ಪಂಜು ಕಾವ್ಯಧಾರೆ

ಹೆಣ್ಣೊಂದು ತಾಯ್ತನದ ಕಣ್ಣು
ಬಾಲ್ಯದಲಿ ಅಂಕುರ
ಬೆಳೆಯುತ್ತ ಹೂವು ಸುಮಧುರ
ಅಮ್ಮನಿಗೆ ಸಹೋದರಿ
ಅಪ್ಪನಿಗೆ ಭಾಗ್ಯದ ಗರಿ
ಮನೆ ಬೆಳಗುವ ಜ್ಯೋತಿ
ನೀನಿಲ್ಲದ ಜಗವೊಂದು ಭೀತಿ

ಹೆಣ್ಣೊಂದು ಅಗಾಧ ಶಕ್ತಿ
ಪವಾಡದಂತೆ, ಇದೊಂದು ಸೃಷ್ಟಿ
ಒಲಿದರೆ ನಾರಿ ಮುನಿದರೆ ಮಾರಿ
ಈ ಗಾಧೆಗೆ ಸರಿ ಸಾಟಿ ಬರೋಬರಿ
ಸಂಗೀತ ಸಾಹಿತ್ಯ ದೇವತೆ
ಸುಂದರ, ನಯನ ಮನೋಹರ
ನೀನಿಲ್ಲದ ಯುಗವೇ ಅವನತಿ

ಹೆಣ್ಣೊಂದು ಭಕ್ತಿ, ಕೈ ಮುಗಿಯಲು
ಜನ್ಮ ದಾತೆಯ ರೂಪ ಸದಾ ಮಿಗಿಲು
ಒಡಲ ಪ್ರೀತಿಯ ಸಾರುವ ಪ್ರೇಮಗಾರ್ತಿ
ಎಲ್ಲೆಂದರಲ್ಲಿ ಶ್ರೇಷ್ಠ ಬಹುರೂಪಿ
ಆಸರೆ, ಆರೋಗ್ಯ, ಆಲಯ ನೀನು
ಪ್ರತಿ ಜೀವಿಯ ಬದುಕಲೂ ಕಾಮಧೇನು
ನೀನಿಲ್ಲದ ಸ್ವರ್ಗವೂ ಕೂಡ ಕುರುಡ

ದೇವತೆ, ಹೆರುವ ಸಲಹುವ ಸೌಖ್ಯದಾತೆ
ಮಾರ್ಗದರ್ಶಿ, ನನ ಹೆಜ್ಜೆ ಗುರುತು ಬಲ್ಲ
ಪ್ರತ್ಯಕ್ಷ ದರ್ಶಿ
ನನ ನಡೆಸುವ, ಮನ ತಣಿಸುವ
ನೋವ ಮರೆಸುವ ಸಂಗೀತ
ನೀನಿಲ್ಲದ ಮಣ್ಣಲೂ ಪಕ್ವತೆ ಇಲ್ಲ

-ಅರುಣ್ ಕೊಪ್ಪ

 

 

 

 


ಮನಸಾಗರ
ಸಾಗರವೆಂದರೆ ಅದೇನೋ ಪ್ರೀತಿ!!
ನನ್ನುಸಿರ ಏರಿಳಿತದ ರೀತಿ!!

ಓ ಸಾಗರವೇ,,

ವಿಶಾಲವೆನಿಸುವೆ ನೀ ಇತ್ತಿಂದತ್ತ
ಕಣ್ಣು ಹಾಯಿಸಿದಷ್ಟು..
ಮತ್ತೆ-ಮತ್ತೆ ಬಂದು ಬಡಿವುದು
ಆ ನಿನ್ನ ಅಲೆಯೊಂದು
ಎತ್ತೆತ್ತಲೋ ಓಡಾಡುವ
ನನ್ನೀ ಸಂಕುಚಿತ ಮನಸ ಒಂದೆಡೆ
ಹಿಡಿದಿಟ್ಟು ಹಾ,,,,ಯೆನಿಸುವಷ್ಟು..
ಓ ಸಾಗರವೇ ನಿನ್ನಂತಾಗಬೇಕು ನಾ!!

