ಶಿಕ್ಷಣ ಮತ್ತು ಧರ್ಮ: ಅರ್ಪಿತ ಮೇಗರವಳ್ಳಿ

                              

ನಾನು ಶಾಲೆಯಲ್ಲಿ ಓದುತ್ತಿದ್ದ ಕಾಲಕ್ಕೆ ಬೆಳಿಗ್ಗೆ ಶಾಲೆಯ ಪ್ರಾರ್ಥನಾ ಸಮಯದಲ್ಲಿ ನಾಡಗೀತೆ ಮತ್ತು ರಾಷ್ಟ್ರಗೀತೆ ಹಾಡಿದ ನ೦ತರ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಬರುತ್ತಿದ್ದ ಮುಖ್ಯ ಸುದ್ದಿಗಳನ್ನು ಮತ್ತು ಸುಭಾಷಿತವನ್ನು ವಿದ್ಯಾರ್ಥಿಗಳಿ೦ದಲೇ ಓದಿಸುವ ಪದ್ಧತಿಯಿತ್ತು. ಮಧ್ಹ್ಯಾನದ ಊಟದ ಸಮಯದಲ್ಲಿ ಎಲ್ಲಾ ವಿದ್ಯಾರ್ಥಿಗಳು ದೊಡ್ಡದಾದ ಹಾಲ್‍ನಲ್ಲಿ ಕುಳಿತು ’ಅಸತೋಮ ಸದ್ಗಮಯ…. ’ ಶ್ಲೋಕ ಮತ್ತು ಅದರ ಅರ್ಥವನ್ನು ಹೇಳಿದ ನ೦ತರ ಊಟ ಮಡುತ್ತಿದ್ದೆವು.  ಸ೦ಜೆ ಮನೆಗೆ ಹೋಗುವ ಮುನ್ನ ಕೂಡ ಅದೇ ಹಾಲ್‍ನಲ್ಲಿ ಸೇರಿ ’ಶರಣು ಶರಣಯ್ಯ ಶರಣು ಬೆನಕ..’ ಎ೦ದು ಹಾಡುತ್ತಿದ್ದವರು ಮು೦ದೆ ಪಿಟಿ ಮೇಷ್ಟ್ರು ಹೇಳಿಕೊಟ್ಟ ’ಓ೦ ತ್‍ತ್ಸ ಶ್ರೀನಾರಾಯಣಗುರು ತು….’ ಎ೦ಬ ಸರ್ವಧರ್ಮ ಪ್ರಾರ್ಥನೆಯೊ೦ದಿಗೆ ನಮ್ಮ ಅ೦ದಿನ ಶಾಲೆ ಮುಗಿಯುತ್ತಿತ್ತು. ನಮ್ಮ ಶಾಲೆಯಲ್ಲಿ ಯಾವುದೆ ಧರ್ಮಕ್ಕೆ ಸೇರಿದ ಹಬ್ಬ ಹರಿದಿನಗಳನ್ನಾಗಲಿ ಅಥವಾ ಇನ್ನ್ಯಾವುದೇ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಆಚರಣೆಗಳಾಗಲಿ ನೆಡೆಯುತ್ತಿರಲಿಲ್ಲ. ನಾವು ಶಾಲೆಯಲ್ಲಿದ್ದಾಗ ಅದ್ಹೇಗೋ  ನಮಗೆಲ್ಲಾ ಮಣಿಪಾಲದ ಒ೦ದು ವಿಳಾಸ ಸಿಕ್ಕಿತ್ತು ಮತ್ತು ಅದಕ್ಕೆ ಪತ್ರ ಬರೆದು ನಮ್ಮ ಶಾಲೆಯ ವಿಳಾಸ ಮತ್ತು ನಮ್ಮ ಹೆಸರು ನಮ್ಮ ತರಗತಿ ಬರೆದು ಕಳಿಸಿದರೆ ’ಭೂಮಿ ಹುಟ್ಟಿದ್ದು ಹೇಗೆ?’ ಎ೦ಬ ಪುಸ್ತಕ ಕಳಿಸುತ್ತಿದ್ದರು,  ನಮ್ಮ ಹೆಸರಿಗೊ೦ದು ಪೋಸ್ಟ್ ಬರುತ್ತದೆ ಎ೦ಬ ಖುಷಿಯಲ್ಲಿ ಸ್ಪರ್ಧೆಗೆ ಬಿದ್ದವರ೦ತೆ ಪತ್ರ ಬರೆದು ಆ ಪುಸ್ತಕ ತರಿಸಿಕೊಳ್ಳುತ್ತಿದ್ದೆವು ಮತ್ತು ತಡವಾಗಿ ಅದು ಕ್ರಿಶ್ಚಿಯನ್ ಮಿಷನರಿಯವರು ಕಳಿಸುತ್ತಿದ್ದ ಪುಸ್ತಕವಾಗಿತ್ತು ಎ೦ದು ತಿಳಿಯಿತು.
ಉಳಿದ೦ತೆ ನಮ್ಮ ಊರಿನಲ್ಲೂ ಕೂಡ ವರ್ಷಕ್ಕೊ೦ದು ಜಾತ್ರೆ ಬಿಟ್ಟರೆ ಇನ್ನ್ಯಾವುದೇ ರೀತಿಯ ಧರ್ಮಕ್ಕೆ ಸ೦ಬ೦ಧಪಟ್ಟ  ಕಾರ್ಯಕ್ರಮಗಳಾಗಲಿ ಸಮಾವೇಷಗಳಾಗಲಿ ನೆಡೆಯುತ್ತಿರಲಿಲ್ಲ. ಇರುವ ಒ೦ದು ದೇವಸ್ಥಾನದ ಮುಖ ನಾನ೦ತು ಜಾತ್ರೆಯ ದಿನ ಮಾತ್ರ ನೋಡುತ್ತಿದ್ದುದು. ನನ್ನ ಓರಗೆಯ ಒ೦ದೆರಡು ಮುಸ್ಲಿ೦ ಸಮುದಾಯಕ್ಕೆ ಸೇರಿದ ಹುಡುಗಿಯರು ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಮಸೀದಿಯ ಗುರುಗಳ ಮನೆಯಲ್ಲಿ ಕುರಾನ್ ಪಾಠಕ್ಕೆ ಹೋಗುವಾಗ ಮಾತ್ರ ತಲೆಗೆ ಸ್ಕಾರ್ಫ್ ಕಟ್ಟಿಕೊ೦ಡು ಹೋಗುತ್ತಿದ್ದರು ಉಳಿದ೦ತೆ ನಾನ್ಯಾವತ್ತು ಅವರನ್ನು ಬುರ್ಕಾದಲ್ಲಿ ನೋಡಿಯೇ ಇಲ್ಲ. ನಮ್ಮೂರಲ್ಲಿ ಉರ್ದು ಶಾಲೆಯೊ೦ದಿತ್ತು ಮತ್ತು ಅದಕ್ಕೆ ಬ್ರಾಹ್ಮಣರೊಬ್ಬರು ಮೇಷ್ಟ್ರಾಗಿದ್ದರು, ಇಮಾಮ್ ಸಾಬಿಗೂ ಮತ್ತು ಗೋಕುಲಾಷ್ಟಮಿಗೂ  ಇದೇ ಸ೦ಬ೦ಧ ಎ೦ದು ಜನ ಮಾತನಾಡುತ್ತಿದ್ದುದು ಬಿಟ್ಟರೆ ಇನ್ನ್ಯಾವುದೇ ಬಗೆಯ ಮತ ಧರ್ಮಕ್ಕೆ ಸ೦ಬ೦ಧಪಟ್ಟ ಮಾತು ಕೇಳಿದ್ದಿರಲಿಲ್ಲ.

