ಮರಳಿ ಬಂದನೆ ದೀಪು: ನಾಗರತ್ನಾ ಗೋವಿಂದನ್ನವರ.


ಮುಸ್ಸಂಜೆಯ ಸಮಯ ಕಡಲಿನ ಅಲೆಗಳು ಜೋರಾಗಿ ದಂಡೆಗೆ ಅಪ್ಪಳಿಸುತ್ತಾ ಇದ್ದರೂ ಅವುಗಳ ಕಡೆ ಗಮನ ಕೊಡದೆ ತನ್ನ ಇರುವನ್ನೆ ಮರೆತು ಮರಳಿನಲ್ಲಿ ಏನೆನೊ ಚಿತ್ತಾರಗಳನ್ನು ಬರೆಯುವುದರಲ್ಲಿ ಮಗ್ನಳಾಗಿದ್ದಳು ಸರೋಜಾ. ಅದೆಷ್ಟು ಹೊತ್ತು ಹಾಗೆ ಬರೆಯುತ್ತಿದ್ದಳೊ ತಕ್ಷಣ ಏನೊ ನೆನಪಾದವಳಂತೆ ಮೆಲಕ್ಕೆದ್ದು ವೇಗವಾಗಿ ನಡೆಯುತ್ತಾ ಲಾಡ್ಜ್‍ನ್ನು ತಲುಪಿದಳು. ಎದುರಿಗೆ ಬರುತ್ತಿದ್ದ ಸರೋಜಾಳನ್ನು ನೋಡಿದ ಕಿರಣಗೆ ವಿಪರೀತ ಕೋಪಬಂದು ಎಲ್ಲಿ ಹೋಗಿದ್ದೆ ನಿನಗಾಗಿ ಅದೆಷ್ಟೊತ್ತು ಅಂತ ಕಾಯೋದು. ಎಲ್ಲಿಯೂ ಹೋಗಿಲ್ಲಾ ನಡಿರಿ ಎನ್ನುತ್ತಾ ಅವನೊಡನೆ ಹೆಜ್ಜೆ ಹಾಕಿ ರೂಮಿನೊಳಗೆ ಹೋದಳು. ಅವಳ ಹತ್ತಿರ ಬಂದು ಭುಜದ ಮೇಲೆ ಕೈಯಿಟ್ಟು ಸರು ನೀನು ಇತ್ತೀಚೆಗೆ ತುಂಬಾ ಬದಲಾಗಿದ್ದಿಯಾ ಎಲ್ಲಿಗೊ ಹೊಗ್ತಿಯಾ, ಯಾವಾಗೊ ಬರ್ತಿಯಾ, ನಿನಗೆ ಏನಾಗಿದೆ ಯಾಕೆ ಹೀಗಾಗಿದ್ದಿಯಾ ನಿನಗೆ ಹವಾಮಾನ ಬದಲಾದರೆ ನೀನು ಸರಿಯಾಗ್ತಿಯಾ ಅಂತ ಇಲ್ಲಿಗೆ ಕರೆದುಕೊಂಡು ಬಂದೆ ಆದರೆ ನೀನು…. ಎಂದು ಮಾತನ್ನು ಮಧ್ಯದಲ್ಲಿಯೆ ತುಂಡರಿಸಿ ಅವಳ ಉತ್ತರಕ್ಕೆ ಕಾಯುತ್ತಿದ್ದ. 

ಹವಾಮಾನ ಬದಲಾದ ತಕ್ಷಣಕ್ಕೆ ನನ್ನ ಮನಸ್ಸಿನ ನೋವು ಮಾಯಾ ಆಗುತ್ತಾದಾ?  ಇನ್ನು ಎಷ್ಟು ದಿನ ಹೀಗೆ ಕೊರಗ್ತಾ ಇರ್ತಿಯಾ ನೀನು ನೋವು ಅನುಭವಿಸುವುದಲ್ಲದೆ ನನಗೂ ನೋವು ಕೊಡ್ತಾ ಇದ್ದಿಯಾ ಇದೆಲ್ಲಾ ಬೇಡಾ ಹಳೆಯದನ್ನೆಲ್ಲಾ ಮರೆಯಲು ಪ್ರಯತ್ನಿಸು ನಾವು ಯಾವುದಾದರೂ ಮಗುವನ್ನು ದತ್ತು ತಗೆದುಕೊಳ್ಳೊಣಾ ಅದರಿಂದಾ ನಿನ್ನ ಮನಸ್ಸಿಗೆ ಸಮಾಧಾನವಾಗತ್ತೆ. ಒಂದು ಅನಾಥ ಮಗುವಿಗೆ ಪ್ರೀತಿ ನೀಡಿದ ಹಾಗೆ ಆಗುತ್ತೆ ಏನಂತಿಯಾ ಸರು. ನೀವು ಏನು ಹೇಳಿದರೂ ಅಷ್ಟೆ ನಾನು ಅನಾಥ ಮಗುವನ್ನು ನನ್ನ ಮಗುವೆಂದು ಮಾತ್ರ ಸ್ವೀಕರಿಸಲಾರೆ. ನನ್ನ ಕಂದಾ ದೀಪುವಿನ ಸ್ಥಾನವನ್ನು ಬೇರೆ ಯಾರು ತುಂಬಲು ಸಾಧ್ಯವಿಲ್ಲ ಎನ್ನುತ್ತಾ ಅಳತೊಡಗಿದಳು. ಇವಳ ಭುಜದ ಮೇಲೆ ಕೈಯಿಟ್ಟು  ನಾವು ಕಳೆದುಕೊಂಡ ಅಮೂಲ್ಯ ವಸ್ತುವನ್ನ ಮತ್ತೆ ಪಡೆಯೊಕೆ ಸಾಧ್ಯ ಇಲ್ಲಾ  ಸಮಾಧಾನ ಮಾಡಿಕೊ ಎಂದು ಹೇಳಿ ಅಲ್ಲಿಂದ ಹೊರನಡೆದ. 

ರಸ್ತೆಯ ಬದಿಗೆ ಬಂದವನೆ ನೆನಪಿನಾಳಕ್ಕೆ ಜಾರಿದ. ವರ್ಷದ ಕೆಳಗೆ ಅಪ್ಪ-ಅಮ್ಮ, ಸರೋಜಾ ನಮ್ಮ ದೀಪು ಮತ್ತೆ ನಾನು ಎಲ್ಲರೂ ಸೇರಿ ನಂದಿಬೆಟ್ಟಕ್ಕೆ ಹೋಗುತ್ತಿದ್ದೆವು. ಇದ್ದಕಿದ್ದಂತೆ ಲಾರಿಯೊಂದಕ್ಕೆ ಡಿಕ್ಕಿ ಹೊಡೆದು ಕಾರ್ ಆಕ್ಸಿಡೆಂಟನಲ್ಲಿ ನನ್ನ ಅಪ್ಪ-ಅಮ್ಮ ಹಾಗೂ ನಮ್ಮ 3 ವರ್ಷದ ಮುದ್ದು ಕಂದನನ್ನು ಕಳೆದುಕೊಂಡೆವು ನಾನು ಮತ್ತು ಸರು ಪ್ರಾಣಾಪಾಯದಿಂದ ಬದುಕುಳಿದರೂ ಆಕ್ಸಿಡೆಂಟನಲ್ಲಿ ಅವಳ ಗರ್ಭಕೋಶಕ್ಕೆ ತುಂಬಾ ಪೆಟ್ಟಾಗಿ ಅವಳು ಮುಂದೆ ತಾಯಿಯಾಗುವ ಅವಕಾಶವನ್ನೆ ಕಳೆದುಕೊಂಡಿದ್ದಾಳೆ ಎಂದು ಡಾಕ್ಟರ್ ಹೇಳಿದಾಗ ಅವಳು ಕುಗ್ಗಿ ಹೋಗಿದ್ದಳು. ಅದೆಷ್ಟು ಅತ್ತಿದ್ದಳು. ಅವಳನ್ನು ಸಮಾಧಾನ ಮಾಡೊದಿಕ್ಕೆ ಸಾಕು ಸಾಕಾಗಿತ್ತು. ಆ ದು:ಖದಲ್ಲಿಯೆ ಅವಳಿನ್ನು ಇದ್ದಾಳೆ ಅವಳ ದು:ಖವನ್ನು ಮರೆಸೊದಿಕ್ಕೆ ಮನೆಗೊಬ್ಬ ಪುಟಾಣಿಯನ್ನ ಕರೆತರಲೆಬೇಕು ಎಂಬ ಯೋಚನೆ ಬಂದಿದ್ದೆ ತಡ ಮತ್ತೆ ರೆಸ್ಟೊರೆಂಟಗೆ ವಾಪಸ್ಸಾಗಿ ಸರು ನಾಡಿದ್ದು ನಾನು ಆಫಿಸಿಗೆ ಹೊರಡಬೇಕು ಅದಕ್ಕೆ ಇವತ್ತೆ ಊರಿಗೆ ಹೊರಡಬೇಕು ಬೇಗ ರೆಡಿಯಾಗು ರೂಂ ಖಾಲಿ ಮಾಡಿ ಹೋರಡೊಣ ಎಂದ. ಅವಳು ಮರು ಮಾತಾಡದೆ ಬಟ್ಟೆಯನ್ನೆಲ್ಲಾ ಪ್ಯಾಕ ಮಾಡಿ ಹೊರಡಲು ತಯಾರಾದಳು. ನಂತರ ಇಬ್ಬರು ರೂಮಗೆ ಬೀಗ ಹಾಕಿ ಲಾಡ್ಜ ಮಾಲಿಕನಿಗೆ ಬೀಗವನ್ನು ಕೊಟ್ಟರು. ಅಡ್ವಾನ್ಸನಲ್ಲಿ  ಸಾಕಷ್ಟು ದುಡ್ಡನ್ನು ತಗೆದುಕೊಂಡಿದ್ದ ಮಾಲಿಕ ಎರಡು ದಿನದ ದುಡ್ಡನ್ನು ಮುರಿದುಕೊಂಡು ಉಳಿದ ದುಡ್ಡನ್ನು ಮರಳಿ ಕಿರಣನ ಕೈಗೆ ಇಡುತ್ತಾ  ಮತ್ತೆ ಈ ಊರಿಗೆ ಬಂದರೆ ನಮ್ಮ ಲಾಡ್ಜನಲ್ಲಿಯೆ ಇರಿ ಮಾರಾಯ್ರೆ ಎಂದು ನಗತೊಡಗಿದ. ಆಯಿತು ಎನ್ನುತ್ತಾ ಕಿರಣ ಹೆಂಡತಿಯ ಜೊತೆ ಹೊರನಡೆದ. ಅಂದು ಇಬ್ಬರು ಕಾರಿನಲ್ಲಿ ಬೆಂಗಳೂರಿಗೆ ಪಯಣಿಸಿದರು. 

