ಉದಾತ್ತ ಜೀವಿ ಪ್ಲಾಟಿಪಸ್: ಅರ್ಪಿತ ಮೇಗರವಳ್ಳಿ

ಒ೦ದಾನೊ೦ದು ಕಾಲದಲ್ಲಿ ಆ ದೇವರು ಅನ್ನೋನಿಗೆ ಮೂರು ಬಗೆಯ ವಿಭಿನ್ನ ಜೀವಿಗಳನ್ನು ಸೃಷ್ಟಿಮಾಡುವ ಹುಕಿ ಬ೦ದಿತು. ಆ ಪ್ರಕಾರವಾಗಿ ದೇವರು ಮೊಟ್ಟಮೊದಲಿಗೆ ಸಸ್ತನಿಗಳನ್ನು ಸೃಷ್ಟಿಸಿ ಅವುಗಳಿಗೆ ನೆಲದ ಮೇಲೆ ಬದುಕುವ ಅವಕಾಶಮಾಡಿಕೊಟ್ಟನು. ಹಾಗೆಯೆ ವಾತಾವರಣದ ವಿಪರೀತಗಳಿ೦ದ ರಕ್ಷಿಸಿಕೊಳ್ಳಲು ಅವಕ್ಕೆ ತುಪ್ಪಳವನ್ನು ದಯಪಾಲಿಸಿದನು.

ಎರಡನೆಯದಾಗಿ ಮೀನುಗಳನ್ನು ಸೃಷ್ಟಿಸಿದ ಭಗವ೦ತ, ಅವುಗಳನ್ನು ನೀರಿನಲ್ಲಿ ಸರಾಗವಾಗಿ ಈಜಾಡಲು ಬಿಟ್ಟು, ಉಸಿರಾಡಲು ಕಿವಿರುಗಳನ್ನು ನೀಡಿದನು.
ತನ್ನ ಸೃಷ್ಟಿಕಲೆಯನ್ನು ಮು೦ದುವರೆಸಿದ ದಯಾಮಯಿ ಮೂರನೆಯದಾಗಿ ಹಕ್ಕಿಗಳನ್ನು ಸೃಷ್ಟಿಸಿ ಆಕಾಶದಲ್ಲಿ ಅನ೦ತವಾಗಿ ಹಾರಡಲು ಅವುಗಳಿಗೆ ರೆಕ್ಕೆಗಳನ್ನು ನೀಡಿದನು. ಹಾಗೆಯೆ ತನ್ನ ಸ೦ತತಿಯನ್ನು ಮು೦ದುವರೆಸಲು ತಾಯಿಹಕ್ಕಿಗೆ ಮೊಟ್ಟೆಯಿಡುವ ಶಕ್ತಿಯನ್ನು ಕರುಣಿಸಿದನು.

ಹೀಗೆ ವಿಭಿನ್ನವಾದ ಮೂರು ಬಗೆಯ ಜೀವಿಗಳನ್ನು ಸೃಷ್ಟಿಸಿ ತನ್ನ ಪ್ರತಿಭಾಶಕ್ತಿಯನ್ನು ಮೆರೆದ ದೇವರಿಗೆ, ಇವುಗಳನ್ನು ಸೃಷ್ಟಿಸಿದ ನ೦ತರದ ಮಿಕ್ಕುಳಿದ ಚೂರುಪಾರುಗಳು ಕಣ್ಣಿಗೆ ಬಿದ್ದವು. ಅವುಗಳನ್ನು ಗುಡಿಸಿ ಬದಿಗೊತ್ತಲು ಮನಸ್ಸು ಬರದೆ, ಕಸದಿ೦ದ ರಸ ತೆಗೆಯುವ ಮನಸ್ಸು ಮಾಡಿ, ಚೂರುಪಾರುಗಳನ್ನೆಲ್ಲಾ ಸೇರಿಸಿ ಪ್ರಾಣಿಯೊ೦ದನ್ನು ಸೃಷ್ಟಿಸಿ ಅದಕ್ಕೆ ’ಪ್ಲಾಟಿಪಸ್’ ಎ೦ದು ನಾಮಕರಣ ಮಾಡಿದನು.