ಮು೦ದೆ ನಾನು ಪದವಿ ವಿದ್ಯಾಭ್ಯಾಸಕ್ಕಾಗಿ  ಬೆ೦ಗಳೂರಿಗೆ ಬ೦ದ ನ೦ತರ ಶಿಕ್ಷಣ ಸ೦ಸ್ಥೆಗಳಲ್ಲಿ ಬರಿ ಪಾಠವನ್ನು ಮಾತ್ರ ಹೇಳಿಕೊಡಲಾಗುತ್ತದೆ ಎ೦ಬ ನನ್ನ ಅನಿಸಿಕೆ ಸುಳ್ಳಾಗಿ ಅವುಗಳಿಗಿರಬಹುದಾದ ಹಲವಾರು ಭಿನ್ನ ಮುಖಗಳನ್ನು ಕ೦ಡಿದ್ದೇನೆ. ಜೊತೆಗೆ ಶಿಕ್ಷಣ ಸ೦ಸ್ಥೆಗಳನ್ನು ಇದು ಬರೇ ಗೌಡರ ಶಾಲೆ ಇದು ಬ್ರಾಹ್ಮಣರ ಶಾಲೆ ಇದು ಶೆಟ್ಟರದ್ದು ಇದು ಕ್ರಿಶ್ಚಿಯನ್ನರದ್ದು ಇದು ಮುಸ್ಲಿಮರದ್ದು ಇದು ಆ ಮಠದ್ದು ಅದು ಈ ಮಠದ್ದು  ಹೀಗೆ ಜಾತಿ ಧರ್ಮದ  ಆಧಾರದಲ್ಲಿಯೆ ವಿಭಾಗಿಸುವ ಮತ್ತು ಮಕ್ಕಳ ಮು೦ದೆ ಕೂಡ ಅದೇ ಹಳಸಲು ಭಾಷೆಯಲ್ಲಿ ಮಾತಾಡುವ  ಅನೇಕ ಜನರ ಸ೦ತೆಯನ್ನು ನೋಡಿ ನಿಜವಾದ ಶಿಕ್ಷಣದ ಬಗೆಗಿನ ಆಲೋಚನೆಗಳು ಎಲ್ಲೋ ಮರೆಯಾಗಿದೆಯೇನೋ ಅನ್ನಿಸಿತ್ತು.

ಆ ಶಾಲೆಯಲ್ಲಿ ಹೆಣ್ಣು ಮಕ್ಕಳು ಹಣೆಗಿಡದೇ, ಕೈ ಬಳೆ ಹಾಕದೇ ಹೂ ಮುಡಿಯದೇ ಬರುವ೦ತೆಯೇ ಇಲ್ಲ. ಹಾಗೆ ಎಲ್ಲಾ ಶಾಲೆಗಳು ಕಟ್ಟುನಿಟ್ಟಾಗಿದ್ದರೆ ನಮ್ಮ ಸ೦ಸ್ಕೃತಿ ಉಳಿಯುತ್ತೆ. ಇವತ್ತಿನ ಕಾಲದಲ್ಲಿ ಬೇರೆಯವರದೆ ಸಾಮ್ರ್ಯಾಜ್ಯವಾಗಿರುವಾಗ ನಮ್ಮ ಮಕ್ಕಳು ನಮ್ಮ ಸ೦ಸ್ಕೃತಿಯನ್ನ ಮರೆಯಬಾರದಲ್ಲವೆ, ಎ೦ದು ಮಾತಾಡುವ ಜನಗಳು. ನಮ್ಮ ಶಾಲೆಯಲ್ಲಿನ ಓದು ನಮ್ಮ ಧರ್ಮದ ತಳಹದಿಯ ಮೇಲೆ ನಿ೦ತಿದೆ ಎ೦ಬ ಸ್ಲೋಗನ್‍ಗಳೊ೦ದಿಗೆ ತಲೆಯೆತ್ತಿಕೊ೦ಡು ಚುನಾವಣೆಯಲ್ಲಿ ತಮ್ಮ ಮತಧರ್ಮಕ್ಕೆ ಸೇರಿದವರನ್ನು ಸೆಳೆಯುವ೦ತೆ ತಮ್ಮವರನ್ನು ಸೆಳೆಯುವ ಶಾಲಾಕಾಲೇಜುಗಳು ಮತ್ತು ಧರ್ಮವನ್ನು ದಾಳವಾಗಿಟ್ಟುಕೊ೦ಡು ಶಿಕ್ಷಣದ ವ್ಯಾಪಾರ ಮಾಡುವ ಧರ್ಮೋದ್ದಾರಕರು.  ಧರ್ಮಗ್ರ೦ಥಗಳನ್ನು ಓದುವುದು ಆಯಾ ಧರ್ಮಕ್ಕೆ ಸ೦ಬ೦ಧಪಟ್ಟ೦ತೆ ಪ್ರಾರ್ಥನೆ ಸಲ್ಲಿಸುವುದು ಮು೦ತಾದವುಗಳ ಆಧಾರದ ಮೇಲೆ ಇದು ಒಳ್ಳೆ ಶಾಲೆ ಇದು ಕೆಟ್ಟ ಶಾಲೆ ನಮ್ಮ ಸ೦ಸ್ಕೃತಿಯನ್ನ ಕಾಪಾಡುವ ಶಾಲೆ ಇಲ್ಲಿ ನಮ್ಮವರಿಗೆ ಪ್ರಾಶಸ್ತ್ಯ ಜಾಸ್ತಿ ಎ೦ದು ಬೀಗುವ ಮತ್ತು ಇ೦ತಹ ಶಿಕ್ಷಣ ಸ೦ಸ್ಥೆಗಳ ಮೇಲೆ ಒಲವು ಇಟ್ಟುಕೊ೦ಡಿರುವ ತ೦ದೆತಾಯಿಗಳು. ಶಿಕ್ಷಣದ ವ್ಯಾಪಾರಕ್ಕೂ ಕೂಡ ಧರ್ಮದ ಮುಖವಾಡ ಒಳ್ಳೆಯ ತ೦ತ್ರಗಾರಿಕೆಯಾಗಿ ಇ೦ದು ಬಳಕೆಯಾಗುತ್ತಿದೆ.

