ಹೊರಗೆ ಬಂದ ಇಬ್ಬರು ತಮ್ಮ ತಮ್ಮ ಕೆಲಸ ನೋಡಿಕೊಳ್ಳಲು ಮುಂದಾದರು. ಹರಿಗೆ ತನ್ನ ಬೈಕ್ ಸರಿಯಾದರೆ ಸಾಕಾಗಿತ್ತು. ಆ ನಡುರಸ್ತೆಯಲ್ಲಿ ಕೆಟ್ಟು ನಿಂತದ್ದು ಮತ್ತೊಂದು ತಲೆನೋವಾಗಿತ್ತು. ಸಹಾಯಕ್ಕೆಂದು ಮ್ಯಾನೇಜರ್ ರವಿಯ ಬಳಿ ಹೋದ. ಗೋಪಾಲ್ ವರ್ಮಾರವರು ಕೂಡ ತಮ್ಮ ಮನೆಯವರೆಲ್ಲರ ಜೊತೆ ಸಪ್ತಗಿರಿಯನ್ನು ನೋಡಲು ಹೊರಟರು. ರವಿ, ಹರಿಗೆ ಒಬ್ಬ ಮೆಕ್ಯಾನಿಕ್ನನ್ನು ಪರಿಚಯಿಸಿ ಅವನ ಜೊತೆಯಲ್ಲಿ ಹೋಗಿ ಬೈಕನ್ನು ರಿಪೇರಿ ಮಾಡಿ, ತೆಗೆದುಕೊಂಡು ಬರಲು ಹೇಳಿದ. ಇಬ್ಬರು ಮೆಕ್ಯಾನಿಕ್ ನ ಬೈಕ್ನಲ್ಲಿ ಹೋಗಿ ಗಾಡಿಯನ್ನು ರಿಪೇರಿ ಮಾಡಿ, ಸಪ್ತಗಿರಿ ಮರಳಿದರು. ಅಷ್ಟೊತ್ತಿಗಾಗಲೇ ಮಧ್ಯಾಹ್ನ ಒಂದು ಗಂಟೆಯಾಗಿತ್ತು. ಹರಿಗೂ ಹೊಟ್ಟೆ ಹಸಿದಿದ್ದರಿಂದ ಊಟ ಮಾಡಿದ. ನಂತರ ರೂಮಿನೆಡೆಗೆ ಹೋಗಿ ನೋಡಿದರೆ, ಗೋಪಾಲ್ ವರ್ಮಾರ ರೂಮ್ ಕೀಲಿ ಹಾಕಿತ್ತು. ಮನೆಯವರ ಜೊತೆ ಹೊರಗೆ ಹೋಗಿರಬಹುದೆಂದು ತನ್ನ ರೂಮಿಗೆ ಬಂದು ಸ್ವಲ್ಪ ಹೊತ್ತು ರೆಸ್ಟ್ ಮಾಡಿದ. ಮಧ್ಯಾಹ್ನದಲ್ಲಿ ಕೂಡ ಕೊರೆಯುವ ಚಳಿ ಇರುತ್ತಿತ್ತು ಅಲ್ಲಿ. ಹೊಟ್ಟೆತುಂಬಾ ಊಟ ಹಾಗು ತಂಪಾದ ಜಾಗ, ಇವೆರಡು ಹರಿಗೆ ಸಹಜವಾಗಿಯೇ ನಿದ್ರೆಯನ್ನ ಆಹ್ವಾನಿಸಿದವು. ಹರಿಗೆ ಯಾವಾಗ ನಿದ್ರೆ ಹತ್ತಿತ್ತೊ ಗೊತ್ತೇ ಆಗಲಿಲ್ಲ. ಎಚ್ಚರಗೊಂಡಾಗ ಸಂಜೆ ಐದಾಗಿತ್ತು. ಅಯ್ಯೋ ತುಂಬಾ ಹೊತ್ತು ಮಲಗಿಬಿಟ್ಟೆ ಎಂದು ಬೇಗನೆ ಎದ್ದು ಫ್ರೆಶ್ ಆಗಿ, ಸ್ವಲ್ಪ ಊರಿನ ಕಡೆಗೆ ಹೋಗಿ ಬಟ್ಟೆಗಳನ್ನು ಖರೀದಿ ಮಾಡೋಣವೆಂದುಕೊಂಡ. ಉಟ್ಟ ಬಟ್ಟೆಯಲ್ಲಿ ಬಂದಿದ್ದರಿಂದ, ಆತನಿಗೆ ಬೇರೆ ಬಟ್ಟೆಯೆ ಇಲ್ಲದಂತಾಗಿತ್ತು. ಸಂಜೆಯ ಹೊತ್ತಿಗೆ ಬೈಕ್ ಹತ್ತಿದ ಹರಿ ಹದಿನೈದು ಕಿಲೋಮೀಟರ್ ದೂರದಲ್ಲಿದ್ದ ಊರಿನೆಡೆಗೆ ಹೊರಟ.