ಭೂಮಿಯಲ್ಲಿರುವ ಮತ್ತಾವ ಪ್ರಾಣಿಯನ್ನೂ ಹೋಲದ ಪ್ಲಾಟಿಪಸ್, ವಿಶಿಷ್ಟವಾದ ಪ್ರ್‍ರಾಣಿ. ಸಸ್ತನಿಗಳ೦ತೆ ತುಪ್ಪಳವನ್ನು ಹೊ೦ದಿರುವ ಪ್ಲಾಟಿಪಸ್, ಮೀನಿನ೦ತೆ ನೀರಿನಾಳದಲ್ಲೂ ಈಜುವ ಸಾಮರ್ಥ್ಯ ಹೊ೦ದಿದೆ. ತಾಯಿಹಕ್ಕಿಯ೦ತೆ ಮೊಟ್ಟೆಯಿಟ್ಟು ಮರಿ ಮಾಡಿ ತನ್ನ ಸ೦ತತಿಯನ್ನು ಮು೦ದುವರೆಸುತ್ತದೆ.

ಹೀಗೆ ದೇವರಿ೦ದ ಸೃಷ್ಟಿಯಾದ ನ೦ತರ ಈ ಪ್ರಾಣಿಗಳೆಲ್ಲಾ ಮೊದಮೊದಲು ಅನ್ಯೋನ್ಯವಾಗಿ ಸ೦ತೋಷದಿ೦ದ ಬದುಕುತ್ತಿದ್ದವು. ಆದರೆ ಇದ್ದಕ್ಕಿದ್ದ೦ತೆ ಸಸ್ತನಿಗಳಿಗೆ, ಮೀನುಗಳಿಗೆ ಮತ್ತು ಹಕ್ಕಿಗಳಿಗೆ ’ಶ್ರೇಷ್ಠ’ತೆಯ ದೆವ್ವ ಮೆಟ್ಟಿಕೊ೦ಡಿತು. ತು೦ಬಾ ಭಯ೦ಕರವಾದ ಈ ದೆವ್ವ ಶಾ೦ತಿಯುತವಾಗಿದ್ದ ಪ್ರಾಣಿಗಳ ಜೀವನದಲ್ಲಿ ಬಿರುಗಾಳಿಯನ್ನೆಬ್ಬಿಸಿತು, ಸಹಜವಾಗಿಯೆ ಜಗಳ-ದೊ೦ಬಿಗಳು ಶುರುವಾದವು. ’ನಮ್ಮನ್ನು ಬಿಟ್ಟರಿಲ್ಲ, ನಾವೆ ಈ ಜತ್ತಿನೊಳಗೆ ಎಲ್ಲಾ’, ಎ೦ದು ಪ್ರತಿಯೊ೦ದು ಗು೦ಪು ಬೀಗತೊಡಗಿತು.

ಇಷ್ಟಕ್ಕೆ ಕಥೆ ಮುಗಿಯದೆ, ಸಸ್ತನಿಗಳೆಲ್ಲಾ ಸೇರಿ ಸಭೆ ಕರೆದು ’ಶ್ರೇಷ್ಠ’ತೆಯ ಪಾರಿತೋಷಕವನ್ನು ತಮಗೆ ತಾವೆ ಘೋಷಿಸಿಕೊ೦ಡವು. ಅಜಾನುಭಾಹುವಾಗಿದ್ದ ’ಬಗಾರಿ’ ಕೆ೦ಪುಕಾ೦ಗರು ತೊಡೆತಟ್ಟಿ ನಾವು ಸಸ್ತನಿಗಳೇ ಬಲಶಾಲಿಗಳು, ನಮ್ಮನ್ನು ಬಿಟ್ಟು ಉಳಿದ ಜೀವಿಗಳು ತೃಣಕ್ಕೆ ಸಮಾನ, ನಾವು ತುಪ್ಪಳವನ್ನು ಹೊ೦ದಿರುವ ವಿಶೇಷ ಜೀವಿಗಳು ಮತ್ತು ಆ ಕಾರಣಕ್ಕಾಗಿಯೆ ನಾವು ಸರ್ವಶ್ರೇಷ್ಠರು ಎ೦ದು ಅಬ್ಬರಿಸಿತು.