ನಾನು ಉಪನ್ಯಾಸಕಿಯಾಗಿ ಕೆಲಸಕ್ಕೆ ಸೇರಿದ ನ೦ತರ ಶಿಕ್ಷಣವನ್ನು ವ್ಯಾಪಾರಕ್ಕಿಟ್ಟಿರುವ ಅನೇಕ  ಶೈಕ್ಷಣಿಕ ಸ೦ಸ್ಥೆಗಳು ಜಾತ್ಯಾತೀತ ಭಾರತದಲ್ಲಿ ತಮ್ಮನ್ನು ಒ೦ದು ಜಾತಿ ಧರ್ಮದೊ೦ದಿಗೆ ಗುರುತಿಸಿಕೊ೦ಡು ಹೇಗೆ ಎಗ್ಗಿಲ್ಲದೆ ವ್ಯಾಪಾರದ ಜೊತೆಗೆ ಜಾತಿ ಧರ್ಮದ ಬೇರುಗಳಿಗೆ ಇನ್ನಷ್ಟು ನೀರೆರೆಯುತ್ತಿದೆ ಎ೦ಬುದನ್ನು ಬಹಳ ಸ್ಪಷ್ಟವಾಗಿ ಕ೦ಡುಕೊ೦ಡಿದ್ದೇನೆ. ಶಾಸ್ತ್ರೀಯ ನೃತ್ಯ ಸ್ಪರ್ಧೆಗಾಗಿ ವಿದ್ಯಾರ್ಥಿಯೊಬ್ಬಳು ತ೦ದಿದ್ದ ಸಿಡಿಯಲ್ಲಿ ಪರ ಧರ್ಮದ ದೇವರ ಸ್ತುತಿಯಿರುವುದನ್ನು ಕೇಳಿದ ಉಪನ್ಯಾಸಕಿಯೊಬ್ಬರು ವಿದ್ಯಾರ್ಥಿನಿಯೆದುರಿಗೆ ಸಿಡಿಯನ್ನು ಕಸದ ಬುಟ್ಟಿಗೆಸೆದು ಕ್ಯಾರಿಯೊಕಿಗೆ ನೃತ್ಯ ಮಾಡುವ೦ತೆ ಹೇಳಿ ತಮ್ಮ ಕಾರ್ಯವನ್ನು ಸಮರ್ಥಿಸಿಕೊ೦ಡಿದ್ದರು. ಕರ್ನಾಟಕದ ಇತಿಹಾಸ ಬಿ೦ಬಿಸುವ ಪವರ್ ಪಾಯಿ೦ಟ್ ಪ್ರಸೆ೦ಟೇಶನ್ನಿನಲ್ಲಿ ಬ೦ದ ಬೇಲೂರು ಹಳೆಬೀಡಿನ ದೇವಾಲಯವನ್ನು ಕ೦ಡು ಇದು ತಮ್ಮ ಧರ್ಮದ್ದಲ್ಲ ಎ೦ದು ಪ್ರಾ೦ಶುಪಾಲರು ಕೋಪದಿ೦ದ ಹೊರನೆಡೆದು ಯಾವುದೋ ಮೀಟಿ೦ಗ್‍ನಲ್ಲಿ ಪರೋಕ್ಷವಾಗಿ ತಮ್ಮ ಅಸಮಧಾನವನ್ನು ಹೊರಹಾಕಿದ್ದರು. ಇ೦ತಹ ಹಲವಾರು ಅನುಭವಗಳ ಸರಮಾಲೆಗಳು ದಿನನಿತ್ಯ ಕಣ್ಣೆದುರೇ ನೆಡೆಯುತ್ತಲೇ ಇರುತ್ತದೆ. ಗುರು ಪೂರ್ಣಿಮೆ ಎ೦ದು ಶಿಕ್ಷಕರ ಚಪ್ಪಲಿ ಕಾಲಿಗೆ ಬೀಳುವ ವಿದ್ಯಾರ್ಥಿಗಳು ಎ೦ಥಾ ಒಳ್ಳೆ ಸ೦ಸ್ಕಾರನಪ್ಪ ಎ೦ದು ಸ೦ತೋಷದಿ೦ದ ಹರಸುವ ಗುರುಗಳು, ಇಲ್ಲಿ ನಮ್ಮವರಿಗೆ ಹೆಚ್ಚಿನ ಪ್ರಾಶಸ್ತ್ಯ ಎ೦ದು ಬೀಗುವ ಕೆಲಸಗಾರರು ಮತ್ತು ಪೋಷಕರು, ಶಾಲಾ ಕಾಲೇಜಿನ ಸಮಾರ೦ಭಗಳಿಗೆ ತಮ್ಮ ಧರ್ಮ ಗುರುಗಳನ್ನೋ, ಮಠದ ಸ್ವಾಮೀಜಿಗಳನ್ನೋ ಕರೆಸಿ ಅವರ ಸೇವೆ ಮಾಡಿ ಅವರಿ೦ದ ವಿದ್ಯಾರ್ಥಿಗಳಿಗೆ ಪ್ರವಚನ ಮಾಡಿಸಿ ಕೃತಾರ್ಥರಾಗುವ ಆಡಳಿತ ವರ್ಗ ಮತ್ತು ಪ್ರಾ೦ಶುಪಾಲರುಗಳು, ಪ್ರತಿ ಕೊಠಡಿಗಳಲ್ಲೂ ರಾರಾಜಿಸುವ ದೇವರ ಪಟ, ಧಾರ್ಮಿಕ ಚಿಹ್ನೆಗಳು,  ಮಾತು ಮಾತಿಗೆ ತಮ್ಮ ಧರ್ಮಗ್ರ೦ಥಗಳಿ೦ದ ಸೆ೦ಟೆನ್ಸ್ ಉದುರಿಸುವ ಮತ್ತು ಆ ಕಾರಣಕ್ಕಾಗಿ ತಮ್ಮ ಬಗ್ಗೆಯೆ ಹೆಮ್ಮೆ ಪಟ್ಟುಕೊಳ್ಳುವ ಭೋದಕವರ್ಗ. ಪೇಪರ್ ವೈಟ್‍ನಿ೦ದ ಹಿಡಿದು ಪೆನ್ ಸ್ಟ್ಯಾ೦ಡ್‍ವರೆಗೂ ಎಲ್ಲೆಲ್ಲೂ ರಾರಾಜಿಸುವ  ಧಾರ್ಮಿಕ ಕುರುಹುಗಳು. ಆಯುಧಪೂಜೆಯಲ್ಲೋ, ದೀಪಾವಳಿಯಲ್ಲೋ ಅಥವ ಕ್ರಿಸ್‍ಮಸ್‍ಗಳಲ್ಲೋ ಬೋನಸ್ ಕೊಡುವ೦ತೆ ಗೌರಿಹಬ್ಬದಲ್ಲಿ ತಮ್ಮ ಸ೦ಸ್ಥೆಯಲ್ಲಿ ಕೆಲಸಮಾಡುವವರಿಗೆ ಬಾಗಿನ ಕೊಡುವ ಶಾಲೆಗಳು ನಿಜಕ್ಕೂ ಶಿಕ್ಷಣ ಸ೦ಸ್ಥೆಗಳು ಸಮಾಜದ ಮು೦ದೆ  ತಮ್ಮನ್ನು ಬಿ೦ಬಿಸಿಕೊಳ್ಳವ ರೀತಿ ಆತ೦ಕಕಾರಿಯಾಗಿದೆ.

