ಕೆಲವರಿಗೆ ಇದೆಲ್ಲಾ ವಿವರಣೆ, ಸ್ಪಷ್ಟೀಕರಣಗಳು ರೇಜಿಗೆಯೆನಿಸಬಹುದು. ಹೀಗೆ ದ್ವಂದ್ವ, ಗೊಂದಲ ಹಾಗೂ ಸಂಕೀರ್ಣತೆಗಳಿಂದ ಕೂಡಿದ ಹಲವಾರು ಸಿದ್ಧಾಂತಗಳೇಕೆ ಬೇಕು? ಸರಳವಾದ ಒಂದು ಸಿದ್ಧಾಂತ ಸಾಲದೇ? ಎಂದೂ ಪ್ರಶ್ನಿಸಬಹುದು. ಆದರೆ, ಸತ್ಯದ ಸಮಗ್ರ ವಿವರಣೆಯು ಸತ್ಯದ ಎಲ್ಲ ಮಗ್ಗುಲುಗಳನ್ನೂ ಗಣನೆಗೆ ತೆಗೆದುಕೊಳ್ಳಲೇಬೇಕಾಗುತ್ತದೆ. ಅಲ್ಲದೆ, ಅಂತಹ ಅತಿ ಸರಳೀಕರಣಗಳಿಂದ ಆಗಬಹುದಾದ ಅಪಾಯಗಳನ್ನೂ ನಿರ್ಲಕ್ಷಿಸಲಾಗುವುದಿಲ್ಲ. ಈಗ ಉದಾಹರಣೆಗೆ ಬರೀ ಕರ್ಮವಾದವನ್ನು ಅಳವಡಿಸಿಕೊಂಡೆವೆಂದುಕೊಳ್ಳಿ. ಆಗ ಎಲ್ಲ ಹೊಣೆಗಾರಿಕೆಯೂ ನಮ್ಮದೇ ಎಂದಾಗುತ್ತದೆ. ಹಾಗಾದೊಡನೆ, ‘ಎಲ್ಲವೂ ನನ್ನಿಂದಲೇ, ನಾನಿಲ್ಲದಿದ್ದರೇನೂ ಇಲ್ಲ, ನಾನೇ ಸರ್ವಸ್ವ’, ಎಂದು ನಿರಂಕುಶತೆಯಿಂದ ದೇವರಿಗೂ ದೊಡ್ಡವರಂತಾಡುವ ದುರಹಂಕಾರಿಗಳ ದಂಡು ಸೃಷ್ಟಿಯಾಗದಿರದು ಅಲ್ಲವೇ? ಇನ್ನು, ದೈವವಾದವನ್ನು ಮಾತ್ರವೇ ಪರಿಗಣಿಸಿದಲ್ಲಿ, ನಿರಾತಂಕವಾಗಿ ಕೊಲೆ, ಸುಲಿಗೆ, ಅತ್ಯಾಚಾರ ಇತ್ಯಾದಿಗಳನ್ನೆಲ್ಲಾ ಮಾಡಿ, ‘ಎಲ್ಲವೂ ದೈವ ಪ್ರೇರಣೆ, ಅವನಾಗ್ರಹವಿಲ್ಲದೆ ಒಂದು ಹುಲ್ಲುಕಡ್ಡಿಯೂ ಅಲುಗಾಡದು’ ಎಂದು ದೇವರಿಗೆ ಕೈಮುಗಿಯುವವರ ಗುಂಪುಗಳು ತಲೆಯೆತ್ತುವುದರಲ್ಲಿಯೂ ತಡವಾಗಲಾರದು. ಆದ್ದರಿಂದ ಸಮಾಜದ ಸ್ವಾಸ್ಥ್ಯಕ್ಕಾಗಿ ಈ ಎರಡೂ ವಿಪರೀತ ಸನ್ನಿವೇಶಗಳ ನಡುವೆ ಸಮತೋಲನವನ್ನು ಕಂಡುಕೊಳ್ಳಬೇಕಾಗುತ್ತದೆ. ಹಾಗಾಗಿ ಈ ಎರಡೂ ವಾದಗಳನ್ನು ಏಕಕಾಲಕ್ಕೆ ಒಪ್ಪಿಕೊಂಡು ಅವುಗಳ ನಡುವೆ ಸಮನ್ವಯತೆ ಸಾಧಿಸಬೇಕಾದ ಅನಿವಾರ್ಯತೆ ಇದೆ. ಕೆಲವೊಂದು ವಿಚಾರಗಳು ಮೇಲ್ನೋಟಕ್ಕೆ ವೈರುಧ್ಯದಿಂದ ಕೂಡಿರುವಂತೆ ಕಂಡರೂ, ಅಂತಹ ಗ್ರಹಿಕೆ ನೋಡುಗನ ದೃಷ್ಟಿಕೋನವನ್ನು ಅವಲಂಬಿಸಿರಬಹುದು. ಆದ್ದರಿಂದ ಅದರ ವಾಸ್ತವತೆಯನ್ನು ನಾವು ಸರಿಯಾದ ನೆಲೆಗಟ್ಟಿನಲ್ಲಿ ತಿಳಿದುಕೊಳ್ಳಬೇಕಾಗುತ್ತದೆ.