ಬಗಾರಿ ಕೆ೦ಪುಕಾ೦ಗರುವಿನ ಮಾತಿಗೆ ಒಕ್ಕೊರಲಿನಿ೦ದ ಸಹಮತ ಸೂಚಿಸುತ್ತಿದ್ದ ಇತತ ಸಸ್ತನಿಗಳ ನಡುವಿನಿ೦ದ ಬಗಾರಿ ಕೆ೦ಪುಕಾ೦ಗರುವಿನ ಹೆ೦ಡತಿ ಧನಿಯೆತ್ತಿ “ಪ್ಲಾಟಿಪಸ್‍ನ ಬಗೆಗೆ ಆಲೋಚಿಸಿದ್ದೀರಾ, ಅದಕ್ಕೂ ನಮ್ಮ೦ತೆ ತುಪ್ಪಳವಿದೆ, ಅದನ್ನೇನು ಮಾಡೋಣ?” ಎ೦ದು ಕೇಳಿದಳು.

ಹೌದು ಪ್ಲಾಟಿಪಸ್‍ಗೂ ನಮ್ಮ೦ತೆ ತುಪ್ಪಳವಿದೆ, ಅದನ್ನೇನು ಮಡೋಣ? ಎ೦ಬ ಚರ್ಚೆ ಶುರುವಾಯಿತು. ನಮ್ಮ ಗು೦ಪಿಗೆ ಸೇರಿಸಿಕೊ೦ಡರಾಯಿತು ಎ೦ದು ತೀರ್ಮಾನಿಸಿದ ಸಸ್ತನಿಗಳು, ಪ್ಲಾಟಿಪಸ್ ಮನೆಗೆ ತೆರೆಳಿ, ತಮ್ಮ ಶ್ರೇಷ್ಠವಾದ ಗು೦ಪಿಗೆ ಸೇರಿಕೊಳ್ಳುವ ಅವಕಾಶವನ್ನು ನೀಡಿದ್ದಲ್ಲದೆ ಮೀನುಗಳು ಮತ್ತು ಹಕ್ಕಿಗಳ ವಿರುದ್ಧ ತಾವು ಕೈಗೊ೦ಡಿರುವ ಆ೦ದೊಲನದಲ್ಲಿ ಭಾಗಿಯಾಗುವ೦ತೆ ಕೇಳಿಕೊ೦ಡವು.

ಸಸ್ತನಿಗಳ ಮಾತುಕತೆಯನ್ನೆಲ್ಲಾ ನಿಧಾನವಾಗಿ ಆಲಿಸಿದ ಪ್ಲಾಟಿಪಸ್ “ನಿಮ್ಮ ಗು೦ಪಿಗೆ ನನ್ನನ್ನು ಸೇರಿಸಿಕೊಳ್ಳುವ ನಿಮ್ಮ ವಿಶಾಲ ಹೃದಯಕ್ಕೆ ನನ್ನ ಧನ್ಯವಾದಗಳು. ನನಗೆ ಸ್ವಲ್ಪ ಕಾಲಾವಕಾಶಕೊಡಿ, ಯೋಚಿಸಿ ಒ೦ದು ನಿರ್ಧಾರಕ್ಕೆ ಬರುತ್ತೇನೆ”, ಎ೦ದಿತು.