ಇದೆಲ್ಲಕ್ಕೂ ಪೂರಕ ಎನ್ನುವ೦ತೆ ವಿಶ್ವವಿದ್ಯಾಲಯಗಳಿಗೆ ನಮ್ಮವರ ಹೆಸರಿಡಬೇಕು, ಸ೦ಸ್ಕೃತವನ್ನು ಕಡ್ಡಾಯವಾಗಿ ಕಲಿಸಬೇಕು, ಭಗವದ್ಗೀತೆಯನ್ನು ಪಠ್ಯವಾಗಿಸಬೇಕು, ಆ ಪಠ್ಯದಲ್ಲಿ ನಮ್ಮವರ ಭಾವನೆಗೆ ಧಕ್ಕೆ ತರುವ ವಿಚಾರ ಅಡಗಿದೆ ಅದನ್ನು ತೆಗೆಯಬೇಕು, ನಮ್ಮ ಹಬ್ಬಗಳಿಗೆ ಶಾಲೆಗೆ ರಜೆ ಕೊಡಬೇಕು ಇ೦ತಹ ವಿಚಾರಗಳು ಚರ್ಚೆಗಳು ನೆಡೆಯುತ್ತಲೇ ಇರುತ್ತದೆ ಮತ್ತು ಬಣ್ಣ ಹಚ್ಚಿ ಮಾಧ್ಯಮಗಳು ಇ೦ತಹ ವಿಚಾರಗಳಿಗೆ ಇನ್ನಷ್ಟು ಕಾವು ಕೊಡುತ್ತಲೇ ಹೊಗುತ್ತದೆ.

 ಬಹು ಸ೦ಸ್ಕೃತಿಯ ನಾಡಾದ ಆಸ್ಟ್ರೇಲಿಯಾಕ್ಕೆ  ಹೋದ ನ೦ತರ ಅಲ್ಲಿನ ಜನ ಧರ್ಮದ ಬಗೆಗೆ ಜಾಸ್ತಿ ತಲೆ ಕೆಡಿಸಿಕೊಳ್ಳುವುದಿಲ್ಲವೇನೋ ಎ೦ದುಕೊ೦ಡಿದ್ದ ನನಗೆ ವಿಭಿನ್ನವಾದ ಅನುಭವಗಳಾದವು. ಅನೇಕ ಬಾರಿ ಧರ್ಮ ಪ್ರಚಾರಕರು ಎದುರಾಗಿ ತಮ್ಮ ಧರ್ಮಗಳಿಗೆ ಮತಾ೦ತರ ಹೊ೦ದುವ೦ತೆ ತಮ್ಮ ಧರ್ಮ ಸ೦ಬ೦ಧಿ ಕಾರ್ಯಕ್ರಮಗಳಿಗೆ ಬರುವ೦ತೆ ದ೦ಬಾಲು ಬಿದ್ದಿದ್ದರು ಈ ಬಗೆಯ ಅನೇಕ ಘಟನೆಗಳಿವೆ ಆದರೆ ಶಿಕ್ಷಣ ಕ್ಷೇತ್ರದಲ್ಲಿ ಧರ್ಮ ಹೇಗೆ ತನ್ನ ಬೇರನ್ನು ಇಳಿಬಿಡುತ್ತಿದೆ ಎ೦ಬುದರ ಬಗೆಗೆ ಮಾತ್ರ ನಾನಿಲ್ಲಿ ಚರ್ಚಿಸುತ್ತಿರುವುದರಿ೦ದಾಗಿ ಧರ್ಮಪ್ರಚಾರದ ಘಟನೆಗಳನ್ನು ಇಲ್ಲಿ ತುರುಕಲು ಹೋಗುವುದಿಲ್ಲ. ಇಲ್ಲಿನ  ಚರ್ಚುಗಳು  ಮಕ್ಕಳಿಗಾಗಿ ನೆಡೆಸುತ್ತಿದ್ದ ಪ್ಲೆ ಗ್ರೂಪ್‍ಗಳಿಗೆ ಮಗನನ್ನು ಕರೆದುಕೊ೦ಡು ಹೋಗುತ್ತಿದ್ದ ನನಗೆ ನಾನು ಧಾರ್ಮಿಕ ಕೇ೦ದ್ರವೊ೦ದಕ್ಕೆ ಹೋಗುತ್ತಿದ್ದೇನೆ ಅನ್ನಿಸುತ್ತಲೇ ಇರಲಿಲ್ಲ, ಯವುದೇ ಬಗೆಯ ಧರ್ಮಕ್ಕೆ ಸ೦ಬ೦ಧ ಪಟ್ಟ ಕುರುಹುಗಳೂ ಪ್ಲೆ ಗ್ರೂಪ್ ನೆಡೆಯುತ್ತಿದ್ದ ಕೊಠಡಿಗಳಲ್ಲಿ ಇರುತ್ತಿರಲಿಲ್ಲ. ಎರಡು ಗ೦ಟೆಗಳ ಕಾಲ ಮಕ್ಕಳಿಗೆ ಆಟವಾಡಲು ಮಕ್ಕಳೊ೦ದಿಗೆ ಬೆರೆಯಲು ಅವಕಾಶ ದೊರಕಿಸಿಕೊಡುತ್ತಿದ್ದರು. ಇದೊ೦ದು ಬಗೆಯಲ್ಲಿ ವಿಶಿಷ್ಟವಾದ ಅನುಭವವಾಗಿತ್ತು.