ಊರು ತಲುಪಿದಾಗ ರಾತ್ರಿ 11 ಗಂಟೆ. ಮನೆ ತಲುಪುವ ಮುಂಚೆಯೆ ಇಬ್ಬರು ಹೊಟೇಲಿನಲ್ಲಿ ಊಟ ಮಾಡಿ ಬಂದಿದ್ದರಿಂದ ನೆಮ್ಮದಿಯಿಂದ ನಿದ್ದೆಗೆ ಜಾರಿದರು. ಗಂಡ ಏಳುವ ಮುಂಚೆಯೆ ಎದ್ದು ಸರೋಜಾ ಅಡುಗೆ ಮನೆ ಕೆಲಸವನ್ನೆಲ್ಲ ಮುಗಿಸಿ ಅವನಿಗಿಷ್ಟವಾದ ಅವರೆಕಾಳು ಉಪ್ಪಿಟನ್ನು ಮಾಡಿದ್ದಳು. ಕಿರಣ ಎದ್ದವನೆ ಸ್ನಾನ ಮಾಡಿ ಆಫಿಸಿಗೆ ರೆಡಿಯಾದವನೆ ಡೈನಿಂಗ ಟೇಬಲ್ ಬಳಿ ಕುಳಿತ. ಸರು ಹೊತ್ತಾಗ್ತಾ ಇದೆ ಟಿಫಿನ ತಗೊಂಡು ಬಾ. ಇದೊ ಬಂದೆರಿ ಎನ್ನುತ್ತಾ ತಟ್ಟೆಯಲ್ಲಿ ಉಪ್ಪಿಟನ್ನು ಹಾಕಿಕೊಂಡು ಬಂದು ಗಂಡನಿಗೆ ಕೊಟ್ಟಳು. ನನಗೆ ಇಷ್ಟವಾದ ತಿಂಡಿ ಮಾಡಿದ್ದಿಯಾ ಗುಡ್ ಗುಡ್ ಎನ್ನುತ್ತಾ ತಿಂದವನೆ ಹೆಂಡತಿಗೆ ಟಾಟಾ ಹೇಳಿ ಹೊರನಡೆದ. ಅಂದು ಕಿರಣನಿಗೆ ಆಫಿಸಿಗೆ ಹೋಗಲು ಮನಸ್ಸಾಗಲಿಲ್ಲಾ ಸೀದಾ ಅನಾಥಾಶ್ರಮಕ್ಕೆ ಹೋದ. ಅಲ್ಲಿ ನಾನು ಒಂದು ಮಗುವನ್ನು ದತ್ತು ತೆಗೆದುಕೊಳ್ಳಲು ಬಂದಿದ್ದೆನೆ ಎಂದ. ಅನಾಥಾಶ್ರಮದ ಅಧಿಕಾರಿಯು ಅವನ ಪೂರ್ವಾಪರಗಳನ್ನು ವಿಚಾರಿಸಿ ಒಂದು ಕಾಗದದಲ್ಲಿ ಸಹಿ ಹಾಕಿಸಿಕೊಂಡು ಅವನು ಇಷ್ಟ ಪಟ್ಟ ಮಗುವನ್ನು ಅವನಿಗೆ ಒಪ್ಪಿಸಿದರು.  

ಕಿರಣ ಆ ಮಗುವನ್ನು ಕರೆದುಕೊಂಡು ಕಾರಿನಲ್ಲಿ ಕುಳಿತು ಊರೆಲ್ಲಾ ಸುತ್ತಾಡಿಸಿ ಮಗುವಿಗೆ ಇಷ್ಟವಾದ ತಿಂಡಿಯನ್ನು  ಮತ್ತು ಬಟ್ಟೆಯನ್ನು ಕೊಡಿಸಿ ಇನ್ನು ಮುಂದೆ ನೀನು ನನಗೆ ಅಪ್ಪ ಅಂತ ಕರೆಯಬೇಕು ಆಯಿತಾ. ಆಯಿತು ಅಪ್ಪಾ ಎಂದು ನಗುನಗುತ್ತಲೆ ಹೇಳಿದ ಆ ಮುದ್ದು ಮಗುವನ್ನು ಯಾರಿಗೆ ಆಗಲಿ ಎತ್ತಿ ಮುದ್ದಾಡುವಷ್ಟು ಖುಷಿಯಾಗುವುದಂತು ನಿಜ ಅಷ್ಟು ಮುದ್ದಾಗಿತ್ತು. ಹೆಂಡತಿ ಇವನನ್ನ ನೋಡಿದರೆ ಸ್ವಲ್ಪ ಮಟ್ಟಿಗಾದರೂ ಹಳೆಯದನ್ನ ಮರೆಯೊ ಪ್ರಯತ್ನ ಮಾಡಬಹುದು ಎಂದುಕೊಂಡು ಸಂಜೆಯಾಗುತ್ತಲೆ ಮನೆಯ ಕಡೆ ಕಾರು ತಿರುಗಿಸಿದ.  ಮನೆ ಬಂದೊಡನೆ ಕಾರಿನಿಂದ ಇಳಿದು ಮಗುವನ್ನು ಕೆಳಗಿಳಿಸಿ ಮನೆಯ ಕಾಲಿಂಗ ಬೆಲ್ ಒತ್ತಿದ. ಸರೋಜಾ ಬಾಗಿಲನ್ನು ತರೆದು ಎದುರಿಗೆ ಕಂಡ ದೃಶ್ಯವನ್ನು ನೋಡಿ ಗಂಡನ ಮೇಲೆ ಕಿಡಿಕಾರತೊಡಗಿದಳು. ಯಾವುದು ಈ ಅನಿಷ್ಟ ಕೊನೆಗೂ ನಿಮ್ಮ ಹಟಾನೆ ಸಾಧಿಸ್ತಾ ಇದ್ದಿರಾ? ಯಾವುದೊ ಅನಾಥ ಮಗುವಿಗೆ ನಾನು ತಾಯಿಯಾಗುವುದಾ? ಯಾರ ಹೊಟ್ಟೆಯಲ್ಲಿ ಹುಟ್ಟಿದೆಯೊ ಏನೊ? ಯಾವ ಜಾತಿಯದೊ, ಯಾವ ಕೆಟ್ಟ ರಕ್ತದ್ದೊ ಏನೊ ಯಾರಿಗೆ ಗೊತ್ತು ಇಂತಹ ಅನಿಷ್ಟ ಮಗುವಿಗೆ ನಾನು ತಾಯಿಯಾಗಲಾರೆ ಎಂದು ಕೂಗಾಡತೊಡಗಿದಳು. ಸರು ಪ್ಲೀಸ್ ಬಾಯಿಗೆ ಬಂದ ಹಾಗೆ ಮಾತಾಡಬೇಡಾ. ಮಕ್ಕಳು ದೇವರ ಸಮಾನ. ಯಾರ ಹೊಟ್ಟೆಯಲ್ಲಿ ಹುಟ್ಟಿದರೆನಂತೆ ಇಂದಿನಿಂದ ನಮ್ಮ ಮಗುವೆಂದೆ ಭಾವಿಸೋಣ ಒಳ್ಳೆಯ ಸಂಸ್ಕಾರ ಕೊಟ್ಟು ಬೆಳೆಸೋಣ. ಆ ಮಗುವನ್ನು ನೋಡಿದರೆ ನಿನ್ನಲ್ಲಿ ತಾಯಿಯ ಮಮತೆ ಉಕ್ಕುತಿಲ್ಲವೆ? ನೀವೆಷ್ಟೆ ಹೇಳಿದರೂ ಅಷ್ಟೆ ನನ್ನ ನಿರ್ಧಾರ ಒಂದೆ ಎಂದು ಹೇಳಿ ರೂಮಿಗೆ ಹೋಗಿ ಅಳುತ್ತಾ ಮಂಚದ ಮೇಲೆ ಉರುಳಿದಳು. 