ಸಪ್ತಗಿರಿಯ ಪೇಟೆ ಅಂತಹ ದೊಡ್ಡದೇನಾಗಿರಲಿಲ್ಲ. ಪ್ರವಾಸಿತಾಣವಾಗಿದ್ದರಿಂದ ಕೊಂಚ ದೊಡ್ಡ ದೊಡ್ಡ ಅಂಗಡಿಗಳಿದ್ದವಷ್ಟೆ. ಮೊದಲಿಗೆ ತನಗೆ ಬೇಕಾದ ಬಟ್ಟೆಗಳನ್ನೆಲ್ಲ ಖರೀದಿಸಿದ. ತನ್ನ ಬಳಿ ದುಡ್ಡು ಇಲ್ಲದಿದ್ದರಿಂದ ಕಾರ್ಡನ್ನೆ ಬಳಸಬೇಕಾಯಿತು. ಬಟ್ಟೆಗಳನ್ನೆಲ್ಲ ಖರೀದಿಸುವಷ್ಟೊತ್ತಿಗೆ ರಾತ್ರಿ ಎಂಟಾಗಿತ್ತು. ಮನಸ್ಸು ಇನ್ನೇನನ್ನೊ ಬಯಸುತ್ತಿತ್ತು. ಚಳಿಯ ರಾತ್ರಿ, ಗಾಯಗೊಂಡ ಮನಸ್ಸು, ಹದಿಹರೆಯದ ವಯಸ್ಸು ಇನ್ನೇನನ್ನು ಬಯಸುತ್ತದೆ ಹೇಳಿ. ಅದೇ…….ಗುಂಡು..! ಹೌದು ಹರಿಯ ಹೃದಯ ಹರಿದದ್ದು, ಯಾವಾಗಲೂ ಬಂದಾಗ ಹೋಗುವ “ದಿ ಪ್ರೆಸಿಡೆಂಟ್ ಬಾರ್ ಅಂಡ್ ರೆಸ್ಟೋರೆಂಟ್” ನ ಮೇಲೆ. ನಾಲ್ಕು ಬಿಯರ್ ಬಾಟಲ್ ಗಳನ್ನು ತೆಗೆದುಕೊಂಡ. ಇನ್ನೇನು ಬಂದ ಕೆಲಸವೆಲ್ಲ ಮುಗಿಯುತೆಂದು ಗಾಡಿ ಹತ್ತಿ ಕಾಟೇಜ್ ನ ಕಡೆಗೆ ಹೊರಟ.
” ಮೇ ಐ ಕಮ್ ಇನ್ ?”. ಯಾವುದೊ ಧ್ವನಿ ರೂಮಿನಿಂದ ಹೊರಗೆ ಕೇಳಿಸಿತು. ಬಾಗಿಲು ತೆಗೆದು ನೋಡಿದರೆ, ಗೋಪಾಲ್ ವರ್ಮಾ ಟ್ರ್ಯಾಕ್ ಪ್ಯಾಂಟ್ ಮೇಲೆ ಕಪ್ಪು ಸ್ವೆಟರ್ ಹಾಕಿಕೊಂಡು ಗದಗದ ನಡುಗುತ್ತಾ ನಿಂತಿದ್ದರು.
” ಅಂಕಲ್ ನೀವೇನು ಇಷ್ಟೊತ್ತಲ್ಲಿ ?” ಎಂದ ಹರಿ.
” ಜಂಟಲ್ಮ್ಯಾನ್, ಇಂದು ರಾತ್ರಿ ಒಳ್ಳೆ ಗುಂಡು ಪಾರ್ಟಿ ಆಗುತ್ತೆ ಅಂತ ಬಂದೆ.” ಎನ್ನುತ್ತಾ ಕಣ್ಣು ಹೊಡೆದರು ವರ್ಮಾ.