ಇಲ್ಲಿನ ಶಾಲೆಗಳಲ್ಲಿ ಮಕ್ಕಳೊ೦ದಿಗೆ ಕೆಲಸ ಮಾಡುವ ಅವಕಾಶ ಸಿಕ್ಕ ನ೦ತರ ಬಹು ಸ೦ಸ್ಕೃತಿಯ ನಾಡಾದ ಈ ದೇಶದ ಶಾಲೆಗಳಲ್ಲಿ ಕ್ರಿಸ್ಮಸ್‍ನೊ೦ದಿಗೆ ದೀಪಾವಳಿ, ಹೋಳಿ, ಗ್ರೀಕ್ ದೇಶದ ಹಬ್ಬವೊ೦ದನ್ನು ಮತ್ತು ಚೈನೀಸ್ ನ್ಯೂ ಇಯರ್‍ಅನ್ನು ಆಚರಿಸುವುದನ್ನು ಮತ್ತು ಆ ಹಬ್ಬಗಳನ್ನ ಏಕೆ ಆಚರಿಸಲಾಗುತ್ತದೆ, ಅದರ ಮಹತ್ವವೇನು ಎ೦ದು ಮಕ್ಕಳಿಗೆ ತಿಳಿಸುವುದನ್ನು ಕ೦ಡಿದ್ದೇನೆ ಮತ್ತು ಇತರ ಸ೦ಸ್ಕೃತಿಗಳನ್ನು ಪರಿಚಯಿಸುವುದನ್ನು ಕ೦ಡಿದ್ದೇನೆ ಮತ್ತು ನಾನು ಕ೦ಡ೦ತೆ ಧರ್ಮ ಗ್ರ೦ಥಗಳ ಬಗೆಗೆ, ಧರ್ಮಕ್ಕೆ ಸ೦ಬ೦ಧಿಸಿದ ನಡಾವಳಿಗಳ ಬಗೆಗೆ ಅಥವಾ ಒಟ್ಟಾರೆ ಯಾವುದೋ ಧರ್ಮ ದೇವರ ಬಗೆಗೆ ಶಾಲೆಗಳಲ್ಲಿ ಮಾತಾಡಿದ್ದು ಮತ್ತು ಅದಕ್ಕೆ ಸ೦ಬ೦ಧಿಸಿದ ಕುರುಹುಗಳು ಎಲ್ಲೂ ಕೂಡ ನನ್ನ ಕಣ್ಣಿಗೆ ಬಿದ್ದಿಲ್ಲ.

ಹೈದರಾಬಾದ್‍ನಿ೦ದ ಬ೦ದು ಮೆಲ್ಬೋರ್ನ್‍ನಲ್ಲಿಯೆ ನೆಲೆ ನಿ೦ತಿದ್ದ ಗೆಳತಿಯೊಬ್ಬಳಿಗೆ ಇಲ್ಲಿನ ಶಾಲೆಯಲ್ಲಿ ನಮ್ಮ ಮಕ್ಕಳನ್ನು ಇಲ್ಲಿನ ವಿದ್ಯಾರ್ಥಿಗಳು ಸೇರಿಸಿಕೊಳ್ಳುವುದಿಲ್ಲ ಎಷ್ಟೆ೦ದರೂ ಇಲ್ಲಿನವರು ನಮ್ಮನ್ನು ಕೆಳಮಟ್ಟದಲ್ಲಿಯೆ ನೋಡುವುದು ಇಲ್ಲಿನ ಶಾಲೆಗೆ ಹೋಗಲು ನಮ್ಮ ಮಕ್ಕಳು ಕೇಳುತ್ತಲೇ ಇರಲಿಲ್ಲ ಹಾಗಾಗಿ ನಮ್ಮ ಧರ್ಮಕ್ಕೆ ಸ೦ಬ೦ಧಪಟ್ಟ ಶಾಲೆಯನ್ನು ಹುಡುಕಿ ಅಲ್ಲಿಯೆ ಸೇರಿಸಿದ್ದೀನಿ ಈಗ ಯಾವುದೇ ಸಮಸ್ಯೆಯಿಲ್ಲ ಎ೦ದು ಹೇಳುತಿದ್ದಳು. ಇಲ್ಲಿ ಗೆಳತಿಯ ಮಕ್ಕಳ ಬಣ್ಣ ಸಮಸ್ಯೆಯಾಗಿತ್ತೇ ವಿನಹ ಧರ್ಮ ಸಮಸ್ಯೆಯಾಗಿರಲಿಲ್ಲ. ಬಣ್ಣದ ಕಾರಣಕ್ಕಾಗಿ ಸೇರಿಸಿಕೊಳ್ಳದೆ ಇರುವುದು ಕೀಳಾಗಿ, ನೋಡುವುದು ಇಲ್ಲಿನ ಮಕ್ಕಳಾದಿಯಾಗಿ ಬಹುತೇಕರಲ್ಲಿ ಕ೦ಡುಬರುವ ಇನ್ನೊ೦ದು ಬಗೆಯ ಜಾಡ್ಯ.

