ದೂರದ ಸಂಬಂಧಿಯಾಗಿದ್ದ ಶಿವರಾಮನ ಮಗನ ಮದುವೆಯ ಕರೆಯೋಲೆ ತಲುಪಿದಾಗಿನಿಂದ ಜಯಣ್ಣ ಮೋಡದ ಮೇಲೆಯೇ ತೇಲುತ್ತಿದ್ದರು. ಹಣಕಾಸಿನ ವಿಚಾರದಲ್ಲಿ ತಾನೆಲ್ಲಿ, ಶಿವರಾಮನೆಲ್ಲಿ? ಆದರೂ ಅವನು ತನಗೆ ಮದುವೆಯ ಕರೆಯೋಲೆಯನ್ನು ಮರೆಯದೇ ಕಳಿಸಬೇಕೆಂದರೆ ತನ್ನ ಮೇಲೆ ಅವನಿಗೆ ಪ್ರೀತಿ, ವಿಶ್ವಾಸ ಇದೆಯೆಂದೇ ಅರ್ಥವಲ್ಲವೇ ಎನ್ನುವುದು ಜಯಣ್ಣನ ತರ್ಕವಾಗಿತ್ತು. ಅವರ ಉತ್ಸಾಹಕ್ಕೆ ತಕ್ಕ, ಮದುವೆಯ ಆರತಕ್ಷತೆ ಕಾರ್ಯಕ್ರಮ ಬೆಂಗಳೂರಿನಲ್ಲಿಯೇ ಇತ್ತು; ಅದೂ ಮನೆಯಿಂದ ಅಂದಾಜು ಐದಾರು ಕಿಲೋಮೀಟರ್ ದೂರದಲ್ಲಿದ್ದ ದೊಡ್ಡ ಛತ್ರದಲ್ಲಿ. ಹಾಗಾಗಿ ಜಯಣ್ಣ, ಮದುವೆಗೆ ಅಲ್ಲದಿದ್ದರೆ ಆರತಕ್ಷತೆಗಾದರೂ ಹೋಗಿಯೇ ಸಿದ್ಧ ಎಂದು ತಯಾರಾಗಿ ಬಿಟ್ಟಿದ್ದರು.
ಆದರೆ ಹೆಂಡತಿ ಶಾಂತಾ ಮಾತ್ರ ಜಯಣ್ಣನ ಆಲೋಚನೆಗೆ ಪುಷ್ಟಿ ಕೊಡುತ್ತಿರಲಿಲ್ಲ. “ಶಿವರಾಮನವರು ಸುಮ್ಮನೆ ಹೆಸರಿಗೆ ಮಾತ್ರ ಆಹ್ವಾನ ಕೊಟ್ಟದ್ದಿರಬಹುದು. ನೀವು ಅದನ್ನೇ ದೊಡ್ಡದು ಮಾಡಿಕೊಂಡು ಮದುವೆಗೆ ಹೋಗುವುದು ನನಗಂತೂ ಅಷ್ಟು ಸರಿ ಕಾಣುತ್ತಿಲ್ಲ. ಅವತ್ತು ಅವರ ಮನೆಗೆ ಹೋದಾಗ ನಮ್ಮನ್ನು ಹೇಗೆ ಕಂಡರು ಅನ್ನುವುದು ಮರೆತು ಬಿಟ್ಟಿರಾ?” ಎಂದು ಕೇಳಿದಾಗ,
“ಅದು ಬಿಡು, ಶಿವರಾಮ ದೊಡ್ಡ ವ್ಯಾಪಾರ ವ್ಯವಹಾರದಲ್ಲಿರುವವನು. ಅವತ್ತು ಯಾವ ತಲೆಬಿಸಿಯಿತ್ತೋ ನಮಗೇನು ಗೊತ್ತು? ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು, ಅವನಾಗಿ ಕರೆದಾಗಲೂ ನಾವು ಹೋಗದಿದ್ದರೆ ಸಂಬಂಧ ಹೇಗೆ ಉಳಿಯುತ್ತದೆ ಹೇಳು?” ಎಂದು ಹೆಂಡತಿಯನ್ನೇ ಮರುಪ್ರಶ್ನಿಸಿದರು.