ಆಗಿನಿಂದ ಇವರಿಬ್ಬರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಮಗುವಿಗೆ ಯಾವುದೊಂದು ಸರಿಯಾಗಿ ಅರ್ಥವಾಗದೆ ಇದ್ದರೂ ಅವಳು ನನ್ನ ಅಮ್ಮ ಎಂದು ಮಾತ್ರ ತಿಳಿದಿತ್ತು. ಅವಳು ಬಳಿ ಹೋಗಿ ಅಮ್ಮಾ ಅಮ್ಮಾ ಎಂದು ಎರಡು ಸಲ ಕೂಗಿದರೂ ಸರೋಜಾ ತಿರುಗಿ ಕೂಡ ನೋಡಲಿಲ್ಲಾ ವಾಪಸ ಕಿರಣ ಇದ್ದಲ್ಲಿಗೆ ಬಂದು ಸಪ್ಪೆ ಮುಖ ಮಾಡಿಕೊಂಡು ನಿಂತಿತು. ಕಿರಣನಿಗೆ ಆ ಮಗುವನ್ನು ನೋಡಿ ಅಯ್ಯೋ ಪಾಪ ಅನಿಸಿ ನೀನು ಬಾ ಪುಟ್ಟ ನಿನ್ನ ಅಮ್ಮ ಇವತ್ತು ಕೋಪದಲ್ಲಿ ಇದ್ದಾಳೆ ನಾಳೆ ಮಾತಾಡುತ್ತಾಳೆ ಎನ್ನುತ್ತಾ ಅವನನ್ನು ಎತ್ತಿಕೊಂಡು ಬೆರೊಂದು ರೂಮಿಗೆ ಹೋಗಿ ಮಲಗಿಸಿದ. ಮಗು ನಿದ್ದೆ  ಹೋದ ಮೇಲೆ ಸರೋಜಾಳ ಹತ್ತಿರ ಬಂದು ಅವಳ ಭುಜದ ಮೇಲೆ ಕೈಯಿಟ್ಟು ಸರು ಸಮಾಧಾನ ಮಾಡಿಕೊ. ಪರಿಸ್ಥಿತಿಯನ್ನ ಅರ್ಥ ಮಾಡಿಕೊ ನಾವು ಹಳೆಯದನ್ನ ಮರೆತು ಬಾಳಬೇಕು. ನೋಡಿ ನೀವು ನನಗೆ ಹೇಳಿದ್ದನೆ ಹೇಳೊಕೆ ಬರಬೇಡಿ. ನೀವು ಬೇಕಾದ್ರೆ ಆ ಮಗುವಿಗೆ ಅಪ್ಪಾ ಆಗಿ ಈ ಮನೆಯಲ್ಲಿಯೆ ಇಟ್ಟುಕೊಳ್ಳಿ ನನ್ನದೇನು ಅಭ್ಯಂತರವಿಲ್ಲ ಎಂದಷ್ಟೆ ಹೇಳಿ ಅಲ್ಲಿಂದ ಎದ್ದು ಹೋದಳು. ನಿನ್ನ ಹಣೆಬರಹ ನಾನೇನು ಮಾಡೊಕಾಗತ್ತೆ ಎಂದು ಸುಮ್ಮನಾದ. 

ಮರುದಿನ ಮಗುವನ್ನು ಎಬ್ಬಿಸಿ ಮಗುವಿಗೆ ಸ್ನಾನ ಮಾಡಿಸಿ ಹಿಂದಿನ ದಿನಾನೆ ಸಾಕಷ್ಟು ಬಟ್ಟೆಗಳನ್ನು ಮಗುವಿಗೆ ತಗೆದುಕೊಂಡು ಬಂದಿದ್ದ ಅದರಲ್ಲಿ ಒಂದನ್ನ ಆರಿಸಿ ಮಗುವಿಗೆ ತೊಡಿಸಿ ತಾನು ಆಫಿಸಿಗೆ ರೆಡಿಯಾದ. ಸರೋಜಾ ಮಾಡಿದ ತಿಂಡಿಯನ್ನು ಎರಡು ತಟ್ಟೆಯಲ್ಲಿ ಹಾಕಿಕೊಂಡು ಬಂದು ಡೈನಿಂಗ ಟೇಬಲ್ ಮೇಲೆ ಜೋರಾಗಿ ಕುಕ್ಕಿದಳು. ಅವಳ ಕೋಪ ಇನ್ನು ತಣ್ಣಗಾಗಿಲ್ಲವೆಂಬುದನ್ನು ಅರಿತ ಕಿರಣ ಮಗುವಿಗೆ ತಿಂಡಿ ತಿನ್ನಿಸಿ ತಾನು ತಿಂಡಿ ತಿಂದು ಪಕ್ಕದ ಮನೆಗೆ ಮಗುವನ್ನು ಕರೆದುಕೊಂಡು ಬಂದ. ಅಂಬುಜಮ್ಮಾ ನಿಮ್ಮಿಂದ ಒಂದು ಸಹಾಯ ಆಗಬೇಕಿತ್ತು. ಇವನು ದೀಪು ನನ್ನ ಮಗ ಎಂದು ಕಥೆಯನ್ನೆಲ್ಲ ವಿವರಿಸಿ ದಯವಿಟ್ಟು ದಿನಾ ನಾನು ಆಫಿಸಿನಿಂದ ಬರೊವರೆಗೂ ಇವನನ್ನ ನೋಡಿಕೊಳ್ತಿರಾ? ಆಯಿತು ಕಿರಣ ನೀನು ನಿಶ್ಚಿಂತೆಯಿಂದ ಆಫಿಸಿಗೆ ಹೋಗಿ ಬಾರಪ್ಪಾ. ನನ್ನ ಮೊಮ್ಮಕ್ಕಳ ಜೊತೆ ಇವನು ಆಟ ಆಡಿಕೊಂಡು ಇರ್ತಾನೆ ಎಂದು ಹೇಳಿದಳು. ಕಿರಣ ದೀಪುವಿನ ಕೆನ್ನೆಗೆ ಮುತ್ತು ಕೊಟ್ಟು ಅವನಿಗೆ ಟಾಟಾ ಮಾಡಿ ಆಫಿಸಿಗೆ ಹೊರಟು ಹೋದ. ರಜೆ ಮಾಡಿದ್ದರಿಂದ ಪೆಂಡಿಂಗ ಇದ್ದ ಕೆಲಸವನ್ನೆಲ್ಲ ಮುಗಿಸಬೇಕಾದರೆ ಸಂಜೆ ತುಂಬಾ ಹೊತ್ತಾಯಿತು. 

ದೀಪುವಿಗೆ ಈ ವಾತಾವರಣವೆಲ್ಲಾ ಹೊಸದು. 5 ವರ್ಷದ ಎಳೆ ಕಂದಮ್ಮನನ್ನು ಹೀಗೆ ಪಕ್ಕದ ಮನೆಯಲ್ಲಿ ಬಿಟ್ಟು ಬರಬೇಕಾಯಿತಲ್ಲ ಅವರು ಸರಿಯಾಗಿ ನೋಡಿಕೊಳ್ತಾ ಇದ್ದಾರೊ ಇಲ್ಲೊ  ಯೋಚನೆ ಬಂದೊಡನೆ ಅವನಿಗೆ ಹೆಂಡತಿಯ ಮೇಲೆ ವಿಪರೀತ ಕೋಪ ಬಂದಿತು ಆದರೂ ಇರಲಿ ಸ್ವಲ್ಪ ಸಹಿಸಿಕೊಂಡರಾಯಿತು. ಎಷ್ಟೆ ಆದರೂ ಮಾತೃ ಹೃದಯ ಅಷ್ಟು ಬೇಗ ನಮ್ಮ ಮಗುವನ್ನು ಮರೆತು ಬೇರೆ ಮಗುವನ್ನು ಹೇಗೆ ಒಪ್ಪಿಕೊಂಡಾಳು ದಿನಗಳೆದರೆ ಎಲ್ಲಾ ಸರಿಯಾಗಬಹುದು ಎಂದುಕೊಂಡು ಆಫಿಸಿನಿಂದ ಹೊರಬಂದು ಕಾರನ್ನೆರಿ ಮನೆಯ ಕಡೆ ಹೊರಟ. ಅಂಬುಜಮ್ಮನ ಮನೆಗೆ ಬಂದಾಗ ದೀಪು ಅಂಬುಜಮ್ಮನ ಮೊಮ್ಮಕ್ಕಳ ಜೊತೆ ಆಟ ಆಡುತ್ತಿದವನು ಕಿರಣನನ್ನು ನೋಡಿದವನೆ ಅಪ್ಪಾ ಎಂದು ಓಡಿ ಕಿರಣನ ಬಳಿ ಬಂದ. ಕಿರಣ ದೀಪುವನ್ನು ಕರೆದುಕೊಂಡು ಮನೆಗೆ ಹೋಗಿ ಅವನಿಗೆ ಊಟ ಮಾಡಿಸಿ ತಾನು ಊಟ ಮಾಡಿ ಅವನನ್ನು ಪಕ್ಕದಲ್ಲಿ ಕರೆದುಕೊಂಡು ಮಲಗಿದ. ಪ್ರತಿನಿತ್ಯ ಅಂಬುಜಮ್ಮನ ಮನೆಯಲ್ಲಿ ಮಗುವನ್ನು ಬಿಟ್ಟು ಹೋಗುವುದು ಮತ್ತೆ ಸಂಜೆಯಾಗುತ್ತಲೆ ಕರೆದುಕೊಂಡು ಹೋಗುವುದು ರೂಢಿಯಾಯಿತು. 

