ಅದು ಆಸ್ಪತ್ರೆಯ ಜನರಲ್ ವಾರ್ಡು. ನಾಲ್ವರು ನಾಲ್ಕು ಪ್ರತ್ಯೇಕ ಹಾಸಿಗೆಗಳ ಮೇಲೆ ಮಲಗಿಕೊಂಡೇ ಮಾತಿಗಿಳಿದಿದ್ದಾರೆ.
ಡಾಕ್ಟರ್ ಒಬ್ಬನ ಹೊಟ್ಟೆ ಭಾಗದಲ್ಲಿ ಅರ್ಧ ಅಡಿ ಉದ್ದ ಕೊಯ್ದು ಆಪರೇಷನ್ ಮಾಡಿದ್ದಾರೆ. ಮತ್ತೊಬ್ಬ ಬೈಕ್ ಮೇಲಿಂದ ಬಿದ್ದು ಬೆನ್ನಿನ ಮೂಳೆಗೆ ಪೆಟ್ಟು ಮಾಡಿಕೊಂಡಿದ್ದಾನೆ. ಇನ್ನೊಬ್ಬ ಬೇರೊಬ್ಬರ ತಪ್ಪಿಗೆ ತಾನು ನೋವು ಅನುಭವಿಸುತ್ತಿದ್ದಾನೆ. ರಸ್ತೆ ಬದಿಯಲ್ಲಿ ಸುಮ್ಮನೆ ನಿಂತಿದ್ದ ಅವನಿಗೆ ಬೈಕೊಂದು ಬಂದು ಗುದ್ದಿದ ಪರಿಣಾಮ ಹಣೆ ಹಾಗೂ ಕಾಲಿಗೆ ಪೆಟ್ಟಾಗಿದೆ. ಕಾಲಿನ ಚರ್ಮ ಕಿತ್ತು ಹೋಗಿದೆ. ತೊಡೆಯ ಚರ್ಮ ಕಿತ್ತು ಅಲ್ಲಿಗೆ ಹಾಕುವುದಾಗಿ ಡಾಕ್ಟರ್ ತಿಳಿಸಿದ್ದಾರೆ.
ಅಪೆಂಡಿಕ್ಸ್ ಆಪರೇಷನ್ ಮಾಡಿಸಿಕೊಂಡಿರುವ 65ರ ಆಸುಪಾಸಿನ ವಯೋಮಾನದ ಅಜ್ಜ ಬಾಗಿಲು ಬಳಿ ಇರುವ ಬೆಡ್ಡಿನ ಮೇಲೆ ಅರೆ ಮಲಗಿದ ಅವಸ್ಥೆಯಲ್ಲಿ ಬಿದ್ದುಕೊಂಡು ದಿನ ಪತ್ರಿಕೆ ಓದುತ್ತಿದ್ದಾನೆ.
ಒಬ್ಬ: ಡಾಕ್ಟ್ರು ಸ್ವಲ್ಪ ಕುಯ್ತೀನಿ ಅಂತ ಹೇಳಿದ್ರು. ನೋಡಿದ್ರೆ ಸಿಜೇರಿಯನ್ ಲೆವೆಲ್ಲಿಗೆ ಹೊಟ್ಟೆ ಕುಯ್ದವ್ರೆ.
ಮತ್ತೊಬ್ಬ: ಆ ಡಾಕ್ಟ್ರು ಸರಿ ಇಲ್ಲ ಕಣ್ರಿ.
ಒಬ್ಬ: ಈ ಆಸ್ಪತ್ರೆ ಓನರ್ರು ಆ ಡಾಕ್ಟ್ರೆ ಅಲ್ವ, ಅದ್ಕೆ ಹಂಗೆ ಆಡ್ತಾರೆ. ಆಪ್ರೇಶನ್ ಮಾಡ್ಬೇಕಾದ್ರು ಅಷ್ಟೆ. ಹಿಂದೆ ಮುಂದೆ ನೋಡಲ್ಲ. ನರ್ಸ್‍ಗಳು ಆ ಡಾಕ್ಟ್ರು ಕಂಡ್ರೆ ಹೆದ್ರುಕಂದು ಸಾಯ್ತಾರೆ.
ಇನ್ನೊಬ್ಬ: ನಮ್ ಡಾಕ್ಟ್ರು ಒಳ್ಳೇವ್ರು. ಆಗಾಗ ಬಂದು ನೋಡ್ಕಂದು ಹೋಗ್ತಾರೆ.
ಒಬ್ಬ: ನಾನೇನೊ ಆಪ್ರೇಶನ್ ಮಾಡುಸ್ಕಂದ್ಮೇಲೆ ಮನೆಗೋಗ್ಬಹ್ದು ಅಂದ್ಕಂಡಿದ್ದೆ. ಈಗ ನೋಡುದ್ರೆ ವಾರಾನ್ಗಟ್ಲೆ ಇಲ್ಲೇ ಮಲ್ಕಂದು ಸಾಯೋವಂಗಾಗಿದೆ. ಕಡ್ಮೆ ಅಂದ್ರೂ 25 ರಿಂದ 30 ಸಾವ್ರ ಬಿಲ್ಲಾಗುತ್ತೆ.
ಮತ್ತೊಬ್ಬ: ಈ ಆಸ್ಪತ್ರೆ ಸರಿ ಇಲ್ಲ ಕಣ್ರಿ. ಎಲ್ಲಾದ್ಕೂ ಆಪ್ರೇಶನ್ ಮಾಡ್ಬೇಕು ಅಂತಾರೆ. ನಮ್ ನೆಂಟ್ರೊಬ್ರಿಗೆ ಕಿಡ್ನಿ ಆಪ್ರೇಶನ್ ಮಾಡ್ಬೇಕು ಅಂತ ಇಲ್ಲಿ ಹೇಳಿದ್ರು. ಬೇರೆ ಕಡೆ ಹೋದ್ರೆ ಅವ್ರು ಆಪ್ರೇಶನ್ ಬೇಡ ಮಾತ್ರೆ ನುಂಗಿ ಸಾಕು ಅಂದ್ರು.
