ಕಥಾಲೋಕ

ಅಸ್ತಿತ್ವ : ಪ್ರಸಾದ್.ಡಿ.ವಿ.

ಅದೊಂದು ದೊಡ್ಡ ಬಂಗಲೆ, ಸುಮಾರು ಹತ್ತಿಪ್ಪತ್ತು ವರ್ಷಗಳಿಂದ ಯಾರೂ ವಾಸವಿದ್ದಂತೆ ಕಾಣುವುದಿಲ್ಲ! ಅಲ್ಲಲ್ಲಿ ಗಿಡ ಗಂಟಿಗಳು ಬೆಳೆದು, ಆ ಬಂಗಲೆಗೆ ಭೂತ ಬಂಗಲೆಯಂತಹ ಮೆರುಗು ಕೊಟ್ಟಿದ್ದವು! ಆಗೊಮ್ಮೆ, ಈಗೊಮ್ಮೆ ನರಿಯಂತೆ ಕೂಗುವ ಕಿವಿ ಗಡಚಿಕ್ಕುವ ಸದ್ದುಗಳು, ಭಯವನ್ನು ಉತ್ಪಾದಿಸಿ, ತನುವೊಳಗಿನ ಜೀವ ಹಿಡಿಯಷ್ಟಾಗುವಂತೆ ಮಾಡುತ್ತಿದ್ದವು. ಆ ಬಂಗಲೆ ಊರಿನಿಂದ ಸಾಕಷ್ಟು ದೂರದಲ್ಲಿದ್ದುದ್ದರಿಂದ ಹಾಗೆ ಪಾಳು ಬಿದ್ದಿತ್ತೋ, ಇಲ್ಲ ಆ ಮನೆಯ ವಾರಸುದಾರರೆಲ್ಲಾ ಒಟ್ಟಾಗಿ ಯಮನ ಅತಿಥಿಗಳಾಗಿದ್ದರೋ, ಅಥವಾ ಆ ಬಂಗಲೆಯ ವಾಸ್ತು ಸರಿಯಿಲ್ಲದೆ ಅವಘಡಗಳು ಸಂಭವಿಸಿ ಭೂತ ಪ್ರೇತಗಳಾವೋ ಬಂದು ಸೇರಿಕೊಂಡಿದ್ದ ಕಾರಣವೂ ಇರಬಹುದು! ಒಟ್ಟಿನಲ್ಲಿ ಒಂದು ನರ ಪ್ರಾಣಿಯ ಸುಳಿವೂ ಆ ಬಂಗಲೆಯ ಸುತ್ತ ಇದ್ದಂತಿರಲಿಲ್ಲ. ನಾನು ಮಾತ್ರ ನಿರ್ಲಿಪ್ತನಾಗಿ, ಧೈರ್ಯವಹಿಸಿ ಆ ಸರಿ ರಾತ್ರಿಯ ಕಗ್ಗತ್ತಲ ನಡುವಲ್ಲಿ ದೀಪವಿಲ್ಲದೆಯೂ ನಿರಾತಂಕವಾಗಿ ಉಸಿರಾಡುತ್ತಾ ನಿಂತಿದ್ದೆ. ನನ್ನುಸಿರ ಉಚ್ಛ್ವಾಸ – ನಿಚ್ಛ್ವಾಸಗಳ ಏರಿಳಿತಗಳು ಅಕ್ಕ ಪಕ್ಕದಲ್ಲಿರುವವರಿಗೂ ಕೇಳಿಸಬಹುದಿತ್ತು, ಆದರೆ ಅಲ್ಲಿ ನನ್ನನ್ನು ಬಿಟ್ಟು ಮತ್ತಾರೂ ಇರಲಿಲ್ಲ!