ಅಂಬುಜಮ್ಮನಿಗೆ ದೀಪುವನ್ನು ಕಂಡರೆ ತುಂಬಾ ಪ್ರೀತಿ. ತುಂಬಾ ಮುದ್ದಾದ ಮಗು ಎಲ್ಲರ ಜೊತೆ ಬೇಗ ಹೊಂದಿಕೊಂಡು ಬಿಡ್ತಾನೆ. ಅಷ್ಟೆ ಚ್ಯೂಟಿ ಕೂಡ ಎಂದು ಕಿರಣನ ಮುಂದೆ ಹೇಳಿದಳು. ಎಲ್ಲರಿಗೂ ಇಷ್ಟಾ ಆಗುವ ಈ ಮಗು ಸರು ಗೆ ಮಾತ್ರ ಇಷ್ಟಾ ಆಗ್ತಾ ಇಲ್ಲಾ ಆಂಟಿ ಏನ ಮಾಡಬೇಕು ಅಂತಾನೆ ಗೊತ್ತಾಗ್ತಾ ಇಲ್ಲಾ. ತನ್ನ ಮಗುವನ್ನ ಕಳೆದುಕೊಂಡ ಅವಳ ಮನಸ್ಸಿನ ಮೇಲೆ ತುಂಬಾ ಆಘಾತ ಆಗಿದೆ. ಅದು ಸರಿಹೋಗೊಕೆ ಸ್ವಲ್ಪ ಕಾಲಾವಕಾಶ ಬೇಕಾಗತ್ತೆ ಇನ್ನು ಸ್ವಲ್ಪ ದಿನ ನೀನೆ ತಾಳ್ಮೆ ತಗೆದುಕೊ ಅವಳ ಎದುರಿನಿಂದ ನೀನು ಮಗುವನ್ನ ದೂರ ಮಾಡ್ತಾ ಇದ್ದರೆ ಈ ದೂರ ಇನ್ನು ಜಾಸ್ತಿ ಆಗ್ತಾನೆ ಹೋಗತ್ತೆ ಆದಷ್ಟು ಈ ಮಗುವಿನ ಆಟ-ಪಾಠ ಎಲ್ಲಾ ಅವಳ ಕಣ್ಣೆದುರಿಗೆನೆ ನಡಿಬೇಕು ಆ ಮಗುವಿನ ಚಟುವಟಿಕೆಗಳನ್ನ ಗಮನಿಸಿದಳೆಂದರೆ ಅವಳ ದೀಪುನೆ ಅವಳ ಎದುರಿಗೆ ಇದ್ದ ಹಾಗೆ ಕಾಣತ್ತೆ ಆಗ ಅವಳಲ್ಲಿ ಸ್ವಲ್ಪ ಮಟ್ಟಿಗಾದರೂ ಬದಲಾವಣೆ ಕಂಡು ಬರತ್ತೆ ಕಿರಣ. ಆಯಿತು ಆಂಟಿ ಈ ಭಾನುವಾರ ಮಗು ಜೊತೆ ಮನೆಯಲ್ಲಿಯೆ ಸಮಯ ಕಳಿಯುತ್ತೇನೆ. ಥ್ಯಾಂಕ್ಸ ಆಂಟಿ ನಿಮಗೆ ತುಂಬಾ ತೊಂದರೆ ಕೊಡ್ತಾ ಇದ್ದಿನಿ. ಇದರಲ್ಲಿ ತೊಂದರೆ ಏನ ಬಂತಪ್ಪಾ ನೀನು ನನಗೆ ಮಗಾ ಇದ್ದ ಹಾಗೆನೆ ಅಲ್ವೆ. 

ಅಂದು ರಾತ್ರಿ ಒಬ್ಬಳೆ ಮಲಗಿದ್ದ ಸರೋಜಾಳಿಗೆ ದು:ಖ ಉಮ್ಮಳಿಸಿ ಬರುತ್ತಿತ್ತು. ಈ ಮನೆಲಿ ನಾನೊಬ್ಬಳು ಇದ್ದಿನಿ ಅನ್ನೊದು ಇವರಿಗೆ ಮರೆತು ಹೋಗಿದೆ. ಯಾವಾಗಲು ಆ ಮಗುವಿನದೆ ಧ್ಯಾನ ಆ ಪೀಡೆ ಮನೆಗೆ ಬಂದ ಮೇಲೆ ಗಂಡ ನನ್ನ ಕಡೆ ಗಮನ ಕೊಡ್ತಾನೆ ಇಲ್ಲಾ.  ಆ ದೇವರು ನನ್ನ ಕಂದನ್ನ ಕಿತ್ಕೊಂಡ ಈಗ ಈ ಮಗುವಿನ ಮುಖಾಂತರ ನನ್ನ ಗಂಡನ ಕೂಡ ನನ್ನಿಂದ ದೂರ ಮಾಡ್ತಾ ಇದ್ದಾನೆ ನಾಳೆ ಭಾನುವಾರ ಏನಾದರಾಗಲಿ ಒಂದು ನಿರ್ಧಾರಕ್ಕೆ ಬರಲೆಬೇಕು ಎಂದುಕೊಂಡು ಮಲಗಿದವಳಿಗೆ ನಿದ್ದೆ ಹತ್ತಿದ್ದೆ ತಿಳಿಯಲಿಲ್ಲಾ. ಗಂಡ, ಮಗುವಿನ ನಗುವಿನ ಧ್ವನಿಗೆ ಇವಳಿಗೆ ಎಚ್ಚರವಾಯಿತು. ಹಾಸಿಗೆಯಿಂದ ಏಳಲು ಪ್ರಯತ್ನಿಸಿದವಳಿಗೆ ಏಳಲು ಆಗಲಿಲ್ಲಾ ತುಂಬಾ ಆಯಾಸ, ಜ್ವರ ಬಂದಂತೆ ಅನಿಸುತ್ತಿತ್ತು. ಜೊತೆಗೆ ಗಂಟಲೊನಗಿ ಬಾಯಾರಿಕೆ ಬೇರೆ ಏನು ಮಾಡಲಿ ನನಗೆ ಹುಷಾರಿಲ್ಲಾ ಆದರೂ ನನ್ನ ಗಮನಿಸುವರಿಲ್ಲಾ ಎಂದು ಒಳಗೊಳಗೆ ನೋವು ಅನುಭವಿಸುತ್ತಿದ್ದಳು. ಸರು ಎದ್ದೆಳು ಡಾಕ್ಟರ ಹತ್ರ ಹೋಗೊಣಾ ಎನ್ನುವ ಕಿರಣನ ಧ್ವನಿಗೆ ಸರೋಜ ಅವನ ಕಡೆ ನೋಡಿದಳು. ಅವನ ಜೊತೆ ಮಗು ಇದ್ದದನ್ನು ನೋಡಿ ಕೋಪದಿಂದ ಹಲ್ಲು ಕಡಿದು ನನಗೆ  ಯಾವ ಡಾಕ್ಟರ ಅಗತ್ಯವು ಇಲ್ಲಾ ನಾನು ಎಲ್ಲಿಗೂ ಬರಲ್ಲಾ ಎಂದಳು.  ಅಮ್ಮಾ ಡಾಕ್ಟರ ಕಡೆ ಹೋಗು ನಿನಗೆ ಜ್ವರ ಬಂದಿದೆಯಂತೆ ಅಪ್ಪಾ ಹೇಳಿದ ಬೇಗ ಹುಷಾರಾಗಮ್ಮಾ ಎಂದ ದೀಪುವಿನ ಕಡೆ ಅಸಹನೆಯಿಂದ ನೋಡಿದಳು. ನಡಿಯೆ ಹಟ ಮಾಡಬೇಡ ಎನ್ನುತಾ ಅವಳನ್ನು ಎಬ್ಬಿಸಿಕೊಂಡು ಕ್ಲಿನಿಕಗೆ ಕರೆದುಕೊಂಡು ಹೋಗಿ ಬಂದ. 

ಅವಳಿಗೆ ತಿಂಡಿ ತಿನ್ನಿಸಿ ಔಷಧಿ ಕುಡಿಸಿ ಮಲಗಿಸಿದ. ಆಗಾಗ ದೀಪು ಕೂಡ ಅಮ್ಮನ ಬಳಿ ಕುಳಿತು ಅವಳ ಹಣೆಯನ್ನು ಮುಟ್ಟಿ ಅಮ್ಮಾ ನಿನಗೆ ಯಾವಾಗ ಹುಷಾರಾಗತ್ತೆ ಎಂದು ಕೇಳಿದಾಗಲೆಲ್ಲಾ ಸರೋಜಾಳಿಗೆ ಆ ಮಗುವಿನ ಮೇಲಿನ ಸಿಟ್ಟು ಸ್ವಲ್ಪ ಕಮ್ಮಿಯಾಗಿ ಆ ಮಗುವಿನ ಸ್ಪರ್ಶ ನನ್ನಲ್ಲಿ ಏನೊ ಹೊಸ ಸಂಚಲನ ಮೂಡಿಸ್ತಾ ಇದೆ ಅನಿಸ್ತಾ ಇತ್ತು ಆದರೂ ಅರಗಳಿಗೆನೆ ಇದು ತನ್ನ ಮಗುವಲ್ಲ ಎಂಬುದು ನೆನಪಾದಾಗ ಮತ್ತೆ ಮಗುವಿನ ಮೇಲೆ ಸಿಡಿಮಿಡಿಗುಟ್ಟುತ್ತಿದ್ದಳು. ಇದರಿಂದ ಮಗು ಹೆದರಿ ಅಪ್ಪನ ಬಳಿ ಓಡುತಿತ್ತು. 3 ದಿನದವರೆಗೆ ಕಿರಣ ಮನೆಯಲ್ಲಿಯೆ ಇದ್ದುಕೊಂಡು ಹೆಂಡತಿಯ ಆರೈಕೆ ಮಾಡಿದ. ಅವಳಿಗೆ ಹುಷಾರಾಗುತ್ತಲೆ ಮತ್ತೆ ಆಫಿಸಿಗೆ ಹೊರಡಲು ತಯಾರಾದ ಆಗ ಸರೋಜಾ ತಾನು ಎರಡು ದಿನದ ಮಟ್ಟಿಗೆ ತವರುಮನೆಗೆ ಹೊರಡುವುದಾಗಿ ಹೇಳಿದಳು ಆಯಿತೆಂದಷ್ಟೆ ಹೇಳಿ ಸುಮ್ಮನಾದ. ಸರೋಜಾ ತನ್ನ ತವರುಮನೆಗೆ ಹೊರಟು ಬಂದಳು. 

