‘ಅಳಿಯ’ಎಂದೊಡನೆ ಅವನ ಬಗೆಗೆ ಕುತೂಹಲವಾಗುವುದುಂಟು. ಅಳಿಯ, ಅಳಿಯತನ, ಇವು ಸಂಸಾರಕ್ಕೆ ಸಂಬಂಧಿಸಿದ ಹೊಸ ಪದಗಳಲ್ಲದಿದ್ದರೂ ಕೂಡ ಈ “ಅಳಿಯ” ಎಂಬ ಪದದಲ್ಲಿ ಹೊಸ ಚೇತನ, ಹೊಸ ಕ್ರಿಯೆ, ಅಡಗಿದೆ ಎಂದೆನಿಸುತ್ತದೆ. ಈ ಅಳಿಯಂದಿರಲ್ಲಿ ಅನೇಕ ಪ್ರಕಾರಗಳುಂಟು. ಅಕ್ಕನ ಮಗ, ಹೆಂಡತಿಯ ತಮ್ಮ, ಮಗಳ ಗಂಡ, ಹೀಗೆ ಅನೇಕ ಅಳಿಯಂದಿರು ನಮಗೆ ಕಾಣಸಿಗುತ್ತಾರೆ. ಇನ್ನು ಕೆಲವರು ಮೊದಲು ಭಾವಿ ಅಳಿಯಂದಿರಾಗಿ ನಂತರ ಸ್ವಂತ ಅಳಿಯಂದಿರಾಗುವುದು ಸಾಮಾನ್ಯವಾಗಿದೆ. ಕೆಲವು ಭಾವಿ ಅಳಿಯಂದಿರು ಮದುವೆಗಿಂತ ಮೊದಲೇ ಬೋರಿಂಗ್ ಅಳಿಯರಾಗಿ ನಂತರ ಸ್ವಂತ ಅಳಿಯಂದಿರಾಗುವ ಸಾಧ್ಯತೆಗಳಿವೆ. ಭಾವಿ ಅಳಿಯಂದಿರೆನಿಸಿಕೊಂಡು ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಸ್ವಂತ ಅಳಿಯಂದಿರಾಗದೇ ಇರುವ ಸಂದರ್ಭಗಳೂ ಉಂಟು. ಇಂಥ ಅಳಿಯ ಮಹಾಶಯರು ಒಂದು ರೀತಿಯಲ್ಲಿ ಹೆಣ್ಣು ಹೆತ್ತವರ ಪಾಲಿಗೆ ಭಯದ ವಾತಾವರಣವನ್ನೇ ನಿರ್ಮಿಸಿ ಟೆರೆರಿಸ್ಟಗಳಾಗಿ ಬಿಡುತ್ತಾರೆ. ಹೀಗಾಗಿ ಹೆಣ್ಣು ಹೆತ್ತವರು ತಮ್ಮ ಮಗಳ ಮದುವೆ ಆಗುವವರೆಗೂ ಇಂಥ ಭಾವೀ ಅಳಿಯಂದಿರಿಂದ ತುಂಬಾ ಜಾಗರೂಕತೆಯಿಂದ ಇರಬೇಕಾಗಿದೆ.