ಕರ್ಮವಾದ ಮತ್ತು ದೈವವಾದಗಳ ನಡುವಿನ ನಮ್ಮ ಗೊಂದಲವನ್ನು ನಿವಾರಿಸಿಕೊಳ್ಳಲು ಈ ಸ್ಪಷ್ಟೀಕರಣವನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕು. ಧರ್ಮಶಾಸ್ತ್ರಗಳು ಹೇಳುವಂತೆ, ಯಾರು ತನ್ನನ್ನು ತಾನು ಕಾರ್ಯಸ್ಥನನ್ನಾಗಿಯೂ, ಬಾಧ್ಯಸ್ಥನನ್ನಾಗಿಯೂ ಪರಿಗಣಿಸಿಕೊಳ್ಳುತ್ತಾನೋ, ಅಂಥವನಿಗೆ ಕರ್ಮ ಸಿದ್ಧಾಂತವು ಅನ್ವಯವಾಗುತ್ತದೆ. ಮುಂದೆ ಅದೇ ವ್ಯಕ್ತಿಯು ಹೆಚ್ಚಿನ ಸಾಧನೆಗಳನ್ನು ಮಾಡಿ, ಆಧ್ಯಾತ್ಮ ಪಥದಲ್ಲಿ ಪ್ರಗತಿ ಸಾಧಿಸಿ, ತಾನು ಕಾರ್ಯಸ್ಥನೆಂಬ ಅಸ್ಥಿತ್ವವನ್ನೇ ಕಳೆದುಕೊಂಡು, ದೈವಲೀಲೆಯು ತನ್ನ ದೇಹವನ್ನು ಬಳಸಿಕೊಂಡು ಕರ್ಮಗಳನ್ನು ಮಾಡಿಸುತ್ತಿದ್ದು, ತಾನು ನಿಮಿತ್ತಮಾತ್ರವೆಂಬ ವಿಶ್ವಾಸ ಬೆಳೆಸಿಕೊಂಡಲ್ಲಿ ಆಗ ಅವನಿಗೆ ದೈವ ಸಿದ್ಧಾಂತವು ಸಿಂಧುವೆನಿಸಿ ಕರ್ಮವಾದವು ಅಪ್ರಸ್ತುತವೆನಿಸಬಹುದು. ಆಧ್ಯಾತ್ಮ ಪಥದ ಈ ಎರಡು ಘಟ್ಟಗಳ ನಡುವೆ ಇರುವವರು, ತಮ್ಮ ಜೀವನದ ಆಗುಹೋಗುಗಳನ್ನು ಕೆಲವೊಮ್ಮೆ ಕರ್ಮವಾದದಿಂದಲೂ ಕೆಲವೊಮ್ಮೆ ದೈವವಾದದಿಂದಲೂ ಅರ್ಥೈಸಿಕೊಳ್ಳಬಹುದು.