ಇನ್ನೊಬ್ಬ: ನನ್ ಹಣೆಬರಾನೇ ನೆಟ್ಟುಗಿಲ್ಲ. ಸುಮ್ನೆ ನಿಂತಿದ್ದವ್ನಿಗೆ ಆ ನನ್ಮಗ ಬಂದು ಗುದ್ದಿದ್ಕೆ ನೋಡಿ ಈ ಗತಿ ಬಂತು.
ನರ್ಸ್: ಸಂಜೆ 6 ಗಂಟೆಗೆ ಆಪ್ರೇಶನ್ ಅಂತೆ. ಏನೂ ತಿನ್ಬೇಡಿ. ನಿಮ್ ಕಡೆಯವ್ರು ಯಾರಾದ್ರು ಇದ್ರೆ ಕೆಳಗ್ ಕಳ್ಸಿ. ಡಾಕ್ಟ್ರು ಕರಿತಾವ್ರೆ.
ಇನ್ನೊಬ್ಬ: ತೊಡೆಲಿರೋ ಚರ್ಮ ತೆಗ್ದು ಕಾಲಿಗೆ ಹಾಕ್ತಾರಂತೆ. ಈಗ ತೊಡೆನಾದ್ರು ನೆಟ್ಟುಗೈತೆ ಅದನ್ನು ಎಕ್ಕುಟ್ಸಿ ಹಾಕ್ತಾರೆ.
ಒಬ್ಬ: ತೊಡೆಲಿರೋ ಚರ್ಮ ಬೇಗ ಬೆಳ್ಯುತ್ತಂತೆ ಕಣ್ರಿ. ಅದ್ಕೆ ಅಲ್ಲಿಂದ ಕಿತ್ತು ಬೇರೆ ಕಡೆ ಹಾಕ್ತಾರೆ.
ಮತ್ತೊಬ್ಬ: ಆ ಡಾಕ್ಟ್ರು ಆಪ್ರೇಶನ್ ಮಾಡೋಕೆ ಶುರು ಮಾಡೋದೆ ಎಂಟ್ಗಂಟೆ ಮೇಲೆ.
ಇನ್ನೊಬ್ಬ: ಆಪ್ರೇಶನ್ ಮಾಡ್ಬೇಕಾದ್ರೆ ನೋವಾಗಲ್ವ?
ಒಬ್ಬ: ಚಾಕು ತಗಂದು ಕುಯ್ತಿದ್ದಾರೆ ಅನ್ನೋದು ಗೊತ್ತಾಗುತ್ತೆ. ಆದ್ರೆ ಬಾಡಿ ಬೆಂಡ್ ಆಗೋವಂಗೆ ಇಂಜೆಕ್ಷನ್ ಕೊಟ್ಟಿರ್ತಾರೆ. ಅದ್ಕೆ ನೋವಾಗಲ್ಲ. ಆಪ್ರೇಶನ್ ಎಲ್ಲಾ ಮುಗುದ್ಮೇಲೆ ನೋವು ಶುರುವಾಗುತ್ತೆ.
ಒಬ್ಬ: ಆ ಅಜ್ಜುನ್ ನೋಡ್ರಿ ಹೆಂಗ್ ಪೇಪರ್ ಓದ್ತೈತೆ…
ಇನ್ನೊಬ್ಬ: ಜಾಸ್ತಿ ನಗ್ಬೇಡಿ. ಆಮೇಲೆ ಹೊಟ್ಟೆ ಹಿಡ್ಕಂದು ನರುಳ್ಬೇಕಾಗುತ್ತೆ.
ಒಬ್ಬ: ಈ ಆಪ್ರೇಶನ್ ಆದ್ಮೇಲೆ ನಗೋಂಗು ಇಲ್ಲ ನೋಡಿ.
ನರ್ಸ್: ನನ್ ಡ್ಯೂಟಿ ಮುಗೀತು. ಡಾಕ್ಟ್ರು ಇನ್ ಸ್ವಲ್ಪ ಹೊತ್ತಲ್ಲಿ ರೌಂಡ್ಸ್ ಬರ್ತಾರೆ. ನಾನು ಹೋಗ್ತಿದ್ದೀನಿ.
ಒಬ್ಬ: ಈ ಅಜ್ಜಿ ಮಾತ್ರ ಒಳ್ಳೆ ನರ್ಸು. ಯಾವಾಗ್ಲೂ ನಕ್ಕಂದಿರುತ್ತೆ.
ಇನ್ನೊಬ್ಬ: ನೀವೇಳೋದು ನಿಜ. ನರ್ಸ್‍ಗಳು ಇದ್ರೆ ಹಿಂಗಿರ್ಬೇಕು.
ಮತ್ತೊಬ್ಬ: ಹೆಂಗೋ ಆರಾಮಾಗಿದ್ದೆ. ಆ ಹಾಳಾದ್ ಬೈಕಿಂದ ಬಿದ್ದು ಈ ಗತಿ ಬಂತು. ಮೊದ್ಲು ಮನೆ ಸೇರ್ಕಂದ್ರೆ ಸಾಕಾಗೈತೆ.
ಡಾಕ್ಟರ್ ಬಂದರು. ಮಾತು ಬಂದ್ ಆಯಿತು.
-ಎಚ್.ಕೆ.ಶರತ್
*****