ಇದ್ದಕಿದ್ದಂತೆ ಮಗಳು ಒಬ್ಬಳೆ ಬಂದಿರುವದನ್ನು ನೋಡಿದ ಸರಸಮ್ಮ ಅಳಿಯಂದಿರೆಲ್ಲಿ ಎಂದು ಕೇಳಿದಳು. ಆಗ ಸರೋಜಾ ಎಲ್ಲ ಕಥೆಯನ್ನು ಹೇಳಿದಳು. ಆ ಮಗುವನ್ನು ಮನೆಯಿಂದ ಹೊರಗೆ ಹಾಕುವುದಕ್ಕೆ ಏನಾದರೂ ಉಪಾಯ ಇದ್ದರೆ ಹೇಳಮ್ಮಾ ಎಂದಳು.  ಸರು ಮುಚ್ಚೆ ಬಾಯಿ ನಿನಗೆ ತಲೆ ಕೆಟ್ಟಿದೆಯಾ ಅಷ್ಟು ಮುದ್ದಾದ ಮಗುವನ್ನ ಮನೆಯಿಂದ ಹೊರಗೆ ಹಾಕಬೇಕು ಅಂತಾ ಇದ್ದಿಯಲ್ಲಾ ನಿನ್ನಲ್ಲಿ ಮಾನವೀಯತೆ ಇಲ್ವೆ. ಅಲ್ಲವೆ ಆವತ್ತಾದ ಆಕ್ಸಿಡೆಂಟನಲ್ಲಿ ದೇವರಂತಹ ನಿನ್ನ ಅತ್ತೆ-ಮಾವನ ಜೊತೆಗೆ ನಿನ್ನ ಕರುಳಿನ ಕುಡಿನು ಕಳಕೊಂಡು ನೀನು ಮತ್ತೆ ತಾಯಿ ಆಗುವ ಅವಕಾಶವು ಇಲ್ಲದೆ ಹೋಯಿತು  ಅಂತದ್ದರಲ್ಲಿ ದೇವರು ಜೀವನದಲ್ಲಿ ಮತ್ತೆ ನಿನಗೆ ತಾಯಿ ಆಗುವ ಅವಕಾಶ ಕೊಟ್ಟಾಗ ಅದನ್ನ ಕಾಲಿನಿಂದ ಒದ್ದು ಬಂದಿದ್ದಿಯಲ್ಲಾ ನಿನ್ನ ಬುದ್ದಿಗೆ ಏನು ಹೇಳಬೇಕು. ಅಮ್ಮಾ ನೀನು………… ಸಾಕು ಸುಮ್ಮನಿರೆ ನಿನಗೆ ನಿನ್ನ ಕಂದನ ಮೇಲೆ ಅಪಾರವಾದ ಪ್ರೀತಿ ಇರೊದಿಕ್ಕೆ ನೀನು ಆ ಸ್ಥಾನದಲ್ಲಿ ಬೇರೆ ಮಗುನ ಕಲ್ಪಿಸಿಕೊಳ್ಳೊದಿಕ್ಕೆ ತಯಾರಿಲ್ಲಾ ಅಂತಾನೆ ಇಟ್ಕೊಳೋಣಾ ಆದರೆ ನಿನ್ನ ಕಂದನ ನೀನು ಕಳಕೊಂಡಿದ್ದಿಯಾ ನೀನು ಎಷ್ಟೆ ಅತ್ತು ಕರೆದು ಮಾಡಿದರೂ ಅವನು ಹಿಂದಿರುಗೆ ಬರೊದಿಲ್ಲಾ. ಸತ್ತು ಹೋದ ಆ ದೀಪುವಿನ ಪ್ರೀತಿಯನ್ನ ಈಗಿರುವ ದೀಪುವಿನಲ್ಲಿ ಕಾಣುವ ಪ್ರಯತ್ನ ಮಾಡು. ತಾಯಿಯ ಪ್ರೀತಿ ಕೇವಲ ಹೆತ್ತ ಮಕ್ಕಳಿಗೆ ಮಾತ್ರ ಸೀಮಿತವಾಗಿರೊದಿಲ್ಲಾ. ಮಕ್ಕಳೆಲ್ಲಾ ಒಂದೆ. ಎಲ್ಲಾ ಮಕ್ಕಳನ್ನು ಸಮನಾಗಿ ಕಾಣಬೇಕು ಆಗಲೆ ಅವಳು ನಿಜವಾದ ತಾಯಿ ಅನಿಸಿಕೊಳ್ಳೊದು. 

ಶಾಲೆಯಲ್ಲಿ ಒಬ್ಬ ಟೀಚರ್ ಕೇವಲ ಒಂದು ಮಗುವಿನ ಮೇಲೆ ಮಾತ್ರ ಅಕ್ಕರೆ ತೋರಿಸೊಕ್ಕಾಗತ್ತಾ ಹೇಳು? ಎಲ್ಲಾ ಮಕ್ಕಳನ್ನು ಒಂದೆ ತರಹ ಕಂಡಾಗಲೆ ಅಲ್ವಾ ಎಲ್ಲಾ ಮಕ್ಕಳಿಗೂ ಆ ಟೀಚರ್ ಇಷ್ಟಾ ಆಗೋದು. ನಿನಗೆ ನಿನ್ನ ಮಗುವಿನ ಮೇಲಿರುವ ವ್ಯಾಮೋಹ ನಿನ್ನ ಕುರುಡು ಮಾಡಿದೆ. ಸರು ಆ ಮಗುವಿನ ಮೇಲೆ ದ್ವೇಷ ಸಾಧಿಸೊದನ್ನ ಬಿಟ್ಟು ಅದನ್ನ ನಿನ್ನ ಮಗು ಅಂತೆಲೆ ತಿಳಿದು ಪ್ರೀತಿ ನೀಡಿ ಬೆಳೆಸು. ಸತ್ತು ಹೋದ ನಿನ್ನ ದೀಪುನೆ ಮತ್ತೆ ನಿನ್ನ ಜೀವನದಲ್ಲಿ ಬಂದಿದಾನೆ ಅಂತ ನೀನು ಯಾಕ ತಿಳಕೊಬಾರದು. ನಿನ್ನ ಆತ್ಮಸಾಕ್ಷಿ ಏನ ಹೇಳತ್ತೆ ಆ ಮಗುವಿನ ಕಂಡರೆ ನಿನಗೆ ಯಾವತ್ತು ಒಂದು ಕ್ಷಣಕ್ಕಾದರೂ ಅದರ ಮೇಲೆ ಪ್ರೀತಿ- ಕನಿಕರ ಉಕ್ಕಿಲ್ಲವೆ? ಅಳಿಯಂದಿರು ಮಗುವನ್ನ ಮನೆಗೆ ಕರೆದುಕೊಂಡು ಬರೋಕೆ ಮುಂಚೆನೆ ನಿಮ್ಮ ಅಪ್ಪನಿಗೆ ಫೊನ ಮಾಡಿ ಅವರ ಒಪ್ಪಿಗೆ ಪಡೆದೆ ಮಗುವನ್ನು ಮನೆಗೆ ಕರೆದುಕೊಂಡು ಬಂದಿದ್ದು ಅಂತದ್ದರಲ್ಲಿ ನೀನು ನೋಡಿದ್ರೆ ಹೀಗಾಡ್ತಿಯಲ್ಲಾ.  ಆ ಮಗುವನ್ನ ಮನೆಯಿಂದ ಹೊರಗೆ ಹಾಕಿದ್ರೆ ನಿನ್ನ ಗಂಡ ನಿನ್ನ ಕಡೆ ಗಮನ ಕೊಡ್ತಾನೆ ಅಂತ ನೀನು ತಿಳಕೊಂಡಿದ್ರೆ ಅದು ನಿನ್ನ ಮುಟ್ಟಾಳತನ. ಆಗ ನೀನು ನಿನ್ನ ಗಂಡನನ್ನ ಶಾಶ್ವತವಾಗಿ ಕಳಕೊಂಡು ಬಿಡ್ತಿಯಾ. ಅಳಿಯಂದಿರು ಇಷ್ಟೆಲ್ಲಾ ಮಾಡ್ತಾ ಇರೊದು ನಿನಗೊಸ್ಕರ ಅದು ನಿನಗೆ ಗೊತ್ತಾ. ಇಲ್ಲಮ್ಮಾ ಅವರು ನನಗೊಸ್ಕರ ಮಾಡ್ತ ಇಲ್ಲಾ ತಮಗೆ ಒಂದು ಮಗು ಬೇಕಲ್ವಾ ಅದಕ್ಕೆ ಕರಕೊಂಡು ಬಂದಿದ್ದಾರೆ. 