ಅವರ ಉತ್ತರದಿಂದ ಸಮಾಧಾನವಾಗದ ಶಾಂತಾ ಮರುಮಾತಾನಾಡದೆ ಎದ್ದು ಹೋದರು.
ಜಯಣ್ಣ ಮತ್ತು ಶಿವರಾಮ ಒಂದೇ ಹಳ್ಳಿಯಲ್ಲಿದ್ದವರು; ದೂರದ ಸಂಬಂಧಿಗಳು ಕೂಡ. ಬಾಲ್ಯದಲ್ಲಿದ್ದ ಸ್ನೇಹಾಚಾರ, ಕಾಲ ಕಳೆದಂತೆ ಹೆಚ್ಚು ಮುಂದುವರಿಯದಿದ್ದರೂ ಜಯಣ್ಣನಿಗೆ ಮಾತ್ರ ಶಿವರಾಮನ ಮೇಲಿದ್ದ ಅಭಿಮಾನ, ವಿಶ್ವಾಸ ಮನಸ್ಸಿನಲ್ಲಿ ಮುಂದುವರಿದಿತ್ತು. ವರ್ಷಗಳು ಸರಿದಂತೆ ಕಾರಣಾಂತರಗಳಿಂದ ಅವರ ಕುಟುಂಬ ಬೇರೆ ಬೇರೆ ಕಡೆ ನೆಲೆಸುವ ಹಾಗಾಗಿ ಸಂಪರ್ಕವೇ ಕಡಿದಿತ್ತು.
ಹಾಗಿದ್ದರೂ ಜಯಣ್ಣನಿಗೆ ಮಾತ್ರ ಶಿವರಾಮನ ನೆನಪು ಮಾಸಿರಲಿಲ್ಲ. ಆಗೊಮ್ಮೆ ಈಗೊಮ್ಮೆ ನೆನಪು ಬಂದಾಗಲೆಲ್ಲಾ ತಮ್ಮ ಬಾಲ್ಯದ ವರ್ಣನೆಯನ್ನು ಹೆಂಡತಿ ಮಕ್ಕಳ ಮುಂದೆ ಮಾಡುತ್ತಿದ್ದರು. ಪರಿಚಿತರು ಯಾರಾದರೂ ಸಿಕ್ಕಿ, “ಶಿವರಾಮನ ವ್ಯವಹಾರ ತುಂಬಾ ಜೋರಾಗಿದೆ. ದುಡ್ಡುಕಾಸು ಚೆನ್ನಾಗಿ ಮಾಡಿದಾನೆ” ಎಂದೆಲ್ಲಾ ಹೇಳುವಾಗ ಜಯಣ್ಣನ ಮನ ಸಂತಸದಿಂದ ತುಂಬುತ್ತಿತ್ತು; “ಅಗಲಿ, ಆಗಲಿ, ಒಳ್ಳೇದಾಗಲಿ” ಎಂದು ಹಾರೈಸುತ್ತಿದ್ದರು.
ಈಚೆಗಂತೂ ಶಿವರಾಮನನ್ನು ಒಮ್ಮೆ ಭೇಟಿಯಾಗಲೇಬೇಕೆಂಬ ಹಂಬಲ ಹೆಚ್ಚಾಗಿತ್ತು. ಅದಕ್ಕೆ ಸರಿಯಾಗಿ ಯಾರೋ ಹೇಳಿದ್ದರು, “ಶಿವರಾಮ ಈಗ ಆಲ್ದೂರಿಗೆ ಕುಟುಂಬ ವಾಸ್ತವ್ಯವನ್ನು ಬದಲಾಯಿಸಿದ್ದಾನೆ” ಎಂದು. ಅದನ್ನು ಕೇಳಿದ ಮೇಲಂತೂ, ಅವನನ್ನು ಭೇಟಿಯಾಗಬೇಕೆಂಬ ತುಡಿತ ಹೆಚ್ಚಾಗಿತ್ತು.
