ಆತ್ಮ(ಮಿಯ)ಗೆಳೆಯ: ಜಯಂತ್ ದೇಸಾಯಿ

ಅದೊಂದು ದಿನ ಸುಬ್ಬರಾಯ ಆಟ ಆಡುತ್ತಾ ಆಡುತ್ತಾ ಮನೆಯಿಂದ ಎಷ್ಟೋ ದೂರ ಇರೋ ಮೊಬೈಲ್ ಟವರ್ ಹತ್ತಿರ ಹೋದ. ಅಲ್ಲಿ ಬಿದ್ದಿದ್ದ ಬಾಲ್ ತೆಗೆದುಕೊಂಡು ಯಾರ ಜೊತೆ ಮಾತಾಡುತ್ತಾ ಇದ್ದಂತೆ ಮಾಡಿ ತಿರುಗಿ ವಾಪಸ ಬಂದ.

ಬಂದ ಮಗನನ್ನು ತಾಯಿ ರಾಧಾ ಯಾರ್ ಜೊತೆ ಮಾತಾಡುತ್ತಿದ್ದೆ ಅಲ್ಲಿ ಅಂದರೆ, ಅಮ್ಮ ಅವನು ಯಾರೋ ನನ್ನ ಸಹಾಯ ಬೇಕು ಅಂತಿದ್ದ ಅಮ್ಮ ಕಾಯುತ್ತಿದ್ದಾಳೆ ನಾಳೆ ನೋಡುವ ಅಂತ ಹೇಳಿ ಬಂದೆ ಅಂದ. ಆದ್ರೆ ತಾಯಿಗೆ ಏನೋ ಅನುಮಾನ ಬಂದು ಅಲ್ಲಿ ಯಾರೂ ಇರಲಿಲ್ಲ ಸುಬ್ಬು ಎಂದರು. ಇಲ್ಲಮ್ಮ ಇದ್ದ ದೂರ ಇತ್ತು ನಿನಗೆ ಕಂಡಿಲ್ಲ ಎಂದ ಸುಬ್ಬು.

ಮತ್ತೆ ಮರುದಿನ ಇದೇ ಕಥೆ, ಊರಿಂದ ನೆಂಟರ ಮನೆಗೆ ಬಂದಿದ್ದ ರಾಧಾಗೆ ಮಗನ ದಿನಚರಿಯಲ್ಲಿ ಬದಲಾವಣೆ ನೋಡಿ ಕಸಿವಿಸಿ ಆಗ್ತಿತ್ತು. ಯಾಕೋ ಮಂಕ್ ಆಗಿದ್ದೀಯಾ ಅಂತ ಕೇಳುತ್ತಿದ್ದರು. ಅವ್ನು ಏನು ಇಲ್ಲ ಅಮ್ಮ ಅಂತ ಜಾರಿಕೊಳ್ಳುತ್ತಿದ್ದ… ಹಿಂಗೆ ಕೊನೆಯ ದಿನ ಪ್ರಯಾಣ ಮಾಡಬೇಕು ಎಂದು ಬೆಳಿಗ್ಗೆ ಎಲ್ರೂ ಹೋಗುವ ಸಾಮಾನು ಬಟ್ಟೆ ಬರೆ ಸಿದ್ದ ಪಡಿಸಿ ಮಲಗಿದ್ದರು…

ಯಾರೋ ಬಂದು ಸುಬ್ಬು ಸುಬ್ಬು ಅಂತ ಕರೆದ ತಕ್ಷಣ ಎದ್ದ ಸುಬ್ಬು ಬಂದ್ಯ ಮುಕ್ಕಮ್ಮ ಇರು ಬಂದೆ ಅಂತ ಮೆಲ್ಲಗ್ಗೆ ಎದ್ದು ಅವಳ ಕೈ ಹಿಡಿದು ಜೊತೆಗೆ ಹೋದ, ಸುಮಾರು ಹೊತ್ತಿನ ನಂತರ ನಿಧಾನಕ್ಕೆ ಬಂದು ಮಲ್ಗಿದ್ದ, ಬೆಳಗ್ಗೆ ಎದ್ದು ಅವರ ಅಮ್ಮ ಅವನ ಮೈ ಮುಟ್ಟಿ ನೋಡಿದಾಗ ತುಂಬು ಜ್ವರ. ಗಾಬರಿ ಬಿದ್ದ ಅವಳು ಮನೆಯವರಿಗೆಲ್ಲ ಅವ್ನು ದಿನವೂ ಮಾಡುವ ಚಟುವಟಿಕೆ ಎಲ್ಲವನ್ನೂ ಹೇಳಿದಳು…

