ಅವನ ಹೆಸರೇ ಜೇಮ್ಸ್…: ಗುರುಪ್ರಸಾದ್ ಕುರ್ತಕೋಟಿ

(ಇಲ್ಲಿಯವರೆಗೆ)
ಅಂತೂ ಅಮೆರಿಕಾದಲ್ಲಿ ಬೆಳಗಾಗಿತ್ತು! ಜಾನು ಆ ಸುಸಜ್ಜಿತವಾದ ಫ್ಲಾಟ್ ನ ಒಂದು ಸುತ್ತು ತಿರುಗಿ ಎಲ್ಲವನ್ನೂ  ಪರೀಕ್ಷಿಸುತ್ತಿದ್ದಳು. ಬಟ್ಟೆ ಒಗೆದು, ಒಣಗಿಸುವ ಯಂತ್ರವಿದ್ದದ್ದು  ಅಷ್ಟು ವಿಶೇಷವೆನಿಸದಿದ್ದರೂ  ಪಾತ್ರೆ ತೊಳೆಯುವ ಯಂತ್ರ ಗಮನ ಸೆಳೆಯಿತು. ಸಧ್ಯ ಕೆಲಸದವಳನ್ನು ಕಾಯುವ, ಓಲೈಸುವ ಚಿಂತೆಯಿಲ್ಲವೆನ್ನುವ ಸಮಾಧಾನ ಅವಳಿಗೆ. ಅಡಿಗೆ ಮನೆಯಲ್ಲಿ ಓವನ್, ಹೀಟರ್, ಇಂಡಕ್ಶನ್ ಓಲೆಗಳ ಜೊತೆಗೆ ಸೌಟು, ಪಾತ್ರೆ ಪಗಡಗಳೆಲ್ಲವೂ  ಇದ್ದದ್ದು ಖುಷಿಯಾಯ್ತಾದರೂ ಅಲ್ಲೆಲ್ಲೂ ಲಟ್ಟಣಿಗೆ ಕಾಣದೇ ಅವಳು ಚಿಂತೆಗೊಳಗಾದಳು. ಆಗಲೇ ಸ್ನಾನ ಮುಗಿಸಿ ಬಂದಿದ್ದ ವೆಂಕಣ್ಣ ಇವಳ ಮುಖಭಾವವನ್ನು ಗಮನಿಸಿ, ಲಟ್ಟಣಿಗೆಯ ಸುದ್ದಿ ಕೇಳಿ ಬಿದ್ದು ಬಿದ್ದು ನಕ್ಕ. 

"ನನ್ನ ತಲಿಗೆ ಹೊಡಿಲಿಕ್ಕೆ ಇಲ್ಲೇ ಬೇಕಂದ್ರ ಬ್ಯಾರೆ ಏನರೆ ಕೊಡಸ್ತೀನಿ, ಲಟ್ಟಣಿಗೆ ಇಲ್ಲ ಅಂತ ತಲಿ ಕೆಡಿಸ್ಕೊಬ್ಯಾಡ" ಅಂದದ್ದಕ್ಕೆ… 
"ನಿಮ್ಮ ತಲಿ! ಚಪಾತಿ ಹೆಂಗ ಲಟ್ಟಸೋದು ಅಂತ ನನಗ ಚಿಂತಿ ಇದ್ರ ನಿಮಗ ನಿಮ್ಮ ತಲಿ ಚಿಂತಿ.."
"ಅಲ್ಲಲೇ ಇಲ್ಲೇ ಯಾರೂ ಚಪಾತಿ ಮಾಡಂಗಿಲ್ಲ ಅದಕ್ಕ ಅವ್ರ ಅಡಿಗಿ ಮನ್ಯಾಗ ಅದು ಇರಂಗಿಲ್ಲ ತಿಳ್ಕೋ. ಇದ ನೋಡು ಬ್ಯಾಡ ಅನ್ನೋದು. ಇರೋದು ಬಿಟ್ಟು ಇರಲಾರದ್ದರ ಬಗ್ಗೆ ತಲಿ ಕೆಡ್ಸಕೊಬಾರ್ದೂ" ಅಂತ ದೊಡ್ಡ ತತ್ವಜ್ಞಾನವ ಅರುಹಿ…ಹಾಗೆ ಮುಂದುವರಿದು "ಅಮೆರಿಕಾದಾಗ ಇದ್ದಾಗ ಇಲ್ಲಿ ಎಲ್ಲಾರೂ ಇರೂ ಹಂಗ ನಾವ್ ಇರ್ಬೇಕು. ಒಂದ ತಿಂಗಳ ಚಪಾತಿ ತಿಂದಿಲ್ಲ ಅಂದ್ರ ಏನ್ ಧಾಡಿ ಆಗಂಗಿಲ್ಲ" ಅಂತ ಖಡಾ ಖಂಡಿತವಾಗಿ ತನ್ನ ವಿಚಾರ ಧಾರೆ ತಿಳಿಸಿದ.
"ಹಂಗಂದ್ರ ಇಲ್ಲಿಯವರ ಹಂಗ ನಾವೂ ಹಂದಿ, ದನಾ ತಿನ್ಬೇಕು ಅಂತೀರೇನು?" ಅಂದು ವೆಂಕಣ್ಣನ ಬಾಯಿಗೆ ಬೀಗ ಹಾಕಿದಳು. ಅವನು ತೆಪ್ಪಗೆ ಅಂಗಿ ಚಣ್ಣ ಹಾಕಿಕೊಂಡು ಆಫಿಸಿಗೆ ತೆರಳಿದ.          

