ಊರ ಅಗಸಿ ಬಾಗಿಲಿನ ಬಳಿ ಕಾರು ಬಂದ ತಕ್ಷಣ ಡ್ರೈವರ್ ಸರ್. . ಸರ್. . ಎದ್ದೇಳಿ ಸರ್ ನಿಮ್ಮ ಊರು ಬಂತು ಎಂದ. ಆಗ ಸಮಯ 11 ಗಂಟೆ ರಾತ್ರಿ.
ಆಜೀವ ದಡಬಡಾಯಿಸಿ ಎದ್ದು ಕಾರು ನಿಲ್ಲಿಸು ಎಂದವನೇ ಕಣ್ಣು ಪಿಚ್ಚು ಒರೆಸಿಕೊಳ್ಳುತ್ತ, ಮುಖದಲ್ಲಿ ಎಲ್ಲಿಂದಲೋ ನಗು ಕಡ ತಂದು ಕಾರಿನ ಗಾಜು ಇಳಿಸಿ ಆಕಡೆ ಈಕಡೆ ಹಿಂದೆ ಮುಂದೆ ಮೇಲೆ ಕೆಳಗೆ ನೋಡುತ್ತ, ಇದ್ದಕ್ಕಿದ್ದವನೆ ಕೆಳಗಿಳಿದು, ಬಾಗಿ ನೆಲ ಮುಟ್ಟಿ ನಮಸ್ಕರಿಸಿ ಮೇಲೆದ್ದ.
ಬೀದಿ ದೀಪ ಹಚ್ಚಿಟ್ಟುಕೊಂಡು ಬಯಲೂರು ಮಲಗಿತ್ತು.
ಮೇಲುಮುದ್ದೆ ಮನೆಗಳು, ತಗಡಿನ ಮನೆಗಳು ಇದ್ದು, ಅವುಗಳ ನಡುವೆ ಸಿಮೆಂಟ್ ಮನೆಗಳು ನಾವೂ ಇದೀವಿ ಈ ಕುಗ್ರಾಮದಲ್ಲಿ ಎಂದು ತಲೆಮೇಲೆ ನೀರು ತುಂಬಿದ ಕಪ್ಪು, ಹಳದಿ ಬಣ್ಣದ ಸಿಂಟೆಕ್ಸ ಹೊತ್ತುಕೊಂಡು ಅಲ್ಲಲ್ಲಿ ನಿಂತಿದ್ದವು ಒಂದೊಂದು, ತಾಲೂಕಿನ ಬಾಗದಲ್ಲಿ ಸಿಗುವ ಬೆರಳೆಣಿಕೆಯಷ್ಟು ‘ಎಟಿಎಂ’ಗಳಂತೆ.
ಅಗಸಿ ಪಕ್ಕದಲ್ಲಿ ಒಂದು ಹುಲ್ಲಿನ ಗುಡಿಸಲು ಮಳೆ ಗಾಳಿಗೆ ಸಿಕ್ಕು ನೆಲಕ್ಕುರುಳಿ ಬಿದ್ದು ಎಷ್ಟೋ ವರ್ಷಗಳಾಗಿತ್ತು. ನೋಡುತ್ತ ಕಂಬನಿಗರೆಯುತ್ತ ಆಜೀವ ಏನೋ ನೆನೆದು ಆ ಕಡೆ ದೃಷ್ಟಿ ನೆಟ್ಟು ನಿಂತುಬಿಟ್ಟ.
ಡ್ರೈವರ್. . . . . ಸರ್ ಆ ಹಾಳು ಬಿದ್ದೋಗಿರೊ ಗುಡಿಸಲು ನೋಡಿ ಅಳುತ್ತ ನಿಂತಿರಲ್ಲ, ನಡಿರಿ ಸರ್ ಗೆಸ್ಟ್ ಹೌಸ್ ನಲ್ಲಿ ಆರಾಮಾಗಿ ನಿದ್ದೆ ಮಾಡುವ, ಸುಸ್ತಾಗಿದೆ ಎಂದ.
