ನಮಗೆ ನೀರು ಬೇಡ, ರಸ್ತೆ ಬೇಡ, ಮನೆಯೂ ಬೇಡ, ಸ್ವಾತಂತ್ರ್ಯದ ಗುರುತಿನ ಒಂದೇ ಒಂದು ಪತ್ರ ಬೇಡ. ನಿಮ್ಮ ಸವಲತ್ತುಗಳು ನಿಮಗೆ ಇರಲಿ. ನಮ್ಮನ್ನ ಬದುಕಲು ಬಿಡಿ. ಕಾಡು ಕಾಯುವವರು ನಾವು ನಮಗೆ ಸಾಮಾಜಿಕ ನ್ಯಾಯ ಕೊಡಿ.
ಹಸಿರುಟ್ಟ ಹಾಡಿಯಲ್ಲಿ, ನೆಮ್ಮದಿಯ ಬದುಕಿಗಾಗಿ ಹಾತೊರೆಯುತ್ತಿರುವ ಆದಿವಾಸಿಗಳ ಅಹವಾಲಿದು..ಬದಕಲು ಬಿಡಿ ಅಂತ ಅಂಗಲಾಚುತ್ತಿರುವ ಪರಿಯಿದು…ದೊಡ್ಡ ಗೌಡರ ಬಾಗಿಲಿಗೆ ನಮ್ಮ ಎಲುಬಿನ ತ್ವಾರಣಾ. ಶೋಷಣೆ ವಿರುದ್ಧದ ಈ ಹಾಡು ಮಲೆನಾಡ ಮಡಿಲೊಳಗೆ ಹರಡಿದ ಕಾಡು ದರಲೆ ಮೇಲೆ ನೆತ್ತರ ಹರಿಸಿದ್ದು, ಈಗ ಇತಿಹಾಸ.. ಆದ್ರೆ ಅದರಿಂದ ಸಿಕ್ಕಿದೇನು ..? ಉತ್ತರ ಇಂದಿಗೂ ಸಿಕ್ಕಿಲ್ಲ.
ಇರಲಿ ಬಿಡಿ ಕೊನೆ ಪಕ್ಷ ಹೋರಾಟದ ಉದ್ಧೇಶವೆನಿಸಿದ್ದ ಅಸಮಾನತೆಯಾದ್ರೂ ನಿವಾರಣೆಯಾಯಿತು ಅಂದುಕೊಂಡ್ರೆ ಅದು ಕೂಡ ಆಗಿಲ್ಲ. ಸ್ವರೂಪ ಮಾತ್ರ ಬದಲಾಗಿದೆ. ಮೇಲ್ವರ್ಗದ ಶೋಷಣೆ ಕಡಿಮೆಯಾದ್ರೂ, ಕಾರ್ಯಾಂಗದ ತುಳಿತ ಮಿತಿಮೀರುತ್ತಿದೆ. ಆದಿವಾಸಿಗಳು ಅಧಿಕಾರಿಗಳ ದೌರ್ಜನ್ಯದಿಂದಾಗಿ ಸ್ವಾತಂತ್ರ್ಯವನ್ನೇ ಕಳೆದುಕೊಳ್ಳುತ್ತಿದ್ದಾರೆ. ತಣ್ಣನೆಯ ಕ್ರೌರ್ಯಕ್ಕೆ ಬದುಕಿನ ಹಕ್ಕನ್ನೇ ಬಿಟ್ಟುಕೊಡಬೇಕಾಗಿದೆ. ಇದೆಂತಹ ನ್ಯಾಯ ಸ್ವಾಮಿ ಅನ್ನುವ ಹಾಗಿಲ್ಲ. ತಪ್ಪಿದಲ್ಲಿ ಕಾಡೊಳಗಿಲ್ಲದ ಶಿಕ್ಷೆ ನಾಡು ನೀಡುತ್ತೆ. ಮತ್ತೆ ಕಾಡಿಗೆ ಬರದಂತೆ ಕೇಸು ಬೀಳುತ್ತೆ. ಒಂಬತ್ತು ಜಿಲ್ಲೆ 23 ಗ್ರಾಮಗಳ ಆದಿವಾಸಿ ಕುಟುಂಬಗಳ ಪರಿಸ್ಥಿತಿಯಿದು.
ನಾಡಿನಲ್ಲಿನ ಮಂದಿಗೆ ಬದುಕೋಕೆ ನಾನಾ ದಾರಿ. ಕಾಡುಮಕ್ಕಳಿಗೆ ಕಾಡೊಂದೇ ಬದುಕಿನ ಹಾದಿ. ಆದ್ರೆ ತಾನು ಹುಟ್ಟಿ ಬೆಳೆದ ಕಾಡಿಗೀಗ ಆದಿವಾಸಿ ಹೋಗುವ ಹಾಗಿಲ್ಲ. ಕಾಡೊಳಗಿಟ್ಟ ಸಿ.ಸಿ ಟೀವಿ, ಕಾಡುವಾಸಿಗಳನ್ನ ಹದ್ದಿನ ಕಣ್ಣಿಟ್ಟು ಕಾಯುತ್ತಿದೆ. ಅಪ್ಪಿತಪ್ಪಿ ಕಾಡಿಗೆ ಹೋದರೂ ,ಅರಣ್ಯ ಇಲಾಖೆ ಮನೆಗೆ ಬಂದು ಕೇಸು ಜಡಿಯುತ್ತಿದೆ. ಗೊತ್ತೆ ಇಲ್ಲದ ದೆಹಲಿ ಡೈರಿಯಲ್ಲಿರೋ ಅರಣ್ಯ ಕಾನೂನನ್ನ ತೋರಿಸಿ ಫಾರೆಸ್ಟ್ ಇಲಾಖೆ, ಅರಣ್ಯವಾಸಿಗಳಿಗೆ ಒಕ್ಕಲೆಬ್ಬಿಸುವ ಬೆದರಿಕೆ ಹಾಕುತ್ತಿದೆ. ಇದು ಸಾಲದೆಂಬಂತೆ ಸೊಪ್ಪು, ಸೌದೆ, ಹಣ್ಣು, ಮೂಲಿಕೆ, ಜೇನು, ಯಾವುದನ್ನೂ ಸಂಗ್ರಹಿಸಲು ಇಲಾಖೆ ಬಿಡುತ್ತಿಲ್ಲ. ಬೇಟೆಗೆ ನಿಷೇಧವಿದ್ರೆ, ಮೀನು ಹಿಡಿಯೋದಕ್ಕೆ ಅಬ್ಜೆಕ್ಷನ್ ಇದೆ. ಬೆಳೆ ಬೆಳೆಯೋಕೆ ವಿರೋಧವಿದೆ. ನಂಬಿದ ಕಾಡುದೇವರು ಕೂಡ ಅರಣ್ಯ ಇಲಾಖೆಗೆ ಹೆದರಿ ಕುಳಿತಿದ್ದಾನೆ. ಪ್ರತಿಭಟಿಸಿದ್ರೆ ದೌರ್ಜನ್ಯ ಎದುರಿಸಬೇಕು.
