ಅಲ್ಲಿ ಮಾವಿಗೆ ಮರಣದಂಡನೆ – ಇಲ್ಲಿ ಕಾಡೆಮ್ಮೆ ಕರುವಿನ ದುರಂತ: ಅಖಿಲೇಶ್ ಚಿಪ್ಪಳಿ


ನೈಸರ್ಗಿಕ ಸಂಪತ್ತನ್ನು ಬರಿದು ಮಾಡಲು ಯಾರೆಲ್ಲಾ, ಏನೆಲ್ಲಾ ದಾರಿಗಳನ್ನು ಹುಡುಕುತ್ತಾರೆ. ಪಶ್ಚಿಮಘಟ್ಟಗಳ ಕಾಡನ್ನು ಬರಿದು ಮಾಡಲಾಗಿದೆ. ಅಳಿದುಳಿದ ಅರಣ್ಯವನ್ನು ನುಂಗಿ ನೊಣೆಯುವ ಹಂತಕ್ಕೆ ಸರ್ಕಾರವೇ ಬಂದು ನಿಂತಿದೆ. ನಮ್ಮ ಘನ ಸರ್ಕಾರ ಒಂದು ಆದೇಶವನ್ನು ಹೊರಡಿಸಿದೆ. ಈ ಆದೇಶದ ಪ್ರಕಾರ, ನೀಲಗಿರಿ, ಅಕೇಶಿಯಾದ ಕೆಲವು ತಳಿಗಳು, ಅಡಕೆ-ತೆಂಗಿನ ಮರಗಳು, ನಿಂಬೆ-ಪೇರಳೆ ಗಿಡ, ಕಾಫಿ ಗಿಡ, ಹಳದಿ ಬಿದಿರು, ಹೆಬ್ಬೇವು, ಶಮೆಗಳ ಹೀಗೆ ಒಟ್ಟು 26 ಗಿಡ-ಮರಗಳಿಗೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯುವುದರಿಂದ ವಿನಾಯತಿ ನೀಡಲಾಗಿದೆ. ಅಂದರೆ, ಅರಣ್ಯ ಇಲಾಖೆಯವರು ಈ ಮರಗಳನ್ನು ಕಡಿದವರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸುವ ಹಾಗಿಲ್ಲ. ಅದು ಯಾರು ತೆಂಗು-ಅಡಕೆ, ನಿಂಬೆ-ಸಪೋಟ ಗಿಡಗಳನ್ನು ಕಡಿಯಲು ಅನುಮತಿ ಕೇಳುತ್ತಾರೆ? ಅಥವಾ ಅನುಮತಿ ಪಡೆಯದೇ ಈ ಮರಗಳನ್ನು ಕಡಿದವರ ಎಷ್ಟು ಜನರ ವಿರುದ್ಧ ಇಲಾಖೆ ಕಾನೂನು ಕ್ರಮ ತೆಗೆದುಕೊಂಡಿದೆ? ಯಾರೂ ಅರಿಯರು. ಕರ್ನಾಟಕ ಅರಣ್ಯ ನಿಯಮ 1969, ಇದಕ್ಕೆ 1998, 2002 ಹಾಗೂ 2004ರಲ್ಲಿ ಹಲವು ತಿದ್ದುಪಡಿಗಳನ್ನು ಸರ್ಕಾರಗಳು ಮಾಡಿವೆ. ಈಗಿನ ಸರ್ಕಾರ 2015 ಮಾರ್ಚ್ 9ನೇ ತಾರೀಖಿನಂದು ಈ ನಿಯಮಗಳನ್ನು ಮತ್ತೆ ತಿದ್ದುಪಡಿಗೆ ಒಳಪಡಿಸಿ ಆದೇಶ ಹೊರಡಿಸಿದೆ. ಈ ತಿದ್ದುಪಡಿಯಾದ ನಿಯಮದ ಪ್ರಕಾರ ಮಾವಿನ ಮರವನ್ನು ಕಡಿಯುವುದಾದಲ್ಲಿ ಅನುಮತಿ ಪಡೆಯುವ ಅಗತ್ಯ ಇರುವುದಿಲ್ಲ. ಅರಣ್ಯ ಇಲಾಖೆಯ ಮೇಲಾಧಿಕಾರಿಗಳು ಶಿಪಾರಸ್ಸು ಮಾಡಿದ ಈ ನಿಯಮಗಳಿಗೆ ನಮ್ಮ ವಿಧಾನಸೌಧದಲ್ಲಿ ಕುಳಿತ ಎಲ್ಲಾ ಶಾಸಕರೂ ಒಪ್ಪಿಗೆ ನೀಡಿ, ಮಾವು ತಳಿಗಳ ಅಳಿವಿಗೆ ಠಸ್ಸೆ ಸಮೇತ ಸಹಿ ಒತ್ತಿದ್ದಾರೆ.

ಅತ್ಯಂತ ಸಂಕೀರ್ಣವಾದ ಮಾನವ ಸಮಾಜದಲ್ಲಿ ಕೃಷಿ ಮತ್ತು ಅರಣ್ಯದ ನಡುವೆ ಅವಿನಾಭಾವ ಸಂಬಂಧವಿದೆ. ಕೃಷಿಗಾಗಿ ತಯಾರಿಸಲಾಗುವ ಹಲವು ಕೃಷಿ ಪರಿಕರಗಳಿಗೆ ಅರಣ್ಯದ ಮರಗಳೇ ಬೇಕು, ಅದರಲ್ಲೂ ಮಾವಿನ ಮರಕ್ಕೆ ಹೆಚ್ಚಿನ ಆದ್ಯತೆ ಇದೆ. ಇನ್ನು ಅಕೇಶಿಯಾ, ನೀಲಗಿರಿ, ತೆಂಗು, ಕಾಫಿ ಇತ್ಯಾದಿ ತೋಟಗಾರಿಕಾ ಬೆಳೆಗಳು ಮೂಲತ: ಈ ನೆಲಮೂಲದ್ದಲ್ಲ, ಹೊರಗಿನಿಂದ ಇಲ್ಲಿಗೆ ತಂದು ಪಳಗಿಸಲಾಗಿದೆ. ಹಾಗೆಯೇ ನಿಂಬೆ-ಸಪೋಟಗಳು ತೋಟಗಾರಿಕಾ ಬೆಳೆಗಳ ಅಡಿಯಲ್ಲೇ ಬರುತ್ತವೆ. ಆದರೆ, ಈ ಭಾಗದ ಅಮೂಲ್ಯ ಮಾವಿನ ತಳಿ ಲಕ್ಷಾಂತರ ವರ್ಷಗಳಿಂದ ವಿಕಸಿತವಾಗಿ ಸ್ಥಳೀಯ ಅರಣ್ಯದಲ್ಲಿ ಬೆಳೆದುಕೊಂಡು ಅಸಂಖ್ಯ ವನ್ಯಜೀವಿಗಳಿಗೆ ಆಹಾರದ ಮೂಲವಾಗಿ ಉಳಿದುಕೊಂಡಿವೆ. ಈ ನೈಸರ್ಗಿಕ ಮಾವಿನ ಮರಗಳನ್ನು ಯಾರೂ ಎಲ್ಲಿಂದಲೋ ತಂದು ನೆಟ್ಟದ್ದಲ್ಲ. ತೋಟಗಾರಿಕಾ ಬೆಳೆಗಳನ್ನು ಬೆಳೆಸುವಲ್ಲಿ ರೈತನ ಶ್ರಮವಿರುತ್ತದೆ. ಆತ ತನ್ನ ಇಚ್ಛೆಯಂತೆ ತನ್ನ ಜಮೀನಿನಲ್ಲಿ ನಾಟಿ ಮಾಡಿ ಬೆಳೆಸಿದ ತೋಟಗಾರಿಕಾ ಸಸ್ಯಗಳನ್ನು ಕಡಿದು ಹಾಕುವ ಆಯ್ದೆಯ ಸ್ವಾತಂತ್ರ್ಯವನ್ನು ಹೊಂದಿದ್ದಾನೆ. ತನ್ನ ಖಾತೆಯ ಜಾಗದಲ್ಲಿರುವ ಕಾಫಿ ಗಿಡವನ್ನು ಕಡಿದು, ರಬ್ಬರ್ ಗಿಡಗಳನ್ನು ಹಾಕಬಹುದು. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಾವಿನ ತೋಟಗಾರಿಕೆಯನ್ನು ರೈತರು ಮಾಡಿಕೊಂಡಿದ್ದಾರೆ. ಕಸಿ ಕಟ್ಟಿದ ಅಥವಾ ಹೈಬ್ರೀಡ್ ತಳಿಯ ಮಾವಿನ ಗಿಡಗಳನ್ನು ತನಗೆ ಬೇಕಾದಾಗ ಕತ್ತರಿಸುವ ಸ್ವಾತಂತ್ರ್ಯವೂ ಆ ರೈತನಿಗೆ ಇರಬೇಕು. ಈ ಭರದಲ್ಲಿ ನೈಸರ್ಗಿಕವಾಗಿ ಬೆಳೆದ ಮಾವಿನ ಮರಗಳನ್ನೂ ಕಡಿಯಬಹುದು ಎಂದು ನೀಡಿದ ಈ ಸರ್ಕಾರಿ ಆದೇಶದ ಹುನ್ನಾರವೇನು? ಇಂತಹ ಮಹತ್ವ್ತದ ವಿಚಾರ ಐ.ಏ.ಎಸ್ ಹಾಗೂ ಐ.ಎಫ್.ಎಸ್.ಗಳೀಗೇಕೆ ಹೊಳೆಯಲಿಲ್ಲ (ಈ ಆದೇಶದ ಹಿಂದೆ ಸಾಯಿಬಾಬು, ಐ.ಏ.ಎಸ್., ಅರಣ್ಯ ಕಾರ್ಯದರ್ಶಿ ಹಾಗೂ ಮದನ್‍ಗೋಪಾಲ್, ಐ.ಎಫ್.ಎಸ್., ಅರಣ್ಯ-ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅಪರ ಪ್ರಧಾನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಈ ಈರ್ವರ ಕೈವಾಡವಿದೆ) ಅಥವಾ ಟಿಂಬರ್ ಮಾಫಿಯಾಕ್ಕೆ ಮಣಿದರೇ?

ಹೆಚ್ಚಿನ ನಾಟ ಗುತ್ತಿಗೆದಾರರ ಕೈಯಲ್ಲಿ ಸರ್ಕಾರಿ ಆದೇಶದ ಪ್ರತಿ ಲಭ್ಯವಿದೆ. ಈಗಾಗಲೇ ತೀರ್ಥಹಳ್ಳಿ ಹಾಗೂ ಚಿಕ್ಕಮಗಳೂರಿನಲ್ಲಿ ಸಾವಿರಾರು ನೈಸರ್ಗಿಕ ಮಾವಿನ ಮರಗಳನ್ನು ಕಡಿದು ಸಾಮಿಲ್‍ಗಳಿಗೆ ಸಾಗಿಸಲಾಗಿದೆ. ಚಿಕ್ಕಮಗಳೂರು-ತೀರ್ಥಹಳ್ಳಿಗಳ ಸಾಮಿಲ್‍ಗಳಲ್ಲಿ ಕಡಿದ ಮಾವಿನ ಮರಗಳನ್ನು ಇಟ್ಟುಕೊಳ್ಳಲು ಸ್ಥಳವಿಲ್ಲ ಹಾಗೂ ಕಟಾವು ಮಾಡಲು ಪುರುಸೊತ್ತಿಲ್ಲದಂತಾಗಿ, ಅಲ್ಲಿ ಕಡಿದ ಮರಗಳನ್ನು ಸಾಗರದ ಸಾಮಿಲ್‍ಗಳಿಗೆ ತರಲಾಗುತ್ತಿದೆ. ಹೀಗೆ ತಿದ್ದುಪಡಿಯಾದ ಆದೇಶದಿಂದ ನೈಸರ್ಗಿಕ ಮಾವಿನ ಮರಗಳ ಮಾರಣ ಹೋಮ ನಡೆಯಲಿದೆ. ವರ್ಷಾರು ತಿಂಗಳಲ್ಲೇ ನೂರಿನ್ನೂರು ವರ್ಷಗಳ ಅಳಿದುಳಿದ ಮಿಣಿಸುತ್ತಿನ ಮರಗಳು ಧರೆಗುರಳಲಿವೆ. ಮಲೆನಾಡಿನ ಮಾವಿನ ಮಿಡಿಗಳು ವಿಶ್ವ ಪ್ರಸಿದ್ಧವಾದದು. ಮಲೆನಾಡಿನ ಭಾಗಕ್ಕೆ ಭೇಟಿ ನೀಡಿದ ಎಲ್ಲಾ ಮೇಲಸ್ತರದ ಅಧಿಕಾರಿಗಳು ಹಾಗೂ ರಾಜಕೀಯಸ್ತರು ಈ ಮಾವಿನ ರುಚಿಯನ್ನು ಸವಿದವರೇ ಆಗಿದ್ದಾರೆ. ಈ ವಿಷಯವನ್ನು ಹಲವರ ಹತ್ತಿರ ಚರ್ಚಿಸಿದಾಗ ಸರ್ಕಾರಿ ಆದೇಶವನ್ನು ರದ್ದು ಮಾಡುವುದೊಂದೇ ದಾರಿ. ಇದಕ್ಕಾಗಿ ಸಾರ್ವಜನಿಕ ಹಿತಾಸಕ್ತಿಯ ಮೊರೆ ಹೋಗಬೇಕು ಎಂದರು. ಹೀಗೆ ರಾಜ್ಯದ ಉಚ್ಛನ್ಯಾಯಾಲಯದ ಕದ ತಟ್ಟುವ ಅನಿವಾರ್ಯ ಪ್ರಸಂಗ ಬಂದ್ದಿದ್ದರಿಂದ ಮೊನ್ನೆ ಸ್ನೇಹಿತರನ್ನು ಕರೆದುಕೊಂಡು ಬೆಂಗಳೂರಿಗೆ ಹೋಗಿದ್ದೆ. ಅಲ್ಲಿ ವಕೀಲರನ್ನು ಭೇಟಿ ಮಾಡಿ ಚರ್ಚೆ ಮಾಡಿದೆವು. ವಕೀಲರು ಇನ್ನಷ್ಟು ಪೂರಕ ದಾಖಲೆಗಳನ್ನು, ಫೋಟೊಗಳನ್ನು ಒದಗಿಸಲು ಕೇಳಿದರು. ಹೀಗೆ ಒಂದೇ ದಿನದಲ್ಲಿ ವಕೀಲರನ್ನು ಕಾಣುವ ಕೆಲಸ ಮುಗಿಯಿತು. ರಾತ್ರಿ ಊಟ ಮಾಡಿ ಮತ್ತೆ ವಾಪಾಸು ಹೊರೆಟೆವು. ಸಾಗರ ತಲುಪಲು ಒಂದಿಪ್ಪತ್ತು ಕಿ.ಮಿ. ದೂರವಿತ್ತೇನೋ? ಬೆಳಗಿನ 6.30 ಹೊತ್ತು, ಸ್ನೇಹಿತ ಕೊಡ್ಲುತೋಟ ರಮೇಶ್ ಪೋನ್ ಮಾಡಿದರು. ನಮ್ಮ ಊರಿನ ಒಬ್ಬರ ತೋಟದ ಜಮೀನಿನ ಬಾವಿಯಲ್ಲಿ ಕಾಡೆಮ್ಮೆಯ ಕರು ಬಿದ್ದಿದೆ, ಅಗ್ನಿಶಾಮಕ ದಳಕ್ಕೆ ದೂರವಾಣಿ ಮುಖಾಂತರ ತಿಳಿಸಲಾಗಿದೆ ಎಂದರು. ಸಾಗರದಲ್ಲಿ ಬಸ್ಸಿಳಿದವನೇ ಸೀದಾ ಕರು ಬಿದ್ದ ಜಾಗಕ್ಕೆ ಹೋಗಿ ನೋಡಿದರೆ, ಅಗ್ನಿಶಾಮಕ ದಳದವರು, ಕರುವನ್ನು ಅದಾಗಲೇ ಮೇಲೆತ್ತಿದ್ದರು. ಅಲ್ಲೇ ಇರುವ ಅಡಕೆ ಮರಕ್ಕೆ ಕಟ್ಟಿ ಹಾಕಿದ್ದರು, ಗಾಬರಿಯಾದ ಕರು ಹಗ್ಗ-ಜಗ್ಗಾಟದಲ್ಲಿ ತೊಡಗಿತ್ತು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂದಿದ್ದರು. ತೋಟದ ಪಕ್ಕದಲ್ಲಿರುವ ಕಾಡಿನಲ್ಲೇ ಕರುವಿನ ತಾಯಿ ಇದೆ ಎಂಬ ವರ್ತಮಾನವೂ ಸಿಕ್ಕಿತು. ಬೆದರಿದ ಕರು ತಪ್ಪಿಸಿಕೊಂಡು ಹೋಗುವ ಪ್ರಯತ್ನ ಮಾಡುತ್ತಿತ್ತು. ಮೇಲಿನಿಂದ ಸುಮಾರು 40 ಅಡಿ ಬಾವಿಗೆ ಕರು ಬಿದ್ದಿತ್ತು. ಇನ್ನೂ ಹುಟ್ಟದ ಕೋಡಿನ ಜಾಗದಲ್ಲಿ ರಕ್ತ ಜಿನುಗುತ್ತಿತ್ತು. ಮುಂಗಾಲುಗಳಲ್ಲಿ ಗಾಯ. ಕುತೂಹಲದಿಂದ ನೋಡಲು ಬರುವ ಜನ ಹೆಚ್ಚಾದಂತೆ, ಕರುವಿಗೆ ಗಾಬರಿಯು ಹೆಚ್ಚಾಯಿತು. ಹಾಗೇ ಬಿಟ್ಟುಬಿಡೋಣವೆಂದರೆ, ತಾಯಿಯ ಸಹಕಾರವಿಲ್ಲದೇ ಕರು ಬದುಕುವುದಿಲ್ಲವೆಂಬ ಆತಂಕ ನಮಗಿತ್ತು. ಏನೇ ಆಗಲಿ ಎಂದು ಕರುವಿನ ಕುತ್ತಿಗೆಗೆ ಕಟ್ಟಿದ ಪ್ಲಾಸ್ಟಿಕ್ ದಾರವನ್ನು ಬಿಚ್ಚಿ, ಒಂದು ಸೀರೆಯನ್ನು ಕಟ್ಟಿದೆವು. ನಿಧಾನವಾಗಿ, ಮೂರು ಜನ ಸೇರಿ ಕಾಡಿನ ಕಡೆಗೆ ಕರೆದುಕೊಂಡು ಹೋದೆವು. ತಾಯಿಯೊಂದಿಗೆ ಸೇರಿಸಿದರೆ, ನಮ್ಮ ಜವಾಬ್ದಾರಿ ಮುಗಿದಂತೆ. ಇಷ್ಟರಲ್ಲೇ ಜಾನುವಾರು ವೈದ್ಯರು ಬಂದರು. ಸಾಕಷ್ಟು ನಿರ್ಜಲೀಕರಣಗೊಂಡ ಕರುವಿಗೆ ಬಾಟಲಿಯಿಂದ ನೀರನ್ನು ಕುಡಿಸಿದೆವು. 