ಅಂತೆಯೇ ಒಮ್ಮೆ, ಜಯಣ್ಣ ಕುಟುಂಬ ಸಮೇತ ತಮ್ಮ ಸ್ವಂತ ಊರಾದ ಚಿಕ್ಕಮಗಳೂರು ಜಿಲ್ಲೆಯಲ್ಲಿದ್ದ ಹಳ್ಳಿಗೆ ಪ್ರಯಾಣ ಮಾಡುವಾಗ, ಆಲ್ದೂರಿನಲ್ಲಿ, ಶಿವರಾಮನ ಮನೆಗೆ ಭೇಟಿ ಇತ್ತಿದ್ದರು.
ಆದರೆ, ಅದು ಅಂಥ ಹಿತವೆನಿಸುವ ಅನುಭವವನ್ನು ಕೊಡಲಿಲ್ಲ. ಕಾರಣ, ಜಯಣ್ಣನಿಗೆ ಆ ಭೇಟಿಯಲ್ಲಿದ್ದ ಸಂಭ್ರಮ, ಸಡಗರಗಳು ಶಿವರಾಮನಲ್ಲಿ ಕಾಣಲಿಲ್ಲ. ಬೆಂಗಳೂರಿನಿಂದ ಪ್ರಯಾಣ ಆರಂಭಿಸಿ, ಬಳಲಿ ಬಂದವರಿಗೆ ಕಾಫಿ ಬಿಟ್ಟರೆ ಬೇರಾವ ಆತಿಥ್ಯವೂ ಇರಲಿಲ್ಲ. ಜೊತೆಗೆ ಮಾತೂ ಕೂಡ ಅಳೆದೂ ತೂಗಿ ಕಷ್ಟದಲ್ಲಿ ಮಾತಾಡಿದ ಹಾಗಿತ್ತು. ಶಿವರಾಮ ಹಸನ್ಮುಖಿಯಾಗಿದ್ದರೇ ಹೊರತು ಆತ್ಮೀಯತೆಯ ಕುರುಹಿರಲಿಲ್ಲ.
ಸ್ವಲ್ಪ ಹೊತ್ತಿನ ನಂತರ, ಅಲ್ಲಿಂದ ಹೊರಟು ಬಂದಾಗ ಶಾಂತಾ, “ನಡೀರಿ, ಮೊದಲು ಯಾವುದಾದರೂ ಹೋಟೆಲ್ಲಿಗೆ ಹೋಗೋಣ. ಇನ್ನೂ ಸ್ವಲ್ಪ ಹೊತ್ತು ಹೀಗೇ ಇದ್ರೆ, ಹೊಟ್ಟೆಲಿರೋ ಹುಳಾನೂ ಸಾಯುತ್ತೆ ಅಷ್ಟೇ.” ಎಂದರು.
ಪೆಚ್ಚಾಗಿದ್ದರೂ ಸಾವರಿಸಿಕೊಂಡು, “ಪಾಪ, ಏನು ಆತಂಕ ಇತ್ತೋ ಏನೋ ಅವನಿಗೆ. ದೊಡ್ಡ ವ್ಯವಹಾರಸ್ಥ” ಎಂದೆಲ್ಲಾ ಜಯಣ್ಣ ಸಮಜಾಯಿಷಿ ಮಾತಾಡುವಾಗ, ಮಗ ಬಾಯಿ ಹಾಕಿ,
“ಏನೇ ಆದರೂ ಇಷ್ಟು ಶ್ರೀಮಂತರ ಮನೆಲಿ ತಿನ್ನೋಕೆ ಏನೂ ಇರಲ್ವಾ? ಮಾತಿಗೆ ಕೂಡ, ಊಟ ಮಾಡ್ತೀರಾ?, ತಿಂಡಿ ತಿಂತೀರಾ? ಅಂತ ಕೇಳಲಿಲ್ಲ. ಅದು ಬಿಡಿ, ಮುಖ ಕೊಟ್ಟು ಸರಿಯಾಗಿ ಮಾತೂ ಕೂಡ ಆಡಲಿಲ್ಲ” ಎಂದ.