ನಿಧಾನವಾಗಿ ನನ್ನ ಭಾವಾಂತರಂಗದಲ್ಲಿನ ಭಯಗಳನ್ನು ನಿಗ್ರಹಿಸುತ್ತಾ, ಆಚೀಚೆ ಯಾರಾದರೂ ಇರಬಹುದೇ? ಈ ಸ್ಥಳ ಇರುವುದಾದರೂ ಎಲ್ಲಿ ಎಂಬ ಅರಿವನ್ನು ತಂದುಕೊಳ್ಳುವ ಪ್ರಯತ್ನ ಮಾಡಬೇಕು ಎಂದುಕೊಳ್ಳುತ್ತಿದ್ದೆ! ಅಸಲಿಗೆ ನಾನು ಅಲ್ಲಿಗೆ ಹೇಗೆ ಬಂದೆ ಎಂಬ ನೆನಪೂ ಇದ್ದಂತೆ ತೋರುತ್ತಿರಲಿಲ್ಲ! ತಲೆ ಧಿಂ ಎಂದು ಹಿಡಿದುಕೊಂಡಿದೆ ಎನಿಸುತ್ತಿತ್ತು. ತಲೆ ಒತ್ತಿ ನೋಡಿಕೊಂಡೆ, ತಲೆಯ ಹಿಂಬದಿಗೆ ಯಾರಾದರೂ ಹೊಡೆದಿರಬಹುದು ಎನಿಸುತ್ತಿತ್ತು. ತಲೆಯ ಹಿಂಬಾಗ ಊದಿಕೊಂಡಂತೆನಿಸುತ್ತಿತ್ತು, ಮುಟ್ಟಿದ ಕೈಗಳಿಗೆ. ಸರಿ ಇನ್ನು ಎಷ್ಟು ಹೊತ್ತು ಈ ಅಜ್ಞಾತ ಸ್ಥಳದಲ್ಲಿ ಅಜ್ಞಾತವಾಸ ಅನುಭವಿಸುವುದು, ಇಲ್ಲಿಂದ ಹೇಗಾದರೂ ಹೊರಗೆ ಹೋಗುವ ದಾರಿ ಹುಡುಕಬೇಕು ಎಂದು ಒಳ ಮನಸ್ಸು ಹೇಳುತ್ತಿತ್ತು. ನಾನು ನಿಧಾನವಾಗಿ ನನ್ನ ಕಾಲುಗಳನ್ನೆಳೆದುಕೊಂಡು ಯಾವುದೋ ಒಂದು ದಿಕ್ಕಿನಲ್ಲಿ ಸರಿಯಲು ಪ್ರಾರಂಭಿಸಿದೆ, ಆ ಉಗ್ರ ನರಸಿಂಹನನ್ನು ನೆನೆಯುತ್ತಾ!

