ಅಮಾಯಕನೊಬ್ಬನ ಕತೆ: ಸೂರಿ ಹಾರ್ದಳ್ಳಿ


ನಮ್ಮ ಗುಂಡ ಬರೀ ಅಮಾಯಕನಲ್ಲ, ಅಮಾಯಕರಲ್ಲಿ ಅಮಾಯಕ ಎಂಬುದರಲ್ಲಿ ಖಡಾಖಂಡಿತ ನಂಬಿಕೆಯುಳ್ಳವನು ನಾನು. ಇದಕ್ಕೆ ಕಾರಣಗಳಿಲ್ಲದಿಲ್ಲ. ಭಾರತದ ಹವಾಮಾನ ಇಲಾಖೆಯವರು ‘ಇನ್ನು ಮೂರು ದಿನ ಮಳೆ ಬರುತ್ತದೆ’ ಎಂದು ಹೇಳಿದರೆ ಮೂರೂ ದಿವಸ ತನ್ನ ಜೊತೆಯಲ್ಲಿ ತನ್ನ ಕೊಡೆಯನ್ನು ಹೊತ್ತೊಯ್ಯುವವನೇ ಅವನು. ‘ಇಲ್ಲವೋ ಮಂಕು ಮುಂಡೇದೇ, ನಿನಗೆಲ್ಲೋ ಭ್ರಮೆ. ಬರುತ್ತದೆ ಎಂದರೆ ಬರೋಲ್ಲ. ಮಳೆ ದೇವರಾದ ವರುಣನಿಗೆ ಈ ಇಲಾಖೆಯವರನ್ನು ಕಂಡರೆ ಕೋಪ. ಹಾಗಾಗಿ ಸದಾ ತದ್ವಿರುದ್ಧವಾಗಿರುತ್ತದೆ, ಇದು ಸತ್ಯಸ್ಯ ಸತ್ಯ,’ ಎಂದು ಬಿಡಿಸಿ ಬಿಡಿಸಿ ಹೇಳಿದರೂ ಅದು ಆ ಪೆದ್ದಂಭಟ್ಟನ ತಲೆಗೆ ಹೋಗುವುದೇ ಇಲ್ಲ. ಈ ವಿಷಯ ನನಗೆ ಗೊತ್ತಾಗಿದ್ದೂ ಒಂದು ವಿಶೇಷ ಸಂದರ್ಭದಲ್ಲಿ. ನನ್ನ ಗೆಳೆಯನೊಬ್ಬ ಮೆಟ್ ಡಿಪಾರ್ಟ್‍ಮೆಂಟಿನಲ್ಲಿ ಕೆಲಸ ಮಾಡುತ್ತಿದ್ದ, ಅವನೇ ಹೇಳಿದ್ದು. ಹೇಗೆ ಮಳೆ ಬರುತ್ತೆ, ಯಾವತ್ತು ಬರುತ್ತೆ, ಎಂಬುದನ್ನು ಹವಾಮಾನ ವರದಿ ಇಲಾಖೆಯವರು ನಿರ್ಧರಿಸುವ ಕ್ರಮ ಏನೆಂದು ಅವನು ನನಗೆ ಗುಟ್ಟು, ಎನ್ನುತ್ತಲೇ ಹೇಳಿದ್ದ. ಅದೇನೆಂದರೆ ಅವರ ಕಚೇರಿಯಲ್ಲಿ ಗಿಳಿಯೊದನ್ನು ಸಾಕಿಕೊಂಡಿದ್ದಾರಂತೆ. ಅದು ತನ್ನೆದುರು ಇಟ್ಟ ಕಾರ್ಡುಗಳನ್ನು ತನ್ನ ಕೊಕ್ಕಿನಿಂದ ಎಳೆದು ಕೊಡುತ್ತಿತ್ತಂತೆ. ಅದರ ಪ್ರಕಾರವೇ ಡಿಪಾರ್ಟ್‍ಮೆಂಟಿನವರು ಮಳೆ ಬರುತ್ತದೆಯೋ, ಇಲ್ಲವೋ ಎಂಬ ವರದಿಯನ್ನು ಪತ್ರಿಕೆಗಳಿಗೆ ನೀಡುತ್ತಿದ್ದರಂತೆ, ಇರಲಿ.