ಎಲ್ಲೆಲ್ಲೂ ಅಕೇಶಿಯಾ ಕಾಡು ಸೃಷ್ಟಿಯಾಗಿದ್ದರಿಂದ, ಕಾಡುಕೋಣದ ಮಂದೆಗಳೆರೆಡು, ನಮ್ಮ ಭಾಗದಲ್ಲಿವೆ. ಜಮೀನಿಗೆ ನುಗ್ಗಿ, ದಾಂಧಲೆ ಮಾಡಿ, ಬೆಳೆ ನಾಶ ಮಾಡುತ್ತವೆ. ಸಾಮಾನ್ಯವಾಗಿ ಸಂಜೆ ಮತ್ತು ಬೆಳಗಿನ ಜಾವದಲ್ಲಿ ಈ ಪ್ರಾಣಿಗಳು ಮೇಯುತ್ತವೆ. ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆಯುತ್ತವೆ. ಸರಿ ತಾಯಿಗಾಗಿ ಹುಡುಕಿದರೆ, ಎಲ್ಲೆಲ್ಲೂ ಸುಳಿವಿಲ್ಲ. ಬರೀ ಹತ್ತು ದಿನದ ಕರುವಿನ ಅಗಾಧ ಶಕ್ತಿ, ನಮ್ಮ ಮೂವರನ್ನು ಹಣ್ಣು-ಗಾಯಿ ಮಾಡಿತ್ತು. ಹಾಗೆಯೇ ಬಿಟ್ಟರೆ ನಾಯಿಗಳು ಹಿಡಿದು ತಿಂದಾವು ಎಂಬುದು ನಮ್ಮ ಅಂಜಿಕೆ. ಇಷ್ಟರಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕರುವಿನ ಜವಾಬ್ದಾರಿಯನ್ನು ಹೊತ್ತಿದ್ದರು, ನಾವು ನಮ್ಮ ಕೆಲಸದ ಮೇಲೆ ಚದುರಿದೆವು. ಇನ್ನೂ ಸಂಜೆಯವರೆಗೆ ಕಾಯುವ ಕೆಲಸ ಸಿಬ್ಬಂದಿಗಳದ್ದು. ಮಧ್ಯಾಹ್ನ 11.30ಕ್ಕೆ ಅರಣ್ಯ ಸಿಬ್ಬಂದಿ ಪೋನ್ ಮಾಡಿ, ಮರಿ ಹೋಯ್ತು ಎಂದರು. ತಾಯಿ ಕರೆದುಕೊಂಡು ಹೋಯಿತಾ? ಎಂದು ಕೇಳಿದ್ದಕ್ಕೆ, ಇಲ್ಲಾ ಸತ್ತು ಹೋಯಿತು ಎಂದರು. ಮುದ್ದಾದ ಕರು ತೀರಿಕೊಂಡ ಸುದ್ಧಿ ಕೇಳಿ ದು:ಖವಾಯಿತು. ವನ್ಯಜೀವಿ ಸಂರಕ್ಷಣಾ ಕಾನೂನು 1972ರ ಕಾಯ್ದೆಯ ಪರಿಚ್ಛೇದ 1ರ ಅಡಿಯಲ್ಲಿ ಕಾಡುಕೋಣ ಬರುತ್ತದೆ. ಕರು ಸತ್ತಿತೆಂದು ಅಲ್ಲೇ ಬಿಟ್ಟು ಹೋಗುವ ಹಾಗಿಲ್ಲ. ಅದರ ಶವ ಪರೀಕ್ಷೆಯಾಗಬೇಕು, ಮಹಜರು ಇತ್ಯಾದಿಗಳು ನಡೆಯಬೇಕು. ನಂತರದಲ್ಲಿ ಶವವನ್ನು ಸುಡಬೇಕು.
