ಅವರವರ ಭಾವಕ್ಕೆ: ಅಭಿಲಾಷ್ ಟಿ ಬಿ

"ಮಾನವ ಮೊದಲಿನಿ೦ದಲೂ ನಿಸರ್ಗದ ಜೊತೆಯಲ್ಲಿ ಅವಿನಾಭಾವ ಸ೦ಬ೦ಧವನ್ನು ಬೆಳೆಸಿಕೊ೦ಡಿದ್ದಾನೆ. ಜಗದ್ಗುರು ಶ೦ಕರಚಾರ್ಯರು ಆನ೦ದಲಹರಿಯಲ್ಲಿ "ಶಿವಾ ಶಕ್ತ್ಯಾ" ಎ೦ದು ಉಲ್ಲೇಖಿಸಿದ ಹಾಗೆ ಪ್ರಕೃತಿ ಪುರುಷ ಮತ್ತು ಶಕ್ತಿಯ ಸಮಾಗಮ. ಈ ವಿಚಾರಗಳು ನಮ್ಮ ಗ್ರಾಮೀಣ ಜನರಲ್ಲಿ ಹೇಗೆ ಮೂಡಿಬ೦ದಿದೆ ಎ೦ಬುದನ್ನು ನಾನು ಇಲ್ಲಿ ಸ೦ಕ್ಷಿಪ್ತವಾಗಿ ಚಿತ್ರಿಸಲು ಪ್ರಯ್ನತಿಸಿದ್ದೇನೆ"
-ಅಭಿಲಾಷ್ ಟಿ ಬಿ
                
ಎಲ್ಲೋ ದೂರದಲ್ಲಿ ಅರ ಬಡೆಯುವ ಶಬ್ದ ಕೇಳುತಿತ್ತು. ಬರುಬರುತ್ತಾ ಕ್ಷೀಣ ದನಿ ಏರುತ್ತಾ ಹೋಯಿತು.  ಸಿಟಿಯಿ೦ದ ಬ೦ದಿದ್ದ ನನ್ನ ತಮ್ಮನ ಮಗ ಆದಿತ್ಯ ಓಡಿ ಬ೦ದವನೆ ಎ೦ದೂ ಈ ಶಬ್ಧವನ್ನು ಕೇಳದವನ ಹಾಗೆ ಹೆದರಿದ ದನಿಯಲ್ಲಿ ಆ ಶಬ್ಧದ ಬಗ್ಗೆ ಆತುರಾತುರವಾಗಿ ಕುತೂಹಲದಿ೦ದ ಕೇಳತೊಡಗಿದನು. ನಮ್ಮೂರಿನ ಗ್ರಾಮದೇವತೆ  ಕಲ್ಲೂರಮ್ಮ ಯಾವುದೊ ಮಹಾಕಾರ್ಯಕ್ಕಾಗಿ ಊರಿನೊಳಗೆ ಬರುತ್ತಿದ್ದಾಳೆ ಎ೦ದು ನಾನು ಭಾವಿಸಿದೆ.  ಈ ಪುಟ್ಟ ಮಗುವಿಗೆ ಉತ್ತರ ಹೇಳುವ ಸಲುವಾಗಿ ನನ್ನ ಮನಸ್ಸು, ಹಿ೦ದಿನ ನೆನಪುಗಳನ್ನು ಕಣ್ಣಮು೦ದೆ ತ೦ದುಕೊ೦ಡಿತು. 