” ಏನ್ ಅಂಕಲ್ ? ಇಲ್ಲಿ ಗುಂಡು ಪಾರ್ಟಿನಾ ?” ಎಂದು ಗದಗದ ನಡುಗುತ್ತ ಕೇಳಿದ ಹರಿ.
” ಕಳ್ಳ. ನನಗೇ ಸುಳ್ಳು ಹೇಳ್ತಿಯ, ಸಂಜೆ ಬಾರಿನ ಹೊರಗೆ ಬರುತ್ತಿದ್ದುದನ್ನು ನಾನು ನೋಡಿದೆ. ಜೊತೆಗೆ ಕೈಯಲ್ಲಿ ಬಾಟಲ್ ಗಳಿದ್ದ ಕವರನ್ನೂ ನೋಡಿದೆ.” ಎನ್ನುತ್ತಾ ಒಳಗೆ ನುಗ್ಗಿದರು.
” ಇದೇನಪ್ಪ, ನಾನು ತಂದ ಬಾಟಲ್ ನೆಲ್ಲ ಇವನೇ ಮುಗಿಸುತ್ತಾನೆ ಅನ್ಕೋಬೇಡ. ಇಲ್ಲಿ ಮ್ಯಾನೇಜರ್ ಗೆ ಹೇಳಿ ಬಾಟಲ್ ತರ್ಸೋ ವ್ಯವಸ್ಥೆ ಮಾಡಿದ್ದೀನಿ” ಎನ್ನುತ್ತಾ ಮತ್ತೆ ಕಣ್ಣು ಹೊಡೆದರು.
” ಅಯ್ಯೋ ಇಲ್ಲ ಅಂಕಲ್. ನಾನೊಬ್ಬನೇ ಎಲ್ಲಿ ಅಷ್ಟೊಂದು ಕುಡಿಯೋಕೆ ಆಗುತ್ತೆ. ಬನ್ನಿ ಕೂತ್ಕೊಳ್ಳಿ, ಬಾಟಲ್ಸ್ ತರ್ತೀನಿ.” ಇಬ್ಬರೂ ಕುಳಿತು ಬಿಯರ್ ಕುಡಿಯುತ್ತ, ಚಿಪ್ಸ್ ತಿನ್ನುತ್ತಾ ಮೈಬಿಸಿ ಮಾಡಿಕೊಂಡರು. ಹಾಗೆಯೇ ಹರಟೆ ಪ್ರಾರಂಭವಾಯಿತು.
” ಅಂಕಲ್…..ನೀವು ಕುಡಿಯುವುದು ನಿಮ್ಮ ಹೆಂಡತಿಗೆ ಗೊತ್ತಾ?”
” ಇಲ್ಲ ಜೆಂಟಲ್ ಮ್ಯಾನ್. ನಾನು ಇಷ್ಟು ದೊಡ್ಡ ಕುಡುಕ ಅಂತ ಗೊತ್ತಾದರೆ ನನ್ನನ್ನು ಸೀಳಿಬಿಡ್ತಾಳೆ ನನ್ನ ಹೆಂಡತಿ.” ಎನ್ನುತ್ತಾ ಇಬ್ಬರೂ ಜೋರಾಗಿ ನಕ್ಕರು. ಗೋಪಾಲ ವರ್ಮಾರವರು ಮೊದಲಿನಿಂದಲೂ ಪಾರ್ಟಿಗಳಿಗೆ ಹೋಗುತ್ತಿದ್ದರು. ಹೀಗೆ ಹೋದಾಗಲೆಲ್ಲ ಒಂದೊ ಎರಡೊ ಪೆಗ್ ಏರಿಸುತ್ತಿದ್ದರಷ್ಟೇ. ಫಾರ್ಮಲಿಟಿಗೋಸ್ಕರ ಕುಡಿಯುತ್ತಿದ್ದರೆ ಹೊರತು ಚಟಕ್ಕಾಗಿ ಅಲ್ಲ.
” ಹರಿ ….ನಿಮ್ಮನ್ನೊಂದು ಪ್ರಶ್ನೆ ಕೇಳಲೇ?”
” ಅಂಕಲ್ ಮತ್ತೆ ನೀವು ತಾವು ಅಂತಿದೀರಾ. ನಾನಿನ್ಮೇಲೆ ಮಾತಾಡಲ್ಲಪ್ಪ ನಿಮ್ಮ ಜೊತೆ.”
” ಸಾರೀ ಸಾರೀ. ಹರಿ ನಿನ್ನನ್ನು ಒಂದು ಪ್ರಶ್ನೆ ಕೇಳಲೆ? ಈಗ ಓಕೆ ನಾ? ಹ್ಹ….. ಹ್ಹ…” ನಗು ಇಬ್ಬರಲ್ಲೂ ಮೂಡಿತು.
” ಓಹ್ ಅದಕ್ಕೇನಂತೆ, ಕೇಳಿ ಅಂಕಲ್”
” ಹರಿ, ನಿನ್ನನ್ನು ನೋಡಿದರೆ ನೀನು ಏನೋ ಕಳಕೊಂಡಂತೆ ಕಾಣ್ತೀಯ. You seem to be depressed. ಅದೇನು ಅಂತ ಹೇಳ್ಕೋ ಸ್ವಲ್ಪ ಹಗುರವಾಗ್ಬೋದು ಮನಸ್ಸು.”
” ನಾನ್ ಡಿಪ್ರೆಶನ್ ನಲ್ಲಿದ್ದೀನಿ ಅನ್ಸತ್ತಾ?. ಹ್ಹ…..ಹ್ಹ…. ಈತರ ಗುಂಡು ಹಾಕ್ತಿರೋದು ನೋಡಿನೂ ಹಾಗ್ ಅನ್ಸತ್ತಾ ಅಂಕಲ್?”
” ಹರಿ ಈ ರೀತಿ ಗುಂಡು ಹಾಕುತ್ತಿರೋದು ನೋಡಿನೇ ನೀನು ಡಿಪ್ರೆಶನ್ ನಲ್ಲಿ ಇದ್ದೀಯ ಅಂತ ಹೇಳ್ತಿರೋದು.” ಗೋಪಾಲ್ ವರ್ಮಾರವರ ಮಾತು ಕೇಳಿ ತಬ್ಬಿಬ್ಬಾದ ಹರಿ. ಇಲ್ಲ ಇಲ್ಲವೆಂದೆ ಸ್ವಲ್ಪ ಹೊತ್ತು ವಾದಿಸಿದ ಆದರೆ ಗೋಪಾಲ ವರ್ಮ ಅವನನ್ನು ಬಿಡಲಿಲ್ಲ. ಮತ್ತೆ ಮತ್ತೆ ಕೇಳತೊಡಗಿದರು, ಕೊನೆಗೆ ಗೋಪಾಲ ವರ್ಮಾರವರೇ ಸಫಲರಾದರು.
” ಎಸ್ ಅಂಕಲ್.” ಎನ್ನುವುದಷ್ಟೇ ಹರಿಯ ಕಂಠದಿಂದ ಹೊರಬಂದದ್ದು. ಉಳಿದದ್ದೆಲ್ಲ ರೋದನೆಯೆ. ಹೌದು, ಪದೇ ಪದೇ ಕೇಳುತ್ತಲೇ ಹರಿಗೆ ಎಲ್ಲವನ್ನು ಹೇಳಬೇಕೆನಿಸಿತು. ತನ್ನ ದುಃಖವನ್ನು ಕೇಳಲು ಒಬ್ಬರಾದರೂ ಇದ್ದಾರಲ್ಲ ಎಂದು ಮನಸ್ಸು ಅವರೆಡೆಗೆ ವಾಲಿತು. ಬಿಕ್ಕಿಬಿಕ್ಕಿ ಅಳುತ್ತಿದ್ದ ಹರಿಯನ್ನು ನೋಡಿದ ವರ್ಮಾ,” ಮಿಸ್ಟರ್ ಹರಿ ಯಾಕೆ ಏನಾಯ್ತು? ನಾನೇನಾದರೂ ಕೇಳಬಾರದನ್ನು ಕೇಳಿಬಿಟ್ಟೆನೆ? ಐ ಯಾಮ್ ರಿಯಲಿ ಸಾರಿ.” ಎಂದರು.
” ಇಲ್ಲ ಅಂಕಲ್ ನೀವು ಕೇಳಿದ್ದರಲ್ಲಿ ಏನೂ ತಪ್ಪಿಲ್ಲ. ನೀವು ಸಾರಿ ಕೇಳಬೇಡಿ.”
” ಹಾಗಿದ್ದರೆ ಹೇಳು. ನಿನ್ನ ಈ ಅಳುವಿಗೆ ಕಾರಣವೇನು?”