ಅಯ್ಯೋ ಹುಚ್ಚಿ ! ನಿನಗೇನೆ ಗೊತ್ತು ಒಬ್ಬರೆÉ ಮನಸ್ಸಿನಲ್ಲಿ ಎಷ್ಟೊಂದು ವೇದನೆ ಪಟ್ಟಿದಾನೆ ಅಂತ. ಆವತ್ತು ಫೋನಿನಲ್ಲಿ ನಿಮ್ಮಪ್ಪನ ಜೊತೆ ಮಾತಾಡ್ತಾ ಇದ್ದಾಗ ಹೇಳಿzರÀಂತೆ. ಸರೋಜಾ ಮಗುವಿನ ನೆನಪಲ್ಲಿಯೆ ಮನಸ್ಸಿನಲ್ಲಿಯೆ ಕೊರಗ್ತಾ ದಿನ ದಿನಕ್ಕೆ ಸೊರಗ್ತಾ ಇದ್ದಾಳೆ. ಯಾಂತ್ರಿಕವಾಗಿ ಊಟ-ತಿಂಡಿ ಮಾಡ್ತಾಳೆ ಅನ್ನೊದು ಬಿಟ್ಟರೆ ಯಾವುದರಲ್ಲೂ ಆಸಕ್ತಿಯಿಲ್ಲಾ, ಏನಾದ್ರೂ ಕೇಳಿದ್ರೆ ಹಾರಿಕೆಯ ಉತ್ತರ ಕೊಡ್ತಾಳೆ. ಹೇಳದೆನೆ ಎಲ್ಲೋ ಹೋಗ್ತಾಳೆ, ಯಾವಾಗಲೊ ಬರ್ತಾಳೆ ಹೀಗೆ ಆಗ್ತಾ ಇದ್ದರೆ ನಾನು ಎಲ್ಲಿ ನನ್ನ ಸರೋಜಾಳನ್ನ ಕಳಕೊಂಡು ಬಿಡ್ತಿನೊ ಅಂತ ಭಯ ಆಗ್ತಾ ಇದೆ ಮಾವ ನೀವಾದರೂ ಅವಳನ್ನ ಒಂದೆರಡು ದಿನ ನಿಮ್ಮ ಮನೆಯಲ್ಲಿ ಇಟ್ಕೊಂಡು ಸಮಾಧಾನ ಮಾಡಿ ಅಂದಿದ್ದನಂತೆ. ಅದಕ್ಕೆ ನಿಮ್ಮಪ್ಪ ಅವಳಿಗೆ ಈಗ ಬೇಕಾಗಿರುವುದು ಯಾರ ಸಮಾಧಾನವು ಅಲ್ಲಪ್ಪಾ ಮಗುವಿನ ಅಕ್ಕರೆಯ ಕರೆ, ಮಗುವಿನ ಸ್ಪರ್ಶ ಸೊಕ್ತಾ ಇದ್ದ ಹಾಗೆನೆ ಅವಳು ಮತ್ತೆ ಮೊದಲಿನ ತರಹ ಆಗೋಕೆ ಸಾಧ್ಯ ಅದಕ್ಕೆ ನೀನು ಒಂದು ಮಗುವನ್ನ ದತ್ತು ತಗೆದುಕೊ ಅಂತ ಸಲಹೆ ಕೊಟ್ಟಿದ್ದರಂತೆ.  ಪಾಪ ನೀನು ಮತ್ತೆ ಮೊದಲಿನ ತರಹ ಆದರೆ ಸಾಕು ಅಂತ ನಿಮ್ಮಪ್ಪ ಹೇಳಿದ ಹಾಗೆನೆ ಅಳಿಯಂದಿರು ಮಾಡಿದ್ದಾರೆ.  ಅಳಿಯಂದಿರಿಗೆ ನಿನ್ನ ಮೇಲೆ ತುಂಬಾ ಪ್ರೀತಿ ಇರೊದಿಕ್ಕೆನೆ ನೀನು ಮೊದಲಿನ ತರಹ ಆದರೆ ಸಾಕು ಅಂತ ಅದೆಷ್ಟೊಂದು ಕಷ್ಟಾ ಪಡ್ತಾ ಇದ್ದಾರೆ. ಸರು ನೀನು ಆ ಮಗುವಿನ ಮೇಲೆ ದ್ವೇಷ ಸಾಧಿಸ್ತಾ ಇಲ್ಲಾ ನಿನ್ನ ಮಾತೃ ವಾತ್ಸಲ್ಯಕ್ಕೆ ವಂಚನೆ ಮಾಡಕೊತಾ ಇದ್ದಿಯಾ. ನಿನ್ನಲ್ಲಿರುವ ಮಾತೃ ವಾತ್ಸಲ್ಯವನ್ನು ಬಚ್ಚಿಟ್ಟುಕೊಳ್ಳುವ ಪ್ರಯತ್ನ ಮಾಡಿ ನಿನಗೆ ನೀನೆ ಮೋಸ ಮಾಡಿಕೊಂಡು ನಿನ್ನ ಸಂಸಾರದ ನೆಮ್ಮದಿನ ನೀನೆ ಕಳಕೊತಾ ಇದ್ದಿಯಾ. ಇನ್ನು ಕಾಲ ಮಿಂಚಿಲ್ಲಾ ಸರಿಯಾಗಿ ಯೋಚನೆ ಮಾಡು ನಿನ್ನ ಸಂಸಾರವನ್ನ ಉಳಸಿಕೊಳ್ಳುವ ಪ್ರಯತ್ನ ಮಾಡು. ಈಗ ಊಟ ಮಾಡಿ ಮಲಕೊ ನಾಳೆ ಬೆಳಿಗ್ಗೆ ನಿನ್ನ ನಿರ್ಧಾರ ತಿಳಿಸು ಎಂದಷ್ಟೆ ಹೇಳಿ ತಾಯಿ ಅಲ್ಲಿಂದ ಹೊರಟು ಹೋದಳು.  ರಾತ್ರಿ ಊಟದ ಹೊತ್ತಿಗೆ ತಂದೆಯು ಬಂದರು ಅವರಿಂದಲೂ ಸರೋಜಾಳಿಗೆ ಸ್ವಲ್ಪ ಹಿತೋಪದೇಶಗಳಾದವು. ಹೌದು ಮಗಳೆ ಅಳಿಯಂದಿರ ಮನಸ್ಸು ನೋಯಿಸಬೇಡಾ ಅವರದು ದೊಡ್ಡಗುಣ ಅಂತಹ ಅಳಿಯ ಸಿಗಬೇಕಾದರೆ ಪುಣ್ಯ ಮಾಡಿರಬೇಕು ಎಂದು ಅಪ್ಪನು ಹೇಳಿದಾಗ ಸರೋಜಾಳಿಗೆ ತನ್ನ ತಪ್ಪಿನ ಅರಿವಾಗತೊಡಗಿತು. ನಾನು ಆ ಮಗುವನ್ನು ದ್ವೇಷಿಸುವುದೆ ನಿಜವಾಗಿದ್ದರೆ ಅಂದು ತನ್ನ ಪುಟ್ಟ ಕೈಗಳಿಂದ ನನ್ನ ಹಣೆಯನ್ನು ಮುಟ್ಟಿದಾಗ ನಾನು ಕೋಪ ಮಾಡಿಕೊಳ್ಳಬೇಕಿತ್ತು ಆದರೆ ನನಗೆ ಆಗ ಆ ಮಗುವಿನ ಸ್ಪರ್ಶ ಆತ್ಮಿಯವಾಗಿ ನನ್ನ ದೀಪುವೆ ನನ್ನ ಮುಟ್ಟಿದಂತೆ ಅನುಭವವಾಗಿರಲಿಲ್ಲವೆ? ಎಷ್ಟೊ ಸಲ ಪ್ರೀತಿ ಬಂದರೂ ತೋರಿಸಿಕೊಳ್ಳದೆ ಕೋಪದಿಂದ ಸಿಡಿಮಿಡಿಗುಟ್ಟುತ್ತಿದ್ದನೆಲ್ಲವೆ? ಆ ಮಗುವಿನ ಮಾತು, ತುಂಟಾಟಗಳನ್ನು ನೋಡಿದಾಗ ನನಗೆ ನನ್ನ ಮಗುವಿನ ನೆನಪೆ ಆಗುತ್ತಿರಲಿಲ್ಲವೆ? ನನ್ನ ಮಗುವನ್ನು ಬಿಟ್ಟು ಬೇರೊಂದು ಮಗುವನ್ನು ಪ್ರೀತಿಸಲಾರದಷ್ಟು ಕ್ರೂರಿ ಆಗಿಬಿಟ್ಟನೆ? ನನ್ನ ಕುರುಡು ವ್ಯಾಮೋಹದಿಂದ ಅವರ ಮನಸ್ಸನ್ನು ಅದೆಷ್ಟು ನೋಯಿಸಿದ್ದಿನಿ. ಈಗ ತಾನೆ ಪ್ರಪಂಚವನ್ನು ನೋಡುತ್ತಿರುವ ಆ ಮುದ್ದು ಕಂದಮ್ಮನಿಗೆ ಪ್ರೀತಿ ನೀಡದೆ ಅದಕ್ಕೆಷ್ಟು ನೋವು ಕೊಟ್ಟಿದ್ದಿನಿ. ಈಗ ನನ್ನ ತಪ್ಪುಗಳೆಲ್ಲ ನನಗೆ ಅರ್ಥವಾಗಿದೆ. ನಾಳೆನೆ ಅವರ ಕಾಲು ಹಿಡಿದು ಕ್ಷಮೆ ಕೇಳಬೇಕೆಂದು ಮಲಗಿದವಳಿಗೆ ಬೆಳಕು ಹರಿದದ್ದೆ ತಿಳಿಯಲಿಲ್ಲ.  

ಬೆಳಿಗ್ಗೆ ಅಮ್ಮನ ಬಳಿ ಬಂದವಳೆ ಅಮ್ಮಾ ನಾನು ಹೊರಡ್ತಿನಿ ದೀಪು ನನಗೆ ಬೇಕು. ಸರು ನನಗೆ ಈಗ ಖುಷಿಯಾಗ್ತ ಇದೆ ಕೊನೆಗೂ ನಿನ್ನ ತಪ್ಪುಗಳು ನಿನಗೆ ಮನವರಿಕೆಯಾಯಿತಲ್ಲಾ ಅಷ್ಟು ಸಾಕು. ಬಾ ತಿಂಡಿ ತಿಂದು  ದೇವರಿಗೆ ನಮಸ್ಕರಿಸಿ ಅರಿಶಿನ ಕುಂಕುಮ ತಗೆದುಕೊಂಡು ಹೋಗುವಿಯಂತೆ ಎಂದು ಮಗಳನ್ನು ಬಲವಂತ ಮಾಡಿದ್ದರಿಂದ ಅಮ್ಮನ ಮಾತಿನಂತೆ ನಡೆದುಕೊಂಡು ಆಮೇಲೆ ಅಪ್ಪಾ ನಾನು ಬರುತ್ತೇನೆ ಎಂದು ಅಪ್ಪ-ಅಮ್ಮನಿಗೆ ಕೈಬೀಸಿ ಬಸಸ್ಟ್ಯಾಂಡಿಗೆ ಬಂದು ಬಸ್ಸು ಹತ್ತಿದಳು. ಊರಿಗೆ ಬಂದಾಗ ಮಧ್ಯಾಹ್ನದ ಸಮಯ . ಆಟೊ ಹತ್ತಿ ಖುಷಿಯಿಂದ ಮನೆಗೆ ಬಂದವಳಿಗೆ ನಿರಾಸೆ ಕಾದಿತ್ತು. ಮನೆಯ ಬೀಗ ಹಾಕಿರುವುದನ್ನು  ನೋಡಿ ಪಕ್ಕದ್ಮನೆ ಅಂಬುಜಮ್ಮಳನ್ನು ವಿಚಾರಿಸಿದಳು. ಸರೋಜಾ ನೀನು ತುಂಬಾ ತಪ್ಪು ಮಾಡ್ಬಿಟ್ಟೆ. ಬೆಳಿಗ್ಗೆ ನಿನ್ನ ಗಂಡ ಕಿರಣ ಮಗುವಿನ ಜೊತೆಲೆ ಬಂದು ಸ್ವಲ್ಪ ಹೊತ್ತು ಇದ್ದು ನಿನಗೆ ಈ ಕಾಗದವನ್ನು ಕೊಡಲು ಹೇಳಿ ಅಳುತ್ತಾ ಹೋದ. ಅವನನ್ನು ನೋಡಿದರೆ ತುಂಬಾ ನೊಂದುಕೊಂಡಿದ್ದಾನೆ ಅನಿಸ್ತಾ ಇತ್ತು.  ಸರೋಜಾಳಿಗೆ ಅಂಬುಜಮ್ಮಳ ಮಾತಿನಿಂದ ಇನ್ನಷ್ಟು ದು:ಖವಾಯಿತು ಆದರೂ ತೋರಿಸಿಕೊಳ್ಳದೆ ಅವಳ ಕೈಯಿಂದ ಪತ್ರವನ್ನು ತೆಗೆದುಕೊಂಡು ಓದತೊಡಗಿದಳು. 