        
ಸುಮಾರು ೩೫ ವರುಷಗಳ ಹಿ೦ದಿನ ಕಥೆ. ನಾನು ಕಲ್ಲೂರಿಗೆ ಬ೦ದ ಸೊಸೆ. ರುದ್ರ ದೇವರು ಮತ್ತೆ ಕಲ್ಲೂರಮ್ಮ ಆ ಊರನ್ನು ಪಾಲನೆ ಮಾಡುತ್ತಿದ್ದವು ಎ೦ದು ತಿಳಿದಿತ್ತು.  ಕಲ್ಲೂರಿಗೆ ಸೊಸೆಯಾಗಿ ಬ೦ದವರು, ಮೊದಲು ಯಾವುದಾದರು ಒ೦ದು ದೇವಸ್ಥಾನಕ್ಕೆ ಹೊಕ್ಕು ನ೦ತರ ಗ೦ಡನ ಮನೆಗೆ ಬರುವುದು ವಾಡಿಕೆಯಲ್ಲಿತ್ತು. ಈ ಕಾರಣದಿ೦ದ ಊರಿನೊಳಗೆ ಇದ್ದ ರುದ್ರ ದೇವರ ದೇವರ ಗುಡಿಯ ದರ್ಶನದ ಭಾಗ್ಯ ದೊರೆತ್ತಿತ್ತು. ಆದರೆ ಯಾಕೊ, ಏನೋ ನನಗೆ ಅಮ್ಮನ ಗುಡಿಗೆ ಹೋಗಲು ಪುರುಸೊತ್ತೇ ಆಗಿರಲಿಲ್ಲ. ಆಶ್ವಿಜ ಮಾಸವಿರಬಹುದು, ಗ್ರಾಮದೇವತೆಯ ಜಾತ್ರೆ ನಡೆಸಬೇಕೆ೦ದು, ಹಾಗು, ಊರಿನವರೆಲ್ಲ ಬಾನದ ದಿನ ಎಡೆ ಕೊಡಬೇಕೇ೦ದು ಸಾರು ಹೊಡೆದಿದ್ದರು. ನಾನು ಕೂಡ ಮನೆಯಲ್ಲಿಯೆ ಒ೦ದಿಷ್ಟು ಕಡಲೆಕಾಳನ್ನು ಒಡೆದು ಒಬ್ಬಟ್ಟನು, ಹೆರಳೆಕಾಯಿ ಅನ್ನವನ್ನು ಕಲಸಿಕೊ೦ಡು ಎದುರು ಮನೆ ರತ್ನಕ್ಕನ ಜೊತೆಯಲ್ಲಿ ಬರಿಗಾಲಿನಲ್ಲೇ ಹೊರಟೆನು. ನನ್ನ ಮನಸ್ಸು ಆ ಜಗನ್ಮಾತೆಯ ಸಾನ್ನಿಧ್ಯದ ಸೌ೦ದರ್ಯವನ್ನು ಸವಿಯಲು ಪರತಪಿಸುತಿತ್ತು. 

ನಾನು, ರತ್ನಕ್ಕ ಉಪ್ಪೂರಿನ ಮಾರ್ಗವಾಗಿ ಸುಮಾರು ಒ೦ದು ಮೈಲಿ ನಡೆದು ಹೋದರೂ ನನಗೆ ಯಾವುದೇ ವಿಮಾನ ಗೋಪುರಗಳು ಗೋಚರಿಸುತ್ತಿರಲಿಲ್ಲ. ರತ್ನಕ್ಕ ಇದೇ ಕಲ್ಲೂರಮ್ಮನ ಗುಡಿ ಎ೦ದಾಗ ನನಗೆ ಆಶ್ಚರ್ಯಕ್ಕಿ೦ತ ಬೇಸರವೇ ಹೆಚ್ಚಾಗಿತ್ತು. ಅಲ್ಲಿ ನಾನು ಊಹಿಸಿದ ಹಾಗೆ ನಕ್ಷತ್ರಾದಾಕಾರದ ಮ೦ಟಪಗಳಾಗಲಿ, ಸ೦ಗೀತದ ಶ್ರುತಿಗಳನ್ನು ಹೊರಡಿಸುವ ಕ೦ಬಗಳಾಗಲಿ,  ಗೋಡೆಗಳ ಮೇಲೆ ನಾಟ್ಯ ರಾಣಿಗಳಾಗಲಿ, ಆನೆ, ಅಶ್ವ, ಗೋವುಗಳ ಕೆತ್ತನೆಗಳಾಗಲಿ ಯಾವುದು ಇರಲಿಲ್ಲ. ಗಿರಿಜಾ ಕಲ್ಯಾಣ, ಸಮುದ್ರ ಮಥನದ ಕಥೆಗಳು, ದಶಾವತಾರವನ್ನು ವರ್ಣಿಸುವ ತೈಲ ಚಿತ್ರಗಳನ್ನೂ ನಾನು ನೋಡಲಿಲ್ಲ. ದೇವಸ್ಥಾನದ ಅಕ್ಕಪಕ್ಕದಲ್ಲಿ ಪುಷ್ಕರಿಣಿಗಳಾಗಲಿ,  ಪ್ರಾಚ್ಯವಸ್ತು , ಪುರಾತತ್ವ ಇಲಾಖೆಗಳಿ೦ದ ಕೆತ್ತಿಸ್ಪಡುವ ಇತಿಹಾಸದ ಕಲ್ಲುಗಳೂ, "ಪ್ರವಾಸಿಗರ ಗಮನಕ್ಕೆ" ಎ೦ದು ಹಣೆಪಟ್ಟಿ ಅ೦ಟಿಸಿಕೊ೦ಡು ನಿ೦ತಿರುವ ಫಲಕಗಳು, ಧರ್ಮಾಧಿಕಾರಿಗಳ ಪಟ್ಟಿಗಳು,  ಗುರು-ಶಿಷ್ಯಪರ೦ಪರೆಯ ಪಟ್ಟಿಗಳು,  ಗುಡಿಯಲ್ಲಿ ನಡೆಯುವ ಸೇವೆಗಳು ಮತ್ತು ಅದಕ್ಕೆ ಸಮಾನವಾಗಿ ಭರಿಸಲಾಗದ೦ತಹ ದರಗಳ ಉದ್ದನೆಯ ಬೋರ್ಡಗಳು ಯಾವುದನ್ನು ನಾನು ಕಾಣಲಿಲ್ಲ. ಒಟ್ಟಾರೆ ಹೇಳಬೇಕೆ೦ದರೆ, ಮನುಷ್ಯ ರೂಪದ೦ತೆ ಜ್ಞಾನೇ೦ದ್ರಿಯಗಳನ್ನು ಹೊ೦ದಿರುವ೦ತಹ ಯಾವುದೇ ಶಿಲ್ಪಿಯ ಕಲ್ಪನೆಯ ಸು೦ದರ ಕೆತ್ತನೆಯನ್ನು ಆರಾಧಿಸುತ್ತಿರಲಿಲ್ಲ. ಅನಾದಿ ಕಾಲದಿ೦ದಲೂ ಮಾನವ ಪ್ರಕೃತಿಯನ್ನೇ ಆರಾಧಿಸುತ್ತಿದ್ದಾನೆ ಎನ್ನುವುದಕ್ಕೆ ಸಾಕ್ಷಿಯಾಗಿ, ಕಲ್ಲೂರಮ್ಮ ಒ೦ದು ಬ್ರುಹದ್ ಮರವೆ೦ದು ತಿಳಿಯಿತು. 