ಸುಮ್ಮನೇ ಹಾಗೆ ಕಿವಿಗಾನಿಸಿದರೆ
ದಡಕೆ ಬಂದು ಬಡಿವ
ನಿನ್ನಲೆಗಳ ಭೋರ್ಗರೆತ
ಎಂದೋ ಮರೆತ
ಸಾವಿರ ಭಾವ-ಲಹರಿಯ
ಬಡಿದೆಬ್ಬಿಸಿದಂತೆ,,
ಸದ್ದಿಲ್ಲದೆ ಹಿಂದಿರುಗಿ ಮತ್ತೆ
ನಿನ್ನನೇ ಸೇರುವ ಪರಿಯೊಂದು
ಹಿಡಿತವಿರಲೊಂದು ಮನದ
ಭಾವತರಂಗಗಳ ಮೇಲೆಂದು
ಗುಟ್ಟು ಹೇಳಿದಂತೆ……
ಓ ಸಾಗರವೇ ನಿನ್ನಂತಾಗಬೇಕು ನಾ!!

ಏನೇನಿದೆ ಆ ನಿನ್ನ ಒಡಲೊಳಗೆ???
ಮುತ್ತುಗಳೇ? ಹವಳಗಳೇ?
ಎಂದೋ ಮುಳುಗಿದ ಹಡಗಲಿದ್ದವರ
ಪಳೆಯುಳಿಕೆಗಳೇ???
ಅಂತರಾಳದಿ ಅದೆಷ್ಟೋ
ಗುಟ್ಟುಗಳ ಮುಚ್ಚಿಟ್ಟು,
ಸೂರ್ಯನ ಚಿನ್ನದ ಅಂಚಿನಿಂದ
ಮೇಲ್ಗಡೆ ಮೌನವಾಗಿ
ಫಳ-ಫಳ ಹೊಳೆವ
ಓ ನನ್ನ ಶರಧಿಯೇ,,
ಎಂದೋ ಕಲಕಿದ ಮನದ ರಾಡಿಯು
ತಿಳಿಯಾಗುವುದು ನಿನ್ನ ನೋಡಿಯೇ….
ಓ ಸಾಗರವೇ ನಿನ್ನಂತಾಗಬೇಕು ನಾ!!

ನೂರಾರು ಹೆಸರಿರುವ ನದಿಗಳೆಲ್ಲ
ಹರಿದರಿದು ನಿನ್ನೊಡಲ ಸೇರಿ ಬೆರೆತರೂ
ಓ ಕಡಲೇ,
ನಿನ್ ಹೆಸರ ನೀ ಬಿಟ್ಟುಕೊಡಲೊಲ್ಲದ
ನಿನ್ನಂತಾಗಬೇಕು ನಾ!!
ಅಪೂರ್ವ, ಅಧ್ಬುತ, ಅಚಲ,
ಸೌಂದರ್ಯ, ರಹಸ್ಯ ನೀ…
ನಿನ್ನಂತಾಗುವೆನೆ ನಾ???
-ಆಶಾ ಹೆಗಡೆ

 

 

 

 


ತಂದೆಯೊಬ್ಬನ ಬಯಕೆ

ಧೈರ್ಯ ಸಾಹಸಗಳಿಂದ
ಕ್ಷಣ ಕ್ಷಣವೂ ಹುರಿದುಂಬಿ
ಗಂಡೆದೆಯ ಗುಂಡಿಗೆ
ಕಣ ಕಣದಲ್ಲಿಯೂ ತುಂಬಿ
ದೇಶಭಕ್ತಿಯ ಎಲ್ಲೆಡೆ ಪಸರಿಸಿ
ಹೆಮ್ಮೆಯಿಂದ ಬೆಳೆಸುವೆ ನಾನು
ಓ ಭಾರತಾಂಬೆಯ ಕುಡಿಯೇ
ವೀರಯೋಧನೇ ಆಗಬೇಕು ನೀನು