“ಹೋಗಲಿ ಬಿಡಿ, ಅಡಿಗೆ ಮನೆಯಲ್ಲಿ ಏನಿತ್ತು, ಇಲ್ಲಾಂತ ನಾವೇನು ನೋಡಿದ್ವಾ? ಸುಮ್ಮನೆ ಊಹೆ ಮಾಡಬಾರದು. ಇಷ್ಟಕ್ಕೂ ನಾವು ಬರುವ ವಿಷಯ ಮೊದಲೇ ಹೇಳಲಿಲ್ಲ. ಇಲ್ಲದಿದ್ದರೆ ಏನಾದರೂ ತಯಾರಿಸಿಟ್ಟಿರುತ್ತಿದ್ದರು” ಎಂದು ಶಿವರಾಮನನ್ನು ವಹಿಸಿಕೊಳ್ಳುತ್ತಾ, ಜಯಣ್ಣ ಎಲ್ಲರನ್ನೂ ಹೋಟೆಲ್ಲಿಗೆ ಕರೆದುಕೊಂಡು ಹೋಗಿ, ನಂತರ ತಮ್ಮ ಊರಿನ ಕಡೆ ಮುಖ ಮಾಡಿದರು.
ಈ ಘಟನೆಯಾದ ಮೇಲೆ, ಜಯಣ್ಣನ ಮನೆಯವರಿಗೆ ಅಂಥ ವಿಶ್ವಾಸವೇನು ಉಳಿಯಲಿಲ್ಲ, ಆದರೆ ಜಯಣ್ಣ ಮಾತ್ರ ತಮ್ಮ ಮೊದಲಿನ ಗುಂಗಿನಲ್ಲೇ ಇದ್ದರು.
ಈಗ, ಮದುವೆಯ ಕರೆಯೋಲೆ ಬಂದ ಮೇಲಂತೂ ಶಿವರಾಮನ ವಿಷಯದಲ್ಲಿ ಯಾರೂ ಪ್ರತಿಯಾಡುವಂತೆಯೇ ಇರಲಿಲ್ಲ. ಮನೆಯವರು ಬರಲು ಸಿದ್ಧವಿಲ್ಲದ್ದರಿಂದ ತಾನೊಬ್ಬನೇ ಆರತಕ್ಷತೆಗೆ ಹೋಗಲು ನಿರ್ಧರಿಸಿದರು. ಸಮಾರಂಭಕ್ಕೆ ಹದಿನೈದು ದಿವಸಗಳಿರುವಾಗಲೇ ಜಯಣ್ಣ ಹೊಸ ಧಿರಿಸು ಖರೀದಿಸಿ ಸಿದ್ಧವಾದರು.
“ಅಷ್ಟು ಶ್ರೀಮಂತರ ಮದುವೆ. ಸಾದಾ ಬಟ್ಟೆ ಹಾಕಿದ್ರೆ ಏನು ಚೆನ್ನ?” ಅಂದುಕೊಂಡು ಮೂರು ಸಾವಿರ ಖರ್ಚು ಮಾಡಿ, ಶೆರ್ವಾನಿ ತೆಗೆದುಕೊಂಡರು. ತಮ್ಮ ಅಳತೆಗೆ ಸರಿಯಾಗಿದೆಯೋ ಇಲ್ಲವೋ, ಹೊಂದುತ್ತದೋ ಇಲ್ಲವೋ ಎಂದೆಲ್ಲಾ ಎರಡೆರಡು ಬಾರಿ ಧರಿಸಿ ನೋಡಿ, ಮನೆಯವರ ಬಳಿ, “ಚೆನ್ನಾಗಿದೆಯ?” ಎಂದು ಕೇಳಿದ್ದನ್ನೇ ಕೇಳಿ ತಲೆ ತಿಂದರು.
