊತೆಗೆ ಟಾಯ್ಲೆಟ್ಟು ಬಾಗಿಲು ತೆರೆದಾಗ ಸೂಸುತ್ತಿದ್ದ ವಾಸನೆ! ಇದರ ನಡುವೆ ಓದುವುದು ಸಾಧ್ಯವಿರಲಿಲ್ಲ! ಒಟ್ಟಿನಲ್ಲಿ ಪುಸ್ತಕ ತರದೇ ಇದ್ದುದೇ ಒಳಿತಾಯಿತೆನಿಸಿತು. ಇನ್ನೂ ಸ್ವಲ್ಪ ದೂರ ಸಾಗುತ್ತಲೇ ಇಬ್ಬರು ಮಂಗಳಮುಖಿಯರು ಯುವಜನರನ್ನೇ ಟಾರ್ಗೆಟ್ ಮಾಡಿಕೊಂಡು ಹಣ ಕೀಳಲು ಪರೇಡ್ ಮಾಡಿದರು! ಕಣ್ಣಿಲ್ಲದವರೂ, ಕಾಲಿಲ್ಲದವರೂ ಭಿಕ್ಷೆ ಬೇಡುತ್ತಾ ಪರೇಡ್ ಮಾಡಿದರು!
ಟ್ರೈನು ನಿಂತ ಸ್ಟೇಷನ್ನುಗಳಲ್ಲಿ ಮತ್ತಷ್ಟು ಜನ ಹತ್ತುತ್ತಿದ್ದರು! ಇಳಿಯುತ್ತಿದ್ದವರು ಕಡಿಮೆ!! ಬರುಬರುತ್ತಾ ನೊಣ ಕೂಡ ಹಾರಾಡಲು ಜಾಗವಿಲ್ಲದಂತೆ ಟ್ರೈನು ಪ್ರಯಾಣಿಕರಿಂದ ತುಂಬಿಕೊಂಡಿತು! ನನ್ನ ಪಕ್ಕದಲ್ಲಿ ಕೂತ ಮಹನೀಯರೊಬ್ಬರು ತೂಕಡಿಸುತ್ತಾ ನನ್ನ ಹೆಗಲನ್ನೇ ತಲೆದಿಂಬಾಗಿಸಿಕ್ಕೊಳ್ಳಲು ಹವಣಿಸುತ್ತಿದ್ದರು. ನನ್ನ ಹೆಗಲನ್ನು ಅವರ ಎಣ್ಣೆತಲೆಯಿಂದ ರಕ್ಷಿಸಿಕ್ಕೊಳ್ಳಲು ಜಾಗೃತನಾಗಿ, ಯಮ ಸಾಹಸ ಮಾಡುತ್ತಿದ್ದೆ.
ಎಲ್ಲ ಹೆಣಗಾಟಗಳ ನಡುವೆ ಬೆಂಗಳೂರು ಸ್ಟೇಷನ್ನು ಬಂದೇಬಿಟ್ಟಿತು. ಕೆಲಸ ಕಾರ್ಯಗಳಿಗಾಗಿ ಬೆಂಗಳೂರಿಗೆ ಬಂದಿದ್ದ ಜನ ಆತುರಾತುರದಿಂದ ರೈಲು ಡಬ್ಬಿಗಳಿಂದ ನೊಣಗಳಂತೆ ಈಚೆ ಹಾರತೊಡಗಿದರು. ನಾನು ಸಾವಕಾಶವಾಗಿ ರೈಲುನಿಲ್ದಾಣದಿಂದ, ಸಿಟಿಬಸ್ ನಿಲ್ದಾಣಕ್ಕೆ ಬಂದೆ.