ಡ್ರೈವರ್ ರಾಮ್ ನನ್ನ ಕೋಪದಿಂದ ಹಿಂತಿರುಗಿ ನೋಡಿದ ಆಜೀವ, ರಾಮ್ ಇದು ಏನಂತ ಗೊತ್ತಾ ನಿನಗೆ? ಅಳುವಿನಿಂದ ಹೊರಬಂದು ಇದೇ. . ಇದೇ. . ರಾಮ್, ನಾ ಹುಟ್ಟಿ ಬೆಳೆದ ಮನೆ. ಇದು ನನಗೆ ಬರಿ ಮನೆ ಆಗಿರಲಿಲ್ಲ ಅರಮನೆಯಾಗಿತ್ತು. ಇದರಲ್ಲೇ ರಾಮ್ ನನ್ನ ತಾಯಿ ನನಗೆ ಜನ್ಮ ನೀಡಿದ್ದು.
ಅಲ್ಲಿ. . ಅಲ್ಲಿ ಕಾಣಿಸ್ತಿದೆಯಲ್ಲಾ ಆ ದೊಡ್ಡ ಉದ್ದ ಕಟ್ಟಿಗೆ ಅದಕ್ಕೆ ನಾ ಎತ್ತಿನ ಹಗ್ಗ ಕಟ್ಟಿ ಜೋಕಾಲಿ ಆಡಿದ್ದೀನಿ ರಾಮ್, ಅಂದು ನನ್ನ ಬಾರ ತಡೆಯುವಷ್ಟು ಅದು ಶಕ್ತಿಯುತವಾಗಿತ್ತು ನನ್ನ ಕೆಳಗೆ ಬೀಳದಂತೆ ತಡೆಯೊ ಶಕ್ತಿ ಇತ್ತು ಈಗ ನೋಡು ತನ್ನನ್ನ ತಾನೆ ರಕ್ಷಿಸಿಕೊಳ್ಳಲು ಆಗದೆ ಹೇಗೆ ಬಿದ್ದಿದೆ ಅಂತ, ಇಷ್ಟೇ ರಾಮ್ ಮನುಷ್ಯ ಕೂಡ ಅಷ್ಟೇ ಕೈಕಾಲಲ್ಲಿ ಶಕ್ತಿ ಇರೋವರೆಗು ಮಾತ್ರ. ಬಲ ನಮ್ಮಿಂದ ಜಾರಿದ ಮೇಲೆ ನಾವು ಮುರಿದು ಬಿದ್ದ ಆ ಕಟ್ಟಿಗೆಯಂತೆಯೆ ಅಷ್ಟೇ.
ಡ್ರೈವರ್ ಅಷ್ಟೊತ್ತು ಕೇಳಿ ಶಾಕ್ ನಿಂದ ಹೊರಬಂದು ಸರ್ ಏನ್ ಹೇಳ್ತಿದೀರಾ?. . . . ಇದು ನಿಮ್ಮನೆ ನಾ. . . . . ನಾ ನಂಬೋದಿಲ್ಲ ನಾ ನಿಮ್ಮ ಹತ್ತಿರ ಕೆಲಸ ಮಾಡಲು ಶುರುಮಾಡಿ 5ವರ್ಷ ಆಯ್ತು ಇದು ನಿಮ್ಮ ಊರು ಅನ್ನೋದಂತು ನಿಜ, ಆದ್ರೆ ನೀವು ಹಳ್ಳಿ ಮನೆ ಮಾರಿ ಪಟ್ಟಣಕ್ಕೆ ಬಂದು ವಾಸಮಾಡಿದ್ದಿರಾ ಅಂದ್ಕೊಂಡಿದ್ದೆ ನಾನು.
ಏನ್ ಕಥೆ ಸರ್ ನಿಮ್ದು ಇವತ್ತಿನ ಮಟ್ಟಿಗೆ ನೀವು ಕೊಟ್ಯಾದೀಶ್ವರರು ಅಂದು ನೀವು ಈ ಹಳ್ಳಿಯಲ್ಲಿ ಹೇಗಿದ್ರಿ ಮತ್ಯಾಕೆ ಈ ಹಳ್ಳಿ ಬಿಟ್ಟು ಪಟ್ಟಣಕ್ಕೆ ಬಂದ್ರಿ? ಹಾಗೆ ನಿಮಗೆ ನಿಮ್ಮ ಊರಿನವರೇ ನಾಳೆ ಸನ್ಮಾನ ಸಮಾರಂಭ ಏರ್ಪಡಿಸಿದ್ದಾರೆ. ನೀವು ಮೊನ್ನೆ ಹೇಳಿದ್ರಿ ನನಗೀಗಾಗಲೆ 50 ಕ್ಕಿಂತಲೂ ಹೆಚ್ಚು ಪ್ರಶಸ್ತಿ ಸನ್ಮಾನಗಳು ಸಂದಿವೆ ಆದ್ರೆ ನನಗೆ ನಮ್ಮ ಊರಿನಲ್ಲಿ ಸಿಗುವ ಸನ್ಮಾನ ತುಂಬಾ ವಿಶೇಷವಾದದ್ದು ರಾಮ್ ಅಂತಾ. ಏನಿದರ ವೈಶಿಷ್ಟ್ಯ ನಮಗೂ ತಿಳಿಯುವಂತೆ ಹೇಳಿ ಕೇಳುತ್ತೇನೆ ಎಂದ.
ರಾಮ್ ನಾನು ಇಂದು ಬಹಳ ಸಂತೋಷದಿಂದ ಇದಿನಿ. ಕಾರಣ ಏನ್ ಗೊತ್ತಾ?
ರಾಮ್: ಏನು ಹೇಳಿ ಸರ್!
ಆಜೀವ. . . . ಏನೋ ಸಾಧಿಸಿದವರಂತೆ ಸಣ್ಣ ನಗು ಚೂಬಿಟ್ಟು, ರಾಮ್ ನಮಗೆ ಅವಮಾನ ಆದ ಜಾಗದಲ್ಲೇ ನಾವು ಸನ್ಮಾನಿತರಾಗಬೇಕು.
ಹೇ. . . ಒಗಟೊಗಟಾಗಿದೆ ಬಿಡಿಸಿ ಹೇಳಿ ಸರ್ ಅರ್ಥ ಆಗ್ಲಿಲ್ಲ ಎಂದು ಹಸ್ತ ಅಲ್ಲಾಡಿಸಿದ.
ಅಲ್ಲೆ ಒಂದು ಪಾನ್ ಅಂಗಡಿ ಕಟ್ಟೆಮೇಲೆ ಕುಳಿತರು. ಆಜೀವ ಹೇಳಲು ಪ್ರಾರಂಭಿಸಿದ ನಾವೆಲ್ಲಾ ಹಳ್ಳಿಯಲ್ಲಿ ಹುಟ್ಟಿ ಬೆಳೆದವರು. ಒಂದೊಂದ ಗ್ರಾಮಕ್ಕೆ ತನ್ನದೇ ಆದ ನೀತಿ ನಿಯಮ ಕಟ್ಟಳೆಗಳಿರುತ್ತವೆ ರಾಮ್ ಎಂದ. ಹೌದು ಸರ್ ನಮ್ಮ ಊರಲ್ಲಿ ಮೊನ್ನೆ ನಾವು ಕುರುಬರಲ್ವ ನಾವೆಲ್ಲಾ ಸೇರಿ ಕನಕದಾಸರ ಜಯಂತಿ ಆಚರಿಸಲು ನಮ್ಮ ನಮ್ಮ ಜನಾ ಸೇರಿ ಸಭೆ ಮಾಡಿದ್ವಿ. ಅದು ಗೊತ್ತಾಗಿ ನಮ್ಮ ಊರ ಗೌಡ ನಮಗೆಲ್ಲ ಎಚ್ಚರಿಕೆ ಕೊಟ್ರು. ಅವ್ರು ಕುರುಬರ ಅದಾರ ಆದ್ರ ಅವ್ರು ಯಾರನ್ನೂ ಭೇಧಬಾವದಿ ನೋಡಂಗಿಲ್ಲ ಎಲ್ಲರು ಸಮಾನರಂತಾನ ನೋಡ್ತಾರೆ. ಕನಕದಾಸರು ಕಲಕುಲವೆಂದು ಏಕೆ ಹೊಡೆದಾಡುವಿರಿ ಕುಲದ ನೆಲೆಯನ್ನೇನಾದರು ಬಲ್ಲಿರಾ? ಅಂತ ಹೇಳಿದ್ದನ್ನೇ ಕಾರಣ ಇಟ್ಟುಕೊಂಡು ನಮ್ಮ ಊರಿನಲ್ಲಿ ಯಾವುದೇ ಆಚರಣೆ ಇದ್ರು ಎಲ್ಲಾರು ಸೇರಿ ಒಗ್ಗಟ್ಟಿನಿಂದ ಆಚರಿಸಬೇಕು ಅಂತ ತಾಕೀತು ಮಾಡ್ಯಾರ ರೀ ಸರ್. . . . ಎಂದು ಮಾತು ಮುಗಿಸುವಷ್ಟರಲ್ಲಿ ಬಾಟಲ್ ಮುಚ್ಚಳ ತೆರೆದು ಆಜೀವ ನೀರು ಬಾಯಲ್ಲಿ ಹಾಕಿ ಮುಕ್ಕಳಿಸಿ ತುಪಕ್ ಅಂತ ಉಗಿದವನೆ ಮಾತು ಆರಂಭಿಸಿದ.
ಹೌದು ರಾಮ್ ಒಂದೊಂದು ಊರಲ್ಲಿ ಒಂದೊಂದು ನಿಯಮ ಇರುತ್ತವೆ. ಹಾಗೆ ನಮ್ಮ ಬಯಲೂರು ಗ್ರಾಮದಲ್ಲಿ ನಿಯಮಗಳು ನನ್ನನ್ನ ಈ ಊರಿಂದಾನೆ ಬಹಿಷ್ಕಾರ ಹಾಕಿಸಿ ಬಿಟ್ಟಿದ್ದವು ಎನ್ನುವಾಗ ಕಥೆ ಬೆಳೆಯುತ್ತಿತ್ತು ಕತ್ತಲು ಸರಿಯುತ್ತಿತ್ತು ತೇರು ಬರುವಾಗ ಸರಿವ ಜನರಂತೆ.
ನಮ್ಮ ಊರ ನಿಯಮದ ಪ್ರಕಾರ ಯಾರು ಜೈಲಿಗೆ ಹೋಗಿ ಬರುತ್ತಾರೋ ಅವರನ್ನ ಊರ ನಿಯಮದ ಪ್ರಕಾರ ಬಹಿಷ್ಕಾರ ಹಾಕಲಾಗುತ್ತಿತ್ತು.
ಹೀಗೆ ನಮ್ಮ ಊರಲ್ಲಿ ಕೊಲೆಮಾಡಿ ಅತ್ಯಾಚಾರ ಮಾಡಿ ಧರ್ಮ ಜಾತಿ ಮೇಲು ಕೀಳು ಎಂಬಿತ್ಯಾದಿ ತನದಿಂದ ಜೈಲಿಗೆ ಹೋಗಿ ಬಂದವರನ್ನು ಊರಿಂದ ಬಹಿಷ್ಕಾರ ಹಾಕಲಾಗಿತ್ತು.
ಅದೇ ತರ ನಾನು ಒಂದು ದಿನ ಗಂಧದ ಮರ ಕಡಿದು ದಂಡ ಜೈಲುಶಿಕ್ಷೆ ಎರಡನ್ನು ಉಂಡು ಊರಿಗೆ ಬಂದೆ, ಆಗ ನಮ್ಮ ಹಳ್ಳಿ ನಿಯಮದ ಪ್ರಕಾರ ನನ್ನನ್ನ ಊರಿಂದ ಸಾಮೂಹಿಕ ಬಹಿಷ್ಕಾರ ಹಾಕಿದರು. ಆಗ ನನಗೆ 25ವರ್ಷ ವಯಸ್ಸು.