“ಇವರಿಗೆ ನಾವು ಹೇಳಿದ್ದು ಅರ್ಥ ಆಗಲ್ಲ, ಅಲ್ಲಿ ಹೋಗಿ ಅನುಭವಿಸಿದರೇ ಗೊತ್ತಾಗೋದು. ಅವತ್ತೇ ಅವರ ನಡೆನುಡಿಯಲ್ಲೇ ಅವರಿಗೆ ನಮ್ಮ ಮೇಲೆ ಎಷ್ಟು ವಿಶ್ವಾಸ ಇದೆ ಅಂತ ಗೊತ್ತಾಗಲಿಲ್ವಾ? ಮದುವೆಗೆ ಕರಿಯಲಿಲ್ಲ ಅನ್ನೋ ಮಾತು ಬೇಡ ಅಂತ ಅವರು ಕಾಗದ ಕಳಿಸಿರಬಹುದು. ಇವರಿಗೆ ಆ ಸೂಕ್ಷ್ಮಗಳು ಗೊತ್ತೇ ಆಗಲ್ಲ. ಸುಮ್ಮನೆ ಅವರ ಮಗನ ಮದುವೆಗೆ ಇವರು ಕುಣಿತಾ ಇದ್ದಾರೆ, ಏನಾದ್ರೂ ಮಾಡಿಕೊಳ್ಳಲಿ” ಎಂದು ಶಾಂತ ಮಗನ ಬಳಿ ಆಗಾಗ ಹಲುಬುತ್ತಿದ್ದರು.
ಜಯಣ್ಣ ಮಾತ್ರ ಯಾರ ಮಾತಿಗೂ ಸೊಪ್ಪು ಹಾಕದೆ ಉತ್ಸಾಹದಿಂದ ಇದ್ದರು.
ಆರತಕ್ಷತೆಯ ದಿನ, ಜರ್ಬಿನಿಂದ ತಯಾರಾಗಿ, ಮಿರಮಿರ ಮಿಂಚುವ ಕಾಗದದಿಂದ ಸುತ್ತಿದ್ದ, ದೊಡ್ಡ ಉಡುಗೊರೆಯ ಕಟ್ಟೊಂದನ್ನು ಹಿಡಿದು ಆಟೋದಲ್ಲಿ ಛತ್ರವನ್ನು ತಲುಪಿದರು.
ಆಟೋದವನಿಗೆ ಹಣ ಕೊಟ್ಟು, ಇಳಿದು ಛತ್ರದ ಕಡೆ ನೋಡಿದವರೇ “ಅಬ್ಬಾ!! ಎಷ್ಟು ಚೆನ್ನಾಗಿದೆ ಹೊರಗಿನ ಅಲಂಕಾರ!?, ಹೂಂ, ಅಲ್ವೇ ಮತ್ತೆ, ಶಿವರಾಮನ ಮಗನ ಮದುವೆ ಅಂದರೆ ಸಾಮಾನ್ಯ ರೀತಿಯಲ್ಲಿ ಆದರೆ ಏನು ಚೆನ್ನ?” ಎಂದು ತಮಗೆ ತಾವೇ ಹೆಮ್ಮೆಯಿಂದ ಹೇಳಿಕೊಂಡರು.
ನಿಧಾನಕ್ಕೆ ಒಂದೊಂದೇ ಮೆಟ್ಟಿಲು ಹತ್ತುತ್ತಾ ಒಳಗೆ ಕಾಲಡಿಯಿಟ್ಟು, “ಇಂದ್ರನ ಒಡ್ಡೋಲಗವೇ ಸರಿ!” ಎಂದುಕೊಳ್ಳುತ್ತಾ, ಪರಿಚಯದವರು ಯಾರಾದರೂ ಕಾಣಸಿಗುತ್ತಾರೇನೋ ಎಂದು ಅತ್ತಿತ್ತ ಕಣ್ಣು ಹಾಯಿಸಿದರು.
ಛತ್ರ ಬಹಳವೇ ದೊಡ್ಡದಿದ್ದರೂ ಜನಜಂಗುಳಿ ಧಿಮಿಗುಡುತ್ತಿತ್ತು. ಆರತಕ್ಷತೆಗೆ ಹೆಚ್ಚಾಗಿ ಶಿವರಾಮನ ಸ್ನೇಹಿತರು, ವ್ಯವಹಾರ ಸಂಬಂಧೀ ಜನರು ಮತ್ತು ಅತಿ ಹತ್ತಿರದ ನೆಂಟರು, ಬಿಟ್ಟರೆ ಹುಡುಗಿಯ ಕಡೆಯವರಿದ್ದರು. ಹೇಳಿಕೊಳ್ಳುವಂಥ ಪರಿಚಯಸ್ಥರು ಯಾರೂ ಸಿಗದೆ ಜಯಣ್ಣ ಒಬ್ಬರೇ ಒಂದು ಕಡೆ ಕುಳಿತರು.