‘ಇರಲಿ,’ ಎಂದು ಹೇಳಿ ಕೈ ತೊಳೆದುಕೊಳ್ಳುವಂತಿಲ್ಲ. ಅದು ಶುದ್ಧ ಅನರ್ಹ ಗಿಳಿ. ಯಾರದ್ದೋ ವಶೀಲಿಯಿಂದಲೋ, ಮೀಸಲಾತಿಯ ಕ್ರಮದಿಂದಲೋ ಬಂದಿದ್ದಂತೆ. ಅದು ತಪ್ಪು ತಪ್ಪು ಭವಿಷ್ಯ ಹೇಳುತ್ತಿದೆಯಂತೆ. ಹಾಗಾಗಿ ನಾನು ಮೆಟರಿಯೊಲೊಜಿಕಲ್ ವಿಭಾಗವನ್ನು ಸುಮ್ಮನೆ ದೂಷಿಸುವಂತಿಲ್ಲ. ನಾನು ಅವರಿಗೆ ಒಂದು ಸಲಹೆ ಕೊಟ್ಟಿದ್ದೆ. ರಾಜ್ಯದ ಎಲ್ಲಿ ಮಳೆಯ ಅವಶ್ಯಕತೆ ಇದೆಯೋ ಅಲ್ಲಿ ‘ಮಳೆ ಬರುವುದಿಲ್ಲ,’ ಎಂದೂ, ಎಲ್ಲಿಗೆ ಮಳೆ ಬೇಕಿಲ್ಲವೋ ಅಲ್ಲಿ ‘ಮಳೆ ಬರಲಿದೆ’ ಎಂದೂ ಪ್ರಕಟಿಸಿದರೆ, ಅದು ಸದಾ ಸುಳ್ಳೇ ಆಗುವ್ಯದರಿಂದ ಎಷ್ಟೋ ಸಮಸ್ಯೆಗಳು ಪರಿಹಾರವಾಗುತ್ತದೆ, ಎಂದು. ನನ್ನ ಮಾತುಗಳು ಅವರ ಕಿವುಡು ಕಿವಿಗೆ ಇನ್ನೂ ತಟ್ಟಿಲ್ಲ. ಈಗ ಕೊನೆಯದಾಗಿ ‘ಇರಲಿ.’

ಗುಂಡ ಅದೆಷ್ಟು ಅಮಾಯಕ ಎನ್ನುವುದಕ್ಕೆ ನಾನು ಕೊಡುವ ಕಾರಣಗಳು ಹನುಮಂತನ ಬಾಲದಂತೆ, ರಾಜಕಾರಣಿಗಳು ಕೊಡುವ ಭರವಸೆಗಳಂತೆ, ಯಡಿಯೂರಪ್ಪ-ಈಶ್ವರಪ್ಪರು ಸರಕಾರ ಯಾವತ್ತು ಉರುಳುತ್ತವೆ ಎಂದು ಡೆಡ್‍ಲೈನ್ ಕೊಡೋಲ್ಲವೇ, ಹಾಗೆ ದೀರ್ಘವಾಗಿವೆ. ಗುಂಡ ಪತ್ರಿಕೆಗಳಲ್ಲಿ ಬರುವ ವಾರಭವಿಷ್ಯ, ದಿನಭವಿಷ್ಯಗಳನ್ನು ತಪ್ಪದೇ ಓದುತ್ತಾನೆ. ಸತ್ಯ ಹೇಳಬೇಕೆಂದರೆ ಅದನ್ನು ಓದಲೆಂದೇ ಆತ ಪತ್ರಿಕೆಗಳನ್ನು ಖರೀದಿಸುವುದು. ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟವಾಗುವ ಕೊಲೆಯ, ಅಪಘಾತದ, ವಂಚನೆ-ಮೋಸಗಳ ಸುದ್ದಿಗಳನ್ನು ಓದು ಜ್ಞಾನ ವರ್ಧಿಸಿಕೊಳ್ಳುವುದಕ್ಕೆ ಮೊದಲೇ ಆತ ಭವಿಷ್ಯದ ಕಾಲಂಗಳನ್ನು ಓದುವುದು. ಅದರಲ್ಲಿ ಅವರ ರಾಶಿಯಲ್ಲಿ ‘ವಿವಾಹ ಯೋಗ’ ಎಂದು ಬರೆದಿದ್ದರೆ ಮರುಕ್ಷಣವೇ ಗೂಗಲ್‍ನಲ್ಲಿ ಬೆಂಗಳೂರಿನ ಯಾವ ಯಾವ ಕಲ್ಯಾಣ ಮಂಟಪಗಳಿವೆ ಎಂದು ಹುಡುಕುತ್ತಿದ್ದ. ‘ಧನ ಲಾಭ’ ಎಂದಿದ್ದರೆ ತನಗೆ ಬರುವ ಹಣವನ್ನು ಹೇಗೆ ಹೇಗೆ ವ್ಯಯಿಸಬಹುದು ಎಂದು ಕೂಸು ಹುಟ್ಟುವ ಮೊದಲೇ ಪಟ್ಟಿ ಮಾಡುತ್ತಿದ್ದ. ನಾನು ಅವನ ಕಿವುಡು ಕಿವಿಗೆ ಉಪದೇಶಿಸುತ್ತಿದ್ದೆ, ‘ಲೋ ಗುಂಡ ಎಂಬ ಮೂರ್ಖ ಶಿಖಾಮಣಿ, ಇವತ್ತಿನ ಭವಿಷ್ಯವನ್ನು ನಾಳೆ ಓದು, ಈ ವಾರದ್ದನ್ನು ಮುಂದಿನ ವಾರ ಓದು. ಆಗ ಈ ಭವಿಷ್ಯಗಳು ಅಪ್ಪಟ ಬೊಗಳೆ ಎಂದು ಗೊತ್ತಾಗುತ್ತದೆ, ನಿನ್ನ ಚಟ ಬಿಟ್ಟುಹೋಗುತ್ತದೆ,’ ಎಂದು. ಈ ನಶ್ವರ ಜಗತ್ತಿನಲ್ಲಿ ಇರುವ ಎಲ್ಲಾ ಚಟಗಳನ್ನಾದರೂ ಬಿಡಿಸಬಹುದು, ಭವಿಷ್ಯ ಓದುವ/ಕೇಳುವ ವ್ಯಸನದಿಂದ ಮಾತ್ರ ಮುಕ್ತಿ ಕೊಡಿಸಲು ಆಗುವುದಿಲ್ಲ ಎಂಬುದಕ್ಕೆ ನಮ್ಮ ಗುಂಡ ಒಂದು ಜ್ವಲಂತ ಉದಾಹರಣೆ. ಅವನಂಥವರಿಂದಲೇ ಬೀದಿಬೀದಿಗಳಲ್ಲಿ ಜ್ಯೋತಿಷಿಗಳು, ಗುರೂಜಿಗಳು, ಪಿಂಡಾಂಡ ಪಂಡಿತರು, ಮಹರ್ಷಿಗಳು ಹುಟ್ಟಿ, ಧಾಂ ಧೂಂ ಅಂತ ಸಂಪಾದನೆ ಮಾಡೋದು. ನಾನೂ ಸುಮ್ಮನಾಗಿದ್ದೆ, ಯಾಕೆಂದರೆ ನಾಯಿ ಬಾಲ ಯಾವತ್ತೂ ಡೊಂಕೇ, ದಬ್ಬೆ ಕಟ್ಟಿದರೂ ಕೂಡ.