ಮೊದಲೆಲ್ಲಾ ಹೀಗಿರಲಿಲ್ಲ. ಕಾಡಿನ ರಂಗಪ್ರವೇಶ ಸಲೀಸಾಗಿತ್ತು. ಹಕ್ಕಿಯ ಗಿಜಿಗಿಜಿಯಿಂದ ಹಿಡಿದು,ತರಗಲೆಯ ಸದ್ದಿನವರೆಗೆ, ಆದಿವಾಸಿಗಳು ಕಥೆ ಕಟ್ಟುತ್ತಿದ್ದರು.ಆದ್ರೆ ಕಾಲ ಬದಲಾಗುತ್ತಾ ಪಶ್ಚಿಮ ಘಟ್ಟದಲ್ಲಿ ದೇಶಾಭಿವೃದ್ಧಿಯ ಯೋಜನೆಗಳನ್ನ ಶುರುವಿಟ್ಟುಕೊಂಡಿತು ಸರ್ಕಾರ. ಅದಕ್ಕೆ ಅಡ್ಡವಾದವರು ಆದಿವಾಸಿಗಳು. ಹೀಗಾಗಿ ಸಂರಕ್ಷಣೆಯ ಹೆಸರಲ್ಲಿ ಅಭಯಾರಣ್ಯಗಳು ತಲೆ ಎತ್ತಿದವು. ಪರಿಣಾಮ ಭೂತಕಾಲದಲ್ಲಿ ಲೀನವಾದ ವರ್ತಮಾನಗಳು ತನ್ನೊಂದಿಗೆ ಆದಿವಾಸಿಗಳ ಬದಕನ್ನೂ ನುಂಗುತ್ತಲೇ ಇದೆ. ಇದೀಗ ಅಳಿದುಳಿದ ಅಲ್ಪಸಂಖ್ಯಾತರನ್ನ ಭವಿಷ್ಯ ಕಾಡುತ್ತಿದೆ..
ಈ ದೇಶದ ಕಾನೂನು ಸ್ವಚ್ಚಂದ ಬದುಕಿನ ಹಕ್ಕನ್ನ ಆದಿವಾಸಿಗಳಿಗೆ ನೀಡಿದೆ. ಆದರೂ ಭಾರತದ ಜನಸಂಖ್ಯೆಯ ಶೆಕಡಾ ಆರರಷ್ಟು ನಿಸರ್ಗ ಮಕ್ಕಳು ಬಹುತೇಕ ಇದೆ ಸಮಸ್ಯೆಗಳನ್ನ ಎದರಿಸುತ್ತಿದ್ದಾರೆ. ಅದರಲ್ಲಿ ಕರ್ನಾಟಕದ ಪಶ್ಚಿಮಘಟ್ಟ ಸಾಲಿನ ಒಂಬತ್ತು ಜಿಲ್ಲೆಗಳು ಒಳಗೊಂಡಿದೆ. ಅನುಸೂಚಿತ ಬುಡಕಟ್ಟುಗಳ ಹಾಗೂ ಇತರೆ ಪಾರಂಪರಿಕ ಅರಣ್ಯವಾಸಿಗಳ ಅರಣ್ಯಹಕ್ಕು ( ಮಾನ್ಯತಾ) ಕಾಯಿದೆ 2006 ಮತ್ತು 2008 ರ ನಿಯಮದ ಪ್ರಕಾರ ಆದಿವಾಸಿಗಳಿಗೆ ಮಾನ್ಯತಾ ಹಕ್ಕಿದೆ. ಅದರ ಪ್ರಕಾರ ಸೊಪ್ಪು ಸವರುದರಿಂದ ಹಿಡಿದು ಸ್ವಂತ ಮನೆಕಟ್ಟಿ ಸಾಗುವಳಿ ಮಾಡುವರೆಗೂ ಆದಿವಾಸಿಗಳ ಹಕ್ಕನ್ನ ಕಿತ್ತುಕೊಳ್ಳುವ ಹಾಗಿಲ್ಲ. ವಿಪರ್ಯಾಸ ಅಂದ್ರೆ ಈ ಕೇಂದ್ರ ಕಾನೂನಿನ ವ್ಯಾಪ್ತಿ ಹಾಗೂ ಅರಿವು ಚರ್ಚೆಯಾಗುತ್ತಿಲ್ಲ. ಉನ್ನತ ಮಟ್ಟದ ಅಧಿಕಾರಿಗಳೂ ಇದನ್ನ ಒಪ್ಪಿಕೊಳ್ಳುತ್ತಾರೆ. ಆದ್ರೆ ,ಅದೆ ಸಮಯದಲ್ಲಿ ಕಾನೂನಿನ ಅನುಷ್ಟಾನದ ಮಾತನ್ನ ಮರೆತು ಬಿಡುತ್ತಾರೆ. ದಿಕ್ಕು ತಪ್ಪುವುದೇ ಇಲ್ಲಿ. ಅಧಿಕಾರಿಗಳ ಭರವಸೆಯನ್ನ ನಂಬಿ ಕೈಮುಗಿಯುವ ನೆಲದ ಮಕ್ಕಳು, ಕಾನೂನಿನ ಬಗ್ಗೆ ಅರಿಯಲು ಸಹ ಮುಂದಾಗುವುದಿಲ್ಲ. ಪರಿಣಾಮ ಅರಣ್ಯವಾಸಿಗಳಿಗೆ ಸಂಕಷ್ಟ ಕೊನೆಯಾಗುತ್ತಿಲ್ಲ..