*****

ವೆಂಕಣ್ಣ ಆಫೀಸಿಗೆ ದರ್ಶನ ನೀಡಿದಾಗ ಇವನ ಕ್ಲೈಂಟ್ ಜೇಮ್ಸ್ ತನ್ನ ಚೇಂಬರ್ ನಲ್ಲಿ ಕೂತು ಏನೋ ಜಗಿಯುತ್ತಿದ್ದ. ತನ್ನ ಮಾಮೂಲಿ ಅಮೆರಿಕಾದ ಶೈಲಿಯಲ್ಲಿ ಇವನ ಬರಮಾಡಿಕೊಂಡು ಕೈ ಕುಲುಕಿ ಇಲ್ಲದ ಸಂಭ್ರಮವನ್ನು ತೋರಿಸಿದ! ಉಭಯ ಕುಶಲೋಪರಿಗಳಾದವು. ಮೊದಲನೇ ದಿನವೇ ಕೆಲಸದ ಬಗ್ಗೆ ಮಾತಾಡುವುದು ವೆಂಕಣ್ಣನಿಗೂ ಬೇಡವಾಗಿತ್ತು. ಹಾಗೆ ತವಡು ಕುಟ್ಟುತ್ತ ಅವನ ಹವ್ಯಾಸಗಳ ಬಗ್ಗೆ ಕೇಳತೊಡಗಿದ. ಜೇಮ್ಸ್ ಸಾಹಸ ಪ್ರವೃತ್ತಿಯವನಾಗಿದ್ದು ಅವನ ಮಾತುಗಳಿಂದ ಸ್ಪಷ್ಟವಾಯ್ತು. ತನ್ನ ಸಾಹಸಗಾಥೆಯನ್ನು ಮುಂದುವರಿಸುತ್ತಾ…      