ಈಗ ನಾನು ಸಾಗುತ್ತಿರುವುದು ನನ್ನ ಜೀವನದ ಅತೀ ದುರ್ಗಮದ ಹಾದಿಯಿರಬಹುದು ಎನಿಸಿತು! ಆ ಕಡೆ, ಈ ಕಡೆ ನೋಡುತ್ತಾ, ನಿಧಾನವಾಗಿ ಒಂದೊಂದೇ ಹೆಜ್ಜೆಯಿಡುತ್ತಾ ಬೆಳಕನ್ನು ಹುಡುಕುತ್ತಿದ್ದೆ. ಬಂಗಲೆ ಸುಮಾರು ಏಳೆಂಟು ಅಂತಸ್ತಿನದಾಗಿದ್ದು, ನಾನು ಈಗಿರುವುದು ಕಡೆಯ ಅಂತಸ್ತು ಎನಿಸುತ್ತಿತ್ತು. ಸಾವಕಾಶವಾಗಿ ಮೆಟ್ಟಿಲಿಳಿಯುವ ಹಾದಿಯನ್ನು ಹುಡುಕುತ್ತಿದ್ದೆ. ಪ್ರತಿಯೊಂದು ಅಂತಸ್ತೂ ವೃತ್ತಾಕಾರವಾಗಿದ್ದು, ಒಂದು ದಿಕ್ಕಿನಲ್ಲಿ ಪ್ರಾರಂಭಿಸಿದರೆ ಒಂದು ಆವೃತ್ತದ ನಂತರ ಮತ್ತೆ ಪ್ರಾರಂಭಕ್ಕೇ ತಂದು ನಿಲ್ಲಿಸುತ್ತಿತ್ತು. ಮಧ್ಯದಲ್ಲಿ ಕೆಳ ಅಂತಸ್ತನ್ನೂ, ಮೇಲಂತಸ್ತನ್ನೂ ನೋಡಬಹುದಾದ ವೃತ್ತಾಕಾರದ ಪ್ಯಾಸೇಜ್ ಇತ್ತು. ಕೆಳಗೆ ಇಳಿಯುವ ಮೆಟ್ಟಿಲುಗಳ ಕುರುಹೇ ಸಿಗುತ್ತಿರಲಿಲ್ಲ. ಹೇಗೋ ಮೂರು ಸುತ್ತು ಸುತ್ತಿದ ನಂತರ ಆರನೇ ಅಂತಸ್ತಿಗೆ ಇಳಿಯುವ ಮೆಟ್ಟಿಲು ಸಿಕ್ಕಿತು. ಆರನೇ ಅಂತಸ್ತು ತಲುಪಿದ ನಾನು ಉಸಿರು ಬಿಡುತ್ತಾ ಹೇಗಾದರೂ ಇಲ್ಲಿಂದ ಬಚಾವಾಗಬಹುದೇನೋ ಎಂದು ಆಶಾಕಿರಣ ಹಚ್ಚಿಟ್ಟೆ, ನನ್ನ ಮನದೊಳಗೆ! ಹಾಗೆ ನನ್ನದೇ ಯೋಚನೆಗಳಲ್ಲಿ ಮೈಮರೆತಿದ್ದ ನನ್ನ ಪಕ್ಕದಲ್ಲಿ ಎಲ್ಲಿಂದಲೋ ತೂರಿಕೊಂಡು ಬಂದು ದೊತ್ತೆಂದು ಅದೇನೋ ಬಿದ್ದ ಸಪ್ಪಳವಾಯ್ತು. ನನ್ನ ಎದೆ ಬಡಿತ ಜೋರಾಯ್ತು! ಹಾಗೆ ದೊತ್ತೆಂದು ಬಿದ್ದ ವಸ್ತು ನಿಧಾನಕ್ಕೆ ಚಲಿಸುವ ಶಬ್ದ ಮಾಡಿತು. ನಾನು ಒಮ್ಮೆಲೇ ಬೆಚ್ಚಿಬಿದ್ದೆ! ನಿಧಾನಕ್ಕೆ ಬಾಲ ಗುಡಿಸಿದಂತಾಗಿ, ತನ್ನ ಹೊಳೆಯುವ ಕಣ್ಣುಗಳನ್ನೊಮ್ಮೆ ಜಳಪಿಸಿದ ಆ ಪ್ರಾಣಿ, ‘ಮೀಯಾಂ…’ ಎಂದೊಡನೆ ನನಗೆ ಚಳಿ ಜ್ವರ ಬಂದು ಬಿಟ್ಟಂತಾಯ್ತು! “ಥೂ ಹಾಳಾದ್ದು ಬೆಕ್ಕು” ಎಂದು ನನ್ನನ್ನು ನಾನೇ ಸಂತೈಸಿಕೊಂಡೆ.

