ಕಲೆಗೋಸ್ಕರ ಜೀವನವನ್ನೆ ಮುಡಿಪಾಗಿಟ್ಟ ಅಮಟೂರ ದಂಪತಿಗಳು: ಅಶ್ಫಾಕ್ ಪೀರಜಾದೆ, ಧಾರವಾಡ

ಧಾರವಾಡ ಜಿಲ್ಲೆ ಮತ್ತು ತಾಲೂಕೀನ ಹಾರೋಬೆಳಡಿ ಗ್ರಾಮದ ವಾಸಿಗಳಾದ ವೀರಬಸಪ್ಪ ಅಮಟೂರ ಇವರು ವೃತ್ತಿಯಿಂದ ರೈತರಾದರು ದೊಡ್ಡಾಟ ಕಲಾವಿದರು. ಸರಳ ಸಜ್ಜನಿಕೆಯ ವ್ಯಕ್ತಿಯಾದ ವೀರಬಸಪ್ಪನ್ನವರು ದೋಡ್ಡಾಟದಲ್ಲಿ ಸ್ತ್ರೀ ಪಾತ್ರ ಮಾಡುವದರಲ್ಲಿ ನಿಷ್ಣಾತರು. ಅವರ ಅಭಿನಯಕ್ಕೆ ಮನಸೋಲದ ಕಲಾಸಕ್ತರೇ ಇಲ್ಲ ಎಂದರೆ ಅತಿಶಯೋಕ್ತಿಯಲ್ಲ. ಅವರು ಮುಖಕ್ಕೆ ಬಣ್ಣಬಳಿದುಕೊಂಡು ಸ್ತ್ರೀಪಾತ್ರದಲ್ಲಿ ಅಭಿನಯಸಲು ನಿಂತರೆಂದರೆ ಸಾಕು ಪ್ರೇಕ್ಷಕರಿಂದ ಸಿಳ್ಳೆ ಚಪ್ಪಾಳೆಗಳ ಸುರಿಮಳೆ ಆಗುತ್ತದೆ. ಅವರ ಭಾವಾಭಿನಯವಂತೂ ಕಣ್ಣಲ್ಲಿ ನೀರು ಬರಿಸುವಂಥದ್ದು.

ಸ್ಪುರದ್ರೂಪಿಯಾದ ವೀರಬಸಪ್ಪಗೆ ಅವರ ಶರೀರ ಮತ್ತು ಶಾರೀರಗಳೇ ಸಂಪತ್ತು. ತಮ್ಮ ಹದಿನೆಂಟನೇ ವಯಸ್ಸಿನಲ್ಲಿ ಆಕಸ್ಮಿಕವಾಗಿ ಪ್ರಥಮ ಬಾರಿಗೆ ಸ್ತ್ರೀ ಪಾತ್ರಕ್ಕೆ ಬಣ್ಣ ಹಚ್ಚಬೇಕಾದ ಪ್ರಸಂಗ ಉದ್ಭವಿಸಿತ್ತು. ಇವರ ಅಜ್ಜ ಒಬ್ಬರು ಹಿಮ್ಮ್ಯಾಳದ ಸಂಗೀತ ಕಲಾವಿದರು. ಇವರು ಕೆಲಸ ಮಾಡುತ್ತಿದ್ದ ದೊಡ್ಡಾಟ ಕಂಪನಿಯಲ್ಲಿ ಒಂದು ದಿನ ದೊಡ್ಡಾಟದಲ್ಲಿ ಅಧೀಕೃತವಾಗಿ ಅಭಿನಯಿಸಬೇಕಾದ ಸ್ತ್ರೀ ಪಾತ್ರಧಾರಿಯೊಬ್ಬರು ಗೈರು ಉಳಿದಾಗ ಪರ್ಯಾಯ ವ್ಯವಸ್ಥೆ ಮಾಡಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಅಗ ಅವರ ಅಜ್ಜ ವೀರಬಸು ಅವರನ್ನು ಒಪ್ಪಿಸಿ ಅವರ ಮುಖಕ್ಕೆ ಬಣ್ಣ ಹಚ್ಚಿ ಶಾರಧಾ ಪಾತ್ರಕ್ಕೆ ಅಭಿನಯಸಲು ಹಚ್ಚಿಯೇ ಬೀಡುತ್ತಾರೆ. ಶಾರದಾ ಪಾತ್ರದಲ್ಲಿ ಮಿಂಚಿದ ವೀರಬಸು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತಾರೆ. ಅಲ್ಲಿಂದ ಆರಂಭವಾದ ಅವರ ಬಣ್ಣದ ನಂಟು ಇಲ್ಲಿಯವರೆಗೆ ಅಂದರೆ ಇವರ ಈ ಐವತ್ತೇರಡನೇಯ ವರ್ಷಕ್ಕೂ ಮುಂದವರೆದಿದೆ. ಅದು ಅವರ ಪ್ರಾಣವಿರುವವರೆಗೂ ನಿಲ್ಲುವ ಪ್ರಶ್ನೆಯೇ ಇಲ್ಲ ಅನ್ನುತ್ತಾರೆ ವೀರಬಸು.