ಆ ಅವಮಾನ ತಾಳಲಾರದೇ ನನ್ನ ತಂದೆ-ತಾಯಿ ವಿಷಕುಡಿದು ಪ್ರಾಣಬಿಡು ಮುನ್ನ ನನ್ನ ಹತ್ತಿರ ಒಂದು ಭಾಷೆ ತೆಗೆದುಕೊಂಡರು ಅದೇನೆಂದರೇ,
ಮಗಾ ನಮ್ಮದು ಮುಗಿದ ಅಧ್ಯಾಯ ನೀನು ಬಾಳಿ ಬದುಕಬೇಕಾದವನು, ನೀನು ಏನಾದರು ಸಾಧಿಸಬೇಕು ಮಗಾ. . . . ನೀನು ಬಿದ್ದ ಮಣ್ಣಲ್ಲೇ ಮತ್ತೆ ಎದ್ದು ನಿಲ್ಲಬೇಕು ಮಗಾ. . . ಅವಮಾನ ಆದ ಜಾಗದಲ್ಲೇ ನಿನಗೆ ಸನ್ಮಾನ ಆಗಬೇಕು ಮಗಾ. . . ಇವುಗಳನ್ನು ಈಡೇರಿಸು ಮಗಾ, ಊರು ನನ್ನ ಬಹಿಷ್ಕಾರ ಹಾಕ್ತು ಅಂತ ಮತ್ತೆ ಕೆಟ್ಟತನದ ಕಡೆ ಯೋಚಿಸದೇ ಒಳ್ಳೆಯ ಕೆಲಸದ ಕಡೆ ಗಮನ ಹರಿಸು ಮಗಾ. . . ನಿನಗೆ ಒಳ್ಳೆ ಸಮಯ ಬಂದೇಬರುತ್ತೆ ನಿನ್ನಲ್ಲಿ ಶಾಂತಿ ನೆಮ್ಮದಿ ಸದ್ಗುಣ ಬೆಳೆಸಿಕೊಳ್ಳೋದೆ ಆದ್ರೆ ಮಾತ್ರ ಅಂತ ನಮ್ಮ ತಂದೆ ತಾಯಿ ಕಣ್ಣು ಮುಚ್ಚಿಬಿಟ್ರು ರಾಮ್. .
ಅಂದೇ ನಿರ್ಧಾರ ತಗೊಂಡೆ ಒಂದು ಸಾಧನೇ ಮಾಡಬೇಕು ಬಿದ್ದ ಜಾಗದಲ್ಲೇ ಮತ್ತೆ ಎದ್ದು ನಿಲ್ಲಬೇಕು ಅಂತಾ. ಆಗ ನನ್ನ ಮನಸಿನಲ್ಲಿ ಓಡಿದ ಆಲೋಚನೆ ಒಂದೆ. ನಾನ್ಯಾಕೆ ಮರಗಳನ್ನ ನೆಟ್ಟು ಬೆಳೆಸಬಾರದು ಅಂತ. ಆಗ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ನನಗೆ ಆದರ್ಶವಾಗಿ ನಿಂತರು. ಮದುವೆ ಮಾಡಿಕೊಂಡು ಮಕ್ಕಳು ನಮ್ಮನ್ನು ಸಾಕುತ್ತಾರೋ ಇಲ್ಲೊ ಗೊತ್ತಿಲ್ಲ, ಆ ಸುಖಕ್ಕಿಂತ ಈ ಸಾಹಸದ ಸುಖ ನನಗೆ ಇಷ್ಟವಾಯಿತು.
