ಪಂಜು-ವಿಶೇಷ

ಅಭಿವೃದ್ದಿ ಯಾರಿಗೆ?: ಕಿರಣ ಆರ್.

ಆದಿವಾಸಿ ಎಂದರೆ ನಮ್ಮಲ್ಲಿ ಅದೆಂತಹದ್ದೋ ಪ್ರೀತಿ ಮತ್ತು ಖುಷಿ. ನಾವು ಸಹ ಆ ಹಂತವನ್ನು ದಾಟಿ ಬಂದಿದ್ದೇವೆ ಎಂದರೆ ನಂಬಲಾಗದ ಸತ್ಯ. ಅವರ ಜೀವನ ಶೈಲಿಯನ್ನು ತಿಳಿಯಲು  ಕಾತರತೆಯಿಂದ ಕಾಯುತ್ತೇವೆ. ಅದೆಷ್ಟೋ ಅಂತಹ ಸಿನಿಮಾಗಳನ್ನು ನೋಡಿ ಆಶ್ಚರ್ಯಪಡುವುದುಂಟು. ಗಿಣಿಯ, ಮಾರ, ಸಿಕ್ಕ, ಕಾಸ್ಯಾಲ, ಸೋಲಿಗ, ಜೇನುಕುರುಬ ಎಂಬ ಸಮುದಾಯದ ಮುದ್ದಾದ ಹೆಸರುಗಳು, ಕಾಡಿನೊಂದಿಗಿನ ಅವರ  ನಂಟು, ಆಧುನಿಕತೆಯ ಬೂತದೊಂದಿಗೆ ಅವರು ತಮ್ಮನ್ನೊಳಗೊಳ್ಳದೇ, ತಮ್ಮದೇ ಒಂದು ಜೀವನ ಶೈಲಿಯನ್ನು ಗತಕಾಲದಿಂದಲೂ ಸಹ ಪಾಲಿಸಿಕೊಂಡು ಬಂದಿರುವುದು ಅದೆಷ್ಟೋ ಭಾರಿ ನನ್ನನ್ನು ಆಕರ್ಶಿಸಿತ್ತು. ನಾವೋ ಅವರಿರುವಲ್ಲಿಗೆ ಹುಡುಕಿಕೊಂಡೋಗಿ, ಒಂದತ್ತು ನಿಮಿಷ ಮಾತನಾಡಿಸಿ ‘ಸೆಲ್‍ಫಿ’ ತೆಗೆದುಕೊಂಡು ಬರುವ ನಮ್ಮಂತವರನ್ನು ಕಂಡು, ಅವರಿಂದು ರೋಸಿ ಹೋಗಿದ್ದಾರೆ. ಹೀಗಾಗಲು ಕಾರಣವೇನೆಂದು ಹುಡುಕ ಹೊರಟರೆ ಲೆಕ್ಕಕ್ಕಾಗದೇ ಇರುವಷ್ಟು ಸಮಸ್ಯೆಯಲ್ಲಿ ಅವರಿಂದು ಬಳಲುತ್ತಿದ್ದಾರೆ.