ಹಾಗೆ ನಡೆಯುತ್ತಾ ನನ್ನ ಕೆಳ ಅಂತಸ್ತಿಗೆ ತಲುಪುವ ಮೆಟ್ಟಿಲುಗಳ ಹುಡುಕಾಟವನ್ನು ಮುಂದುವರೆಸಿದೆ. ಆರನೆಯ ಅಂತಸ್ತಿನಲ್ಲಿ ಕೆಲವು ರೂಮುಗಳಿರುವಂತೆ ಕಂಡುಬಂತು. ನಾನು ಆ ಅಂತಸ್ತನ್ನೂ ಒಂದು ಆವೃತ್ತ ಬಂದ ನಂತರ, ರೂಮುಗಳಲ್ಲಿ ಹೇಗಾದರೂ ಕೆಳಗಿಳಿಯಬಹುದೇನೋ ಎಂದು ಪ್ರತಿಯೊಂದು ರೂಮುಗಳ ಸಂದರ್ಶನವನ್ನು ಶುರು ಮಾಡಿದೆ. ಎರಡನೇ ರೂಮಿನಲ್ಲಿ ಐದನೇ ಅಂತಸ್ತಿಗಿಳಿಯುವ ದಾರಿ ಸಿಕ್ಕಿತು. ಐದನೇ ಅಂತಸ್ತಿಗೆ ಬರುತ್ತಿದ್ದಂತೆ ಅದು ಒಂದು ದೊಡ್ಡ ಹಾಲ್ ನಂತೆ ಕಾಣಿಸಿತು. ಅದನ್ನು ಮನೆಯ ವಾರಸುದಾರರು ಸಮಾರಂಭಗಳನ್ನು ಆಯೋಜಿಸಲು, ಇಲ್ಲವೇ ಪಾರ್ಟಿಗಳನ್ನು ಹಮ್ಮಿಕೊಳ್ಳಲು ಬಳಸುತ್ತಿದ್ದಿರಬಹುದು ಎನಿಸಿತು. ಅಲ್ಲಲ್ಲಿ ದುಂಡನೆಯ ಮೇಜುಗಳು ಮತ್ತು ವೈಭವೋಪೇತ ಕುರ್ಚಿಗಳು ಕಾಣುತ್ತಿದ್ದವು. ಹಾಗೆ ಆ ಅಂತಸ್ತನ್ನು ಪರಿಶೀಲಿಸುತ್ತಿದ್ದಂತೆ ಕೆಲವರ ಓಡಾಟ ಮತ್ತು ಪಿಸುಗುಟ್ಟುವಂತಹ ಮಾತುಗಳು ಕೇಳಿಸಲು ಶುರುವಾದವು. ನನಗೆ ಇನ್ನಿಲ್ಲದ ಭಯ ಶುರುವಾಯ್ತು. ಇದೇನು ಯಾರು ಇಲ್ಲವೆಂದುಕೊಂಡಿದ್ದ ಬಂಗಲೆಯಲ್ಲಿ ಈ ಪಿಸುಮಾತುಗಳು ಎಲ್ಲಿಂದ ಬರುತ್ತಿವೆಯಪ್ಪಾ ಎಂದು ಭಯವಾಗಿ ‘ಹನುಮಂತ ಚಾಳೀಸ’ವನ್ನು ಹೇಳಿಕೊಳ್ಳಲು ಶುರುಮಾಡಿದೆ, ಭಯಕ್ಕೆ ನಾಲಿಗೆ ತೊದಲುತ್ತಿತ್ತು! ಆದದ್ದು ಆಗಲಿ ಎಂದು ಪಿಸುಮಾತುಗಳ ಶಬ್ದ ಬರುತ್ತಿದ್ದೆಡೆಗೆ ಹೆಜ್ಜೆ ಹಾಕಿದೆ. ಅದ್ಯಾವುದೋ ರೂಮಿನಲ್ಲಿ ನಾಲಿಗೆ ಚಪ್ಪರಿಸುತ್ತಿರುವ ಶಬ್ಧವಾಗುತ್ತಿತ್ತು! ನಾನು ಆ ಕಡೆಗೆ ನಡೆಯುತ್ತಿದ್ದಂತೆ, ಆಯ ತಪ್ಪಿ ಮೆಟ್ಟಿಲುಗಳ ಮೇಲುರುಳಿ ನಾಲ್ಕನೇ ಅಂತಸ್ತಿಗೆ ಬಿದ್ದಿದ್ದೆ!