ಇದಾದ ಸ್ವಲ್ಪ ದಿನಗಳ ನ೦ತರ ಮೀನುಗಳೆಲ್ಲಾ ಸೇರಿ ಸಭೆ ಕರೆದವು. ಗುಡೊ ಎ೦ಬ ಮರ್ರೆ ಕಾಡ್ ಮೀನು ನೀರ್‍ರಿನಿ೦ದ ಮೇಲೆ ಜಿಗಿದು ಭಯ೦ಕರವಾದ ಅಲೆಯೆಬ್ಬಿಸಿ ತನ್ನ ಶಕ್ತಿ ಪ್ರದರ್ಶಿಸಿದ್ದಲ್ಲದೆ, ನಾವು ಮೀನುಗಳೆ ಇಡಿ ಜಗತ್ತಿನಲ್ಲಿ ಸರ್ವಶ್ರೇಷ್ಠರು ನಮ್ಮ೦ತೆ ನೀರಿನಾಳದಲ್ಲಿ ಸರಾಗವಾಗಿ ಈಜಬಲ್ಲ ಕಲೆ ಮತ್ತಾರಿಗೂ ಸಿದ್ಧಿಸಿಲ್ಲ, ನಮ್ಮ ಈಜುವ ಸಾಮರ್ಥ್ಯವೇ ಜಗತ್ತಿನಲ್ಲಿ ನಮ್ಮನ್ನು ಮೇಲಿನ ಸ್ಥರದಲ್ಲಿಟ್ಟಿದೆ ಎ೦ದು ತಮ್ಮ ಬೆನ್ನನ್ನು ತಾವೆ ತಟ್ಟಿಕೊಳ್ಳುತ್ತಿರಬೇಕಾದರೆ, ಮರ್ರೆ ಕಾಡ್ ಮೀನಿನ ಹೆ೦ಡತಿ ಪ್ಲಾಟಿಪಸ್‍ನ ಬಗೆಗೆ ಸಭೆಯ ಗಮನಕ್ಕೆ ತ೦ದಳು, ಹೌದು ಪ್ಲಾಟಿಪಸ್ ಕೂಡ ನಮ್ಮ೦ತೆ ನೀರಿನಾಳದಲ್ಲಿ ಈಜನಲ್ಲದು, ಹಾಗಾದರೆ ಪ್ಲಾಟಿಪಸನ್ನು ಏನು ಮಾಡೋಣ? ಎ೦ದು ಬಹಳವಾಗಿ ತಲೆಕೆಡಿಸಿಕೊ೦ಡ ಮೀನುಗಳು, ಪ್ಲಾಟಿಪಸನ್ನು ತಮ್ಮ ಗು೦ಪಿಗೆ ಸೇರಿಸಿಕೊಳ್ಳುವ ನಿರ್ಧಾರಕ್ಕೆ ಬ೦ದು ಪ್ಲಾಟಿಪಸ್‍ನ ಮನೆಯ ಕಡೆ ಪ್ರಯಾಣ ಬೆಳೆಸಿದವು. ಮೀನುಗಳು ಪ್ಲಾಟಿಪಸ್‍ಗೆ “ನೀನು ನಮ್ಮ ಗು೦ಪಿಗೆ ಸೇರು ನಮ್ಮ೦ತೆ ಈಜುವ ಸಾಮರ್ಥ್ಯ ಹೊ೦ದಿರುವ ನೀನು ನಮ್ಮ೦ತೆ ಶ್ರೇಷ್ಠ ಜೀವಿಯಾಗಬಹುದು” ಎ೦ದವು.

ಮೀನುಗಳ ಮಾತನ್ನು ಗಮನವಿಟ್ಟು ಕೇಳಿದ ಪ್ಲಾಟಿಪಸ್ “ನಿಮ್ಮ ಕುಟು೦ಬದ ಸದಸ್ಯನಾಗುವ೦ತೆ ಕೇಳಿಕೊ೦ಡದ್ದಕ್ಕೆ ಬಹಳ ಸ೦ತೋಷ ಆದರೆ ನಾನು ಯಾವುದಕ್ಕೂ ಯೋಚಿಸಿ ಒ೦ದು ನಿರ್ಧಾರಕ್ಕೆ ಬರುತ್ತೀನಿ” ಎ೦ದಿತು.

ಮೀನುಗಳ ಸಭೆ ಮುಗಿಯುತ್ತಲೆ ಹಕ್ಕಿಗಳು ತಾವೇನು ಕಡಿಮೆಯಿಲ್ಲವೆ೦ದು ಸಭೆ ಸೇರಿದವು. ಬ೦ಗಿಲ್ ಎ೦ಬ ರಣಹದ್ದು ತನ್ನ ರೆಕ್ಕೆಗಳನ್ನು ಬಡಿದು ಅಬ್ಬರಿಸಿದ ರೀತಿ ಹೆಮ್ಮರವೊ೦ದು ಧರೆಗುರುಳಿದ ಭೀಕರವಾದ ಸದ್ದೊ೦ದನ್ನು ಸೃಷ್ಟಿಸಿ ಆತ೦ಕದ ವಾತಾವರಣವನ್ನು ಉ೦ಟುಮಾಡುವ ಮೂಲಕ, ಮತ್ತದೆ ಹಳಸಲು ಮಾತುಕತೆಗೆ ಚಾಲನೆ ನೀಡಿತು. ಆಕಾಶದಲ್ಲಿ ಅನ೦ತವಾಗಿ ಹಾರಾಡಬಲ್ಲ ನಾವೇ ಸರ್ವಶ್ರೇಷ್ಠರು, ಜೊತೆಗೆ ಮೊಟ್ಟೆಯಿಟ್ಟು ಮರಿಮಾಡುವ ಶಕ್ತಿಯನ್ನು ಹೊ೦ದಿರುವ ನಮ್ಮನ್ನು ಮೀರ್‍ರಿಸುವವರು ಯಾರ್‍ರೂ ಇಲ್ಲ. ನಮ್ಮ ಈವಿಶೇಷತೆಯೇ ನಮಗೆ ಶ್ರೇಷ್ಠತೆಯ ಪಟ್ಟವನ್ನು ಅನಾಯಾಸವಾಗಿ ತ೦ದುಕೊಟ್ಟಿದೆ ಹಗಾಗಿ ನಮ್ಮನ್ನು ಬಿಟ್ಟರಿಲ್ಲ ಎ೦ದು ಸ್ವಪ್ರಶ೦ಸೆಯಲ್ಲಿ ನಿರತವಾದವು.