ಇದನೆಲ್ಲ ಕೇಳುತ್ತ ಕುಳಿತಿದ್ದ ಮನೆ ಹಿರಿಯ ಆಂಜನಪ್ಪ ಯಾಕೋ ಏನೋ ನಡೀತಿದೆ ಎಂದು ಬಂದಿದ್ದ ನೆಂಟರು ಸ್ಥಿತಿ ನೋಡಿ ಮರುಗಿ ಹಳ್ಳಿಯ ಪ್ರಖ್ಯಾತ ಘೋಷಿತ ಸ್ವಾಮಿ ನಿಂಗಪ್ಪ ನನ್ನು ಕರೆಸಿದ…

ನಿಂಗಪ್ಪ  ನಿಧಾನಕ್ಕೆ ಸುಬ್ಬು ಮಲಗಿದ್ದ ಹಾಸಿಗೆ ಹತ್ತಿರ ಬಂದು ಕೈ ಹಿಡಿದು ನಾಡಿ ನೋಡಿ ಮೆಲ್ಲನೆ ಹೇಳಿದ ರಾಧಮ್ಮ ನಿಮ್ಮ ಮಗ ಇಷ್ಟು ದಿನ ಆತ್ಮದ ಜೊತೆ ಮಾತಾಡುತ್ತಿದ್ದ….

ನಿಂಗಪ್ಪ ನಿಧಾನಕ್ಕೆ ಸಬ್ಬುವಿನ ಕೈ ಅಗಲಿಸಿ ವಿಚಿತ್ರವಾಗಿ ಅವನ ರೇಖೆಗಳನ್ನು ನೋಡಿ, ಏನನ್ನೋ ಗೀಚಿದ ಹಾಗೆ ಮಾಡುತ್ತಿದ್ದ. ನಿಮ್ಮ ಮಗ ಆತ್ಮ ದ ಜೊತೆ ಮಾತಾಡುತ್ತಿದ್ದ ಅನ್ನೋದು ಕೇಳಿಯೇ ಅರ್ಧ ತಲೆ ಸುತ್ತಿ ಬಿದ್ದಿದ್ದ ಅವನ ಅಮ್ಮ ನಿಧಾನಕ್ಕೆ ಎದ್ದು ಕೈ ಮುಗಿದು ಕೇಳಿದಳು.

ಅಪ್ಪರ ಏನರ ಮಾಡ್ರಿ, ಮಗನ ರಜಾ ಅಂತಾ ನಾಲ್ಕು ದಿನ ಹೆಚ್ಚಿಗೆ ಉಳಿದಿದಕ್ಕ ಹೀಂಗ ಆಯಿತು, ಅವತ್ತೇ ನಮ್ಮನೆಯರ ಮಾತು ಕೇಳಿ ಹೋಗಬೇಕಿತ್ತು. ನನ್ನ ಕರ್ಮಕ್ಕೆ ಬಂದದ ಇವೆಲ್ಲ. ಎಷ್ಟಾದರೂ ರೊಕ್ಕ ಕೊಡ್ತೀನಿ ಈ ಹಾಳು ದೆವ್ವ ಆತ್ಮ ಇಂದ ಮುಕ್ತಿ ಕೊಡಿಸಿ ಹೊಳ್ಳಿ ಹೋಗೊಹಂಗೆ ಮಾಡ್ರಿ. ಇವನ ಹಿಂದೆ ಅದು ಬರಲಾರ್ದಂಗ್ ಮಾಡ್ರಿ. ನಾವು ಇವತ್ತು ಎಷ್ಟ್ ಹೊತ್ತಾದರೂ ಊರಿಗಿ ಹೋಗ್ತೀವಿ ಅಂತ ಅಳುತ್ತಾ ಹೇಳಿದಳು.

ಇದೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಅಂಜನಪ್ಪ 

ಅವ್ವ ರಾಧಾಮ್ಮ ನೀಯೇನು ಹೆದರ್ಬ್ಯಾಡ. ನಾವೆಲ್ಲ ಅದಿವಿ. ನಿಂಗಪ್ಪ ಬಂದನಲ್ಲ ಚಿಂತಿ ಇಲ್ಲ. ಇದಕ್ಕ ಒಂದು ಪರಿಹಾರ ಮಾಡಿ ಕೊಟ್ಟೆ ಕೊಡ್ತಾನಾ ಅಂತಿದ್ದ. ಹಾಗೆ ಸುಬ್ಬು ಮುಕಮ್ಮ ಮೂಕಮ್ಮ ಅಂತ ತಡವರಿಸಿದ, ಮುಕಮ್ಮಾ ಪದ ಕೇಳಿದ ಎಲ್ಲರಿಗೂ ಹೌಹಾರಿ ಹೋಯ್ತು. ತಲೆ ಕೆರೆದುಕೊಂಡು ತನ್ನ ಕೈಚಿಲದ ಒಳಗ ಏನೇನೋ ತಡಕಾಡಿದ ನಿಂಗಪ್ಪ ಹಕ್ಕ ಇವನ ಅದ ಮರ್ತು ಬಂದೆ ಬಿಕನಾಸಿ ಮುಂಡೇದು ಹಿಂಗೆ ಮಾಡ್ತದ ಅಂತ ಗೊತ್ತಿದ್ದರೂ ನಾ ಎಚ್ಚರ ಆಗ್ಲಿಲ್ಲ ಅಂತ ರಾಧಮ್ಮ ನ ಕಡೆ ನೋಡಿದ.

ನಿಂಗಪ್ಪ ಆಡಿದ ಮಾತು ಕೇಳಿ ಏನೋ ಅಗಲಾರ್ದದ್ದು ಆಗಿ ಹೋಗಿದೆ ಅಂತ ಹೆದರಿ ಎಲ್ಲರೂ ಇವನನ್ನೇ ತದೇಕ ಚಿತ್ತದಿಂದ ಹೆದರಿಕೆಯಿಂದ ನೋಡುತ್ತಿದ್ದರು.

ಮೆಲ್ಲನೆ ನಿಂಗಪ್ಪ ಹೇಳಿದ “ಚಿಂತಿ ಬ್ಯಾಡ ತಾಯಿ ನಾ ಅಂಜನ ತರೋದು ಮರೆತು ಬಿಟ್ಟೆ, ಶುದ್ಧ ಮಡಿಯಲ್ಲೆ ಅದು ತರಬೇಕು. ಇಲ್ಲ ಇದು ಎತ್ತ ಅಂತ ಗೊತ್ತಾಗುವುದಿಲ್ಲ, ಇವತ್ತ ನೀವು ಹೋಗೋದು ಬ್ಯಾಡ ಹೋದರು ಆತ್ಮ ಜಾಡು ಹಿಡಿದು ನಿಮ್ಮ ಹಿಂದೆಯೇ ಬರೋ ವಾಸನಿ ಅದ, ಇವತ್ತು ಹೆಂಗರ್ ಮಾಡಿ ಇವನನ್ನು ರಾತ್ರಿ ಒಬ್ಬಂಟಿ ಬಿಡದಂಗ ನೋಡ್ಕೊರಿ, ನಮ್ಮ ಹನುಮಪ್ಪ ಆಧಾರ್ ತಂದೀನಿ ಅದು ಎಲ್ರೂ ಹಚ್ಚಕೊಂಡು, ರಾತ್ರಿ ಹಾಲಿನಾಗಾ ಇದು ಬೆರಿಸಿ ಸಬ್ಬುವಿಗೆ ಕುಡಿಸಿರಿ, ಮುಂಜಾನೆ ಎದ್ದು ನಾ ಎಲ್ಲ ವ್ಯವಸ್ತ ಮಾಡಿಕೊಂಡು ಬರ್ತೀನಿ” ಅಂತ ಎದ್ದು ಕೈ ಮುಗೀತಾ