ಶಿವರಾಮ ಮತ್ತು ಅವರ ಹೆಂಡತಿ, ವೇದಿಕೆಯ ಮೇಲೆ ವಧೂವರರಿಗೆ ಶುಭ ಕೋರಲು ಬಂದವರೊಡನೆ ಕೈ ಕುಲುಕಿ, ಫೋಟೋ ತೆಗೆಸಿಕೊಳ್ಳುವುದರಲ್ಲಿ ನಿರತರಾಗಿದ್ದರು. ವೇದಿಕೆಯ ಮೇಲೆ ಹೋಗಲು ನಿಂತಿದ್ದ ಜನರ ಸಾಲು, ಕರಗಿದಂತೆ ಕಂಡ ಮರುಕ್ಷಣ ಮತ್ತಷ್ಟು ಜನರು ಬಂದು ನಿಲ್ಲುತ್ತಿದ್ದರು.
“ಜನಜಂಗುಳಿ ಸ್ವಲ್ಪ ಮುಗಿಯಲಿ, ಮತ್ತೆಯೇ ಹೋದರಾಯಿತು.” ಎಂದು ಅನಿಸಿದರೆ ಮರುಕ್ಷಣ, “ಊಟ ಮೊದಲೇ ಮಾಡಿ ಬಿಡೋದು ಒಳ್ಳೆಯದು ಏನೋ” ಎಂದು ಚಿಂತಿಸುತ್ತಿದ್ದರು.
ಘಂಟೆ ಹತ್ತಾದರೂ ಜನರ ಸಾಲು ಕರಗಲಿಲ್ಲ. ಕೊನೆಗೆ ಹಸಿವು ತಾಳಲಾರದೆ ನೆಲಮಹಡಿಯಲ್ಲಿದ್ದ ಊಟದ ಸಾಲೆಯತ್ತ ಜಯಣ್ಣ ಹೆಜ್ಜೆ ಹಾಕಿದರು.
ಅಲ್ಲಿ ನೋಡಿದರೆ ಅಲ್ಲಿಯೂ ಜನಜಂಗುಳಿ. ಊಟ ಮಾಡುತ್ತಿರುವವರ ಬೆನ್ನ ಹಿಂದೆಯೇ ನಿಂತು, ಒಬ್ಬರು ಊಟ ಮುಗಿಸುವುದನ್ನು ಮತ್ತೊಬ್ಬರು ಬಕಪಕ್ಷಿಯಂತೆ ಕಾಯುತ್ತಾ ನಿಂತಿದ್ದರು.
“ಛೆ! ಏನು ಅವಸ್ಥೆ! ನೆಮ್ಮದಿಯಾಗಿ ಊಟ ಮಾಡಲೂ ಕೂಡ ಸಾಧ್ಯ ಇಲ್ಲವೆಂದು ತೋರುತ್ತೆ.” ಅಂದುಕೊಳ್ಳುತ್ತಾ ಪುನಃ ಮೆಟ್ಟಿಲೇರಿ ಆರತಕ್ಷತೆ ನಡೆಯುವಲ್ಲಿಗೆ ಬಂದರು. ಅಲ್ಲಿಯೇ ಅರ್ಧ ಘಂಟೆ ಕೂತು, ಅತ್ತ ಇತ್ತ ನೋಡುತ್ತಾ ಕಾಲಹರಣ ಮಾಡಿ, ಕೊನೆಗೂ ವೇದಿಕೆಯತ್ತ ಹೋಗಲು ಸಾಲಿನಲ್ಲಿ ನಿಂತರು.