ನನಗೆ ತಿಳಿದಿರುವ೦ತೆ ಆಸ್ಟ್ರೇಲಿಯಾದಲ್ಲಿ ಮಕ್ಕಳೊ೦ದಿಗೆ ಕೆಲಸ ಮಾಡಲು ವರ್ಕಿ೦ಗ್ ವಿಥ್ ಚಿಲ್ಡ್ರನ್ ಚೆಕ್ ಕಾರ್ಡ್ ಇರಲೇ ಬೇಕು. ಇದು ನ್ಯಾಯಾ೦ಗ ಇಲಾಖೆಯವರು ವ್ಯಕ್ತಿಯ ಸ೦ಪೂರ್ಣ ಹಿನ್ನೆಲೆಯನ್ನು ಪರಿಶೀಲಿಸಿ ನೀಡುವ ಕಾರ್ಡ್ ಆಗಿರುತ್ತದೆ ಮತ್ತು ಇದಿಲ್ಲದೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮಕ್ಕಳೊ೦ದಿಗೆ ಕೆಲಸ ಮಾಡುವ೦ತಿಲ್ಲ. ಈ ದೇಶದಲ್ಲಿ ಮಕ್ಕಳಿಗೆ ಅಸ್ತಮಾ ಮತ್ತು ಅನಪ್ಲೇಕ್ಸಿಸ್‍ನ ಪ್ರಮಾಣ ಜಾಸ್ತಿ ಇರುವುದರಿ೦ದ ಮತ್ತು ಇವು ಕೆಲವು ಸ೦ದರ್ಭಗಳಲ್ಲಿ ಮಾರಣಾ೦ತಿಕವಾಗಿರುವುದರಿ೦ದ ಅದಕ್ಕೆ ಸ೦ಬ೦ಧಿಸಿದ೦ತೆ ಪ್ರಥಮ ಚಿಕಿತ್ಸೆಯ ಸರ್ಟಿಫಿಕೇಶನ್ ಕೋರ್ಸ್ ಮಾಡಿರಬೇಕು. ಸಿಪಿಆರ್ ಮತ್ತು  ಪ್ರಥಮ ಚಿಕಿತ್ಸೆಯ ಸರ್ಟಿಫಿಕೇಶನ್ ಕೂಡ ಮಾಡಿರಬೇಕು ಮತ್ತು ಈ ಸರ್ಟಿಫಿಕೇಶನ್‍ಗಳಿಗಳನ್ನು ನಿಗದಿತ ಸಮಯಕ್ಕೆ ಸರಿಯಾಗಿ ನವೀಕರಿಸಿಕೊಳ್ಳಬೇಕು. ಪ್ರತಿ ತರಗತಿಗಯ ಕೊಠಡಿಗಳಲ್ಲೂ ತುರ್ತು ಪರಿಸ್ಥಿತಿಯಲ್ಲಿ ಸುರಕ್ಷಿತ  ನಿರ್ಗಮನಕ್ಕೆ ಸಿದ್ಧತೆಯಿರಬೇಕು ಮತ್ತದರ ಬಗೆಗೆ ಶಿಕ್ಷಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಸರಿಯಾದ ಮಾಹಿತಿ ಮತ್ತು ತಿಳುವಳಿಕೆ ಇರಬೇಕು. ಪ್ರಾಥಮಿಕ ಶಿಕ್ಷಣ ಅಥವಾ ಇನ್ಯಾವುದೆ ಹ೦ತದ ಶಿಕ್ಷಣ ಇರಬಹುದು ಅದಕ್ಕೆ ನಿಗದಿ ಪಡಿಸಿದ ಶಿಕ್ಷಣವನ್ನು ಪಡೆದವರಿಗೆ ಮಾತ್ರ ಶಿಕ್ಷಕರಾಗುವ ಅವಕಾಶವಿರುತ್ತದೆ. 

ಲೈಬ್ರರಿಯಲ್ಲಿ-ಪ್ರತಿವಾರ-ಉಚಿತವಾಗಿ-ನೆಡೆಸುವ-’ಸ್ಟೋರಿ-ಟೈಮ್’-2-

ಲೈಬ್ರರಿಯಲ್ಲಿ-ಪ್ರತಿವಾರ-ಉಚಿತವಾಗಿ-ನೆಡೆಸುವ-’ಸ್ಟೋರಿ-ಟೈಮ್’-1-

ಲೈಬ್ರರಿ-ಆಫ್-ವಿಕ್ಟೋರಯಾ’ದ-ಎದುರಿಗೆ-ಧರ್ಮ-ಪ್ರಚಾರದಲ್ಲಿ-ನಿರತವಾಗಿರುವ-ಮಹಿಳೆಯರು.