ಇನ್ನು, ನೊಂದವರ ನೋವು ನಿವಾರಿಸುತ್ತೇವೆ ಎಂದು ಬರುವ ನಾಡಿನ ಜನಪ್ರತಿನಿಧಿಗಳು ಮತ್ತೆ ಹಾಡಿಯತ್ತ ಹೆಜ್ಜೆ ಹಾಕೋದು ಚುನಾವಣೆ ಸಮಯದಲ್ಲೆ. ಅಲ್ಲಿಯವರೆಗೂ ಅಧಿಕಾರದ ಅಹಮ್ಮಿನಡಿಯಲ್ಲೆ ಬದುಕಬೇಕು ಆದಿವಾಸಿಗಳು. ಕಾಡುಮೃಗಳಿಗೂ ಅಂಜದೆ ಅಳ್ಳೆದೆಯ ಮಂದಿಯಲ್ಲಿ ಅಳುಕು ಹುಟ್ಟಿಸಿದೆ, ಕಾನೂನು ಬದ್ದ ದೌರ್ಜನ್ಯ. ಸಮಾನತೆ ಇನ್ನೂ ಸಿಕ್ಕಿಲ್ಲ. ಆದಿವಾಸಿಗಳ ಅರಣ್ಯರೋಧನ ಯಾರಿಗೂ ಕೇಳುತ್ತಿಲ್ಲ. ಬುಡಕಟ್ಟಿನ ಬದುಕಿಗೆ ಹೋರಾಡಿ ಮಡಿದ ಅಲ್ಲೂರಿಯ ಒಡಲುರಿ ಆರುತ್ತಿಲ್ಲ‘..
*****
ವಿ.ಸೂ.: ಅಲ್ಲೂರಿಯವರ ಕುರಿತ ಪರಿಚಯ ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ
ಅಜ್ಜಿಮನೆ ಗಣೇಶ: ಮೂಲತಃ ಕುಂದಾಪುರದವರಾದ ಅಜ್ಜಿಮನೆ ಗಣೇಶರ ನಿಜ ನಾಮ ಗಣೇಶ ನಾವಡ. ಸಾಹಿತ್ಯಾಸಕ್ತಿ ಹೊಂದಿರುವ ಇವರು ಪ್ರಸ್ತುತ ಸಮಯ ಟಿವಿಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Yes he right…we have to support dis peoples…….
ಲೇಖನ ತುಂಬಾ ಚೆನ್ನಾಗಿದೆ. ಇಂಥಾ ಪರಿಸ್ಥಿತಿಯಲ್ಲಿ ಕಾಡಿನ ಮಕ್ಕಳು ನೆಮ್ಮದಿಯಾಗಿ ಬದುಕೋಕೆ ಆಗುತ್ತಾ? ಅಂದು ಅಲ್ಲೂರಿ ಒಡಲ ಉರಿ ಇಂದಿಗೂ ಮುಂದುವರೆದಿದೆ. ಮುಂದುವರೆಯುತ್ತೆ ಕೂಡ…