ಅಪ್ಪ ಧಣಿ ನಂಗ ಅಪ್ಪಣಿ ಆಗ್ಲಿ ಅಂಜೋದು ಏನಿಲ್ಲ ಹನುಮಪ್ಪನ ಆಧಾರ ಮನೆ ಸುತ್ತು ಗ್ವಾಡಿಗಿ ಅನಿಸಿ ಹಾಕಿ ಎಲ್ಲರಿಗೂ ಹಚ್ಚಿ ಮಕ್ಕೋರಿ, ಯವ್ವಾ ತಾಯಿ ನಿನ್ನ ಮಗನಿಗೆ ಆನಿಸಿ ಮಲ್ಗು ಅವನು ಉಸುರಿಸೋ ನುಡಿಗಳು ಹೆದರಲಾರದಂಗ ಕೇಳಿ ಮುಂಜಲಿ ನನಗೆ ಹೇಳವ್ವ ಅಂತ ಕೈ ಮುಗಿದು ಮನೆ ಹಾದಿ ಹಿಡಿದ ಮಧ್ಯಾನ ಆಡಿಗಿ ಉಂಡು ಹೋಗೋ ಅನ್ನೋದು ಕೇಳದೇ ಹೊರಟುಹೋದ.

ಮುಸು ಮುಸು ಸಂಜೆ ಲವಲವಿಕೆಯಿಂದ ಮಗ ಆಟ ಆಡೋದು ನೋಡಿ ರಾಧಾ, ಸುಬ್ಬು ಇವತ್ತು ನನ್ನ ಬಿಟ್ಟು ಎಲ್ಲೂ ಹೋಗ ಬ್ಯಾಡ ಹೋಗೋದು ಇದ್ದರ ನಾನು ನಿನ್ನ ಜೊತಗೆ ಬರ್ತೀನಿ ಅಂದ್ಲು.

ಇದು ಕೇಳಿದ ಮಗ ನಕ್ಕು ಯಾಕಮ್ಮ ಅಂತ ಕೇಳುತ್ತಾ ಮೊಬೈಲ್ ಟವರ್ ಕಡೆ ನೋಡಿ ನಕ್ಕು ಕೈ ಸನ್ನೆ ಮಾಡಿದ…

ಮೊಬೈಲ್ ಟವರ್ ಕಡೆ ನೋಡಿದ ಸಬ್ಬುವಿನ ದೃಷ್ಟಿ ನೋಡಿ ಹೆದರಿದ ರಾಧಾ, ಅವನ ಕಿವಿ ಹಿಂಡಿ ಕೇಳಿದಳು ಅಲ್ಲಿ ಯಾಕೊ ನೋಡಕತಿ? ಅಮ್ಮ ಅವಂ ಬಂದಾನ ಅಲ್ಲಿ ಕರಿಲಿಕತನ ಬಾರೋ ಅಂತ ಅಂದ ಸುಬ್ಬುವಿನ ಮಾತು ಕೇಳಿ ಎದೆ ಝಲ್ ಎಂದು ರಾಧಾ ಅವನನ್ನು ಮನೆಯೊಳಗೆ ಕರೆದು ಕೊಂಡು ಹೋದಳು, ನೀ ಏನಾದ್ರೂ ಹೊರಗ ಕಾಲ್ ಇಟ್ಟಿ ಸಾಯಿಸೆ ಬಿಡ್ತೀನಿ ನಿನ್ನ, ಸುಮ್ಮಕ್ಕ ಇಲ್ಲಿ ಬಿದ್ದಿದ್ರ ಚೊಲೋ ನಿಂಗಪ್ಪ ಬರೋತನ ಅಂತ ಗೊಣಗಿದಳು….