ಅಳಿಯ ಎಂಬ ಪದವು ‘ಅಳಿ’ ಎಂಬ ಶಬ್ದದಿಂದಲೇ ಬಂದಂತಿದೆ. ಅಳಿ ಎಂದರೆ ನಾಶ ಎಂಬ ಅರ್ಥವಿದೆ. ಕನ್ನಡದಲ್ಲಿ “ಅಳಿಯ ಮನೆ ತೊಳಿಯ” ಎಂಬ ಗಾದೆಯ ಮಾತೂ ಇದೆ. ಹೆಣ್ಣು ಕೊಟ್ಟ ಅತ್ತೆ ಮಾವಂದಿರಿಗೆ ಈ ಭಾವಿ ಅಳಿಯನ ಬಗೆಗೆ ತುಂಬಾ ಅಕ್ಕರತೆ ಇರುತ್ತದೆ. ಈ ಅಳಿಯ ಇವರಿಗೆಲ್ಲ ದೇವರ ಸಮಾನವೇ ಆಗಿರುತ್ತಾನೆ. ಅಂತಲೇ ಕೆಲವರು ಇವನನ್ನು ಅಳಿಯದೇವರು ಎಂದು ಕರೆಯುವುದುಂಟು. ಈ ಭಾವೀ ಅಳಿಯನ ಚಲನ ವಲನಗಳನ್ನು, ಸ್ವಭಾವಗಳನ್ನು ಸೂಕ್ಷ್ಮವಾಗಿ ಗಮನಿಸಿ ಎಲ್ಲ ರೀತಿಯಿಂದಲೂ ಅವನ ಬಗೆಗೆ ದೊಡ್ಡಸ್ಥಿಕೆಯನ್ನು ಅವರಿವರ ಮುಂದೆ ಹೇಳಿ ಸಮಾಧಾನಪಟ್ಟುಕೊಳ್ಳುವ ಮಾವಂದಿರೂ ನಮಗೆ ಕಾಣಸಿಗುತ್ತಾರೆ. ಇನ್ನು ಅತ್ತೆ ತೋರಿಸಬಹುದಾದ ಪ್ರೀತಿಯೇ ಬೇರೆ, ಸರ್ವಜ್ಞನೇ ಹೇಳಿರುವಂತೆ “ಅತ್ತಿ ಅಳಿಯಗ ಜೀವ, ಕತ್ತಿ ಕರಕಿಗೆ ಜೀವ" ಹೀಗೆ ಅತ್ತಿ ಅಳಿಯಂದಿರ ಸಂಬಂಧ ಇಲ್ಲಿ ವಿಶೇಷವಾಗಿರುತ್ತದೆ.
ಅತ್ತೆ ಮಾವಂದಿರ ಪ್ರೀತಿ ಒಂದೆಡೆಯಾದರೆ ಈ ಅಳಿಯನ ಕಥೆಯೇ ಬೇರೆ. ಇವನ ಲಕ್ಷವಿರುವುದು ಮಾವನ ಮೇಲೂ ಅಲ್ಲ, ಅತ್ತೆಯ ಮೇಲೂ ಅಲ್ಲ. ಅವನ ಗಮನವಿರುವುದು ಭಾವೀ ಹೆಂಡತಿಯ ಮೇಲೆ. ತನ್ನ ಬಾಳ ಸಂಗಾತಿಯಾಗಲಿರುವವಳು ಹಾಗಿರಬೇಕು, ಹೀಗಿರಬೇಕು ಎಂಬ ಕನಸು ಹೊತ್ತು ಕನ್ಯಾನ್ವೇಷಣೆ ಆರಂಭಿಸಿ ನೂರರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಈ ‘ಭಾವಿ ಅಳಿಯ’ ಎಂಬ ಮಹಾಪದವಿಗೆ ಬಂದಿರುತ್ತಾರೆ. ಆದುದರಿಂದ ಇವರ ಮನಸ್ಸೆಲ್ಲವೂ ಬಾಳ ಸಂಗಾತಿಯ ಬಗೆಗೇ ಇರುತ್ತದೆ. ಹಗಲಿರುಳೂ ಇವಳ ಚಿಂತನೆಯಲ್ಲಿ ಕಾಲನೂಕುವ ಈ ಅಳಿಯಂದಿರು ಪ್ರೇಮಗೀತೆ ಬರೆಯುವ ಭಾವೀ ಕವಿಗಳಾಗಿ ಬಿಡುತ್ತಾರೆ. ಇತ್ತೀಚೆಗಂತೂ ಈ ಮೊಬೈಲ್ ಬಂದು ಕರನ್ಸಿ ಖಾಲಿಯಾಗುವವರೆಗೆ ಮಾತುಕಥೆ ನಿಲ್ಲದೇ ಸಾಗಿರುತ್ತದೆ.