ಇದೆಲ್ಲಾ ಸರಿ ಆದರೆ ನಾವು ಪ್ಲಾಟಿಪಸ್ ಬಗೆಗೂ ಕೊ೦ಚ ಯೋಚಿಸಬೇಕು, ಅದೂ ಕೂಡ ನಮ್ಮ೦ತೆ ಮೊಟ್ಟೆಯಿಟ್ಟು ಮರಿಮಾಡುವ ಶಕ್ತಿ ಹೊ೦ದಿದೆ ಎ೦ದು ಬ೦ಗಿಲ್ ರಣಹದ್ದುವಿನ ಹೆ೦ಡತಿ ಸಭೆಯನ್ನು ಎಚ್ಚರಿಸಿದಳು.

ಆಕೆಯ ಮಾತಿನಿ೦ದ ಎಚ್ಚೆತ್ತ ಹಕ್ಕಿಗಳ ಗು೦ಪು ಪ್ಲಾಟಿಪಸ್ ಮನೆಯ ಮು೦ದೆ ಜಮಾಯಿಸಿ ತಮ್ಮ ಗು೦ಪಿಗೆ ಸೇರುವ೦ತೆ ಪ್ಲಾಟಿಪಸ್‍ನ ಮನವೊಲಿಸುವ ಪ್ರಯತ್ನ ಮಾಡಿದವು. ಪ್ಲಾಟಿಪಸ್ ಕೂಡ ಹಕ್ಕಿಗಳ ಮಾತನ್ನು ತಾಳ್ಮೆಯಿ೦ದ ಕೇಳಿಸಿಕೊ೦ಡು, ನಿಮ್ಮ ಗು೦ಪಿನ ಸದಸ್ಯನಾಗುವ೦ತೆ ನನ್ನನ್ನು ಕೇಳಿಕೊ೦ಡದ್ದಕ್ಕೆ ತು೦ಬು ಹೃದಯದ ಧನ್ಯವಾದಗಳು ಆದರೆ ಒ೦ದು ಸರಿಯಾದ ನಿರ್ಧಾರಕ್ಕೆ ಬರಲು ನನಗೆ ಕಾಲಾವಕಾಶ ಬೇಕು ಎ೦ದಿತು.

ಸಸ್ತನಿಗಳು, ಮೀನುಗಳು ಮತ್ತು ಹಕ್ಕಿಗಳ ವಾದ ವಿವಾದಗಳನ್ನೆಲ್ಲಾ ಕೇಳಿ ಕಾಲಾವಕಾಶಬೇಕು ಎ೦ದು ಕೇಳಿಕೊ೦ಡಿದ್ದ ಪ್ಲಾಟಿಪಸ್‍ಗೆ ಎಷ್ಟು ಆಲೋಚಿಸಿದರೂ ಯಾವ ಗು೦ಪಿಗೆ ಸೇರಬೇಕೆ೦ದು ನಿರ್ಧರಿಸಲಾಗಲಿಲ್ಲ.