ರಾತ್ರಿಯ ಊಟ ಆಗಿ ತನ್ನ ತೋಳ ತೆಕ್ಕೆಯಲ್ಲಿ ಅವನ್ನು ಮಲಗಿಸಿ ಯೋಚನೆ ಮಾಡುತ್ತಾ ಹಾಗೆ ಮಲಗಿ ಬಿಟ್ಟಳು…….

ಬೆಳಗ್ಗೆ ದಿಗ್ಗನೆ ಎದ್ದು ನೋಡಿದಾಗ ಮಗ ಇನ್ನು ಮಲಗಿದ್ದ ಅವನ ಮುಖದಲ್ಲಿ ಏನೋ ಹೊಳಪು ಮಿಂಚು ನಿರ್ಲಿಪ್ತ ಭಾವ ನೋಡಿ ಖುಷಿ ಇಂದ ಬೆಳಗ್ಗಿನ ಎಲ್ಲ ಕೆಲ್ಸ ಮುಗಿಸಿಕೊಂಡು ಅವನನ್ನು ಎಬ್ಬಿಸಿ ಮನೆಯವ್ರು ಕೊಟ್ಟ ತಿಂಡಿ ತಿಂದು ನಿಂಗಪ್ಪ ದಾರಿ ಕಾಯುತ್ತಾ ಕುಳಿತಳು, ಆಂಜನಪ್ಪ ಇವಳಿಗೆ ಸಮಾಧಾನ ಮಾಡುತ್ತಾ ಏನು ಆಗಲ್ಲ ತಾಯಿ ಅಂಜಬ್ಯಾಡ್ ಇನ್ನೇನು ನಿಂಗಪ್ಪ ಬರ್ತಾನ ಅನ್ನೋವ್ ಅಷ್ಟರಲ್ಲಿ

ಧಣಿ ಎಲ್ಲಿದ್ಯಪ್ಪ ತಂದೆ ಅಂತ ಒಳ ಬಂದ ನಿಂಗಪ್ಪ ಅಂಜಪನ್ನಿಗೆ, ರಾಧಾ ಗೆ ಕೈ ಮುಗಿದು ಕುಳಿತು

ತುಪ್ಪ ದೀಪ, ಊದಿನ ಕಡ್ಡಿ ಕೇಳಿ ನಡು ಪಡಶಾಲಿಯಲ್ಲಿ ಚಕ್ಕಳ ಮುಕ್ಕಲ ಹಾಕಿ ಕುಳಿತು, ತನ್ನ ಚೀಲದ ನಡುವೆ ಇಟ್ಟು ಡೀಪ್ ಹಚ್ಚಿ ಊದಿನ ಕಡ್ಡಿ ಬೆಳಗಿ ಕೈ ಮುಗಿದು ಒಳಗಿದ್ದ ಚಿಕ್ಕ ಡಬ್ಬಿ ತೆಗೆದು ಅದರಲ್ಲಿ ಇರುವ ಅಂಜನ(ಕಪ್ಪು ಕಾಡಿಗೆ) ತೆಗೆದು ವೀಳೆದೆಲೆಯ ಮಧ್ಯ ಹೆಚ್ಚಿ ಏನೋ ಮಂತ್ರ ಹೇಳಿ ನೋಡಿದ……

ಅಂಜನದಲ್ಲಿ ನೋಡುತ್ತಾ ಸಬ್ಬುವಿನ ಕಡೆ ತಿರುಗಿ ಕೇಳಿದ. ಮೊನ್ನೆ ನಿನ್ನ ಕರೆದಿದ್ದು ಸಿದ್ದು ಅನ್ನೋ ಹುಡುಗ ಅಲ್ಲ ಅಂದಾಗ ಸುಬ್ಬು ಹೌದು ರಿ ಮುತ್ತ್ಯ ಅಂದ.

ಅವನ ಮಾತು ಕೇಳಿದ ಅವಳ ಅಮ್ಮನಿಗೆ ದಿಗಿಲು.