ಇನ್ನು ಈ ಅಳಿಯಂದಿರಿಗೆ ಮದುವೆಗೆ ಮುಂಚೆಯೇ ಅಳಿಯತನ ಮಾಡಬೇಕೆಂಬ ಹಂಬಲ ಇದ್ದೇ ಇರುತ್ತದೆ. ಅದಕ್ಕಾಗಿ ಅನೇಕ ಸಂದರ್ಭಗಳನ್ನು ಉಪಯೋಗಿಸಿಕೊಳ್ಳಲು ಹಾತೊರೆಯುತ್ತಿರುತ್ತಾರೆ. ಉದಾಹರಣೆಗೆ ದೀಪಾವಳಿ, ದಸರಾ, ಸಂಕ್ರಾಂತಿ ಮುಂತಾದ ಹಬ್ಬ ಗಳಲ್ಲಿ ಮಾವನ ಮನೆಗೆ ಶುಭಾಶಯ ಕಳಿಸುವುದರಿಂದ ಹಿಡಿದು ಅವರಿಂದ ಪ್ರತ್ಯುತ್ತರ ಬರುವವರೆಗೂ ಕಳಿಸುತ್ತಲೇ ಇರುತ್ತಾರೆ. ಶುಭಾಶಯ ಪತ್ರ ಕಳಿಸುವುದು ಈಗ ಹಳೆಯ ಕಾಲದ ಮಾತಾಗಿ ಈಗಿನ ಭಾವಿ ಅಳಿಯಂದಿರು ಅದಾವ ಗೋಜಿಗೂ ಹೋಗದೇ ಎಂಗೇಜಮೆಂಟ್ ಆದ ಮರುದಿನವೇ ಸಾಲಸೋಲ ಮಾಡಿಯಾದರೂ ಭಾವಿ ಹೆಂಡತಿಗೆ ಒಂದು ಮೊಬೈಲ್ ಕೊಡಿಸಿ ಜಸ್ಟ್ ಒಂದು ಮಿಸ್ ಕಾಲ್ ಕೊಡು ಎಂದು ವಿನಂತಿಸಿರುತ್ತಾರೆ. ಅಕಸ್ಮಾತ್ ಏನಾದರೂ ಭಾವಿ ಹೆಂಡತಿಯ ಮನೆಯಿಂದ ಬಾ ಎಂದು ಆಹ್ವಾನ ಬಂದರೆ ಮುಗಿದೇ ಹೋಯಿತು. ಇವರಿಗೆ ಸ್ವರ್ಗ ಮೂರೇಗೇಣು ಉಳಿದಿರುತ್ತದೆ. ಕಿಸೆಯಲ್ಲಿ ಹಣ ಇರದೇ ಹೋದರೂ ಹೇಗೊ ಹೊಂದಿಸಿಕೊಂಡು ಮಾವನ ಮನೆಗೆ ಹೊರಟೇಬಿಡುತ್ತಾರೆ. ಅಲ್ಲದೇ ತಮ್ಮ ಮನೆಯಲ್ಲಿ ಮಾವನ ಮನೆಗೆ ಹೋಗುವ ಸುಳಿವು ಕೊಡದೇ ಮಾಯವಾಗುವ ಭೂಪರೂ ಇದ್ದಾರೆ.