"ನಾನವಾಗ ಸುಮಾರು ಹದಿನಾರು ವಯಸ್ಸಿನ ಹುಡುಗ" ಅಂತ ಹೇಳುತ್ತಾ ತನ್ನ ನೀಳವಾದ, ಚಿನ್ನದ ಎಳೆಗಳಂತಿದ್ದ ಕೂದಲನ್ನು ಕೈಯಿಂದ ಸರಿಮಾಡಿಕೊಳ್ಳುತ್ತ ಹೇಳಿದ. ಸೂರನ್ನು ಎವೆಯಿಕ್ಕದೆ ದೃಷ್ಟಿಸುತ್ತಿದ್ದ ಅವನ ನೀಲಿ ಕಣ್ಣುಗಳು ತನ್ನದೇ ಭೂತಕಾಲದ ಸಿನಿಮಾ ನೋಡುತ್ತಿದ್ದದ್ದು ಸ್ಪಷ್ಟವಾಗಿತ್ತು. ಮುಂದುವರಿಸಿದ… 
"… ನಾನವತ್ತು ಡರ್ಟ್ ಬೈಕಿಂಗ್ ಮಾಡೊಕೆ ಹೋಗಿದ್ದೆ. ಇಲ್ಲೆ ಹತ್ತಿರದ ಮರುಭೂಮಿಯದು. ಬೆಟ್ಟವೇರಿ ಮೇಲೆ ಹೋಗಿದ್ದವನಿಗೆ, ಕೆಳಗಿಳಿಯುವಾಗ ಇನ್ನೂ ಜೋರಾಗಿ ಇಳಿಯುವ ಉಮೇದಿ. ಆ ಉಮೇದಿಯಲ್ಲಿ ನನ್ನ ಬೈಕಿನ ಗಾಲಿಗೆ ತೊಡರಿದ ಆ ಕಲ್ಲು ನನಗೆ ಕಂಡೆ ಇಲ್ಲ. ಉರುಳುರುಳಿ ಬಿದ್ದೆ. ನನ್ನ ಹೆಲ್ಮೇಟು ತುಂಡು ತುಂಡಾಗಿತ್ತು. ಅದರ ಜೊತೆಗೆ ನನ್ನ ಕೆಳ ದವಡೆಯ ಹಲ್ಲುಗಳೂ ಕೂಡ. ನಾನು ಬದುಕಿದ್ದೆ ಒಂದು ಪವಾಡ" ಅಂತ ಹೇಳಿಕೊಂಡು ಗಹಗಹಿಸಿ ನಗುತ್ತಿದ್ದ. ಡರ್ಟ್ ಬೈಕಿಂಗ್ ಅಂದ್ರೆ  ಕುರುಚಲು ಗಿಡಗಳು ಬೆಳೆದ ಮರುಭೂಮಿಯಂತಹ, ಏರಿಳಿತದ ವಿಶಾಲ ಭೂಮಿಯಲ್ಲಿ, ಕುರ್ರೋ ಮರ್ರೋ ಎಂದು ಕೂಗುವ ಬಗೆ ಬಗೆಯ ಬೈಕುಗಳನ್ನು ಓಡಿಸುವುದು ಅಂತ ವೆಂಕಣ್ಣನಿಗೆ ಮೊದಲೇ ಗೊತ್ತಿತ್ತು. ಅದರ ಬಗ್ಗೆ ಮತ್ತೆ ಏನಾದರೂ ಹೇಳಲು ಶುರು ಮಾಡಬಹುದೆಂದು, ಮಾತು ಬದಲಿಸುವ ಪ್ರಯತ್ನದಲ್ಲಿ…
"ನಿನಗೆ ವಯಸ್ಸೆಷ್ಟು ಜೇಮ್ಸ್?" ಅರವತ್ತಾದ್ರೂ ಆಗಿರಲೇಬೇಕು ಅನ್ನುವ ಕುತುಹಲದಿಂದ ಕೇಳಿದ.
ಅವನು "ಐವತ್ಮೂರು" ಅಂದದ್ದು ಕೇಳಿ ಆಶ್ಚರ್ಯಪಟ್ಟು ಅರೇ ಇವನೆಷ್ಟು ವಯಸ್ಸಾದವ್ನ ಥರ ಕಾಣ್ತಾನೆ! ಇಲ್ಲಿ ಬೆಳವಣಿಗೆ ತುಂಬಾ ಜಾಸ್ತಿ. ಅದಕ್ಕೆ ನಮಗಿಂತ ಒಂದ್ ಹತ್ತು ವರ್ಷ ಜಾಸ್ತಿನೇ ಕಾಣ್ತಾರೇನೋ ಅಂದುಕೊಂಡ ಇವನು.  