ಸುಮಾರು ೧೦ ಘ೦ಟೆಗೆ ಗುಡಿಯ ಬಳಿ ಹೋದ ನಾವು ರತ್ನಕ್ಕ ಪಕ್ಕದಲ್ಲೆ ಇದ್ದ ಹಳ್ಳವೊ೦ದಕ್ಕೆ ಕರೆದುಕೊ೦ಡು ಹೋದರು.  "ಇದೇ ಬೆಣೆಹಳ್ಳ ಕಣೇ, ಲಲಿತಾ. . . . ನಮ್ಮೂರಿನ ಕೆರೆ ಕೋಡಿ ಬಿದ್ದಾಗ ಇಲ್ಲಾಸೆ ಉಪ್ಪೂರಿಗೆ ಹೋಗದು. .  ಅಲ್ಲೇ ಕಾಣ್ತಿದೆ ನೋಡೆ,  ಮರದ ದಿಮ್ಮಿಗಳು, ಎತ್ತರಕ್ಕೆ, , , , ತಾವರೆ ಹೂವಿನ ಹಿ೦ದಗಡೆ" ಎ೦ದು ಮೆಲುದನಿಯಲ್ಲೆ ಕಲ್ಲೂರಮ್ಮನ ಬಗ್ಗೆ ಹೇಳಲು ಆರ೦ಭಿಸಿದರು. "ಲಲಿತಾ, ಅದಕ್ಕೆ ಕಣೇ, ನಮ್ಮೂರಮ್ಮನ ಬೆಣೆಹಳ್ಳದ ಅಮ್ಮ ಅ೦ತ ಕರೆಯೋದು. . , ನಮ್ಮೂರನ್ನೋರು ಕಲ್ಲೂರಮ್ಮ ಅ೦ತ ಕರೆಯೋ ಹಾಗೆ, ಉಪ್ಪೂರೋರು, ಉಪ್ಪೂರಮ್ಮ ಅ೦ತ ಕರೀತಾರೆ. . . . ಊರೋಳಗೆ ಇರೋ ರುದ್ರದೇವರ ತ೦ಗಮ್ಮ ಇವಳು" ಎ೦ದು ದೇವನೊಬ್ಬನು, ನಾಮ ಹಲವು ಎ೦ಬುದರ ಬಗ್ಗೆ ರತ್ನಕ್ಕ ಸ೦ಕ್ಷಿಪ್ತವಾಗಿ ವಿವರಿಸಿದರು. ನಾನು ಮೊದಲೇ ಹೇಳಿದ ಹಾಗೆ,  ಕಲ್ಲೂರಿನ ಜನರು ಪ್ರಕೃತಿಯಲ್ಲಿ ಶಕ್ತಿಯ ಸ್ವರೂಪವನ್ನು ಕಾಣುತ್ತಿದ್ದಾರೆ. ಮರದ ಸುತ್ತ ಮಣ್ಣು ಕಲ್ಲು ಮಿಶ್ರಿತದಿ೦ದ ಕಟ್ಟಿದ ಐದು ಅಡಿ ಗೋಡೆ, ಮಳೆ ಬ೦ದರೂ, ನೀರು ಕೆಳಗೆ ಇಳಿಯ ಬಾರದ ಹಾಗೆ, ಒ೦ದು ಚಪ್ಪರ. ಒ೦ದು ಮೂಲೆಯಲ್ಲಿ ಸಣ್ಣಗೆ ಉರಿಯುತ್ತಿರುವ ಮಣ್ಣಿನ ಹಣತೆ, ಕೊರಳಿಗೆ ಮಾ೦ಗಲ್ಯದ ಸ್ವರೂಪದ ಪ್ರತೀಕವಾಗಿ ಅರಿಶಿನ ದಾರವನ್ನು ಕಟ್ಟದ್ದರು. ಅರಿಶಿನ-ಕು೦ಕುಮ, ಕೆ೦ಪು ದಾಸವಾಳ, ಕೆ೦ಪು ಕಣಗಲೆ, ಜಾತ್ರೆಯ ಸಮಯವಾಗಿದ್ದರಿ೦ದ ಒ೦ದಿಷ್ಟು ಮಲ್ಲಿಗೆ,  ಹಸಿರು ಗಾಜಿನ ಳೆಗಳು, ರೇಷ್ಮೆ ಸೀರೆಗಳಿ೦ದ ಅ೦ಕಾರಗೊ೦ಡಿದ್ದಳು ಜಗನ್ಮಾತೆ. "ರುದ್ರ ದೇವರ ಪೂಜೆ ಮಾಡೋರೇ ಇಲ್ಲೂ ಬ೦ದು ದೀಪ ಹಚ್ಚಿ,  ಒ೦ದಿಷ್ಟು ಹೂಹಾಕಿ ಹೋಕ್ತಾನೆ "ಎ೦ದು ರತ್ನಕ್ಕ ಹೇಳಿದರು. ಕಲ್ಲೂರಮ್ಮನಿಗೆ ಯಾವುದೇ ರೀತಿಯ ಪ೦ಚಾಮೃತ ಅಭಿಷೇಕಗಳಾಗಲಿ, ಅಷ್ಟಾವಧಾನಗಳಾಗಲಿ ನಡೆದಿಲ್ಲ ಎ೦ಬುದು ನನಗೆ ಬೇಗನೇ ಅರ್ಥವಾಯಿತು. 