 
ಅರಣ್ಯ ಇಲಾಖೆಯ ವಾಹನದಲ್ಲಿ ಶವವನ್ನು ಹಾಕಿಕೊಂಡು ಸಾಗರದ ಕಟ್ಟಿಗೆ ಡಿಪೋಗೆ ತರಲಾಯಿತು. ಪಶುವೈದ್ಯರು ಬಂದು ಎಳೆಗರುವಿನ ಶವಕ್ಕೆ ಕತ್ತರಿ ಹಾಕಿದರು. ಮುಂಭಾಗದ ಕಾಲಿನ ಬುಡವೇ ಮುರಿದು ಹೋಗಿತ್ತು. ದೇಹದ ಒಳಭಾಗದಲ್ಲಿ ಹೆಚ್ಚು-ಕಡಿಮೆ ಒಂದು ಸಣ್ಣ ಬಕೇಟ್‍ನಷ್ಟು ರಕ್ತ ಹೆಪ್ಪುಗಟ್ಟಿ ಕಪ್ಪಾಗಿತ್ತು. ಕರು ಸಾಯಲು ಇದೇ ಕಾರಣವಾಗಿತ್ತು ಎಂದು ಪಶುವೈದ್ಯರು ವರದಿ ನೀಡಿದರು. ಜಮೀನಿನ ಮಾಲೀಕ ತೆರೆದ ದೊಡ್ಡ ಬಾವಿಯ ಸುತ್ತ ಕನಿಷ್ಟ ಮೂರಡಿ ಕಟ್ಟೆ ಕಟ್ಟಿದ್ದರೂ, ಕರು ಬಾವಿಗೆ ಬೀಳುತ್ತಿರಲಿಲ್ಲ. ಕೆಟ್ಟಮೇಲೆ ಬುದ್ಧಿ ಬಂತು ಎಂಬಂತೆ, ತಕ್ಷಣದಲ್ಲಿ ಒಂದು ಬೇಲಿ ನಿರ್ಮಿಸಿಲಾಗಿದೆ. ಕಟ್ಟೆ ಕಟ್ಟುವ ಭರವಸೆ ಸಿಕ್ಕಿದೆ. ಈ ಘಟನೆ ನಡೆದ ಸ್ಥಳಕ್ಕೂ ನನ್ನ ಮನೆಗೂ ಹೆಚ್ಚೆಂದರೆ 500-700 ಮೀಟರ್ ದೂರವಷ್ಟೆ. ಕೋಣದ ಮರಿ ದುರಂತವಾದ ಮಾರನೇ ದಿನ, ನನ್ನ ಮಡದಿ ಮನೆಯ ಹಿಂಭಾಗದಲ್ಲಿರುವ ಬ್ಯಾಣದಲ್ಲಿರುವ ಗೇರು ಮರಗಳಲ್ಲಿ ಹಣ್ಣು ಕೊಯ್ಯುವ ಸಲುವಾಗಿ ಕರಿಯ (ಸಾಕುನಾಯಿ) ನನ್ನು ಕರೆದುಕೊಂಡು ಹೋಗಿದ್ದಳು, ಐ-ಬ್ಯಾಕ್ಸ್ ಬೇಲಿ ದಾಟಿ ಗೇರು ಮರಗಳ ಮೇಲೆ ದೃಷ್ಟಿ ನೆಟ್ಟು ಸಾಗುತ್ತಿದ್ದಳು. ಎದುರಿಗೆ ಅಸಹಜವಾದ ದೈತ್ಯಾಕಾರ ನಿಂತಂತೆ ಭಾಸವಾಯಿತು. ದಿಟ್ಟಿಸಿದರೆ, ಬರೀ 30 ಅಡಿ ದೂರದಲ್ಲಿ ಕರುವನ್ನು ಕಳೆದುಕೊಂಡ ಕಾಡೆಮ್ಮೆ ನಿಂತಿತ್ತು. ಬಹುಷ: ಕರು ಸತ್ತ ಶೋಕದಿಂದ ಹೊರಬಂದಿರಲಿಲ್ಲವೇನೋ? ಶಾಕ್‍ನಿಂದ ಸಾವರಿಸಿಕೊಂಡ ಮಡದಿ ನಿಧಾನವಾಗಿ ಹಿಂದಕ್ಕೆ ಹೆಜ್ಜೆಯಿಡುತ್ತಾ ವಾಪಾಸು ಬಂದಳು. ಕತೆ ಕೇಳಿದ ನನಗೆ 2010ರಲ್ಲಿ ಆವಿನಹಳ್ಳಿಯಲ್ಲಿ ಆನೆ ದಾಳಿಗೆ ಸಿಕ್ಕು ಮೃತಪಟ್ಟ ಸುಶೀಲ ಎಂಬ ಮಹಿಳೆಯ ನೆನಪಾಯಿತು. ಅಬ್ಬಾ!!!.

****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x