ನಿಂತೂ ನಿಂತೂ ಕಾಲೆರಡು ಸೋತು ಹೋದವು. ಕೊನೆಗೂ ಇವರ ಪಾಳಿ ಬಂದು, ವೇದಿಕೆಯ ಮೇಲೆ ಹೋದರು. ಶುಭ ಕೋರಿದ ಮೇಲೆ, ಫೋಟೋಕ್ಕೆ ಮುಖ ತೋರಿಸಿ, ತಂದಿದ್ದ ಉಡುಗೊರೆ ಕೊಟ್ಟು ಕೆಳಗಿಳಿದರು. ಶಿವರಾಮ, ಯಾವುದೇ ವಿಶೇಷ ಸಂತಸವನ್ನು ತೋರಿಸಲಿಲ್ಲ; ಕಣ್ಣುಗಳು ಆತ್ಮೀಯತೆಯನ್ನು ಸೂಸಲಿಲ್ಲ. ಕೃತಕ ನಗು ಬೀರುತ್ತಾ. ಜಯಣ್ಣನನ್ನು ಮಾತಾಡಿಸಿ, “ಊಟ ಮಾಡಿಕೊಂಡು ಹೋಗಪ್ಪಾ” ಎನ್ನುತ್ತಾ ಬೀಳ್ಕೊಟ್ಟರು.
ಶಿವರಾಮ ಮಾತಾಡಿಸಿದ ರೀತಿ ನೋಡಿ, ಇದ್ದಕ್ಕಿದ್ದಂತೆ ಯಾಕೋ, ಜಯಣ್ಣನಿಗೆ ತಾನು ಬರಬಾರದಿತ್ತು ಎಂದನಿಸಿ ಬಿಟ್ಟಿತು.
“ನನ್ನನ್ನು ಶಿವರಾಮ ಆತ್ಮೀಯತೆಯಿಂದ ಮಾತಾಡಿಸಲೇ ಇಲ್ಲ. ಹೋಗಲಿ, ಸೌಜನ್ಯಕ್ಕಾದರೂ ಮನೆಯವರ ಬಗ್ಗೆ ಕೇಳಲಿಲ್ಲ. ಒಳ್ಳೆಯದೇ ಆಯಿತು ಅವರು ಯಾರೂ ಬರದೇ ಇದ್ದುದು. ಛೆ! ನಾನೂ ಹೆಂಡತಿ, ಮಗನ ಮಾತು ಕೇಳಬೇಕಿತ್ತು. ಹುಂ, ಬಂದಾಯ್ತಲ್ಲ, ಇನ್ನೇನು? ಊಟ ಮಾಡಿಕೊಂಡು ಹೋಗುವುದು, ಪಾಠ ಕಲಿತ ಹಾಗಾಯ್ತು. ಅಷ್ಟೇ.” ಎಂದುಕೊಳ್ಳುತ್ತಾ ಊಟಕ್ಕೆ ನಡೆದರು.
ಜಯಣ್ಣ ಊಟ ಮುಗಿಸಿ ಹೊರಬಂದಾಗ ಸಮಯ ಭರ್ತಿ ಹನ್ನೊಂದೂವರೆಯಾಗಿತ್ತು. ಯಾಕೋ ‘ಹೊರಡುತ್ತೇನೆ’ ಎಂದು ಶಿವರಾಮನಿಗೆ ಹೇಳಬೇಕೆನಿಸಲಿಲ್ಲ. ಸೀದಾ ಛತ್ರದಿಂದ ಹೊರಗೆ ಬಂದು, ದಾರಿಯ ಬದಿಯಲ್ಲಿ ನಿಂತು, ಆಟೋಕ್ಕಾಗಿ ಕಾಯತೊಡಗಿದರು. ಒಂದೆರಡು ಆಟೋಗಳಿಗೆ ಕೈ ತೋರಿಸಿದರೂ ನಿಲ್ಲದೆ ಮುಂದೆ ಹೋದವು. ಆಗಲೇ ಸಣ್ಣಗೆ ಮಳೆ ಹನಿಯಲು ಶುರುವಾಗಿ, ಕೊನೆಗೆ ದಪ್ಪ ದಪ್ಪ ಹನಿಗಳು ಬೀಳಲಾರಂಭಿಸಿದವು. ‘ಇನ್ನು ಆಟೋ ಸಿಕ್ಕಿದ ಹಾಗೆಯೇ, ಮಳೆ ನಿಲ್ಲುವವರೆಗೆ ಕಾಯಬೇಕು.’ ಎಂದುಕೊಳ್ಳುತ್ತಾ ವಾಪಾಸು ಛತ್ರದೆಡೆಗೆ ಮುಖ ಹಾಕುವಾಗಲೇ, ಬೈಕೊಂದು ವೇಗವಾಗಿ ಸಾಗಿ, ಕೆಸರನ್ನು ಸಿಡಿಸಿಯೇ ಬಿಟ್ಟಿತು.