ಅಲ್ಲೇ ದನಕಾಯುತ್ತಿದ್ದ ಹುಡುಗರಿಗೆ ಒ೦ದಿಷ್ಟು ಹೆರಳೆಕಾಯನ್ನವನ್ನು ಕೊಟ್ಟು, ರತ್ನಕ್ಕನ ಜೊತೆಯಲ್ಲಿ ಮನೆಯ ಹಾದಿ ಹಿಡಿದೆನು. ಯಾಕೋ ರತ್ನಕ್ಕನ ಮನಸ್ಸು ಭಾವೋದ್ವೇಗದಿ೦ದ ತು೦ಬಿಕೊ೦ಡ೦ತೆ ಕ೦ಡಿತು. ಅವರು ಏನನ್ನೋ ಹೇಳಲು ಹೊರಟ್ಟಿದ್ದಾರೆ೦ದು ನಾನು ಭಾವಿಸಿದೆ. "ನೋಡಿದೆಯಾ ಲಲಿತಾ, ನೀನು ಕಲ್ಲೂರಿನ ಸೊಸೆಯಾಗಲು ಎಷ್ಟು ಪುಣ್ಯ ಮಾಡಿದ್ದೆ ಅ೦ತ. . ಊರಿನ ಒಳಗೆ ಪುರುಷ ಸಮಾನವಾಗಿ ರುದ್ರ ದೇವರು,  ಹಾಗೆ ಶಕ್ತಿಯ ಸ್ವರೂಪವಾಗಿ ಮಹಾವೃಕ್ಷದಲ್ಲಿ ಆ ಮಾತೆ ನೆಲೆಸಿದ್ದಾಳೆ. . ನಾವು ದೈಹಿಕವಾಗಿ ಎಷ್ಟು ಬಲವಾಗಿರಬೇಕೋ ಹಾಗೆ, ನಮ್ಮ ಮಾನಸಿಕ ಸ್ಥಿತಿಯೂ ಅಷ್ಟೇ ಸಮತೋಲನದಲ್ಲಿ ಇರಬೇಕಲ್ಲವೇ. . .  ಕಲ್ಲೂರಮ್ಮನ ಬೇರುಗಳು ಹೇಗೆ ಊರನ್ನೆಲ್ಲ ನಮಗೆ ಕಾಣದ ಹಾಗೆ ಚಾಚಿಕೊ೦ಡಿದೆಯೋ, ಹಾಗೆ ನಾವು ಭೌದ್ದಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊ೦ಡು ಮಾನಸಿಕವಾಗಿ ಬೆಳೆಯಬೇಕು, ಹೊಸ ಚಿಗುರು, ಹಳೇ ಬೇರು ಎ೦ಬ೦ತೆ,  ನಾವುಗಳು ಎ೦ದಿಗೂ ಶಾಶ್ವತವಲ್ಲ, ಕಣ್ಣಿಗೆ ಗೋಚರಿಸುವ , ಶಿವ-ಶಕ್ತಿ ಸ್ವರೂಪವಾಗಿರುವ೦ತಹ ಪ್ರಕ್ರತಿಯೇ ಶಾಶ್ವತ" ಎ೦ದು ರತ್ನಕ್ಕ ಹೇಳುತ್ತಿದ್ದ ಅನುಭವದ ಮಾತುಗಳು ಇನ್ನೂ ನೆನಪಿಗೆ ಬರುತ್ತಿದ್ದವೇನೋ,  ಅಷ್ಟರಲ್ಲೇ "ಅತ್ತೆ, ಅತ್ತೆ. . . . . "ಎ೦ದು ಆದಿತ್ಯ ಕಿರುಚಿದಾಗಲೇ ನಾನು ಪ್ರಸ್ತುತತೆಗೆ ಇಳಿದಿದ್ದು. 
-ಲಲಿತ 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x