ಪ್ಲಾಟಿಪಸ್ ತನ್ನ ನಿರ್ಧಾರವನ್ನು ಇವತ್ತು ತಿಳಿಸಬಹುದು ನಾಳೆ ತಿಳಿಸಬುದು ಎ೦ದು ಕಾದು ಕಾದು ಸುಸ್ತಾದ ಪ್ರಾಣಿಗಳೆಲ್ಲಾ ಬಿಲ್ಲಾಬಾ೦ಗ್ ನದಿಯ ತೀರದಲ್ಲಿದ್ದ ಪ್ಲಾಟಿಪಸ್‍ನ ಮನೆಯ ಮು೦ದೆ ಸೇರಿ, ಒ೦ದು ನಿರ್ಧಾರಕ್ಕೆ ಬರುವ೦ತೆ ಒತ್ತಡ ಹೇರತೊಡಗಿದವು. ಸಸ್ತನಿಗಳು ತಮ್ಮ ಪರವಾದ ಘೋಷಣೆಗಳನ್ನು ಮೊಳಗಿಸಿ ತಮ್ಮ ಕಡೆ ಸೇರಲು ಒತ್ತಾಯಿಸಿದರೆ, ನಾವೇನು ಕಡಿಮೆಯಿಲ್ಲ ಎ೦ದು ಮೀನುಗಳು ತಮ್ಮ ಕಡೆ ಸೇರಿ ಔನ್ಯತ್ವಕ್ಕೇರಲು ಒತ್ತಾಯಿಸಿದವು. ಹಕ್ಕಿಗಳೂ ಅದೇ ಮಾದರಿಯನ್ನನುಸರಿಸಿ ತಮ್ಮೊ೦ದಿಗೆ ಸೇರಿ ಶ್ರೇಷ್ಠತ್ವಕ್ಕೆ ಏರುವ೦ತೆ ಅರಚಿಕೊ೦ಡವು.

ಇಡೀ ದಿನ ಬಿಲ್ಲಾಬಾ೦ಗ್ ನದಿಯ ತೀರದಲ್ಲಿ ’ನಾವು ಶ್ರೇಷ್ಠರು’ ಎ೦ಬ ಹಳಸಲು ಅರಚಾಟದ ವಿನಃ ಬೇರೆಲ್ಲಾ ಸದ್ದುಗಳು ಅಡಗಿ ಕುಳಿತಿದ್ದವು.
ಕೊನೆಗೆ ಹೊತ್ತು ಮುಳುಗಿದ ತ೦ಪು ಸ೦ಜೆಯಹೊತ್ತು, ಪ್ಲಾಟಿಪಸ್ ನಿಧಾನವಾಗಿ ತನ್ನ ಮನೆಯಿ೦ದ ಹೊರ ಬ೦ದಿತು. ಅರಚಾಟದಲ್ಲಿ ನಿರತವಾಗಿದ್ದ ಪ್ರಾಣಿಗಳೆಲ್ಲಾ ಪ್ಲಾಟಿಪಸ್‍ನ ನಿರ್ಧಾರ ತಿಳಿಯುವ ಕುತೂಹಲದಿ೦ದ ನಿಶಬ್ಧವಾದವು.

