ಅವಳು ನಮ್ಮವಳಲ್ಲವೆ?: ಕೆ.ಎಂ.ವಿಶ್ವನಾಥ(ಮಂಕವಿ) ಮರತೂರ.

ದೇಶ ನನಗೇನು ಮಾಡಿದೇ ಎನ್ನುವುದಕ್ಕಿಂತ, ದೇಶಕ್ಕಾಗಿ ನಾನೇನು ಮಾಡಿದೆ ಎನ್ನುವುದು ಮುಖ್ಯವಾದ ವಿಚಾರ. ನಮ್ಮ ದೇಶದಲ್ಲಿ ಮಹಿಳೆ ಎಂದಾಕ್ಷಣ ಗೌರವ, ಭಕ್ತಿ, ಶಕ್ತಿ ಎಂಬ ಪದಗಳು ಬಳಕೆಯಾಗುತ್ತವೆ. ಅವಳ ಸೇವೆ ಈ ದೇಶಕ್ಕೆ ಅನನ್ಯ ಎಂಬ ಮಾತು ಎಲ್ಲರ ಮನದೊಳಗೆ ಮನೆಮಾಡಿದೆ.

ಮಹಿಳಾ ಸಬಲೀಕರಣ ಎನ್ನುವ ವಿಚಾರ, ಹಿರಿಯರ ತಲೆಯೊಳಗೆ ಇದೆ ಆದರೆ ಪಾಲನೆಯಲ್ಲಿ ಕಾರ್ಯಗತಿಯಲ್ಲಿ ಹೊರಬರುತ್ತಿಲ್ಲ. ನಮ್ಮ ಮಹಿಳೆಯನ್ನು ಸೂಕ್ತವಾಗಿ ಸಬಲೀಕರಣ ಮಾಡುತ್ತೇವೆ ಎಂದು ಬರಿ ಮಾತಿನಲ್ಲಿ ಬರವಣಿಗೆಯಲ್ಲಿ ಹೇಳುತ್ತಿದ್ದೇವೆ. ನೈಜ ಬದುಕಿನಲ್ಲಿ ಅವಳನ್ನು ಸಬಲೀಕರಣವನ್ನು ಮಾಡುವ ಮನಸ್ಸು ಮಾಡುತ್ತಿಲ್ಲ.

ಮಹಿಳಾ ಸಬಲೀಕರಣವೆಂದರೆ ಮಹಿಯರಲ್ಲಿ ಬೌದ್ಧಿಕ, ರಾಜಕೀಯ, ಸಾಮಾಜಿಕ, ಆರ್ಥಿಕ ಬಲವನ್ನು ಹೆಚ್ಚಿಸುವುದಕ್ಕೆ ಮಹಿಳಾ ಸಬಲೀಕರಣ ಅಥವಾ  ಮಹಿಳಾ ಸಶಕ್ತತೆ ಎನ್ನುತ್ತಾರೆ. ಸಬಲೀಕರಣ ಸಶಕ್ತತೆ ಎನ್ನುವುದು ಸಾಮಾನ್ಯವಾಗಿ ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಬೆಳೆಯಿಸಿ, ಅವರ ಸಾಮರ್ಥ್ಯವನ್ನು ಹೆಚ್ಚಿಸುವುದೇ ಆಗಿರುತ್ತದೆ. 

ಸಬಲೀಕರಣ ಸಶಕ್ತತೆ ಎನ್ನುವುದು ಹಲವು ಅಂಶಗಳನ್ನು ಒಳಗೊಂಡಿದೆ. ಒಟ್ಟಾರೆಯಾಗಿ ಅವರ ಅರ್ಹತೆ ಸಾಮರ್ಥ್ಯವನ್ನು ಹೆಚ್ಚಿಸುವುದು, ಸ್ವಯಂ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದುವುದು, ಮಾಹಿತಿ ಮತ್ತು ಸಂಪನ್ಮೂಲಗಳ ಬಗ್ಗೆ ತಿಳಿದುಕೊಳ್ಳುವ ಹಾಗೂ ಅವುಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದುವುದು, ಅವರ ಇಚ್ಛೆಗೆ ಅನುಸಾರವಾಗಿ ಆಯ್ಕೆ ಮಾಡುವ ಅವಕಾಶಗಳನ್ನು ಹೊಂದುವುದು. 