ಆಗ ನಾನು ಮೊದಲು ನನ್ನ ಕಾಲ ಮೇಲೆ ನಾನು ನಿಂತುಕೊಳ್ಳಲು ಶ್ರಮವಹಿಸಿ ದುಡಿದು ಹಣ ಸಂಪಾದನೆ ಆಯ್ತು, ಆಗ ಅದೇ ದುಡ್ಡು ಖರ್ಚು ಮಾಡಿ ಪ್ರತಿ ವರ್ಷವೂ 50 ಸಾವಿರ ಸಸಿಗಳನ್ನು ಹಚ್ಚಿ, ಬಿಡುವುದಲ್ಲದೇ ಅವುಗಳ ಸಂರಕ್ಷಣೆಗಾಗಿ 10ವರ್ಷಗಳಿಂದ ಶ್ರಮಿಸಿದ್ದೇನೆ.
ಎಲ್ಲೂ ಇಲ್ಲದ ಸುಖ ಶಾಂತಿ ನೆಮ್ಮದಿ ಈ ಪುಣ್ಯ ಕಾರ್ಯದಲ್ಲಿ ಕಂಡಿದ್ದೇನೆ.
ಡ್ರೈವರ್ ರಾಮ್ ಆಜೀವನನ್ನ ಕಣ್ಣು ಪಿಳುಕಿಸದೆ ನೋಡುತ್ತ ಅವನ ಬದುಕಿನ ಕಥಾ ಹಂದರವನ್ನು ಆಲಿಸುತ್ತಿದ್ದ.
ಅಷ್ಟೇ ಅಲ್ಲಾ ರಾಮ್ ನಿನಗೆ ಗೊತ್ತು ಎಷ್ಟೋ ರಾಷ್ಟ್ರಮಟ್ಟದ ಪ್ರಶಸ್ತಿಗಳು ನನ್ನನ್ನ ಹುಡುಕಿ ಬಂದಿವೆ. ಆದರೆ ಇವತ್ತೇನೊ ಒಂದು ಹೊಸತನ ರಾಮ್,
ನಾನು ಈ ಎಲ್ಲ ಪ್ರಶಸ್ತಿಗಳು ಸಿಗಲಿ ಅಂತ ಈ ಕೆಲಸ ಮಾಡಿಲ್ಲ ರಾಮ್ ನನ್ನ ತಂದೆ ತಾಯಿ ಏನಾದರು ಒಳ್ಳೆ ಕೆಲಸದ ಮೂಲಕ ನೀನು ಅವಮಾನ ಆದ ಜಾಗದಲ್ಲೇ ಮತ್ತೆ ಸನ್ಮಾನಿತನಾಗಬೇಕು ಎಂಬ ಅವರ ಆಸೆ ಕನಸನ್ನು ನಿಜ ಮಾಡಬೇಕು ಅಂತ ಈ ನಿರ್ಧಾರ ರಾಮ್.
ಅಷ್ಟೊತ್ತಿಗೆ ಹಕ್ಕಿಯ ಚಿಲಿಪಿಲಿ ನಸುಬೆಳಕು ಮೊಗ್ಗಿನಂತೆ ಅರಳುತಿತ್ತು. ಅವನ ಮುಖದಿ ಗೆಲುವಿನ ನಗುವಿತ್ತು.
ಆಗ ಡ್ರೈವರ್ ರಾಮ್ ಕಥೆ ಕೇಳಿ ನಿಮ್ಮ ತರ ದೃಢ ನಿರ್ಧಾರ ತೆಗೆದುಕೊಳ್ಳುವ ಪ್ರತಿಯೊಬ್ಬರು ಗೆಲ್ಲಬಹುದು ಅಂತಾ ಪ್ರೂ ಮಾಡದ್ರಿ ಸರ್. ನಿಮ್ಮೊಡನೆ ಡ್ರೈವರ್ ಆಗಿದಿನಲ್ಲ ಅಂತಾ ಹೆಮ್ಮೆ ಆಗ್ತಿದೆ ನನಗೆ.
ಎದ್ದೇಳಿ ಸರ್ ಅವಮಾನ ಆದ ಜಾಗದಲ್ಲೇ ಸನ್ಮಾನ ಮಾಡಿಸಿಕೊಳ್ಳುತ್ತಿರುವ ನಿಮ್ಮ ಸಾಧನೆಯ ಕಥೆ ಎಲ್ಲರಿಗು ತಲುಪಲಿ ಅವಮಾನ ಆಯಿತೆಂದು ಸಾವಿಗೆ ಶರಣಾಗುವ ಜಗತ್ತಿನ ಪ್ರತಿಯೊಬ್ಬರಿಗೂ ನಿಮ್ಮ ಕಥೆ ಸ್ಪೂರ್ತಿ ಆಗಲಿ ಎಂದ.