ನಮ್ಮ ಸರಕಾರವು 1975ರಲ್ಲಿ ಪ್ರಾಣಿಗಳನ್ನು ಸಂರಕ್ಷಿಸುವ ಉದ್ದೇಶದಿಂದ, ರಾಷ್ಟ್ರೀಯ ಉದ್ಯಾನವನ ಯೋಜನೆಯನ್ನು ಜಾರಿಗೊಳಿಸಿತು. ಆದಿವಾಸಿಗಳು ಕಾಡಿನಲ್ಲಿದರೇ, ಪ್ರಾಣಿಗಳಿಗೆ ತೊಂದರೆ ಆಗುತದೆ ಎಂಬ ಕಾರಣಕ್ಕೆ ಅವರನ್ನು ಬಲವಂತವಾಗಿ ಸ್ಥಳಾಂತರಗೊಳಿಸಿತು.  ಆದರೆ ಇವತ್ತಿನ ವಾಸ್ತವ ಸನ್ನಿವೇಶದಲ್ಲಿ ಅಭಿವೃದ್ದಿಯ ನೆಪ ಹೇಳಿ, ಅಂತರ ರಾಜ್ಯದ ಶ್ರೀಮಂತ ಜನಾಂಗ ಕಾಡಿನ ರಸ್ತೆಯುದ್ದಕ್ಕೂ ಡಾಬ, ಹೋಟೆಲ್’ಗಳನ್ನು ನಿರ್ಮಿಸಿ ಪ್ರವಾಸದಲ್ಲಿ ಮೊಜಿಗಾಗಿ ಹೊರಡುವ ಶ್ರೀಮಂತ ಜನರಿಗೆ ಮಾಂಸಹಾರ, ಸಸ್ಯಹಾರಗಳನ್ನ ಸರಬರಾಜು ಮಾಡುವ ಮತ್ತು ಜಿಂಕೆ, ಗೌಜಿಗದ ಹಕ್ಕಿ, ಸೊರಕ್ಕಿ, ಕಡವೆ ಇನ್ನಿತರ ಪ್ರಾಣಿಪಕ್ಷಿಗಳನ್ನು ಹಿಂಸಿಸಿ, ಅದರ ಮಾಂಸಗಳನ್ನ ಅಧಿಕ ಬೆಲೆಗೆ ಮಾರುತ್ತಿರುವ ಎಷ್ಟೋ ಹೋಟೆಲ್‍ಗಳು ಇನ್ನೂ ಕಾರ್ಯಚರಣೆಯಲ್ಲಿದೆ. ಆದರೆ ಈ ವಿಷಯದ ಬಗ್ಗೆ ಅಷ್ಟಾಗಿ ಗಮನಿಸದ ಸರಕಾರ ಅಮಾಯಕ ಆದಿವಾಸಿಗಳು ಕಾಡಿನಲ್ಲಿದ್ದರೆ ವನ್ಯ ಜೀವಿಗಳ ನಾಶವಾಗುತ್ತದೆಂದು ಹೇಳುವುದು ಎಷ್ಟರ ಮಟ್ಟಕ್ಕೆ ಸರಿ. 

ಆದಿವಾಸಿಗಳ ಸಮಸ್ಯೆಗಳ ಬಗ್ಗೆ ಪ್ರತ್ಯಕ್ಷವಾಗಿ ನೋಡಿದ ಕೆಲವು ಮಾನವೀಯ ವ್ಯಕಿಗಳು ಅವರಿಗಾಗಿ ಸಂವಿಧಾನದಲ್ಲಿ ಬೆಳಕಿಗೆ ಬಾರದೇ ಇದ್ದ ಕೆಲವು ಯೋಜನೆಗಳು, ಕೆಲವು ಆದಿವಾಸಿಗಳಿಗೆ ಕುಂಟುತ್ತಾ, ನರಳುತ್ತಾ ತಲುಪುತ್ತಿದೆ. ಉದಾ: 1,50,000 ರೂ ಮೌಲ್ಯದ ಆಶ್ರಯ ಮನೆ, ಬೇಸಿಗೆಯ ಸಮಯದಲ್ಲಿ    ಅಕ್ಕಿ, ಬೇಳೆ ಮತ್ತು  ಮೊಟ್ಟೆಯನ್ನು ಕೊಡಲಾಗುತ್ತದೆ. ಹಲವು ಯೋಜನೆಗಳು ಅವಶ್ಯಕತೆ ಇಲ್ಲದಿದ್ರೂ ಕೇವಲ ಸಚಿವರ ಹೆಸರಿಗಾಗಿ, ಪಕ್ಷದ ಗುರುತಿಗಾಗಿ ಚಾಲ್ತಿಗೆ ಬರುತ್ತಿವೆ. ಉದಾ: ವಾಸಿಸಲು ಮನೆಇಲ್ಲದಿದ್ದರೂ ಸಿಮೆಂಟ್ ರೋಡುಗಳ ನಿರ್ಮಾಣ, ಸಬ್‍ಸೀಡಿ ದರದಲ್ಲಿ ಗ್ಯಾಸ್ ವಿತರಣೆ, ಇತ್ಯಾದಿ.  ಆ ಯೊಜನೆಗಳು ನಮ್ಮ ಆದಿವಾಸಿಗಳಿಗೆ ಗೊತ್ತಿದೆಯೋ, ಇಲ್ಲವೋ ಅದು ಬೇರೆ ವಿಷಯ ಬಿಡಿ.  