ಒಟ್ಟಿಗೇ ಅಥವಾ ಗುಂಪು ನಿರ್ಣಯ ತೆಗೆದುಕೊಳ್ಳುವುದರಲ್ಲಿ ವಿಶ್ವಾಸದಿಂದ ಧೃಡಪಡಿಸುವ ಸಾಮರ್ಥ್ಯವನ್ನು ಹೊಂದುವುದು. ಬದಲಾವಣೆ ಮಾಡುವುದರಲ್ಲಿ ಧನಾತ್ಮಕ ಭಾವನೆಯನ್ನು ಹೊಂದುವುದು, ಸ್ವಯಂ ಮತ್ತು ಗುಂಪು ಪ್ರಾಬಲ್ಯವನ್ನು ಹೆಚ್ಚಿಸಲು ವಿವಿಧ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದು. ಪ್ರಜಾಪ್ರಭುತ್ವದ ಮಾರ್ಗದಲ್ಲಿ ಇತರರ ಗ್ರಹಿಕೆ ಶಕ್ತಿಯನ್ನು ಬದಲಾಯಿಸುವಂತೆ ಮಾಡುವುದು. ಸ್ವಯಂ ಪ್ರೇರೇಪಿತರಾಗಿ ನಿರಂತರ ಬದಲಾವಣೆಯ ಬೆಳವಣಿಗೆ ಪ್ರಕ್ರಿಯೆಯಲ್ಲಿ ಭಾಗವಹಿಸುವುದು. ಆತ್ಮಾಭಿಮಾನ ಹೆಚ್ಚು ಮಾಡುವುದರಲ್ಲಿ ಹಾಗೂ ಕಳಂಕದಿಂದ ಪಾರಾಗುವುದರಲ್ಲಿ ತೊಡಗಿಕೊಳ್ಳುವುದು. ಮಹಿಳಾ ಸಬಲೀಕರಣದ ಪ್ರಮುಖ ಅಂಶಗಳಾಗಿವೆ. ವಿಪರ್ಯಾಸವೆಂದರೆ ನಮ್ಮ ಮಹಿಳೆಯರು ಇನ್ನು  ಹಲವು ಹಾದಿಗಳಲ್ಲಿ ಹಿಂದೆಯಿದ್ದಾರೆ.

ಭಾರತದಲ್ಲಿ ಮಹಿಳೆಯರ ಸ್ಥಾನಮಾನ 
ಭಾರತ ಪ್ರಪಂಚದಲ್ಲಿ ಪ್ರಜಾಪ್ರಭುತ್ವಕ್ಕೆ ಹೆಸರುವಾಸಿಯಾದ ರಾಷ್ಟ್ರ. ಇಲ್ಲಿನ ಕಲೆ, ಸಂಸ್ಕೃತಿ, ನ್ಯಾಯ ಎಲ್ಲರಿಗೂ ಸಮಬಾಳು ಸಮಪಾಲು ನೀಡುವುದಾಗಿದೆ. ಇತ್ತೀಚಿಗೆ ಭಾರತದಲ್ಲಿ ಮಹಿಳೆಯರು ಶಿಕ್ಷಣ, ರಾಜಕೀಯ, ಮಾಧ್ಯಮ, ಕಲೆ, ಸಾಂಸ್ಕೃತಿಕ, ಸೇವಾ ವಿಭಾಗಗಳು, ವಿಜ್ಞಾನ ಮತ್ತು ತಾಂತ್ರಿಕ ಇತ್ಯಾದಿ ಕ್ಷೇತ್ರಗಳಲ್ಲಿ ಭಾಗವಹಿಸುತ್ತಿದ್ದಾರೆ . 

ನಮ್ಮ ದೇಶದ ಸಂವಿಧಾನವು ಮಹಿಳೆಯರೆಲ್ಲರಿಗೂ ಸಮಾನತೆಯನ್ನು ಅನುಚ್ಛೇದ ೧೪ ಪ್ರಕಾರ ಕಲ್ಪಿಸಿದೆ. ನಮ್ಮ ಮಹಿಳೆಯರಿಗೆ ಅನುಚ್ಛೇದ-೩೯ ಪ್ರಕಾರ ರಾಜ್ಯದಿಂದ ತಾರತಮ್ಯವಿರಕೂಡದು, ಸಮಾನ ಅವಕಾಶ ಅನುಚ್ಛೇದ-೩೯ಡಿ ಇತ್ಯಾದಿಗಳನ್ನು ಖಾತ್ರಿಗೊಳಿಸಿದೆ. ಇಷ್ಟಲ್ಲದೆ ರಾಜ್ಯಗಳು ಮಹಿಳೆಯರು ಮತ್ತು ಮಕ್ಕಳ ಪರವಾಗಿ ಹಲವು ಸವಲತ್ತುಗಳನ್ನು ಒದಗಿಸಿದೆ. ಅನುಚ್ಛೇದ ೧೫(೩) ಪ್ರಕಾರ. ಮಹಿಳೆಯರಿಗೆ ಸೂಕ್ತವಾದ ಮತ್ತು ಮಾನವೀಯತೆಯಿಂದ ಕೂಡಿದ ಕೆಲಸದ ವಾತಾವರಣ ಮತ್ತು ಮಾತೃತ್ವದ ಸವಲತ್ತುಗಳನ್ನು, ಭದ್ರತೆ ನೀಡುವಂತಹ ಅವಕಾಶಗಳನ್ನು ಕಲ್ಪಿಸಿದೆ ಅನುಚ್ಛೇದ ೪೨ ರ ಪ್ರಕಾರ.