ಲಗ್ನಪತ್ರಿಕೆ ತೆಗೆದು ಕಲ್ಯಾಣಮಂಟಪದ ಅಡ್ರೆಸ್ ಓದಿ, ಅಲ್ಲಿಗೆ ಹೋಗಲು ಯಾವ ಬಸ್ಸು ಹಿಡಿಯಬೇಕು ಎಂಬ ಮಾಹಿತಿಗೆ ಸುತ್ತ ನೋಡಿದೆ. ಬಸ್ಸಿನ ಸಿಬ್ಬಂದಿ ಹಲವರಿದ್ದರೂ ಮಾತಾಡುವ ಸ್ಥಿಯಲ್ಲಿರಲಿಲ್ಲ! ಕಂಡಕ್ಟರುಗಳು ತಮ್ಮ ಟ್ರಿಪ್ ಶೀಟಿಗೆ ಸಹಿ ಹಾಕಿಸಿಕ್ಕೊಳ್ಳಲು ಆತುರದಿಂದ ಇದ್ದರೆ, ಸಹಿ ಹಾಕಲು ನಿಂತಿದ್ದವರು ಟ್ರಿಪ್ ಶೀಟನ್ನು ಪರಿಶೀಲಿಸುವ ಬಿಜಿಯಲ್ಲಿದ್ದರು. ಇನ್ನು ಯಾರನ್ನು ಕೇಳುವುದು. "ವಾಟರ್ ವಾಟರ್ ಎವ್ವೆರಿವೇರಿ, ಬಟ್ ನಾಟ್ ಎ ಡ್ರಾಪ್ ಟು ಡ್ರಿಂಕ್" ಎಂದು ಸಾಗರದ ಮಧ್ಯದಲ್ಲಿದ್ದವರು ಉದ್ಗರಿಸಿದಂತೆ, ನಾನೂ "ಇಷ್ಟು ಜನರ ನಡುವೆ ನನಗೆ ಬಸ್ಸು ತೋರಿಸುವವರು ಯಾರೂ ಇಲ್ಲವೇ?" ಎಂದುಕೊಂಡೆ. ಹತ್ತಿರ ಒಬ್ಬ ಬಸ್ ಗೈಡು ಮಾರುತ್ತಿದ್ದವ ಬಂದ. ಅವನನ್ನೇ ಕೇಳಿದೆ. ಅವನು ಗಂಟೆ ಹೊಡೆದಂತೆ "ಎಲ್ಲಾ ಮಾರ್ಗಗಳೂ ಮತ್ತು ಬಸ್ಸುಗಳ ಮಾಹಿತಿ ಇಪ್ಪತ್ತು ರೂಪಾಯಿ" ಎಂದು ಹೇಳಿ ನಾನು ಕೊಳ್ಳುವುದಕ್ಕೆ ಕಾದು ನಿಂತ. ನಾನು ಕೊಳ್ಳುವ ಯಾವ ಸೂಚನೆಯನ್ನೂ ತೋರಿಸಲಿಲ್ಲ! ಅವನು ಜಾಗ ಖಾಲಿ ಮಾಡಿದ.
ಕೊನೆಗೊಬ್ಬ ಪುಣ್ಯಾತ್ಮ ಬಸ್ ನಂಬರು ಹೇಳಿದ. ಅವನಿಗೆ ಧನ್ಯವಾದ ಹೇಳಿ ಪ್ಲಾಟ್‍ಫಾರಂ ಹುಡುಕಿ, ಬಂದ ಬಸ್ಸು ಏರಿಯೇಬಿಟ್ಟೆ! ಸೀಟು ಸಹ ಸಿಕ್ಕಿದ್ದಕ್ಕೆ ಆನಂದವಾಯಿತು. ನಿಜಕ್ಕೂ ಬೆಂಗಳೂರಿನ ಬಗೆಗೆ ನನ್ನ ಹೆದರಿಕೆ ಸುಳ್ಳು! ನಾನು ಹೆದರಬಾರದು ಎನಿಸಿತು. ನನ್ನ ಸೀಟಿನ ಕಿಟಿಕಿಯ ಬಳಿ ಕೂತಿದ್ದ ವ್ಯಕ್ತಿ ಟೂತ್‍ಪೇಸ್ಟ್ ಜಾಹೀರಾತಿನ ರೂಪದರ್ಶಿಯಂತೆ ತನ್ನ ಅಷ್ಟೂ ದಂತಪಂಕ್ತಿಯನ್ನು ಪ್ರದರ್ಶಿಸಿ ನಕ್ಕ! ಎಲಾ..ಬೆಂಗಳೂರಿನ ಜನ ಇಷ್ಟು ಸ್ನೇಹಪರರಾದರೆ ಎಂಬ ಅಚ್ಚರಿಯೊಂದಿಗೆ ಮುಖದ ಮೇಲೆ ನಗು ತಂದುಕ್ಕೊಳ್ಳಲು ಪ್ರಯತ್ನಿಸಿದೆ.