ಈ ರೀತಿಯ ಯೋಜನೆಗಳಡಿಯಲ್ಲ್ಲಿ ಆದಿವಾಸಿಗಳಿಗೆ ‘10 ಲಕ್ಷ ಪ್ಯಾಕೆಜ್ ಪ್ರೋಗ್ರಾಮ್’ ಎಂಬ ಒಂದು ಹೊಸ ಯೋಜನೆಯನ್ನು ಬಸವನಗುಡಿ ಮತ್ತು ಸೊಳ್ಳೆಪುರ ಎಂಬ ಹಾಡಿಜನರಿಗೆ, ನಗರದಲ್ಲಿ ಮನೆ ನಿರ್ಮಿಸಿ ಜೀವನ ಸಾಗಿಸಲು ತಿಳಿಸಿತು. ಆದರೇ, ನಗರ ಜೀವನಕ್ಕೆ ಹೊಂದಿಕೊಳ್ಳಲಾಗದೇ 17 ಮಂದಿ ಒಟ್ಟಿಗೆ ಸಾವನ್ನಪ್ಪಿದರು. ಸರಕಾರವು ಕಟ್ಟಿಕೊಟ್ಟ ಕಳಪೆ ಕಾಮಗಾರಿ ಮನೆಗಳು ಬಿದ್ದು ಸತ್ತಾಗಲೂ ಸಹ ಸರಿಯಾದ ಪರಿಹಾರ ಸಿಗಲಿಲ್ಲ. ಅಷ್ಟೇ ಏಕೆ? ಈಗಲೂ ಕೂಡ ಹಳ್ಳಿ ಮತ್ತು ನಗರದ ಜನರಿಗೆ  ಸಿಗುವ ಯೋಜನೆಗಳಾದ ವೃದ್ದಾಪ್ಯ ವೇತನ, ಮನಸ್ವಿನಿ ವೇತನ, ವಿಧವಾ ವೇತನ, ಅಂಗವಿಕಲ ವೇತನ ಮತ್ತು ಇಂದಿರ ಆವಾಸ್ ಇತ್ಯಾದಿ ಯೋಜನೆಗಳು ಆದಿವಾಸಿಗಳ ಕೈಗೆಟುಕಿಲ್ಲ. ಇದು ಮಲತಾಯಿ ದೊರಣೆ ಅಲ್ಲವೇ?  