ಎದುರಿಗೆ ಯಾರೋ ನನ್ನ ವಿರುದ್ಧ ದಿಕ್ಕಿಗೆ ಮುಖ ಮಾಡಿಕೊಂಡು ಅದೇನನ್ನೋ ತಿನ್ನುತ್ತಿರುವಂತೆನಿಸುತ್ತಿತ್ತು. ನಾನು ನಿಧಾನವಾಗಿ ಹೆಜ್ಜೆಯ ಮೇಲೆ ಹೆಜ್ಜೆಯನಿಡುತ್ತಾ ಆ ಆಕೃತಿಯನ್ನು ಸಮೀಪಿಸಿದೆ. ಆ ಆಕೃತಿ ಯಾವುದೋ ರುಂಡವಿಲ್ಲದ ದೇಹದಿಂದ ಬಾಯಿ ಹಾಕಿ ರಕ್ತ ಕುಡಿಯುತ್ತಿತ್ತು. ನಾನು ಅದನ್ನು ನೋಡಿ ಬೆಚ್ಚಿ ಬಿದ್ದು, ಅಯ್ಯೋ ಎಂದು ಕೂಗಲು ಪ್ರಯತ್ನಿಸಿದೆ, ಮಾತುಗಳು ಮಾತ್ರ ಹೊರಬರಲಿಲ್ಲ! ಕಡೆಗೆ ಧೈರ್ಯ ಮಾಡಿ ಆ ಕುರೂಪ ಆಕೃತಿಯನ್ನುದ್ದೇಶಿಸಿ, “ಹೇ, ಯಾರು ನೀನು? ನಿನಗೆ ತಿನ್ನಲು ಮನುಷ್ಯ ಮಾಂಸವೇ ಬೇಕೇ? ಹಾಳಾದ ಪ್ರಾರಬ್ಧ ಕರ್ಮ ನೀನು! ಎದ್ದೇಳು ಯಾರು ನೀನು?” ಎಂದು ಗದರಿಸಿದೆ. ಅದು ಮಾತ್ರ ತನ್ನ ಪಾಡಿಗದು ಆ ಮನುಷ್ಯನ ರಕ್ತವನ್ನು ಸಂಪೂರ್ಣ ಹೀರಿ, ಮಾಂಸವನ್ನು ತಿನ್ನಲು ಶುರು ಮಾಡಿತ್ತು. ನನಗೆ ಆ ಅಮಾನವೀಯ ದೃಶ್ಯವನ್ನು ನೋಡಿ, ಅಸಹ್ಯದೊಂದಿಗೆ ರೋಷವೂ ಉಕ್ಕಿ ಬಂತು! ನಾನು ನನ್ನ ಕಾಲನ್ನು ಜಾಡಿಸಿ ಆ ಆಕೃತಿಗೆ ಒದ್ದೆ.

ಅದು ಒಂದಿಂಚೂ ಕದಲಲಿಲ್ಲ! ತನ್ನ ಪಾಡಿಗದು ಎದೆಯನ್ನು ಬಗೆದು ಹೃದಯವನ್ನು ಹೊರಗೆಳೆದು, ತಿನ್ನಲು ಶುರು ಮಾಡಿತು. ನಾನು ಅದರ ನಿರ್ಲಕ್ಷತನದಿಂದ ಮತ್ತಷ್ಟು ಕುಪಿತಗೊಂಡೆ. ಅದರ ಪಕ್ಕದಲ್ಲೇ ಇದ್ದು ಕೊಡಲಿಯನ್ನೆತ್ತಿಕೊಂಡು ಆ ಆಕೃತಿಯ ತಲೆಗೆ ಬಲವಾಗಿ ಹೊಡೆದೆ! ಅದು ಯಾವ  ಚಲನೆಯನ್ನೂ ತೋರಲಿಲ್ಲ! ನಾನು ಕೋಪದಿಂದ ಆ ಆಕೃತಿಯೆಡೆಗೆ ಮುನ್ನುಗ್ಗಿ ಹೋದೆ, ಅದು ನನ್ನ ಕಡೆ ತಿರುಗಿ ತನ್ನ ಬಾಯಿಗೆ ಮೆತ್ತಿಕೊಂಡಿದ್ದ ರಕ್ತವನ್ನು ಒರೆಸಿಕೊಂಡಿತು! ಎದುರಿಗೆ ಕಂಡ ದೃಶ್ಯ ಕಂಡು ಹೌಹಾರಿಬಿಟ್ಟಿದ್ದೆ, ಆ ವಿಕಾರ ಆಕೃತಿ ನಾನೇ ಆಗಿದ್ದೆ! ಅದು ನಾನಲ್ಲ ಎಂದು ಕೂಗಿಕೊಳ್ಳಲೆಂಬಂತೆ ಈ ಕಡೆ ತಿರುಗಿದೆ, ದೇಹದಿಂದ ಬೇರ್ಪಡಿಸಿದ ನನ್ನ ರುಂಡ ಅಲ್ಲಿ ಬಿದ್ದು ಒದ್ದಾಡುತ್ತಿತ್ತು! ನನ್ನನ್ನೇ ನಾನೇ ಬಗೆದು ತಿಂದುಕೊಳ್ಳುತ್ತಿದ್ದೆ ಆ ಏಳಂತಸ್ತಿನ ಬಂಗಲೆಯೊಳಗೆ! ನನ್ನ ಹುಚ್ಚು ಆಸೆಗಳೇ ಭೂತವಾಗಿ, ನನ್ನೊಳಗಿನ ಒಳ್ಳೆಯತನಗಳನ್ನು ಇಂಚಿಂಚನ್ನೂ ತಿನ್ನುತ್ತಿದ್ದೆ! ಹೊರಗಿನ ಜಗತ್ತಿಗೆ ಪ್ರೇತವಾಗಿದ್ದೆ!