” ಅಂಕಲ್ ನಿಮಗೆ ಹೇಗೆ ಹೇಳಬೇಕೋ ತಿಳಿಯುತ್ತಿಲ್ಲ ನನಗೆ”
” ಹರಿ ನನ್ನನ್ನು ಸ್ನೇಹಿತ ಎಂದುಕೊ. ಒಬ್ಬ ಅಂಕಲ್ ಅಥವಾ ನಿನಗಿಂತ ದೊಡ್ಡವನೆಂದುಕೊಳ್ಳಲೆಬೇಡ. ಕಮಾನ್ ಮಿಸ್ಟರ್ ಹರಿ, ಶೇರ್ ಮಾಡ್ಕೊಂಡ್ರೆ ಸ್ವಲ್ಪ ರಿಲ್ಯಾಕ್ಸ್ ಆಗುತ್ತೆ ಮನಸ್ಸಿಗೆ.”
” ಹೇಳ್ತೀನಿ ಅಂಕಲ್.”
*****
ಹರಿಯದು ನಾಲ್ಕು ವರ್ಷಗಳ ಪ್ರೇಮವಾಗಿತ್ತು. ಇಂಜಿನಿಯರಿಂಗ್ ನ ಕೊನೆಯ ವರ್ಷದಲ್ಲಿದ್ದಾಗ ಅನೂಷಾಳ ಸ್ನೇಹ ತೀವ್ರಗೊಂಡು, ಅವಳಲ್ಲಿದ್ದ ಚಿನ್ನದಂತಹ ಗುಣ, ಅವನ ಬಗ್ಗೆ ತೋರುತ್ತಿದ್ದ ಕಾಳಜಿ, ಅವಳ ಮುದ್ದು ಮುಖ, ಜಾಣ್ಮೆ, ಎಲ್ಲವೂ ಹರಿಯನ್ನು ಅವಳೆಡೆಗೆ ಸೆಳೆದಿತ್ತು. ಅನೂಷಾಳಿಗೂ ಹರಿಯನ್ನು ಕಂಡರೆ ತುಂಬಾ ಇಷ್ಟ. ದಿನಕ್ಕೆ ಒಮ್ಮೆಯಾದರೂ ಅವನ ಜೊತೆ ಮಾತನಾಡದಿದ್ದರೆ, ಅವಳಿಗೆ ಸಮಾಧಾನವೇ ಆಗುತ್ತಿರಲಿಲ್ಲ. ಓದುತ್ತಿರುವಾಗ ಜಾಸ್ತಿ ತಿರುಗದಿದ್ದರೂ, ತಿಂಗಳಿಗೆ ಎರಡು ಮೂರು ಬಾರಿಯಾದರೂ ಹೊರಗೆ ಹೋಗಿ ಬರುತ್ತಿದ್ದರು. ಗರ್ಲ್ಫ್ರೆಂಡ್ ಸಿಕ್ಕ ಮೇಲೆ, ಹರಿಗೆ ಬೈಕಿನಲ್ಲಿ ಸುತ್ತಾಡಬೇಕೆಂದು ತುಂಬಾ ಅನಿಸುತ್ತಿತ್ತು. ಹೀಗಾಗಿ ಅಪ್ಪನ ಜೊತೆ ಜಗಳ ಮಾಡಿ ಬೈಕ್ ತೆಗೆಸಿಕೊಂಡಿದ್ದ. ಆದರೆ ಹರಿ ಹಾಗೂ ಅನೂಷಾ ಓದಿನಲ್ಲಿ ಎಂದೂ ಹಿಂದೆ ಬೀಳಲಿಲ್ಲ. ಓದುವುದೆಲ್ಲ ಮುಗಿದು, ಮಿಕ್ಕಿದ ಸಮಯದಲ್ಲಿ ಹೊರಗೆ ಹೋಗುತ್ತಿದ್ದರು. ಇದರಿಂದಾಗಿ ಹರಿಗೆ ಬೈಕ್ ಕೊಡಿಸಲೆಬಾರದಿತ್ತು ಎಂದು ಯಾವತ್ತೂ ಅನಿಸಿರಲಿಲ್ಲ ಹರಿಯ ಅಪ್ಪನಿಗೆ. ಇವರಿಬ್ಬರ ಬಗ್ಗೆ ಡೌಟು ಬಂದಿದ್ದರೂ, ಏನೊ ಪ್ರೀತಿ ಮಾಡುವ ವಯಸ್ಸು, ಮಾಡಿಕೊಳ್ಳಲಿ. ಓದಿಗಂತು ಹಾನಿ ಆಗುತ್ತಿಲ್ಲವಲ್ಲ ಎಂದು ಯಾವತ್ತೂ ಪ್ರಶ್ನಿಸರಲಿಲ್ಲ.