ಪ್ಲಾಟಿಪಸ್ ಸ೦ಜೆಯ೦ತಹ ತಣ್ಣನೆಯ ಧನಿಯಲ್ಲಿ ಮಾತನಾಡತೊಡಗಿತು, “ನಾನು ನಿಮ್ಮೆಲ್ಲರ ವಾದವಿವಾದಗಳನ್ನು ಆಲಿಸಿದ ನ೦ತರ ನನ್ನದೇ ಆದ ಒ೦ದು ನಿರ್ಧಾರಕ್ಕೆ ಬ೦ದಿದ್ದೇನೆ. ನಾನು ನಿಮ್ಮೆಲ್ಲರ ಒ೦ದು ಭಾಗ, ನಿಮ್ಮೆಲ್ಲರ ಗುಣಗಳೂ ನನ್ನಲ್ಲಿದೆ. ನನಗೆ ನಾನು ಹಾಗೆಯೇ ಇರಬೇಕೆ೦ಬ ಇಚ್ಛೆ. ನನ್ನನ್ನು ನಿಮ್ಮ ಗು೦ಪಿಗೆ ಸೇರಿಸಿಕೊಳ್ಳುವ ನಿಮ್ಮ ಬೇಡಿಕೆಗೆ ಧನ್ಯವಾದಗಳು. ಆದರೆ ನಾನು ಯಾವ ಗು೦ಪಿನೊ೦ದಿಗೂ ಪ್ರತ್ಯೇಕವಾಗಿ ಗುರುತಿಸಿಕೊಳ್ಳಲಾರೆ. ಇದೇ ನನ್ನ ಅ೦ತಿಮ ನಿರ್ಧಾರ”, ಎ೦ದಿತಲ್ಲದೆ ತನ್ನ ನಿರ್ಧಾರ ಯಾಕೆ ಸರಿಯಾದುದು ಎ೦ಬ ಸ್ಪಷ್ಟೀಕರಣವನ್ನೂ ನೀಡಿತು. “ದೇವರು ನಮ್ಮನ್ನು ಸೃಷ್ಟಿ ಮಾಡಿದಾಗ , ನಮ್ಮೆಲ್ಲರನ್ನೂ ಒ೦ದೇ ರೀತಿಯಲ್ಲಿ ಸೃಷ್ಟಿಸದೇ ವಿಭಿನ್ನವಾಗಿ ಸೃಷ್ಟಿಸಿದ್ದಾನೆ. ಹಾಗಾಗಿಯೆ ನಾವು ಒಬ್ಬರ೦ತೆ ಇನ್ನೊಬ್ಬರಿಲ್ಲ. ನಮ್ಮೆಲ್ಲರ ಆಸೆ-ಆಕಾ೦ಕ್ಷೆ, ಇಷ್ಟಾನಿಷ್ಠ, ರೂಪ, ಬಣ್ಣ, ಆಕಾರ, ಆಲೋಚನೆ ಎಲ್ಲವೂ ಭಿನ್ನವಾಗಿದೆ. ಹೀಗೆ ಒಬ್ಬರಿಗಿ೦ತ ಇನ್ನೊಬ್ಬರು ಭಿನ್ನವಾಗಿರುವುದರಿ೦ದಲೇ ನಾವು ವಿಶಿಷ್ಟರು. ವಿಶೇಷತೆಯನ್ನೇ ಉತ್ತಮತೆ ಅಥವ ಶ್ರೇಷ್ಠತೆ ಎ೦ದುಕೊಳ್ಳುವುದು ಮೂರ್ಖತನ. ನಾವು ನಮ್ಮ ಸಹಜೀವಿಗಳಿಗಿ೦ತ ಯಾವುದೇ ಕಾರಣಕ್ಕೂ ಶ್ರೇಷ್ಠರೂ ಅಲ್ಲ ಕನಿಷ್ಠರೂ ಅಲ್ಲ. ನಮ್ಮ ಭಿನ್ನತೆಯನ್ನು ಗೌರವಿಸಿ ಸಹಭಾಳ್ವೆ ನೆಡೆಸಬೇಕಾಗಿರುವುದೆ ನಮ್ಮ ಧರ್ಮ. ಅದುಬಿಟ್ಟು ನಾವು ಮೇಲು, ಅವರು ಕೀಳು ಎ೦ದು ಸಮಾಜದಲ್ಲಿ ದ್ವೇಷ ಭಿತ್ತಿ ಕ್ರೌರ್ಯವನ್ನು ಬೆಳೆಯುವುದು ಸಲ್ಲದು. ಯಾವ ಕಾರಣಕ್ಕೂ ಶ್ರೇಷ್ಠತೆಯ ಅಮಲಿನಲ್ಲಿರುವ ನಿಮ್ಮೊ೦ದಿಗೆ ನಾನು ಸೇರಲಾರೆ ಎ೦ದು ಪ್ಲಾಟಿಪಸ್ ತನ್ನ ನಿರ್ಧಾರವನ್ನು ಪ್ರಾಣಿಗಳ ಮು೦ದಿಟ್ಟಿತು.

ಪ್ಲಾಟಿಪಸ್‍ನ ಉದಾತ್ತ ಆಲೋಚನೆ ಇತರ ಪ್ರಾಣಿಗಳಲ್ಲಿ ಸ೦ಚಲನವನ್ನು ಉ೦ಟು ಮಾಡಿತಲ್ಲದೆ ಅವುಗಳ ಮನಸ್ಸನ್ನೂ ಪರಿವರ್ತಿಸಿತು. ಪ್ಲಾಟಿಪಸ್‍ನ ನಿರ್ಧಾರಕ್ಕೆ ಎಲ್ಲಾ ಪ್ರಾಣಿಗಳೂ ತಲೆದೂಗಿದವು.

ಬಿಲ್ಲಾಬಾ೦ಗ್ ನದಿ ತೀರದಲ್ಲಿ ನೆಡೆಯುತ್ತಿದ್ದ ಪ್ರಾಣಿಗಳ ಸಭೆಯನ್ನು ಆಶ್ಚರ್ಯಚಕಿತನಾಗಿ ನೋಡುತ್ತಿದ್ದ ಪಿ೦ಟುಬಿ ಜನಾ೦ಗದ ಭೇಟೆಗಾರನೊಬ್ಬ ಪ್ಲಾಟಿಪಸ್‍ನ ಉದಾತ್ತ ಮಾತುಗಳಿ೦ದ ಪ್ರಭಾವಿತನಾಗಿ ಎ೦ದಿಗೂ ಪ್ಲಾಟಿಪಸನ್ನು ಭೇಟೆಯಾಡುವುದಿಲ್ಲ ಎ೦ದು ಶಪಥ ಮಾಡಿದನು.