ದೀಪಾವಳಿ ಹಬ್ಬಕ್ಕೂ ಹೊಸದಾಗಿ ಮದುವೆಯದ ಗಂಡುಗಳಿಗೂ ಬಾದರಾಯಣ ಸಂಬಂಧವಿದೆ. ಭಾವಿ ಅಳಿಯತನ ಮುಗಿಸಿದ್ದರೂ ಕೂಡ ದೀಪಾವಳಿ ಬಂತೆಂದರೆ ದೀಪಾವಳಿ ಅಳಿಯ ಎಂಬ ಖ್ಯಾತಿಗೆ ಪಾತ್ರರಾಗುವ ಹಂಬಲ ಹೊಂದಿರುತ್ತಾರೆ. ಅಲ್ಲದೇ ಯಾವಾಗ ದೀಪಾವಳಿ ಬಂದೀತೋ ಎಂಬ ಹಾದಿ ನೋಡುವ ಭೂಪರೂ ಸಹ ಇದ್ದಾರೆ. ದೀಪಾವಳಿಗೆ ಯಾವ ಉಡುಗೊರೆ ಕೊಡುವರೋ ಎಂಬ ಕನಸನ್ನು ಕಾಣುವವರೂ ಇದ್ದಾರೆ. ಒಂದು ವೇಳೆ ದೀಪಾವಳಿಯ ಅಹ್ವಾನ ಬರಲಿಕ್ಕಿಲ್ಲ ಎಂಬ ಸಂಭವ ಕಂಡು ಬಂದರೆ ಮನೆಯಲ್ಲಿರೋ ಹೆಂಡತಿಗೆ ಯಾವುದಾದರೂ ರೀತಿಯಲ್ಲಿ ತಿಳಿಹೇಳಿ ದೀಪಾವಳಿ ವ್ಯವಸ್ಥೆ ಮಾಡೆನ್ನುವವರಿದ್ದರೆ ಗಂಡಿನ ತಂದೆ ತಾಯಿಗಳು ಮನೆಗೆ ಬಂದವರೆದುರಿಗೆ ಸೊಸೆಯ ಎದುರಿನಲ್ಲೇ ನಮ್ಮ ಮಗ ಸೊಸೆ ಈ ಸಲ ದೀಪಾವಳಿಗೆ ಬೀಗರ ಊರಿಗೆ ಹೋಗ್ತಾರೀ ಯಾಕಂದ್ರ ಹೊಸದಾಗಿ ಮದುವಿ ಆದವ್ರು ಎಂದು ಮೊದಲೇ ರೀಲು ಬಿಟ್ಟಿರುತ್ತಾರೆ. ತನ್ನ ತವರಿನವರ ಮರ್ಯಾದೆ ಉಳಿಸುವುದಕ್ಕಾದರೂ ಸೊಸೆಯಾದವಳು ತನ್ನ ತವರಿನವರಿಗೆ ಹೇಳಿಕಳಿಸುವ ಪರಸ್ಥಿತಿ ಬಂದೊದಗಿರುತ್ತದೆ.
ಇನ್ನು ಹೆಣ್ಣಿನ ಮನೆಯವರ ಪರಸ್ಥಿತಿಯೇ ಬೇರೆ. ಅದೇತಾನೆ ಮಗಳ ಮದುವೆ ಮಾಡಿ ಇದ್ದ ಹಣವನ್ನೆಲ್ಲ ಅಳಿಯನಿಗೋ, ಅಥವಾ ಮದುವೆಗೋ ಖರ್ಚು ಮಾಡಿ ಕಿಸೆ ಖಾಲಿ ಮಾಡಿಕೊಂಡ ಮಾವಯ್ಯ ಇನ್ನೇನು ಸುಧಾರಿಸಿಕೊಳ್ಳಬೇಕೆನ್ನುವಷ್ಟರಲ್ಲಿ ಈ ದೀಪಾವಳಿ ಬಂದಿರುತ್ತದೆ. ದೀಪಾವಳಿಗೆ ಅಳಿಯನನ್ನು ಕರೆಸಬೇಕೋ ಬೇಡವೋ ಎಂಬ ಚಿಂತೆ ಈ ಮಾವಂದಿರನ್ನು ಕಾಡತೊಡಗಿದರೆ ಇದೇ ಕಾರಣಕ್ಕಾಗಿ ಮಗಳಿಗೆಲ್ಲಿ ತೊಂದರೆಯಾಗುವುದೋ ಎಂಬ ಚಿಂತೆ ಇವರಿಗಿರುತ್ತದೆ. ದೀಪಾವಳಿ ಯಾಕಾದರೂ ಬಂತೋ ಎಂದು ಕೈಕಟ್ಟಿ ಕುಳಿತುಕೊಳ್ಳುವ ಮಾವಂದಿರು ಇದ್ದಾರೆ. ಇದಾವುದನ್ನೂ ಹಚ್ಚಿಕೊಳ್ಳದೇ ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ಸುಮ್ಮನಾಗುವ ಮಾವಂದಿರೂ ಇದ್ದಾರೆ. ಇಂಥ ಸಂದರ್ಭಗಳಲ್ಲಿ ಹೆಣ್ಣುಕೊಟ್ಟ ಅತ್ತೆಯ ಪಾತ್ರ ತುಂಬಾ ಹಿರಿದು. “ಏನ್ರೀ, ಇಷ್ಟು ಖರ್ಚು ಮಾಡಿ ಮದುವಿ ಮಾಡೀರಿ ಇದ ಒಂದಕ್ಕ ಯಾಕ ಶಾಣೇತನ ಮಾಡತೀರಿ. ಅಳಿಯಂದ್ರು ಮತ್ತ ಸಿಟ್ಟು ಆಗ್ಯಾರು” ಎಂದು ಗಂಡನಿಗೆ ಹೇಳಿದಾಗ ಮಾವಯ್ಯ ಅಳಿಯನಿಗೆ ಸಮಾಧಾನ ಮಾಡುವ ತಯಾರಿ ತನ್ನಿಂದ ತಾನೇ ನಡೆಯುತ್ತದೆ.
ಈ ಅಳಿಯತನದ ಕನಸು ಹೊತ್ತು ಮಾವನ ಮನೆಗೆ ಬಂದಿಳಿಯುವ ಅಳಿಯಂದಿರನ್ನು ಮಾವಯ್ಯ ತನ್ನೊಳಗಿನ ಮುನಿಸನ್ನು ತೋರ್ಪಡಿಸದೇ ಮುಗುಳ್ನಗೆಯನ್ನು ಬೀರಲೇಬೇಕು. ಅತ್ತೆಗೆ ಅಳಿಯನ ಮೇಲಿನ ಕಾಳಜಿ ಎಷ್ಟಾದರೂ ಮುಗಿಯುವದಿಲ್ಲ. ಬಗೆಬಗೆಯ ತಿಂಡಿಗಳನ್ನು ಮಾಡಿ ತಿನಿಸುವುದರಲ್ಲಿ ಅತ್ತೆಗೆ ಖುಷಿಯೋ ಖುಷಿ. ತಮ್ಮ ಮನೆಯಲ್ಲಿ ಸಿಗದಿರುವ ಸೌಕರ್ಯ ಮಾವನ ಮನೆಯಲ್ಲಿ ಕೇಳದೇ ದಕ್ಕಿರುವ ಈ ಸಂದರ್ಭದಲ್ಲಿ ಅಳಿಯನನ್ನು ಸ್ವರ್ಗ ಎಲ್ಲಿದೆ ? ಎಂದು ಕೇಳಿದರೆ ಅತ್ತೆಯ ಮನೆಯಲ್ಲಿ ಎಂದು ಅವನು ಹೇಳಿವಷ್ಟು ಮೋಡಿಮಾಡುವ ಅತ್ತೆಯಂದಿರೂ ಇದ್ದಾರೆ.