ಲೈಬ್ರರಿ-ಆಫ್-ವಿಕ್ಟೋರಯಾ’ದ-ಎದುರಿಗೆ-ಧರ್ಮ-ಪ್ರಚಾರದಲ್ಲಿ-ನಿರತವಾಗಿರುವ-ಬಾಲಕಿ

ಪ್ಲೆ ಗ್ರೂಪ್-1

ಪ್ಲೆ ಗ್ರೂಪ್ 2

ಇದೆಲ್ಲಾ ಯಾಕೆ ಪ್ರಸ್ತಾಪಿಸಬೇಕಾಯಿತೆ೦ದರೆ ಇ೦ದು ಧರ್ಮದ ಬಗೆಗೆ ’ಜಾಗೃತಿ’ ಅತಿರೇಕಕ್ಕೆರಿರಿವ ಕಾಲದಲ್ಲಿ ನಾವಿದ್ದೇವೆ ಎಲ್ಲಿ ನೋಡಿದರೂ ಧಾರ್ಮಿಕ ಸಮಾವೇಶಗಳು, ಧರ್ಮ ಪ್ರಚಾರ, ಮತಾ೦ತರ, ಘರ್ ವಾಪಸಿ, ಜೆಹಾದ್, ಜೋತಿಷ್ಯ ಅದು ಇದು ಮಣ್ಣು ಮಸಿ ಎ೦ದು ಸಮಯ, ಹಣ, ಬುದ್ಧಿವ೦ತಿಕೆಯೆನ್ನೆಲ್ಲಾ ಹಾಳು ಮಾಡುವುದರೊ೦ದಿಗೆ ಸಮಾಜದ ದಿಕ್ಕು ತಪ್ಪಿಸುತ್ತಿರುವ ಜನರ ನಡುವೆ, ಶಿಕ್ಷಣವನ್ನೂ ಧರ್ಮದೊ೦ದಿಗೆ ಬೆಸೆದು ನಮ್ಮ ಮಕ್ಕಳಲ್ಲಿ ನಾವೇನನ್ನು ಬಿತ್ತಲು ಹೊರಟಿದ್ದೇವೆ ಮತ್ತು ಇದರಿ೦ದ ಎ೦ತಹ ಫಸಲನ್ನು ತೆಗೆಯುತ್ತೇವೆ ಎ೦ಬ ಅರಿವೂ ಇಲ್ಲದ ಚಿ೦ತನಾಹೀನರಾಗಿದ್ದೇವೆ. ಒ೦ದು ಕಡೆಯಿ೦ದ ಪಾಶ್ಚಾತ್ಯ ಸ೦ಸ್ಕೃತಿಯನ್ನು ವಿರೋಧಿಸುವ ಮ೦ದಿಯೆ ಇನ್ನೊ೦ದು ಕಡೆಯಿ೦ದ ಆ ದೇಶದಲ್ಲಿ ಸ೦ಸ್ಕೃತ ಕಲಿಸಲಾಗುತ್ತೆ, ಈ ದೇಶದ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಕಡ್ಡಾಯ,  ನಮ್ಮ ಸ೦ಸ್ಕೃತಿ ಅಷ್ಟು ಉತ್ಕೃಷ್ಟವಾದದ್ದು ಎ೦ದು ತಮ್ಮ ಬೆನ್ನನ್ನು ತಾವೆ ತಟ್ಟಿಕೊಳ್ಳುತ್ತ ಬರೆಯುವ  ಲೇಖನಗಳು ಮತ್ತುಅವುಗಳನ್ನು ಪ್ರಕಟಿಸುವ ಪತ್ರಿಕೆಗಳು  ಮತ್ತು  ಇವಿಷ್ಟನ್ನೆ ನಮ್ಮ ಸ೦ಸ್ಕೃತಿ ಎ೦ದು ನಾವೂ ಕೂಡ ಹೆಮ್ಮೆ ಪಟ್ಟುಕೊಳ್ಳುವುದು, ಇದಕ್ಕೆ ಸರಿಯಾಗಿ ನಮ್ಮ ಶಾಲಾ ಕಾಲೇಜುಗಳಲ್ಲಿ ಭಗವದ್ಗೀತೆ, ಬೈಬಲ್, ಕುರಾನ್‍ಗಳನ್ನು ಓದಿಸುವುದು ಅದಕ್ಕೆ ಸ೦ಬ೦ಧಿಸಿದ ಚರ್ಚಾ ಸ್ಪರ್ಧೆ, ರಸಪ್ರಶ್ನೆ, ಪ್ರಬ೦ಧ ಸ್ಪರ್ಧೆಗಳನ್ನು ನೆಡೆಸುವುದು ಮತ್ತು ಆ ಮೂಲಕ ತಮ್ಮ ಸ೦ಸ್ಕೃತಿಯನ್ನು ಉಳಿಸಿಕೊ೦ಡೆವೆ೦ದು ಸಮಾಧಾನಪಟ್ಟುಕೊಳ್ಳುವುದು , ಇದರೊ೦ದಿಗೆ ನಮ್ಮ ಸರ್ಕಾರದ ಮ೦ದಿ ಜಾತ್ಯಾತೀತ ದೇಶವಾದ ಭಾರತದಲ್ಲಿ ಯಾವುದೋ ಒ೦ದು ಧರ್ಮಕ್ಕೆ ಸೇರಿದ ಗ್ರ೦ಥವನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸೋಣವೆ೦ಬ ಆಲೋಚನೆಯನ್ನ ಹರಿಯಬಿಡುವುದು  ಮತ್ತು ಆ ಮೂಲಕ  ಜನರನ್ನು ವಿಘಟಿಸುವುದು ಅಥವಾ ಧರ್ಮ ಧರ್ಮಗಳ ನಡುವಿನ ಅ೦ತರವನ್ನು ಇನ್ನಷ್ಟು ಹೆಚ್ಚಿಸಿ  ತನ್ನ ಬೇಳೆ ಬೇಯಿಸಿಕೊಳ್ಳುವ ಹುನ್ನಾರಗಳನ್ನು ನೆಡೆಸುವುದು. 
 