ಭಾರತದ ಇತಿಹಾಸದ ೧೯೭೦ನೇ ಇಸವಿಯಿಂದ ಸ್ತ್ರೀವಾದವು ಶೀಘ್ರಗತಿಯಲ್ಲಿ ಮೊದಲಾಯಿತು. ರಾಷ್ಟ್ರಮಟ್ಟದಲ್ಲಿ ಮಹಿಳಾ ಗುಂಪುಗಳು ಮೊಟ್ಟ ಮೊದಲನೆಯದಾಗಿ ಕೈಗೆತ್ತಿಕೊಂಡ ವಿಷಯವೇನೆಂದರೆ; ಮಧುರೆಯಲ್ಲಿ ನಡೆದ ಬಲಾತ್ಕಾರ ಪ್ರಕರಣ. ಮಧುರೆಯಲ್ಲಿ ಹದಿ ಹರೆಯದ ವಯಸ್ಸಿನ ಹೆಂಡತಿಯನ್ನು ಬಲಾತ್ಕಾರವಾಗಿ ಮಾನಭಂಗ ಮಾಡಿದ ಪೊಲೀಸ್ ಪೇದೆಯನ್ನು ನಿರಪರಾಧಿ ಎಂದು ಘೋಷಿಸಿದ್ದು ೧೯೭೯-೧೯೮೦ರಲ್ಲಿ ದೊಡ್ಡ ಪ್ರಮಾಣದಲ್ಲಿ ವಿರೋಧವನ್ನು ವ್ಯಕ್ತಪಡಿಸಲು ಕಾರಣವಾಯಿತು.

ಸ್ತ್ರೀವಾದಿಗಳು ಮಹಿಳೆಯರ ಕುರಿತು ಇರುವ ವಿವಾದಗಳಾದ ಹೆಣ್ಣುಮಗುವಿನ ಭ್ರೂಣಹತ್ಯೆ, ಲಿಂಗಭೇಧ, ಮಹಿಳೆಯರ ಆರೋಗ್ಯ, ಮತ್ತು ಸಾಕ್ಷರತೆಗಾಗಿ ಒಗ್ಗಟ್ಟಾಗಿ ಕೆಲಸ ಮಾಡಿದರು. ಭಾರತದಲ್ಲಿ ಕುಡಿತವು ಮಹಿಳೆಯ ಮೇಲಿನ ದೌರ್ಜನ್ಯಕ್ಕೆ ಕಾರಣವಾಗಿರುವುದರಿಂದ ಮಹಿಳಾ ಗುಂಪುಗಳು ಕುಡಿತದ ವಿರುದ್ಧ ಆಂದೋಲನಗಳನ್ನು ಆಂಧ್ರಪ್ರದೇಶ, ಹರಿಯಾಣ, ಒರಿಸ್ಸಾ, ಮಧ್ಯಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಆರಂಭಿಸಿದವು. ಬಹುಜನ  ಮುಸ್ಲಿಂ ಮಹಿಳೆಯರು, ಮುಸ್ಲಿಂ ಮೂಲದ ನಾಯಕರುಗಳು ಶೆರಿಯತ್ ಕಾನೂನಿನಲ್ಲಿ ಮಹಿಳೆಯರ ಹಕ್ಕುಗಳ ಅರ್ಥವಿವರಣೆ ಹಾಗೂ ಮೂರು ಬಾರಿ ತಲಾಖ್ ಹೇಳುವ ಪದ್ಧತಿಯ ಕುರಿತು ಟೀಕೆ ಮಾಡಿದ್ದಾರೆ.                     

೧೯೯೦ನೇ ಇಸವಿಯಲ್ಲಿ ವಿದೇಶೀ ದಾನಿ ಸಂಸ್ಥೆಗಳು ನೀಡಿದ, ಅನುದಾನ ಹಣದ ಸಹಾಯದಿಂದ ಮಹಿಳಾ ವಿಕಸನ ಕುರಿತಾದ ಸರ್ಕಾರೇತರ ಸಂಸ್ಥೆಗಳನ್ನು ಸ್ಥಾಪಿಸಲು ಸಹಕಾರಿಯಾಯಿತು. ಸ್ವಸಹಾಯ ಸಂಘಗಳು, ಸ್ವಯಂ ಉದ್ಯೋಗಿಗಳ ಸಂಘದಂತಹ ಸರ್ಕಾರೇತರ ಸಂಘಟನೆಗಳು, ಮಹಿಳೆಯರ ಹಕ್ಕುಗಳ ಬಗ್ಗೆ ಪ್ರಮುಖವಾದ ಪಾತ್ರವನ್ನು ವಹಿಸಿವೆ.. ಬಹಳ ಮಹಿಳೆಯರು ಸ್ಥಳೀಯ ಚಳುವಳಿಗಳ ಮುಖಾಂತರ ನಾಯಕಿಯರಾಗಿ ಮುಂದೆ ಬಂದಿದ್ದಾರೆ. ಉದಾ:- ನರ್ಮದಾ ಬಚಾವೋ (ನರ್ಮದಾ ಉಳಿಸಿ) ಆಂದೋಲನದ ಮೇಧಾ ಪಾಟ್ಕರ್‌ರಂತವರು. 