ಶ್ರೇಷ್ಠ ತತ್ವಙ್ಞಾನಿಯಾದ ಜೆ.ಕೃಷ್ಣಮೂರ್ತಿಯವರು ಕೊಡುವ ಹಾಯಿದೋಣಿಯ ಉದಾಹರಣೆ ಈ ಸನ್ನಿವೇಶಕ್ಕೆ ಅತ್ಯಂತ ಸೂಕ್ತವಾಗಿದೆ. ಜೆ.ಕೆ. ಹೇಳುವಂತೆ, ಹಾಯಿದೋಣಿಯ ಚಲನಶಕ್ತಿಯಾದ ಗಾಳಿಯ ವೇಗ ಮತ್ತು ದಿಕ್ಕು ದೈವಾಗ್ರಹವಾದರೆ, ಆ ದೋಣಿಯನ್ನು ನಡೆಸುವ ದೋಣಿಯ ಹಾಯಿಪಟ ಮತ್ತು ಹರಿಗೋಲು, ನಮ್ಮ ಇಚ್ಛಾಶಕ್ತಿಯಾಗಿ ನಮ್ಮ ನಿಯಂತ್ರಣದಲ್ಲಿರುತ್ತದೆ. ಒಬ್ಬ ಚತುರ ಅಂಬಿಗನು ತನ್ನ ಹಾಯಿಪಟ ಮತ್ತು ಹರಿಗೋಲುಗಳ ಸಹಾಯದಿಂದ ಗಾಳಿಯ ವೇಗ ಮತ್ತು ದಿಕ್ಕನ್ನು ತನಗೆ ಅನುಕೂಲಕರವಾಗಿ ಪರಿವರ್ತಿಸಿಕೊಂಡು, ಕೌಶಲ್ಯದಿಂದ ದೋಣಿಯ ಸರಿಯಾದ ಆಯ ಕಾಯ್ದುಕೊಳ್ಳುವ ಮೂಲಕ ದೈವಾಗ್ರಹವನ್ನು ದೈವಾನುಗ್ರಹವಾಗಿಸಿಕೊಂಡು ತನ್ನ ಗಮ್ಯವನ್ನು ತಲುಪಬಲ್ಲವನಾಗಿರುತ್ತಾನೆ.
ಹಗುರವಾದ ಓದನ್ನು ಬಯಸುವ ವಾಚಕರ ಅಭಿರುಚಿಗೆ ಈ ಲೇಖನದಲ್ಲಿ ಆಧ್ಯಾತ್ಮದ ಪ್ರಸ್ತಾಪ ಸ್ವಲ್ಪ ಹೆಚ್ಚೇ ಆಯಿತೆಂಬದು ನನಗರಿವಿದೆ. ಆದರೆ ಆಧ್ಯಾತ್ಮವು ಅಮೃತವೆಂದು ಬಲವಾಗಿ ನಂಬಿದವನು ನಾನು. ಅಂದಮಾತ್ರಕ್ಕೆ, ಬದುಕಿನ ವೈರುಧ್ಯಗಳ ಕುರಿತು ಲೇಖನಬರೆಯುತ್ತಿರುವ ನನಗೆ, ‘ಅತಿಯಾದರೆ ಅಮೃತವೂ ವಿಷ’ ಎಂಬ ಜನಪ್ರಿಯ ನಾಣ್ನುಡಿ, ಈ ಹೊತ್ತಿಗೆ ನೆನಪಾಗದಿದ್ದಲ್ಲಿ ಏನು ಸಾರ್ಥಕ? ಹಾಗಾಗಿ ಲೇಖನಕ್ಕೆ ಸಮತೋಲನ ಒದಗಿಸುವ ದೃಷ್ಟಿಯಿಂದ ಇತರ ಕ್ಷೇತ್ರಗಳಲ್ಲಿನ ವೈರುಧ್ಯಗಳ ಕುರಿತಾಗಿಯೂ ಸ್ವಲ್ಪ ಚರ್ಚಿಸುವುದು ಸೂಕ್ತವೆನಿಸುತ್ತದೆ.