ಪ್ರೀತಿಯ ಸರೋಜಾ
    ನೀನು ಚೆನ್ನಾಗಿರಲೆಂದು ಮಗುವನ್ನು ಮನೆಗೆ ಕರೆದುಕೊಂಡು ಬಂದೆ ಅದ್ಯಾಕೊ ನಿನಗೆ ಆ ಎಳೆ ಕಂದಮ್ಮನ ಮೇಲೆ ಒಂಚೂರು ಪ್ರೀತಿ-ಕರುಣೆ ಹುಟ್ಟಲಿಲ್ಲ. ನಿನಗೆ ಬೇಡವಾದ ಮೇಲೆ ಈ ಮಗುವನ್ನು ಮತ್ತೆ ಅದೆ ಅನಾಥಾಶ್ರಮದಲ್ಲಿಯೆ ಬಿಟ್ಟು ಬಿಡುತ್ತೇನೆ. ಆದರೆ ಏನೋ ಗೊತ್ತಿಲ್ಲ ನನ್ನ ಮನಸ್ಸಿನಲ್ಲಿ ನಾನು ತಪ್ಪಿತಸ್ಥ ಎಂಬ ಭಾವನೆ ಮೂಡುತ್ತಿದೆ. ನಾನು ಆ ಮಗುವಿಗೆ ಭಾವನಾತ್ಮಕವಾಗಿ ಮೋಸ ಮಾಡುತ್ತಿದ್ದಿನೆ ಎಂದು ನನ್ನ ಅಂತರಾತ್ಮ ಕೂಗಿ ಕೂಗಿ ಹೇಳುತ್ತಿದೆ. ನೂರಾರು ಮಕ್ಕಳಲ್ಲಿ ಒಂದಾಗಿ ಆಟವಾಡಿಕೊಂಡು ಇರುತ್ತಿದ್ದ ಮಗುವನ್ನು ಕರೆದುಕೊಂಡು ಬಂದು ನಾನೆ ಅಪ್ಪಾ, ಇವಳೆ ಅಮ್ಮ ಎಂದು ಪರಿಚಯಿಸಿ ಭಾವನಾತ್ಮಕವಾದ ಬೆಸುಗೆಯನ್ನು ಬೆಸೆದು ಈಗ ಕ್ಷಣಾರ್ಧದಲ್ಲಿ  ಈ  ತಂದೆ ಮಗುವಿನ ಅನುಭಂದವನ್ನು ಕಡೆದು ನನ್ನ ಸ್ವಾರ್ಥಕ್ಕಾಗಿ ಮಗುವಿನ ಮುಗ್ಥ ಮನಸ್ಸಿನ ಜೊತೆ ಆಟವಾಡಿದನೆ ಅನ್ನೊ ನೋವು ನನ್ನ ಕಾಡುತ್ತಿದೆ. ನನ್ನ ನೋವು ಮರೆಯುವುದಕ್ಕಾಗಿ ಹಾಗೂ ಮನ:ಶಾಂತಿಗಾಗಿ ನಾನು ಒಂಟಿಯಾಗಿ ದೂರ ಹೋಗಿಬಿಡಬೇಕೆಂದು ನಿರ್ಧರಿಸಿದ್ದೇನೆ.
ಇಂತಿ ನಿನ್ನ ಕಿರಣ.

ಅಯ್ಯೋ ಎಂತಹ ಕೆಲಸ ನಡೆದುಹೋಯಿತು ಎನ್ನುತ್ತಾ ಅಲ್ಲಿಂದ ಓಡಿದವಳೆ ರಸ್ತೆಗೆ ಬಂದವಳೆ ದೂರದಲ್ಲಿ ಬರುತ್ತಿದ್ದ ಆಟೊವನ್ನು ಕರೆದು ಅನಾಥಾಶ್ರಮಕ್ಕೆ ಹೋಗಲು ಹೇಳಿದಳು. ಇತ್ತ ಕಿರಣ ಬೆಳಿಗ್ಗೆಯಿಂದ ಮಗುವಿಗೆ ಬಗೆಬಗೆಯ ತಿಂಡಿಯನ್ನು ಕೊಡಿಸಿ, ಮಕ್ಕಳ ಆಟದ ಮೈದಾನಕ್ಕೆ ಕರೆದುಕೊಂಡು ಹೋಗಿ ಆಟವಾಡಿಸಿಕೊಂಡು ಹೀಗೆ ಸಮಯದ ಪರಿವೆ ಇಲ್ಲದಂತೆ ಎಷ್ಟೊತ್ತಿನವರೆಗೂ ಮಗುವಿನ ಜೊತೆ ತಾನು ಮಗುವಾಗಿ ಆಟವಾಡಿಕೊಂಡು ಕೊನೆಗೆ ಅವನ ಕಣ್ಣಿಂದ ಧಾರಾಕಾರವಾಗಿ ನೀರು ಸುರಿಯತೊಡಗಿತು. ನಿನ್ನನ್ನು ನಾನೆ ನೋಡಿಕೊಳ್ಳಬೇಕೆಂದರೆ ಪ್ರತಿನಿತ್ಯ ಬೇರೋಬ್ಬರ ಮನೆಯಲ್ಲಿ ಬಿಟ್ಟು ಹೋಗಬೇಕು. ಇನ್ನೊಬ್ಬರು ಎಷ್ಟು ದಿನ ಅಂತ ಈ ಕೆಲಸವನ್ನು ಮಾಡಲು ಸಾಧ್ಯ. ಇದು ಅಸಾಧ್ಯದ ಮಾತು ಹಾಗಿರುವಾಗ ಅಂದುಕೊಳ್ಳುತಿದ್ದಂತೆಯೆ ಅವನ ದು:ಖದ ಕಟ್ಟೆಯೊಡೆದು ಮಗುವನ್ನು ತಬ್ಬಿಕೊಂಡು ಅಳತೊಡಗಿದ. ದೀಪುವಿಗೆ ಅಪ್ಪನ ಅಳು ಕಂಡು ತನಗೂ ಅಳು ಬರುವಂತಾಯಿತು. ಅವನು ಅಪ್ಪನ ಕಣ್ಣಿರನ್ನು ಒರೆಸಿದ. ನಿನ್ನಂತಹ ಮುದ್ದು ಮಗುವನ್ನು ನಾನು ಹೇಗೆ ಅನಾಥಾಶ್ರಮದಲ್ಲಿ ಬಿಡಲಿ, ಮಗುವನ್ನು ಚೆನ್ನಾಗಿ ನೋಡಿಕೊಳ್ಳಿರೆಂದು ಹೇಳಿ ಬಿಳ್ಕೊಟ್ಟ ಅನಾಥಶ್ರಮದ ಸಿಬ್ಬಂದಿಗಳು ಈಗ ಅದೆಷ್ಟು ಛಿ…….ತೂ ಎಂದು ಛಿಮ್ಮಾರಿ ಹಾಕುವರೊ ಎಂದು ತನ್ನನ್ನ ತಾನೆ ಹಳಿದುಕೊಳ್ಳುತ್ತಾ ಮಗುವನ್ನು ಎತ್ತಿಕೊಂಡು ಕಾರಿನಲ್ಲಿ ಕುಳಿತಾ. ದಾರಿಯುದ್ದಕ್ಕೂ ಮಗುವಿನಿಂದ ದೂರವಾಗುವ ಸನ್ನಿವೇಶವನ್ನು ಕಲ್ಪಿಸಿಕೊಳ್ಳಲು ಆಗದೆ ತುಂಬಾ ನೋವನುಭವಿಸುತ್ತಿದ್ದ. ಅನಾಥಾಶ್ರಮ ಬರುತ್ತಲೆ ಮಗುವನ್ನು ಕರೆದುಕೊಂಡು ಕಾರಿನಿಂದ ಕೆಳಗಿಳಿದ. ಇನ್ನೇನು ಅನಾಥಾಶ್ರಮದ ಗೇಟನ್ನು ತೆರೆಯಬೇಕು ಅನ್ನುವಷ್ಟರಲ್ಲಿ ಹಿಂದಿನಿಂದ ಜೋರಾಗಿ ದೀಪೂ ಅನ್ನುವ ಹೆಣ್ಣಿನ ಧ್ವನಿ ಕೇಳಿಸುತ್ತಲೆ ಹಿಂತಿರುಗಿ ನೋಡಿ ದಂಗಾಗಿಬಿಟ್ಟ. ಎದುರಿಗೆ ಸ್ವಲ್ಪ ದೂರದಲ್ಲಿ ಸರೋಜಾ ನಿಂತಿದ್ದಾಳೆ. ದೀಪೂ ಈ ಅಮ್ಮನ ಬಿಟ್ಟು ಹೋಗುತ್ತಿಯಾ? ಬಾ ಕಂದಾ ಈ ಅಮ್ಮನ ಬಳಿಗೆ ಬಾ ಎನ್ನುತ್ತಾ ಎರಡು ಕೈಗಳನ್ನು ಮುಂದಕ್ಕೆ ಚಾಚಿ ಮಗುವಿನ ಕಡೆ ನೋಡಿದಳು. ಕಿರಣ ಮಗುವನ್ನು ಕೆಳಗಿಳಿಸಿದ. ಮಗು ಅಮ್ಮಾ ಎನ್ನುತ್ತಾ ಅಮ್ಮನ ಬಳಿ ಒಡಿ ಬಂದಿತು. ಮಗುವನ್ನು ತಬ್ಬಿಕೊಂಡು ಮುದ್ದಾಡುತ್ತಾ ಇನ್ನು ಮೇಲೆ ನೀನು ನನ್ನ ಬಿಟ್ಟು ಎಲ್ಲಿಯೂ ಹೋಗಬಾರದು ತಿಳಿತಾ ತಗೊ ಇದನ್ನ ಎಂದು ಮಗುವಿನ ಕೈಗೆ ಚಾಕಲೇಟನ್ನು ನೀಡಿದಳು. ಇದನ್ನೆಲ್ಲಾ ಮೂಕವಿಸ್ಮಿತನಾಗಿ ನೋಡುತ್ತಾ ನಿಂತಿದ್ದ ಕಿರಣನಿಗೆ ಇದು ಕನಸೊ ನಿಜವೊ ಒಂದು ತಿಳಿಯದಾಯಿತು. ಅವನ ಹತ್ತಿರಕ್ಕೆ ಬಂದ ಸರೋಜಾ ದಯವಿಟ್ಟು ನನ್ನ ಕ್ಷಮಿಸಿ ನಿಮ್ಮನ ಅರ್ಥ ಮಾಡಿಕೊಳ್ಳದೆ ತುಂಬಾ ತಪ್ಪು ಮಾಡಿಬಿಟ್ಟೆ. ನನ್ನ ಮಗುವಿನ ಮೇಲಿದ್ದ ನನ್ನ ಕುರುಡು ವ್ಯಾಮೋಹದಿಂದ ಹೀಗೆಲ್ಲಾ ಆಯಿತು. ನನ್ನ ತಪ್ಪನ್ನ ತಿದ್ದಿಕೊಳ್ಳೊಕೆ ಒಂದು ಅವಕಾಶ ಕೊಡಿ ಎಂದು ಅವನ ಕಾಲನ್ನು ಹಿಡಿದು ಕ್ಷಮೆ ಕೇಳಿದಳು. ಒಂದು ಸಲ ನನ್ನ ದೀಪುನ ಕಳಕೊಂಡಿದ್ದಿನಿ ಈಗ ಮತ್ತೊಮ್ಮೆ ಕಳೆದುಕೊಳ್ಳೊಕೆ ನಾನು ಇಷ್ಟಪಡಲ್ಲಾ.  ದಯವಿಟ್ಟು ನನ್ನ ಕ್ಷಮಿಸಿ ಎಂದು ಕಣ್ಣಿರಿಡತೊಡಗಿದಳು. ಕಿರಣನಿಗೆ ಹೆಂಡತಿಯ ಮೇಲೆ ಕನಿಕರವುಂಟಾಗಿ ಎರಡು ಕೈಗಳಿಂದ ಅವಳ ಭುಜವನ್ನು ಹಿಡಿದು ಎಬ್ಬಿಸಿದ. ಅಯ್ಯೋ ಹುಚ್ಚಿ ನಿನಗೆ ಕೊನೆಗಾದರೂ ಆ ಮಗುವಿನ ಮೇಲೆ ಪ್ರೀತಿ ಬಂತಲ್ಲಾ ಅಷ್ಟು ಸಾಕು ಬಿಡು. ಹೌದುರಿ ನಾಳೆಯ ದೀಪಾವಳಿ ಹಬ್ಬವನ್ನು ನಾವಿಬ್ಬರೂ ನಮ್ಮ ಮಗುವಿನ ಜೊತೆ ಆಚರಿಸೋಣ. ನಮ್ಮ ಮನೆಗೆ ದೀಪವಾಗಿ ನಮ್ಮ ಬಾಳು ಬೆಳಗೊಕೆ ಬಂದ ಈ ದೀಪ ಬೆಳಗೊಕೆ ಮುಂಚೆನೆ ಆರಿಸೋಕೆ ಹೊರಟಿದ್ದೆ. ನಮ್ಮ ಜೀವನಕ್ಕೆ ಬೆಳಕಾಗಿ ಮತ್ತೆ ಬಂದಿರುವ ದೀಪುವಿನ ಜೊತೆ ಈ ಸಲದ ದೀಪಾವಳಿ  ಆಚರಿಸೋಣ. 