ಆಗ ಇಬ್ಬರು ಅಲ್ಲಿಂದ ಎದ್ದು ಗೆಸ್ಟ್ ಹೌಸ್ ಗೆ ಹೋಗಿ ರೆಡಿಯಾಗಿ ಕುಳಿತಿರುತ್ತಾರೆ. ಆಗ ಅದೇ ಊರಿನ ಗಣ್ಯರೆಲ್ಲ ಅಲ್ಲಿಗೆ ಹೋಗಿ ಆಜೀವನನ್ನ ತೆರೆದ ವಾಹನದಲ್ಲಿ ಕರೆತಂದು ಅವನಿಗೆ ಸನ್ಮಾನಿಸುತ್ತಾರೆ.
ಆಗ ಅದೇ ಊರಿನ ಹಿರಿಯನೊಬ್ಬ ಮಾತನಾಡಿ ಆಜೀವ ಅಂದು ಇದೇ ಊರಿಂದ ಬಹಿಷ್ಕಾರಗೊಂಡು ಹೊರ ಹೋದ ಒಬ್ಬ ವ್ಯಕ್ತಿ ಇಂದು ಇದೇ ಗ್ರಾಮದಲ್ಲಿ ಸನ್ಮಾನಿತರಾಗಬೇಕು ಎಂದರೇ ಎಂತಹ ಹೆಮ್ಮೆ. ಅವನ ತರಹ ಒಳ್ಳೆ ಗುಣಗಳಿಂದ ವ್ಯಕ್ತಿ ಸಮಾಜದಲ್ಲಿ ತಾನು ಅವಮಾನವಾದ ಜಾಗದಲ್ಲೇ ಸನ್ಮಾನಿತನಾಗಿ ನಿಲ್ಲಬೇಕು. ಆಗ ತಪ್ಪು ಮಾಡಿದ ವ್ಯಕ್ತಿ ಬದಲಾಗಲಿ ಅಂತಾ ಹಳ್ಳಿ ಮಾಡಿಕೊಂಡಿರುವ ನಿಯಮಗಳು ಸರ್ಕಾರ ಮಾಡಿರುವ ಜೈಲು ಅವುಕೆಲ್ಲ ಒಂದು ಅರ್ಥ ಸಿಗುತ್ತದೆ. ಇವುಗಳಿಂದ ಒಳ್ಳೆ ಪಾಠ ಕಲಿತು ಒಬ್ಬ ಆದರ್ಶ ವ್ಯಕ್ತಿಯಾಗಬೇಕು ಎಂಬ ಸದುದ್ದೇಶದಿಂದಲೇ ಈ ಕಾನೂನು ಇರುವುದು ಎಂದು ಆಜೀವನ ಸಾಧನೆಯನ್ನು ಕೊಂಡಾಡುತ್ತಾನೆ.
****
ಕಥೆಯ ತಾತ್ಪರ್ಯ ಇಷ್ಟೆ, ತಪ್ಪು ಮಾಡಿದ ಪ್ರತಿಯೊಬ್ಬರು ಈ ಕಥೆಯ ನಾಯಕನಂತೆ ಕೊಟ್ಟ ಶಿಕ್ಷೆಯಿಂದ ಧನಾತ್ಮಕ ಬದಲಾವಣೆ ಹೊಂದಬೇಕು. ಋನಾತ್ಮಕ ಬದಲಾವಣೆ ಆಗಬಾರದು. ಮತ್ತು ಅವಮಾನ ಆದ ಜಾಗದಲ್ಲೇ ಸನ್ಮಾನಿತರಾಗಲು ಪ್ರಯತ್ನಿಸಬೇಕು.
-ಅಯ್ಯಪ್ಪ ಕಂಬಾರ