ನಿನ್ನ ಕರ್ಕೊಂಡು ಹಾಳು ಬಾವಿ ಕಡೆ ಹೋಗಿ ತಂಗಿ ಮುಕಮ್ಮ ಅಂತ ಪರಿಚಯ ಮಾಡಿಕೊಟ್ಟು ತನ್ನ ಹಳೆ ಪುರಾಣ ಹೇಳಿದ ಅಲ್ಲ ಅಂದ. ಅದಕ್ಕೂ ಸುಬ್ಬು ಹೌದು ಅವರಿಬ್ಬರೂ ಬಾವಿಗೆ ಬಿದ್ದು ಸತ್ತರಂತೆ ಅದಕ್ಕೆ ತಮ್ಮ ಕಷ್ಟ ಯಾರಿಗಾದ್ರೂ ಹೇಳಬೇಕು ಅಂತಿದ್ದರು. ನಾನು ಸಿಕ್ಕಿದೆ ಅಂತ ನಂಗೆ ಹೇಳಿದರು ಪಾಪ. ಅವರ ಅಪ್ಪ ತುಂಬಾ ಕುಡುಕ ತಾಯಿ ಸತ್ತ ಮೇಲೆ ಅವ್ನ ಕಾಟ ಜಾಸ್ತಿ ಆಯಿತು ಅಂತೆ. ದಿನ ಬಂದು ಹೊಡೆದು ಹೊಡೆದು ದುಡಿಯೋಕೆ ಹೋಗ್ರಿ ಅಂತಿದ್ನಂತೆ. ರಾತ್ರೋ ರಾತ್ರಿ ಯಾವುದೋ ಹೆಂಗಸಿನ ಜೊತೆ ಬಂದು ಇವಳು ನಿಮ್ಮಿಬ್ರ ಅಮ್ಮ ಅಂದು ಬಿಟ್ಟು ಹೋದನಂತೆ. ದಿನ ಹೊಸ ಅಮ್ಮ ಇವ್ರಿಗಿ ಹೊಡೆಯೋದು ಬದಿಯೋಡು ಸತ್ತರ ಸಾಯಬಾರದ ಹಾಳಾದವರು ಅಂತ ಹೊಡೆಯುತ್ತ ಅಪ್ಪ ಬಂದ ಮೇಲೆ ಇವರ ಬಗ್ಗೆ ಚಾಡಿ ಹೇಳುತ್ತಿದಳಂತೆ. ಬೇಸರ ಬಂದು ಒಂದು ದಿನ ಇವನೇ ತಂಗಿಯನ್ನು ಬಾವೀಗೆ ನೂಕಿ ಇರು ನಾನು ಬರುತ್ತೇನೆ ಅಂತ ಇವನು ಬಾವಿಗೆ ಹಾರಿದನಂತೆ ಅಂದ. 

ಪಾಪ ಇಬ್ಬರು ಸತ್ತರು ಅವರು ತಮ್ಮ ಕಥೆ ಹೇಳಬೇಕಾದರೆ ಎಷ್ಟು ಸರ್ತಿ ಅತ್ತ. ಈಗ ಅವನು ನನ್ನ ಆತ್ಮೀಯ ಗೆಳೆಯ ನಿನ್ನೆ ಎಲ್ಲಿಗೋ ತಂಗಿ ಕರ್ಕೊಂಡು ಹೋಗು ಮುಂದ ಅವಾಗವಾಗ ನೆನಪು ಮಾಡ್ಕೋತಾ ಇರು ಅಂತ ಹೇಳಿ ಹೋದ.

ಅಂತ ನಿಧಾನಕ್ಕೆ ನಡೆದ ಕಥೆ ಎಲ್ಲ ಬಾಯಿ ಬಿಟ್ಟ ಸುಬ್ಬು ವಿನ ಮುಖ ಅಂಜಪ್ಪ, ರಾಧಾ ನಿಂಗಪ್ಪ ನೋಡುತ್ತಾ ಕುಳಿತರು.

ಜಯಂತ್ ದೇಸಾಯಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x