"ಎಷ್ಟು ಮಕ್ಳು?"
"ನನಗೆ ಇಬ್ಬರು ಹೆಂಡತಿಯರು. ಒಟ್ಟು ನಾಲ್ಕು ಮಕ್ಕಳು. ಇಬ್ಬರು ಹೆಣ್ಣು ಮಕ್ಳು. ಒಬ್ಬಳದು ಮದುವೆ ಆಗಿದೆ. ಅವಳು ತನ್ನ ಗಂಡನ ಜೊತೆಗೆ ನನ್ನ ಮನೆಯಲ್ಲೇ ಇರ್ತಾಳೆ" 
ಓಹ್ ಇಲ್ಲೂ ಮನೆ ಅಳಿಯ ಸಂಸ್ಕೃತಿ ಇದೆಯಾ? ಇವನಿಗೆ ಆಶ್ಚರ್ಯವಾಗಿತ್ತು. 
"… ಇನ್ನೊಬ್ಳು ಮಗಳಿಗೆ ಇಪ್ಪತ್ತು ವರ್ಷ ವಯಸ್ಸು. ಅವಳಿಗಿನ್ನೂ ಮದುವೆಯಾಗಿಲ್ಲ. ಅವಳು ಬೇರೆ ಮನೆ ಮಾಡಿಕೊಂಡಿದ್ದಾಳೆ" 
ವಾಹ್! ಇದೇ ಅಲ್ವೆ ನಮಗೂ ಇವರಿಗೂ ಇರುವ ವ್ಯತ್ಯಾಸ! ಮದುವೆಯಾಗದ ಹೆಣ್ಣು ಮಗಳು ಭಾರತದಲ್ಲಿ ಅಪ್ಪನ ಮನೆಯಲ್ಲಿರುತ್ತಾಳೆ, ಇಲ್ಲಿ ನೋಡಿದರೆ ಇವನ ಅವಿವಾಹಿತ ಮಗಳು ಬೇರೆ ಮನೆ ಮಾಡಿಕೊಂಡಿದ್ದಾಳೆ. ನಾವು ಮದುವೆಯಾದ ಮಗಳನ್ನು ಗಂಡನ ಮನೆಗೆ ಕಳಿಸುತ್ತೇವೆ, ಆದರೆ ಇಲ್ಲಿ ಮದುವೆಯಾದವಳು ಗಂಡನ ಜೊತೆಯಲ್ಲೇ ತನ್ನ ಅಪ್ಪನ ಮನೆಯಲ್ಲಿದ್ದಾಳಂತೆ! ಇಲ್ಲಿಯ ಸಂಸ್ಕೃತಿ ತುಂಬಾ ಆಸಕ್ತಿದಾಯಕವಾಗಿದೆ ಅನಿಸಿತವನಿಗೆ. 

"…ಇಬ್ರು ಗಂಡು ಮಕ್ಕಳು ಇದ್ದಾರೆ. ಇನ್ನೂ ಕಲೀತಿದಾರೆ."
"ನಿನಗೆಷ್ಟು ಮಕ್ಕಳು?" ಜೇಮ್ಸ್ ಇವನಿಗೆ ಕೇಳಿದ. ಇವನು ತುಂಬಾ ಕೀಳರಿಮೆಯಲ್ಲಿದ್ದ! ಅವನ ಸಾಧನೆ ಮುಂದೆ ತಂದೇನೂ ಅಲ್ಲ ಅನಿಸಿತ್ತು.
"ಒಬ್ಳೇ ಹೆಂಡ್ತಿ, ಒಬ್ಳೆ ಮಗಳು" ಅಂದ. ಅವನು ನಕ್ಕು ಸುಮ್ಮನಾದ.
"ನನಗೆ ಓಡೋದು ಅಂದ್ರೆ ತುಂಬಾ ಇಷ್ಟ. ಒಂದು ಟೈಮಿನಲ್ಲಿ, ದಿನಕ್ಕೆ ೧೦ ಮೈಲಿ ಓಡುತ್ತಿದ್ದೆ." ೧೦ ಮೈಲಿಯಂದ್ರೆ ಹೆಚ್ಚು ಕಡಿಮೆ ೧೬ ಕಿಲೋಮೀಟರ್! ಇವನು ಸುಮ್ನೆ ರೈಲು ಬಿಡ್ತಿರಬಹುದೆ ಅನಿಸ್ತು ಇವನಿಗೆ. 

"…. ಸೈಕಲ್ಲು ಓಡಸ್ತಿದ್ದೆ. ಒಂದು ಸಲ ನಾನು ಏಷ್ಟು ವೇಗವಾಗಿ ಓಡಿಸ್ತಿದ್ದೆ ಅಂದ್ರೆ. ಆ ರಸ್ತೆಯ ವೇಗ ಮಿತಿಯನ್ನು ಮೀರಿದ್ದೆ. ಪೋಲಿಸ್ ನನ್ನ ಹಿಡಿದು ಎಚ್ಚರಿಕೆ ಕೊಟ್ಟಿದ್ದ. ಸ್ವಲ್ಪ ದಿನ ನಾನು ಕುದುರೆ ಓಡ್ಸೋ ಟ್ರೇನಿಂಗೂ ಕೊಡ್ತಿದ್ದೆ."  