ಕಂಡಕ್ಟರ್ ಟಿಕೇಟಿಗೆ ಬಂದ. ಅವನಿಗೆ ಇನ್ವಿಟೇಷನ್ ತೋರಿಸಿ "ಈ ಕಲ್ಯಾಣಮಂಟಪದ ಹತ್ತಿರದ ಸ್ಟಾಪು ಬಂದಾಗ ಹೇಳ್ತೀರಾ ಪ್ಲೀಸ್" ವಿನಂತಿಸಿಕೊಂಡೆ. ಪಕ್ಕದಲ್ಲಿದ್ದಾತ "ನಾನೂ ಅಲ್ಲೇ ಇಳಿಯೋದು, ಹೇಳ್ತೀನಿ ಬಿಡಿ" ಎಂದಾಗ ನನಗೆ ತಂಪು ಮಜ್ಜಿಗೆ ಕುಡಿದಷ್ಟೇ ನೆಮ್ಮದಿಯಾಯಿತು. ಆತ ನನ್ನನ್ನು ಮಾತಿಗೆಳೆದ. ನನ್ನ ಕೆಲಸ, ಊರು ಎಲ್ಲಾ ಕೇಳಿದ. ಅವನ ಬಗೆಗೆ ಕೂಡ ಹೇಳಿದ. ಅಲ್ಲೇ ಕಲ್ಯಾಣಮಂಟಪದ ಹತ್ತಿರವೇ ಅವನ ಮನೆಯಂತೆ, ಯಾವುದೋ ಕಂಪೆನಿಯಲ್ಲಿ ಕೆಲಸ ಮಾಡುತ್ತಾನಂತೆ. ಇವತ್ತು ರಜವಂತೆ ಇತ್ಯಾದಿ.
"ಹತ್ತಿರದವರ ಮದುವೇಂದ್ರೆ ತುಂಬಾ ಖರ್ಚು ಸಾರ್" ಎಂದು ಅವನು ನನ್ನ ತೊಡೆಯನ್ನು ಅಲಂಕರಿಸಿದ್ದ ಕ್ಯಾರಿ ಬ್ಯಾಗಿನಲ್ಲಿದ್ದ ದೊಡ್ಡ ಪ್ಯಾಕೆಟ್ಟು ನೋಡುತ್ತಾ ಹೇಳಿದ.
"ಹೌದಪ್ಪಾ" ನಾನು ಹೂಗುಟ್ಟಿದೆ.
"ತೀರಾ ಹತ್ತಿರದವರಾದರೆ ಪ್ರೆಸೆಂಟೇಶನ್ ಖರ್ಚು ಹೆಚ್ಚು" ಎಂದು ತನ್ನ ಜೋಕಿಗೆ ತಾನೇ ನಕ್ಕ.
"ಟಿಫನ್ ಆಯ್ತಾ ಸಾರ್..?" ಅವನ ಮಾತು ಮುಂದುವರಿದಿತ್ತು.
"ಇಲ್ಲಪ್ಪಾ, ಟಿಫನ್ನಿಗೆ ಹೋದರೆ ಲೇಟಾಗಿಬಿಡುತ್ತೇಂತ ಮಾಡಿಲ್ಲ. ಇನ್ನೇನು ಮದ್ವೆ ಮನೇಲಿ ಸ್ನೇಹಿತನಿಗೆ ಮುಖ ತೋರಿಸಿದ ಮೇಲೇನೆ ಟಿಫನ್"
"ತುಂಬಾ ಕ್ಲೋಸೂಂತ ಕಾಣ್ಸುತ್ತೆ"
"ಬಾಲ್ಯ ಸ್ನೇಹಿತ"
"ತುಂಬಾ ಕ್ಲೋಸೇ ಬಿಡಿ" ಎಂದವನು ಬ್ಯಾಗಿನಿಂದ ಬಿಸ್ಕೆಟ್ ಪ್ಯಾಕೆಟ್ ತೆಗೆದ. "ಡಯಾಬಿಟೀಸು ಸಾರ್, ಹೊಟ್ಟೆ ಖಾಲಿಯಾದ್ರೆ ಶುಗರ್ ಲೆವಲ್ಲು ಕಮ್ಮಿಯಾಗಿಬಿಡುತ್ತೆ" ಎಂದು ನಗುತ್ತಾ ತಿನ್ನತೊಡಗಿದ.