ಭಾರತ ಸರ್ಕಾರವು ೨೦೦೧ನೇ ವರ್ಷವನ್ನು ಮಹಿಳಾ ಸಬಲೀಕರಣ ವರ್ಷ ಎಂದು ಘೋಷಿಸಿತ್ತು. ರಾಷ್ಟ್ರೀಯ ಮಹಿಳಾ ಸಬಲೀಕರಣ ರಾಜ್ಯನೀತಿಯು ೨೦೦೧ರಲ್ಲಿ ಜಾರಿಗೆ ಬಂದಿತು. ಅಲ್ಲಿಂದ ಇಲ್ಲಿಯವರೆಗೆ ನಮ್ಮ ಮಹಿಳಾ ಸಬಲೀಕರಣವಾಗಿದೆಯೋ ಅಥವಾ ಅಬಲೀಕರಣವಾಗಿದೆಯೋ ಯೋಚಿಸಿ ನೋಡಿದಾಗ ಅದರ ಅರ್ಥವಾಗುತ್ತದೆ.  ೨೦೦೧ ರಿಂದ ೨೦೧೪ ರವರೆಗಿನ ಮಹಿಳಾ ದೌರ್ಜನ್ಯಗಳು ಮಹಿಳಾ ಅತ್ಯಾಚಾರಗಳನ್ನು ಲೆಕ್ಕ ಹಾಕಿದರೆ ನಿಜಕ್ಕೂ ನಮ್ಮ ಬಣ್ಣ ಬಯಲಾಗುತ್ತದೆ.  ಬರಿ ಮಾತಿನಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ನಾವು ನೈಜವಾಗಿ ಮಹಿಳೆಯನ್ನು  ಸಬಲೀಕರಣ ಮಾಡುತ್ತಿಲ್ಲ. ಬದಲಿಗೆ ಅವಳ ಹಕ್ಕುಗಳನ್ನು ಕೊಂದು ಹಾಕುತ್ತಿದ್ದೇವೆ.  ನಮ್ಮ ಮಹಿಳೆಯರ ಬಗ್ಗೆ ನಾವಿಂದು ಒಳ್ಳೆಯ ಭಾವನೆ ಹೊಂದಿ ಅವಳನ್ನು ಕಾಪಾಡಿಕೊಳ್ಳದಿದ್ದರೆ  ಮುಂದೊಂದು ದಿನ ವರದಕ್ಷಿಣೆಯ ಬದಲು, ವದುದಕ್ಷಿಣೆ  ಕೊಟ್ಟು ಮಹಿಳೆ ಮದುವೆಯಾಗಬೇಕಾಗುತ್ತದೆ ನೆನಪಿರಲಿ.  

ಈ ಭೂಮಿ ಹುಟ್ಟಿದ ಮೇಲೆ ಹುಟ್ಟಿದ ಎರಡು ಪ್ರಮುಖ ಜಾತಿಗಳೆಂದರೆ ಹೆಣ್ಣು ಗಂಡು ಹೆಣ್ಣು  ನಮ್ಮ ಬದುಕಿನ ಬಹುದೊಡ್ಡ ಕಣ್ಣು , ನಮ್ಮ ಬದುಕಿನಲ್ಲಿ ಹೆಣ್ಣು ಇರದಿದ್ದರೆ ನಮ್ಮ ಬದುಕು ಯೋಚಿಸಲು ಅಸಾಧ್ಯವಾಗಿದೆ. ಅವಳೆ ನಮ್ಮ ಬಾಳಿನ ಬಹುದೊಡ್ಡ  ಬೆಳಕಾಗಿರುವಾಗ, ಅವಳನ್ನು ಕಾಯಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಲ್ಲವೆ ಮಹಿಳೆಯನ್ನು  ಉಳಿಸಿಕೊಳ್ಳಬೇಕು ಏಕೆಂದರೆ ಅವಳು ನಮ್ಮವಳಲ್ಲವೇ?

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
basavarajksu
basavarajksu
10 years ago

super Article

1
0
Would love your thoughts, please comment.x
()
x