ಹಾಗೆ ಹೇಳುತ್ತಾ ತನ್ನ ಎರಡೂ ಕಾಲುಗಳನ್ನು ತನ್ನ ಡೆಸ್ಕಿನ ಮೇಲೆ ಅನಾಮತ್ತಾಗಿಟ್ಟ. ದುರಾದೃಷ್ಟಕ್ಕೆ ಅವನೆದುರೇ ಇವನು ಕುಂತಿದ್ದನಲ್ಲ! ಅವನ ಕಾಲುಗಳು ಹೆಚ್ಚು ಕಡಿಮೆ ಇವನ ಮುಂದೇಯೇ ಇದ್ದವು! ಅವರಿಗದು ಮಾಮೂಲಿ, ಆದರೆ ಇವನಿಗೆ ಅದು ಸರಿ ಹೋಗಬೇಕಲ್ಲ! 
ಇವನು ಪಕ್ಕದಲ್ಲಿದ್ದ ಅವನ ಪುಸ್ತಕದ ಶೆಲ್ಫ್ ನೋಡುವ ನೆಪದಲ್ಲಿ ಎದ್ದು ಅಲ್ಲಿಗೆ ಹೋದ. 

 "ಇದೆಲ್ಲಾ ನಿನ್ನ ಪುಸ್ತಕಗಳೆ?" ಅಂದ. ಅವನೂ ಎದ್ದು ಬಂದು ತನ್ನ ಒಂದೊಂದೆ ಪುಸ್ತಕಗಳ ಬಗ್ಗೆ ತುಂಬಾ ಅಸ್ಥೆಯಿಂದ ಹೇಳತೊಡಗಿದ. ಇವನೂ ಕುತೂಹಲದಿಂದ ಕೇಳುತ್ತಿದ್ದ. ಅವನು ತುಂಬಾ ಓದುತ್ತಾನೆ ಅನಿಸಿತು. ಅವನಿಗೆ ಹೆಚ್ಚು ಕಡಿಮೆ ೨೫ ವರ್ಷಗಳ ಅನುಭವವಿದೆಯಂತೆ. ಅವನಾಗಲೇ ಡೈರೆಕ್ಟರ್ ಆದರೂ ತಾಂತ್ರಿಕ ವಿಷಯಗಳ ಬಗ್ಗೆ ತುಂಬಾ ಆಸಕ್ತಿ. ಅವನು ಇನ್ನೂ software engineer ತರಹ coding ಮಾಡುತ್ತಾನೆ. 

"ನೀನು ಡೈರೆಕ್ಟರ್ ಆಗಿದ್ದರೂ ಇನ್ನೂ coding ಮಾಡುತ್ತೀಯಲ್ಲ, ಮೆಚ್ಚಬೇಕು ಬಿಡು ನಿನ್ನ" ಅಂದ. ಅವನು ಮುಗುಳ್ನಕ್ಕ. ಇವನು ಮುಂದುವರೆಸಿ "ನಮ್ಮಲಾದರೆ ಟೀಮ್ ಲೀಡ್ ಆದ್ರೆನೇ ಸಾಕು ಕೋಡಿಂಗ್ ಬಿಟ್ಟು ಬಿಡ್ತೀವಿ. ಆಮೇಲೆಲ್ಲಾ ಬರಿ ಮ್ಯಾನೇಜ್ ಮೆಂಟ್. ಇದಕ್ಕೆಲ್ಲಾ ಹೇಗೆ  ಉತ್ಸಾಹ ಬರುತ್ತೆ ನಿಮಗೆ ಅಂತ?" ವೆಂಕಣ್ಣ ಸ್ವಲ್ಪ ಘಮಿಂಡಿಯಿಂದಲೇ ಹೇಳಿದನೇನೊ. ಅವನು ಮತ್ತೆ ನಕ್ಕ. "ಅದು ನನಗೆ ಇಷ್ಟ ಅದಕ್ಕೇ ಮಾಡ್ತೀನಿ. ಬಹುಷಃ ಇಲ್ಲಿ ಜನರನ್ನ ಮ್ಯಾನೇಜ್ ಮಾಡೋದಕ್ಕೆ ಅಷ್ಟೆಲ್ಲ ಪ್ರಯಾಸ ಪಡಬೇಕಿಲ್ಲ. ಅದಕ್ಕೆ ನಮ್ಮ ಸಮಯವೆಲ್ಲ ಪ್ರೊಡಕ್ಟಿವ್ ಆಗಿ ಕೋಡಿಂಗ್ ಮಾಡ್ತೀವಿ" ಅಂದು ಇವನಿಗೆ ಸಿಟ್ಟು ಬರಿಸಿದ. 
ಎಷ್ಟೊಂದು ಕೊಬ್ಬು ನನ್ ಮಗನಿಗೆ. ಅಂದ್ರೆ ಭಾರತೀಯರನ್ನು ಮ್ಯಾನೇಜ್ ಮಾಡೊದು ಕಷ್ಟ ಹಾಗೂ ನಾವು ಮ್ಯಾನೇಜ್ ಮಾಡೋದು ಪ್ರೊಡಕ್ಟಿವ್ ಅಲ್ಲ ಅಂತ ಇವನರ್ಥ. ವೆಂಕಣ್ಣನಿಗೆ  ಅವನ ಮೇಲೆ ಸಿಟ್ಟು ಬಂತು.  