– ಪ್ರಸಾದ್.ಡಿ.ವಿ., ಮೈಸೂರು.

ಕನ್ನಡದ ಬರಹಗಳನ್ನು ಹಂಚಿ ಹರಡಿ

12 thoughts on “ಅಸ್ತಿತ್ವ : ಪ್ರಸಾದ್.ಡಿ.ವಿ.

 1.  
  ಯಾರು ರಾಕ್ಷಸ ಅಂದ್ರೆ ನಾವೇ,…..ನಾವೇ ಮಹಿಷ , ಮಹಿಷಿ, ಬಕಾಸುರ,ಯಾರ್ಯಾರೋ ರಾಕ್ಷಸರಿದ್ದಾರಲ್ಲ ಅವರೆಲ್ಲ ನಾವೇ.ಮೊದಮೊದಲು ಇದೇನಪ್ಪ ಪತ್ತೇದಾರಿ ಅಂದುಕೊಂಡೆ.ಆದ್ರೆ ಕಥೆ ಯ ಮುಕ್ತಾಯ ಚೆನ್ನಾಗಿದೆ.ಅಸಂಗತ ದ ಲಕ್ಷಣಳು ಹರಡಿಕೊಂಡಿದೆ ಕಥೆ.ಕ್ಲೈಮ್ಯಾಕ್ಸ್ ಬೇಗ ಮುಗಿದು ಹೋಯಿತು ಅನ್ನಿಸಿತು.ಅಭಿನಂದನೆಗಳು ಪ್ರಸಾದ್…
  ಬೇಲೂರು ರಘುನಂದನ್ 

 2. ಕತೆ ಕುತೂಹಕಕರವಾಗಿದೆ.
  ಕಡೆಯ ಎರಡು ಸಾಲು ಇಲ್ಲದಿದ್ದಲ್ಲಿ ಎಲ್ಲರನ್ನು ಮತ್ತು ಚಿಂತೆಗೆ ಹಚ್ಚುತ್ತಿತ್ತು ಅನ್ನಿಸುತ್ತೆ.  
  ಆ ಎರಡು ಸಾಲುಗಳು ಹಿಡಿಕತೆಗೆ ವಿವರಣೆಯಂತಿದೆ.  
  ಅಂಗ್ಲದಲ್ಲಿ ಕಾಫ್ಕ ನ ಕತೆಗಳು ಓದಿನೋಡಿ, (ಮೆಟಾಮಾರ್ಫಿಸಂ ರೀತಿಯದು) , ವಿಲಕ್ಷಣ ನಿರೂಪಣೆಯ ಕತೆಗಳು ಆದರೆ ಏನನ್ನೊ ಹೇಳಲು ಪ್ರಯತ್ನಿಸುತ್ತವೆ.  ಕತೆಯನ್ನು  ಓದುಗರಿಗೆ ಬಿಟ್ಟುಬಿಡಿ. ಕತೆಗೆ ವಿವರಣ ಕೊಡಲು ಪ್ರಯತ್ನ ಪಡಬೇಡಿ . ಕ್ಷಮಿಸಿ ನಾನು ಕೊಟ್ಟ ಸಲಹೆ ಯಿಂದ ಬೇಸರವಾಗಿದ್ದಲ್ಲಿ
  ಸಮಯವದಾಗ ಈ ಒಂದು ಕತೆ ಓದಿ ನೋಡಿ ನಾನು ಹಿಂದೊಮ್ಮೆ ಬರೆದಿದ್ದೆ 
  http://narvangala.blogspot.in/2011/12/blog-post.html