“ಥುತ್! ಇವ್ನ್ ಮನೆ ಹಾಳಾಗ’ ಎಂದು ಶಪಿಸುತ್ತಾ, ಶೆರ್ವಾನಿಯ ಮೇಲಾಗಿದ್ದ ಕೆಸರನ್ನು ವರೆಸುವ ವ್ಯರ್ಥ ಪ್ರಯತ್ನ ಮಾಡಿದರು.
‘ಛೆ! ಇಲ್ಲಿಗೆ ಬಂದಿದ್ದೇ ತಪ್ಪಾಯ್ತು.’ ಎಂದು ಹಳಹಳಿಸುತ್ತಾ ಪುನಃ ಛತ್ರದ ಒಳಗೆ ಬಂದು ನಿಂತರು. ‘ಯಾವಾಗ ಮಳೆ ನಿಂತೀತೋ, ಯಾವಾಗ ಮನೆ ಸೇರುತ್ತೇನೋ’ ಎಂಬ ತವಕದಲ್ಲಿದ್ದರು. ಸ್ವಂತ ವಾಹನದಲ್ಲಿ ಬಂದವರು ಹಿಂತಿರುಗುವಾಗ, ಯಾರಾದರೂ ತಮ್ಮ ಬಗ್ಗೆ ಕನಿಕರಿಸಿ, ವಿಚಾರಿಸಿ, ಅವರ ವಾಹನದಲ್ಲಿ ಮನೆಯವರೆಗೆ ಬಿಡುವರೆನೋ ಎಂದು ಆಸೆಕಂಗಳಿಂದ ಅವರನ್ನೇ ನೋಡುತ್ತಿದ್ದರು. ಕಡೆಗೆ ತಡೆಯಲಾರದೆ ಒಬ್ಬರನ್ನು ಕೇಳಿಯೇ ಬಿಟ್ಟರು.
“ಇಲ್ಲ ಸರ್. ನಾವು ಆ ದಾರಿಲಿ ಹೋಗಲ್ಲ.” ಎಂದು ಅವರು ಜಯಣ್ಣನ ಎದುರೇ ಭುರ್ರೆಂದು ಹೋದರು.
ಮಸಾಲೆ ಹಾಕಿದ ಖಾರ ಅಡುಗೆ ತಿಂದು, ಹೊಟ್ಟೆ ಉರಿಯಲಾರಂಭಿಸಿತ್ತು. ಜೊತೆಗೆ ಉರಿತೇಗು ಬೇರೆ. ಮನಸಿಗಾದ ನೋವು, ಹಾಳಾದ ಹೊಸ ಬಟ್ಟೆಯ ಜೊತೆ, ಕಾಲುನೋವು, ಹೊಟ್ಟೆ ಉಬ್ಬರವೂ ಸೇರಿ ಅಲ್ಲಿಗೆ ಬಂದ ತಮ್ಮನ್ನು ತಾವೇ ಬೈದುಕೊಂಡರು.
ಹೊತ್ತು ಕಳೆದಂತೆ ಮಳೆ ನಿಲ್ಲುತ್ತಾ ಬಂತು. ಮನೆಗೆ ಫೋನ್ ಮಾಡಿ, ಮಗನಿಗೆ ಬೈಕ್ ತರಲು ಹೇಳಿ, ಅವನ ದಾರಿಯನ್ನೇ ಕಾಯುತ್ತಾ ಕುಳಿತರು.
ಅದಿತಿ ಎಂ. ಎನ್.