ಈಗೊಂದು ವಿಚಾರ ಗಮನಿಸೋಣ. ನಾವು ತಿಳಿದಿರುವಂತೆ, ನಮ್ಮ ಮಕ್ಕಳಿಗೆ ಕನ್ನಡಾಭಿಮಾನ, ದೇಶಭಕ್ತಿ, ರಾಷ್ಟ್ರೀಯ ಭಾವೈಕ್ಯತೆ, ವಿಶ್ವಭ್ರಾತೃತ್ವ ಮೊದಲಾದ ಮೌಲ್ಯಗಳನ್ನು ಕಲಿಸಿ ಅವರನ್ನು ಪ್ರಜ್ಞಾವಂತ ನಾಗರೀಕರನ್ನಾಗಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಅದು ನಮ್ಮ ಶಿಕ್ಷಣ ಪದ್ಧತಿಯ ಹೊಣೆಗಾರಿಕೆಯೂ ಹೌದು. ಆದರೆ ನವಿರಾದ ವೈರುಧ್ಯಗಳಿಂದ ಕೂಡಿದಂತೆ ಕಂಡುಬರುವ ಈ ಮೇಲಿನ ಮೌಲ್ಯಗಳನ್ನು ಮಕ್ಕಳಿಗೆ ಕಲಿಸುವ ನಿಟ್ಟಿನಲ್ಲಿ ಅನೇಕ ಸೂಕ್ಷ್ಮ ಸಮಸ್ಯೆಗಳು ಎದುರಾಗಬಹುದಲ್ಲವೇ? ಎಷ್ಟಾದರೂ, ನಾವು ಭಯೋತ್ಪಾದಕರೆಂದು ಬಗೆಯುವ ಕೆಲವು ರಾಷ್ಟ್ರವಿರೋಧೀ ಶಕ್ತಿಗಳನ್ನೇ ನಮ್ಮ ನೆರೆಯ ರಾಷ್ಟ್ರ, ಸ್ವಾತಂತ್ರ್ಯ ಹೋರಾಟಗಾರರೆಂದು ಕರೆದು ಅನುಕಂಪ ತೋರಿ ಬೆಂಬಲಿಸುವುದಿಲ್ಲವೇ? ಕೆಲವು ಪ್ರತ್ಯೇಕತಾವಾದಿಗಳ ಕನಸಾಗಿದ್ದ ಖಲಿಸ್ತಾನವೇನಾದರೂ ಸಾಕ್ಷಾತ್ಕಾರಗೊಂಡಿದ್ದಲ್ಲಿ, ಇಂದು ಅವರು ಭಯೋತ್ಪಾದಕ ಬಿಂದ್ರನ್ ವಾಲೆಯನ್ನು ರಾಷ್ಟ್ರಪಿತನೆಂದು ಗೌರವಿಸುತ್ತಿದ್ದುದು ಸುಳ್ಳೇ? ಒಬ್ಬ ವ್ಯಕ್ತಿಯನ್ನು ಜನರು ತೀವ್ರವಾದಿಯೆಂದು ನೆನೆಯುವರೋ, ಅಥವಾ ಸ್ವಾತಂತ್ರ್ಯ ಹೋರಾಟಗಾರನೆಂದು ಸ್ಮರಿಸುವರೋ ಎನ್ನುವುದು ಅವನ ಹೋರಾಟದ ಜಯಾಪಜಯವನ್ನು ಅವಲಂಬಿಸಿದೆಯಲ್ಲವೇ?