"ಹೌದು, ಶುಗರಿನವರು ಹುಷಾರಾಗಿರಬೇಕು. ಒಳ್ಳೇ ಕೆಲಸ ಮಾಡಿದೀರಿ. ಜೊತೇಲೇ ಬಿಸ್ಕೆಟ್ ಇಟ್ಕೊಂಡಿದ್ದೀರಿ" ಎಂದು ತಾರೀಫು ಮಾಡಿ, ಇನ್ನೂ ಎಷ್ಟು ದೂರ ಹೋಗಬೇಕೋ ಎಲ್ಲಿ ಇಳಿಯಬೇಕೋ ಎನ್ನುವ ಚಿಂತೆಯಲ್ಲಿ ಆಚೀಚೆ ನೋಡತೊಡಗಿದೆ.
"ತಗೊಳ್ಳಿ ಸಾರ್, ಟಿಫನ್ ಬೇರೆ ಮಾಡಿಲ್ಲಾಂತೀರ" ಬಿಸ್ಕೆಟ್ ಪ್ಯಾಕೆಟ್ ನನ್ನ ಮುಂದೆ ಹಿಡಿದ.
"ಬೇಡ, ಬೇಡ..ನನಗೇನೂ ಶುಗರ್ ಕಂಪ್ಲೈಂಟ್ ಇಲ್ಲ" ನಯವಾಗಿ ತಿರಸ್ಕರಿಸಿದೆ.
"ಅಯ್ಯೋ, ಶುಗರ್ ಇಲ್ಲದಿದ್ದರೂ ಇದನ್ನ ತಿನ್ನಬಹುದು. ಕ್ಯಾಷೂ ಬಿಸ್ಕೆಟ್ಟು, ಒಂದು ತಗೊಳ್ಳಿ ಸಾರ್, ಇಲ್ಲದಿದ್ರೆ ನನಗೆ ತಿನ್ನೋಕೆ ಮುಜುಗರವಾಗುತ್ತೆ"
ಅವನ ಬಲವಂತಕ್ಕೆ ಒಂದು ಬಿಸ್ಕೆಟ್ ತೆಗೆದುಕೊಂಡು ಬಾಯಿಗಿಟ್ಟುಕೊಂಡೆ.
ಒಂದು ಬಿಸ್ಕೆಟ್ ಮುಗಿಯುತ್ತಿದ್ದಂತೆ ಮತ್ತೆ ಪ್ಯಾಕೆಟ್ ಮುಂದೆ ಹಿಡಿದ. ತಿನ್ನದಿದ್ದರೆ ಜಂಭವೆಂದು ತಿಳಿಯುತ್ತಾನೆಂದು ಇನ್ನೊಂದು ತೆಗೆದುಕೊಂಡೆ. ಬಿಸ್ಕೆಟ್ ಚೆನ್ನಾಗಿತ್ತು-ಕ್ಯಾಶ್ಯೂ ಬಿಸ್ಕೆಟ್ಟೇ. ಅರೆ ನಾನೂ ಒಂದು ಪ್ಯಾಕೆಟ್ಟು ಇಟ್ಟುಕೋಬಹುದಿತ್ತಲ್ಲ. ಯಾಕೆ ಇಂತಾ ವಿಷಯಗಳು ನನ್ನ ಮನಸ್ಸಿಗೆ ಬರುವುದಿಲ್ಲವೋ ಎಂದು ಆಶ್ಚರ್ಯವಾಯಿತು.
ಅವನು ಮತ್ತೆಮತ್ತೆ ನನ್ನೆದುರು ಪ್ಯಾಕೆಟ್ಟು ಹಿಡಿಯುತ್ತಿದ್ದ. ನಾನೂ ವಿರೋಧ ತೋರಿಸದೆ ತಿನ್ನುತ್ತಿದ್ದೆ.