ಕಿರಾತಕ ಅರ್ಜುನ ಕಾಳಗ ದೊಡ್ಡಾಟದಲ್ಲಿ ಪಾರ್ವತಿ ಪಾತ್ರ, ನೀನೇ ಬಂಧನದಲ್ಲಿ ದ್ರೌಪದಿಯ ಪಾತ್ರ ಹೀಗೆ ಹತ್ತಾರು ಸ್ತ್ರೀ ಪಾತ್ರಗಳಲ್ಲಿ ಆಭಿನಯಸಿ ಸೈ ಅನಿಸಿಕೊಂಡಿದ್ದಾರೆ. ಅಲ್ಲದೇ ಪುರುಷ ಪಾತ್ರಗಳಲ್ಲಿಯೂ ತಮ್ಮ ಅಮೋಘವಾದ ಅಭಿನಯ ಕೊಟ್ಟು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅರ್ಜುನನ ಗರ್ವಭಂಗ ದೊಡ್ಡಾಟದಲ್ಲಿ ಹಣಮಂತನ ಪಾತ್ರ, ಕಿರಾತಕ ಅರ್ಜುನನ ಕಾಳಗದಲ್ಲಿ ಅಭಿಮನ್ಯುವಿನ ಪಾತ್ರ, ಹೀಗೆ ತಮ್ಮ ಹಲುವಾರು ಪುರುಷ ಪಾತ್ರಗಳಲ್ಲು ಅಭಿನಯಿಸುವ ಮುಖಾಂತರ ತಮ್ಮ ಕಲಾ ಸಿರಿವಂತಿಕೆಯನ್ನು ಮೆರದಿದ್ದಾರೆ. ಹೀಗಾಗಿ ಶ್ರೀ ವೀರಭದ್ರೇಶ್ವರ ದೊಡ್ಡಾಟ ಸಂಘ, ಹಾರೋಬೆಳವಡಿಯ ಕಲಾವಿದರು ಆಗಿರುವ ಇವರು ಕೇವಲ ಸಂಘದಲ್ಲಿ ಮಾತ್ರವಲ್ಲದೇ ಇನ್ನೂ ಹಲವು ಕಾರ್ಯಕ್ರಮಗಳಲ್ಲಿ, ಸಭೆ ಸಮಾರಂಭಗಳಲ್ಲಿ ಏಕಪಾತ್ರಭಿನಯ ಮಾಡುವ ಮೂಲಕವೂ ಜನರ ಮೆಚ್ಚುಗೆ ಸಂಪಾದಿಸಿದ್ದಾರೆ. ಆಕಾಶವಾಣಿ ಧಾರವಾಡ ಕೇಂದ್ರ ಮತ್ತು ದೂರದರ್ಶನ ಚಂದನದಲ್ಲೂ ನಾಲ್ಕಾರು ಬಾರಿ ಇವರ ಕಾರ್ಯಕ್ರಮಗಳು ಕೊಟ್ಟು ಕನ್ನಡ ಕಲಾರಸಿಕರಿಂದ ಮೆಚ್ಚುಗೆ ಸಂಪಾದಿಸಿದ್ದಾರೆ.

 