ಈ ಎಲ್ಲ ಹಿನ್ನಲೆಯಲ್ಲಿ ಯೋಚಿಸಿದಲ್ಲಿ, ಕನ್ನಡಾಭಿಮಾನ, ದೇಶಭಕ್ತಿ, ರಾಷ್ಟ್ರೀಯ ಭಾವೈಕ್ಯತೆ, ವಿಶ್ವಭ್ರಾತೃತ್ವ ಮೊದಲಾದ ಮೌಲ್ಯಗಳನ್ನು ಮಕ್ಕಳಿಗೆ ಕಲಿಸುವಾಗ ನಾವು ವಿಶೇಷ ಕಾಳಜಿ ವಹಿಸಬೇಕು ಎಂದೆನಿಸದಿರದು. ಕನ್ನಡ ಸಾಹಿತ್ಯದಲ್ಲಿ ಕುವೆಂಪುರವರ ‘ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’,ಮತ್ತು ಕರ್ಕಿಯವರ ‘ವಿಶ್ವಭಾರತಿಗೆ ಕನ್ನಡದಾರತಿ’ ಇತ್ಯಾದಿ ಸಾಲುಗಳು ಬಹುಶಃ ಇಂತಹ ಕಾಳಜಿಯಿಂದಲೇ ಹುಟ್ಟಿರಬೇಕು. ಕನ್ನಡ ಸಾಹಿತ್ಯದಲ್ಲಿ ನಡೆದಿರುವಂತೆ, ಪ್ರಾಂತೀಯ, ರಾಷ್ಟ್ರೀಯ ಹಾಗೂ ಜಾಗತಿಕ ಮೌಲ್ಯಗಳನ್ನು ಒಟ್ಟುಮಾಡಿ ಸಮಗ್ರವಾಗಿ ಹೊಸೆಯುವ ಇಂತಹ ಪ್ರಜ್ಞಾಪೂರ್ವಕ ಪ್ರಯತ್ನಗಳು, ರಾಷ್ಟ್ರದ ಇತರ ಕೆಲ ಪ್ರಾದೇಶಿಕ ಭಾಷಾ ಸಾಹಿತ್ಯದಲ್ಲಿ ಹೆಚ್ಚು ನಡೆದಿಲ್ಲವೆಂದು ನಾನು ಕೇಳಿ ತಿಳಿದಿದ್ದೇನೆ. ಹಾಗಾದಾಗ ಈ ಎಲ್ಲ ಮೌಲ್ಯಗಳ ಸಮನ್ವಿತ ಪರಿಜ್ಞಾನ ಮೂಡಲಾರದು. ಅಂತಹ ಪರಿಸ್ಥಿತಿಯಲ್ಲಿ ದೇಶಭಕ್ತಿ, ದೇಶಾಭಿಮಾನ, ರಾಷ್ಟ್ರೀಯ ಭಾವೈಕ್ಯತೆಗಳ ಪರಿಕಲ್ಪನೆಗಳಿಂದ ಹೆಚ್ಚು ಪ್ರಭಾವಿತರಾದ ಮಕ್ಕಳು ಪ್ರಾದೇಶಿಕ ನುಡಿ, ನೆಲ, ಜಲದ ಹೋರಾಟಗಳನ್ನು ಸಮರ್ಥಿಸದಿರಬಹುದು. ಕಟ್ಟಾ ದೇಶಾಭಿಮಾನಿಗಳಾದ ಅವರಿಗೆ ಪ್ರಾದೇಶಿಕ ಸಮಸ್ಯೆಗಳು ಗೌಣವೆನಿಸಬಹುದು. ಅದೇ ರೀತಿ ಕೆಲವು ಅನನ್ಯ ದೇಶಭಕ್ತರಿಗೆ ವಿಶ್ವಮಾನವ ಸಂದೇಶವೂ ಅಪಥ್ಯವಾಗಬಹುದು. ಉತ್ಕಟ ಭಾಷಾಭಿಮಾನವೆಂಬುದು ರಾಷ್ಟ್ರೀಯ ಭಾವೈಕ್ಯತೆಯ ಪರಿಕಲ್ಪನೆಗೆ ತೊಡಕಾಗುವ ಸಾದ್ಯತೆಗಳೂ ಇಲ್ಲದಿಲ್ಲ. ಇಂತಹ ಸಮಸ್ಯೆಗಳು ಉಂಟಾಗದಿರಬೇಕಾದರೆ ಮಕ್ಕಳು ಈ ಮೌಲ್ಯಗಳ ಬಗ್ಗೆ ಮಾತ್ರ ಕಲಿತರೆ ಸಾಲದು. ಅವರು ಈ ಮೌಲ್ಯಗಳನ್ನು ಸಮಗ್ರವಾಗಿ ನೋಡಿ, ಅವುಗಳನ್ನು ಸನ್ನಿವೇಶಕ್ಕೆ ಅನುಗುಣವಾಗಿ, ಸೂಕ್ತ ಪರಿಮಾಣದಲ್ಲಿ ಸಮನ್ವಯಗೊಳಿಸಿ ಪ್ರಯೋಗಿಸುವ ಕ್ಷಮತೆಯನ್ನೂ ಬೆಳೆಸಿಕೊಳ್ಳಬೇಕಾಗುತ್ತದೆ. ಈ ಕ್ಷಮತೆಯು ಅನುಭವ ಮತ್ತು ಪ್ರೌಢಿಮೆಗಳೊಂದಿಗೆ ಬರಬಹುದಾದರೂ, ಅದರಲ್ಲಿ ವಿವಿಧ ಮೌಲ್ಯಗಳ ನಡುವೆ ಸೂಕ್ತ ಸಮತೋಲನ ಕಾಯ್ದುಕೊಳ್ಳುವುದೇ ಮಹತ್ವದ ಅಂಶವಾಗುತ್ತದೆ.