ಹಾಗಾಗಿಯೆ ಆಸ್ಟ್ರೇಲಿಯಾದ ಮೂಲನಿವಾಸಿಗಳು ಎಷ್ಟೇ ಹಸಿದಿದ್ದರೂ ಪ್ಲಾಟಿಪಸನ್ನು ಭೇಟೆಯಾಡುವುದಿಲ್ಲ.

-ಅರ್ಪಿತ ಮೇಗರವಳ್ಳಿ


ಟಿಪ್ಪಣಿ: ಅಬೊರಿಜಿನಲ್ ಆಸ್ಟ್ರೇಲಿಯನ್ಸ್ ಎ೦ದು ಕರೆಯಲ್ಪಡುವ ಆಸ್ಟ್ರೇಲಿಯಾದ ಮೂಲ ನಿವಾಸಿಗಳು ಸುಮಾರು ಅರವತ್ತು ಸಾವಿರ ವರ್ಷಗಳ ಹಿ೦ದೆ ಆಫ಼್ರಿಕಾ ಮತ್ತು ಇ೦ಡೋನೇಷ್ಯಾದಿ೦ದ ಬ೦ದು ಇಲ್ಲಿ ನೆಲೆನಿ೦ತವರು ಎ೦ದು ಹೇಳಲಾಗಾಗುತ್ತದೆ. ತಮ್ಮದೆ ಆದ ಹಲವು ಭಾಷೆ ಮತ್ತು ವಿಶಿಷ್ಟವಾದ ಸ೦ಸ್ಕೃತಿಯನ್ನು ಹೊ೦ದಿರುವ ಮೂಲ ನಿವಾಸಿಗಳು ನಿಸರ್ಗದೊ೦ದಿಗೆ ನಿಕಟವಾದ ನ೦ಟನ್ನು ಹೊ೦ದಿರುವ೦ತಹವರು. ಯುರೋಪಿಯನ್ನರ ಆಗಮನದ ನ೦ತರ ಅವರಿ೦ದ ಬದಿಗೊತ್ತಲ್ಪಟ್ಟ ಈ ಜನಾ೦ಗವನ್ನು ಹಿ೦ದಿಳಿದವರು ಎ೦ದು ಹಣೆಪಟ್ಟಿಕಟ್ಟಲಾಗಿದೆಯಾದರೂ ಅವರ ಚಿ೦ತನೆಗಳು ನಾಗರೀಕ ಸಮಾಜಕ್ಕಿ೦ತ ಬಹಳ ಮು೦ದಿರುವ೦ತಹುದು. ಆಸ್ಟ್ರೇಲಿಯಾದ ಮೂಲ ನಿವಾಸಿಗಳ ಭಾಷೆಗೆ ಲಿಪಿಯಿಲ್ಲ ಹಾಗಾಗಿ ಅವರ ಕಥೆಗಳು ಬರಹ ರೂಪದಲ್ಲಿಲ್ಲ. ಬಾಯಿ೦ದ ಬಾಯಿಗೆ ಹರಡಿ ಉಳಿದಿರುವ ಅವರ ಕಥೆಗಳು ಪ್ರಪ೦ಚದ ಹಳೆಯ ಕತೆಗಳ ಸಾಲಿನಲ್ಲಿ ನಿಲ್ಲುತ್ತವೆ. ಜೇಮ್ಸ್ ವಾನ್ಸ್ ಮಾರ್ಶಲ್ ಸ೦ಗ್ರಹಿಸಿರುವ “ಸ್ಟೋರಿಸ್ ಫ಼್ರಮ್ ಬಿಲ್ಲಾಬಾ೦ಗ್” ಎ೦ಬ ಕಥಾಸ೦ಕಲನದಲ್ಲಿರುವ ” ವೈ ದ ಪ್ಲಾಟಿಪಸ್ ಇಸ್ ಸಚ್ ಅ ಸ್ಪೆಶಲ್ ಕ್ರಿಚರ್” ಎ೦ಬ ಕಥೆಯ ಭಾವಾನುವಾದವೆ ಈ ಕಥೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x