ಅವರ ಈ ಅಭಿನಯ ಚಾತುರ್ಯಕ್ಕೆ ಮನಸೋತು ಸಾಕಷ್ಟು ಸಂಘಸಂಸ್ಥೆಗಳು ಇವರಿಗೆ ಪ್ರಶಸ್ತಿ ಪುರಸ್ಕಾರಗಳು ಕೊಟ್ಟು ಸನ್ಮಾನಿಸಿವೆ. ಕೇರಳ – ಕರ್ನಾಟಕ ಉತ್ಸವದಲ್ಲಿ ಪಾಲ್ಗೊಂಡು ಕಾರ್ಯಕ್ರಮ ನೀಡಿದಾಗ ಕರಾವಳಿ ಸಾಂಸ್ಕೃತಿಕ ಪ್ರತಿಷ್ಟಾನ ಕಾಸರಗೋಡ ಇವರು ಇವರಿಗೆ ಸನ್ಮಾನಿಸಿ ಪ್ರಮಾಣ ಪತ್ರ ನೀಡಿದ್ದಾರೆ, ಕರ್ನಾಟಕ ನಾಟಕ ಅಕಾಡೆಮಿ ಇವರು ಆಯೋಜಿಸಿದ್ದ ನಾಟಕೋತ್ಸದಲ್ಲಿ ಭಾಗವಹಿಸಿ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮಾಲತಿ ಸುಧೀರ ಇವರಿಂದ ಪ್ರಮಾಣ ಪತ್ರ ಪಡೆದಿದ್ದಾರೆ, ಧಾರವಾಡ ಜಿಲ್ಲೆಯ ಲೋಕೂರ, ಆಯಟ್ಟಿ ಮುಂತಾದ ಊರುಗಳಲ್ಲಿ ಕಾರ್ಯಕ್ರಮ ಕೊಟ್ಟು ಕರ್ನಾಟಕ ಹಿತ ರಕ್ಷಣಾ ಸಂಘದಿಂದಲೂ ಇವರು ಸನ್ಮಾನ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇವರು ಅಭಿನಯಸಿದ ದೊಡ್ಡಾಟಗಳು ಆಡಿಯೋ ಕ್ಯಾಸೆಟ್ಟುಗಳಾಗಿ ಮನೆ ಮನೆ ತಲುಪಿರುವುದು ಇವರ ಹೆಗ್ಗಳಿಕೆಗಳಲ್ಲಿ ಒಂದು.

ಶ್ರೀ ವೀರಬಸು ಅಮಟೂರ ಅವರಂತೆ ಅವರ ಧರ್ಮಪತ್ನಿ ಶ್ರೀಮತಿ ರತ್ನವ್ವಾ ಅಮಟೂರ ಅವರು ಸಹ ತನ್ನ ಪತಿಯಂತೆ ಕಲೆಯ ದಾರಿಯಲ್ಲಿ ಸಾಗಿದವರು. ಅವರೊಬ್ಬರು ಸುಶ್ರ್ಯಾವ್ಯ ಕಂಠದ ಜಾನಪದ ಹಾಡುಗಾರ್ತಿ. ಹಾರೋಬೆಳವಡಿ ಗ್ರಾಮದ ಸುತ್ತ ಮುತ್ತಲಿನ ಹಳ್ಳಿಗಳಿಗೆಲ್ಲ ಇವರು ಚಿರಪರಿಚಿತರು. ಇವರು ಈ ಹಳ್ಳಿಗಳ ಮನೆಮನೆಯಲ್ಲಿ ಮಾತಾದವರು. ಮನೆಯಲ್ಲಿ ಯಾವುದೇ ಕಾರ್ಯಕ್ರಮಗಳಿರಲಿ ಇವರ ಮಧುರವಾದ ಕೋಗಿಲೆಕಂಠ ಮೊಳಗಲೇಬೇಕು. ಮದುವೆ ಸಮಾರಂಭಗಳಿರಲಿ, ಮಗುವಿನ ನಾಮಕರಣ ಸಮಾರಂಭವಿರಲಿ, ದೇವರ ಕಾರ್ಯವಿರಲಿ ಯಾವುದೇ ಕಾರ್ಯಕ್ರಮವಿದ್ದರೂ ಅವರ ಹಾಡು ಮಾತ್ರ ಇರಲೇಬೇಕು. ಸೋಭಾನ ಪದ, ಬೀಸೋ ಕಲ್ಲಿನ ಪದ, ಜೋಗುಳ ಪದ, ಮದುವೆ ಹಾಡುಗಳು ಇವರು ತುಂಬ ಪಧುರವಾಗಿ ಹಾಡಬಲ್ಲರು. ಮನೆಯಲ್ಲಿ ಹಾಡುತ್ತಿದ್ದ ತನ್ನ ಪತ್ನಿಯಲ್ಲಿ ಒಬ್ಬಳು ಕಲಾವಿದೆಯನ್ನು ಗುರುತಿಸಿದ ವೀರಬಸು ಅವರು ಅವರಿಗೆ ಪ್ರೋತ್ಸಾಹಿಸುವ ಮೂಲಕ ಅವರಲ್ಲಿ ಇನ್ನಷ್ಟು ಆತ್ಮವಿಶ್ವಾಸ ತುಂಬಿದರು. ಅವರು ತಾವು ಕಾರ್ಯಕ್ರಮ ನೀಡುತ್ತಿದ್ದ ಸಭೆ ಸಮಾರಂಭಗಳಲ್ಲಿ ಹಾಡುವ ಅವಕಾಶ ಕೊಡಿಸಿದರು. ಅವರು ಸದಸ್ಯತ್ವ ಪಡೆದಿದ್ದ ಕಲಾವಿದರ ಸಂಘಸಂಸ್ಥೆಗಳಲ್ಲಿ ಸದಸ್ಯೆಯನ್ನಾಗಿಸುವ ಮೂಲಕ ಅವರಿಗೆ ಇನ್ನಷ್ಟು ಅವಕಾಶ ಜನಪ್ರಿಯತೆ ಒದಗಿ ಬರುವಂತೆ ಮಾಡಿದರು. ಹೀಗೆ ಸತಿಪತಿಗಳಿಬ್ಬರೂ ಕಲೆಗಾಗಿ ತನ್ನ ಜೀವನವನ್ನೇ ಮುಡಪಾಗಿಟ್ಟವರು. ಇಬ್ಬರೂ ತಮ್ಮ ಕಲೆಯನ್ನು ಒಂದು ಸಮಾಜ ಸೇವೆ ಅನ್ನುವ ರೀತಿಯಲ್ಲಿ ಆರಾಧಿಸಿದವರು. ಅವರಿಗೆ ಯಾರೇ ಕರೆಯಲಿ ಇಲ್ಲವೆನ್ನದೇ ಕಾರ್ಯಕ್ರಮವನ್ನು ಕೊಟ್ಟು ಬರುತ್ತಾರೆ. ಗೌರವ ಧನ ಸಿಕ್ಕರೂ ಆಯ್ತು, ಸಿಗದಿದ್ದರೂ ಆಯ್ತು. ಸಿಕ್ಕಿದರಲ್ಲೆ ತೃಪ್ತಿ ಕಾಣುತ್ತಾರೆ.