ಅವನಿಗೆ ಇವನ ಕೋಪ ಗೊತ್ತಾಯಿತೇನೊ! ಮಾತು ಬದಲಿಸಲು ಕೇಳಿದ ಅನ್ಸುತ್ತೆ. "ನೀನು ಅಮೇರಿಕಾಗೆ ಬರ್ತಿರೋದು ಮೊದಲ ಸಲವೆ?" ಅಂದವನ ಕಣ್ಣಲ್ಲಿ ಕುತೂಹಲಕ್ಕಿಂತ ಅಸಡ್ಡೆ ಇತ್ತು ಅಂತ ಇವನಿಗನ್ನಿಸಿತು. ಇವನೂ ಅಷ್ಟೇ ಅಸಡ್ಢೆಯಿಂದ  "ಇಲ್ಲ, ಇದು ಎರಡನೇ ಬಾರಿ" ಅಂದು, ಕಿಟಕಿಯಿಂದ ಹೊರಗೆ ನೋಡಿದ. ಅಲ್ಲಿಂದ ಹೊರಗೆ ಕಾರ್ ಪಾರ್ಕಿಂಗ್ ಕಾಣುತ್ತಿತ್ತು. ಅಲ್ಲಿಬ್ಬರು ಇವನ ಹಾಗೆಯೇ ಕೆಲಸದ ಮೇಲೋ, ಟ್ರೇನಿಂಗ್ ಸಲುವಾಗಿಯೋ ಅಮೇರಿಕೆಗೆ ಬಂದಿದ್ದ ಭಾರತೀಯರು ಕಂಡರು. ಇವನು ಗಮನಿಸುತ್ತಿದ್ದನ್ನು ಅವನೂ ನೋಡುತ್ತಲೇ ಖಿನ್ನಮನಸ್ಕನಾದಂತೆ ಕಂಡ.   
"ನೀವೆಲ್ಲ ಇಲ್ಲಿಗೆ ಬಂದು ನಮ್ಮ ಕೆಲಸ ಕಸಿಯುತ್ತಿದ್ದೀರಾ!" ಅಂದವನ ಮುಖದಲ್ಲಿ ಒಂದು ಶುಷ್ಕ ನಗು ಇದ್ದುದನ್ನು ವೆಂಕಣ್ಣ ಗಮನಿಸಿದ…

(ಮುಂದುವರಿಯುವುದು)

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
Badarinath Palavalli
9 years ago

ಧಾರವಾಹಿ ತುಂಬ ಚೆನ್ನಾಗಿದೆ. ಮುಂದುವರೆಸಿ…

“ನೀವೆಲ್ಲ ಇಲ್ಲಿಗೆ ಬಂದು ನಮ್ಮ ಕೆಲಸ ಕಸಿಯುತ್ತಿದ್ದೀರಾ!” ಎಂಬ ಹುಯಿಲು ನಮ್ಮ ಬೆಂಗಳೂರಿನಲ್ಲೂ ನಿಧಾನವಾಗಿ ಏರುತ್ತಿದೆಯಲ್ಲಾ! 🙁

ಗುರುಪ್ರಸಾದ ಕುರ್ತಕೋಟಿ

ಹೌದು ಬದರಿ ಸರ್, ಇದೆ ಈ ದಾರಾವಾಹಿಯಲ್ಲಿ ಮುಂದೆ ಕಾಣಲಿರುವ ತಿರುವು! ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು!

3
0
Would love your thoughts, please comment.x
()
x