ಮನವನ್ನು ಹುರಿಗೊಳಿಸಿ
ಉಕ್ಕಿನ ದೇಹವ ಪಡೆ
ಹಿಂತಿರುಗಿ ನೋಡದೆ
ಸರ್ವಸನ್ನದನಾಗಿ ಮುನ್ನಡೆ
ಏನೇ ಇರಲಿ ನೋವು
ಕುಟುಂಬವೇನಿದ್ದರೂ ಆಮೇಲೂ
ಅಲ್ಲಿ ಆದಾರಾಗಲಿ ಕಷ್ಟ
ದೇಶವೇ ಮೊದಲು

ಮದ್ದುಗುಂಡು ಶೆಲ್ಗಳ ದಾಳಿ
ಆದರೂ ನಿತ್ಯದ ಸುಪ್ರಬಾತ
ಮೈ ಕೊರೆಯುವ ಚಳಿಯಲ್ಲೂ
ಹರಿದರಿದು ಕುದಿಯುತ್ತಿರಲಿ ರಕ್ತ
ಸುರಿಮಳೆಯಾಗಿ ಭೂಕುಸಿತವಾದರೂ
ಮಂಜುಗಟ್ಟಿ ಹಿಮವೇ ಸುರಿದಷ್ಟು
ನಿರಂತರ ಕಠಿಣವಾಗುತ್ತಿರು
ನೀ ಅಲುಗದೆ ಆಗದಷ್ಟು

ಸ್ವಾರ್ಥ ಲಾಭಾಸೆಗಳ ಬಿಟ್ಟು
ಸಕಲ ವ್ಯಾಮೋಹಗಳ ಮೆಟ್ಟು
ಇಂವ ನಮ್ಮವನೆನ್ನುವಂತೆ
ಪ್ರತಿ ಭಾರತೀಯರ ಎದೆಯನ್ನು ತಟ್ಟು
ಅಡ್ಡಿಯಿಲ್ಲ ಪ್ರಾಣವೇ ಹೋದರೂ
ಚರಿತ್ರೆಯೇ ಆಗಬೇಕು ಸಾವು
ನಿನ್ನಂತಹ ಮಗನ ಹೆತ್ತ
ಪುಣ್ಯವಂತರೇ ಆಗಬೇಕು ನಾವು

-ಬಸವರಾಜ ಕಾಸೆ

 

 

 

 


ಗಜ಼ಲ್

ನನ್ನ ಹೃದಯದಲ್ಲಿ ಇಳಿದು ಹೋದನು ರವಿ
ಅಂಧಕಾರದಲ್ಲಿ ಅರಳಿ ಹೋದನು ರವಿ

ಬೆಳಕಿನ ಪಾಠ ಹೇಳಿ ಕೊಟ್ಟು ನಮಗೆ
ಸ್ವತಃ ತಾನೇ ಕತ್ತಲೆ ಮನೆಗೆ ಹೋದನು ರವಿ

ಮುಂಜಾನೆ ಮರಳಿ ಬರುವ ಭಾಷೆ ಕೊಟ್ಟು
ಓಹೋ ಅದಹೇಗೆ ಮರೆತು ಹೋದನು ರವಿ

ಬೆಳದಿಂಗಳ ಬಿಂಬ, ಚಂದಿರ ಕನ್ನಡಿ ಹೋಗುವಾಗ
ಕನ್ನಡಿಯಲಿ ಸಿಂಗರಿಸಿಕೊಂಡು ಹೋದನು ರವಿ

ಅಸ್ತಮಿಸೊ ಹೊತ್ತು ಎಷ್ಟೊಂದು ಹಳದಿಯಾಗಿದ್ದ
ಜನರೆಲ್ಲ ಭಾವಿಸಿದರು ಸತ್ತೇ ಹೋದನು ರವಿ.

ಮೂಲ; ಜಾವೇದ ಅಖ್ತರ್
ಅನುವಾದ; ಅಶ್ಫಾಕ್ ಪೀರಜಾದೆ.

 

 

 

 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x