ದ್ವೇಷ, ಸ್ವಾರ್ಥವ ಹೊರನೂಕಿ ಮನದ ಕತ್ತಲೆಯಿಂದ ಹೋರಬಂದು ಮನೆ, ಮನಸ್ಸಿನಲ್ಲಿ ಪ್ರೀತಿಯ ಹಣತೆಯನ್ನು ಹಚ್ಚಿ ಬಾಳನ್ನು ಬೆಳಗಿಸೊ ಪ್ರಯತ್ನವೆ ಈ ದೀಪಾವಳಿ ಗೊತ್ತಾ ಸರು. ನಡಿರಿ ಎನ್ನುತ್ತಾ  ಹೆಂಡತಿ, ಮಗುವಿನೊಂದಿಗೆ ಕಾರಿನಲ್ಲಿ ಕುಳಿತ. ದೀಪು ಅಮ್ಮನ ತೊಡೆಯ ಮೇಲೆ ಕುಳಿತು ಅಮ್ಮ ಕೊಟ್ಟ ಚಾಕಲೇಟನ್ನು ತಿನ್ನುವುದರಲ್ಲಿ ಮಗ್ನನಾಗಿದ್ದ. ಮನೆಗೆ ಬಂದೊಡನೆ ಸ್ವಲ್ಪ ಹೊತ್ತು ಮಗುವಿನೊಂದಿಗೆ ಸರೋಜ ಆಟವಾಡಿದಳು. ನಿಜವಾಗಲು ಅವಳು ತನ್ನ ದೀಪುವಿನ ಜೊತೆಯಲ್ಲಿಯೆ ಇರುವಂತೆ ಕಿರಣನ ಕಣ್ಣಿಗೆ ಕಂಡಳು. ಮರುದಿನ ಅಂಗಳವನ್ನು ಬಣ್ಣ ತುಂಬಿದ ರಂಗೋಲಿಯಿಂದ ಸಿಂಗರಿಸಿದಳು. ದೀಪುವಿನ ಕಡೆಯಿಂದ ಹಣತೆಯಲ್ಲಿ ದೀಪ ಬೆಳಗಿಸಿ  ಇಡಿ ಮನೆಯನ್ನು ದೀಪಗಳಿಂದ ಅಲಂಕಾರ ಮಾಡಿದಳು. ಎಲ್ಲಾದರೂ ಪಟಾಕಿಯ ಶಬ್ದವಾಗುತ್ತಲೆ ದೀಪು ಬೆಚ್ಚಿ ಹೆದರಿ ಓಡಿ ಅಮ್ಮನ ಬಳಿ ಕುಳಿತುಬಿಡುತ್ತಿದ್ದ. ಇದನ್ನೆಲ್ಲ ದೂರದಿಂದ ನೋಡುತ್ತಾ ನಿಂತಿದ್ದ ಅಂಬುಜಮ್ಮ ತನ್ನ ಮೊಮ್ಮಕ್ಕಳ ಜೊತೆ ಕಿರಣನ ಹತ್ತಿರ ಬಂದು ಸರೋಜಾಳಿಗೆ ಕೊನೆಗೂ ಆ ಮಗುನ ಒಪ್ಪಿಕೊಂಡಳಲ್ಲಾ ನನಗೆ ಈಗ ತುಂಬಾ ಸಂತೋಷ ಆಗ್ತಾ ಇದೆ ಕಿರಣ. ಇದೆ ಖುಷಿಯಲ್ಲಿ ನನಗೆ ನನ್ನ ಮೊಮ್ಮಕ್ಕಳಿಗೆ ಭರ್ಜರಿ ಪಾರ್ಟಿ ಕೊಡಿಸಬೇಕು ಅಲ್ಲಿಯೆ ಇದ್ದ ಸರೋಜಾ ಇದನ್ನೆಲ್ಲಾ ಕೇಳಿಸಿಕೊಂಡವಳೆ ಅಂಬುಜಮ್ಮನ ಹತ್ತಿರ ಬಂದು ಓ ಅಗತ್ಯವಾಗಿ ಆಂಟಿ ದೀಪು ಬಂದ ಖುಷಿಗೆ ಖಂಡಿತಾ ಪಾರ್ಟಿ ಕೊಡಸ್ತಿವಿ ಅವರಿಗಷ್ಟೆ ಅಲ್ಲಾ ನಮಗೂ ಪಾರ್ಟಿ ಬೇಕೆ ಬೇಕು ಎನ್ನುವ ಧ್ವನಿಗೆ ಕಿರಣ  ಹೊರಳಿ ನೋಡಿದನು ಎದರಿಗೆ ಸರೋಜಾಳ ಅಪ್ಪ-ಅಮ್ಮ ನಿಂತಿದ್ದರು. ಓ ಮಾವ, ಅತ್ತೆ ನೀವು ಹೌದಪ್ಪಾ ನಮ್ಮ ಮೊಮ್ಮಗನ್ನ ನೋಡಬೇಕು ಅನ್ನೊ ಆಸೆ ನಮಗಿರಲ್ವೆ ಅದಕ್ಕೆ ನಾವು ಬಂದೆವು ಆ  ಮಾತಿಗೆ ಎಲ್ಲರೂ ಜೋರಾಗಿ ನಗತೊಡಗಿದರು.             
                                      
ನಾಗರತ್ನಾ ಗೋವಿಂದನ್ನವರ.


                                        

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x