‘ಬೆಕ್ಕಿಗೆ ಚಲ್ಲಾಟ ಇಲಿಗೆ ಪ್ರಾಣ ಸಂಕಟ’ ಎನ್ನುವಂತೆ ಮನೆಯವರೆಲ್ಲ ಸಂತಸ ಸಡಗರಗಳಲ್ಲಿದ್ದರೆ ಮನೆಯ ಯಜಮಾನ ಮಾವಯ್ಯನ ಪರಸ್ಥಿತಿಯೇ ಬೇರೆ. ಅಳಿಯ ಮನೆಯನ್ನು ಬಿಡುವವರೆಗೆ ಇವನು ಹೊರಗಿಂದೊರಗೇ ಇರುತ್ತಾನೆ. ಅಳಿಯ ಮನೆಗೆ ಬಂದು 8-10 ದಿವಸಗಳಾದರೂ ಮುಖ ತೋರಿಸದ ಮಾವಂದಿರೂ ಇದ್ದಾರೆ. ಮತ್ತು ಮಗಳಿಗೆ ಏನಾದರೊಂದು ನೆವ ಹೇಳಿ ವಶೀಲಿ ಹಚ್ಚಿ ಉಡುಗೊರೆ ಕಾರ್ಯಕ್ರಮವನ್ನು ಪೋಸ್ಟ-ಫೋನ್ ಮಾಡಿಸುವ ಮಾವಂದಿರೂ ಇದ್ದಾರೆ. ಇದನ್ನರಿತ ಕಿಲಾಡಿ ಅಳಿಯಂದಿರು ಸೀರಿಯಸ್, ಪ್ಲೀಸ್ ಎಕ್ಸಟೆಂಡ್ ಲೀವ್ ಎಂದು ಮಾವನ ಮನೆಯಿಂದಲೇ ತಮ್ಮ ಆಫೀಸಿಗೆ ರಜೆ ಸಂದೇಶವನ್ನು ಕಳಿಸುವವರಿದ್ದಾರೆ. ಹೀಗೆ ದೀಪಾವಳಿ ಮುಗಿಯುವುದರೊಳಗಾಗಿ ಮಾವನನ್ನು ದೀವಾಳಿ ತಗೆಸಿಬಿಡುತ್ತಾರೆ.
ಎಲ್ಲ ಅಳಿಯಂದಿರೂ ಇಂತವರೇ ಆದರೆ ಮಾವನ ಗತಿ ಏನಾಗಬೇಡ? ಕೆಲವು ಸಂಪನ್ನ ಅಳಿಯಂದಿರೂ ಇದ್ದಾರೆ. ಎಷ್ಟು ಪೀಡಿಸಿದರೂ ಕೈ ಬಿಚ್ಚದ ಮಾವನ ಗೋಜಿಗೆ ಹೋಗದೇ ತಮ್ಮ ಕಿಸೆಯಲ್ಲಿನ ಹಣ ಖರ್ಚು ಮಾಡಿ ಬಟ್ಟೆ ಕೊಂಡು ಮಾವನ ಹೆಸರನ್ನು ಹೇಳಿ ಅವನನ್ನು ಕೊಂಡಾಡುವಂತಹ ಅಳಿಯಂದಿರೂ ಇದ್ದಾರೆ.
ಈ ಆಳಿಯಂದಿರು ಅಳಿಯತನಕ್ಕೆ ಹೋದಾಗ ಬೆಪ್ಪಾದ ಪ್ರಸಂಗಗಳು ಅನೇಕ. ಎಷ್ಟೋ ಸಾರಿ ಹೊಸ ಹೆಂಡತಿಯ ಗುಂಗಿನಲ್ಲಿ ಬೀಗರ ಮನೆಗೆ ಹೋದಾಗ ಸಕ್ಕರೆ ಹಾಕದ ಚಹಾವನ್ನು ತುಂಬಾ ಚನ್ನಾಗಿದೆ ಎಂದು ಸಕ್ಕರೆ ರೋಗಿಯಂತೆ ಕುಡಿದವರೂ ಉಂಟು. ಅಪರೂಪಕ್ಕೆಂದು ಮಾಡಿದ ಭಕ್ಷಭೋಜನಗಳನ್ನು ಎಂದೂ ಕಾಣದವನಂತೆ ಮತ್ತೆ ಮತ್ತೆ ಸಿಗಲಿಕ್ಕಿಲ್ಲವೆಂದು ತಿಂದು ಮನೆಯಲ್ಲಿನ ನೀರನ್ನೆಲ್ಲ ಖಾಲಿ ಮಾಡಿದ ಅಳಿಯಂದಿರೂ ಇದ್ದಾರೆ. ಕೆಲವುಸಾರಿ ಕೇಶ ತೈಲವೆಂದುಕೊಂಡು ಡೆಟಾಲ್ ಹಚ್ಚಿಕೊಂಡವರು, ಶೇವಿಂಗ್ ಕ್ರೀಂ ನ್ನು ಟೂಥ್ಪೇಸ್ಟ ಎಂದುಕೊಂಡು ಹಲ್ಲು ತಿಕ್ಕಿದ ಮಹೋದಯರ ಉದಾಹರಣೆಯನ್ನು ಕೇಳಿದ್ದೇವೆ. ಈ ರೀತಿ ಪೇಚಿಗೆ ಸಿಕ್ಕ ಅಳಿಯಂದಿರು ಹೆಂಡತಿಯೊಂದಿಗೆ ಮಂಗಳಾರತಿ ಮಾಡಿಸಿಕೊಂಡ ಪ್ರಸಂಗಗಳು ಅನೇಕ.