ಬಡ ಕೃಷಿಕರಾಗಿರು ಈ ದಂಪತಿಗಳು ಇರುವ ಅಲ್ಪಸ್ವಲ್ಪ ಒಣಭೂಮಿಯಲ್ಲಿ ಬೆವರು ಸುರಿಸಿ ತಮ್ಮ ಕುಟುಂಬವನ್ನು ಕಾಪಾಡಬೇಕು. ಬಡತನದ ಕಾರಣ ಇವರು ಬುದುಕು ಸಾಗಿಸುವದು ಕಷ್ಟವಾಗಿದೆ. ಕಲೆ ಬದುಕಬೇಕೆಂದರೆ ಕಾಲಾವಿದರು ಬದುಕುಬೇಕು. ಕಲಾವಿದರನ್ನು ಜೀವಂತವಾಗಿರಸುವ ಜವಾಬ್ಧಾರಿ ನಮ್ಮ ಸರ್ಕಾರದ ಮೇಲಿದೆ. ಕಲೆಗಾಗಿ ತಮ್ಮ ಬದುಕನ್ನೇ ಸರ್ಮಪಿಸಿರುವ ಇಂಥ ಕಲಾವಿದರನ್ನು ಗುರುತಿಸಿ ಅವರ ಬದುಕಿಗೆ ಆಸರೆಯಾಗಬೇಕಾಗಿದೆ. ಕಷ್ಟದಲ್ಲಿ ಬದುಕುತ್ತಿರುವ, ಆರ್ಥಿಕವಾಗಿ ಕುಸಿಯುತ್ತಿರುವ ಅಮಟೂರ ದಂಪತಿಗಳಿಗೆ ಸಹಾಯಬೇಕಾಗಿದೆ. ಸರ್ಕಾರ ಮತ್ತು ಸಂಘಸಂಸ್ಥೆಗಳು ಇತ್ತ ಗಮನ ಹರಿಸಿಬೇಕಾಗಿದೆ. ವೀರಬಸು ಅಮಟೂರ ಅವರ ಮೊಬೈಲ್ ಸಂಖ್ಯೆ- 6360007460. ಸಹಾಯ ಮಾಡಬಯಸುವರು ಇದಕ್ಕೆ ಸಂಪರ್ಕಿಸಬಹುದು.

ಅಶ್ಫಾಕ್ ಪೀರಜಾದೆ, ಧಾರವಾಡ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x