"ಇನ್ನೂ ತುಂಬಾ ದೂರ ಇದೆ ಸಾರ್, ಅರ್ಧ ಗಂಟೆಯಾದ್ರೂ ಬೇಕೇಬೇಕು. ಅದೂ ಈ ಟ್ರ್ಯಾಫಿಕ್ಕಿನಲ್ಲಿ ಒಂದು ಗಂಟೆಯಾದರೂ ಆಗುತ್ತೆ"
ಮೈಸೂರಿನಿಂದ ಬರುವಾಗ ಟ್ರೈನಿನ ಜನಕ್ಕೆ ಹೈರಾಣಾಗಿದ್ದ ನನಗೆ ತೂಕಡಿಕೆ ಬಂದಂತಾಯಿತು. ಬಿಸ್ಕೇಟು ತಿಂದಿದ್ದರಿಂದ ಹೊಟ್ಟೆಯ ಚಿಂತೆ ಕೊಂಚ ಕಡಿಮೆಯಾಗಿತ್ತು. ಆಕಳಿಸಿದೆ. ಹೇಗೂ ಇನ್ನೂ ಅರ್ಧ ಗಂಟೆಯ ಪ್ರಯಾಣ ಇದೆಯಲ್ಲ ಎಂದು ಕಣ್ಮುಚ್ಚಿದೆ. ಮಾತು ಸಾಕಾಗಿತ್ತು. ಪಕ್ಕದಲ್ಲಿದ್ದವನೂ ಅಲ್ಲಿಯೇ ಇಳಿಯುವುದರಿಂದ ಹೆದರಿಕೆ ಇರಲಿಲ್ಲ. ಅರಾಮವಾಗಿ ತೂಕಡಿಸತೊಡಗಿದೆ.
ಯಾರೋ ನನ್ನನ್ನು ಅಲುಗಾಡಿಸಿ ಎಬ್ಬಿಸಿದರು. ಬಹುಶಃ ಕಲ್ಯಾಣಮಂಟಪ ಬಂದಿರಬೇಕೆಂದು ಕಣ್ತೆರೆದೆ.
"ಸಾರ್, ಇದು ಕೊನೇ ಸ್ಟಾಪು.." ಎಬ್ಬಿಸಿದವನು ಕಂಡಕ್ಟರ್! ಬಸ್ಸು ಖಾಲಿಯಾಗಿತ್ತು!!
"ಅರೆ..ಕಲ್ಯಾಣ ಮಂಟಪ..?" ತೊದಲಿದೆ.
"ಐದು ಕಿಲೋಮೀಟರ್ ಹಿಂದೇನೇ ಹೋಯ್ತಲ್ಲ ಸಾರ್. ಪಾಪ ನಿದ್ರೆ ಮಾಡ್ಬಿಟ್ರೇನೊ..?"
ನನ್ನ ಪಕ್ಕದಲ್ಲಿದ್ದವ ನನ್ನ ಎಬ್ಬಿಸಿರಲೇ ಇಲ್ಲ! ತಕ್ಷಣ ಕೈಯ್ಯನ್ನು ನೋಡಿಕೊಂಡೆ. ತೊಡೆಯ ಮೇಲಿಟ್ಟುಕೊಂಡಿದ್ದ ಉಡುಗೊರೆಯ ಬ್ಯಾಗು ಮಾಯವಾಗಿತ್ತು!
"ನನ್ನ ಪಕ್ಕದಲ್ಲಿದ್ದವರು ?" ಗಾಬರಿಯಿಂದ ಕೇಳಿದೆ.
"ಅರ್ಧ ಗಂಟೆ ಹಿಂದೇನೇ ಇಳಿದು ಹೋದ್ರು"
ದಿಗ್ಭ್ರಮೆಯಾಗಿತ್ತು!! ಹೀಗೂ ಮಾಡಬಹುದೆನ್ನುವ ಕಲ್ಪನೆ ಕೂಡ ಮಾಡಲು ಸಾಧ್ಯವಿರಲಿಲ್ಲ! ಆತ ನನಗೆ ಬಿಸ್ಕೆಟ್ ತಿನ್ನಿಸಿ ನಯವಾಗಿ ಮೋಸ ಮಾಡಿದ್ದು ಅರ್ಥವಾಗಿತ್ತು! ಸ್ನೇಹಿತನ ಮಗಳಿಗೆ ಉಡುಗೊರೆ ಕೊಡಲು ತಂದಿದ್ದ ಇಲೆಕ್ಟ್ರಿಕ್ ಕುಕ್ಕರ್ ಅಪರಿಚಿತನ ಪಾಲಾಗಿತ್ತು!
ಬೆಂಗಳೂರೆಂದರೆ ಬೆದರಿ, ಬೆವರುವ ನನ್ನ ಭಯ ಇನ್ನಷ್ಟು ಹೆಚ್ಚಾಗಿತ್ತು!!
ಎಸ್.ಜಿ.ಶಿವಶಂಕರ್,
Ayyo Bengaluru Sir !! Tumba chanagide kate ( neevu kalkondaddakke khandita besaravide )
Thaks Chaitra for reading and for your comments.
* thanks