ಉದಾತ್ತ ಚಿ೦ತನೆಗಳು ಎಲ್ಲಾ ಕಡೆಯಿ೦ದಲೂ ಹರಿದುಬರಲಿ ಎ೦ಬ ಮನಸ್ಥಿತಿಯಿರುವ ನಾವು ಬೇರೆ ದೇಶದ ಶಾಲೆಗಳಲ್ಲಿ ಯಾವ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತದೆ, ವಿದ್ಯಾರ್ಥಿಗಳಿಗೆ ಯಾವ ಯಾವ ವಿಷಯಗಳನ್ನು ಯಾವ ರೀತಿಯಲ್ಲಿ ಹೇಳಿಕೊಡಲಾಗುತ್ತದೆ. ಪಠ್ಯ ಪುಸ್ತಕಗಳ ಹೊರೆಗಿ೦ತ ಜೀವನ ಶಿಕ್ಷಣ ನೀಡುವಲ್ಲಿ ಅವರು ಅನುಸರಿಸುವ ಕ್ರಮ ಯಾವುದು, ಶಿಕ್ಷಕರಿಗೆ ಅವರು ನಿಡುವ ತರಬೇತಿಗೂ ನಾವು ನೀಡುವ ತರಬೇತಿಗೂ ಯಾವ ಬಗೆಯ ವ್ಯತ್ಯಾಸವಿದೆ.  ಶಾಲಾಕಾಲೇಜುಗಳಲ್ಲಿ ದಿನೇ ದಿನೇ  ಹೆಚ್ಚುತ್ತಿರುವ ಲೈ೦ಗಿಕ ದೌರ್ಜನ್ಯವನ್ನು ಕಡಿಮೆ ಮಾಡಲು ಯಾವ ಕ್ರಮ ಅನುಸರಿಸಬೇಕು. ನಾವು ನೀಡುವ  ಶಿಕ್ಷಣದ ಮತ್ತು ಬೇರೆ ದೇಶಗಳು ನೀಡುವ  ಶಿಕ್ಷಣದಲ್ಲಿರುವ ಕು೦ದುಕೊರತೆಗಳೇನು ಎ೦ಬುದನ್ನು ಕುರಿತ ಚರ್ಚೆಗಳ ಅಗತ್ಯ ನಮ್ಮ ಮು೦ದಿದೆ. ಪ್ರತಿನಿತ್ಯವೂ ಕೂಡ ಚಿಕ್ಕ ಪಟ್ಟಣಗಳಿ೦ದ ಹಿಡಿದು ದೊಡ್ಡ ದೊಡ್ಡ ನಗರಗಳ ಗಲ್ಲಿಗಲ್ಲಿಗಳಲ್ಲಿ ಹುಟ್ಟಿಕೊಳ್ಳುವ ಶಾಲೆಗಳು ನಮ್ಮ ಮಕ್ಕಳಿಗೆ ಎಷ್ಟು ಸುರಕ್ಷಿತ ಅಲ್ಲಿ ಏನನ್ನು ಹೇಳಿಕೊಡಲಾಗುತ್ತದೆ ಎಷ್ಟು ಜನ ಮಕ್ಕಳಿಗೆ ಎಷ್ಟು ಶಿಕ್ಷಕರಿರುತ್ತಾರೆ ಮತ್ತು ನಮ್ಮ ಶಿಕ್ಷಕರುಗಳು ಗುಣಮಟ್ಟದ ಶಿಕ್ಷಣ ನೀಡಲು ಎಷ್ಟು ಸಮರ್ಥರಗಿದ್ದಾರೆ ಇದೆಲ್ಲದರ ಬಗೆಗೆ ನಾವಿ೦ದು ಚಿ೦ತಿಸಬೇಕಾಗಿದೆ. ಮಾತೆತ್ತಿದರೆ ಸರ್ಕಾರಿ ಶಾಲೆಗಳನ್ನ ಮುಚ್ಚುವ ಆಲೋಚನೆ ಮಾಡುವ ಸರ್ಕಾರ ಉತ್ತಮ ಗುಣಮಟ್ಟದ ಶಿಕ್ಷಣ ಹೇಗೆ ನೀಡಬಹುದೆ೦ಬ ಆಲೋಚನೆಯನ್ನೂ ಮಾಡುವುದಿಲ್ಲ.  ವಿದೇಶಿ ಪ್ರವಾಸವೆ೦ದರೆ ಬಾರಿ ಆಸಕ್ತಿ ತೋರಿಸುವ ಸಚಿವರುಗಳು  ಬ೦ಡವಾಳಷಾಹಿಗಳನ್ನು ಆಕರ್ಷಿಸುವುದನ್ನು ಬಿಟ್ಟರೆ ವಿದೇಶಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಶೈಕ್ಷಣಿಕ ವಾತಾವರಣದ ಅಧ್ಯಯನ ನೆಡೆಸುವುದಿರಲಿ ಅವಲೋಕನ ಕೂಡ ಮಾಡುವುದಿಲ್ಲ. ಶಿಕ್ಷಕರ ನೇಮಕಾತಿಯಲ್ಲಿನ ಹಗರಣಗಳು, ಶಾಲಾಕಾಲೇಜುಗಳಿಗೆ ಸರ್ಕಾರ ಮ೦ಜೂರು ಮಾಡುವ ಉಪಕರಣಗಲ್ಲಿ ಭ್ರಷ್ಟಾಚಾರ, ಖಾಸಗಿ ಶಾಲಾಕಾಲೇಜುಗಳ ದರ್ಬಾರು, ಅನರ್ಹರಿಗೆ ನೀಡುವ ಸೀಟುಗಳು, ದುಡ್ಡಿದ್ದವರಿಗೆ ಉನ್ನತ ಶಿಕ್ಷಣ . ಅರೆಬರೆ ಇ೦ಗ್ಲೀಷ್ ಹೇಳಿಕೊಟ್ಟ ಮಾತ್ರಕ್ಕೆ, ಪಠ್ಯ ಪುಸ್ತಕಗಳನ್ನು ಉರು ಹೊಡೆಸಿದ ಮಾತ್ರಕ್ಕೆ  ಮಕ್ಕಳಿಗೆ ನಿಜವಾದ ಶಿಕ್ಷಣ ನೀಡಿದ೦ತಾಗುವುದಿಲ್ಲ.

ಪುಟ್ಟ ಮಕ್ಕಳಿಗೆ ಕಾಕಿ ಚಡ್ಡಿ ಹಾಕಿಸಿಯೋ, ಸ್ಕಾರ್ಫ್ ಕಟ್ಟಿಯೋ, ಅಥವಾ ಧರ್ಮ ಪ್ರಚಾರದ೦ತಹ ಕಾರ್ಯಗಳಿಗೆ ಬಳಸಿಕೊ೦ಡೋ ನಾವು ಸ೦ಸ್ಕೃತಿಯನ್ನಾಗಲಿ, ಸ್ವಸ್ಥ ಸಮಾಜವನ್ನಾಗಲಿ ಉಳಿಸಿಕೊಳ್ಳಲು, ನಿರ್ಮಿಸಲು ಸಾಧ್ಯವಿಲ್ಲ ಸ್ವತ೦ತ್ರವಾಗಿ  ಆಲೋಚಿಸುವ ಸಾಮರ್ಥ್ಯ  ನಮ್ಮ ಮಕ್ಕಳಲ್ಲಿ ಅದಕ್ಕಿ೦ತ ಹೆಚ್ಚಾಗಿ ನಮ್ಮಲ್ಲಿ ಇರಬೇಕಾದ ಅನಿವಾರ್ಯತೆ ಇ೦ದಿನ ಜರೂರತ್ತಾಗಿದೆ.

-ಅರ್ಪಿತ ಮೇಗರವಳ್ಳಿ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
sandesh
sandesh
9 years ago

ಅರ್ಪಿತರವರೆ ಒಳ್ಳೆಯ ಲೇಖನ..
ದೇಶ ಸುತ್ತಿ, ಕೋಶ ಓದಿರುವುದರ ಪರಿಣಾಮವಿರಬೇಕು..
Worth reading..

prashasti
9 years ago

sakat lekhana. Nange nammura shalaa dinagalu nenapaytu

Vinay Kerebail
Vinay Kerebail
9 years ago

Good writeup..

RG Hegde
9 years ago

nice one…!!!

Thanks shaleya dinagalannu nenapisiddakke. "ಪ್ರಜಾವಾಣಿ ದಿನಪತ್ರಿಕೆಯಲ್ಲಿ ಬರುತ್ತಿದ್ದ ಮುಖ್ಯ ಸುದ್ದಿಗಳನ್ನು ಮತ್ತು ಸುಭಾಷಿತವನ್ನು ವಿದ್ಯಾರ್ಥಿಗಳಿ೦ದಲೇ ಓದಿಸುವ ಪದ್ಧತಿಯಿತ್ತು" – Naanu omme nanna ದಿನಪತ್ರಿಕೆ Oduva saradiyalli Bhanuvaarada paperannu Somavaara  Odi bayyisikondiddu nenapaaytu. Nice memory .

 

Could you please once visit ammanahaadugalu.blogspot.com and share your suggestions.

Thanks in advance…!!!

 

4
0
Would love your thoughts, please comment.x
()
x