ಇಂಜಿನಿಯರಿಂಗ್ ಮುಗಿಯುತ್ತಾ ಬಂದಿತು. ಇಬ್ಬರದು ಕ್ರೆಡಿಟ್ಸಗಳು ಚೆನ್ನಾಗಿಯೆ ಇದ್ದವು. ಕ್ಯಾಂಪಸ್ ಇಂಟರ್ವ್ಯೂನಲ್ಲಿ ಇಬ್ಬರಿಗು ಕೆಲಸ ಕೂಡ ಸಿಕ್ಕಿತು.
” ಹೇ ಕಂಗ್ರಾಟ್ಸ್ ಕಣೋ ಪೆದ್ದ..!”
” ಥ್ಯಾಂಕ್ಸ್ ಕಣೆ ಕುಳ್ಳಿ .ನಿನಗೂ ಕಂಗ್ರಾಟ್ಸ್..!”
ಅನೂಷಾ ಸ್ವಲ್ಪ ಕುಳ್ಳಗೆ ಇದ್ದುದರಿಂದ ಅವಳನ್ನು ಕುಳ್ಳಿ ಕುಳ್ಳಿ ಎಂದು ಪ್ರೀತಿಯಿಂದ ರೇಗಿಸುತ್ತಿದ್ದ . ಅಂತೆಯೇ ಅನೂಷಾಳ ಮುಂದೆ ಕೊಂಚ ಪೆದ್ದುತನ ತೋರಿಸಿದ್ದರಿಂದ ಪೆದ್ದ ಎಂದು ಪ್ರೀತಿಯಿಂದ ಕರೆಯುತ್ತಿದ್ದಳು. ಅದು ಅವನಿಗೆ ಇಷ್ಟವಾಗುತ್ತಿತ್ತು ಕೂಡ.
ಇಬ್ಬರೂ ಕಾಲೇಜಿನಲ್ಲಿ ಇದ್ದುದರಿಂದ ಜಾಸ್ತಿ ಮಾತನಾಡಲಿಲ್ಲ. ತಮ್ಮತಮ್ಮ ಫೈಲನ್ನು ಹಿಡಿದು ಹೊರನಡೆದರು. ಪಾರ್ಕಿಂಗ್ ಏರಿಯಾ ಹತ್ತಿರ ಬಂದ ಇಬ್ಬರು, ಮನೆಗೆ ಹೊರಡಲು ಸಿದ್ಧರಾದರು. ಇಂಟರ್ವ್ಯೂ ಇದ್ದುದರಿಂದ ಕಾಲೇಜು ಬೇಗನೆ ಮುಗಿದಿತ್ತು.
” ಆಮೇಲೆ ಕಾಲ್ ಮಾಡ್ತೀನಿ ಅನೂಷಾ. ಹುಷಾರಾಗಿ ಹೋಗು, ಬಾಯ್. ” ಎಂದು ಹೇಳಿದ. ಪ್ರತಿನಿತ್ಯವೂ ಅನೂಷಾಳನ್ನು ಕಳುಹಿಸಿ ತಾನು ಹೋಗುತ್ತಿದ್ದ, ಜೊತೆಗೆ ಹುಷಾರಾಗಿ ಹೋಗು ಎನ್ನುವುದನ್ನು ಮರೆಯುತ್ತಿರಲಿಲ್ಲ. ಇದೇ ಗುಣವೇ ಅನೂಷಾಳಿಗೆ ಬಹಳ ಇಷ್ಟವಾಗುತ್ತಿತ್ತು. ಅನೂಷಾ ಸ್ಕೂಟಿ ಹತ್ತಿ ಬಾಯ್ ಎಂದು ಹೊರಟ ನಂತರ ಹರಿಯು ಕೂಡ ಹೆಲ್ಮೆಟ್ ಹಾಕಿಕೊಂಡು ಹೊರಡಲು ಸಿದ್ಧನಾದ.
” ಹೇ ಮಚ್ಚಾ ನಿಲ್ಲೊ.” ಎಂದು ಯಾರೂ ಕೂಗಿದಂತೆ ಕೇಳಿಸಿತು. ತಿರುಗಿ ನೋಡಿದರೆ ಅದು ಅವಿನಾಶ್. ಹರಿಯ ಬೆಸ್ಟ್ ಫ್ರೆಂಡ್ ಆಗಿದ್ದ ಅವಿನಾಶ್, ಅವತ್ತು ಕೊಂಚ ಸಪ್ಪಗಿದ್ದ.