ನಾವಿದುವರೆಗೆ ನೋಡಿದಂತೆ, ಈ ವೈರುಧ್ಯ ಭರಿತ ಲೋಕದಲ್ಲಿ ಸುವರ್ಣ ಸಮತೋಲನದ ಸಮನ್ವಯತೆಯ ಮಹತ್ವ, ಉತ್ಪ್ರೇಕ್ಷೆಗೆ ಅವಕಾಶವೇ ಇಲ್ಲದಂತೆ ಸಮಾಜದ ಎಲ್ಲ ಕ್ಷೇತ್ರಗಳಿಗೂ ವಿಸ್ತರಿಸಿರುವುದು ಸರಿಯಷ್ಟೆ. ಅಲ್ಲದೆ, ಈ ಲೇಖನದಲ್ಲಿ ಇದುವರಗೆ ನೋಡಿದ ಎಲ್ಲ ದೃಷ್ಟಾಂತಗಳೂ, ಬದುಕಿನಲ್ಲಿ ಕೌಶಲ್ಯದಿಂದ ಆಯ ತಪ್ಪದಂತೆ ಎಚ್ಚರ ವಹಿಸಿ, ಸಮತೋಲನ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆಯನ್ನೇ ಒತ್ತಿ ಹೇಳುತ್ತವೆಂಬುದು ಗಮನಾರ್ಹ. ಆದ್ದರಿಂದ ಬದುಕಿನ ಎಲ್ಲ ಸನ್ನಿವೇಶಗಳಲ್ಲೂ ಸೂಕ್ತ ಅಳತೆಯ ಅರಿವು ಬಲು ಮುಖ್ಯವಾಗುತ್ತದೆ. ಎಷ್ಟಾದರೆ ಹೆಚ್ಚು ಮತ್ತು ಎಷ್ಟಾಗದಿದ್ದರೆ ಕಡಿಮೆಯೆಂಬ ಸ್ಪಷ್ಟ ಪರಿಕಲ್ಪನೆ ಇಟ್ಟುಕೊಳ್ಳಬೇಕಾಗುತ್ತದೆ. ಹಾಗಾಗಿ ಜೀವನದಲ್ಲಿ ನಮ್ಮ ಎಲ್ಲ ಪ್ರಾಶಸ್ತ್ಯಗಳ ಹಿತಮಿತಗಳನ್ನರಿತು ಒಂದು ಸೂಕ್ತವಾದ ಹದ ಕಂಡುಕೊಂಡು ಆಯ ತಪ್ಪದೇ ಮುನ್ನಡೆಯುವುದೇ ಶ್ರೇಯಸ್ಕರ. ಏಕೆಂದರೆ ಜೀವನದಲ್ಲಿ, ‘ಆಯಾನೇ ಮೈನು, ಆಯ ತಪ್ಪಿದ್ರೆ ಅಪಾಯ ಗ್ಯಾರಂಟಿ.’ ಅಲ್ಲವೇ?
*****
ಆಯ ತಪ್ಪಿದರೆ ಅಪಾಯ ಎಲ್ಲೂ ಆಯ ತಪ್ಪದೆ ಓಡಿಸಿಕೊಂಡು ಹೋಯ್ತು