ಇತ್ತೀಚೆಗಂತೂ ಅಳಿಯಂದಿರ ಆಶೆಗಳು ಮಿಂಚಿನ ವೇಗದಲ್ಲಿ ಏರುತ್ತಿವೆ. ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿರುವ ಈ ಕಾಲದಲ್ಲಿ ಮುಂದೆ ಅಳಿಯಂದಿರಾಗಬೇಕಾದ ಯುವಕರು ಹೊಸ ಮಾರ್ಗವನ್ನೆ ಕಂಡುಹಿಡಿದಿದ್ದಾರೆ. ಹೀಗಾಗಿ ಮಗಳ ಕ್ಷೇಮಕ್ಕಾಗಿ ಮಾವ ಅಳಿಯನಿಗೆ ನೌಕರಿ ಕೊಡಿಸಬೇಕು. ‘ತಮ್ಮ ಆಶೆಯು ಮಾವನ ದುಃಖಕ್ಕೆ ಮೂಲ’ ಎಂದು ತಿಳಿದಿದ್ದರೂ ಸಹಿತ ತಮ್ಮ ಸುಖಕ್ಕೆ ಆಧಾರವೆಂದು ತಿಳಿದು ಸಂತೋಷ ಪಡುವ ಅಳಿಯಂದಿರು ನಮಗೆ ಕಾಣಸಿಗುತ್ತಾರೆ.
ಹೀಗೆ ಹೇಳುತ್ತ ಹೋದರೆ ಅಳಿಯಂದಿರ ಕಥೆ ಮುಗಿಯದು. ಇವರ ಅವತಾರಗಳು ಒಂದೇ, ಎರಡೇ, ಈ ಅವತಾರ ಪುರುಷರು ಮುಂದೆ ತಾವೂ ಮಾವಂದಿರಾಗಬೇಕಾದ ಸಂದರ್ಭ ಇರುವುದರಿಂದ ತಮಗೆ ಬರುವ ಅಳಿಯಂದಿರಿಗೆ ಈಗಿನಿಂದಲೇ ಇವರು ಮಾದರಿಯಾದರೆ ಒಳ್ಳೆಯದು ಅಲ್ಲವೇ?
****************
-ಜಯಪ್ರಕಾಶ ಅಬ್ಬಿಗೇರಿ
ಚಂದದ ಲೇಖನ; ಇಷ್ಟ ಆಯ್ತು. ದಶಕಗಳ ಹಿಂದೆ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ನಗೆಪ್ರಬಂಧಗಳ ನೆನಪಾಯ್ತು!
ಇಲ್ಲಿನ ಎಲ್ಲಾ ಬರಹಗಳಿಗೂ ಹೀಗೆ ಸೂಕ್ತವೆನಿಸುವ ಇಲ್ಲಸ್ಟ್ರೇಷನ್ ಬಳಸಿದರೆ ಓದಲು ಇನ್ನಷ್ಟು ಸೊಗಸು…!
ನಗೆಪ್ರಬಂಧಗಳ ಕಾಲ ಮುಗಿದು ಹೋಯಿತೆನೋ ಅನ್ನುವ ಸಂದರ್ಭದಲ್ಲಿ ಇಂತಹ ಹಾಸ್ಯ ಲೇಖನ ಪ್ರಕಟಿಸಿದ ಪಂಜು ಬಳಗದ ಸ್ನೇಹಿತರು ಅಭಿನಂಧನಾರ್ಹರು…..