” ಯಾಕೋ ಮಚ್ಚಾ ಏನಾಯ್ತು?” ಎಂದು ಮೆಲು ಧ್ವನಿಯಲ್ಲಿ ಕೇಳಿದ ಹರಿ.
” ಏನಿಲ್ಲ ಬಿಡೊ. ಎಲ್ಲಾ ನಮ್ಮ ಹಣೆಬರಹ.” ತನಗೆ ಪ್ಲೇಸ್ಮೆಂಟ್ ಆಗಿರುವ ಖುಷಿಯಲ್ಲಿ ಅವಿನಾಶನ ಬಗ್ಗೆ ಮರೆತೇ ಬಿಟ್ಟಿದ್ದ. ಆದರೂ ಅದನ್ನು ತೋರಿಸಿಕೊಳ್ಳಲಿಲ್ಲ.
” ಏನಾಯ್ತು ಮಚ್ಚಾ, ಇಂಟರ್ವ್ಯೂನಲ್ಲಿ ಏನಾದರೂ ಪ್ರಾಬ್ಲಮ್?”
” ಹೂ ಕಣೋ ಹರಿ. ಸೆಲೆಕ್ಷನ್ ಲಿಸ್ಟ್ ನಲ್ಲಿ ನನ್ನ ಹೆಸರೇ ಬಂದಿಲ್ಲ. ಇನ್ನು ಮುಂದೆ ಏನ್ಮಾಡೋದೇನೊ. ಕೆಲಸ ಹುಡುಕಿಕೊಂಡು ಅಲಿತಾ ಇರೋದೇ ಒಂದು ದೊಡ್ಡ ಕೆಲಸ ಆಗುತ್ತೆ. ನಂದು ಬಿಡು ಮಚ್ಚಾ, ನಿಂದು ಸೆಲೆಕ್ಟ್ ಆಯ್ತಲ್ಲ. ಕಂಗ್ರಾಟ್ಸ್.! ಪಾರ್ಟಿ ಬೇಕೆಬೇಕಪ್ಪ.”
” ಥ್ಯಾಂಕ್ಸ್ ಮಚ್ಚಾ. ಪಾರ್ಟಿ ಕೊಡಿಸೋಣ ಅದಕ್ಕೇನಂತೆ. ಅಲ್ವೋ ಅವಿ ಇಲ್ಲಿ ಕೆಲಸ ಸಿಕ್ಕಿಲ್ಲ ಅಂತ ಅಷ್ಟೊಂದು ಬೇಜಾರಾಗಿದೆಯಲ್ಲ, ಇದು ಜಸ್ಟ್ ಫಸ್ಟ್ ಸ್ಟೆಪ್ ಕಣೋ. ಚಿಲ್…! ಆಗೋದೆಲ್ಲ ಒಳ್ಳೇದಕ್ಕೆ.” ಎಂದು ಅವಿನಾಶನ ಬೇಸರವನ್ನು ಕಡಿಮೆ ಮಾಡಲು ಪ್ರಯತ್ನಿಸಿದ ಹರಿ.
” ಏನೊ ಒಂದು ಬಿಡು ಮಚ್ಚಾ”
” ಅದ್ಸರಿ… ಎಲ್ಲಿ ಹೋಗ್ತಾ ಇದೀಯ? ಡ್ರಾಪ್ ಮಾಡ್ಲಾ?”
” ಉಹುಂ, ಬೇಡ. ನಾನು ಸ್ವಲ್ಪ ಮಾರ್ಕೆಟ್ ಹತ್ರ ಹೋಗ್ಬೇಕು. ಬಸ್ಸಿಗೆ ಹೋಗ್ತೀನಿ”
” ಹೌದಾ. ಸರಿ ಮಚ್ಚಾ ನಾಳೆ ಸಿಗೋಣ… ಬಾಯ್.”
” ಬಾಯ್ ಹರಿ” ಎಂದು ಹೊರಟ ಅವಿನಾಶ್. ಹರಿಯು ಕೂಡ ಬೈಕ್ ಸ್ಟಾರ್ಟ್ ಮಾಡಿಕೊಂಡು ಹೊರಟ.