 ನಮ್ಮ ನೆರೆಯ ರಾಜ್ಯವಾದ ಆಂಧ್ರಪ್ರದೇಶದಲ್ಲಿ ‘ಕಲ್ಯಾಣ ಲಕ್ಷ್ಮಿ ಯೋಜನೆ’ಯನ್ನು ಅನುಷ್ಟಾನಗೊಳಿಸಿ, ಮದುವೆಯಾದ ಪ್ರತಿಯೊಬ್ಬರಿಗೂ ಸಹ ಹೊಸ ಜೀವನ ನಡೆಸಲು, 50,000 ರೂ. ಸಹಾಯ ಧನವನ್ನು ಹಲವು ದಾಖಲಾತಿಗನ್ನು ನೀಡುವುದರ ಮೂಲಕ ಪಡೆಯಬಹುದು ಎಂದು ತಿಳಿಸಿದೆ. ಆದರೆ ನಮ್ಮ ಆದಿವಾಸಿ ಸಮುದಾಯದಲ್ಲಿ ಮದುವೆ ಎಂಬ ಪರಿಕಲ್ಪನೆಯೇ ಇಲ್ಲದ ಸಂದರ್ಭದಲ್ಲಿ ಅವರಿಗೆ ಹೇಗೆ ಆ ಸೌಲಭ್ಯಗಳು ತಲುಪಲು ಸಾಧ್ಯ?  ಈ ರೀತಿಯಾದಂತಹ ಯೋಜನೆಗಳನ್ನು ಅವರೆಂದಿಗೂ ಅಪೇಕ್ಷಿಸಲ್ಲಿಲ್ಲ.  ಅವರಿಗೆ ಆರೋಗ್ಯ ಕೈಕೊಟ್ಟಾಗ, ಅಲ್ಲಿರುವ ಸರಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಕೊಡುವುದಿಲ್ಲ ಒಂದು ವೇಳೆ  ಕೊಟ್ಟರೂ ಸಹ ಸರಕಾರಿ ಆಸ್ಪತ್ರೆಗಳಲ್ಲಿಯೇ, ಅವರ ಬಳಿ ಲಂಚವನ್ನು ಕೇಳುತ್ತಾರೆ. ರೋಗಿ ಶುಚಿಯಾಗಿಲ್ಲವೆಂದು ಕೆಟ್ಟ-ಕೆಟ್ಟ ಪದಗಳಿಂದ ಬೈಗುಳ. ಆಂಬುಲೆನ್ಸ್ ಸೌಕರ್ಯವಿಲ್ಲ. ನಮಗನ್ನಿಸಬಹುದು ಹಾಗೇನು ಇಲ್ಲ ಸುಮ್ನೆ ಹೇಳ್‍ತ್ತಾರೆ ಅಂತ, ಆದ್ರೆ ಅವರು ಪ್ರತಿದಿನ ಅನುಭವಿಸುತ್ತಿರುವ ನೋವನ್ನು ನಾವು ಸುಳ್ಳು ಎಂದು ಅರ್ಥೈಸಿಕೊಂಡರೆ ಎಷ್ಟು ಸರಿ.

ಅವರು ನಮ್ಮ ಸರಕಾರದ ಬಳಿ ಕೇಳುವುದೆಂದರೆ,  “ನಿಮ್ಮ ಮುರುಕಲು ಮನೆ, ಸಾಯುವ ಹಸುವಿನ ಅಗತ್ಯ ನಮ್‍ಗಿಲ್ಲ ನಮ್ಗೆ ನಾವಿರುವ ಕಾಡಿನಲ್ಲಿ ಇರಕ್ಕೆ ಬಿಡ್ರಿ’’ ಎಂದು. ಒಂದಗಲದ ಭೂಮಿಯನ್ನು ತನ್ನದೆನ್ನ ಬೇಕಾದರೆ, ಅದಕ್ಕೆ ಸಂಬಂಧಪಟ್ಟ ದಾಖಲೆಗಳು ಸಂಬಂಧಪಟ್ಟ ವ್ಯಕ್ತಿಯ ಬಳಿ ಇರಬೇಕು. ಆದರೆ ಇದೂವರೆಗೂ ಸಹ ನಮ್ಮ ಸರಕಾರ ಅವರಿಗೆ ಭೂಮಿಯ ಹಕ್ಕನ್ನು ನೀಡಿಲ್ಲ. ಅದರ ಬದಲಾಗಿ ಏನೇನು ಅಗತ್ಯವಿಲ್ಲವೋ ಆ ಕಾರ್ಯಗಳೆಲ್ಲವನ್ನೂ ಸಹ ನೀಡುತ್ತಿದೆ.