 3. ಪ್ರಸಾದ್ ರವರೆ 
  ಮೆಟಾಮಾರ್ಫಿಸಸ್ ನ ಪೂರ್ಣ ರೂಪ ಸಿಗಲಿಲ್ಲ ಆದರೆ ವಿಕಿಪೀಡಿಯದಲ್ಲಿ ಅದರ ಪರಿಚಯರೂಪವಿದೆ. ಕನ್ನಡದಲ್ಲಿ ಈ ರೀತಿಯ ಕತೆಗಳು ಬಹಳ ಅಪರೂಪ. ನೀವು ಆ ಶೈಲಿಯಲ್ಲಿ  ಉತ್ತಮವಾಗಿ ನಿರೂಪಿಸಿದ್ದೀರಿ  ಇದನ್ನು ಓದಿ ಸಾದ್ಯವಾದಾಗ
  http://en.wikipedia.org/wiki/The_Metamorphosis

 4. ಕಥನ ಚನ್ನಾಗಿದೆ ಗೆಳೆಯ. ಇನ್ನೊಂದಿಷ್ಟು ಅನುಭವಿಸಿ ಬರಿದಿದ್ದರೆ ಓದುಗನನ್ನು ಗಾಬರಿ ಬೀಳಿಸಬಹುದಿತ್ತು

 5. ತುಂಬ ಹಿಡಿಸಿತು ಸಹೋದರ. ಅಷ್ಟೇ ಭಯ ಬೀಳಿಸಿತು ಕೂಡ.  🙂
  ರುಕ್ಮಿಣಿ ಎನ್.

 6. ರೂಪಕಗಳನ್ನು ಕಥೆಗೆ ದುಡಿಸಲು ಪ್ರಯತ್ನಪಟ್ಟಿದ್ದು ನಿಜ. ಆ ವಿಷಯದಲ್ಲಿ ಒಂದಷ್ಟು ಯಶ ಕಂಡರೂ ಕಥೆಯ ಅಂತ್ಯ ಇನ್ನಷ್ಟು ವಿಸ್ತೃತವೂ, ರೋಚಕವೂ ಆಗಬಹುದಿತ್ತು ನಿಮ್ಮೆಲ್ಲರ ಅಭಿಲಾಷೆಯಂತೆ. ಓದಿ, ಮೆಚ್ಚಿ, ಬೆನ್ನು ತಟ್ಟಿದ್ದಕ್ಕೆ ಧನ್ಯವಾದಗಳು. 🙂
   
  – ಪ್ರಸಾದ್.ಡಿ.ವಿ.

 7. ಕಥೆಯನ್ನು ಅಚ್ಚು ಕಟ್ಟಾಗಿ ಶುರು ಮಾಡಿದ್ದೀರಿ. ಬೆಳೆಸಿಕೊಂಡು ಹೋದ ರೀತಿಯು ಅನನ್ಯ. ಆದರೆ, ಇನ್ನಷ್ಟು ಬೆಳೆಸಿದ್ದರೆ ಚೆನ್ನಿತ್ತು ಅನಿಸಿತು ಗೆಳೆಯ. ಕಥೆಯನ್ನು ಮುಕ್ತಾಯಗೊಳಿಸಿದ ವೈಖರಿ ಅದ್ಭುತ……….. ಇನ್ನಷ್ಟು ಬಿಗಿಯಾದ ಕಥೆಗಳು ನಿಮ್ಮಿಂದ ಬರಲಿ; ಓದಲು ನಾವು ರೆಡಿ…..ಶುಭವಾಗಲಿ…!!

Leave a Reply

Your email address will not be published. Required fields are marked *