ಮನೆಗೆ ತಲುಪುತ್ತಲೇ ” ಅಮ್ಮ ನನಗೆ ಕೆಲ್ಸ ಸಿಕ್ತು” ಎಂದು ಕೂಗುತ್ತಾ ಓಡಿ ಬಂದು ಅಮ್ಮನನ್ನು ಬಿಗಿದಪ್ಪಿದ.
” ಹೌದೇನೋ ಮಗನೇ, ಕಂಗ್ರಾಜುಲೇಷನ್ಸ್.” ಎಂದು ಮುದ್ದಿಸುತ್ತಾ ಹೇಳಿದರು. ಅಂದು ಅವರ ಮನಸ್ಸು ತುಂಬಾ ಸಂತಸಗೊಂಡಿತ್ತು. ಅವರ ಯಜಮಾನರು ಬಂದಕೂಡಲೆ “ನೋಡ್ರಿ, ನಮ್ಮ ಮಗನಿಗೆ ಕೆಲಸ ಸಿಕ್ಕಿತ್ತಂತೆ.” ಎಂದು ಹೇಳಿ ಖುಷಿಯನ್ನು ಹಂಚಿಕೊಂಡರು. ವಿಶ್ವನಾಥರಾಯರು ಕೂಡ ಖುಷಿಯಾದರು. ಮಗನನ್ನು ಅಪ್ಪಿಕೊಂಡು “ಕಂಗ್ರಾಟ್ಸ ಮಗನೇ.” ಎಂದರು. ಬೆಳೆದು ನಿಂತಾಗ, ತಂದೆ-ತಾಯಿಯನ್ನು ಖುಷಿಪಡಿಸುವುದು ಒಂದು ಅದ್ಭುತವಾದ ಸಂಗತಿ. ನಮ್ಮಿಂದಲೇ ಅವರು ಖುಷಿಗೊಂಡಾಗ, ಅದು ಕೊಡುವ ಆನಂದ ಬೇರಾವುದೂ ನೀಡಲಾರದು. ನೀಡಿದರೂ ಅದಕ್ಕೆ ಸರಿಸಮನಾಗಿ ನಿಲ್ಲಲಾರದು. ಅಂದು ಹರಿಗೂ ಕೂಡ, ಅದೇ ಅನುಭವವಾಗುತ್ತಿತ್ತು. ಏನೋ ಒಂದು ರೀತಿಯ ಹೆಮ್ಮೆ, ಖುಷಿ ಅವನಲ್ಲಿ ಹರಿದಾಡುತ್ತಿತ್ತು.
ಊಟ ಮುಗಿಸಿದ ನಂತರ, “ಯಾವಾಗ ಜಾಯಿನ್ ಆಗ್ಬೇಕು? ಎಲ್ಲಿ ಪೋಸ್ಟಿಂಗ್?” ಎಂದು ವಿಶ್ವನಾಥರಾಯರು ಕೇಳಿದರು.
” ಈ ಸೆಮ್ ಎಕ್ಸಾಮ್ ಮುಗಿಬೇಕು ಅಪ್ಪ, ನಂತರ ಅವರೇ ಪೋಸ್ಟಿಂಗ್ ಬಗ್ಗೆ ಲೆಟರ್ ಕಳಿಸ್ತಾರಂತೆ. ಈಗ ಪ್ರೆಫರೆನ್ಸ್ ಮಾತ್ರ ಹಾಕಿ ಬಂದಿದೀವಿ.”
” ಓಹ್ ಹೌದಾ. ಸರಿಯಾಗಿ ಓದ್ಕೋ, ಇದೊಂದು ಸೆಮ್ ಚೆನ್ನಾಗಿ ಮಾಡು. ಕೆಲ್ಸ ಸಿಕ್ತು ಅಂತ ಹಾರಾಡಬೇಡ.” ಎಂದು ನಗುತ್ತಾ ಬಾಂಬ್ ಹಾಕಿದರು. ಹೂ ಎನ್ನುವಂತೆ ತಲೆದೂಗಿ, ರೂಮಿನೆಡೆಗೆ ನಡೆದ. ವಿಶ್ವನಾಥರಾಯರು ಕೂಡ ರೆಸ್ಟ್ ಮಾಡಲು ರೂಮಿನೆಡೆಗೆ ನಡೆದರು.
ಕಿರಣ್. ವ್ಹಿ
(ಮುಂದುವರೆಯುವುದು)
[…] ಇಲ್ಲಿಯವರೆಗೆ […]