ಕಾಡಿನಲ್ಲಿರುವ ಆದಿವಾಸಿಗಳಿಂದ ಕಾಡು ನಾಶ ಆಗುತ್ತದೆಂಬುದು ಯಾವ ಲೆಕ್ಕ. ಹುಟ್ಡಿದಾಗಿನಿಂದಲೂ ಪ್ರಕೃತಿಯೊಂದಿಗಿನ ಅವರ ಒಡನಾಟವನ್ನು ಒಮ್ಮೆಲೆ ಅದ್ಹೇಗೆ ಕಿತ್ತೆಸೆಯಲು ಸಾಧ್ಯ. ಅರಣ್ಯವನ್ನು, ಪ್ರಾಣಿಗಳನ್ನು ಸಂರಕ್ಷಿಸಬೇಕೆಂದು, ಅಲ್ಲಿರುವ ಆದಿವಾಸಿಗಳನ್ನು ಸ್ಥಳಾಂತರಗೊಳಿಸಬೇಕೆಂದು ಯೋಚಿಸುವ ನಮ್ಮ ಸರಕಾರ, ಅರಣ್ಯಗಳನ್ನು ನಾಶ ಮಾಡಿ ಅಲ್ಲಿ ಕಾಮಗಾರಿ ಕಟ್ಟಡಗಳನ್ನು ಕಟ್ಟುವುದೇಕೆ? ಅರಣ್ಯಗಳಲ್ಲಿ ವಾಸಿಸುತ್ತಿದ್ದ ಪ್ರಾಣಿಗಳನ್ನು ಹಿಡಿದು ನಾಲ್ಕು ಚೌಕದ ಕಂಬಿಗಳ ಒಳಗಿಟ್ಟು ‘ಪ್ರಾಣಿ ಸಂಗ್ರಾಲಯ’ ಎಂದು ಮಾಡುವುದಾದರೂ ಏಕೆ? ಅರಣ್ಯದಲ್ಲಿ ಆದಿವಾಸಿಗಳಿರಬಾರದೆಂದಾದರೆ ಆ ಸ್ಥಳಗಳನ್ನು ಪ್ರವಾಸಿಗರ  ತಾಣ ಎಂದು ಮಾಡುವುದಾದರೂ ಏಕೆ? ಪಾಪ ನಮ್ಮ ಸರಕಾರ ಇದರ ಬಗ್ಗೆ ತನಗೆ ಸರಿಯಾದ ಚಿತ್ರಣಗಳನ್ನು ರೂಪಿಸಲಾಗದೆ, ಯಾವುದೋ ಟಿಪ್ಪಣಿಗಟ್ಟಲೆ ಯೋಜನೆಗಳನ್ನು ಹೂಡಿ ಸುಮ್ಮನಾಗಿಬಿಟ್ಟಿದೆ. ‘ಯುವ ಜನತೆ’ಯಾದ ನಾವು ಅವರನ್ನು ಕೇವಲ ‘ಸೆಲ್‍ಫಿ’ ಗೆ ಸೀಮಿತವಾಗಿರಿಸದೇ ಅವರ ತೊಂದರೆಗಳಿಗೆ ಕೈ ಜೊಡಿಸಿದರೆ ನಮ್ಮವರ ಕಣ್ಣೀರನ್ನು ಸ್ವಲ್ಪಮಟ್ಟಿಗಾದರೂ ತಡೆಯಬಹುದು. ನಮ್ಮ ಸಂವಿಧಾನದ ಸಿದ್ದಾಂತದ ಹೇಳಿಕೆಯ ಪ್ರಕಾರ ಕಟ್ಟ ಕಡೆಯ ವ್ಯಕ್ತಿಯನ್ನೂ ಸಹ ಗೌರವಿಸಬೇಕು ಎಂಬ ಹೇಳಿಕೆಗಳು ನನ್ನನ್ನು ಹಲವು ಭಾರಿ ಪ್ರಶ್ನೆಗೆ ದೂಡಿದೆ ಮತ್ತು ದೂಡುತ್ತಲೂ ಇದೆ. ನಾವು ನಮ್ಮ ಅಭಿವೃದ್ದಿಯ ಪರಿಕಲ್ಪನೆಯನ್ನು ಮರುವ್ಯಾಖ್ಯಾನಿಸಬೇಕಿದೆ…. 


  

ಕನ್ನಡದ ಬರಹಗಳನ್ನು ಹಂಚಿ ಹರಡಿ

4 thoughts on “ಅಭಿವೃದ್ದಿ ಯಾರಿಗೆ?: ಕಿರಣ ಆರ್.

Leave a Reply

Your email address will not be published. Required fields are marked *