ಪತ್ರಿಕೆಗಳಲ್ಲಿ ‘ಅಪಘಾತ ಭಯ’ ಎಂದು ಬರೆದಿದ್ದರೆ ಗುಂಡನು ಮನೆ ಬಿಟ್ಟು ಹೊರಗೆ ಬರುತ್ತಲೇ ಇರಲಿಲ್ಲ. ‘ಸ್ತ್ರೀ ಸುಖ’ ಎಂದಿದ್ದರೆ ಯಾರಿಂದ, ಎಲ್ಲಿಂದ ದೊರಕುತ್ತದೆ ಎಂದು ಕನಸು ಕಾಣುತ್ತಲೇ ಇರುತ್ತಾನೆ. ಟಿವಿಗಳಲ್ಲಿ ಕಾಣಿಸಿಕೊಳ್ಳುವ ಜಟಾಧಾರಿಗಳು, ಶೂಲಹಸ್ತರು, ಸರ ಧರಿಸಿದವರು, ಇವರೆಲ್ಲರೂ ಹೇಳುವ ಮಾತುಗಳನ್ನು ಕೇಳಿ ಕೇಳಿ, ಗುಂಡನ ಮೈತುಂಬಾ ತಾಯತಗಳು, ಮಂತ್ರದ ದಾರಗಳು, ಇತ್ಯಾದಿಗಳು ತುಂಬಿಕೊಂಡಿವೆ. ಅವನು ಖಡಾ ಖಂಡಿತವಾಗಿ ಸರಕಾರವನ್ನು ವಿನಂತಿಸಿಕೊಂಡು ಒಂದು ವಿಷಯವನ್ನು ನಾನು ಇಲ್ಲಿ ಹೇಳದಿದ್ದರೆ ನನಗೆ ಬ್ರಹ್ಮಹತ್ಯಾ ದೋಷ ಬಂದೇ ಬರುತ್ತದೆ. ಕಳೆದ ವರ್ಷ ಕೊಡಗಿನಲ್ಲಿ ಪ್ರವಾಹ, ಭೂಕುಸಿತ ಉಂಟಾಯಿತಲ್ಲ, ಜನರಿಗೆ ತೊಂದರೆ ಆಯಿತಲ್ಲ, ಆ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಖರ್ಚಿಲ್ಲದೇ ಅನುಸರಿಸುವ ಮಾರ್ಗವೊಂದಿದೆ. ಟಿವಿ ಗುರುಗಳು ವಿಕ್ರಯ ಮಾಡುವ ‘ಧನಲಕ್ಷ್ಮೀ ಯಂತ್ರ’ಗಳನ್ನು ಸರಕಾರವೇ ಖರೀದಿಸಿ, ಅಲ್ಲಿನ ಸಂತ್ರಸ್ತರಿಗೆ ಹಂಚಿದರೆ ಅವರೆಲ್ಲರ ಸಮಸ್ಯೆಗಳನ್ನು ಸುಲಭವಾಗಿಯೇ ಪರಿಹರಿಸಬಹುದು ಎಂಬುದು ಅವನು, ಎಂದರೆ ‘ಅಮಾಯಕ ಗುಂಡ’ ಸಾರ್ವಜನಿಕವಾಗಿ ಸರಕಾರಕ್ಕೆ ಮಾಡಿಕೊಂಡ ಮನವಿ.

ಅಕ್ಷಯ ತೃತೀಯದಂದು ಚಿನ್ನ ಖರೀದಿಸಿದರೆ ಬಡವರ ಬಡತನ ಪರಿಹಾರವಾಗಿ ಶ್ರೀಮಂತಿಕೆ, ಸುಖ/ಶಾಂತಿ ಬರುತ್ತದೆ ಎಂದು ಹೆಚ್ಚಿನ ‘ಬುದ್ಧಿವಂತರಂತೆ’ ಗುಂಡನೂ ನಂಬಿದ್ದಾನೆ. ಅವನು ಮತ್ತೆ ನಮ್ಮ ಗವರ್ನಮೆಂಟಿಗೆ ಹೇಳುವುದೇನೆಂದರೆ ಸರಕಾರವು ಬಡವರಿಗೆ ಚಿನ್ನ ಕೊಳ್ಳಲು ಸಾಲ ಕೊಡಬೇಕು. ಅಕ್ಷಯ ತೃತೀಯದಂದು ಈ ಸ್ವರ್ಣ ಖರೀದಿಸಿದ್ದರಿಂದ ಅವರ ಪರಿಸ್ಥಿತಿ ಸುಧಾರಿಸುತ್ತದೆ. ನಂತರ ಸಾಲದ ಹಣವನ್ನು ವಾಪಾಸು ಪಡೆಯಬೇಕು. ಇದರಿಂದ ಸರಕಾರಕ್ಕೆ ಹೆಚ್ಚಿನ ವೆಚ್ಚವಿಲ್ಲದೇ ಬಡತನ ನಿರ್ಮೂಲನೆ ಸಾಧ್ಯ, ಎಂದು ಗುಂಡ ಟಿವಿ ನೋಡುತ್ತಾನೆ, ಕಾರ್ಯಕ್ರಮಗಳಿಗಿಂತ ಹೆಚ್ಚಾಗಿ ಜಾಹೀರಾತುಗಳನ್ನು. ಕಂಪನಿಯವರು ಅಷ್ಟೊಂದು ಖರ್ಚುಮಾಡಿ ಜಾಹಿರಾತುಗಳನ್ನು ತಯಾರಿಸಿ, ಸಿಕ್ಕಾಪಟ್ಟೆ ವೆಚ್ಚ ಮಾಡಿ ಟಿವಿಲಿ ತೋರಿಸುತ್ತಾರೆ. ಅದನ್ನು ನಾವು ನೋಡದಿದ್ದರೆ ಅವರ ಮನಸ್ಸಿಗೆ ಬೇಜಾರಾಗುತ್ತದೆ ಎಂದು ವಾದಿಸುವ ಅವನು ಅದಾವುದೋ ಕಂಪನಿಯುವರು ತಾವು ತಯಾರಿಸಿದ ಶಾಂಪೂವನ್ನು ಉಪಯೋಗಿಸಿದರೆ ಮಕ್ಕಳು ಉದ್ದ ಬೆಳೆಯುತ್ತಾರೆ ಎಂಬ ಹೇಳಿಕೆಯನ್ನೂ ನಂಬುತ್ತಾನೆ. ತನಗೆ ಗಂಡು ಮಗು ಹುಟ್ಟಿದರೆ ಅವನ ತಲೆಗೆ ಈ ಶಾಂಪೂವನ್ನು ಹಾಕಿ ತಿಕ್ಕಿ, ತಿಕ್ಕಿ, ಅವನನ್ನು ಬಿಗ್ ಬಿ ಯನ್ನಾಗಿ ಮಾಡಬೇಕೆಂದು ಕನಸು ಕಾಣುತ್ತಾನೆ. ಮಕ್ಕಳ ಶಿರಕ್ಕೆ ಶಾಂಪೂ ಹಾಕೋದು ಇರಲಿ, ಅವರು ಸ್ನಾನ ಮಾಡದಿದ್ದರೂ ಬೆಳೆಯುತ್ತಾರೆ ಎಂದು ನಾನು ಹೇಳಿದರೂ ಆತ ನಂಬೋಲ್ಲ. ಪಾಪ, ಅಷ್ಟೊಂದು ಅಮಾಯಕ.

ಅದಾವುದೋ ಸಾಬೂನು ಕಂಪನಿಯು ‘ಕೇಸರಿ, ಸ್ವರ್ಣಭಸ್ಮ ಮತ್ತು ಬಾದಾಮಿಯ ಗುಣಗಳಗಳಿಂದ ತುಂಬಿದ’ ಎಂಬ ಜಾಹೀರಾತನ್ನು ನೋಡುವ ಗುಂಡ ಆ ಸೋಪಿನಲ್ಲಿ ಇವೆಲ್ಲಾ ವಸ್ತುಗಳು ಇವೆ ಎಂದು ಭಾವಿಸುತ್ತಾನೆ. ಅದಾವುದೋ ಕ್ರೀಂ ಉಪಯೋಗಿಸಿದರೆ ಆಫ್ರಿಕನ್ನರೂ ಯುರೋಪಿಯನ್ನರಷ್ಟು ಬೆಳ್ಳಗಾಗಬಹುದು ಎಂದು ನಂಬಿದ್ದಾನೆ. ಪಾಪ, ಅಮಾಯಕ!

ಅಂತಹ ಗುಂಡ ಒಂದು ದಿನ ನಮ್ಮ ಮನೆಗೆ ಬಂದ. ನನ್ನ ಹೃದಯಾಘಾತವಾಗುವುದೊಂದೇ ಬಾಕಿ, ಅವನು ಕಾರು ಖರೀದಿಸಲು ಬಯಸಿದ್ದಾನಂತೆ. ಈ ಬೆಂಗಳೂರಿನಲ್ಲಿ ಟ್ರಾಫಿಕ್ ಎಂಬುವುದು ಟೆರಿಫಿಕ್. ಒನ್‍ವೇಗಳು, ರಸ್ತೆ ವಿಭಜಕಗಳು, ಎಡ ತಿರುವು, ಬಲ ತಿರುವುಗಳ ನಿಷೇಧ, ಇವುಗಳಿಂದ ಟ್ರಾಫಿಕ್ ಇನ್ನಷ್ಟು ಹೆಚ್ಚುತ್ತಿದೆ. ಈ ಕಾರನ್ನು ಕೊಳ್ಳುವ ದುರಾಲೊಚನೆ ಬಿಡು. ಫುಟ್‍ಪಾತಿನಲ್ಲಿ ಚಲಿಸುವ, ನಿಂತಿರುವ ಕಾರುಗಳ, ದ್ವಿಚಕ್ರ ವಾಹನಗಳ ನಡುವೆ ಅಷ್ಟೋ ಇಷ್ಟೋ ಜಾಗ ಮಾಡಿಕೊಂಡು ನಡೆಯೋದೇ ಬೇಗವಾಗಿ ತಲುಪುವ ಸರಿಯಾದ ಕ್ರಮ ಎಂದು ಹೇಳಿದೆ. ಆದರೆ ಅವನು ತನ್ನ ನಿರ್ಧಾರ ಬದಲಿಸಲಿಲ್ಲ.
‘ಯಾಕೋ ಗುಂಡ, ನಿನ್ನ ತಲೆಗೆ ಇಂತಹ ಅನಾಹುತಕಾರಿ ಯೋಚನೆ ಬಂತು?’ ಕೇಳಿದೆ.

‘ನನ್ನ ಮೊಬೈಲಿನಲ್ಲಿ ದಿನಕ್ಕೆರಡು ಬಾರಿ ಎಸ್.ಎಮ್.ಎಸ್. ಬರ್ತಿದೆ, ಅದಕ್ಕಾಗಿ,’ ಎಂದು ಸಸ್ಪೆನ್ಸ್ ಮೂಡಿಸಿದ.
‘ಅದೇನೋ, ಸರಿಯಾಗಿ ಹೇಳು. ಈ ಪಾಮರನ ತಲೆಗಾದರೂ ಹೋಗಲಿ,’ ಎಂದೆ.
‘ನಿಮ್ಮ ಹಳೆಯ ಕಾರುಗಳನ್ನು ನಮ್ಮಲ್ಲಿ ಮಾರಿ, ಎಂಬ ಎಸ್.ಎಮ್.ಎಸ್. ಬರ್ತಿದೆ. ಮಾರಲು ನನ್ನಲ್ಲಿ ಕಾರೇ ಇಲ್ಲವಲ್ಲ. ಅದಕ್ಕಾಗಿ ನಾನು ಅವರ ಮನಸ್ಸಿಗೆ ಬೇಜಾರು ಆಗಬಾರದೆಂದು..’
ಅವನು ಪೂರ್ತಿ ಹೇಳುವ ಅವಶ್ಯಕತೆ ಇಲ್ಲ. ಹೇಳಿದರೂ ನಾನು ಇಲ್ಲಿ ಬರೆಯಬೇಕಾದ ಅವಶ್ಯಕತೆಯೂ ಇಲ್ಲ. ಅಲ್ಲವೇ? ಅದಕ್ಕೇ ನಾನು ಎನ್ನುವುದು, ನಮ್ಮ ಗುಂಡ ಅಮಾಯಕರಲ್ಲಿ ಅಮಾಯಕರಲ್ಲಿ ಅಮಾಯಕರಲ್ಲಿ ಅಮಾಯಕ, ಎಂದು. ಜಾಣರಲ್ಲಿ ಜಾಣರಾದ, ಬುದ್ಧಿವಂತರಲ್ಲಿ ಬುದ್ಧಿವಂತರಾದ ನೀವೇನೆನ್ನುತ್ತೀರಿ?
-ಸೂರಿ ಹಾರ್ದಳ್ಳಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x